ಇಲ್ಲಿದೆ ನಮ್ಮ ಮನೆ ಅಲ್ಲಿರುವುದು ಸುಮ್ಮನೇ...

Updated on: 

ಮಹಾಲಕ್ಷ್ಮಿ ವಿದೇಶಕ್ಕೆ, ಅದರಲ್ಲೂ ಅಮೆರಿಕಕ್ಕೆ ಹೋಗಬಹುದು ಎಂದು ಉಳಿದವರು ಹಾಗಿರಲಿ; ಸ್ವತಃ ಮಹಾಲಕ್ಷ್ಮಿ ಕೂಡ ಭಾವಿಸಿರಲಿಲ್ಲ. ಹೈಸ್ಕೂಲಿನಿಂದ ಪದವಿ ಮುಗಿವವರೆಗೂ ಸೆಕೆಂಡ್ ಕ್ಲಾಸ್ ಸ್ಟೂಡೆಂಟ್ ಅನ್ನಿಸಿಕೊಂಡೇ ಬಂದಿದ್ದ ಆಕೆ ಗಿಣಿಮೂಗಿನ ಸುಂದರಿ. ಯಾವತ್ತಾದರೂ ಆಕೆ ಕಾಲೇಜಿಗೆ ಬರಲಿಲ್ಲವೆಂದರೆ, ಅವತ್ತು ನಾವು ಗೆಳತಿಯರೆಲ್ಲ ಅವಳ ಸೌಂದರ್ಯದ ವಿಷಯವನ್ನು, ಅದರಲ್ಲೂ ಅವಳ ಮೂಗಿನ ಚೆಲುವನ್ನು ಐದು ನಿಮಿಷದ ಮಟ್ಟಿಗಾದರೂ ಚರ್ಚಿಸುತ್ತಿದ್ದೆವು. ಲೆಕ್ಚರ್‌ಗಳಂತೂ ಆಗೊಮ್ಮೆ, ಈಗೊಮ್ಮೆ ಆಕೆಯನ್ನು ವಾರೆಗಣ್ಣಿನಿಂದ ನೋಡಿಕೊಂಡೇ ಪಾಠ ಹೇಳುತ್ತಿದ್ದರು. ಏನೇ ಪ್ರಶ್ನೆ ಕೇಳಬೇಕಿದ್ದರೂ ಮಹಾಲಕ್ಷ್ಮಿಯ ಕಡೆಗೇ ತಿರುಗಿ ನೋಡುತ್ತಿದ್ದರು. ಆಗ ನಾವೆಲ್ಲ-'ಲಕ್ಷ್ಮೀ, ಈ ಲೆಕ್ಚರರ್‌ಗಳು ನಿನಗೆ ಲೈನ್ ಹೊಡೀತಾ ಇದಾರೆ ಕಣೇ. ಇವತ್ತಲ್ಲ ನಾಳೆ, ಯಾರಾದ್ರೂ ರಾಜಕುಮಾರ ಬಂದು ನಿನ್ನನ್ನು ಹಾರಿಸಿಕೊಂಡು ಹೋಗ್ತಾನೆ' ಎಂದು ರೇಗಿಸುತ್ತಿದ್ದೆವು.
'ಛೆ, ಛೆ, ನೀವು ಸುಮ್ನೆ ಏನೇನೋ ಕಲ್ಪಿಸಿಕೋ ಬ್ಯಾಡ್ರೇ. ಅಂಥ ಯಾವ ಸೀನ್‌ಗಳೂ ಬರೋದಿಲ್ಲ. ನಿಮಗೇ ಗೊತ್ತಿರುವ ಹಾಗೆ ನಮ್ದು ಮಿಡಲ್ ಕ್ಲಾಸ್ ಫ್ಯಾಮಿಲಿ. ನನ್ನ ಚೆಂದ ಕಂಡು ಶ್ರೀಮಂತ ಕುಟುಂಬದ ಗಂಡುಗಳು ಮದುವೆಯ ಪ್ರಸ್ತಾಪ ಮಾಡಬಹುದೇನೋ. ಆದರೆ ಅವರು ಕೇಳಿದಷ್ಟು ವರದಕ್ಷಿಣೆ ಕೊಟ್ಟು, ಅವರು ಬಯಸಿದ ಛತ್ರದಲ್ಲಿಯೇ ಮದುವೆ ಮಾಡುವಂಥ ಆರ್ಥಿಕ ಚೈತನ್ಯ ನನ್ನ ಹೆತ್ತವರಿಗಂತೂ ಇಲ್ಲ. ಹಾಗಾಗಿ , ನಮ್ಮ ಸಂಬಂಧಿಕರಲ್ಲೇ ಯಾರನ್ನಾದ್ರೂ ಮದುವೆಯಾಗ್ತೇನೆ ಅನ್ನೋದಷ್ಟೇ ಗ್ಯಾರಂಟಿ' ಎಂದು ಮಹಾಲಕ್ಷ್ಮೀಯೇ ಸ್ಪಷ್ಟನೆ ನೀಡಿದ್ದಳು. ಆದರೆ, ಅವಳ ಅಂದಾಜಿಗೆ ವಿರುದ್ಧವಾಗಿ ಎಲ್ಲವೂ ನಡೆದು ಹೋಯಿತು. ಒಂದು ಮದುವೆಯಲ್ಲಿ ಇವಳನ್ನು ಕಂಡು ಪರವಶನಾದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ, ಮೊದಲು ಇವಳ ಪರಿಚಯ ಮಾಡಿಕೊಂಡ. ಕೆಲವು ದಿನಗಳ ನಂತರ ತನ್ನ ಪೋಷಕರೊಂದಿಗೆ ಮಹಾಲಕ್ಷ್ಮಿಯ ಮನೆಗೇ ಹೋಗಿ-ತೀರಾ ಸಿಂಪಲ್ಲಾಗಿ ಮದುವೆ ಕೊಡಿ. ಅಷ್ಟರ ಹೊರತಾಗಿ ನಂಗೆ ಬೇರೇನೂ ಬೇಡ' ಅಂದು ಬಿಟ್ಟಿದ್ದ.
ನಂತರದ ಎರಡೇ ತಿಂಗಳಲ್ಲಿ ಮದುವೆ ನಡೆದು ಹೋಗಿತ್ತು. ಮುಂದಿನ ಆರೇ ತಿಂಗಳಲ್ಲಿ ಮಹಾಲಕ್ಷ್ಮಿ ಅಮೆರಿಕದ ವಿಮಾನ ಹತ್ತಿದ್ದಳು. ಆನಂತರದಲ್ಲಿ ಆಕೆ ಹಾಲಿವುಡ್ ಸ್ಟುಡಿಯೋದ ಮುಂದೆ ನಿಂತಿದ್ದು, ಹವಾಯ್ ದ್ವೀಪದಲ್ಲಿ ಹನಿಮೂನ್‌ನ ಬಿಸಿ ಅನುಭವಿಸಿದ್ದು, ಅಮೆರಿಕದಿಂದ ಒಬ್ಬಳೇ ಭಾರತಕ್ಕೆ ಬಂದು ಹೋದದ್ದು, ಕ್ಯಾಲಿಫೋರ್ನಿಯಾದ ರಸ್ತೆಯಲ್ಲಿ ಹಡಗಿನಂಥ ಕಾರು ಓಡಿಸಿದ್ದು.. ಇಂಥ ವಿವರಗಳೆಲ್ಲ ಆಕೆಯ ತಂದೆ-ತಾಯಿಯ ಮೂಲಕ, ಆಗಿಂದ್ದಾಗ್ಗೆ ಆಕೆ ಕಳಿಸುತ್ತಿದ್ದ ಮೇಲ್‌ನ ಮೂಲಕ, ಫೇಸ್‌ಬುಕ್‌ನ ಫೋಟೋಗಳ ಮೂಲಕ ತಿಳಿಯುತ್ತಿತ್ತು. ವರ್ಷದ ಹಿಂದಷ್ಟೇ ಆಕೆಗೆ ಅಮೆರಿಕದಲ್ಲಿಯೇ ಹೆರಿಗೆಯಾಗಿ, ಆ ಮಗುವಿಗೆ ಅಮೆರಿಕನ್ ಸಿಟಿಜನ್‌ಶಿಪ್ ಸಿಕ್ಕಿತೆಂಬ ಮತ್ತೊಂದು ಸುದ್ದಿಯೂ ತೇಲಿ ಬಂದಿತ್ತು.
ಈ ಮಧ್ಯೆ, ಎಲ್ಲರೂ ಬೆರಗಾಗುವಂತೆ, ಅಮೆರಿಕದಲ್ಲಿದ್ದುಕೊಂಡೇ ಬಿಜಿನೆಸ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಕೋರ್ಸ್ ಮುಗಿಸಿ, ತಾನೂ ಕೆಲಸಕ್ಕೆ ಸೇರಿಕೊಂಡಿದ್ದಳು ಮಹಾಲಕ್ಷ್ಮಿ. ಗಂಡನಿಗೇ ಲಕ್ಷಗಟ್ಲೆ ಸಂಬಳ ಇದೆ. ಹಾಗಿದ್ರೂ ಇವಳು ಕೆಲಸಕ್ಕೆ ಸೇರಿದ್ದಾಳೆ! ಓಹ್, ಇವಳಿಗೂ ದುಡ್ಡು ಮಾಡುವ ಆಸೆ ಶುರುವಾಗಿ ಬಿಟ್ಟಿದೆ ಎಂದು ನಾವು ಗೆಳತಿಯರೆಲ್ಲ ಮಾತಾಡಿಕೊಂಡು ಸುಮ್ಮನಾಗಿದ್ದೆವು. ಮಹಾಲಕ್ಷ್ಮಿ, ಪ್ರತಿ ಹಬ್ಬದ ಸಂದರ್ಭಗಳಲ್ಲೂ ಒಂದೊಂದು ಗ್ರೀಟಿಂಗ್ಸ್ ಕಳಿಸುವ ಮೂಲಕ ನಮ್ಮ ಮನಸ್ಸಿನ ಬಾಗಿಲು ತಟ್ಟುತ್ತಿದ್ದಳು. ನಮ್ಮ ಹೊಟ್ಟೆ ಉರಿಯ ಮಾತುಗಳು ಆಕೆಗೆ ಗೊತ್ತಿರಲಿಲ್ಲ.  
'ಇಂಥಾ ಹಿನ್ನೆಲೆಯ ಮಹಾಲಕ್ಷ್ಮಿ, ಮೊನ್ನೆ ಗಣೇಶ ಹಬ್ಬದ ದಿನ ಆನ್‌ಲೈನ್‌ನಲ್ಲಿ ಮಾತಿಗೆ ಸಿಕ್ಕಿದಳು: 'ಅಮೆರಿಕದ ಮಹಾರಾಣಿಯವರೆ, ಹೇಗಿದ್ದೀರಿ? ಈ ಬೆಂಗಳೂರಿಗೆ ನಿಮ್ಮ ಭೇಟಿ ಯಾವಾಗ?' ಎಂದು ಕೇಳಿದ್ದಕ್ಕೆ, ಮುಂದಿನ ಆರು ತಿಂಗಳೊಳಗೆ ಅಮೆರಿಕಕ್ಕೆ ಗುಡ್ ಬೈ ಹೇಳಿ, ಶಾಶ್ವತವಾಗಿ ಬೆಂಗಳೂರಿಗೆ ಬಂದು ಬಿಡ್ತೇನೆ ಕಣೇ ಅಂದಳು. ಅವಳ ಮಾತಿನ ಹಿಂದೆ ಏನೋ ಸಂಕಟ ಇರುವಂತೆ ಭಾಸವಾಯಿತು. ನೇರವಾಗಿ ಕೇಳಿ ಬಿಟ್ಟೆ: 'ಲಕ್ಷ್ಮೀ, ಇಂಥ ಅವಸರದ ನಿರ್ಧಾರಕ್ಕೆ ಯಾಕೆ ಬಂದೆ? ಇಲ್ಲಿ ಭಾರತದಲ್ಲಿ ಇರುವವರೆಲ್ಲ, ಅಮೆರಿಕಕ್ಕೆ ಹೋದ್ರೆ ನಾವು ಹುಟ್ಟಿದ್ದಕ್ಕೂ ಸಾರ್ಥಕ ಎಂದು  ಮಾತಾಡ್ತಾ ಇರ್ತಾರೆ. ಹೀಗಿರುವಾಗ ನೀನು ವಾಪಸ್ ಬರುವುದಾಗಿ ಹೇಳ್ತಾ ಇದೀಯಲ್ಲ...'
ಲಕ್ಷ್ಮಿ ತಕ್ಷಣವೇ ಹೇಳಿದಳು:'ನಿನ್ನ ಮಾತು ನಿಜ ಕಣೇ. ಆದರೆ, ನಿಮಗೆ ಯಾರಿಗೂ ಕಾಣದ ಒಂದು ಸತ್ಯ ನನಗೆ ಕಾಣಿಸ್ತು. ಕಳೆದ ಎಂಟು ವರ್ಷಗಳಲ್ಲಿ ನಾವಿಬ್ರೂ 80 ಲಕ್ಷದಷ್ಟು ದುಡ್ಡು ಸಂಪಾದಿಸಿದ್ವಿ. ಬದುಕಲ್ಲಿ ಖುಷಿಯಿಂದ ಇರಲಿಕ್ಕೆ ಹಣವೇ ಮುಖ್ಯ ಎಂಬುದಷ್ಟೇ ನಮ್ಮ ನಂಬಿಕೆಯಾಗಿತ್ತು. ಹಾಗಾಗಿ ನಾವು ಉಳಿದವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ದುಡಿಯಲು ನಿಂತ್ವಿ. ಈ ಸಂದರ್ಭದಲ್ಲೇ, ಬೆಂಗಳೂರಲ್ಲಿ ನಡೆದ ಒಂದು ಆಕ್ಸಿಡೆಂಟ್‌ನಲ್ಲಿ ನನ್ನ ತಮ್ಮ ತೀರಿಕೊಂಡ. ಇದಾಗಿ ಎಂಟೇ ತಿಂಗಳಲ್ಲಿ ನನ್ನ ಅತ್ತೆ-ಮಾವ ಕೂಡ ತೀರಿಹೋದ. ಈ ಎರಡೂ ಸಂದರ್ಭದಲ್ಲಿ ನಾವು ಅಂತ್ಯಸಂಸ್ಕಾರಕ್ಕೆ ಬರೋಕೆ ಆಗಲಿಲ್ಲ. ನಿಂಗೆ ಗೊತ್ತಾ? ನನ್ನ ತಮ್ಮ ಮಾತ್ರವಲ್ಲ, ಅತ್ತೆ-ಮಾವ ಕೂಡ ಸಾಯುವ ಮುಂಚೆ ನಮ್ಮನ್ನು ನೋಡಬೇಕು ಅಂತ ಕನವರಿಸಿದ್ರಂತೆ! ಈ ಮಾತನ್ನು ಬಂಧುಗಳಿಂದ ಕೇಳಿದಾಗಿನಿಂದ ಪಾಪಪ್ರಜ್ಞೆ ಕಾಡ್ತಾ ಇದೆ. ನಾವು ಭಾರತದಲ್ಲೇ ಉಳಿದಿದ್ರೆ, ಕನಿಷ್ಠ ಅವರ ಸಾವಿನ ಸಮಯದಲ್ಲಾದ್ರೂ ನಾವು ಜತೆಗಿರಬಹುದಿತ್ತು. ಈಗ ನಮ್ಮಲ್ಲಿ ಲಕ್ಷಾಂತರ ಹಣವಿರಬಹುದು. ಆದರೆ ಅದರಿಂದ ಕಣ್ಮರೆಯಾದವರನ್ನು ಮರಳಿ ತರಲು ಸಾಧ್ಯವಿಲ್ಲ ಅಲ್ವಾ? ಅದು ನೆನಪಾದಾಗೆಲ್ಲ ಬಹಳ ದುಃಖ ಆಗುತ್ತೆ. ಮುಂದೆ ಇಂಥ ಯಾವುದೇ ಸಂದರ್ಭವೂ ನಮ್ಮ ಬದುಕಲ್ಲಿ ಬರೋದೇ ಬೇಡ ಅನ್ನಿಸ್ತಿದೆ. ಈ ಕಾರಣದಿಂದಲೇ ಇಂಡಿಯಾಕ್ಕೆ ವಾಪಸ್ ಹೋಗಿ ಬಿಡೋಣ ಎಂದು ನಿರ್ಧರಿಸಿದ್ದೇವೆ. ಆಗಲೇ ಬೆಂಗಳೂರಲ್ಲಿ ಮನೆ ತಗೊಂಡು ಆಗಿದೆ ಕಣೇ...' ಎಂದಳು.
ಅವಳು ಹೇಳಿದ್ದನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾಗಲೇ ಹಳೆಯ ಹಾಡಡನ್ನೇ ಸ್ವಲ್ಪ ಬದಲಿಸಿ ಹೇಳಬೇಕು ಅನ್ನಿಸಿತು: 'ಇಲ್ಲಿದೆ ನಮ್ಮ ಮನೆ, ಅಲ್ಲಿರುವುದು ಸುಮ್ಮನೇ...'


- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com