ರಾಜ್ಯ ಬಿಜೆಪಿ ನಾಯಕರ ಧೋರಣೆ ಸುಧಾರಿಸಿಲ್ಲ
ಇನ್ನೇನು ಬಿಜೆಪಿ ಸೇರಿಯೇ ಬಿಟ್ಟರು. ಬಿಜೆಪಿ ಜತೆ ಕೆಜೆಪಿ ವಿಲೀನವಾಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಿರ್ಧಾರ ಬದಲಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಎನ್ಡಿಎಗೆ ಬೆಂಬಲ ಸೂಚಿಸಿ ರಾಜ್ಯದಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಹೇಳಿದರು. ಅವರು ತಮ್ಮ ನಿರ್ಧಾರ ಬದಲಿಸಲು ಕಾರಣವೇನು? ಎನ್ಡಿಎ ಬೇಕು ಎನ್ನುವವರಿಗೆ ಬಿಜೆಪಿ ಏಕೆ ಬೇಡ? ಇದಕ್ಕೆ ಕಾರಣರಾರು? ಎಂಬ ಪ್ರಶ್ನೆಗಳಿಗೆ ಅವರು ಬುಲೆಟ್ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.
-ಬಿಜೆಪಿ ಸೇರುವ ಸೂಚನೆ ನೀಡಿದ ನೀವು ನಂತರದಲ್ಲಿ ಎನ್ಡಿಎಗೆ ಹೊರಗಿನಿಂದ ಬೆಂಬಲ ನೀಡುವ ನಿರ್ಧಾರ ಕೈಗೊಂಡಿದ್ದೇಕೆ?
ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದ ಬಿಜೆಪಿ ಗೆಲ್ಲಿಸುವುದು ಕಷ್ಟ ಎಂಬುದು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೊತ್ತಾದ ಬಳಿಕವಾದರೂ ರಾಜ್ಯದ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ, ಆ ರೀತಿ ಕಾಣುತ್ತಿಲ್ಲ. ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಿನಿಂದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ದಿಟ್ಟ ಹೋರಾಟ ನಡೆಸಬೇಕು ಎಂಬ ಮನಸ್ಥಿತಿ ಆ ಪಕ್ಷದ ರಾಜ್ಯ ಮುಖಂಡರಿಗೆ ಇಲ್ಲ. ಹೀಗಾಗಿ ನನ್ನಿಂದ ಅವರಿಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಎನ್ಡಿಎಗೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.
-ಯಡಿಯೂರಪ್ಪ ಬಿಜೆಪಿಗೆ ಬರಬೇಕು ಎಂದು ಬಿಜೆಪಿಯ ಬಹುತೇಕರ ಅಭಿಪ್ರಾಯ. ಹೀಗಿದ್ದರೂ ನಿಮಗೆ ಆ ಪಕ್ಷದಲ್ಲಿ ಗೌರವ ಸಿಗುವುದಿಲ್ಲ ಎಂದು ಹೇಗೆ ಹೇಳುತ್ತೀರಿ?
ಯಡಿಯೂರಪ್ಪ ಬಿಜೆಪಿಗೆ ಬರಬೇಕು ಎನ್ನುವವರು ಈ ಕುರಿತು ನಿರ್ಧಾರ ಕೈಗೊಳ್ಳುವ ಮುನ್ನವೇ ರಾಜ್ಯ ಪದಾಧಿಕಾರಿಗಳ ನೇಮಕಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅವರ ಮನಸ್ಸಿನಲ್ಲಿರುವ ಭಾವನೆ ಅರ್ಥವಾಗುತ್ತದೆ. ಅದರ ಬದಲು ಎಲ್ಲರೂ ಒಟ್ಟಾಗಿ ಹೋಗಬೇಕು. ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದಿದ್ದರೆ ನನ್ನ ನಿರ್ಧಾರಕ್ಕೆ ಮುನ್ನವೇ ಪದಾಧಿಕಾರಿಗಳ ನೇಮಕಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ.
-ಬಿಜೆಪಿಯ ಬಹುತೇಕ ರಾಜ್ಯ ನಾಯಕರು ಯಡಿಯೂರಪ್ಪ ಪಕ್ಷಕ್ಕೆ ಬರಬೇಕು ಎನ್ನುತ್ತಿದ್ದಾರೆ. ಆದರೂ ನಿಮ್ಮ ಆರೋಪಕ್ಕೆ ಕಾರಣವೇನು?
ನನ್ನ ಬಗ್ಗೆ ಹೇಳಿಕೆ ಕೊಡುತ್ತಿರುವುದಕ್ಕೂ ಆ ಪಕ್ಷದ ಒಳಗೆ ನಡೆಯುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಆರೋಪ ಹೊತ್ತಿರುವ ಯಡಿಯೂರಪ್ಪ ಅವರು ಇರುವುದರಿಂದ ಪಕ್ಷ ಸಂಘಟನೆ ಕಷ್ಟವಾಗುತ್ತಿದೆ ಎಂದರು. ಹೀಗಾಗಿ ನಾನು ಹೊರಹೋದೆ. ನಂತರವಾದರೂ ಅವರು ಪಕ್ಷ ಕಟ್ಟಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಈಗ ಪಕ್ಷ ಬಲಪಡಿಸಲು ನಾನು ಬೇಕು ಎನ್ನುತ್ತಿದ್ದಾರೆಯೇ ಹೊರತು ನನ್ನ ಬಗ್ಗೆ ಗೌರವದಿಂದ ಅಲ್ಲ. ಇಂಥವರ ಜತೆ ಹೇಗಿರಲಿ?
-ನಿಮ್ಮ ಮೇಲೆ ಅಭಿಮಾನ ಇಲ್ಲದೇ ಇದ್ದರೆ ಬಿಜೆಪಿ ರಾಜ್ಯ ನಾಯಕರು ಈ ವಿಚಾರದಲ್ಲಿ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಅಗತ್ಯವೇನಿತ್ತು?
ನಾವು ಸಾಕಷ್ಟು ಕರೆದೆವು. ರಾಷ್ಟ್ರೀಯ ನಾಯಕರೂ ಪ್ರಯತ್ನಿಸಿದರು. ಆದರೂ ಯಡಿಯೂರಪ್ಪ ಬರಲಿಲ್ಲ ಎಂದು ಜನರಲ್ಲಿ ನನ್ನ ಬಗ್ಗೆ ತಪ್ಪು ತಿಳಿವಳಿಕೆ ಮೂಡಿಸಲು ಈ ರೀತಿ ಮಾಡುತ್ತಿದ್ದಾರೆ ಅಷ್ಟೆ. ನಾನು ಬರಲೇಬೇಕು ಎಂಬ ಪ್ರಾಮಾಣಿಕತೆ ಅವರಲ್ಲಿ ಕಾಣಿಸುತ್ತಿಲ್ಲ.
-ಇಷ್ಟಕ್ಕೆಲ್ಲಾ ಕಾರಣ ಯಾರು? ಯಾರ ಬಗ್ಗೆ ನೀವು ಆರೋಪ ಮಾಡುತ್ತೀರಿ?
ಅವರ ಹೆಸರು ಹೇಳಲು ಇಚ್ಛೆಪಡುವುದಿಲ್ಲ. ಅಧಿಕಾರ ದಾಹ, ಸ್ವಾರ್ಥಕ್ಕಾಗಿ ಯಾರೋ ಒಬ್ಬರು ನರೇಂದ್ರ ಮೋದಿ ಅಲೆಯಲ್ಲಿ ನಾನು ಸಂಸದನಾಗಿ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಬೇಕು ಎಂಬ ಯೋಚನೆ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ರಾಜ್ಯದಲ್ಲಿ ಹೆಚ್ಚು ಜನ ಸಂಸದರು ಗೆಲ್ಲಬೇಕು ಎಂದು ಅವರಿಗೆ ಅನಿಸಿಯೇ ಇಲ್ಲ.
-ಹಾಗಿದ್ದರೆ ಬಿಜೆಪಿ ಸೇರುವ ಮತ್ತು ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದೀರಿ?
ರಾಜ್ಯದ ಬಿಜೆಪಿ ನಾಯಕರಲ್ಲಿ ಪ್ರಾಮಾಣಿಕತೆ ಕಾಣಿಸುತ್ತಿಲ್ಲ. ಈ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಪಕ್ಷದಲ್ಲಿ ಸಾಕಷ್ಟು ಕಹಿ ಅನುಭವಗಳಾಗಿವೆ. ಆ ಪಕ್ಷದ ನಾಯಕರ ವರ್ತನೆ ನೋಡಿದಾಗ ಅಂತಹ ಅನುಭವ ಪುನರಾವರ್ತನೆ ಆಗುವುದಿಲ್ಲ ಎನ್ನುವ ವಾತಾವರಣ ಕಾಣಿಸುತ್ತಿಲ್ಲ. ಹೀಗಾಗಿ ಬಿಜೆಪಿ ಸೇರುವ ಮತ್ತು ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳುವುದಿಲ್ಲ.
-ಯಡಿಯೂರಪ್ಪ ಅವರು ಬಿಜೆಪಿಗೆ ಸೇರಲು ಅವರ ಬೆಂಬಲಿಗರು ಅಡ್ಡಿಯಾಗಿದ್ದಾರೆ ಎಂಬ ಆರೋಪವಿದೆಯಲ್ಲಾ?
ಈ ಆರೋಪ ಸುಳ್ಳು. ಬೆಂಬಲಿಗರು ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ. ಆದರೆ, ಅವರ ಹಿತರಕ್ಷಣೆಗೆಂದು ನಾನಾಗಿಯೇ ಬಿಜೆಪಿ ಸೇರುವ ನಿರ್ಧಾರದಿಂದ ಹಿಂದೆ ಸರಿದೆ. ಬಿಜೆಪಿಯವರಿಗೆ ನಾನು ಬೇಕು, ನನ್ನ ಬೆಂಬಲಿಗರು ಬೇಡ ಎಂದರೆ ಅರ್ಥವೇನು? ಬೆಂಬಲಿಗರನ್ನು ತೊರೆದು ನಾನು ಮಾತ್ರ ಬಿಜೆಪಿ ಸೇರಿದರೆ ಅವರ ಭವಿಷ್ಯವೇನು? ಇಷ್ಟರ ಮಧ್ಯೆಯೂ ನಾನು ಬಿಜೆಪಿ ಸೇರಿದರೆ ಬೆಂಬಲಿಗರಿಗೆ ಗೌರವ ಸಿಗುತ್ತದೆ. ನನಗೆ ಕೆಲಸ ಮಾಡಲು ಮುಕ್ತ ಅವಕಾಶ ಸಿಗುತ್ತದೆ ಎಂದು ಅನಿಸುವುದಿಲ್ಲ.
-ನರೇಂದ್ರ ಮೋದಿ ಅಥವಾ ರಾಜನಾಥ್ ಸಿಂಗ್ ಅವರು ನೇರವಾಗಿ ನಿಮ್ಮನ್ನು ಸಂಪರ್ಕಿಸಿ ನಿಮಗೆ ಎಲ್ಲಾ ಗೌರವ ಮತ್ತು ಸಹಕಾರ ಕೊಡುತ್ತೇವೆ ಎಂದರೆ ನಿಲುವು ಬದಲಿಸುತ್ತೀರಾ?
ನನ್ನ ಪರಿಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡುತ್ತೇನೆ. ನಾನು ಬಿಜೆಪಿಗೆ ಬರುವುದು ನಿಮ್ಮ ಪಕ್ಷದ ರಾಜ್ಯದ ಕೆಲವು ನಾಯಕರಿಗೆ ಇಷ್ಟವಿಲ್ಲ. ಹೀಗಿದ್ದರೂ ನಾನು ಬಂದರೆ ನನಗೆ ಮಾತ್ರವಲ್ಲ, ನಿಮ್ಮವರಿಗೂ ಮುಜುಗರವಾಗುತ್ತದೆ. ಹೇಗೂ ಎನ್ಡಿಎಗೆ ಬೆಂಬಲ ನೀಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಪರವೂ ಕೆಲಸ ಮಾಡುತ್ತೇನೆ. ಬಲವಂತ ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ.
-ರಾಜ್ಯದಲ್ಲಿ ಬಿಜೆಪಿ ಬೇಡ ಎಂದ ಮೇಲೆ ಎನ್ಡಿಎಯನ್ನು ಹೇಗೆ ಒಪ್ಪಿಕೊಳ್ಳುತ್ತೀರಿ?
ರಾಜ್ಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ಜತೆ ಹೊಂದಾಣಿಕೆಗೆ ಸಿದ್ಧ ಎಂದು ಎರಡು ತಿಂಗಳ ಹಿಂದೆಯಷ್ಟೇ ಹೇಳಿದೆ. ಆದರೆ, ಕಾರ್ಯಕರ್ತರ ಭಾವನೆ ಎನ್ಡಿಎ ಜತೆ ಹೋಗಬೇಕು ಎಂಬುದಾಗಿದೆ. ಸಂಕಷ್ಟದಲ್ಲಿರುವ ದೇಶಕ್ಕೆ ಉತ್ತಮ ನಾಯಕನನ್ನು ಕೊಡಬೇಕು ಎಂಬ ಉದ್ದೇಶದಿಂದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಕೈಜೋಡಿಸಬೇಕು ಎಂದು ನಿರ್ಧರಿಸಿದ್ದೇನೆ.
-ನಿಮ್ಮ ಬೆಂಬಲ ನರೇಂದ್ರ ಮೋದಿಗೋ? ಬಿಜೆಪಿಗೋ?
ಸ್ವಾತಂತ್ರ್ಯಾನಂತರ ಇದುವರೆಗೆ ಒಬ್ಬ ವ್ಯಕ್ತಿಗೆ ಇಷ್ಟೊಂದು ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದ್ದನ್ನು, ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಕೂಗನ್ನು ಈ ಮೊದಲು ನಾನು ಕೇಳಿಲ್ಲ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವ್ಯಕ್ತವಾಗಿದ್ದ ಜನ ಬೆಂಬಲಕ್ಕಿಂತಲೂ ಹೆಚ್ಚು ಮಂದಿ ಮೋದಿ ಪರ ಇದ್ದಾರೆ. ಬಿಜೆಪಿಗಿಂತಲೂ ಮೋದಿ ಗಾಳಿ ಜೋರಾಗಿದೆ.
-ರಾಜ್ಯ ಬಿಜೆಪಿ ನಾಯಕರ ಮೇಲೆ ನಿಮಗೆ ಇಷ್ಟೊಂದು ಬೇಸರ ಏಕೆ? ಹೀಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಹೇಗೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ?
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದೂವರೆ ವರ್ಷಕ್ಕೆ ಗಣಿ ಮಾಲಿಕರೊಂದಿಗೆ ಸೇರಿ ನನ್ನ ಪಕ್ಷದವರೇ ಅಧಿಕಾರದಿಂದ ಇಳಿಸಲು ನೋಡಿದರು. ನಂತರ ಲೋಕಾಯುಕ್ತರ ವರದಿಯಲ್ಲಿ ನನ್ನ ಹೆಸರು ಪ್ರಸ್ತಾಪವಾಗುವಂತೆ ನೋಡಿಕೊಂಡರು. ಹೀಗಾಗಿ ಅವರ ಬಗ್ಗೆ ನನಗೆ ಬೇಸರ ಇದ್ದೇ ಇದೆ. ಆದರೆ, ಈಗ ನಮ್ಮ ಮುಂದಿರುವುದು ದೇಶದ ಪ್ರಗತಿ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಗೌರವದ ಪ್ರಶ್ನೆ. ದೇಶಕ್ಕೊಬ್ಬ ಉತ್ತಮ ನಾಯಕ ಸಿಗಬೇಕು. ಅದು ನರೇಂದ್ರ ಮೋದಿಯಿಂದ ಸಾಧ್ಯ. ಹೀಗಾಗಿ ದೇಶಕ್ಕೆ ಒಳ್ಳೆಯದಾಗಬೇಕು ಎಂಬ ದೃಷ್ಟಿಯಿಂದ ಹಿಂದಿನದೆಲ್ಲವನ್ನೂ ಮರೆತು ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇನೆ.
-ಬಿಜೆಪಿ ಸೇರುವ ವಿಚಾರದಲ್ಲಿ ನಿಮ್ಮ ಅಂತಿಮ ಅಭಿಪ್ರಾಯ ಏನು?
ಯಡಿಯೂರಪ್ಪ ಇಲ್ಲದ ಬಿಜೆಪಿ ರಾಜ್ಯದಲ್ಲಿ ಯಾವ ಸ್ಥಿತಿಯಲ್ಲಿರುತ್ತದೆ ಎಂಬುದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೊತ್ತಾಗಿದೆ. ಆದರೂ ಆ ಪಕ್ಷದ ರಾಜ್ಯ ನಾಯಕರ ಸ್ಥಿತಿ ಬದಲಾಗಿಲ್ಲ. ಯಡಿಯೂರಪ್ಪ ಇಲ್ಲದೆಯೂ ಪಕ್ಷ ಕಟ್ಟುತ್ತೇವೆ, ಅಧಿಕಾರಕ್ಕೆ ಬರುತ್ತೇವೆ. ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಅದಕ್ಕೆ ಅವಕಾಶ ಸಿಗಬಾರದು ಎಂಬುದು ಅವರ ಅಭಿಪ್ರಾಯ. ಅಂತಹ ನಾಯಕರಿಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ.
-ಪ್ರದೀಪ್ ಕುಮಾರ್ ಎಂ, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

