ಸುಲಿಗೆ ಮನಸ್ಥಿತಿಗೆ ಎಲ್ಲಿದೆ ಚಿಕಿತ್ಸೆ?
'ವೈದ್ಯೋ ನಾರಾಯಣೋ ಹರಿ:' ಎನ್ನುತ್ತದೆ ನಮ್ಮ ಸಂಸ್ಕಾರ ಹಾಗೂ ಪರಂಪರೆ. ಸಮಾಜದಲ್ಲಿ ಓರ್ವ ಪ್ರಾಮಾಣಿಕ ವೈದ್ಯನಿಗೆ ಸಿಗುವ ಮರ್ಯಾದೆ ಬಹುಶಃ ಬೇರಾರಿಗೂ ದೊರೆಯದೇನೋ? ಇದಕ್ಕೆ ಕಾರಣ ನಾವು ಭಾರತೀಯರು ಆತನಲ್ಲಿ ಸಾಕ್ಷಾತ್ ದೇವರನ್ನೇ ಕಾಣುತ್ತೇವೆ. ತನ್ನ ಇಡಿಯಾದ ಜೀವನವನ್ನು ನೊಂದ ರೋಗಿಗಳ ಖಾಯಿಲೆ ಗುಣಪಡಿಸುವುದಕ್ಕೆಂದೇ ಮುಡಿಪಾಗಿಟ್ಟು, ತನ್ನ ಖಾಸಗಿ ಬದುಕನ್ನೇ ಗಡೆಗಣಿಸಿ ಬಿಡುವ ಈತನ ಔದಾರ್ಯದ ವ್ಯಕ್ತಿತ್ವ ಹಾಗೂ ವೃತ್ತಿ ಆದರ್ಶಪ್ರಾಯವಾದುದು.
ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಂಪರೆಗೆ ಅಪವಾದವೆನ್ನುವಂತೆ, ಕೇವಲ ಹಣ ಮಾಡುವುದನ್ನೇ, ಕಸುಬು ಮಾಡಿಕೊಂಡಂತಿರುವ ಕೆಲವು ವೈದ್ಯರನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಉದಾಹರಣೆಗೆ ಮೈಸೂರಿನಂಥಹ ಒಂದು ಸುಂದರ ನಗರ, ರಾಜ್ಯದ ಪ್ರವಾಸಿ ಭೂಪಟದಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವುದು ಸರಿಯಷ್ಟೆ. ಈ ಊರಿಗೆ ಹೊರಗಿನಿಂದ ಬಂದು ಹೋಗುವವರ ಸಂಖ್ಯೆ ಬಹಳ. ಹೇಳಬೇಕೆಂದರೆ ಇಲ್ಲಿಯೂ ಕೂಡ ಇತ್ತೀಚೆಗೆ ಮಾಲ್ಗಳ ರೀತಿ ದೊಡ್ಡ ದೊಡ್ಡ ಹೈಟೆಕ್ ಆಸ್ಪತ್ರೆಗಳು ತಲೆ ಎತ್ತುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ.
ಮೊದಲೆಲ್ಲಾ ಒಬ್ಬರೇ ವೈದ್ಯರು, ಇಡೀ ದೇಹದ ಪರೀಕ್ಷೆ ಮಾಡಿ, ದೇಹದ ಇಂಚಿಂಚು ಜಾಲಾಡಿ, ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವೈದ್ಯಕೀಯ ಶಾಸ್ತ್ರಗಳಲ್ಲಿ ಆಗಿರುವ ಆವಿಷ್ಕಾರಗಳ ಕ್ಷಿಪ್ರ ಕಾಂತಿಯಿಂದಾಗಿ, ದೇಹದಲ್ಲಿರುವ ಒಂದೊಂದು ಅಂಗದ ಸಮಸ್ಯೆಗೂ ರೋಗಿಯು ಒಬ್ಬೊಬ್ಬ ತಜ್ಞವೈದ್ಯರ ಬಳಿಗೆ ಹೋಗಬೇಕಾಗಿದೆ. ಪುಣ್ಯಕ್ಕೆ ಎಡ ಕಿವಿ, ಬಲ ಕಿವಿಗಾಗಲಿ ಅಥವಾ ಎಡ ಕಣ್ಣು ಬಲ ಕಣ್ಣಿಗೆ ಬೇರೆ ಬೇರೆ ವೈದ್ಯರನ್ನು ಆಶ್ರಯಿಸುವ ಕಾಲ ಇನ್ನೂ ಬಂದಿಲ್ಲ. ಈ ಕಾರಣಕ್ಕೆ ರೋಗಿಯೂ ಹಾಗೂ ಅವನ ಕುಟುಂಬ, ಚಿಕಿತ್ಸೆಗಾಗಿ ಹೆಚ್ಚು ಸಮಯ ಹಾಗೂ ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ. ಇದು ಬದುಕು ದಿನದಿನಕ್ಕೂ ಹೆಚ್ಚು ಹೆಚ್ಚು ಸಂಕೀರ್ಣ ಹಾಗೂ ಜಟಿಲವಾಗುತ್ತಿರುವ ಸೂಚನೆ. ಸಾಲದ್ದಕ್ಕೆ ಘನ ಸರ್ಕಾರ ಎಲ್ಲ ಕಡೆಯೂ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ- ನಿರ್ವಹಿಸಲಾಗದ ಕಾರಣ, ಆಸ್ಪತ್ರೆಗಳಿಗೆ ಬೇಡಿಕೆಗೆ ಅನುಗುಣವಾಗಿ ಹಾಗೂ ಸೇವೆಯ ಹೆಸರಿನಲ್ಲಿ ಅಲ್ಲಲ್ಲಿ ಖಾಸಗಿ ನರ್ಸಿಂಗ್ ಹೋಮ್ಗಳು ತಲೆ ಎತ್ತಿದವು. ಪ್ರಾರಂಭದಲ್ಲಿ ಆಯಾ ವೈದ್ಯರ ಮಾಲಿಕತ್ವದಲ್ಲಿಯೇ ಇರುತ್ತಿದ್ದ ಅಂದಿನ ನರ್ಸಿಂಗ್ ಹೋಮ್ಗಳು, ಸ್ವಲ್ಪ ಧರ್ಮ ಕರ್ಮ ಪಾಲಿಸುತ್ತಾ ಹಾಗೂ ಸೇವಾ ಮನೋಭಾವದಲ್ಲಿ ರೋಗಿಯನ್ನು ಅವರು ಅಷ್ಟಾಗಿ ವಿಪರೀತ ಸುಲಿಯುತ್ತಿರಲಿಲ್ಲ. ಅಲ್ಲಿ ಸೇವಾಶುಲ್ಕವನ್ನು ವಿಧಿಸುವಾಗ ಸ್ವಲ್ಪ ತತ್ವ ಆದರ್ಶಗಳು ಹಾಗೂ ರೋಗಿಯೊಬ್ಬರ ವೈಯಕ್ತಿಕ ಆರ್ಥಿಕ ಪರಿಸ್ಥಿತಿ, ಸ್ವಲ್ಪ ಮಟ್ಟಿಗೆ ಪರಿಗಣಿಸಲ್ಪಡುತ್ತಿದ್ದವು.
ಆದರೆ ಈಚಿನ ದಿನಗಳಲ್ಲಿ ವೈದ್ಯರು, ಅದರಲ್ಲೂ ವಿಶೇಷವಾಗಿ ಹಣದ ಹಿಂದೆ ಬಿದ್ದ ಕೆಲ ಆಶೆಬುರುಕ ವೈದ್ಯರು ಈ ಕಾರ್ಪೊರೇಟ್ ಕಲ್ಚರ್ ವಶೀಲಿಗೆ ಸಿಲುಕಿದ್ದಾರೆ. ನರ್ಸಿಂಗ್ ಹೋಮ್ಗಳು ಹೈ ಟೆಕ್ ಆಸ್ಪತ್ರೆಗಳಾಗಿ ಪರಿವರ್ತನೆಗೊಂಡು, ಇದರ ನಿರ್ವಹಣೆ ಅವರಿಗೆ ಅನಗತ್ಯ ತಲೆನೋವಾಗಿ ಪರಿಣಮಿಸಿ, ಇದರ ಪರಿಹಾರಾರ್ಥವಾಗಿ ಇವರು ಈ ಹೈ ಟೆಕ್ ಆಸ್ಪತ್ರೆಗಳ ಸ್ಥಾಪನೆಯ ಹಾಗೂ ನಿರ್ವಹಣೆಯ ಗೊಡವೆಗೇ ಹೋಗದೆ, ಅದನ್ನು ಬಂಡವಾಳ ಶಾಹಿಗಳ ತೆಕ್ಕೆಗೆ ಒಪ್ಪಿಸಿದ್ದಾರೆ. ತಾವು ಬರೀ ಕೂಲಿಗಳಂತೆ, "ಕನ್ಸಲ್ಟೆಂಟ್" ಎಂಬ ಹೊಸ ಹೆಸರಿನೊಂದಿಗೆ, ಒಂದೇ ದಿನದಲ್ಲಿ ಹತ್ತಾರು ಖಾಸಗಿ ಆಸ್ಪತ್ರೆಗಳಲ್ಲಿ ನೂರಾರು ರೋಗಿಗಳನ್ನು ಸಂದರ್ಶಿಸುತ್ತಾ, ಸುಲಭವಾಗಿ ತಮ್ಮ ಜೇಬನ್ನು ಭರ್ತಿ ಮಾಡಿಕೊಳ್ಳುವ ಸಡಗರದಲ್ಲಿರುವುದನ್ನು ನಾವಿಂದು ಕಾಣಬಹುದಾಗಿದೆ. ಇಲ್ಲಿ ಶ್ರಮ ಕಡಿಮೆ, ಆದಾಯ ಹೆಚ್ಚು. ಇಲ್ಲಿನ ವೈದ್ಯರು ಈ ಬಂಡವಾಳಶಾಹಿಗಳ ಮರ್ಜಿಗೆ ಒಳಗಾಗಿ ಹಾಗೂ ಔಷಧ ಕಂಪನಿಗಳು ತೋರಿಸುವ ಆಮಿಷಕ್ಕೆ ಒಳಗಾಗಿ, ಬೇಕಿಲ್ಲದ ಪರೀಕ್ಷೆಗಳು ಹಾಗೂ ಅನಗತ್ಯ ಔಷಧಗಳಿಂದ ಸೂಚಿಸಿ ರೋಗಿಯನ್ನು ಸುಲಿಯ ತೊಡಗುತ್ತಾರೆ. ಎಷ್ಟೋ ವೇಳೆ ಈ ಹೈಟೆಕ್ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಆಧುನಿಕ ರೋಗ ಪರಿಶೋಧಕ ಯಂತ್ರೋಪಕರಣಗಳಿಗೆ ಕನಿಷ್ಠ ಇಂತಿಷ್ಟು ಕೇಸ್ಗಳನ್ನು ರೆಫರ್ ಮಾಡಿ ಎಂದು ಸಂಬಂಧ ಪಟ್ಟ ತಜ್ಞವೈದ್ಯರು ಹಾಗೂ ಆಸ್ಪತ್ರೆಯ ವ್ಯವಸ್ಥಾಪಕರ ನಡುವೆ, ಹಲವಾರು ಕಡೆ ಒಳ ಒಪ್ಪಂದ ಏರ್ಪಟ್ಟಿರುತ್ತದಂತೆ. ಅದರಲ್ಲೂ ಈ ಒಳರೋಗಿ ಸ್ಥಿತಿವಂತ ಕಂಪನಿಯ ಉದ್ಯೋಗಿಯಾಗಿದ್ದರಂತೂ ತೀರಿತು. ಹಣ ಸುಲಿಯುವ ಮನಃಸ್ಥಿತಿಯ ಆಸ್ಪತ್ರೆಗಳಿಗೆ ಹಾಗೂ ವೈದ್ಯರಿಗೆ ಹಬ್ಬವೋ ಹಬ್ಬ. ಆ ಸಂದರ್ಭದಲ್ಲಿ ರೋಗಿಯ ದೇಹ ಅನಗತ್ಯ ಔಷಧದ ಕಣಜವಾಗಿಬಿಡುವುದು ಶತಸಿದ್ಧ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರನ್ನೂ ಈ ರೀತಿ ನಾವು "ಬ್ರಾಂಡ್" ಮಾಡಲಾಗದು. ನಿಷ್ಠಾವಂತರೂ ಇದ್ದಾರೆ.
ಇದು ಹೈ ಟೆಕ್ ಆಸ್ಪತ್ರೆಗಳ ಕಥೆಯಾದರೆ ಇದೇ ಮೈಸೂರಿನಲ್ಲಿರುವ ಕೆಲವಾರು ಹೆಸರಾಂತ ತಜ್ಞವೈದ್ಯರು ಯಾವ ಮಾರವಾಡಿಗೂ ಕಡಿಮೆಯಿಲ್ಲದಂತೆ ವರ್ತಿಸಿ, ಸ್ವಂತ ಕ್ಲಿನಿಕ್ ಹೊಂದಿ ಅಸಹಾಯಕ ರೋಗಿಗಳನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಉದಾಹರಣೆಗೆ ಅವರೊಬ್ಬ ನಗರದ ಹೆಸರಾಂತ ಚರ್ಮರೋಗ ತಜ್ಞ. ಅವರದೇ ಪಕ್ಕದ ಮತ್ತೊಂದು ಕ್ಯಾಬಿನ್ನಲ್ಲಿ, ಮತ್ತೊಬ್ಬರು ಅದೇ ಕ್ಷೇತ್ರದಲ್ಲಿ, ಅವರ ಜೊತೆ ಜೊತೆಯಾಗಿಯೇ ಪ್ರಾಕ್ಟೀಸ್ ಮಾಡುತ್ತಲಿರುವ ಓರ್ವ ಮಹಿಳಾ ವೈದ್ಯೆ. ನೀವು ಇವರಿಬ್ಬರ ಬಳಿಗೇನಾದರೂ ಚಿಕಿತ್ಸೆಗೆಂದು ಹೋದರೆ, ಖಾಯಿಲೆ ಏನೋ ವಾಸಿಯಾಗುತ್ತದೆ. ಆದರೆ ಅಲ್ಲಿನ ಆ ವೈದ್ಯದ್ವಯರು ಹಣಕ್ಕಾಗಿ ಹಪಹಪಿಸುವುದನ್ನು ನೋಡಿದರೆ, ಇವರೇನು ವೈದ್ಯರುಗಳೋ? ವ್ಯಾಪಾರಸ್ಥರೋ? ಅಥವಾ ಔಷಧ ಕಂಪನಿಗಳ ಏಜಂಟರೋ? ಎಂಬ ಶಂಕೆ ಮೂಡದಿರದು. ಇವರು ಬರೆಯುವ ಔಷಧಗಳು ಸಾಮಾನ್ಯವಾಗಿ ಬೇರೆಲ್ಲೂ ಸಿಗದಂಥವು. ಹಾಗೆಂದು ಇವುಗಳು ಹೆಸರಾಂತ ಕಂಪನಿಗಳ ಉತ್ಪನ್ನಗಳೂ ಕೂಡಾ ಅಲ್ಲ. ಒಟ್ಟಿನಲ್ಲಿ ಇವರು ನಮಗೆ ಆ ಔಷಧಿಯ ಪ್ಯಾಕೆಟ್ ಮೇಲೆ ನಮೂದಿಸಿರುವ, ಜನಸಾಮಾನ್ಯರ ಜೇಬಿಗೆ ಸುಲಭವಾಗಿ ಎಟುಕದ, ವಿಪರೀತ ಎನಿಸುವ ಎರ್ರಾಬಿರ್ರಿಯಾಗಿರುವ ಎಮ್.ಆರ್.ಪಿ. ದರವನ್ನೇ ಆತ ನಮಗೆ ವಿಧಿಸುವುದು. ಇತ್ತೀಚೆಗೆ ನಾವು ಯಾವುದೇ ಔಷಧದ ಅಂಗಡಿಗೆ ಹೋದರೂ, ಅಲ್ಲಿ ನಾವು ಕೇಳದಿದ್ದರೂ, ಅವರೇ ಅವರಾಗಿ, ಕಡೇ ಪಕ್ಷ ಒಟ್ಟು ಬೆಲೆಯಲ್ಲಿ ಅಷ್ಟಿಷ್ಟು ರಿಯಾಯಿತಿ ನೀಡಿಯೇ ನೀಡುತ್ತಾರೆ. ಆದರೆ ಈ ವೈದ್ಯದ್ವಯರಿಗೆ ಆ ರೀತಿಯ ಕಳೆಯುವ ಲೆಕ್ಕ ಬರುವುದೇ ಇಲ್ಲ ಪಾಪ. ಇವರು ಕಲಿತಿರುವುದು ಬರೀ ಕೂಡವ ಲೆಕ್ಕ ಮಾತ್ರ.
ಇವರೇ ಬರೆದು ಕೊಟ್ಟಿದ್ದ ಔಷಧವೊಂದು ನನ್ನ ಮನೆಯ ಬಳಿಯೇ ಇರುವ ಔಷಧ ಮಳಿಗೆಯೊಂದರಲ್ಲಿ ದೊರೆಯುತ್ತಿತ್ತು. ಅದನ್ನು ಅರಿತ ನಾನು, ಔಷಧಕ್ಕಾಗಿ ಅಷ್ಟು ದೂರ ವೃಥಾ ನಾನೇಕೆ ಹೋಗಲಿ ಎಂದು ಆಲೋಚಿಸುತ್ತಾ, ನಾನು ಈ ವೈದ್ಯರು ನೀಡಿದ್ದ ಔಷಧ ಚೀಟಿಯನ್ನು ಮನೆಯ ಸಮೀಪದ ಅಂಗಡಿಯವನಿಗೆ ತೋರಿಸಿದೆ. ಆಗ ಆ ಅಂಗಡಿಯವ ಆ ಔಷಧ ಚೀಟಿಯ ಮೇಲಿದ್ದ ವೈದ್ಯರ ಹೆಸರನ್ನು ನೋಡಿ, ಒಂದು ಕ್ಷಣ ಬೆಚ್ಚಿ, "ಸಾರ್, ಈ ಔಷಧವು ನನ್ನಲ್ಲಿ ಇದೆ. ಹಾಗಿದ್ದರೂ ಕೂಡಾ ತಮಗೆ ಅದನ್ನು ನಾನು ಕೊಡಲಾರೆ" ಎಂದನು. ಆಗ ಆತನ ವಿಚಿತ್ರ ವರ್ತನೆಯಿಂದ ಆಶ್ಚರ್ಯಚಕಿತನಾದ ನಾನು, ಆತನನ್ನ ಕಾರಣವೇನೆಂದು ಕೇಳಲು, ಆತನು 'ಸಾರ್, ಒಂದು ವೇಳೆ ಈ ಔಷಧವನ್ನು ನಾನು ನಿಮಗೆ ನೀಡಿರುವೆ ಎಂದು ಆ ವೈದ್ಯರಿಗೆ ತಿಳಿದರೆ ನನ್ನ ಕಥೆ ಮುಗಿಯಿತು. ಜೊತೆಗೆ ಕೂಡಲೇ ಫೋನ್ ಮುಖಾಂತರ ನನಗೆ ಕರೆ ಮಾಡಿ, ನನ್ನನ್ನು ವಾಚಾಮಗೋಚರವಾಗಿ ಬೈಯ್ದು, ಉಗಿದು ಉಪ್ಪಿನಕಾಯಿ ಹಾಕಿಬಿಡುತ್ತಾರೆ. ದಯಮಾಡಿ ಆ ಔಷಧ ಅವರಲ್ಲೇ ಕೊಳ್ಳಿರಿ" ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದನು!
ಇದು ಸಮಾಜದ ಹೀನ ಮನಃಸ್ಥಿತಿಯ ವೈದ್ಯರೊಬ್ಬರ ಉದಾಹರಣೆಯಷ್ಟೆ. ಇದೇ ರೀತಿ ಹತ್ತು ಹಲವಾರು ವೈದ್ಯರು ಈ ರೀತಿಯ ದಂಧೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ದೈವ ಸ್ವರೂಪಿಗಳಾದ ವೈದ್ಯರುಗಳೇ, ನೀವೇಕೆ ಹೀಗೆ ವರ್ತಿಸುವಿರಿ?ಇನ್ನಾದರೂ ತಾವುಗಳು ಔಷಧ ಅಂಗಡಿಯ ಹೆಸರಿರುವ ಸಲಹೆ ಚೀಟಿಯನ್ನು ಬಳಸುವುದನ್ನು ಈ ಕೂಡಲೇ ನಿಲ್ಲಿಸಿ. ಯಾರದೇ ಮರ್ಜಿಗೆ ಒಳಗಾಗದೇ ಸಲಹೆ ಚೀಟಿಯನ್ನು ಕಮರ್ಷಿಯಲ್ ನೇಮ್ ಬದಲು ಕೇವಲ ಡ್ರಗ್ ನೇಮ್ ಬರೆದು, ಜೊತೆಗೆ ಎಲ್ಲಾ ಕಡೆ ಸುಲಭವಾಗಿ ದೊರೆಯುವ, ಗುಣಮಟ್ಟದ ಔಷಧಗಳನ್ನು ಬರೆಯುವ ಮುಖಾಂತರ ನಿವೇಕೆ ಮಾನವೀಯತೆ, ಹೃದಯ ವೈಶಾಲ್ಯವನ್ನು ಹಾಗೂ ವೃತ್ತಿಪರತೆಯನ್ನು ಮೆರೆಯಬಾರದು?
- ನಾಗಮಂಗಲ ನರಸಿಂಹಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

