-ಅದ್ಯಾಕೆ ಎಲ್ಲಾ ಹೊಸ ಹೀರೋಯಿನ್ಗಳಿಗೂ ನಿಮ್ಮ ಥರಾ ಹುಚ್ಚಿ ರೋಲ್ ಮಾಡುವ ಹುಚ್ಚು?
ಹುಚ್ಚಿ ಪಾತ್ರ ಮಾಡೋದು ಸುಲಭ. ಹೆಂಗೆ ಬೇಕಾದ್ರೂ ಆಕ್ಟ್ ಮಾಡ್ಬಹುದು. ಅಭಿನಯ ಮಾಡ್ದೇ ಇದ್ರೂ ನಡೆಯುತ್ತೆ ಅಂದ್ಕೊಂಡಿರ್ಬೇಕು, ಅದಕ್ಕೆ.
-ತುಂಬಾ ಜನ ನಿಮ್ಮನ್ನ ಮಿನುಗುತಾರೆ ಅಂತ ಹೊಗಳಿದರೂ, ಕೆಲವರು ನಿಮ್ಮದು ಓವರ್ ಆ್ಯಕ್ಟಿಂಗ್ ಅಂತಾರಲ್ಲ?
ಸಿನಿಮಾ ನಟಿ ಎಂದ ಮೇಲೆ ಜನ ಹೊಗಳ್ತಾರೆ, ಬೈತಾರೆ. ಮಿನುಗುತಾರೆಯಂಥ ಸ್ಟಾರ್ ಆದಮೇಲೆ ಅಂಥವರೂ ಇದ್ದೇ ಇರ್ತಾರೆ ಏನೂ ಮಾಡೊಕಾಗಲ್ಲ.
-ಪೂಜಾಗಾಂಧಿ ಈಗ 'ಅಭಿನೇತ್ರಿ' ಅಂತ ಸಿನಿಮಾ ಮಾಡ್ತಿದಾರೆ, ಎಲ್ಲರೂ ಅದು ನಿಮ್ಮದೇ ಕಥೆ ಅಂತಿದಾರೆ?
ಈ ವಿಷಯದಲ್ಲಿ ಅವರಿಗೆ ಅಭಿನೇತ್ರಿ ಜಯಂತಿ ಅವರು ಸ್ಫೂರ್ತಿ ಅನ್ಸತ್ತೆ. ಅವರನ್ನ ಅನುಕರಿಸಿದರೆ, ಅಭಿನಯ ಬಾರದೆ ಇದ್ದವರೂ ಅಭಿನಯ ಶಾರದೆ ಅನ್ನಿಸಿಕೊಳ್ಳಬಹುದಲ್ಲ.
-ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ನ ಈಗಿನ ಕಾಲದವರು ಇನ್ನೂ ನೆನಪಿಸ್ಕೊತಾರಲ್ಲ?
ಈಗೀಗ 'ಕಲ್ಪನಾಜೀ ಕೆ ಸಾರೀ ಏಕ್ ಬಿಲಾಂಗ್ ಛೋಟೀ ಕರ್ದೇ' ಅನ್ನೋ ನಟಿಯರೇ ಜಾಸ್ತಿ ಆಗಿದಾರಲ್ಲ
ಅದಕ್ಕಿರಬೇಕು.
- ಕಲ್ಪನಂಗೆ ಐಶ್ವರ್ಯ ಬಂದ್ರೆ ಏನ್ ಮಾಡ್ತಿದ್ರು?
ಹಂಗೆಲ್ಲಾ ಬರೋ ಚಾನ್ಸೇ ಇರ್ಲಿಲ್ಲ. ಹುಚ್ಚಿ, ದೆವ್ವದ ಪಾತ್ರಗಳಿಗೆ ನಾನು ಸೂಟ್ ಆಗೋದ್ರಿಂದ, ಈಗ ಐಶ್ವರ್ಯಾ ಮೈಮೇಲೆ ಕಲ್ಪನಾ ಬರಬಹುದು ಅಷ್ಟೆ.
('ಕಲ್ಪನಾ' ಸಂದರ್ಶನ)
ಒಮ್ಮೆ ಭೇಟಿ ಕೊಡಿ
ದಿನಕ್ಕೊಂದರಂತೆ ಮಾರುಕಟ್ಟೆಗೆ ಬರುತ್ತಿರುವ ಸಣ್ಣಕಾರುಗಳನ್ನು ನೋಡಿದರೆ ಇಂದು ಸಣ್ಣ ಕಾರು ಖರೀದಿಸುವ ವಿಷಯದಲ್ಲಿ ಆಯ್ಕೆಯೇ ದೊಡ್ಡ ತಲೆನೋವು. ನೀವೂ ಕೂಡ ಸಣ್ಣ ಕಾರು ಖರೀದಿಯ ಯೋಚನೆ ಮಾಡುತ್ತಿದ್ದರೆ ಇಲ್ಲಿನ ಕೆಲವು ವೆಬ್ಸೈಟ್ಗಳು ನಿಮಗೆ ಸಹಾಯ ಮಾಡಬಹುದು.
bit.ly/mf4m4y
bit.ly/18L0DOy
bit.ly/17Ri7f5
bit.ly/19ndcSc
bit.ly/1fm73dW
ಹರಿ-ಕಥೆ
ಅರವತ್ತು ವರ್ಷ ವಯಸ್ಸಾಗಿದ್ದರೂ ತನ್ನ ಗಂಡ ಬೇರೆ ಹೆಂಗಸರನ್ನು ಕದ್ದು ನೋಡುವ ಚಾಳಿ ಬಿಟ್ಟಿಲ್ಲ ಎಂಬುದು ಖೇಮು ಹೆಂಡತಿಯ ಅಸಮಾಧಾನ. ಸರಿ, ನೀವು ತೀರ್ಥಯಾತ್ರೆಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬನ್ನಿ. ಆಮೇಲಾದ್ರೂ ಒಳ್ಳೆಯ ಬುದ್ಧಿ ಬರುತ್ತೆ ಅಂತ ಖೇಮು ಹೆಂಡ್ತಿ ಅವನನ್ನ ಹಿರಿಯ ನಾಗರಿಕರ ತಂಡವೊಂದರ ಜೊತೆ ತೀರ್ಥಯಾತ್ರೆಗೆ ಕಳಿಸಿದಳು. ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಹೊರಟಿದ್ದ ಅವರ ಗುಂಪಿಗೆ ಒಬ್ಬ ಲೋಕಲ್ ಗೈಡ್ ಇದ್ದ. ಆ ಗುಂಪಿನಲ್ಲಿ ಖೇಮು ಕೂಡ ಹೊರಟ. ಅವರೆಲ್ಲರೂ ಬೆಟ್ಟದ ತಿರುವಿನ ರಸ್ತೆಯಲ್ಲಿ ಯಾತ್ರೆ ಹೋಗುವಾಗ ಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರ ಕಡೆ ಖೇಮು ಕದ್ದು ನೋಡುತ್ತಿದ್ದುದು ಗೈಡ್ನ ಗಮನಕ್ಕೆ ಬಂತು. ತಕ್ಷಣವೇ ಯಾತ್ರೆ ನಿಲ್ಲಿಸಿದ ಗೈಡ್ ಖೇಮು ಕಡೆ ನೋಡುತ್ತಾ, ಎಲ್ಲರನ್ನೂ ಉದ್ದೇಶಿಸಿ ಹೇಳಿದ 'ನೋಡಿ ನೀವೆಲ್ಲಾ ಬಂದಿರೋದು ದೇವರ ದರ್ಶನಕ್ಕೆ, ದಾರಿಯಲ್ಲಿ ಅಕ್ಕಪಕ್ಕದಲ್ಲಿ ಯಾರಾದರೂ ಹೆಂಗಸರು ಕಂಡರೆ ಒಮ್ಮೆ ಕಣ್ಣುಮುಚ್ಚಿ 'ಹರಿ ಓಂ' ಎಂದು ಜಪಿಸಿ ಮುಂದೆ ನೋಡುತ್ತಾ ಸಾಗಬೇಕು' ಎಂದು ಎಚ್ಚರಿಕೆ ಕೊಟ್ಟ. ಸರಿ ಸ್ವಲ್ಪ ಹೊತ್ತು ಯಾತ್ರೆ ಹೀಗೇ ಮುಂದುವರೆಯಿತು. ಅಷ್ಟರಲ್ಲಿ ಗುಂಪಿನಲ್ಲಿದ್ದ ವಯಸ್ಸಾದವರೊಬ್ಬರು ನಡೆದೂ ನಡೆದೂ ಸುಸ್ತಾಗಿ ದೇವರನ್ನು ನೆನಪಿಸಿಕೊಂಡು 'ಹರಿ ಓಂ' ಎಂದರು. ಖೇಮು ಸಡನ್ನಾಗಿ ಕೂಗಿದ 'ಎಲ್ಲಿ, ಎಲ್ಲಿ, ಎಲ್ಲಿ?'.
ಸ್ಕ್ಯಾಂಡಲ್ವುಡ್
ಚಿತ್ರರಂಗಕ್ಕೆ 100 ವರ್ಷ ತುಂಬಿದ ಸಂಭ್ರಮದಲ್ಲಿ ನಡೆಯುತ್ತಿರುವ ಚೆನ್ನೈ ಕಾರ್ಯಕ್ರಮದ ಅವ್ಯವಸ್ಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಕರ್ನಾಟಕದ ಜನ ಕೊಡೋ ಗೌರವನೇ ಸಾಕು, ಚೆನ್ನೈ ವೇದಿಕೆಯ ಮೇಲಿನ ಸನ್ಮಾನ ನಂಗೆ ಬೇಕಿಲ್ಲ ಎಂದು ನವರಸನಾಯಕ ಜಗ್ಗೇಶ್ ಹೇಳಿರುವುದು ಇದಕ್ಕೆ ಸಾಕ್ಷಿ. ಚೆನ್ನೈನಲ್ಲಿ ಕನ್ನಡದ 60 ಜನ ಸಾಧಕರಿಗೆ ಸನ್ಮಾನ ಮಾಡುವ ಈ ಕಾರ್ಯಕ್ರಮದಲ್ಲಿ ಕೊಡಬೇಕಾದವರಿಗೆ ಮರ್ಯಾದೆ ಕೊಡದೆ ಕೇವಲ ತಮಗೆ ಬೇಕಾದವರನ್ನು ಓಲೈಸುವ ಗೌರವಿಸುವ ಸಣ್ಣಬುದ್ಧಿಗಳು ಕೆಲಸ ಮಾಡಿ ಚಿತ್ರರಂಗದ ನಿಜವಾದ ದೊಡ್ಡ ಬುದ್ಧಿಗಳನ್ನು ಕಡೆಗಣಿಸಲಾಗಿದೆ. ಕೇವಲ ನಟ, ನಟಿಯರಷ್ಟೇ ಅಲ್ಲದೆ, ಛಾಯಾಗ್ರಹಣ ವಿಭಾಗದಲ್ಲಿ ಹಿರಿಯರಾದ ಸುಂದರನಾಥ್ ಸುವರ್ಣ ಅವರ ಹೆಸರನ್ನು ಕಡೆಯ ಕ್ಷಣದಲ್ಲಿ ಕಿತ್ತು ಹಾಕಿ ಜೆ.ಜಿ.ಕೃಷ್ಣ ಅವರನ್ನು ಪಟ್ಟಿಯಲ್ಲಿ ಸೇರಿಸಿರುವುದು ನಿಜಕ್ಕೂ ಇಲ್ಲಿನ ಅವ್ಯವಸ್ಥೆಗೆ ಸಾಕ್ಷಿ. ಪ್ರತಿಭೆ ಮತ್ತು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಎರಡೂ ವಿಷಯದಲ್ಲಿ ಸುವರ್ಣ ಮತ್ತು ಕೃಷ್ಣ ಯಾರು ಹೆಚ್ಚು ತೂಗುತ್ತಾರೆ ಎಂಬುದು ಚಿತ್ರರಂಗದ ಎಬಿಸಿಡಿ ಗೊತ್ತಿಲ್ಲದವರಿಗೂ ಗೊತ್ತು. ಇದು ಇಲ್ಲಿನವರ ಸಣ್ಣ ಬುದ್ಧಿಯಾದರೆ, ಇನ್ನು ಈ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡ ಚಿತ್ರರಂಗದ ಪರವಾಗಿ ಹಿರಿಯರಾದ ಪಾರ್ವತಮ್ಮ ರಾಜ್ಕುಮಾರ್ ಅವರ ಹೆಸರಾಗಲೀ, ಅಂಬರೀಷ್ ಅವರ ಹೆಸರಾಗಲೀ ಇಲ್ಲ. ಅಲ್ಲಿ ಮಿಂಚ್ತಾ ಇರೋದು ಕೇವಲ ಜಯಲಲಿತಾ. ಇಂಥದೊಂದು ಕಾಟಾಚಾರದ ಕಾರ್ಯಕ್ರಮಕ್ಕೆ ಹೋಗಿರುವ ಕನ್ನಡಿಗರಿಗೆ ಅಲ್ಲಿ ಇನ್ನೆಷ್ಟು ಮರ್ಯಾದೆ ಸಿಗುತ್ತದೆಯೋ ಕಾದು ನೋಡಬೇಕಿದೆ.
ಡಬ್ಕುಡಬಲ್ ತುದಾಂಡಲ್...
ಮೋದಿ ಮಾತಿನ ಧಾಟಿಗೆ ಏಟಟಟ...ಪಾಂಚ್ ಎಲ್ಲ ಸರಿಹೋಗಲ್ಲ, ಡಬ್ಕುಡಬಲ್ ತುದಾಂಡಲ್ಲೇ ಸರಿ, ಎನ್ನುವ ಅನಿಸಿಕೆಯಲ್ಲಿ ಎಕ್ಸ್ಕ್ಲೂಸಿವ್ ಮೋದಿ ಸಂದರ್ಶನ..
-ದೇಶದಲ್ಲಿ ಹಾದಿ ಬೀದೀಲಿ ಹೋಗೋರೆಲ್ಲ್ಲಾ ಮೋದಿ ಬಗ್ಗೆನೇ ಮಾತಾಡ್ತಿದಾರಲ್ಲ, ನೀವು ಇಷ್ಟ್ ಫೇಮಸ್ ಆಗಿದ್ ಹೆಂಗೆ?
ಭಾಯಿಯೋ ಔರ್ ಬೆಹನೋ..,
- ಸರ್ ಒಂದ್ ನಿಮಿಷ...ನೀವು ಸಂದರ್ಶನದಲ್ಲೂ ಭಾಷಣದ ತರಾನೇ ಮಾತಾಡ್ತೀರಪ್ಪ. ಪದ್ಮಭಾಷಣ ಅಂತ ಅವಾರ್ಡ್ ಕೊಡಬೇಕು ಅಂತ ನಿಮ್ಮ ವಿರೋಧಿಗಳು ಕಾಮೆಂಟ್ ಮಾಡಿಯಾರು. ಅದೆಲ್ಲ ಬೇಡ, ಚಿಕ್ಕದಾಗಿ ಈ ಮೋದಿ ಹವಾಗೆ ನಿಮ್ ಪ್ರಕಾರ ಏನು ಕಾರಣ ಅಂತ ಹೇಳಬಹುದಾ?
ಮೋದಿ ಅನ್ನೋ ಹೆಸರಲ್ಲೇ ಅಂಥ ತಾಕತ್ ಇದೆ ರೀ..ಆಗ ಡಾ. ಎಂ.ಸಿ.ಮೋದಿ ಅವರು ಜನರ ಕಣ್ಣು ತೆರೆಸಿದರು, ಈಗ ನಾನೂ ಜನರ ಕಣ್ಣು ತೆರೆಸ್ತಾ ಇದೀನಿ.
- ನಿಮಗೆ ರಾಜಕೀಯದಲ್ಲಿ ಇಷ್ಟು ಮನ್ನಣೆ ಸಿಗುತ್ತಿರೋ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಇಂದಿನ ಯುವಕರು ಸೀನಿಯರ್ ಸಿಟಿಜನ್ಸ್ಗೆ ಗೌರವ ಕೊಡ್ತಾ ಇಲ್ಲ ಅನ್ನೋ ಮಾತು ಸುಳ್ಳಾಗ್ತಿದೆ. ನೋಡಿ, ದೇಶದ ಎಲ್ಲಾ ಯುವಕರು, ಯುವಕ ರಾಹುಲ್ ಗಾಂಧಿ ಬಿಟ್ಟು ನಂಗೇ ಸಪೋರ್ಟ್ ಮಾಡ್ತಿದಾರೆ.
- ಸರಿ, ಸರಿ, ಅಧಿಕಾರಕ್ಕೆ ಬರೋಕೆ ಮುಂಚೇನೇ ಸಾಧನಾ ಸಮಾವೇಶ ಮಾಡುವಷ್ಟ್ ಫೇಮಸ್ ಆಗ್ಬಿಟ್ಟಿದೀರ ಬಿಡಿ. ಆದ್ರೆ, ನಮ್ ದೇಶದಲ್ಲಿ, ಈಗ ಇರೋ ಪ್ರೈಮ್ ಮಿನಿಸ್ಟರ್ ಮಾತೇ ಆಡಲ್ಲ, ಬರೋ ಪ್ರೈಮ್ ಮಿನಿಸ್ಟರ್(?) ಇರೋಬರೋದೆಲ್ಲಾ ಮಾತಾಡ್ತಾರೆ ಅಂತಾರೆ ಜನ. ನೀವೇನಂತೀರಿ?
ಜನ ಹಿಂಗೆ ಕಣ್ರೀ. ಮಾತಾಡದೆ ಇದ್ರೆ ಮೌನಮೋಹನ್ ಸಿಂಗ್ ಅಂತಾರೆ. ಮಾತಾಡಿದ್ರೆ ಮೋಡಿ ಮಾಡ್ತಾನೆ ಅಂತಾರೆ. ಸೀರಿಯಸ್ ವಿಷ್ಯ ಹೇಳುವಾಗ ಕಾಮಿಡಿ ಮಾಡ್ತಾರೆ, ಕಾಮಿಡಿ ಮಾಡಿದ್ರೆ ಸೀರಿಯಸ್ಸಾಗ್ ತಗೋತಾರೆ.
- ನಿಜ ನಿಜ. ನಿಮ್ಮ ಮಾತು ಕೇಳಿ ಜ್ಞಾಪಕಕ್ಕೆ ಬಂತು, ನೀವು ಪ್ರಧಾನಮಂತ್ರಿ ಆದ್ರೆ ಯಾರೋ ದೇಶ ಬಿಟ್ಟು ಹೋಗ್ತೀನಿ ಅಂದ್ರಂತೆ?
ಅವರಿಗೆ ನೊಬೆಲ್ ಪ್ರೈಜ್ ಬಂದ್ರೆ ನಾನೂ ದೇಶ ಬಿಟ್ಟು ಹೋಗ್ತೀನಿ ಅಂತ ಹೇಳ್ತಿದ್ದೆ, ಆದ್ರೆ ಏನ್ ಮಾಡೋದು ನಿಮ್ಗೇ ಗೊತ್ತಲ್ಲ, ನಂಗೆ ವೀಸಾ ಸಿಗೋದೇ ಕಷ್ಟ.
-ಹರಿ
harikannadaprabha@gmail.com