ಧಾರ್ಮಿಕ ಆಚರಣೆಗಳ ಮೌಲ್ಯ ಹಗುರಾಗಿಸುವುದು ಬೇಡ
ಆಷಾಢ ಹೊರಳಿತು. ಇನ್ನು ಹಬ್ಬಗಳ ಸಾಲು ಸಾಲು ಆಚರಣೆಗಳು. ಕೃಷ್ಣಾಷ್ಟಮಿ ಮುಗಿದು ಇದೀಗ ಗಣೇಶ ಚತುರ್ಥಿ ನಮ್ಮೆಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಹಬ್ಬದ ಸಡಗರಕ್ಕೆ ಒಂದೆಡೆಯಿಂದ ತಳಿರು ತೋರಣದ ಬಿರುಸು ಪ್ರಾರಂಭಗೊಂಡಿದ್ದರೆ, ಮತ್ತೊಂದೆಡೆಯಿಂದ ತಿಂಗಳುಗಟ್ಟಳೆಯ ಪೂಜೆ ಸ್ವೀಕರಿಸಲು ಗಣೇಶನ ವಿಗ್ರಹ ಕೂಡ ಭರದಿಂದ ಸಿದ್ಧಗೊಳ್ಳುತ್ತಿದೆ. ಗಣೇಶ ಹಬ್ಬದ ವಿಶೇಷತೆಯೇ ಅದು. ಎಲ್ಲಾ ಹಬ್ಬಗಳ ಆಚರಣೆ ಹೆಚ್ಚೆಂದರೆ ಮೂರ್ನಾಲ್ಕು ದಿನಗಳಿದ್ದರೆ ಈ ಗಣೇಶ ಹಬ್ಬವು ಕೆಲವೆಡೆ ಬರೋಬ್ಬರಿ ಒಂದು ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ. ಮಣ್ಣಿನ ಗಣಪನಿಗೆ ಅಲಂಕಾರ ಮಾಡಿ ಅದರ ಮುಂದೆ ನಮ್ಮೆಲ್ಲರ ತಾಪತ್ರಯಗಳನ್ನು ತಿಳಿಸಿ ಮನಸ್ಸು ಹಗುರಾಗಿಸಿ ಕೊನೆಗೆ ಆತನನ್ನು ನೀರಲ್ಲಿ ಲೀನಗೊಳಿಸುವುದು ಈ ಹಬ್ಬದ ವೈಶಿಷ್ಟ್ಯ.
ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದು ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು. ಈ ಮಧ್ಯೆ ತಿಲಕರು ನಮ್ಮನಗಲಿದರು. ಆದರೆ ಗಣೇಶ ಹಬ್ಬವು ಮಾತ್ರ ನಮ್ಮೊಳಗೆ ಹಾಗೇ ಬೆರೆತುಕೊಂಡುಬಿಟ್ಟಿದೆ. ಬಹುಶಃ ಇಂದು ಸ್ವತಃ ತಿಲಕರೆ ಬಂದು ಸಾಕು ನಿಲ್ಲಿಸಿ ಎಂದರೂ ನಾವು ನಿಲ್ಲಿಸಲಾರೆವು.
ಆದರೆ, ಇಲ್ಲಿ ಕೊರೆಯುವ ಪ್ರಶ್ನೆಯೇನೆಂದರೆ ನಾವು ಅದೆಷ್ಟು ಶ್ರದ್ಧಾ ಭಕ್ತಿಯನ್ನು ಇವತ್ತಿಗೂ ಉಳಿಸಿದ್ದೇವೆಂದು ನಿಜ ಒಪ್ಪುವುದಾದರೆ ಇಂದು (ಬಹುಪಾಲು) ಇದೊಂದು ಯುವಕರ ಮೋಜಿನ ಕೂಟವಾಗಿ ಬದಲಾಗಿದೆಯಷ್ಟೆ. ಅಲ್ಲೊಂದು ಇಲ್ಲೊಂದು ಈ ಮಾತಿಗೆ ಅಪವಾದ ಇರಬಹುದಾದರೂ ಬಹುತೇಕ ಇಂದಿನ ನಮ್ಮ ಆಚರಣೆಯು ಮೂಲ ಉದ್ದೇಶ ಹಾಗೂ ಪಾವಿತ್ರ್ಯವನ್ನು ಬಿಟ್ಟು ಬಹು ದೂರ ಸಾಗಿದೆ. ಗಲ್ಲಿಗೊಂದರಂತೆ ಗಣೇಶ ಪೆಂಡಾಲ್ ಎದ್ದೇಳುತ್ತಿದ್ದು, ಆಚರಣೆಯಲ್ಲೂ ಇವತ್ತು ಸ್ಪರ್ಧೆ ಏರ್ಪಟ್ಟಿದೆ. ಹಾಕಿರುವ ಚಪ್ಪರದಿಂದ ಹಿಡಿದು ವಿಸರ್ಜನೆಯವರೆಗಿನ ಎಲ್ಲವೂ ವಸೂಲಿ ಮಾಡಿದ ಚಂದಾ ಹಣದಿಂದಲೇ ನಡೆಯಬೇಕು. ಕೆಲವು ಕಡೆಗಳಲ್ಲಂತೂ ಚಂದಾ ವಸೂಲಿ ಎಂದರೆ ಒಂದು ರೀತಿಯ ಹಫ್ತಾ ವಸೂಲಿಯೆಂಬಂತೆ ನಡೆಯುತ್ತಿರುವುದೂ ಸತ್ಯ. ಸಿಕ್ಕ ಸಿಕ್ಕ ವಾಹನಗಳನ್ನು ತಡೆದು, ಮನೆ ಬಾಗಿಲು ಬಡಿದು ಸುಲಿಯುವ ಹಣದಿಂದ ಗಣೇಶನಿಗೆ ನೈವೇದ್ಯ ಅರ್ಪಿಸಿದರೆ ಅದು ನಮಗೆಲ್ಲಾ ಕೃಪೆ ನೀಡೀತೇ?
ಇನ್ನು ಈ ಹಬ್ಬದ ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಅವು ಯಾವ ದೃಷ್ಟಿಕೋನದಿಂದ ಲೆಕ್ಕ ಹಾಕಿದರೂ ಗಣೇಶನ ಹಬ್ಬಕ್ಕೆ ಸಂಬಂಧಪಟ್ಟಿರುವುದಿಲ್ಲ ಬಿಡಿ. ಇಲ್ಲಿ 'ಭಕಿ'್ತ ಎಂಬ ವಿಚಾರವಂತೂ ಹತ್ತಿರ ಕೂಡ ಸುಳಿಯುವುದಿಲ್ಲ. ಕಿವಿಗಡಚಿಕ್ಕುವ ಧ್ವನಿ ವರ್ಧಕಗಳ ಆರ್ಕೆಸ್ಟ್ರಾಗಳೇ ಇಂದಿನ ಗಣೇಶ ಪ್ರಿಯ ಕಾರ್ಯಕ್ರಮಗಳು! ಇನ್ನು ವಿಸರ್ಜನೆಯ ಪರಿಯಂತೂ ಇನ್ನೂ ವಿಚಿತ್ರ. ಕೆಲವು ಕಡೆಗಳಲ್ಲಿ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ನಡೆದರೆ ಇನ್ನೂ ಕೆಲವೆಡೆಗಳಲ್ಲಂತೂ ಎತ್ತಿನ ಬಂಡಿಯೋ, ಆಟೋ ರಿಕ್ಷಾನೋ ಗಣೇಶನನ್ನು ಹೊತ್ತೊಯ್ಯುವ ಮೆರವಣಿಗೆಯ ಉದ್ದಕ್ಕೂ ಒಂದಕ್ಕೊಂದು ಸಂಬಂಧವಿಲ್ಲದ ಹಾಡು-ಕುಣಿತ. ಕುಡಿದು ಕುಣಿಯುತ್ತಾ, ಜರ್ದಾ ಜಗಿಯುತ್ತ ಮೆರವಣಿಗೆ ಸಾಗುವ ಪರಿ ಮಾತ್ರ ನಿಜಕ್ಕೂ ಅಸಹ್ಯ. ಮಾಡಿದ ಶಾಸ್ತ್ರಕ್ಕೆ ಮುಕ್ತಾಯವೋ ಎಂಬಂತೆ ಹತ್ತಿರದಲ್ಲಿ ಸಿಗುವ ನೀರಿಗೆ ಮುಳುಗಿಸಿದರೆ ಆ ವರ್ಷದ ಚಂದಾ ವಸೂಲಿಗೆ ಮುಕ್ತಾಯ ನೀಡಿದಂತೆ ಅದರಲ್ಲೂ ಮುಂಬೈನ ಕಡಲ ಕಿನಾರೆಗಳಲ್ಲಿ ಸಿಗುವ ಅರ್ಧ ಮುರಿದ ಗಣೇಶನ ವಿಗ್ರಹಗಳು ಮಾತ್ರ ನಿಜವಾಗಿಯೂ ನಮ್ಮ ಸಂಸ್ಕೃತಿಯನ್ನು ನಾವೇ ಅಣಕಿಸುತ್ತಿದ್ದೇವೆ ಎನ್ನಿಸುತ್ತದೆ. ರಾಶಿ ರಾಶಿ ಮುರಿದ ವಿಗ್ರಹಗಳು, ಅದನ್ನು ಎತ್ತಿ ಹಾಕಲು ಕಾರ್ಯ ನಿರತವಾಗಿರುವ ಬುಲ್ಡೋಜರ್ಗಳು... ಅಯ್ಯೋ ನಮ್ಮಿಂದ ತೀರದ ಬೇಡಿಕೆಗಳನ್ನು ಪಡೆದು ಪೂಜಿಸಲ್ಪಟ್ಟಿರುವ ಗಣೇಶ ಇವನೇನಾ ಎಂದು ಅನ್ನಿಸದಿರದು ಒಂದು ಕ್ಷಣ!
ಇನ್ನು ಕಾರ್ಯಕ್ರಮಗಳಿಗೆ ಹಾಕುವ ಬ್ಯಾನರ್ಗಳದ್ದು ಇನ್ನೊಂದು ಅಭಾಸ. ಶುಭಾಶಯ ಕೋರುವ ಆಳೆತ್ತರದ ಕಟೌಟ್ಗಳಲ್ಲಿ ಸಂಬಂಧಪಟ್ಟ ಕಾರ್ಯಕ್ರಮದ ದೇವರ ಫೋಟೋ ಅಚ್ಚು ಹಾಕಿಸಿ ಎಲ್ಲೆಂದರಲ್ಲಿ ಕಟ್ಟುವುದು ಒಂದು ಹದ್ದುಮೀರಿದ ಫ್ಯಾಷನ್. ಕಾರ್ಯಕ್ರಮದ ಬಳಿಕ ಈ ದೇವರ ಚಿತ್ರವಿರುವ ಬ್ಯಾನರ್ಗಳನ್ನು ಜೋಪಾನ ಮಾಡಲಾಗುತ್ತದೆಯೇ? ಖಂಡಿತಾ ಇಲ್ಲ. ಅವೆಲ್ಲವುಗಳು ಎಲ್ಲಾದರೂ ಸಂದಿಗೊಂದಿಗಳಲ್ಲಿ ಅಥವಾ ಕೆಲವೊಮ್ಮೆ ಅಸಹ್ಯಕರ ಪ್ರದೇಶಗಳಲ್ಲಿ ಬಿದ್ದುಕೊಂಡು ಗೇಲಿ ಮಾಡುತ್ತಿರುತ್ತವೆ ಗಣೇಶನ ಮೂರ್ತಿಯನ್ನು ಕೊನೆ ಪಕ್ಷ ನೀರಲ್ಲಾದರೂ ಮುಳುಗಿಸುತ್ತೇವೆ, ಆದರೆ ದೇವರ ಚಿತ್ರವಿರುವ ಈ ಬ್ಯಾನರುಗಳು ಮಾತ್ರ ತಿಪ್ಪೆಗುಂಡಿಯನ್ನಷ್ಟೇ ಕಾಣುವುದು. ಧಾರ್ಮಿಕ ನಂಬುಗೆಗೆ ಮುಜುಗರ ತರಿಸುವ ಇಂತಹ ವಿಚಾರಗಳು ಖಂಡಿತವಾಗಿಯೂ ಅಂತ್ಯ ಕಾಣಬೇಕಾಗಿದೆ.
ಹಾಗಾದರೆ ಇಲ್ಲಿ ಎಡವಿರುವುದು ಯಾರು? ಈ ರೀತಿಯ ಅಚಾತುರ್ಯಗಳಿಗೆ, ಪ್ರಮಾದಗಳಿಗೆ ಯಾರನ್ನು ದೂಷಿಸುವುದು? ಯಾಕೆಂದರೆ ಇಂತಹ ಪ್ರಮಾದಗಳ ಹಿಂದೆ ಪರೋಕ್ಷವಾಗಿ ನಾವು-ನೀವೆಲ್ಲಾ ಕೈ ಜೋಡಿಸಿರುತ್ತೇವೆ. ಗಣೇಶನನ್ನು ಕೂರಿಸಲು ಹಣ ನೀಡಿದವನಿಂದ ಹಿಡಿದು ಆರತಿ ತಟ್ಟೆಯ ಮುಂದೆ ನಿಂತು ನಮ್ಮನ್ನೆಲ್ಲಾ ಕಾಪಾಡಪ್ಪ ಎಂದು ಬೇಡುವ ಭಕ್ತರವರೆಗೂ ಎಲ್ಲರೂ ಭಾಗಿಗಳೇ. ಭಕ್ತಿಯೋ, ಸಂಪ್ರದಾಯವೋ ಅಥವಾ ಜಾತ್ರೆಯೋ ಒಟ್ಟು ನಾವುಗಳೆಲ್ಲಾ ಎರ್ರಾಬಿರ್ರಿಯಾಗಿ ಪ್ರೋತ್ಸಾಹ ನೀಡುತ್ತಲೇ ಇದ್ದೇವೆ. ಇದೇನೂ ಧರ್ಮವಿರೋಧಿಗಳ ಕೃತ್ಯವಲ್ಲ. ನಮ್ಮ ಕೈಯಿಂದಲೇ ಹಾಳಾಗುತ್ತಿರುವ ಆಚರಣೆಗಳ ಬಗ್ಗೆ ತುಟಿಪಿಟಿಕ್ ಎನ್ನುವುದಿಲ್ಲ! ನಾವೇ ನಮ್ಮ ಧರ್ಮದ ಆಚರಣೆಗಳನ್ನು ಭಕ್ತಿ ಭಾವದಿಂದ ಹೊರಗಿಟ್ಟು ಇನ್ನೊಬ್ಬರು ನಗುವ ತರಹ ಮಾಡಿದರೆ ಯಾರು ಸರಿಪಡಿಸುವುದು?
ಹೌದು ಈ ಬಾರಿಯಾದರೂ ತುಸು ಯೋಚಿಸೋಣ. ಮುಂಬರುವ ಗಣೇಶನ ಹಬ್ಬವನ್ನಾದರೂ ಸ್ವಲ್ಪ ಬದಲಾವಣೆಯ ಲೇಪ ಹಚ್ಚಿ ಅರ್ಥವತ್ತಾಗಿ ಆಚರಿಸೋಣ. ಮೂರ್ತಿಯಲ್ಲಿ ವಿಘ್ನವಿನಾಶಕನನ್ನು ಕಂಡು ಭಕ್ತಿ ಭಾವದಿಂದ ಪೂಜಿಸಿ ಪೂಜ್ಯತೆಯಿಂದಲೇ ವಿಸರ್ಜನೆಗೊಳಿಸೋಣ. ಅದೇ ರೀತಿ ಗಣೇಶ ಹಬ್ಬದ ಸಾಂಸ್ಕೃತಿಕ ವೇದಿಕೆಗಳನ್ನು ಸಿನೆಮಾ ಹಾಡು ಕುಣಿತಗಳ ವೇದಿಕೆಯಾಗಿಸದೆ ಧರ್ಮದ ಸಾರ ಸಾರುವ ಕಾರ್ಯಕ್ರಮಗಳ ತೊಟ್ಟಿಲನ್ನಾಗಿಸೋಣ. ಸನಾತನ ಧರ್ಮದ ಸಂಸ್ಕಾರಗಳನ್ನು ವಿಶ್ವಕ್ಕೆ ಸಾರುವ ವೇದಿಕೆಯನ್ನಾಗಿಸೋಣ. ಯಾಕೆಂದರೆ ಧರ್ಮದ ಉಳಿವಿಗೆ ಬೇಕಾಗಿರುವುದು ರಟ್ಟೆ ಬಲವಲ್ಲ. ಬದಲಾಗಿ ಅವುಗಳ ಮೇಲಿರುವ ಜನರ ನಂಬಿಕೆ ನಿಷ್ಟೆಗಳಷ್ಟೇ. ಆಚರಣೆಗಳು ಅರ್ಥಗರ್ಭಿತವಾದಂತೆ ಧರ್ಮದ ಬೇರೂ ಸಮಾಜದೊಳಗೆ ಗಟ್ಟಿಗೊಳ್ಳುತ್ತದೆ. ನಿಜವಾದ ಧಾರ್ಮಿಕತೆ ಬೆಳೆದರೆ ಸಮಾಜವು ರೋಗಮುಕ್ತವಾದಂತೆ. ಸದ್ಯ ಭಾರತದ ಸಮಾಜಕ್ಕೆ ಅವಶ್ಯಕತೆಯಿರುವುದು ಕೂಡ ಅದೇ.
- ಪ್ರಸಾದ್ ಕುಮಾರ್, ಮಾರ್ನಬೈಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

