ಅಂಕಣಗಳು

ಇತಿಹಾಸ ಪ್ರಸಿದ್ಧ ದೇವಾಲಯದ ಪೌರಾಣಿಕ ಹಿನ್ನೆಲೆ...

Published On :

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು, ಕಂಬಾಲಹಳ್ಳಿಯ ಒಡೆಯನ ಕೆರೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯವಿದೆ. 18-9-2013ರಂದು ಈ ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ಅನಂತಪದ್ಮನಾಭ ಸ್ವಾಮಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮಂದಿರದ ಪೌರಾಣಿಕ ಹಿನ್ನೆಲೆಯೇನು ಎಂಬುದನ್ನು ನೋಡೋಣ...
ಒಂದಾನೊಂದು ಕಾಲದಲ್ಲಿ ಅಂಬಾಜಿ ದುರ್ಗ ಎಂಬ ಊರಲ್ಲಿ ಆದಿಕೇಶವನೆಂಬ ಶ್ರೀವೈಷ್ಣವ ದೈವಭಕ್ತನಿದ್ದನಂತೆ. ಈತ ಭಕ್ತಿಯಿಂದ ಅನಂತಪದ್ಮನಾಭ ಸ್ವಾಮಿಯನ್ನು ಪೂಜಿಸಿ ಚಾಚು ತಪ್ಪದೇ ಸೇವಾ ಕೈಂಕರ್ಯಗಳನ್ನು ನಡೆಸುತ್ತಾ, ಇಬ್ಬರು ಸತಿಯರೊಂದಿಗೆ ಸಭ್ಯ ಗೃಹಸ್ಥನಾಗಿ ಜೀವನ ನಿರ್ವಹಿಸುತ್ತಿದ್ದ. ಮೊದಲನೆಯ ಪತ್ನಿಗೆ ಏಳು ಹೆಣ್ಣು ಮಕ್ಕಳಾದವು. ಎರಡನೆಯ ಪತ್ನಿಗೆ ಸಂತಾನ ಭಾಗ್ಯ ಲಭಿಸಲಿಲ್ಲ. ಇದನ್ನು ಕಂಡ ಮೊದಲ ಪತ್ನಿ,
ಒಂದು ದಿನ ಆದಿಕೇಶವನ ಬಳಿ ಈ ವಿಷಯ ಪ್ರಸ್ತಾಪಿಸಿದಳು. ಯಾಗದ ಫಲದಿಂದ ತನ್ನ ಸಹೋದರಿಗೆ ಸಂತಾನ ಭಾಗ್ಯ ಕರುಣಿಸಿ ಲೋಕನಿಂದನೆಯಿಂದ ಪಾರು ಮಾಡುವಂತೆ ಮನವಿ ಮಾಡಿದಳು. ಪತ್ನಿಯ ಮನವಿಯನ್ನು ಪುರಸ್ಕರಿಸಿ ತಪೋನಿಷ್ಠನಾಗಿ ಅಷ್ಟಾಕ್ಷರಿ ಮಹಾಯಾಗಕ್ಕೆ ಆದಿಕೇಶವ ಉಪಕ್ರಮಿಸುತ್ತಾನೆ.
ಸಾಂಗೋಪಾಂಗವಾಗಿ ನೆರವೇರುತ್ತಿದ್ದ ಯಾಗದ ಅಂತಿಮ ಘಟ್ಟದಲ್ಲಿ ಶೇಷಶಯನ ಆದಿಶೇಷ ಪ್ರಸನ್ನ ಚಿತ್ತನಾಗಿ ಸಪ್ತ ಮುಖಿಯಾಗಿ ಸಾಕ್ಷಾತ್ಕರಿಸಿ, ಆದಿಕೇಶವನ ಅಭಿಷ್ಠವೇನೆಂದು ಪ್ರಶ್ನಿಸುತ್ತಾನೆ. 'ಬಂಜೆಯಾಗಿರುವ ನನ್ನ ದ್ವಿತೀಯ ಪತ್ನಿಗೆ ನಿನ್ನಂತಹುದೇ ಸಂತಾನ ಫಲವನ್ನು ಕರುಣಿಸು' ಎಂದು ಬೇಡಿಕೊಂಡಾಗ ಆದಿಶೇಷನು ಫಲವೊಂದನ್ನು ನೀಡಿ ತಥಾಸ್ತು ಎನ್ನುತ್ತಾನೆ.
ಈ ರೀತಿ ಆದಿಶೇಷನಿಂದ ವರಪ್ರಸಾದ ಪಡೆದ ಆದಿಕೇಶವ, ಸಂತಾನ ಫಲವನ್ನು ತನ್ನ ದ್ವಿತೀಯ ಪತ್ನಿಗೆ ನೀಡುತ್ತಾನೆ. ಫಲವನ್ನು ಸೇವಿಸಿದ ಆಕೆ ಗರ್ಭಧರಿಸಿ, ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ವರದ ಫಲವಾಗಿ ಜನಿಸಿದ ಆ ಗಂಡು ಮಗು ಆದಿಶೇಷನ ಪ್ರತಿರೂಪವಾಗಿದ್ದು, ಸಪ್ತ ಮುಖಿಯಾಗಿ ಸರ್ಪಾಕಾರದಲ್ಲಿರುತ್ತದೆ. ದೈವದ ಪ್ರೇರಣೆಯಂತೆ ಮಗುವನ್ನು ಇಷ್ಟ ಪ್ರದವಾಗಿ ಪೋಷಿಸುತ್ತಾರೆ. ತಂದೆ, ತಾಯಂದಿರು ಮತ್ತು ಏಳು ಜನ ಸಹೋದರಿಯರ ಮುದ್ದಿನ ಕಣ್ಮಣಿಯಾಗಿ ಆ ಬಾಲಕ ಬೆಳೆಯುತ್ತಾನೆ.
ಏಳು ಜನ ಸಹೋದರಿಯರು ಮೈನೆರೆತು ವಿವಾಹ ಪ್ರಾಯರಾಗುತ್ತಾರೆ. ಸುತ್ತಮುತ್ತಲ ಗ್ರಾಮಗಳಿಂದ ಕನ್ಯಾನ್ವೇಷಣೆಯ ಆಸಕ್ತರು ಇವರ ಮನೆಗೆ ಬರುತ್ತಾರೆ. ಅಲ್ಲಿ ಸರ್ಪಾಕೃತಿಯಾದ ಆದಿಶೇಷನನ್ನು ಕಂಡು ಅಪಶಕುನವೆಂದು ಭಾವಿಸಿ ಸಹೋದರಿಯರನ್ನು ತಿರಸ್ಕರಿಸುತ್ತಾರೆ. ಈ ವಿಚಾರವನ್ನು ಮನಗಂಡ ಆ ಗ್ರಾಮದ ಪ್ರಮುಖ, 'ಹೆಣ್ಣು ಮಕ್ಕಳಿಗೆ ಮದುವೆಯಾಗುವವರೆಗೂ ನಿಮ್ಮ ಮಗ ಆದಿಶೇಷ ಯಾರ ಕಣ್ಣಿಗೂ ಬೀಳದಿದ್ದರೆ ಒಳಿತು' ಎಂದು ಸಲಹೆ ನೀಡುತ್ತಾನೆ. ಆದಿಕೇಶವ ಒಲ್ಲದ ಮನಸ್ಸಿನಿಂದಲೇ ಮಗನ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದಾಗ ಮಗ ತಂದೆಗೆ ವಾಗ್ದಾನವಿತ್ತು ವಾಡೆಯ ಕೆಳಗಡೆ ವಾಸಸ್ಥಾನವನ್ನು ಏರ್ಪಡಿಸಿಕೊಳ್ಳುತ್ತಾನೆ.
ಕೆಲ ದಿನಗಳ ನಂತರ ವಿವಾಹ ಪ್ರಾಯರಾದ ಏಳು ಜನ ಗಂಡು ಮಕ್ಕಳ ತಂದೆಯೊಬ್ಬ ಇವರ ಮನೆಗೆ ಬಂದು ಈ ಏಳು ಜನ ಸಹೋದರಿಯರೊಂದಿಗೆ ವಿವಾಹಕ್ಕೆ ಸಮ್ಮತಿ ಪಡೆಯುತ್ತಾನೆ.
ವಿವಾಹದ ಪೂರ್ವೋತ್ತರ ಕಾರ್ಯಗಳೆಲ್ಲ ಸುಸೂತ್ರವಾಗಿ ನಡೆದು ನಿಶ್ಚಿತಾರ್ಥಕ್ಕೆ ಅವರು ಸಿದ್ಧರಾಗುತ್ತಾರೆ. ಆದಿಶೇಷ ಅದುವರೆಗೂ ಇವರಾರ ಕಣ್ಣಿಗೂ ಬೀಳದೇ ಅಜ್ಞಾತವಾಗಿಯೇ ಉಳಿಯುತ್ತಾನೆ. ಪಂಚಭಕ್ಷ ಪರಮಾನ್ನಗಳು ಸಿದ್ಧವಾಗುತ್ತವೆ. ಪಾಯಸವನ್ನು ಸಿದ್ಧಗೊಳಿಸಿದ ಭಟ್ಟನೊಬ್ಬ ಪಾಯಸದ ಪಾತ್ರೆಯನ್ನು ಇಡಲು ಸಿಂಬೆಗಾಗಿ ಹುಡುಕಾಡಿ ವಾಡೆಯ ಕೆಳಗೆ ಪವಡಿಸಿದ್ದ ಆದಿಶೇಷನನ್ನೇ ಸಿಂಬೆಯೆಂದು ಭ್ರಮಿಸಿ ಅವನ ಮೇಲೆ ಕುದಿಯುತ್ತಿದ್ದ ಪಾಯಸದ ಪಾತ್ರೆಯನ್ನಿಡುತ್ತಾನೆ. ಆದರೂ ಆದಿಶೇಷ ತನ್ನ ನೋವನ್ನು ತೋರ್ಪಡಿಸದೇ ಮೌನವಾಗಿರುತ್ತಾನೆ. ವರನ ಕಡೆಯವರು ನಿರ್ಗಮಿಸಿದ ಮೇಲೆ ಆದಿಶೇಷ ನೋವು ತಾಳಲಾರದೆ ಜೋರಾಗಿ ಆಕ್ರಂದಿಸುತ್ತಾನೆ. ತಾಯಂದಿರಿಬ್ಬರೂ ಸುಟ್ಟು ಕರಕಲಾದ ತಮ್ಮ ಮಗನ ದೇಹವನ್ನು ಕಂಡು ವಿಲಾಪಿಸುತ್ತಾ ಎದೆಯೊಡೆದು ಸಾವನ್ನಪ್ಪುತ್ತಾರೆ. ಇದನ್ನು ಕಂಡು ಏಳು ಜನ ಸಹೋದರಿಯರು ಇದಕ್ಕೆಲ್ಲ ತಾವೇ ಕಾರಣರಾದೆವಲ್ಲಾ ಎಂದು ರೋದಿಸುತ್ತಾ ಅವರೂ ಮರಣ ಹೊಂದುತ್ತಾರೆ.
ಈ ಮರಣ ಕಾಂಡವನ್ನು ಕಂಡ ತಂದೆ ಆದಿಕೇಶವ ಕಣ್ಣೀರು ಸುರಿಸುತ್ತಾ ತನ್ನವರನ್ನೆಲ್ಲಾ ಕಳೆದುಕೊಂಡು ತಾನು ಬದುಕಿದ್ದೇನು ಫಲ ಎಂದು ಆದಿಶೇಷನನ್ನು ಪ್ರಶ್ನಿಸುತ್ತಾನೆ. ಆಗ ಆದಿಶೇಷ ಎಲ್ಲವೂ ದೈವ ನಿರ್ಣಯದಂತೆ ಆಗಿದ್ದೆಂದು ತಿಳಿಸಿ ತನ್ನ ಜನ್ಮ ರಹಸ್ಯವನ್ನು ವಿವರಿಸುತ್ತಾನೆ.
ಹಿಂದೆ ಸಮುದ್ರ ಮಂಥನ ಕಾಲದಲ್ಲಿ ಶ್ರೀಮನ್ ನಾರಾಯಣನು ಅಮೃತ ಉದ್ಭವವಾಗುವ ಕಾಲಕ್ಕೆ ಗರಳವನ್ನು ರಾಕ್ಷಸರೆಡೆಗೆ ಬಿಡಬೇಕೆಂದು ಆದೇಶಿಸುತ್ತಾನೆ. ಅಮೃತ ಉದ್ಭವವಾಗುವ ಸಮಯಕ್ಕೆ ಸರಿಯಾಗಿ ತನ್ನ ಸಾವಿರ ಹೆಡೆಗಳಿಂದ ವಿಷವನ್ನು ಕಕ್ಕುತ್ತಾನೆ. ಆದರೆ ಸಮುದ್ರ ಮಂಥನಕ್ಕೆ ಹಗ್ಗವಾಗಿ ಮಂದಾರ ಪರ್ವತವನ್ನು ಸುತ್ತುವರೆದ ಆದಿಶೇಷ ಮಂಥನದ ತೀವ್ರ ಆಯಾಸದಿಂದ ಮೈಮರೆತು ಬಾಲದ ಕಡೆಯಿಂದ ದೇವತೆಗಳ ಮೇಲೆ ಎರಡು ಹನಿ ವಿಷವನ್ನು ಕಕ್ಕಿ ಬಿಡುತ್ತಾನೆ. ತನ್ನ ಆದೇಶವನ್ನು ಉಲ್ಲಂಘಿಸಿದನೆಂದು ಕ್ಷುದ್ರನಾದ ಮಹಾವಿಷ್ಣು ಭೂಲೋಕದಲ್ಲಿ ಜನ್ಮ ತಾಳುವಂತೆ ಶಪಿಸುತ್ತಾನೆ. ಆದಿಶೇಷ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಯಾವುದೆಂದು ಪರಿಪರಿಯಾಗಿ ಪ್ರಾರ್ಥಿಸಿದಾಗ ಶಾಂತನಾದ ಲಕ್ಷ್ಮೀಪತಿಯು 'ಭೂಲೋಕದಲ್ಲಿ ಸದ್ಗೃಹಸ್ತ ಶ್ರೀವೈಷ್ಣವನ ಮನೆಯಲ್ಲಿ ಜನ್ಮ ತಳೆದು ಅಗ್ನಿಗೆ ಆಹುತಿಯಾಗಿ ಪರಿಶುದ್ಧನಾದ ನಂತರ ಶಾಪ ವಿಮೋಚನೆಯಾಗುತ್ತದೆ. ನಿನ್ನ ಮಾನವ ರೂಪಿ ದೇಹದ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಶ್ರೀದೇವಿ ಸಮೇತನಾಗಿ ನಾನು ಬಂದು ನೆಲೆಸುತ್ತೇನೆ' ಎಂದು ತಿಳಿಸುತ್ತಾನೆ.
ಈ ಕಥೆಯನ್ನು ಕೇಳಿದ ಆದಿಕೇಶವ ಈಗ ತಾನೇನು ಮಾಡುವುದೆಂದು ಪ್ರಶ್ನಿಸುತ್ತಾನೆ. 'ಮೂರು ಎತ್ತಿನ ಬಂಡಿಗಳನ್ನು ಕಟ್ಟಿಸಿ ಒಂದರಲ್ಲಿ ತಾಯಂದಿರ ದೇಹಗಳನ್ನು, ಮತ್ತೊಂದರಲ್ಲಿ ಸಹೋದರಿಯರ ದೇಹಗಳನ್ನು, ಇನ್ನೊಂದರಲ್ಲಿ ತನ್ನ ದೇಹವನ್ನು ಇಟ್ಟು ಪಶ್ಚಿಮಾಭಿಮುಖವಾಗಿ ಹೊರಟು, ಎಲ್ಲಿ ತನ್ನ ದೇಹ ತಣ್ಣಗಾಗುವುದೋ ಅಲ್ಲಿ ಸಂಸ್ಕಾರ ನಡೆಸಬೇಕೆಂತಲೂ, ತನ್ನ ತಲೆಯ ಬಳಿ ತನ್ನ ತಾಯಂದಿರ, ಕಾಲುಗಳ ಬಳಿ ತನ್ನ 7 ಜನ ಸಹೋದರಿಯರ ಸಂಸ್ಕಾರ ನಡೆಸಬೇಕು' ಎಂದು ತಿಳಿಸುತ್ತಾನೆ. ಮುಂದುವರಿದು, 'ಅವರ ಸಂಸ್ಕಾರ ನಡೆಸಿದ ಜಾಗದ ಮೇಲೆ ನಾಲ್ಕು ಸ್ತಂಭಗಳನ್ನು ಸ್ಥಾಪಿಸಿ ಅದರ ಮೇಲೆ ಪುಟ್ಟದೊಂದು ದೇವಾಲಯ ನಿರ್ಮಿಸಿ ಆ ದೇವಾಲಯದ ಪೂಜಾ ಕೈಂಕರ್ಯಗಳನ್ನು ತಪ್ಪದೇ ನೆರವೇರಿಸಿ ಮೋಕ್ಷ ಪಡೆಯಬೇಕೆಂದು ತಿಳಿಸುತ್ತಾನೆ' ಎಂಬುದು ಇಲ್ಲಿನ ಪೌರಾಣಿಕ ಪ್ರತೀತಿ. ಇದಕ್ಕೆ ಪೂರಕವಾಗಿ, ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಅನಂತ ಪದ್ಮನಾಭ ಸ್ವಾಮಿ ದೇವರ ತಲೆಯ ಬಳಿ ಇಬ್ಬರು ಮಾತೃ ಮೂರ್ತಿಗಳ ಹಾಗೂ ಕಾಲುಗಳ ಬಳಿ ಏಳು ಜನ ಸಹೋದರಿಯರ ವಿಗ್ರಹಗಳನ್ನು ಕಾಣಬಹುದಾಗಿದೆ.
ಒಮ್ಮೆ ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್ ಈ ಮಾರ್ಗವಾಗಿ ಬಂದಾಗ, ಈ ದೇವಾಲಯ ಹಾಗೂ ಪ್ರಕೃತಿಯ ಸಿರಿಯನ್ನು ಕಂಡು ಇಲ್ಲಿ ತಡೆಗೊಡೆಯೊಂದನ್ನು ನಿರ್ಮಿಸಿ ಕೆರೆಯನ್ನು ಕಟ್ಟುವಂತೆ ಆಜ್ಞಾಪಿಸಿ ದೇವರ ಸೇವೆಗೆ ನೀರು ದೊರೆಯುವಂತೆ ಅನುಕೂಲ ಮಾಡಿಕೊಟ್ಟಿರುತ್ತಾರೆ. ಕ್ರಿ.ಶ. 1898ರಲ್ಲಿ ನಿರ್ಮಾಣಗೊಂಡ ಈ ಕೆರೆಯ ವೈಶಿಷ್ಟ್ಯವೇನೆಂದರೆ ಸುಮಾರು 200 ಎಕರೆಯಷ್ಟು ಪ್ರದೇಶದಲ್ಲಿ ಸಾಧಾರಣ ಮಳೆಯಾದರೂ ಸಹ ಒಂದು ಅಡಿಯಷ್ಟು ನೀರು ನಿಲ್ಲುತ್ತದೆ.
ಇಲ್ಲಿರುವ ಪುರಾತನ ಶಾಸನಗಳನ್ನು ನೋಡಿದಾಗ ಈ ಪ್ರದೇಶದಲ್ಲಿ ಬಾಣರು, ಗಂಗರು, ಚೋಳರು, ರಾಷ್ಟ್ರಕೂಟರ ಕಾಲದ ಕಲೆ, ಸಂಸ್ಕೃತಿಯ ಕುರುಹುಗಳು ಕಂಡು ಬರುತ್ತವೆ. ಇಲ್ಲಿನ ಕಟ್ಟೆಯ ಮೇಲೆ ಸೀತಾರಾಮ ಲಕ್ಷ್ಮಣರ ದೇವಾಲಯ ಹಾಗೂ ಧ್ವಜ ಸ್ತಂಭದಲ್ಲಿ ಹನುಮಂತನ ಕೆತ್ತನೆಗಳಿವೆ. ಇಲ್ಲಿ ಗರುಡನ ಚಿತ್ರವನ್ನು ಕಾಣಬಹುದಾಗಿದೆ. ಇಲ್ಲಿರುವ ನೀರಿನಲ್ಲಿ ಔಷಧೀಯ ಗುಣಗಳು ಪರಿಶೋಧಿಸಲ್ಪಟ್ಟಿದೆ.
ನಿರ್ಜನ ಪ್ರದೇಶವಾದ ಈ ಪವಿತ್ರ ಸ್ಥಳದಲ್ಲಿ ಪಕ್ಷಿಗಳ ಇಂಚರ, ನೀರಿನ ಕಲರವ, ದುಂಬಿಗಳ ಝೇಂಕಾರ ಯಾತ್ರಿಕರನ್ನು ಸ್ವಾಗತಿಸುತ್ತದೆ.
ಆದರೆ ಇಂತಹ ಮಹಿಮಾನ್ವಿತ ದೇವಾಲಯಕ್ಕೆ ಬರುವ ಯಾತ್ರಿಕರ ಪಾಲಿಗೆ ದಪ್ಪ ಜೆಲ್ಲಿಯಿಂದ ತುಂಬಿರುವ ರಸ್ತೆಯ ಆಳುದ್ದದ ಗುಂಡಿಗಳು ನರಕ ಸದೃಶವಾಗಿವೆ. ಇದೇನೇ ಇದ್ದರೂ, ಮೊದಲಿದ್ದ ಅರಣ್ಯ ಪ್ರದೇಶ ಈಗ ಇಲ್ಲಿ ಇಲ್ಲ ಎನ್ನುವುದೂ ಸತ್ಯ. ಕೆಲವು ದುಷ್ಕರ್ಮಿಗಳು ವನಸಿರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹಿಡಿತದಿಂದ ಈ ಪ್ರದೇಶವನ್ನು ಸಂರಕ್ಷಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಕೆರೆಯ ನೀರಲ್ಲಿ ತೇಲಿ ಬರುವಂತೆ ಕಾಣುವ ದೇವಸ್ಥಾನದ ಕಲಾ ವೈಭವವನ್ನು ಮರೆ ಮಾಡುತ್ತಿರುವ ಹೂಳನ್ನು ತೆಗೆದು ಈ ಸ್ಥಳದ ನೈಜ ಸೌಂದರ್ಯವನ್ನು ಕಾಪಾಡಬೇಕಿದೆ. ಅಲ್ಲದೆ ಇಲ್ಲಿಗೆ ಬರುವ ಭಕ್ತಾಧಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕಿದೆ.
(ಮೂಲ: ಪಂಚಗಿಣಿ ದರ್ಪಣ)

  ಬಿ.ಎಲ್. ರಾಜಗೋಪಾಲಾಚಾರ್
ಸಂಪಾದಕರು
ಮುಜರಾಯಿ ಪತ್ರಿಕೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.