ಶಾಲೆಗಳ ರಾಷ್ಟ್ರೀಕರಣ ಚಿಂತನೆಯ ಬೆನ್ನುಹತ್ತಿ
ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ 'ಶಾಲೆಗಳ ರಾಷ್ಟ್ರೀಕರಣ' ಸುದ್ದಿ ಗಮನ ಸೆಳಯಿತು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ರವರಿಗೆ ಧನ್ಯವಾದಗಳು. ಶ್ರೀಕ್ಷೇತ್ರ ಸುಬ್ರಹ್ಮಣ್ಯ ಸಮೀಪ ಇಂಥ ಹೇಳಿಕೆ ನೀಡಿದ್ದೀರಿ. ಇದು ಹೇಳಿಕೆಯಾಗಿಯೇ ಉಳಿಯಬಾರದು. ಶಿಕ್ಷಣದಲ್ಲಿನ ತಾರತಮ್ಯ ಹೋಗಲಾಡಿಸುವುದು, ಏಕರೂಪ ಶಿಕ್ಷಣ ಜಾರಿ ತರುವ ಚಿಂತನೆ ಶ್ಲಾಘನೀಯ. ರಾಜ್ಯದಲ್ಲಿ ಒಂದೆಡೆ ಕೇಂದ್ರೀಯ ಶಾಲೆ ಮತ್ತು ಸಿ.ಬಿ.ಎಸ್.ಇ. ಎಂಬ ರೋಗ ಹರಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಾರೀಕರಣ ಭದ್ರವಾಗಿದೆ. ಇಲ್ಲಿ ಮಾಧ್ಯಮವೂ ಸೇರಿಕೊಂಡಿದೆ. ಈಗ ಕಾಂಗ್ರೆಸ್ ಸರ್ಕಾರ ದೀನದಲಿತರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪರವಾದ ನಿಲುವನ್ನು ತೋರಬೇಕಾಗಿದೆ.
ಹಾಗೆಯೇ 1ರಿಂದ 8ನೇ ತರಗತಿಯನ್ನು ಶಿಕ್ಷಣದ ವ್ಯಾಪ್ತಿಗೆ ತರುವುದು, 9ರಿಂದ 12ನೇ ತರಗತಿಯವರೆಗಿನ ಶಿಕ್ಷಣವನ್ನು ಪ್ರೌಢಶಿಕ್ಷಣದ ಅಡಿಯಲ್ಲಿ ತರುವುದು ಹಿಂದಿನಿಂದಲೂ ನಡೆಸಿದ ಪ್ರಯತ್ನ. ಈ ಸಿದ್ಧತೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರ ಹಿತವನ್ನು ಮರೆಯದೆ ಗಮನದಲ್ಲಿರಿಸಿಕೊಳ್ಳಿ. ಈಗಾಗಲೇ ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳು ಕಡಿಮೆ ಸಂಖ್ಯೆ ಮಕ್ಕಳನ್ನು ಹೊಂದಿವೆ. ಎಲ್ಲಿ ಮುಚ್ಚುತ್ತವೋ ಎಂಬ ದಿಗಿಲಿನಲ್ಲಿ ಆ ಸಂಸಾರಗಳು ನಿದ್ದೆಗೆಟ್ಟಿವೆ.
ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವ್ಯಾಪ್ತಿಗೆ ಬರುವ ಶಿಕ್ಷಕರ ವಿದ್ಯಾರ್ಹತೆಯ ಬಗ್ಗೆ ಸರಿಯಾದ ನಿಲುವು ತಳೆಯಬೇಕಾಗಿದೆ. ರಾಜಕಾರಣಕ್ಕಾಗಿ ನಿಲುವುಗಳು ಸಡಲಿಕೆಯಾಗದಿರಲಿ ಸಮಯಾವಕಾಶ ನೀಡಿ, ಸರ್ಕಾರಿ ಶಾಲೆಯ ಶಿಕ್ಷಕರಿಗೆ ನೀಡುವ ಶೈಕ್ಷಣಿಕ ತರಬೇತಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೂ ವಿಸ್ತಾರವಾಗಲಿ. ಆದರೆ ತರಬೇತಿ ನಂತರ ಕಡ್ಡಾಯ ಮೇಲ್ವಿಚಾರಣೆ ಆಗಬೇಕು. ಫಲಿತಾಂಶ ದೊರೆಯಬೇಕು. ಇಲಾಖೆಯಲ್ಲಿನ ಅಧಿಕಾರಿಗಳ ಆಲಸ್ಯ ತಪ್ಪಲಿ. ಸಂಬಂಧ ಪಟ್ಟವರಿಗೆ ಸಂಪೂರ್ಣ ಹೊಣೆಗಾರಿಕೆಯಾಗಲಿ. ಇಲಾಖೆಯಲ್ಲಿ ಈಗಿರುವ ಜವಾಬ್ದಾರಿ ಜೊತೆಗೆ ಶಿಕ್ಷಣ ಸಂಯೋಜಕರು, ವಿಷಯ ಪರಿವೀಕ್ಷಕರು, ಶಿಕ್ಷಣಾಧಿಕಾರಿಗಳು ತಮ್ಮ ಕೆಲಸಗಳ ಹೊರತಾಗಿ ನ್ಯಾಯಾಲಯಕ್ಕೆ ಹೋಗುವುದು, ಇನ್ನಿತರೆ ಲೆಕ್ಕಗಳನ್ನು ತರಲು ನಿಯೋಜಿತರಾಗುವುದು ತಪ್ಪಿ ತಮ್ಮ ಕೆಲಸದ ಸಂಪೂರ್ಣ ಜವಾಬ್ದಾರಿ ಹೊರಬೇಕು. ಇದರ ಉತ್ತರದಾಯಿತ್ವ ಶಿಕ್ಷಣ ಕಾರ್ಯದರ್ಶಿಗಳಿಂದ ಹಿಡಿದು ಕೆಳಸ್ತರದ ಅಧಿಕಾರಿಗಳವರೆಗೂ ಇರುವಂತೆ ನೋಡಿಕೊಳ್ಳಿ. ಕೊನೆಯದಾಗಿ ಇನ್ನೊಂದು ಸಲಹೆ. ಹೇಗಿದ್ದರೂ ರಾಷ್ಟ್ರೀಕರಣ ಮಾಡಬೇಕೆಂದಿದ್ದೀರಿ. ಇದು ಹಣವಂತ ಮಂಡಳಿಗಳಿಗೆ ಇರಸು ಮುರುಸಾಗುತ್ತದೆ ಏನೋ. ಹೀಗೆನ್ನುತ್ತಿದ್ದಂತೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೇ ಖಾಸಗಿ ಶಿಕ್ಷಣ ಸಂಸ್ಥೆಯವರು ಖಂಡಿತ ನ್ಯಾಯಾಲಯದ ಮೆಟ್ಟಲು ಹತ್ತುತ್ತಾರೆ. ಹೆದರದೆ ಸರ್ಕಾರ ಮುನ್ನಡೆಯಲಿ. ಇಲ್ಲವಾದರೆ ನೌಕರರ ಸೇವೆಯನ್ನಾದರೂ ರಾಷ್ಟ್ರೀಕರಿಸಿ.
ಈಗಿರುವ ವ್ಯಾಪಾರೀಕರಣ ತಪ್ಪಿಸಲು ಸಿ.ಇ.ಟಿ. ಮಾದರಿ ಸೀಟು ಹಂಚಿಕೆ ಮಾಡಿ. ಇದಕ್ಕಾಗಿ ಪ್ರೌಢಶಾಲಾ ಪ್ರವೇಶಕ್ಕೆ ಪರೀಕ್ಷೆ ಕೂಡದು. ಸಮೀಪದ ಬಡಾವಣೆಯ ಮಕ್ಕಳು ಅಲ್ಲಿಯೇ ಇರುವ ಶಾಲೆಗಳಿಗೆ ಸೇರುವಂತೆ ಕಡ್ಡಾಯ ಮಾಡಿ. ಇದಕ್ಕೆ ಇಲಾಖೆಯಿಂದಲೇ ಅರ್ಜಿ ಕರೆದು ಸೀಟು ಹಂಚಿಕೆ ಆಗಲಿ. ಮೆರಿಟ್ ಆಧರಿಸಿ ರಾಜ್ಯದ ಪ್ರತಿ ಶಾಲೆಗಳಿಗೂ 50 ಮಕ್ಕಳಂತೆ ಹಂಚಿಕೆಯಾಗಲಿ. ಇದು ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೂ ಮಕ್ಕಳ ಸಂಖ್ಯೆ ಸಮಾನ ರೀತಿಯಲ್ಲಿ ಇಲಾಖೆಯಿಂದಲೇ ಹಂಚಿಕೆಯಾದರೆ ಶಾಲೆಗಳಲ್ಲಿ ಮಕ್ಕಳ ಕೊತರೆಯಾಗಲಿ, ಶಿಕ್ಷಕರ ಹೆಚ್ಚುವರಿಯಾಗಲಿ ಬರುವುದಿಲ್ಲ. ಈ ಸಂದರ್ಭದಲ್ಲಿ ಎಲ್ಲಾ ಶಾಲೆಗಳಲ್ಲೂ ಎರಡೂ ಮಾಧ್ಯಮಗಳು ಜಾರಿಗೆ ಬರುವಂತೆ ನೋಡಿಕೊಳ್ಳುವಲ್ಲಿ ಮೇಲ್ಕಂಡ ಅಂಶಗಳು ಜಾರಿಯಾದರೆ ವ್ಯಾಪಾರೀಕರಣ ತಪ್ಪಿ ಸರ್ವರಿಗೂ ಏಕರೀತಿಯ ಸಮಾನ ಶಿಕ್ಷಣ ದೊರೆಯಬಹುದೆಂಬ ಆಶಯ.
- ಪರಮಶಿವ ನಡುಬೆಟ್ಟ
ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

