ಹಿಂದೂ ದೇವಾಲಯಗಳ ಲೂಟಿಗೆ ರಾಜಕೀಯ ಪಕ್ಷದ ಜಿಹಾದ್!
ಮಧ್ಯಕಾಲೀನ ಭಾರತದ ಮುಸ್ಲಿಂ ಆಡಳಿತದ ಪ್ರಮುಖ ಲಕ್ಷಣ ಎಂದರೆ ಅದು ಹಿಂದುಗಳನ್ನು ಆಧ್ಯಾತ್ಮಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರನ್ನಾಗಿಸಿತು. ಈ ದುರ್ಬಲಗೊಳಿಸುವ ಪ್ರಕ್ರಿಯೆ ಆಕಸ್ಮಿಕವಾದದ್ದೇನೂ ಆಗಿರಲಿಲ್ಲ. ಮುಸ್ಲಿಂ ಆಳ್ವಿಕೆಯ ತತ್ತ್ವಗಳೇ ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ರೂಪುಗೊಂಡಿದ್ದವು. ಮುಸ್ಲಿಮರ ಆಳ್ವಿಕೆಯಲ್ಲಿ ಮುಸ್ಲಿಮೇತರರಿಗೆ 'ಧಿಮ್ಮಿ' ಸ್ಥಾನಮಾನ ನೀಡಿದ್ದು ಪ್ರಮುಖವಾದದ್ದು. ಆ ಪ್ರಕಾರ ಹಿಂದೂಗಳಿಗೆ ಹಕ್ಕುಗಳೇ ಇರಲಿಲ್ಲ. ಅವರು ತಮ್ಮ ಪೂಜಾಪದ್ಧತಿಯನ್ನು ಬಹಿರಂಗವಾಗಿ ಅಭಿವ್ಯಕ್ತಿಸುವಂತಿಲ್ಲ. ದೇವಾಲಯಗಳನ್ನು ನಿರ್ಮಿಸುವಂತಿಲ್ಲ, ಜೀರ್ಣೋದ್ಧಾರ ಮಾಡುವಂತಿಲ್ಲ. ಎಲ್ಲ ಬಗೆಯ ಸುಲಿಗೆಯ ತೆರಿಗೆಗಳನ್ನು ಹೇರುವುದು. ಅನ್ಯಾಯವನ್ನು ಪ್ರಶ್ನಿಸುವುದಕ್ಕೆ ಅವರಿಗೆ ವೇದಿಕೆಯನ್ನೇ ನೀಡದಿರುವುದು. ಸ್ತ್ರೀಯನ್ನಂತೂ ಬಲಾಢ್ಯ ಮುಸ್ಲಿಂ ತನ್ನ ಹಕ್ಕೆಂದು ಭಾವಿಸುವುದು.
ಹಿಂದೂ ಬಹುಸಂಖ್ಯಾತ ಎಂದು ಕರೆಸಿಕೊಳ್ಳುತ್ತಿರುವ ಇಂದಿನ ಭಾರತದಲ್ಲೂ ಇಂಥದೇ ಸಂಗತಿಗಳು ಮರುಕಳಿಸುತ್ತಿವೆ. ಹಿಂದೂಗಳ ಲುಕ್ಸಾನಿನಲ್ಲಿ ಸೆಕ್ಯುಲರಿಸಂ ಎಂಬ ಬ್ರಾಂಡ್ ಒಂದನ್ನು ಆಚರಿಸಲಾಗುತ್ತಿದೆ.
ಹಿಂದೂ ದೂಷಣೆಯ ಶಾಸನಗಳು: ಸ್ವತಂತ್ರ ಭಾರತದ ಬಹುಪಾಲು ಶಾಸನಗಳೆಲ್ಲ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಜಾಡಿನಲ್ಲೇ ಸಾಗಿ ಬಂದವು. ಮೀಸಲಾತಿ ಮಹೋನ್ನತ ಉದ್ದೇಶದಿಂದಲೇ ಪ್ರಾರಂಭದಲ್ಲಿ ಜಾರಿಯಾಯಿತಾದರೂ ನಂತರ ಅದರಲ್ಲೇ ಅನೇಕ ಬಣಗಳನ್ನು ನಿರ್ಮಿಸಿ ಹಿಂದೂ ಸಮಾಜವನ್ನು ಒಡೆಯುವ ಸಾಧನವಾಯಿತು. ಹಿಂದೂ ವಿವಾಹ ಕಾಯ್ದೆ ಹಿಂದೂ ಕುಟುಂಬಗಳನ್ನು ಒಡೆಯಿತು. ಭೂಸುಧಾರಣೆ ಹಿಂದೂಗಳನ್ನು ದುರ್ಬಲಗೊಳಿಸುವುದರೊಂದಿಗೆ ಆಲಸ್ಯವನ್ನೂ ಬಿತ್ತಿತು. ಹಿಂದೂ ದೇವಾಲಯ ಕಾಯ್ದೆಯು ಹಿಂದೂಧರ್ಮದ ವೈಭವದ ಗುರುತಾದ ದೇಗುಲ ಸಂಸ್ಕೃತಿಯನ್ನೇ ಹೊಸಕಿತು.
ಇವೆಲ್ಲದರ ನಡುವೆಯೂ ಶತಮಾನಗಳ ಸಾಂಸ್ಕೃತಿಕ ಏಕತೆಯ ಬಲದಿಂದ ಹಿಂದೂ ಸಮಾಜ ಒಟ್ಟಾಗಿ ಉಳಿದುಕೊಂಡಿದೆ. ಆದರೆ ಈ ಏಕತೆಯನ್ನು ಛಿದ್ರಗೊಳಿಸುವ ದಾಳಿಗಳು ಮುಸ್ಲಿಂ ಆಕ್ರಮಣಕಾರರಿಂದಲ್ಲದೇ ಹಿಂದೂಗಳ ಕೈಯಲ್ಲೇ ಈಗ ಮುಂದುವರಿದಿರುವುದು ದುರಂತ. ಅದರಲ್ಲೂ 1947ರ ನಂತರ ದೀರ್ಘ ಅವಧಿಗೆ ದೇಶವನ್ನು ಆಳಿದ ಕಾಂಗ್ರೆಸ್ನಿಂದ ಈ ದಾಳಿ ಆಗಿದೆ.
ಇದೀಗ ಕಾಂಗ್ರೆಸ್ ಕಡೆಯಿಂದಲೇ ಅಂಥ ಇನ್ನೊಂದು ದಾಳಿ ನಡೆಯುವ ಆತಂಕ ಎದುರಾಗಿದೆ. ಭಾರತದ ಪ್ರಮುಖ ದೇವಾಲಯಗಳಿಂದ, ಮುಖ್ಯವಾಗಿ ತಿರುಪತಿ, ಶಿರಡಿ, ಸಿದ್ಧಿವಿನಾಯಕ ಮಂದಿರಗಳಿಂದ ಹಿಡಿದು ಪದ್ಮನಾಭಸ್ವಾಮಿ ದೇವಾಲಯದವರೆಗೆ ಅವುಗಳಲ್ಲಿನ ಚಿನ್ನದ ಸಂಗ್ರಹವನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಯೋಚಿಸುತ್ತಿದೆ. ಆರ್ಬಿಐನ ಸಲಹೆಗಾರ ಆಗಿರುವ ಜಮಾಲ್ ಮೆಕ್ಲಾಯ್ ಬಾಯಲ್ಲಿ ಸರ್ಕಾರದ ಈ ಯೋಜನೆ ಸುರುಳಿ ಬಿಚ್ಚಿಕೊಂಡಿದೆ. 'ವಿತ್ತಮಂತ್ರಿ ಹಾಗೂ ಆರ್ಬಿಐ ಗವರ್ನರ್ ಜಂಟಿಯಾಗಿ ಹಾಗೂ ತ್ವರಿತವಾಗಿ, ತಿರುಮಲ ತಿರುಪತಿ ದೇವಸ್ಥಾನಮ್ನ ಟ್ರಸ್ಟಿಗಳ ಜತೆ ಮಾತನಾಡಬೇಕು. ಈ ಟ್ರಸ್ಟಿಗಳಲ್ಲಿ ಮೂವರು ರಾಜ್ಯ ಸರ್ಕಾರದಿಂದ ನೇಮಕವಾದವರು. ಹೀಗಾಗಿ ಪ್ರಸ್ತುತ ರಾಜಕೀಯ ವ್ಯವಸ್ಥೆಯು ಇದರ ಲಾಭ ಪಡೆದುಕೊಳ್ಳಬಹುದಾದ ಸಾಧ್ಯತೆ ಚೆನ್ನಾಗಿದೆ' ಎಂಬ ಆಣಿಮುತ್ತು ಉದುರಿಸಿದ್ದಾರವರು!
ಜಮಾಲ್ರ ಈ ಹೇಳಿಕೆ ಬಹಳ ತುರ್ತಾಗಿ ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ತಪ್ಪಿಸಬೇಕಿರುವ ಅಗತ್ಯವನ್ನು ಸಾರಿ ಹೇಳುತ್ತದೆ. ಸರ್ಕಾರದ ಸ್ವಾಮ್ಯದಲ್ಲಿರುವ ಹಿಂದೂ ದೇವಾಲಯಗಳು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿವೆ ಎಂಬುದು ಒಂದಂಶ. ದಶಕಗಳಿಂದ ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸಬೇಕು ಎಂದು ವ್ಯಕ್ತಿಗಳು ಹಾಗೂ ಸಂಘಟನೆಗಳು ಯತ್ನಿಸುತ್ತಲೇ ಇದ್ದಾರೆ. ಇದೀಗ ಸರ್ಕಾರಗಳಿಂದ ದೇವಾಲಯಗಳ ಮೇಲಿನ ಹಿಡಿತ ಕೊನೆಗೊಳ್ಳದಿದ್ದರೆ ಸ್ಥಿತಿವಂತ ದೇವಾಲಯಗಳು ಅಕ್ಷರಶಃ ಲೂಟಿಯಾಗಲಿವೆ ಎಂಬ ಆತಂಕವೂ ಎದುರಾಗಿದೆ. ಮುಸ್ಲಿಮರಾಗಿರುವ ಜಮಾಲ್ ಅವರು ಅದೇಕೆ ಸರ್ಕಾರಕ್ಕೆ ಚರ್ಚ್ ಹಾಗೂ ಮಸೀದಿಗಳನ್ನು ಮುಟ್ಟುವುದಕ್ಕೆ ಸಲಹೆ ಕೊಡಲಿಲ್ಲ? ಭಾರತದಲ್ಲಿ ಅತಿಹೆಚ್ಚು ಭೂಮಿಯನ್ನು ಹೊಂದಿರುವವು ಚರ್ಚ್ಗಳು. ಅಲ್ಲದೇ ವಕ್ಫ್ ಮಂಡಳಿ ಬಳಿ ಅತಿ ವಿಸ್ತಾರ ಭೂಮಿ ಇದೆ.
ಕೆಲವರ ವಾದವೇನೆಂದರೆ, ಸುಮ್ಮನೇ ಬಿದ್ದಿರುವ ಸಂಪತ್ತು ಕೆಲಸಕ್ಕೆ ಬರುವಂಥದ್ದಲ್ಲ. ನಿಜವಾದ ಸಂಪತ್ತು ಎಂಬುದು ಪ್ರತಿದಿನ ಎದ್ದು ಕೆಲಸಕ್ಕೆ ಹೋಗುವುದು. ಮಕ್ಕಳು ಪಾಠವನ್ನು ಓದಿ ತಮ್ಮ ಬುದ್ಧಿ ಹೆಚ್ಚಿಸಿಕೊಳ್ಳುವುದು. ಈ ಎಲ್ಲ ತರ್ಕವನ್ನು ಎತ್ತಿಕೊಂಡೇ, 'ಪದ್ಮನಾಭಸ್ವಾಮಿ ದೇವಾಲಯದ ಟ್ರಸ್ಟಿಗಳು ಅವರ ಸಂಗ್ರಹವನ್ನು ನೀಡಿ ಈಗಿರುವ ಅರ್ಥಪೂರ್ಣ ಕರೆನ್ಸಿಗೆ ಬಲ ನೀಡಬೇಕು' ಎಂಬ ವಾದ ಹುಟ್ಟಿಕೊಳ್ಳುತ್ತದೆ. ಬಹಳ ವಿವೇಕಯುತ ವಾದ ಎನ್ನಿಸುವ ಇದರಲ್ಲಿ ಎರಡು ಲೋಪಗಳಿವೆ. ದೇವಾಲಯದ ಸಂಪತ್ತು ಎಂಬುದು ಐತಿಹಾಸಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಪಡೆದಿರುವ ಮಹತ್ವ ಏನು ಎಂಬುದನ್ನು ಈ ವಾದ ನಿರ್ಲಕ್ಷಿಸುತ್ತದೆ ಎಂಬುದು ಒಂದಾದರೆ, ಇಲ್ಲಿವರೆಗೆ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಆಚರಿಸಿಕೊಂಡುಬಂದಿರುವ ವ್ಯಭಿಚಾರ ಸದೃಶ ಧೋರಣೆಯನ್ನು ಈ ವಾದ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಇನ್ನೊಂದಂಶ.
ಹಿಂದೂ ದೇವಾಲಯಗಳ ನಿರ್ವಹಣೆ: ಐತಿಹಾಸಿಕವಾಗಿ ದೇವಾಲಯಗಳ ನಿರ್ಮಾಣವಾಗಿದ್ದು ರಾಜರುಗಳಿಂದ ಇಲ್ಲವೇ ಸಮುದಾಯಗಳಿಂದ, ಗಿಲ್ಡ್ಗಳು ಇಲ್ಲವೇ ವ್ಯಕ್ತಿಗಳಿಂದ. ರಾಜರಿಂದ ಕಟ್ಟಿಸಲ್ಪಟ್ಟ ದೇವಾಲಯಗಳು ಅವರಿಂದಲೇ ನೇರ ಆಳ್ವಿಕೆಗೆ ಒಳಗಾಗುತ್ತಿದ್ದವು. ಆ ಮೊದಲೇ ಅಸ್ತಿತ್ವದಲ್ಲಿದ್ದ ದೇವಾಲಯಗಳ ನಿರ್ವಹಣೆಯನ್ನು ರಾಜ ಅದರ ವ್ಯವಸ್ಥಾಪಕರಿಗೇ ಬಿಡುತ್ತಿದ್ದ ಹಾಗೂಕೆಲ ಸಂದರ್ಭಗಳಲ್ಲಿ ಭೂಮಿ ಮತ್ತು ಹಣವನ್ನು ಒದಗಿಸುತ್ತಿದ್ದ. ಎಲ್ಲ ಪುರಾತನ ದೇವಾಲಯಗಳೂ ನಿರ್ವಹಣೆ ಬಗ್ಗೆ ವಿವರಿಸಿರುವ ಶಾಸನಗಳನ್ನು ಹೊಂದಿವೆ. ಖಾಸಗಿ ವ್ಯಕ್ತಿಗಳಿಂದ ನಿರ್ಮಾಣವಾಗಿರುವ ದೇವಾಲಯಗಳು ಇವತ್ತಿನ ಟ್ರಸ್ಟಿಗಳ ಬೋರ್ಡ್ ಅನ್ನೇ ಹೋಲುವ ಜನರ ಗುಂಪಿನಿಂದ ನಿರ್ವಹಣೆಗೆ ಒಳಗಾಗುತ್ತಿತ್ತು. ಅವರನ್ನು ಸ್ಥಾನಿಕರು ಎಂದು ಕರೆಯಲಾಗುತ್ತಿತ್ತು. ಸ್ಥಾನ ಎಂಬ ಹೆಸರೇ ಸೂಚಿಸುವಂತೆ ಅವರು ಅದೇ ಸ್ಥಾನದವರು ಅಂದರೆ ಸ್ಥಳೀಯರು. ಈ ಗುಂಪಿನಲ್ಲಿ ಎಲ್ಲ ನಾಲ್ಕು ವರ್ಣದವರೂ ಇರುತ್ತಿದ್ದರು. ಪ್ರತಿ ನಿರ್ಧಾರವನ್ನೂ ಸಾಮೂಹಿಕವಾಗಿಯೇ ತೆಗೆದುಕೊಳ್ಳಲಾಗುತ್ತಿತ್ತು.
ದೇವಾಲಯ ನಿರ್ವಹಣೆಯಲ್ಲಿ, ಪೂಜೆ ನೆರವೇರಿಸುವ ಅರ್ಚಕವರ್ಗ ಹಾಗೂ ದೇವಾಲಯ ಸ್ವಚ್ಛತೆ, ಪರಿಕರಗಳ ಪೂರೈಕೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡ ಪರಿಚಾರಕ ವರ್ಗ ಎಂದು ಎರಡು ವಿಧ. ಇವೆರಡೂ ವರ್ಗಗಳು ಸ್ಥಾನಿಕರಿಗೆ ಉತ್ತರದಾಯಿ. ತಪ್ಪು ಮಾಡಿದವರಿಗೆ ಶಿಕ್ಷೆಯ ಭೀತಿ. ಅರ್ಚಕವರ್ಗದವರಿಗೆ ಸಂಬಳ ಹಾಗೂ ವಸ್ತು ಕೊಡುಗೆಗಳು ಸಂದರೆ, ಪರಿಚಾರಕ ವರ್ಗದವರಿಗೆ ನೀರಾವರಿ ಭೂಮಿ, ಬಟ್ಟೆ, ಧಾನ್ಯ, ದೇವಾಲಯದಲ್ಲಿ ಸಂಗ್ರಹವಾದ ಹಣದಲ್ಲಿ ಬೋನಸ್ ರೂಪದ ವಾರ್ಷಿಕ ಮೊತ್ತ ಇವೆಲ್ಲ ಸಂದಾಯವಾಗುತ್ತಿತ್ತು.
ವಾಸ್ತವದಲ್ಲಿ ದೇವಾಲಯ ಎಂಬುದು ಕೇವಲ ಪೂಜಾಸ್ಥಳವಾಗಿರದೇ ಒಂದು ಸೂಕ್ಷ್ಮ ಅರ್ಥವ್ಯವಸ್ಥೆಯ ಪೋಷಕನೂ ಆಗಿತ್ತು. ದೈನಂದಿನ ಪೂಜೆಗಳ ಹೊರತಾಗಿ ಪ್ರತಿ ದೇವಾಲಯವೂ ವಿಶೇಷ ಪೂಜೆಗಳನ್ನು ಆಯೋಜಿಸುತ್ತಿತ್ತು. ಅಂಥ ಪೂಜೆಗಳಿಗೆ ನಿರ್ದಿಷ್ಟ ಪರಿಕರಗಳು ಬೇಕಾಗುತ್ತಿದ್ದವು. ಉದಾಹರಣೆಗೆ ಕರ್ಪೂರ, ಊದುಬತ್ತಿ, ಹಾಲು, ಸಕ್ಕರೆ, ಬೆಲ್ಲ, ಪ್ರಸಾದ, ರಂಗೋಲಿ ಇತ್ಯಾದಿ. ಹವನ ಮತ್ತು ಯಜ್ಞದಂಥ ಕಾರ್ಯಗಳಿಗೆ ಇನ್ನೂ ಹೆಚ್ಚಿನ ಪರಿಕರಗಳು ಬೇಕಿರುತ್ತಿದ್ದವು. ಇದು ಹಲವು ಕೌಶಲ ಮತ್ತು ಉದ್ಯಮಗಳನ್ನು ಸೃಷ್ಟಿಸಿ ಬಹುದೊಡ್ಡ ಜನವರ್ಗಕ್ಕೆ ಜೀವನಾಧಾರವನ್ನು ಕಲ್ಪಿಸಿತ್ತು.
ಈ ದೇವಾಲಯ ಅರ್ಥವ್ಯವಸ್ಥೆಯನ್ನು ಎರಡು ಬಗೆಗಳಲ್ಲಿ ಹಿಡಿದಿಡಬಹುದು.
ಗ್ರಾಮಾಶ್ರಿತಾಲಯ: ಹಳ್ಳಿ ಅಥವಾ ಪಟ್ಟಣದಿಂದ ಉಳಿದುಕೊಂಡಿರುವ ದೇವಾಲಯ. ಅಂದರೆ ದೇವಾಲಯದ ನಿರ್ವಹಣೆ- ರಕ್ಷಣೆಯನ್ನು ಜನ ನೋಡಿಕೊಳ್ಳುತ್ತಾರೆ.
ಆಲಯಾಶ್ರಿತಗ್ರಾಮ: ಹಳ್ಳಿ ಅಥವಾ ಆ ಪಟ್ಟಣ ದೇವಾಲಯದಿಂದಲೇ ಉಳಿದುಕೊಂಡಿರುವಂಥದ್ದು. ಇವಕ್ಕೆ ದಕ್ಷಿಣ ಭಾರತದ ದೇವಾಲಯಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಈ ದೇವಾಲಯಗಳ ಸುತ್ತಲಿನ ಚಟುವಟಿಕೆಯಿಂದಲೇ ಆ ಪಟ್ಟಣ-ಹಳ್ಳಿಯ ಬದುಕು ರೂಪುಗೊಂಡಿರುವುದನ್ನು ಕಾಣಬಹುದು.
ಹಿಂದೂ ದೇವಾಲಯಗಳ ಸಂಪತ್ತು ನಿರ್ವಹಣೆ: ದೇಗುಲಗಳ ಆಸ್ಥಿಯನ್ನು ಸ್ಥಿರಾಸ್ತಿ ಹಾಗೂ ದೇವಸ್ವ ಎಂಬ ಎರಡು ವಿಂಗಡನೆಗಳಲ್ಲಿ ಕಾಣಬಹುದಾಗಿದೆ. ದೇವಾಲಯ ಕಟ್ಟಡ, ಮದುವೆ ಛತ್ರ, ನೀರಿನ ತೊಟ್ಟಿ ಹೀಗೆ ದೇವಾಲಯಕ್ಕೆ ಸೇರಿದ ನಿರ್ಮಿತಿಗಳು ಸ್ಥಿರಾಸ್ತಿ. ದೇವಸ್ವ ಎಂಬುದು ಹೆಸರೇ ಸೂಚಿಸುವಂತೆ ದೇವರಿಗೆ ಸೇರಿದ್ದು. ಆಭರಣ, ಚಿನ್ನ, ವಜ್ರ ಹಾಗೂ ಇನ್ನಿತರ ಅಮೂಲ್ಯ ಲೋಹಗಳನ್ನು ಜನರು ದೇವರಿಗೆ ಅರ್ಪಿಸುವುದು ರಿವಾಜು. ದಾನವೆಂಬ ಹೆಸರಲ್ಲಿ ಈ ಆರ್ಥಿಕ ಒಡಂಬಡಿಕೆ ನಡೆದಿರುತ್ತದೆ. ಇವತ್ತಿಗೂ ದೇವಾಲಯಗಳಿಗೆ ದಾನ ನೀಡುವ ಲಕ್ಷಾಂತರ ಹಿಂದೂಗಳು ಈ ಧರ್ಮವನ್ನು ಅರಿವಿಲ್ಲದಂತೆ ಪಾಲಿಸುತ್ತಿದ್ದಾರೆ. ಹೀಗೊಮ್ಮೆ ದಾನ ಸಲ್ಲಿಕೆಯಾದ ಮೇಲೆ ಆ ವಸ್ತುವನ್ನು ಯಾರೂ ಮುಟ್ಟುವಂತಿಲ್ಲ, ಬೇರೆ ರೂಪ ನೀಡುವಂತಿಲ್ಲ. ದೇವಾಲಯ ವ್ಯವಸ್ಥಾಪಕರೂ ಕೇವಲ ಆ ಕೊಡುಗೆಯ ಕಾವಲುದಾರರು ಅಷ್ಟೆ.
ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರ ತನ್ನ ಕ್ಷುದ್ರದೃಷ್ಟಿ ಬೀರುತ್ತಿರುವ ತಿರುಪತಿ ದೇವಾಲಯವನ್ನೇ ಇದಕ್ಕೆ ಉದಾಹರಣೆಯನ್ನಾಗಿ ಬಳಸಿಕೊಳ್ಳಬಹುದು. ಅಲ್ಲಿ ಕಾಣಿಕೆಯನ್ನು ಸಲ್ಲಿಸಿಯಾದ ಮೇಲೆ ಕೊಟ್ಟವನು ಪುನಃ ಅದನ್ನು ಕೇಳುವಂತಿಲ್ಲ. ತಿರುಮಲದಲ್ಲಿ ಪೂಜೆಗೊಳ್ಳುತ್ತಿರುವ ಇನ್ನೊಂದು ದೇವರಾದ ಶ್ರೀನಿವಾಸನ ಸನ್ನಿಧಿಯಲ್ಲಿ ಪ್ರತಿರಾತ್ರಿ ಅಂದಿನ ಕಾಣಿಕೆಗಳ ಪಟ್ಟಿಯ ಲೆಕ್ಕವನ್ನು ತೆರೆದಿಡಲಾಗುತ್ತದೆ. ಈ ಪದ್ಧತಿ ಅನಾದಿಕಾಲದಿಂದ ಬೆಳೆದುಬಂದಿರುವಂಥದ್ದು. ಇದೇ ರಿವಾಜು ಬೇರೆ ಸ್ಥಳಗಳಲ್ಲಿ ಬೇರೆ ಬಗೆಯಲ್ಲಿ ಚಾಲ್ತಿಯಲ್ಲಿರುವುದನ್ನು ನೋಡಬಹುದು. ಕಾಶಿಯಲ್ಲಿ ಕಾಳ ಭೈರವನನ್ನು ನಗರದ ಕೊತ್ವಾಲ ಎಂದೇ ಗಣಿಸಲಾಗುತ್ತದೆ. ಕೊತ್ವಾಲ ಎಂಬುದು ಸಂಸ್ಕೃತದ ಕ್ಷೇತ್ರಪಾಲ ಎಂಬ ಪದದ ಅಪಭೃಂಶ. ಅದರ ಅರ್ಥ ನಗರದ ಪೊಲೀಸ್ಮನ್ ಎಂದು. ಇಂಥ ಆಚರಣೆಗಳ ಪ್ರಾಮುಖ್ಯ ಎಷ್ಟು ಅಗಾಧವಾದದ್ದು ಎಂಬುದನ್ನು ನಿಮ್ಮ ನಿಲುಕಿಗೇ ಬಿಡುವೆ.
ಕಾಂಗ್ರೆಸ್ನ ನಿಜ ದರೋಡೆ: ದೇವಾಲಯಗಳಿಗೆ ಏನನ್ನಾದರೂ ಕೊಟ್ಟಮೇಲೆ ಯಾರಿಗೂ ಅದರಲ್ಲಿ ಅಧಿಕಾರವಿಲ್ಲ. ಕೊಡುವುದು ಒಂದು ಬಾಹ್ಯ ಕ್ರಿಯೆ. ಜನರ ಭಕ್ತಿ ಆಂತರಂಗಿಕ ಪ್ರಕ್ರಿಯೆ. ಆ ಅಗಾಧ ವಿಶ್ವಾಸವೇ ನಿಜವಾದದ್ದು. ಇದೀಗ ದೇವಾಲಯಗಳ ಸಂಪತ್ತನ್ನು ಹೇಗಾದರೂ ಎತ್ತಿಕೊಳ್ಳೋಣ ಎಂಬ ಯೋಚನೆಯ ಬೀಜ ಬಿತ್ತಿಸಿಕೊಂಡಿರುವ ಕಾಂಗ್ರೆಸ್, ಇಂಥ ವಿಶ್ವಾಸವನ್ನೇ ಕಳುವು ಮಾಡಿ ನಾಶಗೊಳಿಸುವ ಕಾರ್ಯಕ್ಕೆ ಕೈಹಾಕಿದೆ. ತಿರುಮಲದಂಥ ದೇವಾಲಯಗಳಲ್ಲಿ ಸಂಗ್ರಹವಾಗಿರುವವು ನೂರಾರು ವರ್ಷಗಳ ಕಾಣಿಕೆಗಳು. ಹಲವಾರು ರಾಜರು ಕೊಟ್ಟ ಕಾಣಿಕೆ ಅಲ್ಲಿದೆ. ತನ್ನ ಸಂಪತ್ತು ಪರಿಶುದ್ಧ ಭಕ್ತಿಗೆ ಅಧೀನ ಎಂಬ ಸೂಚ್ಯಾರ್ಥ ಅಲ್ಲಿತ್ತು. ಎಂದೋ ಗತಿಸಿಹೋದ ಭಕ್ತರ ಕೊಡುಗೆಗಳಿಗೂ ತಾನು ಕೈಹಾಕುವ ಬಗ್ಗೆ ಯೋಚಿಸುತ್ತಿರುವ ಕಾಂಗ್ರೆಸ್ನ ಮನಸ್ಥಿತಿ ಇನ್ನೆಷ್ಟು ಹೀನವಾಗಿದ್ದಿರಬಹುದು?
ರುಪಾಯಿ ಪತನದ ಬಿಕ್ಕಟ್ಟು ಎಂಬುದು ಕಾಂಗ್ರೆಸ್ನವ ದೋಚುವ ಬುದ್ಧಿಗೆ ಪೂರಕವಾಗಿ ಬಳಸಿಕೊಳ್ಳುತ್ತಿರುವ ಕಾರಣವಷ್ಟೆ. ರುಪಾಯಿ ಕುಸಿದಿರುವುದಕ್ಕೆ ಇವರ ಒಂಬತ್ತು ವರ್ಷಗಳ ಬ್ರಹ್ಮಾಂಡ ಭ್ರಷ್ಟಾಚಾರ, ಆಡಳಿತ ದುಃಸ್ಥಿತಿ, ಅರ್ಥವ್ಯವಸ್ಥೆ ಸಂಭಾಳಿಸುವ ವೈಫಲ್ಯಗಳೇ ಕಾರಣ. ಅಂತೆಯೇ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಕೊಲ್ಲುವ ವಿನಾಶಕಾರಿ ಯೋಚನೆಯೂ ಇಲ್ಲಿದೆ. ದೇವಾಲಯಗಳಿಗೆ ಕೈಹಾಕುವುದರಿಂದ ಸಂಪತ್ತು ಸಿಗುತ್ತದೆ. ಇನ್ನೊಂದೆಡೆ ಹಿಂದೂಗಳು ದೇವಾಲಯಕ್ಕೆ ಕಾಣಿಕೆ ಕೊಡುವುದರಿಂದ ಹಿಂದೆ ಸರಿಯುತ್ತಾರಾದ್ದರಿಂದ ಹಿಂದೂ ಸಮಾಜದ ಹೆಗ್ಗುರುತಾದ ದೇಗುಲ ಸಂಸ್ಕೃತಿ ನಶಿಸಿಹೋಗುತ್ತದೆ. ಇಷ್ಟಕ್ಕೂ ಕಾಂಗ್ರೆಸ್ ಎಂಬುದು ಸೆಕ್ಯುಲರಿಸಮ್ನ ಬೊಬ್ಬೆ ಹೊಡೆಯುತ್ತಿರುವ ಪಕ್ಷ. ಈ ಸೆಕ್ಯುಲರ್ ಸರ್ಕಾರಕ್ಕೆ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ನೈತಿಕತೆ ಎಲ್ಲಿಂದ ಬಂತು? ಅದು ಹೇಗೋ ಆ ಹಕ್ಕು ಅದಕ್ಕಿದೆ ಎಂದಾದಲ್ಲಿ ಬೇರೆ ಧರ್ಮಗಳ ವಿಷಯದಲ್ಲೂ ಈ ಹಸ್ತಕ್ಷೇಪ ಏಕಿಲ್ಲ?
ಎರಡು ಎಚ್ಚರಿಕೆಗಳು: ಹನ್ನೊಂದನೇ ಶತಮಾನದಲ್ಲಿ ಕಾಶ್ಮೀರವನ್ನು ಆಳಿದ ಶ್ರೀಹರ್ಷ ದೇವಾಲಯ ಸಂಪತ್ತನ್ನು ದೋಚುವುದರಲ್ಲಿ ಕುಖ್ಯಾತನಾಗಿದ್ದ. ಆದರೆ ಜನರ ಸಹನೆ ಕಟ್ಟೆ ಒಡೆದಾಗ, 22 ವರ್ಷ ಆಳ್ವಿಕೆ ಮಾಡಿದ್ದ ಆತನನ್ನು ಬಡಿದು ಕೊಂದರು ಎಂದು ಕಲ್ಹಣನ ರಾಜತರಂಗಿಣಿ ಹೇಳುತ್ತದೆ. ದೇವಾಲಯಗಳ ಶಾಸನದ ಮೇಲೆ ನಮೂದಾದ ಶ್ಲೋಕವನ್ನೂ ಗಮನಿಸಬೇಕು- 'ತನ್ನಿಂದಾಗಲಿ ಇತರರಿಂದಾಗಲೀ ಮಾಡಲಾದ ದಾನವನ್ನು ಯಾರು ಕಿತ್ತುಕೊಳ್ಳುವನೋ ಆತ 60 ಸಾವಿರ ವರ್ಷ ಗಟಾರದ ಕ್ರಿಮಿಯಾಗಿ ಬಾಳುತ್ತಾನೆ' ಎನ್ನುತ್ತದದು.
ಕೊನೆಯಲ್ಲಿ ಎಸ್. ಎಲ್, ಭೈರಪ್ಪನವರ 'ತಂತು' ಕೃತಿಯಲ್ಲಿ ಮುಖ್ಯ ಪಾತ್ರಧಾರಿ ಬಳಿ ಮಾತನಾಡುವ ಪಾತ್ರವೊಂದು ಇಂದಿರಾ ಗಾಂಧಿಯವ ಭೂ ಕಾಯ್ದೆ ಬಗ್ಗೆ ಹೀಗೆ ಹೇಳುತ್ತದೆ. 'ಬೇರೆಯವರಿಂದ ಕಾಣಿಕೆ ರೂಪದಲ್ಲಿ ಬಂದ ಭೂಮಿಯನ್ನು ನನಗೆ ನೆನಪಿರುವಂತೆ ಯಾವ ರಾಜರೂ, ಪಾಳೇಗಾರರೂ, ಹೋಗಲಿ ಬ್ರಿಟೀಷರೂ ಕಿತ್ತುಕೊಂಡಿರಲಿಲ್ಲ. ನಮ್ಮದೇ ಜನ ಹಾಗೆ ಕಿತ್ತುಕೊಳ್ಳುವ ಕೆಲಸ ಮಾಡಿದರು'.
- ಸಂದೀಪ್ ಬಾಲಕೃಷ್ಣ
ತಂತ್ರಜ್ಞ, ಬ್ಲಾಗರ್
deepu.sandeep@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

