ರುಪಾಯಿ ಬೆಲೆ ಇಳೀತಾ ಇದೆ. ಆದ್ರೂ ನೀವು ಏನೂ ಮಾಡ್ತಿಲ್ಲ ಅಂತ ಎಲ್ಲರೂ ಕಂಪ್ಲೇಂಟ್ ಮಾಡ್ತಿದಾರೆ. 'ಜನ ಛೇಂಜ್ ಕೇಳ್ತಾ ಇದಾರೆ' ಕೇಳಿಸ್ತಿಲ್ವಾ?
ನೋಡ್ರೀ, ಇದಕ್ಕೆಲ್ಲಾ ಸಚಿನ್ ತೆಂಡೂಲ್ಕರ್ರೇ ಕಾರಣ. 100 ರುಪಾಯಿಗೆ ಒಂದ್ ಡಾಲರ್ ಆಗೋವರ್ಗೂ ನಾನ್ ರಿಟೈರ್ ಆಗಲ್ಲ ಅಂತ ಶಪಥ ಮಾಡಿದಾರಂತೆ. ಅದಕ್ಕೆ ಅವರು ಬೇಗ ರಿಟೈರ್ ಆಗ್ಲಿ ಅಂತ ಸುಮ್ನೆ ಇದೀನಿ.
- ಸದ್ಯಕ್ಕೆ ಅವರಿರೋ ಪರಿಸ್ಥಿತೀಲಿ 200 ರುಪಾಯಿ ಆಗೋವರ್ಗೂ ಕಾಯ್ತೀನಿ ಅನ್ಲಿಲ್ವಲ್ಲ ಬಿಡಿ. ಅದ್ಸರಿ, ರುಪಾಯಿ ಬೆಲೆ ಡಾಲರ್ಗಿಂತ ಜಾಸ್ತಿ ಆಗೋದು ಯಾವಾಗ?
ದುಡ್ಡು ಎಲ್ಲರ 'ತಲೇನೂ ಕೆಡಿಸುತ್ತೆ' ಅಂತ ಇದಕ್ಕೇ ಹೇಳೋದು. ಇದು ತೀರಾ 'ಚಿಲ್ಲರೆ' ಬುದ್ಧಿ ಆಯ್ತು.
- ಸರಿ ಈ ವಿಷಯದಲ್ಲಿ ದೇಶದ ಪ್ರಜೆಗಳಿಗೆ ಪೈಸಾ ವಸೂಲ್ ಆಗುವಂಥ ಏನಾದ್ರೂ ಸಲಹೆ ಕೊಡಿ?
ಈ ವಿಷ್ಯದಲ್ಲಿ ನಾವು ಎಷ್ಟೇ ಸೈಕಲ್ ಹೊಡೆದ್ರೂ ಯೂಸ್ ಇಲ್ಲ. ಪೆಟ್ರೋಲ್ ಬಳಕೆ ನಿಲ್ಲಿಸಿ, ಕಾರ್ ಬಿಟ್ಟು ಎಲ್ಲರೂ ಚೈನಾ ಮಾಡೆಲ್ ಸೈಕಲ್ ಹೊಡೀರಿ ಸರಿ ಹೋಗುತ್ತೆ. ಚಿನ್ನನೂ ಚೈನಾದಲ್ಲೇ ಖರೀದಿಸಿದ್ರೆ ಒಳ್ಳೇದು.
-ಸೀರಿಯಸ್ಸಾಗಿ ಕೇಳ್ತೀನಿ ಹೇಳಿ. ಈ ರುಪಾಯಿ ಅಪಮೌಲ್ಯಕ್ಕೆ ಕಾರಣ, ಏನಾದರೂ ಪರಿಹಾರ ಸಿಕ್ಕಿದೆಯಾ?
ಹೌದು, ಈ ಕಾಯಿನ್ ಬೂತ್ಗಳಲ್ಲಿ, ವೆಯ್ಟ್ ಚೆಕ್ ಮಾಡೋ ಮಷೀನ್ಗಳಲ್ಲಿ ಮೇಲೆ ಹಾಕಿದ ರುಪಾಯಿ ಕೆಳಗೆ ಬೀಳ್ತಾನೇ ಇರುತ್ತಲ್ಲ, ಹಂಗಾಗಿ ಹಿಂಗಾಗಿದೆ. ಅದಕ್ಕೆ, ಇನ್ಮೇಲೆ, ಎಟಿಎಮ್ ಗಳಲ್ಲಿ ಸಿಸ್ಟಮ್ ಛೇಂಜ್. ಕೆಳಗೆ ಕಾರ್ಡ್ ಹಾಕಿದ್ರೆ ಮೇಲೆ ದುಡ್ಡು ಬರೋ ಥರಾ. ಹಂಗಾದ್ರೂ ರುಪಾಯಿ ಮೇಲೆ ಹೋಗ್ಲಿ ಅಂತ.
- ಈವಾಗೇನು, ರುಪಾಯಿ ಬೆಲೆ ಮೇಲೆ ಹೋಗುತ್ತೋ ಇಲ್ವೋ?
ಅದು 'ಚಿದಂಬರ' ರಹಸ್ಯ. ಸರಿ, ಒಂದ್ ಕೆಲ್ಸ ಮಾಡಣ, ಒಂದ್ ರುಪಾಯಿ ಕಾಯಿನ್ ಟಾಸ್ ಮಾಡೋಣ, ಅದು ಮೇಲಕ್ಕೇ ಹೋದ್ರೆ ರುಪಾಯಿ ಮೇಲೆ ಹೋಗುತ್ತೆ, ಕೆಳಗೆ ಬಿದ್ರೆ ರುಪಾಯಿ ಕೆಳಗೆ ಬೀಳುತ್ತೆ. ಓಕೆನಾ..
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಕಾಮಿಡಿ ಮಾಡಿದ್ದು ಸಾಕು ಎಂದಾದರೆ, ಸೀರಿಯಸ್ಸಾಗಿ ಇಳಿಯುತ್ತಿರುವ ರುಪಾಯಿ ಮೌಲ್ಯದ ಬಗ್ಗೆ, ಅದರ ನಿಜವಾದ ಕಾರಣಗಳ ಬಗ್ಗೆ ತಿಳಿದುಕೊಳ್ಳುವ ಸೀರಿಯಸ್ ಆಸಕ್ತಿ ಇದ್ದವರಿಗೆ ಇಲ್ಲಿ ಮಾಹಿತಿ ಇದೆ. ಈ ವಿಷಯವಾಗಿ ಇಂಟರ್ನೆಟ್ನಲ್ಲಿ ಪ್ರಕಟವಾದ ಕೆಲವು ಲೇಖನಗಳು ಇಲ್ಲಿವೆ. ಓದಿ ನೋಡಿ.
l bit.ly/1af4IOQ l bit.ly/1581pbu
l bit.ly/1af4N57 l bit.ly/1e2qURt
l bit.ly/1ar5ThJ
ಹರಿ-ಕಥೆ
ಕಬ್ಬಿಣದ ಅದಿರು ಸಿಗುವ ಬಳ್ಳಾರಿಯಲ್ಲಿ ಅಕ್ಷಯ ತೃತೀಯದ ದಿನ ನೆಲ ಅಗೆದರೆ ಅಲ್ಲಿ ಸಿಗುವ ಕಬ್ಬಿಣದ ಅದಿರು ಬಂಗಾರದ ಅದಿರಾಗುತ್ತದೆ ಎಂಬುದು ಸೋಮು ಮತ್ತು ಖೇಮು ಅವರ ನಂಬಿಕೆ. ಹಂಗಾಗಿ ಹಿಂದಿನ ದಿನ ರಾತ್ರಿನೇ ಹೋಗಿ ಮೈನಿಂಗ್ ಏರಿಯಾದಲ್ಲಿ ಬೀಡು ಬಿಟ್ಟು ರಾತ್ರಿ 12 ಗಂಟೆಯಿಂದ ನೆಲ ಅಗೆದು ಒಂದಿಷ್ಟು ಅದಿರನ್ನು ಶೇಖರಿಸಿ ಬೆಳಗ್ಗೆ ಅದನ್ನು ಬೆಂಗಳೂರಿಗೆ ಸಾಗಿಸಲು ಕಾದು ಕುಳಿತಿದ್ದರು ಸೋಮು, ಖೇಮು. ಬೆಳಗ್ಗೆ ಅಲ್ಲೇ ಲೋಕಲ್ ಹೆಲಿಕಾಪ್ಟರ್ ಒಂದನ್ನು ಕರೆಸಿ ಅದಿರನ್ನು ಅದಕ್ಕೆ ಲೋಡ್ ಮಾಡಲು ಆರಂಭಿಸಿದರು. ಹೆಲಿಕಾಪ್ಟರ್ ಪೈಲಟ್ 'ಸಾರ್ ಇಷ್ಟೊಂದ್ ಭಾರ ಹಾಕಿದರೆ ನಮ್ ಹೆಲಿಕಾಪ್ಟರ್ ತಡ್ಕೊಳ್ಳಲ್ಲ' ಅಂದ. ಅದಕ್ಕೆ ಖೇಮು 'ನೀನು ನಾವ್ ಹೇಳ್ದಷ್ಟ್ ಮಾಡು ಸಾಕು. ಲಾಸ್ಟ್ ಇಯರ್ ನಾವು ಇಂಥದ್ದೇ ಹೆಲಿಕಾಪ್ಟರ್ನಲ್ಲಿ ಇಷ್ಟೇ ಅದಿರು ಸಾಗಿಸಿದ್ವಿ ಗೊತ್ತಾ, ಆ ಪೈಲೆಟ್ಟೂ ಹಿಂಗೇ ಹೇಳ್ದ, ನಿಮ್ಗೆಲ್ಲಾ ಏನೂ ಗೊತ್ತಾಗಲ್ಲ' ಎಂದು ದಬಾಯಿಸಿದ. ಸರಿ ಅಂತ ಪೈಲಟ್ ಸುಮ್ಮನಾದ. ಎಲ್ಲ ಹೇರಿಕೊಂಡು ಹೆಲಿಕಾಪ್ಟರ್ ಹೊರಟಿತು. ಆದರೆ ಒಂದೆರಡು ನಿಮಿಷಗಳಲ್ಲೇ ಕ್ರಾಷ್ ಆಗಿ ಜನ ನಿಬಿಡ ಜಾಗವೊಂದರಲ್ಲಿ ನೆಲಕ್ಕೆ ಅಪ್ಪಳಿಸಿತು. ಆದರೆ ಅದೃಷ್ಟವಶಾತ್ ಮೂರೂ ಜನ ಬದುಕಿಕೊಂಡರು. ಬಿದ್ದ ಜಾಗದಿಂದ ಸೋಮು ಮೈ ಕೊಡವಿಕೊಂಡು ಮೆಲ್ಲನೆ ಏಳುತ್ತಾ ಕೊಂಚ ಗಾಬರಿಯಿಂದ ಕೇಳಿದ 'ನಾವೆಲ್ಲಿದೀವಿ?'. ಅದಕ್ಕೆ ಖೇಮು ಹೇಳ್ದ 'ಗಾಬರಿ ಆಗ್ಬೇಡ. ಈ ಜಾಗ ನಂಗೆ ಫೆಮಿಲಿಯರ್ ಅನ್ನಿಸ್ತಿದೆ. ಹೋದ್ ವರ್ಷ ಆ ಪೈಲೆಟ್ ಎಷ್ಟ್ ಹೇಳಿದ್ರೂ ಕೇಳ್ದೆ ಇಷ್ಟೇ ಲೋಡ್ ಹಾಕ್ಕೊಂಡ್ ಹೋಗುವಾಗ ಕ್ರಾಷ್ ಆಗಿ ಬಿದ್ದಿದ್ವಲ್ಲ, ಮೋಸ್ಟ್ಲೀ ಅದೇ ಜಾಗದ ಹತ್ರನೇ ಎಲ್ಲೋ ಇದೀವಿ ಅನ್ಸತ್ತೆ'.
ಸ್ಕ್ಯಾಂಡಲ್ವುಡ್
ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟ ಶಿವರಾಜ್ಕುಮಾರ್, ಸುದೀಪ್ ಮತ್ತು ದರ್ಶನ್ ರಾಜ್ ಫ್ಯಾಮಿಲಿ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಹಂಗೆಲ್ಲಾ ಏನೂ ಇಲ್ಲ, ಹಾಗೇನಾದ್ರೂ ಮಾಡಿದ್ರೂ ಕೂಡ ಯಾರೂ ಏನೂ ಕಿತ್ಕೊಳ್ಳಕಾಗಲ್ಲ ಎಂದು ಖಾರವಾಗಿ ರಿಯಾಕ್ಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆಯೋ ಏನೋ, ಏನೂ ಕಿತ್ಕೊಳ್ಳಕಾಗಲ್ಲ, ಅದಕ್ಕೆ ಪೋಸ್ಟರ್ನಾದ್ರೂ ಕಿತ್ಕೊಳ್ಳೋಣ ಎಂಬಂತೆ ಸುದೀಪ್ ಹುಟ್ಟುಹಬ್ಬದ ಪೋಸ್ಟರ್ ಅಂಟಿಸಲು ಬಂದ ಅವರ ಅಭಿಮಾನಿಗಳು ಶಿವಣ್ಣ ಅಭಿನಯದ ಭಜರಂಗಿ ಚಿತ್ರದ ಪೋಸ್ಟರ್ ಕಿತ್ಕೊಂಡಿದಾರೆ ಎಂಬುದು ಶಿವರಾಜ್ಕುಮಾರ್ ಅಭಿಮಾನಿಗಳ ಆರೋಪ. ಇದು ಎಷ್ಟು ನಿಜವೋ ಸುಳ್ಳೋ ಕಿತ್ಕೊಂಡವರಿಗೇ ಗೊತ್ತು. ಆದರೆ ಇದರಿಂದಾಗಿ ಒಂದು ಹೊಸ ಪರಂಪರೆ ಆರಂಭವಾಗಿರುವುದಂತೂ ನಿಜ. ಸಿನಿಮಾ ಬಿಡುಗಡೆ ಆಗುವ ದಿನ ತಮ್ಮ ಹೀರೋನ ಕಟೌಟ್ ಮುಂದೆ ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸುವುದು ಕಾಮನ್. ಆದರೆ, ಈಗ ಸೆಪ್ಟೆಂಬರ್ 11ರ ಬುಧವಾರ ಸಂಜೆ ಓಕಳಿಪುರದ ಟಿ ಜಂಕ್ಷನ್ನಲ್ಲಿ ಮರುಸ್ಥಾಪಿಸಲಾಗಿರುವ ಭಜರಂಗಿ ಚಿತ್ರದ ಪೋಸ್ಟರ್ನ ಬಳಿ ಮೆರವಣಿಗೆ ಮೂಲಕ ತೆರಳಿ ಹೂವಿನ ಹಾರ ಹಾಕಿ ಪಟಾಕಿ ಸಿಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಕೆ.ಪಿ. ಶ್ರೀಕಾಂತ್ ನೇತೃತ್ವದ ಶಿವರಾಜ್ಕುಮಾರ್ ಅಭಿಮಾನಿಗಳು ಎಂಬುದು ಈ ವಾರದ ಸ್ಕ್ಯಾಂಡಲ್ವುಡ್ ಸುದ್ದಿ.
ಡಬ್ಕುಡಬಲ್ ತುದಾಂಡಲ್...
ಅನರ್ಥ ಪ್ರಶ್ನೆ: ಲೂಸಿಯಾ ಅಂದ್ರೆ 'ಲೂಸುಗಳು' ಚಿತ್ರದ ನಾಯಕಿಯಾ?
ಗುಂಡ: ಮದುವೆಗೆ, ಬಟ್ಟೆ ತೆಗೆಯೋಕೆ ಅಂಗಡಿಗೆ ಹೋಗಿದ್ದೆ
ಖೇಮು: ಎಲ್ಲರ ಮುಂದೆ ಬಟ್ಟೆ ತೆಗೆಯೋದಾ? ಅದೂ ಅಂಗಡೀಲಿ, ಸಂಕೋಚ ಆಗಲಿಲ್ವಾ
ಅತಿಥಿ ಪಾತ್ರಗಳನ್ನು ಮಾಡುವ ನಟ ಬಿ.ಸಿ.ಪಾಟೀಲ್ ಅವರನ್ನು ಏನೆಂದು ಕರೆಯಬಹುದು: 'ಕೌರವ' ನಟ
ಹೆಂಡ್ತಿ, ಗಂಡನಿಗೆ ಅಂತ ಒಂದೇ ಬಣ್ಣದ ಹತ್ತು ಅಂಡರ್ವೇರ್ ತಗೊಂಡ್ ಬಂದ್ಲು. ಅದನ್ನು ನೋಡಿದ ಗಂಡ ಹೇಳಿದ ಏನಿದು ಡಾರ್ಲಿಂಗ್, ಎಲ್ಲಾ ಒಂದೇ ಕಲರ್ ಅಂಡರ್ವೇರ್ ತಂದಿದೀಯ. ನೋಡಿದ್ ಜನ ನಾನು ಅಂಡರ್ವೇರೇ ಬದಲಾಯಿಸೋದಿಲ್ಲ ಅಂತ ತಪ್ಪು ತಿಳ್ಕೊಳಲ್ವಾ?. ಹೆಂಡ್ತಿ ಗರಂ ಆಗಿ ಕೇಳಿದ್ಳು 'ಯಾವ ಜನಾ?'. ಗಂಡ ಗಪ್ಚುಪ್.
ಅಪ್ಪ: ಪುಟ್ಟ ನಿಂಗೆ ಯಾರಿಷ್ಟ. ಅಪ್ಪನೋ, ಅಮ್ಮನೋ?
ಪುಟ್ಟ: ನಂಗೆ ಇಬ್ರೂ ಇಷ್ಟ.
ಅಪ್ಪ: ಅವೆಲ್ಲಾ ಇಲ್ಲ. ಇಬ್ರಲ್ಲಿ ಒಬ್ರ ಹೆಸ್ರು ಹೇಳು.
ಪುಟ್ಟ: ಹಂಗೆಲ್ಲ ಆಗಲ್ಲ.
ಅಪ್ಪ: ಸರಿ ನಿಮ್ಮಮ್ಮ 'ಬಚ್ಚನ್' ಸಿನಿಮಾಗೆ ಹೋಗ್ತಾಳೆ, ನಾನು 'ಪರಮಾತ್ಮ' ಸಿನಿಮಾಕ್ಕೆ ಹೋಗ್ತೀನಿ. ಆಗ ನೀನು ಯಾವ ಸಿನಿಮಾಕ್ಕೆ ಹೋಗ್ತೀಯ.
ಪುಟ್ಟ: ನಾನು 'ಬಚ್ಚನ್'ಗೆ ಹೋಗ್ತೀನಿ
ಅಪ್ಪ: ಹಾ, ನೋಡು ನಿಂಗೆ ಅಮ್ಮ ಅಂದ್ರೆ ಇಷ್ಟ.
ಪುಟ್ಟ: ಹಂಗಲ್ಲ, ನಂಗೆ ಸುದೀಪ್ ಅಂದ್ರೆ ಇಷ್ಟ ಅಷ್ಟೆ.
ಅಪ್ಪ: ಸರಿ, ಹಾಗಾದ್ರೆ ನಾನು 'ಬಚ್ಚನ್' ಸಿನಿಮಾಕ್ಕೆ ಹೋಗ್ತೀನಿ, ನಿಮ್ಮಮ್ಮ 'ಪರಮಾತ್ಮ'ಕ್ಕೆ ಹೋಗ್ತಾಳೆ. ಆಗ ನೀನು ಯಾವ ಪಿಕ್ಚರ್ಗೆ ಹೋಗ್ತೀಯಾ.
ಪುಟ್ಟ: 'ಪರಮಾತ್ಮ'ಕ್ಕೆ ಹೋಗ್ತೀನಿ.
ಅಪ್ಪ: ನೋಡಿದ್ಯಾ..ಸಿಕ್ ಹಾಕ್ಕೊಂಡೆ ನೀನು.. ಈಗ್ಲಾದ್ರೂ ಅಮ್ಮ ಅಂದ್ರೆ ಇಷ್ಟ ಅಂತ ಒಪ್ಕೊ.
ಪುಟ್ಟ: ಅದು ಹಂಗಲ್ಲ. 'ಬಚ್ಚನ್' ಸಿನಿಮಾ ಆಗ್ಲೇ ನೋಡಿರ್ತೀನಲ್ಲ ಅದಕ್ಕೆ.
- ಹರಿ
harikannadaprabha@gmail.com