ಆರ್ಟಿಓದ ವಿಕಟ ನಾಟಕ ಮುಗಿಯುವುದೆಂದು?
ಐವತ್ತು ರುಪಾಯಿ ಜೊತೆಯಲ್ಲಿದ್ದರೆ ಸಾಕು ವೈದ್ಯಕೀಯ ಪ್ರಮಾಣ ಪತ್ರ ಸುಲಭವಾಗಿ ದೊರೆಯುತ್ತದೆ. ಯಾರಿಗೆ ಬೇಕಾದರೂ, ಮರದ ಕೊರಡಿಗೆ ಬೇಕಾದರೂ ಇಂದು ವೈದ್ಯಕೀಯ ಪ್ರಮಾಣ ಪತ್ರ ಪಡೆಯುವುದು ಸಾಧ್ಯ!
ಸುಧಾರಣೆಯ ಪ್ರಯತ್ನಗಳು ಪ್ರತಿಯೊಂದು ಸರ್ಕಾರಿ ಇಲಾಖೆಯಲ್ಲೂ ಒಂದಷ್ಟು ನಡೆದಿದೆ. ಆದರೆ ಅದೆಷ ಯಂತ್ರ, ತಂತ್ರ, ಕುತಂತ್ರಿಗಳು ಬದಲಾದರೂ, ಮೂಲವೇ ಮಲಿನವಾಗಿರುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಆರ್ಟಿಓ ಇಲಾಖೆಗೆ ಪ್ರತಿದಿನ ಸಾವಿರಾರು ಜನ ಪರವಾನಗಿ ಪಡೆಯಲು, ನವೀಕರಿಸಿಕೊಳ್ಳಲು ಹೋಗುತ್ತಾರೆ. ಆದರೆ ಅಲ್ಲಿ ಅವರು ಅನುಭವಿಸುವ ತೊಂದರೆಗಳು ಅಷ್ಟಿಷ್ಟಲ್ಲ.
ಆರ್ಟಿಒದಲ್ಲಿ ನನಗೆ ಎರಡು ರೀತಿಯ ಪರವಾನಗಿ ಇದೆ. 1) ದ್ವಿಚಕ್ರ ವಾಹನ ಚಾಲನೆಗೆ. ಇದನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಬೇಕು (ನವೀಕರಣ ಶುಲ್ಕ 250 ರುಪಾಯಿ). 2) ಭಾರೀ ವಾಹನ ಚಾಲನೆಗೆ(ಹೆಚ್ಜಿವಿ).ಇದನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಿಸಬೇಕು (ಮತ್ತೊಮ್ಮೆ 250 ರುಪಾಯಿಗಳು). ಸರ್ಕಾರಕ್ಕೆ ಎರಡು ಬಾರಿ ಹಣ ಸಂದಾಯ ಮಾಡುವ ಬಗ್ಗೆ ನನಗೆ ಹೊಟ್ಟೆ ಉರಿ ಏನೂ ಇಲ್ಲ. ಆದರೆ ಒಬ್ಬ ಕೃಷಿಕನಾಗಿ, ಅತೀವ ಕೂಲಿ ಸಮಸ್ಯೆಯಿಂದ ತತ್ತರಿಸುವ ನನ್ನಂಥವರಿಗೆ ಪದೇ ಪದೇ ಆರ್ಟಿಓಗೆ ಹೋಗುವುದು. ಅಲ್ಲಿನ ವಿಳಂಬಿತ, ಉಪೇಕ್ಷಿತ ವಾತಾವರಣದಲ್ಲಿ ವಾಹನ ಚಾಲನೆಯ ಅರ್ಹತೆಯನ್ನು ರುಜುವಾತು ಮಾಡುವುದು ಅತ್ಯಂತ ಕಿರಿಕಿರಿ ಎನಿಸುತ್ತದೆ. ಅಲ್ಲಿನ ಪ್ರಕ್ರಿಯೆಗಳೆಲ್ಲ ಪ್ರಜಾತಂತ್ರದ ವಿಡಂಬನೆಯಾಗಿ ಕಾಣುತ್ತವೆ. ಸಾಮಾನ್ಯವಾಗಿ ಸಣ್ಣ ವಾಹನಗಳಿಗೆ(ಎಲ್ಎಂವಿ) ಮತ್ತು ಮೋಟಾರ್ ಸೈಕಲ್ಗಳಿಗೆ ಒಂದೇ ಅವಧಿಯನ್ನು ಆರ್ಟಿಒ ವಿಧಿಸಿದೆ. ಈಗ ನನಗೆ ಹೆಚ್.ಜಿ.ವಿ.ಯ ಪರವಾನಗಿಯ ಅವಶ್ಯಕತೆ ಇಲ್ಲದಿರುವುದರಿಂದ ಎಲ್.ಎಂ.ವಿ. ಎಂದು ಬದಲಾಯಿಸಿ ಪ್ರತಿ ಐದು ವರ್ಷಗಳಿಗೊಮ್ಮೆ ಜೊತೆಯಾಗಿ ನವೀಕರಿಸಲು ಆರ್.ಟಿ.ಓ.ದಲ್ಲಿ ಅವಕಾಶ ಕೋರಿದರೆ, ಒಂದೊಂದು ಕಿಟಕಿಯೂ ಬೇರೆ ಬೇರೆ ದುರ್ಗಂಧವನ್ನು ಬೀರುತ್ತವೆ. ಹೀಗೊಂದು ಬದಲಾವಣೆ ಅಸಾಧ್ಯವೆಂದೂ ಅದು ಹೇಳುತ್ತದೆ. ಎಲ್.ಎಂ.ವಿ.ಗೆ ಹೊಸತಾಗಿ ಅರ್ಜಿ ಹಾಕಬೇಕೆಂದು ಅಲ್ಲಿ ಹೇಳಿದರು. ಹಾಗಾಗಿ ಪ್ರಯತ್ನಿಸಿ ನೋಡಿದೆ. ಆದರೆ ಅದು ಆರ್.ಟಿ.ಓ.ದಲ್ಲಿ ಹೊಸ ಹೊಸ ಸಮಸ್ಯೆಯಾಗಿ ಕವಲೊಡೆಯುವುದನ್ನು ಗಮನಿಸಿ ಪ್ರಯತ್ನವನ್ನು ಕೈ ಬಿಟ್ಟೆ.
ಆ ವಿಚಾರಗಳು ಹಾಗಿರಲಿ. ಈಗ ಖಾಸಾ ಪರವಾನಗಿ ನವೀಕರಣಕ್ಕೆ ಬರೋಣ. ನವೀಕರಣದ ಶುಲ್ಕ ರು. 250ನ್ನು ಕಟ್ಟಲು ಸದಾ ಒಂದು ಗಂಟೆಯನ್ನು ಮೀರುವ ಸರತಿ ಸಾಲಿರುತ್ತದೆ. ಪ್ರತಿಯೊಬ್ಬನೂ ಇಲ್ಲಿ ಅಷ್ಟು ಸಮಯ ದಂಡ ಮಾಡಬೇಕಾಗುತ್ತದೆ. ಆದರೆ ಬ್ರೋಕರ್ ಮತ್ತು ಶಿಫಾರಸು ಮೇಲೆ ಬರುವವರಿಗೆ ಯಾವತ್ತೂ ಸುಲಭ ಅವಕಾಶ ಇದೆ. ಹಾಗಾಗಿ ಆರ್ಟಿಓ ಸುತ್ತಮುತ್ತ ಸದಾ ಜನಜಾತ್ರೆ ಇರುತ್ತದೆ. ಪರವಾನಗಿ ಶುಲ್ಕದ ಬಾಬ್ತು 201 ರುಪಾಯಿಗಳಿಗೆ ಮಾತ್ರ ರಶೀದಿ ಮುದ್ರಿಸಲಾಗುತ್ತಿದೆ. ಇನ್ನುಳಿದ 49 ರೂಪಾಯಿಗಳಿಗೆ ಒಂದು ಸ್ಟಿಕ್ಕರ್ ಇರುತ್ತದೆ. ಹೀಗೊಂದು ಸ್ಟಿಕ್ಕರ್ ಮಾಡಿಸುವುದು ಸರ್ಕಾರಕ್ಕೆ ಹಾಗೂ ಪರಿಸರಕ್ಕೆ ಅನಗತ್ಯ ಹೊರೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ವಿವೇಕಯುತರು ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಇಲ್ಲದಿರುವುದು ದುರಂತವೇ ಸರಿ.
ಹಣ ಕಟ್ಟಿದ ಮೇಲೆ ಸ್ವಾಗತಕಾರನಿಂದ ಸುಲಭವಾಗಿಯೇ ಅರ್ಜಿ ನಮೂನೆಯನ್ನು ಪಡೆಯಲು ಅವಕಾಶವಿದೆ. ವೈದ್ಯಕೀಯ ಪ್ರಮಾಣ ಪತ್ರವೂ ಸೇರಿ ಈ ಅರ್ಜಿ ನಮೂನೆಯಲ್ಲಿರುವುದು ಒಟ್ಟು ಆರು ಪುಟಗಳು. ಖಂಡಿತವಾಗಿಯೂ ಇದನ್ನು ಎರಡು ಅಥವಾ ಮೂರು ಪುಟಗಳಿಗೆ ಇಳಿಸಲು ಅವಕಾಶವಿದೆ. ಹೀಗೆ ಇಳಿಸಿದರೆ ಭಾರೀ ಪ್ರಮಾಣದ ಕಾಗದಳನ್ನು ಉಳಿಸಬಹುದು. ಈ ಆರು ಪುಟಗಳಲ್ಲಿ ಮೂರು ಬಾರಿ ನಮ್ಮ ಹೆಸರು ಮತ್ತು ವಿಳಾಸ ಬರೆಯಬೇಕಾಗುತ್ತದೆ. ಅಲ್ಲದೇ ನಾವು ಲಗತ್ತಿಸುವ ಹಳೇ ಪರವಾನಗಿಯ ಮೂಲ ಪ್ರತಿಯಲ್ಲೂ ಇದು ಇರುತ್ತದೆ. ಸ್ವವಿಳಾಸದ ಲಕೋಟೆಯನ್ನೂ ನಾವು ಜೊತೆಗೆ ಚುಚ್ಚಬೇಕಾಗುತ್ತದೆ. ಅಂದರೆ ಒಂದು ಅರ್ಜಿಗೆ ಐದು ಬಾರಿ ಹೆಸರು ಮತ್ತು ವಿಳಾಸ! ಇಷ್ಟು ಸಾಲದೆಂದು ಕೊನೆಯ ಹಂತಕ್ಕೆ ಬರುವಾಗ, ಸ್ವಾಗತಕಾರನು ಮುಖ ಸಿಂಡರಿಸಿ 'ಫಾರಂ ನಂ. 7ನ್ನು ಸೇರಿಸಿ' ಎನ್ನುತ್ತಾನೆ. ಆಗ ಹೊರಗೆ ಹೋಗಿ ಮಧ್ಯವರ್ತಿಗಳಿಂದ ಅದನ್ನು ಖರೀದಿಸಬೇಕು. ಇದರಲ್ಲಿ ಮತ್ತೆ ಇರುವುದು ಅದೇ- ಆರನೇ ಬಾರಿಗೆ ಸ್ವವಿಳಾಸದ ಕೋಣೆಗಳು!
ಶುಲ್ಕವೆಂದು ಸಲ್ಲಿಸುವ 250 ರುಪಾಯಿಗಳಲ್ಲಿ ಸ್ವವಿಳಾಸ ಲಕೋಟೆಯ ಮೌಲ್ಯ ಸೇರಿದೆಯೋ ಇಲ್ಲವೋ ಎಂಬುದು ಯಾರಿಗೂ ಸ್ಪಷ್ಟವಿಲ್ಲ. ಈ ಅಸ್ಪಷ್ಟತೆಯೊಳಗೆ, ಅವಸರದೊಳಗೆ ಮತ್ತೆ ಗ್ರಾಹಕನು ಮಧ್ಯವರ್ತಿಯ ಮೊರೆ ಹೋಗಬೇಕಾಗುತ್ತದೆ. ನಲವತ್ತು ರುಪಾಯಿಯ ಸ್ಟಾಂಪ್ ಲಕೋಟೆಗೆ ಐವತ್ತು ರುಪಾಯಿ ಕೊಟ್ಟು ತುರ್ತು ಸನ್ನಿವೇಶವನ್ನು ನಿಭಾಯಿಸಬೇಕಾಗುತ್ತದೆ. ಹೇಗಾದರೂ ಕ್ಯೂ ನಿಂತು ಆರ್.ಟಿ.ಓ.ಗೆ ಹಣ ಕಟ್ಟುವಾಗ ಸ್ಟಾಂಪ್ನ ಹಣವನ್ನೂ ಇಲಾಖೆಯೇ ಸ್ವೀಕರಿಸಿದರೆ ಗ್ರಾಹಕರ ಸಮಯ ಹಾಗೂ ಶೋಷಣೆ ಅಷ್ಟಾದರೂ ತಪ್ಪೀತು.
ವಾಹನ ಚಾಲನೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಅಗತ್ಯ ಅರ್ಹತೆಯೆಂಬುದು ನಿರ್ವಿವಾದ. ಆದರೆ ಇದನ್ನು ವೈದ್ಯಕೀಯ ಪ್ರಮಾಣ ಪತ್ರವೆಂಬ ಪ್ರಹಸನದಿಂದ ಆರ್ಟಿಓ ಹೇಗೆ ದೃಢಪಡಿಸುತ್ತದೆಂದು ಅರ್ಥವಾಗುವುದಿಲ್ಲ. ಐವತ್ತು ರುಪಾಯಿ ಜೊತೆಯಲ್ಲಿದ್ದರೆ ಸಾಕು ವೈದ್ಯಕೀಯ ಪ್ರಮಾಣ ಪತ್ರ ಸುಲಭವಾಗಿ ದೊರೆಯುತ್ತದೆ. ಯಾರಿಗೆ ಬೇಕಾದರೂ, ಮರದ ಕೊರಡಿಗೆ ಬೇಕಾದರೂ ಇಂದು ವೈದ್ಯಕೀಯ ಪ್ರಮಾಣ ಪತ್ರ ಪಡೆಯುವುದು ಇಂದು ಸಾಧ್ಯ! ತೀರ ಇತ್ತೀಚಿನವರೆಗೆ, ವೈದ್ಯಕೀಯ ಪ್ರಮಾಣ ಪತ್ರಕ್ಕೊಂದು ಗ್ರಾಹಕ ಸ್ನೇಹೀ ವ್ಯವಸ್ಥೆ ಇತ್ತು. ಆರ್.ಟಿ.ಓ. ಪಕ್ಕದಲ್ಲೊಬ್ಬ ವೃದ್ಧ ವೈದ್ಯರು ಕಾರಿನಲ್ಲಿ ಕುಳಿತು ಅನುಕೂಲ ಮಾಡಿಕೊಡುತ್ತಿದ್ದರು. ಅಥವಾ ನಾವು ನಮ್ಮ ಕುಟುಂಬ ವೈದ್ಯರಿಂದ ಪ್ರಮಾಣ ಪತ್ರ ಪಡೆಯಬಹುದಿತ್ತು. ಆದರೆ ಈಗ ಕಾನೂನನ್ನು ಬಿಗಿಗೊಳಿಸಿ ಸರ್ಕಾರಿ ವೈದ್ಯರಿಂದಲೇ ಪ್ರಮಾಣ ಪತ್ರ ಪಡೆಯಬೇಕೆಂದು ಆಗ್ರಹಿಸಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ವೈದ್ಯರನ್ನು ಹುಡುಕಿಕೊಂಡು ಒಂದೆರಡು ಗಂಟೆ ಅಲೆಯಬೇಕಾಗಿದೆ. ಎಲ್ಲ ವೈದ್ಯರೂ ಕಲಿಯುವುದು,ಪದವಿ ಪಡೆಯುವುದು ಕಾನೂನುಬದ್ಧವಾದ ಒಂದೇ ವಿಶ್ವವಿದ್ಯಾಲಯದಿಂದ ಎಂದಾದ ಮೇಲೆ ಸರ್ಕಾರಿ ವೈದ್ಯರು ಮಾತ್ರ ವಾಹನ ಚಾಲನೆಗೆ ಅಗತ್ಯವಾದ ಪ್ರಮಾಣ ಪತ್ರವನ್ನು ಕೊಡಬೇಕೆಂಬ ನಿಯಮವು ಷಡ್ಯಂತ್ರವಲ್ಲದೇ ಇನ್ನೇನು?
ಕಾನೂನುಬದ್ಧವಾಗಿ ಪರವಾನಗಿ ಹೊಂದಿರುವ ಸಾವಿರಾರು ಹಿರಿಯ ನಾಗರಿಕರು ತಮ್ಮ ವಯೋ ಸಹಜವಾದ ಅನರ್ಹತೆಯನ್ನು ಅರಿತು ವಾಹನ ಚಾಲನೆಯನ್ನು ಕೈ ಬಿಟ್ಟಿರುವ ಸಾವಿರ ಸಾವಿರ ದೃಷ್ಟಾಂತಗಳು ಸಿಗುತ್ತವೆ. ನಾನೇ ಬೆಂಗಳೂರಿನಲ್ಲಿ ವಾಹನ ಚಲಾಯಿಸುವ ಸಾಹಸ ಮಾಡುವುದಿಲ್ಲ. ಹಂತ ಹಂತಗಳಲ್ಲಿ ಲಂಚದ ಅವಕಾಶವಾಗಿ ಪರಿವರ್ತನೆಗೊಳ್ಳುವ ಕಾನೂನುಗಳನ್ನು ಕಡಿಮೆ ಮಾಡುವುದರಲ್ಲೇ ನಮ್ಮ ಬುದ್ಧಿವಂತಿಕೆ ಇದೆ.
ದೇಶದ ಆದಾಯದಲ್ಲಿ ಶೇ.80 ಸರ್ಕಾರಿ ಯಂತ್ರದ ನಿರ್ವಹಣೆಗೆ ಖರ್ಚಾಗುತ್ತಿರುವ ಈ ದಿನಗಳಲ್ಲಿ ಕಾನೂನುನನ್ನು, ಸರ್ಕಾರಿ ಅಧಿಕಾರಿಗಳನ್ನೂ ಕಡಿಮೆ ಮಾಡುತ್ತಾ ವೈಯಕ್ತಿಕ ಜವಾಬ್ದಾರಿಯನ್ನು, ಪ್ರೀತಿಯನ್ನು ಹೆಚ್ಚು ಮಾಡುವುದೊಂದೇ ಪರಿಹಾರ. ಹಾಗಿರುವಾಗ ಪ್ರತಿಯೊಬ್ಬರ ಸಮಯವನ್ನು ಹಾಳು ಮಾಡುವ ಈ ವಿಕಟ ನಾಟಕ ಯಾಕೆ?
- ಎ.ಪಿ. ಚಂದ್ರಶೇಖರ, ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

