ನೆಮ್ಮದಿಯ ನಾಳೆಗಳಿಗಾಗಿ ಕಾಂಗ್ರೆಸ್ ಮಾಡಿದ್ದೇನು?

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗುವ ಮೊದಲು ರಘುರಾಮ್ ರಾಜನ್...
ನೆಮ್ಮದಿಯ ನಾಳೆಗಳಿಗಾಗಿ ಕಾಂಗ್ರೆಸ್ ಮಾಡಿದ್ದೇನು?
Updated on: 

ಬದಲಾವಣೆಯ ಏಜೆಂಟರಾಗಬಹುದು ಎಂದೆಣಿಸಿದ್ದವರನ್ನೇ (ಮನಮೋಹನ್ ಮತ್ತು ಕಂಪನಿ) ಬದಲಾಯಿಸಬೇಕು ಎನ್ನುವ ಪರಿಸ್ಥಿತಿ ಇಂದು ಇದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗುವ ಮೊದಲು ರಘುರಾಮ್ ರಾಜನ್ ಪ್ರಾಜೆಕ್ಟ್ ಸಿಂಡಿಕೇಟ್ ಎಂಬ ಜಾಲತಾಣದಲ್ಲಿ ಒಂದು ಲೇಖನ ಬರೆದಿದ್ದರು. ಅದರಲ್ಲಿ ಭಾರತದ ಸದ್ಯದ ಅರ್ಥವ್ಯವಸ್ಥೆಯ ಸ್ಥಿತಿಗತಿಗಳನ್ನು ಸಾದ್ಯಂತವಾಗಿ ವಿಶ್ಲೇಷಿಸಿದ್ದರು. ಅದರಲ್ಲಿ ಬಂಡವಾಳ ಹೂಡಿಕೆ ಕುರಿತಾದ ಸಂಪುಟ ಸಮಿತಿಯ ರಚನೆ ಮತ್ತು ಅದು ಅತ್ಯಲ್ಪ ಅವಧಿಯಲ್ಲಿ ಸಾವಿರಾರು ಕೋಟಿ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ಕೊಟ್ಟಿದ್ದನ್ನು ಶ್ಲಾಘಿಸಿದ್ದರು. ಇದು ಅರ್ಥ ವ್ಯವಸ್ಥೆಯ ಪುನಶ್ಚೇತನದ ಸಂಕೇತ ಎಂದೂ ಹೇಳಿದ್ದರು. ಆದರೆ ಅವರ ಒಟ್ಟಾರೆ ಲೇಖನದ ಧ್ವನಿ ಬೇರೆಯೇ ಆಗಿತ್ತು. ಹಾಲು ಉಕ್ಕಿ ಚೆಲ್ಲುವವರೆಗೆ ಸುಮ್ಮನಿದ್ದು ನಂತರ ಒಲೆ ಆರಿಸುವ ಸರ್ಕಾರದ ಮನೋಧರ್ಮದ ಬಗೆಗೆ ಅವರಲ್ಲಿ ಬೇಸರವಿತ್ತು. ಈ ಕಳೆದ ಒಂಬತ್ತು ವರ್ಷಗಳಲ್ಲಿ ಇಂತಹ ಕ್ರಮಗಳನ್ನು ಜಾರಿಗೆ ತರಲು ಮೀನಮೇಷ ಎಣಿಸಿದ ಸರ್ಕಾರದ ನಡೆಯ ಬಗ್ಗೆ ಅಲ್ಲಿ ಕಳವಳ ಇತ್ತು. ಹೊತ್ತು ಮುಳುಗಿದ ಮೇಲೆ ಸೂರ್ಯನ ಶಾಖಕ್ಕಾಗಿ ಪರಿತಪಿಸುವ ಬದಲು, ಸೂರ್ಯ ಪ್ರಖರವಾಗಿ ಹೊಳೆದಾಗ ಆ ಶಾಖವನ್ನು ಕಾಪಿಟ್ಟು ಇರುಳಲ್ಲಿ ಅದರ ಬೆಳಕಿನ ಜಾಡು ಹಿಡಿಯಲಾರದೆ ಹೋದ ಸರ್ಕಾರದ ಬಗ್ಗೆ ಒಂದು ರೀತಿಯ ಅಸಹನೆ ಆ ಬರಹದಲ್ಲಿತ್ತು. ಇದು ನೂರಕ್ಕೆ ನೂರರಷ್ಟು ಸತ್ಯ.
2004-2013ರ ಅವಧಿಯಲ್ಲಿ ಕೇಂದ್ರದ ಯುಪಿಎ ಸರ್ಕಾರ ನಡೆದುಕೊಂಡ ರೀತಿಯೇ ಅಂತಹುದ್ದಾಗಿತ್ತು. 2004ರ ಚುನಾವಣೆಗೆ ಮುನ್ನ ಬಿಜೆಪಿ ಸಾರಿದಂತೆ ಭಾರತ ಬೆಳಗದಿದ್ದರೂ ಖಂಡಿತ ಕತ್ತಲಲ್ಲಂತೂ ಇರಲಿಲ್ಲ. ಬದಲಿಗೆ ಒಂದು ಹದದಲ್ಲಿತ್ತು. ಅದನ್ನು ಉಳಿಸಿಕೊಂಡು, ಅದಕ್ಕೆ ಅಗತ್ಯ ಉತ್ತೇಜನ ನೀಡಬೇಕಾದ ಎರಡು ಸರಳ ಸತ್ಯಗಳು ಯುಪಿಎ ಸರ್ಕಾರವನ್ನು ಎದುರುಗೊಂಡವು. ಆದರೆ ವಾಸ್ತವಕ್ಕೆ ಕುರುಡಾಗಿ ಮತ ಬ್ಯಾಂಕಿಗಷ್ಟೇ ಜಾಗೃತವಾಗಿದ್ದ ಸರ್ಕಾರ ಕೊಡುಗೈ ದಾನಿಯಂತೆ ವರ್ತಿಸಿದ ಪರಿಣಾಮ ಇಂದು ಅರ್ಥ ವ್ಯವಸ್ಥೆ ಹಳಿತಪ್ಪಿದೆ. ನೀರಿನಲ್ಲಿ ಮುಳುಗಿದ ಮೇಲೆ ದಡ ಸೇರಲು ಹಲಗೆಗಾಗಿ ಹಪಾಹಪಿಸುವ ರೀತಿಯಲ್ಲಿ ಯುಪಿಎ ಸರ್ಕಾರ ಇಂದು ವರ್ತಿಸುತ್ತಿದೆ. ಬೇಸಾಯ ಮಾಡಲು ಸೋಮಾರಿತನ ಮಾಡಿ ಕಣಜದಲ್ಲಿದ್ದ ಅಕ್ಕಿ-ಕಾಳನ್ನು ಮುಕ್ಕಿ ಅದು ಖಾಲಿಯಾದಾಗ ಅರೆ ಹೊಟ್ಟೆಯಲ್ಲಿ ನೇಗಿಲು ಹೆಗಲಿಗೇರಿಸಿ ಉಳುಮೆಗೆ ಹೋಗುವವರ ರೀತಿಯಲ್ಲಿ ಈ ಸರ್ಕಾರ ವರ್ತಿಸಿದೆ. ಸಂಸತ್ತಿನ ಕಳೆದ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಕಾಡಿ, ಬೇಡಿ ಜಾರಿಗೆ ತಂದ ಭೂ ಸ್ವಾಧೀನ ಕಾಯಿದೆಯನ್ನು ಒಂಬತ್ತು ವರ್ಷಗಳ ಹಿಂದೆಯೇ ಜಾರಿಗೆ ತರದಂತೆ ಯಾರೂ ಈ ಸರ್ಕಾರವನ್ನು ತಡೆದಿರಲಿಲ್ಲ. ಈಗ ತಿಂಗಳೊಪ್ಪತ್ತಿನಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆಗೆ ಅನುಮತಿ ನೀಡಿರುವ ಬಂಡವಾಳ ಹೂಡಿಕೆಗಾಗಿನ ಸಂಪುಟ ಸಮಿತಿಯನ್ನು 2004ರಲ್ಲಿ ರಚಿಸಲು ಸರ್ಕಾರಕ್ಕೆ ಯಾರೂ ಅಡ್ಡಿಪಡಿಸಿರಲಿಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ಕಾನೂನಾತ್ಮಕ ಚೌಕಟ್ಟು ನಿಗದಿಪಡಿಸುವ ಕೆಲಸ ಮೊದಲೇ ಆಗಿದ್ದರೆ ಪೋಸ್ಕೊ ಸೇರಿದಂತೆ ಅನೇಕ ಕಂಪನಿಗಳು ಇಲ್ಲಿ ಬಂಡವಾಳ ಹೂಡಲು, ಕಾರ್ಯಾರಂಭಿಸಲು ಹಿಂದೇಟು ಹಾಕಿ ಕಾಲ್ಕೀಳುತ್ತಿರಲಿಲ್ಲ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಪ್ರಶಸ್ತವಾದ ವೇದಿಕೆ ಕಲ್ಪಿಸುವ ಕೆಲಸವನ್ನು ಯುಪಿಎ ಸರ್ಕಾರ ಎರಡನೇ ಬಾರಿಗೆ (2009) ಅಧಿಕಾರಕ್ಕೆ ಬಂದಾಗಲಾದರೂ ಶ್ರದ್ಧೆಯಿಂದ ಮಾಡಿದ್ದರೆ ಈ ವೇಳೆಗೆ ಅದು ಫಲ ನೀಡುತ್ತಿತ್ತು. ಸೇವೆ ಮತ್ತು ಸರಕು ಸಾಗಣೆ ತೆರಿಗೆ ವ್ಯವಸ್ಥೆ ಘೋಷಣೆಯಾದಂತೆ ಈ ವೇಳೆಗಾಗಲೇ ಜಾರಿಗೆ ಬಂದಿದ್ದರೆ ಸರ್ಕಾರದ ಖಜಾನೆ ಈ ಮಟ್ಟಕ್ಕೆ ಖಾಲಿಯಾಗುತ್ತಿರಲಿಲ್ಲ. ಈಗ ಬಂಡವಾಳ ಕುರಿತ ಸಂಪುಟ ಸಮಿತಿ ಅನುಮತಿ ನೀಡಿರುವ ಯೋಜನೆಗಳಾದರೂ ಯಾವುವು? ಈ ಯೋಜನೆಗಳಲ್ಲಿ ಬಹುಪಾಲು ಪ್ರಸ್ತಾಪಗಳು 2008ಕ್ಕಿಂತ ಮುನ್ನವೇ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಅವುಗಳ ವಿಲೇವಾರಿಗೆ ಸರ್ಕಾರ ಐದು ವರ್ಷ ತೆಗೆದುಕೊಂಡಿದೆ ಎಂದರೆ ಅದರ ಇಚ್ಛಾಶಕ್ತಿ ಎಂಥದು ಎಂಬುದು ತಿಳಿಯುತ್ತದೆ. ಈ ಪ್ರಸ್ತಾಪಗಳು ಸಲ್ಲಿಕೆಯಾದಾಗಲೇ ಆದ್ಯತೆ, ಅರ್ಹತೆಗನುಗುಣವಾಗಿ ಸರ್ಕಾರ ಅವುಗಳನ್ನು ಪರಿಶೀಲಿಸಿ ಅನುಮೋದನೆ ನೀಡಿದ್ದಿದ್ದರೆ ಈ ವೇಳೆಗೆ ಅವು ಜಾರಿಗೆ ಬಂದಿರುತ್ತಿದ್ದವು. ಅಷ್ಟರ ಮಟ್ಟಿಗೆ ಬಂಡವಾಳ ಹೂಡಿಕೆ ಆಗಿರುತ್ತಿತ್ತು. ಆದರೆ ಅವುಗಳತ್ತ ಗಮನ ಹರಿಸಲೂ ಹಿಂದು ಮುಂದು ನೋಡಿದ ಸರ್ಕಾರ ಈಗ ಅನುಮೋದನೆ ನೀಡಿದ್ದರೂ ಅವು ಕಾರ್ಯಗತವಾಗಲು ಸಾಕಷ್ಟು ಸಮಯಾವಕಾಶ ಬೇಕಿದೆ. ಅಲ್ಲದೆ 2008ರಲ್ಲಿ ಪ್ರಸ್ತಾಪ ಸಲ್ಲಿಸಿದಾಗ ಇದ್ದ ಪರಿಸ್ಥಿತಿಗೂ, ಈಗಿನದಕ್ಕೂ ಅಜಗಜ ಅಂತರವಿದೆ. ಹಾಗಾಗಿ ಪ್ರಸ್ತಾಪ ಸಲ್ಲಿಸಿದ್ದ ಕಂಪನಿಗಳು ಈಗಿನ ಪರಿಸ್ಥಿತಿಯಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತವೆ ಎಂಬುದಕ್ಕೆ ಯಾವ ಖಾತ್ರಿಯೂ ಇಲ್ಲ. ಭಾರತದ ಆರ್ಥಿಕತೆಯ ಆರೋಗ್ಯಕ್ಕೆ ಮಾರಕವಾಗಿರುವ ತೈಲ ಸಬ್ಸಿಡಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್ ಮೇಲಿನ ದರ ನಿಯಂತ್ರಣವನ್ನು ತೆಗೆದುಹಾಕಲು ಸರ್ಕಾರ ಅಧಿಕಾರಕ್ಕೆ ಬಂದು ವರ್ಷಗಳೇ ಬೇಕಿರಲಿಲ್ಲ. ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದ್ದ ಇಂಥ ತುರ್ತು ನಿರ್ಧಾರಗಳನ್ನು ಯುಪಿಎ ಸರ್ಕಾರ ತನ್ನ ಮೊದಲ ಅವಧಿಯಲ್ಲೇ ಜಾರಿಗೆ ತಂದಿದ್ದರೆ ಇಂದು ದಿಕ್ಕು ತೋಚದಂತಹ ಸ್ಥಿತಿಗೆ ತಲುಪುತ್ತಿರಲಿಲ್ಲ. ಇದನ್ನು ಬಿಟ್ಟು ಸಾಲ ಮನ್ನಾ, ನರೇಗಾದಂತಹ ಯೋಜನೆಗಳು ಮತ್ತು ಈಗ ಆರ್ಥಿಕ ಸ್ಥಿತಿ ಗಂಭೀರವಾಗಿದ್ದರೂ ಆಹಾರ ಭದ್ರತೆಯಂತಹ ಯೋಜನೆಗಳನ್ನು ಜಾರಿಗೆ ತಂದು ಅದಕ್ಕಾಗಿ ದೇಶ ದುಬಾರಿ ಬೆಲೆ ತೆರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಮಾರುಕಟ್ಟೆಯನ್ನು ಲೈಸೆನ್ಸ್ ರಾಜ್‌ನಿಂದ ಮುಕ್ತಗೊಳಿಸುವುದು ಆರ್ಥಿಕ ಸುಧಾರಣೆಯ ಒಂದು ಭಾಗವಷ್ಟೆ. ಅದು ಶಾಶ್ವತ, ಸುಸ್ಥಿರ ಸುಧಾರಣೆಯ ಕುರುಹಲ್ಲ ಎಂಬ ಸತ್ಯ ಮನಮೋಹನ್ ಸಿಂಗ್ ಅವರಿಗೆ ತಿಳಿಯದೇ ಹೋಯಿತೆ?
2008ರಲ್ಲಿ ತಲೆದೋರಿದ ಜಾಗತಿಕ ಆರ್ಥಿಕ ಕುಸಿತ ಭಾರತದಂತೆಯೇ ನೆರೆಯ ಚೀನಾದ ಅರ್ಥವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಿತು. ಆದರ ಆರ್ಥಿಕ ಬೆಳವಣಿಗೆಯೂ ಕುಂಠಿತವಾಯಿತು. ಆದರೆ ಇಂದು ಚೀನಾದ ಬೆಳವಣಿಗೆಯ ದರ ಏರುಮುಖವಾಗಿದ್ದರೆ, ಭಾರತದಲ್ಲಿ ಪರಿಸ್ಥಿತಿ ತದ್ವಿರುದ್ಧ. ಚೀನಾದಲ್ಲಿ ಆದ ಬದಲಾವಣೆ ಇಲ್ಲೇಕೆ ಸಾಧ್ಯವಾಗಲಿಲ್ಲ! ಅರ್ಥ ಪಂಡಿತರ ದಂಡೇ ಸರ್ಕಾರದಲ್ಲಿದ್ದರೂ ಪರಿಸ್ಥಿತಿ ಏಕೆ ಬಿಗಡಾಯಿಸಿತು? ಇಲ್ಲಿ ಮನಮೋಹನ್ ಸಿಂಗ್ ಅಧಿಕಾರಕ್ಕೆ ಬಂದಾಗಲೇ ಅಲ್ಲಿ ವೆನ್‌ಜಿಯಾಬಾವೊ (ಪ್ರಧಾನಿ) ಆಡಳಿತ ಇತ್ತು. ಚೀನಾವೂ ಭಾರತದಂತೆಯೇ ಜಿಡಿಪಿ ಪ್ರಣೀತ ಅರ್ಥವ್ಯವಸ್ಥೆಯ ದಾಸನಾಗಿತ್ತು. ಜಿಡಿಪಿ (ಆರ್ಥಿಕ ಬೆಳವಣಿಗೆ ದರ) ಅಂಕಿ-ಸಂಖ್ಯೆಗಳೇ ಆರ್ಥಿಕ ಸಧೃಡತೆಯ ಮಾನದಂಡವಾಗಿತ್ತು. ಬಂಡವಾಳ ಹೂಡಿಕೆಯ ನಿರೀಕ್ಷೆ ಮತ್ತು ಅದಕ್ಕೆ ಸೋಪಾನ ಹಾಕುವುದರಲ್ಲೇ ಎರಡೂ ದೇಶಗಳು ಕೃತಾರ್ಥವಾಗಿದ್ದವು. ಜಾಗತಿಕ ಕುಸಿತದ ಪರಿಣಾಮವನ್ನು ತಾಳಿಕೊಂಡರೂ ಅದರಿಂದ ಹೊರಬರುವಲ್ಲಿ ಎರಡೂ ದೇಶಗಳು ತುಳಿದ ಹಾದಿ ಭಿನ್ನವಾಗಿತ್ತು. ವೆನ್‌ಜಿಯಾಬಾವೊ ನಂತರ ಕೆಲ ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ಲೀ ಕೀಕಿಯಾಂಗ್ ಧೃಡ ನಿರ್ಧಾರ ಕೈಗೊಳ್ಳಲು ಹಿಂಜರಿಯಲಿಲ್ಲ. ಜಿಡಿಪಿ ಜಪಕ್ಕಿಂತ ಅರ್ಥ ವ್ಯವಸ್ಥೆಯಲ್ಲಿದ್ದ ಹುಳುಕುಗಳನ್ನು ಸರಿಪಡಿಸಲು ಮುಂದಾದರು. ತುಕ್ಕು ಹಿಡಿದಿದ್ದ ಇಲ್ಲವೇ ಜನರ ಹಣದಿಂದ ಕೊಬ್ಬಿದ್ದ ವಿತ್ತೀಯ ಸಂಸ್ಥೆಗಳನ್ನು ಸರಿದಾರಿಗೆ ತರಲು ಅಗತ್ಯ ಉಪಕ್ರಮಗಳಿಗೆ ಮುಂದಾದರು. ಆಯಕಟ್ಟಿನ ಸ್ಥಳದಲ್ಲಿ ಕುಳಿತು ಸಾರ್ವಜನಿಕರ ಹಣವನ್ನು ನುಂಗಿಹಾಕಿದ್ದ ಅಧಿಕಾರಿಯನ್ನು ಜೈಲಿಗಟ್ಟಿದರು. ಆಡಳಿತದಲ್ಲಿ ಹಾಸಹೊಕ್ಕಾಗಿದ್ದ ಭ್ರಷ್ಟಾಚಾರದ ಮೇಲೆ ಗದಾಪ್ರಹಾರ ಮಾಡಿದರು. ಬಂಡವಾಳಿಗರ ದೇಶವನ್ನು ಗ್ರಾಹಕರ ಅತಿ ದೊಡ್ಡ ಮಾರುಕಟ್ಟೆಯಾಗಿಸಲು ಮುಂದಾದರು. ಪರಿಣಾಮ ಚೀನಾದ ಉತ್ಪಾದನಾ ವಲಯ ಕಳೆಗಟ್ಟಿತು. ಇದರಿಂದ ಆಮದು ಹೆಚ್ಚಿತು. ತನ್ನಿಂದ ತಾನಾಗೇ ಅಭಿವೃದ್ಧಿಯ ವೇಗ ಹೆಚ್ಚಿ ಅಲ್ಪ ಅವಧಿಯಲ್ಲಿಯೇ ಚೀನಾ ಅರ್ಥಿಕ ಸಂಕಷ್ಟದಿಂದ ಚೇತರಿಸಿಕೊಂಡಿತು. ಅಲ್ಲಿ ಕೀಕಿಯಾಂಗ್ ಬದಲಾವಣೆಯ ಏಜೆಂಟ್ ಎನಿಸಿದರು. ಆದರೆ ಭಾರತ ಮಾತ್ರ ಜಿಡಿಪಿ ಅಥವಾ ಬೆಳವಣಿಗೆಯ ನಿರೀಕ್ಷೆಯಲ್ಲಿಯೇ ಕಾಲಹರಣ ಮಾಡಿತು. ಸುಧಾರಣೆಯ ಫಲವಾಗಿ ಸೃಷ್ಟಿಯಾದ ಸಂಪತ್ತನ್ನು ಸ್ವಹಿತಕ್ಕೆ ಬಳಸಿಕೊಳ್ಳುವ ಭ್ರಷ್ಟಾಚಾರಿಗಳಿಗೆ ಅಂಕುಶವೇ ಇಲ್ಲವಾಯಿತು. ಈ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಪಟ್ಟಿ (2ಜಿ, ಕೋಲ್‌ಗೇಟ್, ಕಾಮನ್‌ವೆಲ್ತ್) ದೊಡ್ಡದಿದ್ದರೂ ಒಬ್ಬ ರಾಜಾ ಆಗಲಿ, ಕಲ್ಮಾಡಿ ಆಗಲಿ ಇನ್ನೂ ಶಿಕ್ಷೆಗೆ ಗುರಿಯಾಗಿಲ್ಲ. ಭಾರತದ ರಫ್ತು ಆಮೆ ವೇಗದಲ್ಲಿದ್ದರೆ ಆಮದು ನಾಗಾಲೋಟದಲ್ಲಿದೆ. ದೇಶೀಯ ಉತ್ಪಾದನೆ ಅತ್ಯಂತ ಕೆಳಸ್ತರದಲ್ಲಿದೆ. ಬದಲಾವಣೆಯ ಏಜೆಂಟರಾಗಬಹುದು ಎಂದೆಣಿಸಿದ್ದವರನ್ನೇ (ಮನಮೋಹನ್ ಮತ್ತು ಕಂಪನಿ) ಬದಲಾಯಿಸಬೇಕು ಎನ್ನುವ ಪರಿಸ್ಥಿತಿ ಇಂದು ಉದ್ಭವ ಆಗಿದೆ. ಇನ್ನು ರಾಜಕೀಯವಾಗಿ ಹೇಳಬೇಕೆಂದರೆ ಗಟ್ಟಿ ನಾಯಕತ್ವ ಇದೆ ಎಂದು ಯಾರಿಗಾದರೂ ಅನ್ನಿಸುತ್ತಿದೆಯೇ? ಯುಪಿಎ ಮೈತ್ರಿಕೂಟದ ರಾಜಕೀಯ ನೇತೃತ್ವ ವಹಿಸಿಕೊಂಡಿರುವ ಸೋನಿಯಾ ಗಾಂಧಿ, ಅವರ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದಿರುವ ಮನಮೋಹನ್ ಸಿಂಗ್ ಅವರಾಗಲಿ ಸಮರ್ಥ ರಾಜಕೀಯ ನಾಯಕತ್ವ ನಿಭಾಯಿಸಿದ್ದಾರೆಯೇ? ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡುವ ವ್ಯಕ್ತಿಯಂತೆ ಮನಮೋಹನ್ ಸಿಂಗ್ ವರ್ತಿಸುತ್ತಿದ್ದರೆ, ಖಜಾನೆ ಇರುವುದೇ ಮತದಾರರನ್ನು ಓಲೈಸಲು ಮತ್ತು ಅವರನ್ನು ಮರಳು ಮಾಡಲು ಎಂಬಂತಿದೆ ಸೋನಿಯಾ ಗಾಂಧಿ ಅವರ ನಡೆ. ಇನ್ನು ರಾಹುಲ್‌ಗಾಂಧಿ ಅವರಂತೂ ಗುದ್ದೋಡು (Hit and  Run) ಭಾಷಣಗಳಿಗಷ್ಟೇ ತಮ್ಮ ರಾಜಕೀಯ ಒಲವು-ನಿಲುವುಗಳನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಆರ್ಥಿಕ, ಆಡಳಿತ ಮತ್ತು ರಾಜಕೀಯ ಸುಧಾರಣೆ, ಮೂರೂ ವಿಷಯಗಳಲ್ಲಿ ಈ ತ್ರಿಮೂರ್ತಿಗಳು ಮೂಡಿಸಿರುವ ಹೆಜ್ಜೆ ಗುರುತು ಈ ದೇಶವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದು ಕಣ್ಣೆದುರಿಗೆ ಇದೆ. ಕಾಂಗ್ರೆಸ್ ಅಂತೂ ಜಾಗೃತಗೊಳ್ಳುವುದೇ ಚುನಾವಣೆಗಳು ಬಂದಾಗ. ಒಂದು ಚುನಾವಣೆ ಗೆದ್ದರೆ, ಮತ್ತೊಂದನ್ನು ಹೇಗೆ ಗೆಲ್ಲಬಹುದು ಎಂಬುದರತ್ತಲೇ ಅದರ ಚಿತ್ತ ಕೇಂದ್ರೀಕೃತವಾಗಿರುತ್ತದೆ. 2009ರ ಚುನಾವಣೆಗೆ ಸಾಲ ಮನ್ನಾ ಮತ್ತು ಈಗ 2014ರ ಚುನಾವಣೆಯ ಹೊಸ್ತಿಲಲ್ಲಿ ಆಹಾರ ಭದ್ರತೆ, ಹೀಗೆ ಕಾಂಗ್ರೆಸ್‌ನ ಲೆಕ್ಕಾಚಾರ ಮತಗಳ ಸುತ್ತಲೇ ಸುತ್ತುತ್ತಿರುತ್ತದೆ. ಹೀಗಿರುವಾಗ ನಮ್ಮ ನೆಮ್ಮದಿಯ ನಾಳೆಗಳಿಗಾಗಿ ಒಂದು ಆಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದು ನಿಮಗನಿಸುವುದಿಲ್ಲವೇ?

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com