ಅಂಕಣಗಳು

ಜಗತ್ತು ನೆನಪಿಸಿಕೊಳ್ಳಬೇಕಾದ 9/11 ಯಾವುದು?

ಜಗತ್ತು ನೆನಪಿಸಿಕೊಳ್ಳಬೇಕಾದ 9/11 ಯಾವುದು?
ಗಾಂಧೀಜಿ, ಸ್ವಾಮಿ ವಿವೇಕಾನಂದ
Published On :

ಸೆಪ್ಟೆಂಬರ್ 11ರ ಈ ದಿನ ಜಗತ್ತು ಒಸಾಮಾ ಬಿನ್ ಲಾಡೆನ್ ಸೃಷ್ಟಿಸಿದ ವಿಧ್ವಂಸವನ್ನು ನೆನಪಿಸಿಕೊಳ್ಳುತ್ತದೆ. ಆ ದಾಳಿಯ 12ನೇ ವಾರ್ಷಿಕ ದಿನ. ಆದರೆ ಇದೇ ಸೆಪ್ಟೆಂಬರ್ 9/11ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಭಾಷಣ ಮಾಡಿದ್ದರು ಹಾಗೂ ಇವತ್ತಿಗೆ ಅದಕ್ಕೆ 120 ವರ್ಷಗಳು ಸಂದವು ಎಂದು ನೆನಪಿಸಿಕೊಳ್ಳದಿರುವುದು ವಿಷಾದದ ಸಂಗತಿ. ಅಂತೆಯೇ, 1906ರ 9/11 ದಿನಾಂಕದಂದು ಮಹಾತ್ಮ ಗಾಂಧಿಯವರೂ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹವನ್ನು ಅಪ್ಪಿಕೊಂಡಿದ್ದರು. ಆ ಸಂದೇಶಗಳನ್ನು ನೆನಪಿಸಿದ್ದಾರೆ ಸುಧೀಂದ್ರ ಕುಲಕರ್ಣಿ ಹಾಗೂ ರಾಧಾ ವಿಶ್ವನಾಥನ್.

ಜಗತ್ತನ್ನೇ ಕಂಪಿಸಿದ ಕೆಲ ಇತಿಹಾಸದ ಘಟನೆಗಳನ್ನು ಕೋಡ್‌ವರ್ಡ್‌ಗಳಲ್ಲಿ ನೆನಪಿಟ್ಟುಕೊಳ್ಳುವ ರಿವಾಜೊಂದು ಬೆಳೆದುಬಂದಿದೆ. ಈ ನಿಟ್ಟಿನಲ್ಲಿ 9/11 ಯಾವುದನ್ನು ಸಂಕೇತಿಸುತ್ತದೆ ಎಂದು ಪ್ರಶ್ನಿಸಿದಾಗ ಭಾರತ ಸೇರಿದಂತೆ ಜಗತ್ತಿನ ಜನಗಳೆಲ್ಲ ಪ್ರತಿಕ್ರಿಯಿಸುವುದು, 'ಸೆಪ್ಟೆಂಬರ್ 2001ರಲ್ಲಿ ಉಗ್ರರು ಎರಡು ಹೈಜಾಕ್ ವಿಮಾನಗಳನ್ನು ನ್ಯೂಯಾರ್ಕ್‌ನ ವಿಶ್ವವಾಣಿಜ್ಯ ಕಟ್ಟಡಕ್ಕೆ ನುಗ್ಗಿಸಿ ವಿಧ್ವಂಸ ಸೃಷ್ಟಿಸಿದ್ದರ ಕರಾಳ ನೆನಪಿನ ದಿನ' ಎಂದೇ ಹೇಳುತ್ತಾರೆ. ಆದರೆ 3 ಸಾವಿರ ಮುಗ್ಧ ಜನರ ಸಾವಿಗೆ ಕಾರಣವಾದ ಅಲ್‌ಖೈದಾದ ಈ ಕೃತ್ಯಕ್ಕೆ ವಿರುದ್ಧ ದಿಕ್ಕಿನ ಸಂದೇಶವನ್ನು ನೀಡುವ ಎರಡು ಮಹಾನ್ ಘಟನೆಗಳು ಬೇರೆ ಕಾಲಘಟ್ಟದ ಅದೇ ದಿನಾಂಕದಲ್ಲಿ ನಡೆದಿವೆ.

ಮೊದಲ 9/11: ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದ:
1893ರಲ್ಲಿ ನಡೆದಿದ್ದು ಮೊದಲ 9/11. ಚಿಕಾಗೋದಲ್ಲಿ ಸರ್ವಧರ್ಮಗಳಲ್ಲಿ ಅಂತರ್ಗತವಾಗಿರುವ ವಿಶ್ವ ಭ್ರಾತೃತ್ವ ಹಾಗೂ ಜಾಗತಿಕ ಶಾಂತಿಯ ವಿಷಯವನ್ನು ಇರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮೊದಲ ಸರ್ವಧರ್ಮ ಸಮ್ಮೇಳನ ನಡೆಯಿತು. ಸನಾತನ ಹಿಂದೂ ಧರ್ಮವನ್ನು ಪ್ರತಿನಿಧಿಸಿ ಭಾರತದಿಂದ ಹೋಗಿದ್ದ ಸ್ವಾಮಿ ವಿವೇಕಾನಂದರಷ್ಟು ಪ್ರಖರವಾಗಿ ಆ ವಿಷಯದ ಮೇಲೆ ಬೆಳಕು ಚೆಲ್ಲಿದವರು ಮತ್ಯಾರೂ ಇರಲಿಲ್ಲ. ತೀವ್ರವಾದವನ್ನು ನಿರಾಕರಿಸಲು ಕರೆಗೊಡುತ್ತಾ ವಿವೇಕಾನಂದರು ಹೇಳಿದರು- 'ಗುಂಪುಘರ್ಷಣೆ, ಅಸಹಿಷ್ಣುತೆ, ಸರ್ವಾಧಿಕಾರಿ ಧೋರಣೆಗಳು ಈ ಸುಂದರ ಭೂಮಿಯನ್ನು ಮೊದಲಿನಿಂದಲೂ ಸುತ್ತಿಕೊಂಡಿವೆ. ಅವು ಭೂಮಿಯನ್ನು ಹಿಂಸಾತ್ಮಕವನ್ನಾಗಿಸಿ, ಮಾನವನ ರಕ್ತವನ್ನು ಇನ್ನಷ್ಟು ಮತ್ತಷ್ಟು ಹೊರಚೆಲ್ಲುತ್ತಿವೆ. ನಾಗರಿಕತೆಗಳನ್ನು ನಾಶ ಮಾಡಿ ದೇಶಗಳನ್ನು ಅಸ್ಥಿರಗೊಳಿಸಿವೆ. ಈ ರಕ್ಕಸ ಸೈತಾನರಿಲ್ಲದಿದ್ದರೆ ಸಮಾಜವು ಈಗಿಗಿಂತ ಹೆಚ್ಚು ಪ್ರಗತಿ ಹೊಂದಿರುತ್ತಿತ್ತು. ಈ ಬೆಳಗ್ಗೆ ಸಭೆಯ ಪ್ರಾರಂಭದ ಸೂಚಕವಾಗಿ ಮೊಳಗಿದ ಘಂಟಾನಾದವು ಇಂಥ ವೈಷಮ್ಯಗಳ ಪಾಲಿಗೆ ಮರಣದ ಘಂಟೆ ಆಗಿರಲಿ ಎದು ನಾನು ಆಶಿಸುತ್ತೇನೆ. ಖಡ್ಗ ಮತ್ತು ಪೆನ್ನುಗಳ ಮೂಲಕ ಸಾಧಿಸುತ್ತಿರುವ ಹಿಂಸೆಗಳಿಗೆ ಹಾಗೂ ಒಂದೇ ಗುರಿಯಲ್ಲಿ ನಿರತರಾಗಿರುವ ಸಹಜೀವಿಗಳ ಬಗೆಗಿನ ಅಸಹಿಷ್ಣು ಧೋರಣೆಗಳಿಗೆ ಇದುವೇ ಮರಣಮೃದಂಗವಾಗಲಿ.'
1893ರ ಸೆಪ್ಟೆಂಬರ್ 27 ಈ ಸರ್ವಧರ್ಮ ಸಮ್ಮೇಳನದ ಸಮಾರೋಪದ ದಿನವಾಗಿತ್ತು. ಆಗಲೂ ಈ ಸಭೆ ಜಗತ್ತಿಗೆ ತೋರಿಸಿದ್ದು ಏನನ್ನು ಎಂಬುದರ ಬಗ್ಗೆ ಸ್ವಾಮೀಜಿ ಮಾತನಾಡಿದರು- 'ಪೂಜ್ಯತೆ, ಪರಿಶುದ್ಧತೆ ಹಾಗೂ ಔದಾರ್ಯಗಳು ಜಗತ್ತಿನ ಯಾವುದೇ ಚರ್ಚ್‌ಗಳ ಜಹಗೀರಲ್ಲ. ಪ್ರತಿ ವ್ಯವಸ್ಥೆಯೂ ಉನ್ನತ ವ್ಯಕ್ತಿತ್ವದ ಪುರುಷ-ಸ್ತ್ರೀಯರನ್ನು ಸೃಷ್ಟಿಸಿದೆ. ಈ ಸಾಕ್ಷ್ಯ ಎದುರಿಗಿದ್ದಾಗಲೂ ಯಾರಾದರೂ ತಮ್ಮ ಮತ ಮಾತ್ರವೇ ವಿಕಸಿಸಬೇಕು ಹಾಗೂ ಉಳಿದವು ನಾಶವಾಗಬೇಕು ಎಂಬ ಕನಸಿನಲ್ಲಿದ್ದರೆ ಅಂಥವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಬಹುದಷ್ಟೆ. ಅಲ್ಲದೇ, ಪ್ರತಿ ಧರ್ಮದ ಉದ್ಘೋಷದಲ್ಲೂ ಪ್ರತಿರೋಧಕ್ಕೆ ಬದಲಾಗಿ, 'ಸಹಕಾರವಿರಲಿ, ಸಂಘರ್ಷ ಬೇಡ,' 'ಕಟ್ಟುವಿಕೆ ಇರಲಿ, ಕೆಡುವುವುದು ಬೇಡ', 'ಸಮರಸ ಹಾಗೂ ಶಾಂತಿಯೇ ಹೊರತು ಭೇದವಲ್ಲ' ಎಂಬ ಸಂದೇಶಗಳೇ ಇವೆ ಎಂದು ಅಂಥವರಿಗೆ ತಿಳಿಯಪಡಿಸುತ್ತೇನೆ'.

ಎರಡನೇ 9/11: ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ:
ಸೆಪ್ಟೆಂಬರ್ 11, 1906ರಂದು ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯವರು ಸತ್ಯಾಗ್ರಹವೆಂಬ ಮತ್ತೊಂದು ಮಹಾ ಸಂದೇಶವನ್ನು ಸೃಜಿಸಿದರು. ವರ್ಣಭೇದದ ವಿರುದ್ಧ ಹೋರಾಡುತ್ತಿದ್ದ ಆಫ್ರಿಕಾದ ಜನವರ್ಗಕ್ಕೆ ತಮ್ಮ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕೆ ಈ ಮಾರ್ಗವೇ ಸೂಕ್ತವಾದದ್ದು ಎಂದು ಅವರು ನಿರ್ಧರಿಸಿದ್ದರು. ಗಾಂಧೀಜಿಯವರು ಅಲ್ಲಿ ಕಂಡುಕೊಂಡ ಈ ಸತ್ಯಾಗ್ರಹ ಎಂಬ ಮಹಾನ್ 'ನೈತಿಕ ಅಸ್ತ್ರ'ವೇ ಮುಂದೆ ಭಾರತದ ಸ್ವಾತಂತ್ರ್ಯ ಚಳವಳಿಗೂ ಪ್ರೇರಕವಾಗಿ ಜಗತ್ತಿನೆದುರು ಅದ್ಭುತ ಮಾದರಿ ಒಂದನ್ನು ತೆಗೆದಿರಿಸಿತು.
'ಮನುಕುಲವು ಬದುಕಬೇಕು ಎಂದಾದರೆ ಅದು ಸತ್ಯ ಹಾಗೂ ಅಹಿಂಸೆಯ ನೆರಳಿನಲ್ಲೇ ಆಗಬೇಕು' ಎಂಬುದನ್ನು ಮಹಾತ್ಮ ಗಾಂಧೀಜಿ ಬಲವಾಗಿ ನಂಬಿದ್ದರು. ಆಗ ಮಾತ್ರವೇ ಜಗತ್ತು ಅಂತಾರಾಷ್ಟ್ರೀಯ ಹಾಗೂ ಸಾಮಾಜಿಕ ಬಾಂಧವ್ಯದಲ್ಲಿ ಸೃಜನಾತ್ಮಕ ಸಾಧ್ಯತೆಗಳನ್ನು ಕಂಡುಕೊಳ್ಳಬಲ್ಲುದು ಎಂಬುದು ಅವರ ನಿಲವಾಗಿತ್ತು. ಗುರಿ ಎಂಬುದು ಉದಾತ್ತವಾಗಿದ್ದರೆ ಅದನ್ನು ಸಾಧಿಸುವಲ್ಲಿ ದೇಶ ಮತ್ತು ಸಮಾಜಗಳು ಉದಾತ್ತ ಮಾರ್ಗವನ್ನೂ ಕಂಡುಕೊಳ್ಳಬಲ್ಲವು ಎಂಬುದವರ ಪ್ರತಿಪಾದನೆ ಆಗಿತ್ತು. ಈ ಪ್ರತಿಪಾದನೆಗೆ ತಕ್ಕಂತೆಯೇ ಅವರು ಕೊನೆಯವರೆಗೂ ಬದುಕಿದರು.  
ವಿವೇಕಾನಂದ, ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನಡುವಿನ ವೇದಾಂತ ಬಾಂಧವ್ಯ:
ಡಿಸೆಂಬರ್ 2012ರಲ್ಲಿ ವಾಷಿಂಗ್ಟನ್ ಡಿಸಿಯ 'ವರ್ಲ್ಡ್ ಕಾಂಗ್ರೆಸ್ ಆಫ್ ರಿಲೀಜನ್‌' ಸ್ವಾಮಿ ವಿವೇಕಾನಂದರ 150ನೇ ಜನ್ಮದಿನವನ್ನು ಆಚರಿಸಿತು. ಆ ಸಂದರ್ಭದಲ್ಲಿ ಪ್ರಮುಖ ಭಾಷಣಕಾರನ್ನಾಗಿ ಮಾರ್ಟಿನ್ ಲೂಥರ್ ಕಿಂಗ್ ಅವರ ಮಗ 3ನೆಯ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಆಹ್ವಾನಿಸಲಾಗಿತ್ತು. 'ವೇದಾಂತ ಹಾಗೂ ಅಂತರ್‌ಧರ್ಮ ಭೋದನೆ' ವಿಷಯದ ಕುರಿತು ಮಾತನಾಡುತ್ತ ಅವರು ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಹಾಗೂ ತಮ್ಮ ತಂದೆಯಲ್ಲಿ ಸಾಮ್ಯತೆ ಕಂಡ ಆಧ್ಯಾತ್ಮಿಕ ಎಳೆಯ ಬಗ್ಗೆ ವಿವರಿಸಿದರು. 'ಈ ಇಬ್ಬರೂ ವ್ಯಕ್ತಿಗಳು (ಸ್ವಾಮೀಜಿ ಮತ್ತು ತಮ್ಮ ತಂದೆ) ಒಂದು ಬಗೆಯಲ್ಲಿ ವೇದಾಂತದ ಅರಿವಿನೊಂದಿಗೆ ಬೆಸೆದುಕೊಂಡಿದ್ದರು. ನನ್ನ ತಂದೆಯ ಮೇಲೆ ಮಹಾತ್ಮ ಗಾಂಧಿ ಅವರ ಪ್ರಭಾವವಿತ್ತು. ಮಹಾತ್ಮ ಗಾಂಧಿ ಅವರು ವಿವೇಕಾನಂದರ ಉಪದೇಶದ ಅನುಯಾಯಿಗಳಾಗಿದ್ದರು. ಎಲ್ಲ ಧರ್ಮಗಳ ಪ್ರಮುಖರೂ ವಿವೇಕಾನಂದರ ವಿಚಾರಧಾರೆಗಳನ್ನು ಪಸರಿಸಿದ್ದೇ ಆದರೆ ಎಂಥ ಅದ್ಭುತ ಜಗತ್ತು ಇದಾಗಬಲ್ಲದು... ನನ್ನ ತಂದೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರಂತೆಯೇ ಸ್ವಾಮಿ ವಿವೇಕಾನಂದರೂ ತಮ್ಮ 40ನೇ ಜನ್ಮದಿನವನ್ನು ಆಚರಿಸುವುದಕ್ಕೆ ಬದುಕಿರಲಿಲ್ಲ. ಆದರೆ ಇವರಿಬ್ಬರೂ ತಮ್ಮ ಅಲ್ಪ ಜೀವಿತಾವಧಿಯಲ್ಲೇ ಲಕ್ಷಾಂತರ ಮಂದಿ ಶಾಂತಿ ಮತ್ತು ಸಹಬಾಳ್ವೆಯ ಉನ್ನತ ಆದರ್ಶದೆಡೆ ತಿರುಗುವಂತೆ ಪ್ರೇರೇಪಿಸಿದರು.'
ಧರ್ಮವನ್ನು ತೀವ್ರವಾದಿಗಳು ಭ್ರಷ್ಟಗೊಳಿಸಿ ಸಹಿಷ್ಣುತೆಯ ಜಾಗದಲ್ಲಿ ಹಿಂಸೆಯನ್ನು ತುಂಬಿರುವುದಾಗಿಯೂ ಹಾಗೂ ಎಲ್ಲ ಮತಗಳಲ್ಲಿರುವ ಯುವ ಜನರು ಬಹಳಷ್ಟು ಸಂದರ್ಭಗಳಲ್ಲಿ ಹಿಂಸೆಯ ಕಡೆ ಸುಲಭವಾಗಿ ಒಲವು ತೋರಿಸುತ್ತಾರೆ ಎಂಬುದಾಗಿಯೂ ಮಾರ್ಟಿನ್ ಲೂಥರ್ ವ್ಯಥೆ ಪಟ್ಟಿದ್ದರು. 'ವಿವೇಕಾನಂದರು ಹೇಳಿದಂತೆ ಯಾವುದೇ ಒಂದು ಧರ್ಮ ಇನ್ನೊಂದರ ಮೇಲೆ ಪಾರಮ್ಯ ಹೊಂದಿಲ್ಲ ಎಂಬುದನ್ನು ನಾವು ಅರಿಯಬೇಕು. ವಿವೇಕಾನಂದ, ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಇವರೆಲ್ಲರ ಭೋದನೆಗಳಲ್ಲೂ ಅಹಿಂಸೆಯ ತತ್ವ ಅಂತರ್ಗತವಾಗಿದೆ' ಎಂದವರು ಹೇಳಿದ್ದರು.

ಮೂರನೇ 9/11 ಗಾಂಧಿ- ವಿವೇಕಾನಂದರೇ ಸರಿ ಎಂದು ನಿರೂಪಿಸಿತಷ್ಟೆ:
2001ರ ಸೆಪ್ಟೆಂಬರ್ 11ರಂದು ಇಸ್ಲಾಮಿನ ಹೆಸರಿನಲ್ಲಿ ಆದ ದಾಳಿ ಪ್ರವಾದಿ ಮೊಹಮ್ಮದರ ವಿಚಾರಧಾರೆಗೆ ವಿರುದ್ಧ ದಿಕ್ಕಿನಲ್ಲಿಯೇ ಇತ್ತು. ಇಸ್ಲಾಂ ಇವತ್ತಿಗೂ ಅಪವ್ಯಾಖ್ಯಾನಗಳಿಗೆ ಒಳಗಾಗಿ ರಕ್ತಪಾತ ಮತ್ತು ರಾಜಕೀಯ ಸಂಚುಗಳ ದಾಳವಾಗಿ ಉಪಯೋಗವಾಗುತ್ತಿರುವುದು ಎಷ್ಟು ಕಳವಳಕ್ಕೆ ನೂಕುವ ಸಂಗತಿಯೋ ಅಂತೆಯೇ ಭಯೋತ್ಪಾದನೆ ವಿರುದ್ಧದ ಸಮರದ ಹೆಸರಿನಲ್ಲಿ ಅಮೆರಿಕವು ಮುಗ್ಧ ಜನರ ಸಾವಿಗೆ ಕಾರಣವಾಗಿದ್ದೂ ಖಂಡನೀಯ.
2006ರಲ್ಲಿ ಸತ್ಯಾಗ್ರಹದ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಅಮೆರಿಕದ ವಿದ್ವಾಂಸ ಹಾಗೂ ಗಾಂಧೀವಾದಿ ಮೈಖೆಲ್ ನ್ಯಾಗ್ಲರ್ ತಮ್ಮ ಕಿರು ಹೊತ್ತಿಗೆ, 'ಹೋಪ್ ಆರ್ ಟೆರರ್- ಗಾಂಧಿ ಆ್ಯಂಡ್ ಅದರ್ 9/11' ಎಂಬ ಪುಸ್ತಕದಲ್ಲಿ ಬರೆಯುತ್ತಾರೆ: 'ಗಾಂಧಿ ಹಾಗೂ ಹಿಟ್ಲರ್ ಇಬ್ಬರನ್ನೂ ಕೊಟ್ಟ ಶತಮಾನವು 1906ರ 9/11ರ ದಿನದ ಬಲವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಪ್ರಚೋದಿಸುತ್ತದೆ. ನಾವು ಆ ದಿನಾಂಕವನ್ನು ಮರೆತರೆ ಹಿಂಸೆಯತ್ತ ಹೊರಳಿ 2001ರಂಥದ್ದೇ ದಾಳಿಗಳಲ್ಲಿ ಹೂತುಹೋಗಬೇಕಾಗುತ್ತದೆ. ಹಿಂಸೆಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾದ ಅತಿ ತುರ್ತು ಇದೆ. ಈ ಹಿನ್ನೆಲೆಯಲ್ಲಿ '9/11'ನ್ನು ನೆನಪಿಟ್ಟುಕೊಂಡರೆ ಆಗ ಅದು ದುಃಸ್ವಪ್ನವಾಗಿ ಕಾಡದೇ ವಿದ್ವಾಂಸರು ಹಾಗೂ ಹೋರಾಟಗಾರರ ಪಾಲಿಗೆ ಆದಂತೆ ಎಚ್ಚರಿಕೆ ಘಂಟಾನಾದವೂ ಆಗಬಲ್ಲದು.'
ಹೀಗಾಗಿಯೇ ಒಸಾಮಾ ಬಿನ್ ಲಾಡೆನ್ ದಾಳಿಯನ್ನು ನೆನಪಿಸುವ ವಾರ್ಷಿಕ ದಿನದಂದು, 9/11ಕ್ಕೆ ಬೆಸೆದುಕೊಂಡಿರುವ ಗಾಂಧಿ ಮತ್ತು ವಿವೇಕಾನಂದರನ್ನೂ ನೆನಪಿಸಿಕೊಳ್ಳಬೇಕು. 'ದ ಸರ್ಚ್ ಫಾರ್ ನಾನ್ ವೈಲೆಂಟ್ ಫ್ಯೂಚರ್‌' ಎಂಬ ಪುಸ್ತಕದಲ್ಲಿ ನ್ಯಾಗ್ಲರ್ ಬರೆಯುತ್ತಾರೆ- 'ಪ್ರಾಚೀನ ಭಾರತದ ಅರಿವನ್ನು ಆಧುನಿಕ ಜಗತ್ತಿಗೆ ಹಂಚಿದ ಆಧ್ಯಾತ್ಮಿಕ ಪ್ರವರ್ತಕರು ಸ್ವಾಮಿ ವಿವೇಕಾನಂದರು. ಹಣಪ್ರಧಾನ ಜಗತ್ತಿನಲ್ಲಿ ಅವರ ಉಪದೇಶಗಳನ್ನು ಅಲಕ್ಷಿಸಿದರೆ ಅಪಾಯ ಒದಗುವುದು ನಮಗೇನೇ.'
(ಲೇಖಕರಿಬ್ಬರೂ ಮುಂಬೈ ರೀಸರ್ಚ್ ಫೌಂಡೇಷನ್‌ನ ಆಬ್ಸರ್ವರ್)

- ಸುಧೀಂದ್ರ ಕುಲಕರ್ಣಿ
sudheenkulkarni@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.