ಅಂಕಣಗಳು

ರಾಜವಂಶದ ರಾಜಕೀಯ ಮತ್ತು'ಜೀ ಹುಜೂರ್‌' ಸಂಸ್ಕೃತಿ!

ರಾಜವಂಶದ ರಾಜಕೀಯ ಮತ್ತು'ಜೀ ಹುಜೂರ್‌' ಸಂಸ್ಕೃತಿ!
Published On :

ಜೀ ಹುಜೂರ್ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದು ಮತ್ತು ಅದನ್ನು ದಶಕಗಳಿಂದಲೂ ಪೋಷಿಸಿಕೊಂಡು ಬಂದದ್ದು ಕಾಂಗ್ರೆಸ್ ಪಕ್ಷದ ಮಹತ್ಸಾಧನೆಗಳಲ್ಲಿ ಅತಿ ಮುಖ್ಯವಾದುದು. ಯಜಮಾನ್ಯ ಪದ್ಧತಿಯನ್ನು ಈಗಲೂ ಆರಾಧಿಸುವ ಕಾಂಗ್ರೆಸ್ ಪಕ್ಷದಲ್ಲಿ 'ಉಹುಂ' ಎಂಬ ಅಸಮ್ಮತಿಯ, ಅಸಮಾಧಾನದ ಮಾತಿಗೆ ಬಹಳ ಮಹತ್ವವಿದೆ. ಹೀಗೆ 'ಉಹುಂ' ಎಂದವರು ರಾಹುಲ್‌ಗಾಂಧಿ, ಸೋನಿಯಾ ಗಾಂಧಿಯಾಗಿದ್ದರೆ ಅಥವಾ ಅವರ ಪರಮಾಪ್ತರಾಗಿದ್ದರೆ, ಅಂಥ ಸಂದರ್ಭದಲ್ಲಿ ಅವರು ಅಸಮ್ಮತಿ ಸೂಚಿಸಿದ ವಿಷಯದ ಬಗ್ಗೆ ಮೇಲಿಂದ ಮೇಲೆ ಚರ್ಚೆಗಳಾಗುತ್ತವೆ. ಆದರೆ ಯಾವುದೇ ಒಂದು ವಿಷಯವಾಗಿ ಬೇರೆ ಕಡೆಗಳಿಂದ ಅಸಮ್ಮತಿಯ ಮಾತು ಕೇಳಿಸಿದರೆ, ಅದನ್ನು ಮುಲಾಜಿಲ್ಲದೆ ನಿರ್ಲಕ್ಷಿಸಲಾಗುತ್ತದೆ. ವಾಸ್ತವ ಹೀಗಿರುವಾಗ, ತಮ್ಮ ಪಕ್ಷದಲ್ಲಿಯೇ ಎಲ್ಲರೂ 'ಸರಿಯಾಗಿಲ್ಲ' ಎಂಬ ವಾತಾವರಣವಿದ್ದರೂ ಬಿಜೆಪಿ ಸದಸ್ಯರಿಗೆ ಬುದ್ಧಿವಾದ ಹೇಳುವ ಕೆಲಸಕ್ಕೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮತ್ತೊಂದು ಪಕ್ಷದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ, ಅನಗತ್ಯವಾಗಿ ಉಪದೇಶ ಮಾಡಲು ಮುಂದಾಗುವ ಈ ಚಾಳಿ ಕಳೆದ ಕೆಲ ದಿನಗಳಿಂದಲೂ ನಡೆಯುತ್ತಲೇ ಇದೆ. ಅಂಥವರಿಗೆ-'ನಿಮ್ಮ ಪಕ್ಷದಲ್ಲಿ ಎದ್ದು ಕಾಣುತ್ತಿರುವ ಅವ್ಯವಸ್ಥೆಯನ್ನು ಮೊದಲು ಸರಿಮಾಡಿಕೊಳ್ಳಿ. ಬಿಜೆಪಿಯ ಉಸಾಬರಿ ನಿಮಗೆ ಯಾವತ್ತಿಗೂ ಬೇಡ' ಎಂದು ಹೇಳಬಯಸುತ್ತೇನೆ.
 ಈ ಮಾತಿನಿಂದ ಹಲವರಿಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಏನೆಂದರೆ, ಕಾಂಗ್ರೆಸ್‌ನ ಯಜಮಾನ್ಯ ಸಂಸ್ಕೃತಿಯ ಬಗ್ಗೆ, ಅದೇ ಪಕ್ಷದಲ್ಲಿರುವ ಹಲವರಿಗೆ ಅಸಮಾಧಾನವಿದೆ. ಹಲವು ವಿಷಯಗಳ ಬಗ್ಗೆ ಕೈಗೊಳ್ಳಲಾಗುತ್ತಿರುವ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಬೇಸರವಿದೆ. ಆದರೆ, ಅಂಥವರ ಸಂಖ್ಯೆ ಕಡಿಮೆಯಿದೆ. ಪಕ್ಷದಲ್ಲಿ ದಶಕದಿಂದಲೂ ಉಳಿದು ಬಂದಿರುವ 'ನೆಹರೂ ಕುಟುಂಬದ ಆರಾಧನೆ'ಯ ಪರಿ, ಅವರನ್ನು ಬೆಚ್ಚಿ ಬೀಳಿಸಿದೆ. ವರಿಷ್ಠರನ್ನು ಯಾರೂ ಪ್ರಶ್ನಿಸಬಾರದು ಎಂದು ಕಟ್ಟುನಿಟ್ಟಿನ ಮಾತುಗಳು ಈ 'ಅಸಮಾಧಾನದ ಅಲ್ಪಸಂಖ್ಯಾತರ ಮೇಲೆ' ಭಯಮಿಶ್ರಿತ ಪ್ರಭಾವ ಬೀರಿವೆ. ರಷ್ಯಾದಲ್ಲಿ ಸರ್ವಾಧಿಕಾರಿ ಸ್ಟಾಲಿನ್‌ನ ಆಡಳಿತವಿದ್ದಾಗಲೂ ಪರಿಸ್ಥಿತಿ-ಹೀಗೆಯೇ ಇತ್ತಂತೆ. ಆಗ ಯಾರಾದರೂ ಸ್ಟಾಲಿನ್ ಸರ್ಕಾರದ ಕೆಲಸಗಳಲ್ಲಿರುವ ತಪ್ಪುಗಳನ್ನು ಎತ್ತಿ ತೋರಿಸಿದರೆ, ಸರ್ವಾಧಿಕಾರಿಗಳ ಜೊತೆಗಿರುವವರೇ ಈ ಬಗ್ಗೆ ಏನೂ ಮಾತಾಡಿಲ್ಲ. ಹೀಗಿರುವಾಗ ನಿನ್ನದೆಂಥ ಅಧಿಕ ಪ್ರಸಂಗತನ ಎಂದು ಹೇಳಿ ಬಾಯಿ ಮುಚ್ಚಿಸಲಾಗುತ್ತಿತ್ತಂತೆ. ಇವತ್ತು ದಿಲ್ಲಿಯಲ್ಲಿರುವ ಕಾಂಗ್ರೆಸ್ ನಾಯಕರ ವರ್ತನೆಯನ್ನು ಅದೇ ಪಕ್ಷದ ಕಿರಿಯ ನಾಯಕರು ಪ್ರಶ್ನಿಸಿದರೆ, ಅವರಿಗೂ ಇಂಥದೇ ಉತ್ತರ ಹೇಳಿ ಬಾಯಿ ಮುಚ್ಚಿಸಲಾಗುತ್ತದೆ.
ಹೀಗೆ, ಯಜಮಾನ್ಯ ಸಂಸ್ಕೃತಿಯ ವಿರುದ್ಧ ಕೇಳಿ ಬರುವ ಧ್ವನಿಗಳನ್ನು ಅಗತ್ಯ ಬಂದರೆ ನಾಜೂಕಿನಿಂದ ಅಥವಾ ಬಲವಂತವಾಗಿ ನಿಲ್ಲಿಸಿ ಬಿಡುವ ಕೆಲಸ ಪಂಡಿತ್ ಜವಾಹರಲಾಲ್ ನೆಹರೂ ಅವರಿಂದಲೇ ಆರಂಭವಾಯಿತು ಎನ್ನಬಹುದು. ಈ ಮಾತಿಗೆ ಸಾಕ್ಷಿ ಬೇಕೆಂದರೆ ನಾವು 1951ಕ್ಕೆ ಹೋಗಬೇಕು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದವರು ಪುರುಷೋತ್ತಮ ದಾಸ್ ಟಂಡನ್. ಅವತ್ತಿನ ಸಂದರ್ಭದಲ್ಲಿ ಚಾಚಾ ನೆಹರೂ ಅವರ ಆಡಳಿತ ವೈಖರಿಯನ್ನು ಪಕ್ಷದ ವೇದಿಕೆಗಳಲ್ಲಿಯೇ ಬಹಿರಂಗವಾಗಿ ಟೀಕಿಸಿಬಿಟ್ಟರು. ಈ ಸಂದರ್ಭದಲ್ಲಿ, ಪುರುಷೋತ್ತಮದಾಸ್ ಟಂಡನ್ ಹಿರಿಯರು. ಪಕ್ಷವನ್ನು ಕಟ್ಟಿ ಬೆಳೆಸಲು ಬಹಳ ಶ್ರಮಿಸಿದವರು. ಅವರ ಟೀಕೆಗಳಿಂದ ನಾನು ಕಲಿಯಬೇಕಾದದ್ದು ತುಂಬಾ ಇದೆ ಎಂದು ನೆಹರೂ ಯೋಚಿಸಲೇ ಇಲ್ಲ. ಬದಲಾಗಿ, ಟಂಡನ್ ಅವರನ್ನು ನಿರ್ದಾಕ್ಷಿಣ್ಯವಾಗಿ ಕುರ್ಚಿಯಿಂದ ಇಳಿಸಿದರು. ಹೀಗೆ ಖಾಲಿಯಾದ ಖುರ್ಚಿಯಲ್ಲಿ ತಾವೇ ಹೋಗಿ ಕೂತುಬಿಟ್ಟರು. ಪಕ್ಷ ಮತ್ತು ಸರ್ಕಾರದ ಮಧ್ಯೆ ಇದ್ದ ವ್ಯತ್ಯಾಸವೆಂಬುದು ಆ ಕ್ಷಣದಲ್ಲಿಯೇ, ನೆಹರೂ ಅವರ ಒಂದು ಅವಿವೇಕದ ನಡೆಯಿಂದ ಅಳಿಸಿ ಹೋಯಿತು. ಅದಕ್ಕೂ ಮುಂಚೆ ತಮ್ಮ ಸರ್ಕಾರದ ಕಾರ್ಯವೈಖರಿಯನ್ನು ಮೇಲಿಂದ ಮೇಲೆ ಟೀಕಿಸುವ ಜನರೇ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿರುವುದನ್ನು ಗಮನಿಸಿದ ನೆಹರೂ, ಹೀಗೆ ಮುಂದುವರಿದರೆ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರು. ನೆಹರೂ ಅವರ ಈ ಪರಿಯ ಅಸಮಾಧಾನಕ್ಕೆ ಕಾರಣವಾಗಿದ್ದ ನಾಯಕರಾದರೂ ಯಾರು ಅಂದಿರಾ? ಅವರೇ ಪುರುಷೋತ್ತಮ ದಾಸ್ ಟಂಡನ್. ಬಿ.ಸಿ. ರಾಯ್ ಮತ್ತು ಸಂಪೂರ್ಣಾನಂದ. ದುರಾದೃಷ್ಟಕ್ಕೆ, ಅವತ್ತು ನೆಹರೂಗೆ ಕಿವಿ ಹಿಂಡಿ ಬುದ್ಧಿ ಹೇಳಲು ಪಟೇಲರು ಬದುಕಿರಲಿಲ್ಲ.
ತನ್ನ ವಿರುದ್ಧ ಮಾತನಾಡುವವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ 'ಕೆಲಸ'ವನ್ನು ಆನಂತರವೂ ನೆಹರೂ ಮುಂದುವರಿಸಿದರು. ಅದರ ಮುಂದುವರಿದ ಭಾಗವೇ 1959ರಲ್ಲಿ ಇಂದಿರಾಗಾಂಧಿಯನ್ನು ಪಕ್ಷದ ಅಧ್ಯಕ್ಷೆಯೆಂದು ನೇಮಕ ಮಾಡಿದ್ದು. ಮುಂದೆ 1967ರಲ್ಲಿ ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ದಯನೀಯ ಸೋಲಾಯಿತು. ಆ ಸಂದರ್ಭದಲ್ಲಿ, ನೆಹರೂ ಮತ್ತು ಇಂದಿರಾಗಾಂಧಿಯ ಸರ್ವಾಧಿಕಾರದ ವಿರುದ್ಧ ಪಕ್ಷದ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಕೇಳಬೇಕೆಂದು ಒತ್ತಾಯಿಸಿದರು. ಆದರೆ, ಇಂದಿರಾಗಾಂಧಿ ಯಾರ ಮಾತಿಗೂ ಕೇರ್ ಮಾಡಲಿಲ್ಲ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಪಕ್ಷದ ಮುಖಂಡರು 'ಅಶಿಸ್ತಿ'ನ ಕಾರಣ ನೀಡಿ, 1969ರ ನವೆಂಬರ್ 12ರಂದು ಇಂದಿರಾಗಾಂಧಿಯನ್ನೇ ಪಕ್ಷದಿಂದ ಉಚ್ಛಾಟಿಸಿದರು. ಅವತ್ತಿನ ಕಾಲಕ್ಕೆ ಸಿಪಿಐನ ಬಾಹ್ಯ ಬೆಂಬಲ ಪಡೆದು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದ್ದ ಇಂದಿರಾಗಾಂಧಿ, ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಮುಖಂಡರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲಿಲ್ಲ. ಬದಲಿಗೆ, ಪಕ್ಷವನ್ನೇ ಒಡೆದು ಬಿಟ್ಟರು. ಆ ಕ್ಷಣದಿಂದಲೇ ಪ್ರಮುಖ ಹುದ್ದೆಯಲ್ಲಿ ಕೂತವರ ವಿರುದ್ಧ ಮಾತಾಡುವವರನ್ನು ಕುತ್ತಿಗೆ ಅದುಮಿ ಸುಮ್ಮನಿರಿಸುವ ಕೆಲಸವೂ ಕಾಂಗ್ರೆಸ್‌ನಲ್ಲಿ ವಿದ್ಯುಕ್ತವಾಗಿ ಶುರುವಾಯಿತು. ಮುಂದೆ, ಕಾಂಗ್ರೆಸ್‌ನಲ್ಲಿ ನಡೆದದ್ದು ಏನೆಂಬುದನ್ನು ವಿವರಿಸಿ ಹೇಳಬೇಕಿಲ್ಲ. ಇಂದಿರಾಗಾಂಧಿಯವರನ್ನು ಹಾಡಿ ಹೊಗಳುವುದು, ಅವರ ಆದೇಶಗಳನ್ನು ಮರುಮಾತಿಲ್ಲದೆ ಪಾಲಿಸುವುದು ಕಾಂಗ್ರೆಸ್ಸಿಗರ ಕಾಯಕವಾಯಿತು. 'ಇಂದಿರಾ ಅಂದರೆ ಇಂಡಿಯಾ. ಇಂಡಿಯಾ ಅಂದರೆ ಇಂದಿರಾ' ಎಂಬ ಅರ್ಥವಿಲ್ಲದ, ವ್ಯಕ್ತಿ ಪೂಜೆಗೆ ಉದಾಹರಣೆ ಎನ್ನಬಹುದಾದ ಘೋಷಣೆ ಕೇಳಿಬಂದದ್ದೇ ಆಗ.
ಒಂದು ರೀತಿಯಲ್ಲಿ ಕಾಂಗ್ರೆಸ್‌ನ ಹಳೆಯ ತಲೆಗಳೇ ನಂಬಲಾಗದಂಥ ಘಟನೆಯೊಂದು 1998ರಲ್ಲಿ ನಡೆದು ಹೋಯಿತು. ಏನೆಂದರೆ, ನೆಹರೂ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಅವರೇ ಸೀತಾರಾಂ ಕೇಸರಿ. ಈ ಸಂದರ್ಭದಲ್ಲಿ ಒಟ್ಟಾರೆ ಸ್ಥಿತಿಯನ್ನು ಖ್ಯಾತ ಪತ್ರಕರ್ತ, ಅಂಕಣಕಾರ ಹರೀಶ್ ಖಾರೆ ವಿವರಿಸುವುದು ಹೀಗೆ: ಸೀತಾರಾಂ ಕೇಸರಿಯವರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರಲ್ಲ; ಅದು ನಿಜವಾಗಿ ರಾಜಕೀಯ ರಂಗದ ಇತಿಹಾಸದಲ್ಲಿ ದಾಖಲಾಗಿ ಉಳಿಯಬೇಕಾದ ಘಟನೆ. ಏಕೆಂದರೆ, ಒಂದು ಪಕ್ಷದ ಅಧ್ಯಕ್ಷನಾಗಿ ನೇಮಕವಾಗಲು ಆ ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಹಕ್ಕಿದೆ ಎಂಬ ಸಂವಿಧಾನದ ಉಲ್ಲೇಖ ನಿಜವಾಗಿ ಹೋದ ಸಂದರ್ಭ ಅದು. ಹಾಗೆ ಸ್ವಯಂ ಶಕ್ತಿಯಿಂದಲೇ ಮಹತ್ವದ ಹುದ್ದೆ ತಲುಪಿದವರನ್ನು ತುಂಬ ಗೌರವದಿಂದ ಕಾಣಬೇಕಿತ್ತು. ಆದರೆ ಅಂಥ ಕೆಲಸ ಕಾಂಗ್ರೆಸ್ಸಿಗರಿಂದ ನಡೆಯಲೇ ಇಲ್ಲ. ಪಕ್ಷದ ನೀತಿ-ನಿಲುವುಗಳ ವಿಷಯದಲ್ಲಿ, ಕೆಲವು ಕಾಂಗ್ರೆಸ್ ಮುಖಂಡರ ವಿಷಯದಲ್ಲಿ ಸೀತಾರಾಂ ಕೇಸರಿಯವರು ಬಿಗಿ ನಿಲುವು ತಳೆದರೆಂಬ ಒಂದೇ ಕಾರಣಕ್ಕೆ ಅವರನ್ನು ಮುಲಾಜಿಲ್ಲದೆ ಕುರ್ಚಿಯಿಂದ ಇಳಿಸಲಾಯಿತು. ಹೀಗೆ ಖಾಲಿಯಾದ ಹುದ್ದೆಗೆ ಬಂದು ಕೂತವರೇ ಸೋನಿಯಾಗಾಂಧಿ. ಈ ಮೊದಲು ಇಂದಿರಾ ಗಾಂಧಿಯವರ ಬಗ್ಗೆ ಇದ್ದಂಥ ಭಯ, ಭಕ್ತಿ, ಗೌರವವೇ ಸೋನಿಯಾ ಬಗ್ಗೆಯೂ ಹಲವು ಕಾಂಗ್ರೆಸ್ಸಿಗರಿಗೆ ಇದೆ. ಅಷ್ಟೇ ಅಲ್ಲ, ಸೋನಿಯಾ ನಂತರ ಯಾರು ಎಂಬ ಪ್ರಶ್ನೆಗೆ ಅವರು ಸಂಕೋಚವಿಲ್ಲದೆ ರಾಹುಲ್ ಗಾಂದಿಯವರ ಕಡೆಗೆ ಕೈ ತೋರಿಸುತ್ತಾರೆ. ಪ್ರಿಯಾಂಕ ಗಾಂಧಿ ಕೂಡ ನಮ್ಮ ನಾಯಕಿ ಎಂದು ಹೇಳುತ್ತಾರೆ.
ವಾಸ್ತವ ಹೀಗಿದ್ದರೂ, 'ಜೀ ಹುಜೂರ್‌' ಸಂಸ್ಕೃತಿಯ ಹಿಂದೆ ಬಹುಸಂಖ್ಯಾತ ಕಾಂಗ್ರೆಸ್ಸಿಗರು ಇದ್ದಾರೆಂಬುದು ನಿಜವಾದರೂ, ಯಜಮಾನ ಸಂಸ್ಕೃತಿಯ ವಿರುದ್ಧ ಬಂಡಾಯದ ಧ್ವನಿಗಳು ಹಲವು ಸಂದರ್ಭಗಳಲ್ಲಿ ಜೋರಾಗಿಯೇ ಕೇಳಿಸಿವೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಭಿನ್ನಮತವೆಂಬುದು ಸ್ಫೋಟಗೊಳ್ಳಲು ಅನುಕೂಲಕರ ಸಂದರ್ಭವೇ ದಕ್ಕಿಲ್ಲ. ಈ ಮಾತಿಗೆ ಉದಾಹರಣೆಯಾಗಿ ಮತ್ತೆ ನೆಹರೂ ಅವರ ದರ್ಬಾರಿನ ಸಂದರ್ಭದಲ್ಲಿ ನಡೆದ ಘಟನೆಯನ್ನೇ ವಿವರಿಸಬಹುದು.
1949ರ ಅಕ್ಟೋಬರ್ 7 ರಂದು, ಕಾಂಗ್ರೆಸ್ ಪಕ್ಷ ಸೇರಲು ಆರ್‌ಎಸ್‌ಎಸ್ ಸದಸ್ಯರಿಗೆ ಅನುಮತಿ ನೀಡಬೇಕು ಎಂಬ ತೀರ್ಮಾನವನ್ನು ಕಾಂಗ್ರೆಸ್ ಕಾರ್ಯಕಾರಿ ಸಮತಿಯಲ್ಲಿ ಕೈಗೊಳ್ಳಲಾಯಿತು. ಈ ನಿರ್ಣಯದ ಪರವಾಗಿಸರ್ದಾರ ಪಟೇಲ್ ಅವರ ಬೆಂಬಲಿಗರೂ, ನಿರ್ಣಯದ ವಿರುದ್ಧವಾಗಿ ನೆಹರೂ ಅವರ ಬೆಂಬಲಿಗರೂ ಇದ್ದರು. ಆ ಸಂದರ್ಭದಲ್ಲಿ ಮುಂದೊಮ್ಮೆ ಉತ್ತರಪ್ರದೇಶದ ಸಚಿವರಾಗಿ ನೇಮಕವಾದ ಎ.ಜಿ.ಖೇರ್, ನೆಹರೂ ಬೆಂಬಲಿಗರಿಗೆ ಹೀಗೆಂದು ಪ್ರಶ್ನೆ ಕೇಳಿದ್ದರು: ಆರ್ಯ ಸಮಾಜ ಹಾಗೂ ಜಮಾತೆ-ಉಲ್-ಉಲೇಮಾದ ಸದಸ್ಯರಿಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ನೀಡಬಹುದು ಅಂದಮೇಲೆ, ಅಂಥದೇ ಕೆಲಸವನ್ನು ಆರ್‌ಎಸ್‌ಎಸ್ ಸದಸ್ಯತ್ವದ ವಿಷಯದಲ್ಲಿ ಏಕೆ ಮಾಡಬಾರದು? ಅವರ ಮೇಲೆ ಯಾವುದೇ ತೆರನಾದ ಆರೋಪಗಳು ಇಲ್ಲದಿದ್ದರೂ, ಅವರಿಗೆ ಪಕ್ಷದ ಸದಸ್ಯತ್ವ ನಿರಾಕರಿಸುವುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ಗಾಂಧೀಜಿ ಬದುಕಿದ್ದಕೆ, ಇಂಥ ನಿರ್ಧಾರವನ್ನು ಅವರೂ ಖಂಡಿಸುತ್ತಿದ್ದರು. ಗಾಂಧೀಜಿಯೇ ಒಪ್ಪದಂಥ ನಿರ್ಣಯವನ್ನು ಅದೇ ಗಾಂಧಿಯ ಶಿಷ್ಯರಾದ ನೆಹರೂ ಹೇಗೆ ಜಾರಿಗೊಳಿಸುತ್ತಾರೆ?
ನಂತರದ ದಿನಗಳಲ್ಲಿ ಖೇರ್ ಅವರಂತೆಯೇ ಮತ್ತೂ ಹಲವರು ನೆಹರೂ ಅವರ ನಿರ್ಧಾರವನ್ನು ಕಟುವಾಗಿ ಟೀಕಿಸಿದರು. ಆ ಸಂದರ್ಭದಲ್ಲಿ ತಕ್ಷಣವೇ ಮಾತು ಬದಲಿಸಿದ ನೆಹರೂ- 'ಆರ್‌ಎಸ್‌ಎಸ್‌ನ ಎಲ್ಲಾ ಸದಸ್ಯರಿಗೂ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಕೊಡುತ್ತೇನೆ. ಆದರೆ ಒಂದು ಷರತ್ತು. ಕಾಂಗ್ರೆಸ್ ಸೇರಬಯಸುವ ಆರ್‌ಎಸ್‌ಎಸ್ ಸದಸ್ಯರು, ಆರ್‌ಎಸ್‌ಎಸ್‌ನ ಸದಸ್ಯತ್ವವನ್ನು ಬಿಟ್ಟು, ಆ ನಂತರವೇ ಕಾಂಗ್ರೆಸ್‌ಗೆ ಬರಬೇಕು' ಎಂದರು! ಆದರೆ ಜಮಾತ್-ಉಲ್-ಉಲೇಮಾದ ಸದಸ್ಯರಿಗೆ ಮಾತ್ರ ಇಂಥ ಯಾವ ಷರತ್ತುಗಳೂ ಇರಲಿಲ್ಲ. ಅದರರ್ಥ ಇಷ್ಟೆ: 'ನಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವುದಾದರೆ ಕಾಂಗ್ರೆಸ್‌ಗೆ ಬಾ, ಇಲ್ಲವಾದರೆ ಬರಲೇಬೇಡ...'
ಇಂಥ ಸಂಸ್ಕೃತಿಯನ್ನು ಈಗಲೂ ಆಚರಿಸಿಕೊಂಡು, ಪಾಲಿಸಿಕೊಂಡು ಬಂದಿದೆ ಕಾಂಗ್ರೆಸ್. ಅಂಥ ಪಕ್ಷದೊಳಗಿದ್ದು ಬೇರೊಂದು ರಾಷ್ಟ್ರೀಯ ಪಕ್ಷಕ್ಕೆ 'ಬುದ್ಧಿ ಮಾತು' ಹೇಳುವ ದರ್ದು ಕಾಂಗ್ರೆಸ್‌ನವರಿಗಾದರೂ ಏನಿದೆ?    

- ನಿರ್ಮಲಾ ಸೀತಾರಾಮನ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.