'ನಾನು ಏನಂತ ಯೋಳ್ಳಿ ಮೈಲಾರಿ. ನಂದೇ ಹಾಸಿ ವೋದ್ಕಂಡು ಮಲಗಷ್ಟು ಅದೆ. ಸಿಎಂ ಕ್ಯಾಂಡೇಟು ಅಂತ ಎಲ್ಲಾರೂವೆ ರೈಲು ಹತ್ಸಿದ್ರು. ಎಲೆಕ್ಸನ್ನಾಗೆ ಸೋತ್ಮೇಕೆ ಮಂತ್ರೀನೂ ಆಗಕ್ಕೆ ಆಯ್ತಾಯಿಲ್ಲ. ನಮ್ ಪ್ರಾಬ್ಲಮ್ಮು ಯಾರ್ಗಂತ ಯೋಳಾದು' ಅಂತೇಳಿ ಪರಮೇಸ್ವರ್ರು ವೊಳಿಕ್ಕೆ ವೋದ್ರು.
'ಜಾಗಟೆ ನಿಮ್ ಕೈನಾಗದೆ ಹೆಂಗೆ ಬೇಕಾದ್ರೂ ಬಾರಿಸ್ಕಳಿ. ಸಂಖ ನಿಮ್ ಬಾಯ್ನಾಗೆ ಐತೆ ಹೆಂಗಾದ್ರೂ ವೂದ್ಕಳಿ ನಮ್ ತಾತನ ಮನೆ ಗಂಟು ಏನರ ವೋಬೇಕಾ ?' ಅಂತೇಳಿ ಮೈಲಾರಿ ಸಿಕ್ಕಾಪಟ್ಟೆ ಕ್ವಾಪ್ದಾಗೆ ಯೋಳ್ಬುಟ್ಟು ಕೈ ಪಕ್ಸದ ಆಪೀಸ್ನಿಂದ ಆಚ್ಗೆ ಬಂದ.
'ಇದ್ಯಾಕಲಾ ಮೈಲಾರಿ ಸ್ಯಾನೆ ಸಿಟ್ಟು ಮಾಡ್ಕಂಬುಟ್ಟಿದ್ದೀಯ ? ಏನಾಯ್ತು ? ಆಪೀಸ್ನಾಗೆ ಯಾರಾದ್ರೂವೆ ಏನರ ಅಂದ್ರಾ ?' ಅಂತ ಬಾಗ್ಲಾಗೆ ಅಡ್ಡ ಸಿಕ್ಬುಟ್ಟು ಕೈ ಪಕ್ಸದ ಪ್ರೆಸ್ಡೆಂಟ್ರು ಪರಮೇಸ್ವರ್ರು ಕೇಳುದ್ರು.
'ನಿಮ್ಮುನ್ನೇ ನೋಡಣಾ ಅಂತ ವೋಗಿದ್ದೆ ಕಣೇಳಿ. ನಿಮ್ ಲೀಡ್ರುಸು ವೊಳ್ಗಡೆ ಕೂತ್ಕಂಡಿದ್ರು. ಸರ್ಕಾರ ಯಾಕೋ ಏನೋ ಸಿಕ್ಕಾಪಟ್ಟೆ ಸ್ಲೋ ಆಬುಟ್ಟದೆ. ಕೆಲ್ಸ ಕಾರ್ಯ ನಡೀತಾ ಇಲ್ಲ. ಹಿಂಗೆ ಬಸವನ ಹುಳು ಥರುಕ್ಕೆ ಆಡಳ್ತ ನಡ್ಸುದ್ರೆ ಹೆಂಗೆ ? ಅಂತ ಅವ್ರುತವ ಕೇಳ್ದೆ '.
'ಮುಖ್ಯಮಂತ್ರಿಗಳು ಮಾತೇ ಆಡಕ್ಕಿಲ್ಲ. ಮಂತ್ರಿಗ್ಳು ಯತ್ಲಾಗೆ ವೋಯ್ತಾರೆ ಅಂಬೋದೇ ತಿಳ್ಯಾಕಿಲ್ಲ. ವೊಟ್ನಾಗೆ ಸರ್ಕಾರುಕ್ಕೆ ಸೌಂಡೇ ಇಲ್ಲ ಅಂತೀನಿ'.
'ಅದುನ್ನ ನಿಮ್ ಲೀಡ್ರುಸುತವ ಯೋಳಿದ್ರೆ, ವೊಸ ಸರ್ಕಾರ ಹಂಗೆ, ಹಿಂಗೆ ಅಂತ ಪುಂಗಿ ವೂದ್ತರೆ. ಅದುಕ್ಕೆ ಏನರ ಮಾಡ್ಕಳಿ. ಜಾಗಟೆನಾದ್ರೂ ಬಾರಿಸ್ಕಳಿ, ಸಂಕನಾದ್ರೂ ವೂದ್ಕಳಿ ಅಂತೇಳಿ ಬಂದ್ಬುಟ್ಟೆ ನೋಡಿ. ನೀವಾದ್ರೂ ವಸಿ ಅವ್ರುಗೆ ತಿಳುವಳ್ಕೆ ಯೋಳಿ ಮತ್ತೆ' ಅಂದ ಮೈಲಾರಿ.
'ನಾನು ಏನಂತ ಯೋಳ್ಳಿ ಮೈಲಾರಿ. ನಂದೇ ಹಾಸಿ ವೋದ್ಕಂಡು ಮಲಗಷ್ಟು ಅದೆ. ಸಿಎಂ ಕ್ಯಾಂಡೇಟು ಅಂತ ಎಲ್ಲಾರೂವೆ ರೈಲು ಹತ್ಸಿದ್ರು. ಎಲೆಕ್ಸನ್ನಾಗೆ ಸೋತ್ಮೇಕೆ ಮಂತ್ರೀನೂ ಆಗಕ್ಕೆ ಆಯ್ತಾಯಿಲ್ಲ. ನಮ್ ಪ್ರಾಬ್ಲಮ್ಮು ಯಾರ್ಗಂತ ಯೋಳಾದು' ಅಂತೇಳಿ ಪರಮೇಸ್ವರ್ರು ವೊಳಿಕ್ಕೆ ವೋದ್ರು.
'ವೋಟ್ನಾಗೆ ಸರ್ಕಾರ ಐತೋ ಇಲ್ಲೋ ಅನ್ನೋದೇ ತಿಳೀತಾಯಿಲ್ಲ. ವೊಂತರಾ ಸೈಲೆನ್ಸರ್ ಹಾಕ್ಕಂಡಿರೋ ಮೋಟ್ರು ಗಾಡಿ ಥರ ಆಗೋಗದೆ. ಸೌಂಡೇ ಇಲ್ಲ' ಅಂತ ಬೈಕಂಡು ಮೈಲಾರಿ ವೋಯ್ತಾಯಿದ್ದಂಗೆ ಮಂತ್ರಿಗ್ಳು ಮೂರ್ನಾಲ್ಕು ಜನ ಅಡ್ಡ ಸಿಕ್ಕುದ್ರು.
ಹೆಲ್ತು ಮಂತ್ರಿ ಖಾದರ್ರು, ಕಾಡು ಮಂತ್ರಿ ರಮಾನಾಥು, ಕೋಆಪರೇಟೀವ್ ಮಂತ್ರಿ ಪ್ರಸಾದು, ಆಮೇಕೆ ಮನೆ ಮಂತ್ರಿ ಅಂಬ್ರೀಸು ಕೈನಾಗೆ ಬುಕ್ಕು ಪೆನ್ನು ಮಡಿಕ್ಕಂಡು ವೋಯ್ತಾಯಿದ್ರು.
'ಮಂತ್ರಿಗ್ಳು ಸವಾರಿ ಎತ್ಗೋ ವೊಂಟಂಗದೆ. ನಿಮ್ಮುನ್ನ ನೋಡ್ತಾಯಿದ್ರೆ ಸರ್ಕಾರ್ವೇ ದಾರಿನಾಗೇ ನಡ್ಕಂಡು ವೋದಂಗೆ ಆಗದೆ. ನೋಡಿ ಕಣ್ಣು ತಂಪಾಯ್ತು ಬುಡ್ರಪ್ಪ. ಆದ್ಸರಿ, ಎತ್ಲಾಗೆ ಪಯಾಣ' ಅಂದ ಮೈಲಾರಿ.
'ಟ್ಯೂಸನ್ಗೆ ಕಣ್ಲಾ ಟ್ಯೂಸನ್ಗೆ' ಅಂದ್ರು ಮಂತ್ರಿಗ್ಳು. 'ವೋ, ಮನೆಪಾಠುಕ್ಕಾ ? ಅದ್ಯಾಕೆ ಸಿವನೇ ಇದ್ಕಿದ್ದಂಗೆ ? ಏನಾಯ್ತು ? ನಿಮ್ಗೆ ಏನರ ಬಡ್ಕಂತಾ ?' ಅಂತ ಮೈಲಾರಿ ಕೇಳ್ದ.
'ಇದೇನ್ಲಾ ಹಿಂಗೆ ಕೇಳ್ತೀಯ. ನಮ್ ಪಾರ್ಟಿ ಪ್ರೆಸ್ಡೆಂಟ್ರು ಯೋಳಿಲ್ವಾ ? ಮಂತ್ರಿಗುಳ್ಗೆ ಎಕ್ಸಾಮು ಮಡುಗ್ತೀನಿ ಅಂತ. ಅದುಕ್ಕೆ ಮನೆಪಾಠುಕ್ಕೆ ವೋಯ್ತಾಯಿರಾದು. ಸಂದಾಕಿ ವೋದ್ಕಂಡು ರ್ಯಾಂಕು ತಕ್ಕಬೇಕು ಅಂತ ಡಿಸೈಡು ಮಾಡ್ಕಂಬುಟ್ಟೀದ್ದೀವಿ. ಅದುಕ್ಕೆ ಮನೆಪಾಠುಕ್ಕೆ ವೋಯ್ತಾಯಿರಾದು' ಅಂದ್ರು ಮಂತ್ರಿಗ್ಳು.
'ಅಯ್ಯೋ ನಿಮ್ ಮನೆ ಕಾಯ್ವಾಗ ಅವ್ರು ಯೋಳಿರಾದೇನು ? ನೀವು ಮಾಡಕ್ಕೆ ವೊಂಟಿರಾದೇನು ? ಮಂತ್ರಿಗ್ಳು ಕೆಲ್ಸ ಕಾರ್ಯ ಹೆಂಗೆ ಮಾಡ್ತಾವ್ರೆ ಅಂತ ನೋಡಕ್ಕೆ ಎಕ್ಸಾಮು ಮಡುಗ್ತೀನಿ ಅಂತ ಪ್ರೆಸ್ಡೆಂಟ್ರು ಯೋಳವ್ರೆ. ನೀವು ನೋಡುದ್ರೆ ಬುಕ್ಕು, ಪೆನ್ನು ಕೈನಾಗೆ ಹಿಡ್ಕಂಡು ಮನೆಪಾಠುಕ್ಕೆ ವೊಂಟಿದ್ದೀರಿ. ವಿಧಾನಸೌಧುಕ್ಕೆ ವೋಗಿ ಕ್ಯಾಮೆ ನೋಡೋಗಿ' ಅಂದ ಮೈಲಾರಿ.
'ಅದ್ಸರಿ, ನಿಮ್ಗೆ ಪಾಠಾವ ಮಾಡಾದು ಯಾರು ?' ಅಂತ ಮೈಲಾರಿ ಕೇಳ್ದ. 'ಇದೇನ್ಲಾ ಹಿಂಗಂತಿ ? ನಮ್ ಪಕ್ಸುದಾಗೆ ಪ್ರೊಫೆಸರ್‌ಗಳ್ಗೆ ಬರ ಐತಾ ? ಬಿಕೆಸಿ ಅವ್ರೆ. ಬೋ ಸಂದಾಕಿ ಪಾಠ ಮಾಡ್ತಾರಂತೆ. ಅದುಕ್ಕೆ ಅವ್ರು ಮನೆತವ ವೋಯ್ತಾಯಿರಾದು' ಅಂದ್ರು ಮಂತ್ರಿಗ್ಳು.
'ವೋ, ಚಿಂತಕರ ಚಾವಡಿಯ ಚೇರ್ಮನ್ರು. ನಿಮ್ ಪಾರ್ಟಿ ಥಿಂಕ್ ಟ್ಯಾಂಕು. ವೋಗಿ ವೋಗಿ ಟ್ಯಾಂಕ್ನಾಗೆ ಇರೋದ್ನ ನಿಮ್ ತಲ್ಯಾಗೆ ತುಂಬಿ ಕಳುಸ್ತರೆ. ಆಮ್ಯಾಲೆ ವಿಧಾನಸೌಧುಕ್ಕೆ ವೋಗೋ ದಾರಿ ಮರ್ತೋಯ್ತದೆ. ಆಗ ನಂಗೆ ಪೋನಾಕಿ ಬಂದು ದಾರಿ ತೋರುಸ್ತೀನಿ. ವಿಧಾನಸೌಧದಗಂಟ ಬುಟ್ಟೋಯ್ತೀನಿ. ವೋಕೆ, ಬಾಯ್' ಅಂತೇಳಿ ಮೈಲಾರಿ ವೊಂಟ. ಮಂತ್ರಿಗ್ಳು ಪಾಠುಕ್ಕೆ ವೋದ್ರು.
-ಕೆ.ವಿ.ಪ್ರಭಾಕರ್
prabhukolar@yahoo.com