ನಮ್ಮ ದೇಶಕ್ಕೆ ಎಂಥ ನಾಯಕನ ಅಗತ್ಯವಿದೆ?

ಈ ದೇಶದಲ್ಲಿ ಹುಳುಕಿದೆ ಎಂಬುದನ್ನು ಪತ್ತೆಹಚ್ಚಲು ನಮಗೇನು ಅತೀಂದ್ರಿಯ ಜ್ಞಾನ ಬೇಕಿಲ್ಲ. ಪ್ರತಿದಿನವೂ ಕೆಟ್ಟ ಸುದ್ದಿಗಳು ನಮ್ಮ ಕಿವಿಯನ್ನು ತಾಕುತ್ತವೆ. ರುಪಾಯಿಯಿಂದ ಆರ್ಥಿಕತೆಯವರೆಗೆ, ಅಪರಾಧದಿಂದ ಭ್ರಷ್ಟಾಚಾರದವರೆಗೆ ಬರೀ ಹತಾಶೆಗೆ ತಳ್ಳುವ ಸುದ್ದಿಗಳ ಸುಳಿಯಲ್ಲೇ ನಾವು ಸಿಕ್ಕಿಬಿದ್ದಿದ್ದೇವೆ.
ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಭಾರತವನ್ನು ಅವಮಾನದ ಪರದೆಯ ಹಿಂದೆ ಕೂಡಿಸಿಬಿಟ್ಟಿವೆ. ಭ್ರಷ್ಟಾಚಾರ ನಮ್ಮ ದೇಶದಲ್ಲಿ ಯಾವ ಪರಿ ಹರಡಿದೆಯೆಂದರೆ ಸಮಾಜವನ್ನು, ನಮ್ಮ ಆತ್ಮಸಾಕ್ಷಿಯನ್ನು ನಮ್ಮ ಅರಿವಿಲ್ಲದೇ ಅದು ಕಲುಷಿತಗೊಳಿಸುತ್ತಾ ಹೊರಟಿದೆ. ಸಾವಿರಾರು ಜನರ ಪ್ರಾಣಗಳು ಅಪಾಯಕ್ಕೆ ಸಿಲುಕುತ್ತವೆ ಎನ್ನುವುದು ಗೊತ್ತಿದ್ದರೂ ಕೂಡ ಹಣದಾಸೆಗೆ ಬಿದ್ದು ದೋಷಪೂರಿತ ಏರ್ ಟ್ರಾಫಿಕ್ ಕಂಟ್ರೋಲರ್ಗಳ ನಿರ್ಮಾಣಕ್ಕೆ ಅಂಗೀಕರಿಸುವವರಿಗೇನನ್ನಬೇಕು? ಇದು ಸಾಲದೆಂಬಂತೆ ಕುಸಿಯುತ್ತಿರುವ ರುಪಾಯಿ ಮೌಲ್ಯ ನಮ್ಮ ಆತ್ಮವಿಶ್ವಾಸವನ್ನೂ ಕುಸಿಯುವಂತೆ ಮಾಡುತ್ತಿದೆ. ಹತಾಶೆ ಮತ್ತು ಅಸಹಾಯಕತೆ ಜನತೆಯಲ್ಲಿ ಹೆಚ್ಚುತ್ತಲೇ ಇದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ನಮ್ಮ ಆಡಳಿತ ವರ್ಗ ಹಗರಣ ಮತ್ತು ಭ್ರಷ್ಟಾಚಾರಗಳನ್ನು ನಡೆಸುತ್ತಾ, ಕಾನೂನು ಮತ್ತು ಶಿಕ್ಷೆಗೆ ಕ್ಯಾರೆ ಮಾಡದೆ ನಿಶ್ಚಿಂತೆಯಿಂದ ಮುನ್ನಡೆದಿದೆ. ತಪ್ಪಿತಸ್ಥರಿಗೆ ಕ್ಲೀನ್ ಚಿಟ್ ಕೊಡುವ ಸರ್ಕಾರ, ನಿಷ್ಟಾವಂತ ಅಧಿಕಾರಿಗಳನ್ನು ದಂಡಿಸುತ್ತಿದೆ. ತನ್ನ ಹುಚ್ಚು ನಡೆಯ ಮೂಲಕ 'ನಾವು ನಿಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಮುಖಕ್ಕೆ ಹೊಡೆದಂತೆ ಆ ಅಧಿಕಾರಿಗಳಿಗೆ ಮತ್ತು ನಮಗೆ ಹೇಳುತ್ತಿದೆ. ಎಲ್ಲವೂ ಕೈಜಾರಿಹೋಗಿವೆಯೇನೋ ಎಂದು ಭಾಸವಾಗುವ ಪರಿಸ್ಥಿತಿ ಈಗ. ಇಂಥ ಸಮಯದಲ್ಲಿ ಈ ದೇಶದಲ್ಲಿರುವುದು ನಿಜಕ್ಕೂ ದೌರ್ಭಾಗ್ಯಕರ ಪರಿಸ್ಥಿತಿಯೇನೋ ನಿಜ, ಆದರೆ ಎಲ್ಲವನ್ನು ಮತ್ತೆ ಸರಿದಾರಿಗೆ ತರುವ, ಭಾರತಕ್ಕೆ ಹೊಸ ಚಹರೆಯನ್ನು ಕೊಡುವುದಕ್ಕೂ ಈ ಸಮಯದಲ್ಲಿ ಸಾಧ್ಯ ಎನ್ನುವುದೂ ಅಷ್ಟೇ ಸತ್ಯ. ಆತ್ಮವಿಶ್ವಾಸದ ಹೊಸ ಅವತಾರದಲ್ಲಿ ಭಾರತ ಎದ್ದುನಿಲ್ಲಬೇಕು ಎಂದರೆ ಅದನ್ನು ಮುನ್ನಡೆಸುತ್ತಿರುವವರ ಚಹರೆಗಳು ಬದಲಾಗಬೇಕು. ಅದಕ್ಕಾಗಿ ನಾವು ನಮ್ಮ ಮುಂದಿನ ನಾಯಕರನ್ನು ಆರಿಸುವಾಗ ಎಚ್ಚರಿಕೆ ವಹಿಸಬೇಕಿದೆ. ಉದ್ಯಮಿ ರತನ್ ಟಾಟಾ ಇತ್ತೀಚೆಗೆ ಹೇಳಿದ್ದರು-"ಈ ದೇಶಕ್ಕೆ ನಿಯಂತ್ರಣ, ನಾಯಕತ್ವ ಮತ್ತು ನಿರ್ದೇಶನದ ತುರ್ತು ಅವಶ್ಯಕತೆಯಿದೆ. ಏಕೆಂದರೆ ನಮಗೆ ಗೊತ್ತಿದೆ, ಈಗ ನಾವು ಬದಲಾಗದಿದ್ದರೆ, ಪರಿಸ್ಥಿತಿ ಮತ್ತಷ್ಟು ಹಳ್ಳಹಿಡಿಯುತ್ತದೆ ಎಂದು".
ಎಲ್ಲಾ ಪಕ್ಷಗಳೂ ಈಗ ತಮ್ಮ ಸೈನಿಕರನ್ನು 'ಮಿಷನ್ 2014'ಕ್ಕೆ ಸನ್ನದ್ಧಗೊಳಿಸುತ್ತಿವೆ. ಹಾಗಾಗೇ ನಾವೂ ಕೂಡ ನಮ್ಮ ಸಿದ್ಧತೆಗಳನ್ನು ಶುರುಮಾಡಬೇಕಿದೆ. ಅತ್ಯುನ್ನತ ಸ್ಥಾನದಲ್ಲಿ ಕುಳಿತಿರಬೇಕಾದ ವ್ಯಕ್ತಿಯ ಅರ್ಹತೆಯೇನಿರಬೇಕೆಂದು ನಾನು ಬಯಸುತ್ತೇನೆ, ನನ್ನ ಆಯ್ಕೆಗಳೇನು, ಆದ್ಯತೆಯೇನು ಎನ್ನುವುದನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಬಯಸುತ್ತೇನೆ. ಹಾಗಂತ ಅದು ಯಾರು ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸುತ್ತಾರೆ, ಮಾಧ್ಯಮಗಳ ಮುಂದೆ ಆರ್ಭಟಿಸುತ್ತಾರೆ ಎನ್ನುವುದಕ್ಕೆ ಸಂಬಂಧಿಸಿದ್ದಂತೂ ಅಲ್ಲ. ದೇಶಕ್ಕೇನು ಬೇಕು, ಯಾವುದರ ಅಗತ್ಯವಿದೆ ಎನ್ನುವುದರ ಬಗ್ಗೆಯಷ್ಟೆ.
ನಾವು ಈಗ ಎಲ್ಲಿಗೆ ಬಂದು ತಲುಪಿದ್ದೇವೋ ಅದಕ್ಕೆ ಈಗಿರುವ ಕಳಂಕಿತ ಸರ್ಕಾರದ ಪಾಲು ಅಧಿಕವಿದೆ. ಹಾಗೆ ನೋಡಿದರೆ ಮನಮೋಹನ್ ಸಿಂಗ್ ಅವರ ತಂಡದಲ್ಲಿರುವವರೆಲ್ಲ ದಡ್ಡರೇನಲ್ಲ. ಒಬ್ಬರಿಗಿಂತ ಒಬ್ಬರು ಬುದ್ಧಿವಂತರು(ಶಿಕ್ಷಣದಲ್ಲಿ). ಪ್ರಧಾನಿ ಮನಮೋಹನ್ ಸಿಂಗ್ ಅವರು ಆಕ್ಸ್ಫರ್ಡ್- ಕೇಂಬ್ರಿಜ್ನಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ಅರ್ಥಶಾಸ್ತ್ರಜ್ಞ. ಇನ್ನು ಪಿ. ಚಿದಂಬರಂ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಮ್ಬಿಎ ಪದವಿ ಪಡೆದವರ. ಜೈರಾಮ್ ರಮೇಶ್ ಐಐಟಿ-ಎಮ್ಐಟಿಯ ವಿದ್ಯಾರ್ಥಿಯಾಗಿದ್ದವರು. ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಕೂಡ ಆಕ್ಸ್ಫರ್ಡ್ನಲ್ಲಿ ಓದಿದವರು. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಗವರ್ನರ್ ರಘುರಾಮ್ ರಾಜನ್ ಐಐಟಿ-ಐಐಎಮ್(ಎ)-ಎಮ್ಐಟಿಯಂನಿಂದ ತಯಾರಾಗಿ ಬಂದವರು. ವಿದ್ಯಾವಂತ ರಾಜಕಾರಣಿಗಳು ಎಲ್ಲರಿಗಿಂತಲೂ ಭಿನ್ನವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ವಿದ್ಯಾವಂತ ನಾಯಕರನ್ನು ಆರಿಸಿದರೆ ಯಶಸ್ಸು ಮತ್ತು ಸುಧಾರಣೆ ಖಂಡಿತವಾಗಿ ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ಇವರನ್ನೆಲ್ಲ ನೋಡಿ ಮಾಯವಾಗಿದೆ.
ಹಾಗಾಗೆ ಅವರ ವಿದ್ಯಾರ್ಹತೆಗಿಂತಲೂ, ಅವರ ದೃಷ್ಟಿ ಹೇಗಿದೆ ಎನ್ನುವುದಕ್ಕೆ ನಾವು ಹೆಚ್ಚಿನ ಪ್ರಾಮುಖ್ಯ ಕೊಡಬೇಕು. ಕೊರತೆ/ ತಪ್ಪುಗಳಿವೆ ಎನ್ನುವುದನ್ನು ಒಪ್ಪಿಕೊಂಡು ಅವುಗಳನ್ನು ಸರಿಪಡಿಸಲು ಸರಿಯಾದ ಪರಿಹಾರ ಮುಂದಿಡುವ ನಾಯಕನನ್ನು ನಾವು ಆರಿಸಬೇಕೇ ಹೊರತು, ಅದ್ಧೂರಿ ಮೇಕಪ್ ಮಾಡಿ ಕಲೆಯನ್ನು ಮುಚ್ಚಿಹಾಕುವ ವ್ಯಕ್ತಿಗಳನ್ನಲ್ಲ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮನಸ್ಸಿರುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸರಿಯಾದ ಮಾರ್ಗಸೂಚಿಗಳನ್ನು ತಯಾರಿಸಬಲ್ಲ, ಜಾರಿ ಬಿದ್ದ ಆರ್ಥಿಕತೆಯನ್ನು ಮತ್ತೆ ಎತ್ತಿ ಸರಿಯಾಗಿ ಕೂಡಿಸಬಲ್ಲ ನಾಯಕ ನಮಗೆ ಬೇಕು. ತಮ್ಮ ವಿರೋಧಿಗಳನ್ನು ದೂಷಿಸುವುದನ್ನಷ್ಟೇ ಕಾಯಕ ಮಾಡಿಕೊಳ್ಳದೆ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಾಯಕ ನಮಗೆ ಬೇಕು. ತಿರಸ್ಕಾರಕ್ಕಿಂತ ಹೆಚ್ಚಾಗಿ ವಿಶಾಲದೃಷ್ಟಿಯನ್ನು ಪ್ರದರ್ಶಿಸುವ ನಾಯಕ ನಮಗೆ ಬೇಕು.
ಎರಡನೆಯದಾಗಿ, ಕೇವಲ ಐದು ವರ್ಷ ಅಧಿಕಾರದಲ್ಲಿರಬೇಕು ಎಂದು ಹಾತೊರೆಯುವವನಿಗಿಂತ ದೇಶವನ್ನು ಕಟ್ಟಲು ಹಪಾಹಪಿಸುವ ನಾಯಕನನ್ನು ಗುರುತಿಸಿ. ಓಲೈಕೆ ಮಾಡುವವರು ನಮಗೆ ಬೇಡ, ಉತ್ತಮ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯಪೂರ್ಣ ವಾತಾವರಣ ನಿರ್ಮಿಸುವಂಥ ನಾಯಕ ನಮಗಿರಲಿ. ಗುಣಾತ್ಮಕ ಪರಿಸರದಲ್ಲಿ ವ್ಯಕ್ತಿಯ ಕ್ರಿಯಾಶೀಲತೆ ಹೆಚ್ಚು ಅಭಿವ್ಯಕ್ತವಾಗುತ್ತದೆ. ಅಂಥ ಉತ್ತಮ ಪರಿಸರವನ್ನು ನೀಡಬಲ್ಲ, ಯುವಕರಲ್ಲಿ ಕನಸುಗಳನ್ನು ಬಿತ್ತಬಲ್ಲ ನಾಯಕ ನಮ್ಮವನಾಗಲಿ. ಉಚಿತವಾಗಿ ಲ್ಯಾಪ್ಟಾಪ್ಗಳನ್ನು ವಿತರಿಸುವುದನ್ನು ಅಥವಾ ರೇಷನ್ ನೀಡುವುದನ್ನು ಅಭಿವೃದ್ಧಿಯೆನ್ನಲಾಗದು. ಅದರಿಂದ ನಾವೆಲ್ಲ ಸರ್ಕಾರದ ಮೇಲೆ ಹೆಚ್ಚು ಅವಲಂಬಿತರಾಗುತ್ತಾ ಹೋಗುತ್ತೇವಷ್ಟೆ. ನಾವು ಸ್ವತಂತ್ರರಾಗುವಂಥ ಯೋಜನೆಗಳನ್ನು ಸೃಷ್ಟಿಸುವ ದೂರದೃಷ್ಟಿ ನಾಯಕನಿಗಿರಬೇಕು. ನಮ್ಮ ದೇಶದ ವಿದ್ಯಾವಂತ ಯುವ ಸಮೂಹವನ್ನು, ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಹೆಚ್ಚು ಉದ್ಯೋಗ ಮತ್ತು ಬೆಳವಣಿಗೆಗೆ ಕಾರಣವಾಗುವ ನಾಯಕ ನಮಗೆ ಬೇಕು.
ಜಾಗತಿಕ ಶೃಂಗ ಸಭೆಗಳಲ್ಲಿನ ಗ್ರೂಪ್ ಫೋಟೋಗಳನ್ನು ನೀವೆಂದಾದರೂ ಗಮನವಿಟ್ಟು ನೋಡಿದ್ದೀರಾ? ಅಲ್ಲಿ ನಾಯಕರನ್ನು ಯಾವ ಸಾಲಿನಲ್ಲಿ ಕೂರಿಸಬೇಕು ಎನ್ನುವ ಬಗ್ಗೆ ಬಳಕೆಯಾಗುವ ಮಾನದಂಡವೇನು ಗೊತ್ತೆ? ಅದನ್ನು ಸಭೆ ನಡೆಸುವ ದೇಶ ನಿರ್ಧರಿಸುತ್ತದೆ. ತನ್ನ ಮಿತ್ರರನ್ನು ಮಧ್ಯದಲ್ಲಿ ನಿಲ್ಲಿಸಿ ಉಳಿದವರನ್ನು ಬದಿಗೆ ಅಥವಾ ಹಿಂದೆ ನಿಲ್ಲಿಸಲಾಗುತ್ತದೆ. ಚೀನಾ ಮತ್ತು ಅಮೆರಿಕದ ನಾಯಕರೂ ಪ್ರತಿಬಾರಿಯೂ ಮುಂದಿನ ಸಾಲಿನಲ್ಲಿ ಮತ್ತು ಮಧ್ಯದಲ್ಲಿ ನಿಂತರೆ, ಭಾರತದ ಪ್ರಧಾನ ಮಂತ್ರಿಗಳನ್ನು ಯಾವಾಗಲೂ ಎರಡನೇ ಸಾಲಿನಲ್ಲಿಯೇ ನಿಲ್ಲಿಸಲಾಗುತ್ತದೆ. ನಮ್ಮನ್ನು ಜಗತ್ತು ಪರಿಗಣಿಸುವ ಪರಿ ಇದು!
2014ರ ಚುನಾವಣೆ ಎದುರಾಗುವುದಕ್ಕಿಂತ ಮುಂಚೆ ನಾವು ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು: ಹತ್ತು ವರ್ಷದ ನಂತರ ಪ್ರಪಂಚದಲ್ಲಿ ಯಾವ ಸ್ಥಾನದಲ್ಲಿ ನಿಂತಿರಬೇಕೆಂದು ನಾವು ಬಯಸುತ್ತೇವೆ? ಈಗಿರುವ ಸ್ಥಾನವೇ ನಮಗೆ ಸಾಕೇ? ಅದರಲ್ಲೇ ಇರಬೇಕೇ? ಯೋಚಿಸಿ ಮತ ನೀಡದಿದ್ದರೆ, ನಾವು ಈಗಿರುವ ಪರಿಸ್ಥಿತಿಯಲ್ಲೇ ಮುಂದುವರಿಯಲಿದ್ದೇವೆ. ಆಗ ಕೆಲವರಿಗೇ ಲಾಭವಾದರೆ, ನಮ್ಮಂಥ ಕೋಟ್ಯಂತರ ಜನರು ನಷ್ಟದಲ್ಲೇ ಬದುಕು ಸವೆಸುತ್ತೇವೆ. 'ಮಿಷನ್ 2014' ಅಧಿಕಾರ ನಿರ್ಣಯ ದಿನವಷ್ಟೇ ಆಗಿರದೆ, ಭಾರತವನ್ನು ಮತ್ತೆ ತಲೆಯೆತ್ತಿ ನಿಲ್ಲುವಂತೆ ಮಾಡುವುದಕ್ಕೆ ಮುನ್ನುಡಿ ಬರೆಯುವ ದಿನವಾಗಬೇಕು. ಭಾರತದ ಚಹರೆಯನ್ನು ಬದಲಿಸುವ ಸಮಯ ಬಂದಿದೆ.
- ನೇಹಾ ಖಟೋರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


