ಮೈಸೂರಿನಲ್ಲಿ ಸಚಿವ ದಿನೇಶ್ ಆಹಾರ ಮೇಳ

Updated on: 

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೈಸೂರಿಗೆ ಹಲವು ಸಚಿವರು ಬಂದು ಹೋಗಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಹಲವಾರು ಬಾರಿ ಬಂದು ಹೋಗಿದ್ದಾರೆ. ಆದರೆ ಕಳೆದ ವಾರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದರು. ಭೇಟಿಯಲ್ಲೇನು ವಿಷಯ ಎನ್ನುತ್ತೀರಾ? ಅವರು ಸರ್ಕಾರಿ ಅತಿಥಿಗೃಹದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಊಟ ಏರ್ಪಡಿಸಿದ್ದರು. ಇದರಿಂದ ಅವತ್ತು ನೂಕು ನುಗ್ಗಲು. ಮೈಸೂರಿಗೆ ಇಷ್ಟೊಂದು ಮಂದಿ ಮಿನಿಸ್ಟರ್‌ಗಳು ಬಂದವ್ರೆ. ಆದ್ರೆ ದಿನೇಶ್ ಗುಂಡೂರಾವ್ ಅವರಂತೆ ಯಾರೂ ಊಟ ಹಾಕಿಸಿರಲಿಲ್ಲ ಎಂದು ಮುಖಂಡರು, ಕಾರ್ಯಕರ್ತರು ಗಡದ್ದಾಗಿ ತಿಂದು ಜಾಗ ಖಾಲಿ ಮಾಡಿದರು. ಒಟ್ಟಾರೆ ಅಂದು ದಸರೆಯ ಸಂದರ್ಭದಲ್ಲಿ ನಡೆಯುವ ಆಹಾರ ಮೇಳದಂತಿತ್ತು.

ಮೇಯರ್ 'ಸಂದೇಶ' ನೀಡುವ ಪಾಲಿಕೆ ಸದಸ್ಯ
ಮೈಸೂರಿನ ಮೇಯರ್ ಆಗಿ ಎನ್.ಎಂ. ರಾಜೇಶ್ವರಿ ಅವರು ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಅವರು ಇದೇ ಮೊದಲ ಬಾರಿಯ ಪಾಲಿಕೆ ಸದಸ್ಯೆ. ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಮೇಯರ್ ಆದ ಹೆಗ್ಗಳಿಕೆ ಅವರದು. ಹೀಗಾಗಿ ಆಡಳಿತದಲ್ಲಿ ಅನುಭವವಿಲ್ಲ. ಮಾತುಕತೆಯೂ ಗೊತ್ತಿಲ್ಲ. ಇನ್ನೂ ತಿಳಿದುಕೊಳ್ಳಬೇಕಿದೆ. ಕಳೆದ ವಾರ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಅವರ ಪರ ಮಾತನಾಡಿದ್ದು ಜೆಡಿಎಸ್‌ನವವರೇ ಆದ ಹಾಲಿ ಸದಸ್ಯ ಹಾಗೂ ಮಾಜಿ ಮೇಯರ್ ಸಂದೇಶ್ ಸ್ವಾಮಿ! ಎಲ್ಲಾ ಹೇಳಿದ ನಂತರ ಮೇಯರ್ ಹೇಳಿದರು ಅಂತಾ ಹಾಕಿ ಸ್ವಾಮಿ ಎಂದು ಕೈಮುಗಿದರು. ಪತ್ರಕರ್ತರು ಪ್ರಶ್ನಾರ್ಥವಾಗಿ ನೋಡಿದಾಗ, ಮೈಸೂರಿಗೆ ಗುಜರಾತ್ ಸಿಎಂ ಹಾಗೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಬಂದು ಭಾಷಣ ಮಾಡಿ, ಮಾಜಿ ಸಚಿವ ಎಸ್.ಎ. ರಾಮದಾಸ್ ಭಾಷಾಂತರ ಮಾಡಿದರೂ ನೀವು (ಪತ್ರಕರ್ತರು) ಮೋದಿ ಮಾತನಾಡಿದರು ಎಂದೇ ಬರೆಯುವುದಿಲ್ಲವೇ, ಇದು ಅದೇ ರೀತಿ ಎಂದಾಗ ಪತ್ರಕರ್ತರು ಸುಸ್ತು. ಅಲ್ಲದೇ ಸಂದೇಶ್ ಸ್ವಾಮಿಯವರ ಹೋಲಿಕೆಯ ಪರಿ ಕಂಡು ಆಯ್ತು ಸ್ವಾಮಿ ಎನ್ನುತ್ತಾ ಎದ್ದರು.

ಸಚಿವೆ ಉಮಾಶ್ರೀ ಸ್ವಾಗತಕ್ಕೆ ಕೈ ಎತ್ತಿದ ಅಧಿಕಾರಿಗಳು!
ಸಚಿವರು ಜಿಲ್ಲಾ ಪ್ರವಾಸಕ್ಕೆ ಬಂದರೆ ಅಧಿಕಾರಿಗಳಿಗೆ ನಿದ್ರೆಯೇ ಇರುವುದಿಲ್ಲ. ಸ್ವಾಗತದಿಂದ ಹಿಡಿದು ವಾಪಸ್ ಹೋಗುವವರೆಗೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ಸ್ವಾಗತಕ್ಕೆ ಅಧಿಕಾರಿಗಳೇ ಇರಲಿಲ್ಲ! ಇತ್ತೀಚೆಗೆ ಬೆಳಗಾವಿಗೆ ಆಗಮಿಸಿದ್ದರು. ಅಧಿಕೃತ ಕಾರ್ಯಕ್ರಮ ಪಟ್ಟಿಯಂತೆ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಮೂಲಕ ಬೆಂಗಳೂರಿನಿಂದ ಪ್ರಯಾಣ ಬೆಳೆಸಿ ಬೆಳ್ಳಂಬೆಳಗ್ಗೆ ಬೆಳಗಾವಿ ರೈಲು ನಿಲ್ದಾಣದಲ್ಲಿ ಬಂದಿಳಿದರು. ಆದರೆ, ಔಪಚಾರಿಕವಾಗಿ ಸ್ವಾಗತಿಸಲು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಬಂದಿರಲೇ ಇಲ್ಲ. ಇದರಿಂದ ಕಂಗಾಲಾದ ಸಚಿವರು ಅಧಿಕಾರಿಗಳಿಗೆ ಫೋನ್ ಮಾಡಿದರೂ ಸಫಲವಾಗಲಿಲ್ಲ. ಮುಜುಗರಕ್ಕೊಳಗಾದ ಉಮಾಶ್ರೀ ಅವರು ಎಲ್ಲಾ ನನ್ನ ಹಣೆಬರಹ. ಅಧಿಕಾರಿಗಳನ್ನು ನಂಬಿಕೊಂಡರೆ ಅಧೋಗತಿ ಎಂದು ರೇಲ್ವೆ ನಿಲ್ದಾಣದಲ್ಲಿ ಸಜ್ಜಾಗಿ ನಿಂತಿದ್ದ ಭದ್ರತಾ ವಾಹನ ಏರಿ ಸರ್ಕಿಟ್‌ಹೌಸ್‌ಗೆ ತೆರಳಿದರು. ನಿದ್ರೆಯಿಂದ ತಡಬಡಾಯಿಸಿ ಎದ್ದ ಅಧಿಕಾರಿಗಳು ಸರ್ಕಿಟ್‌ಹೌಸ್‌ಗೆ ದೌಡಾಯಿಸಿ ತಡವಾಗಿದ್ದಕ್ಕೆ ಕ್ಷಮೆಯಾಚಿಸಿ ಕೈತೊಳೆದುಕೊಂಡರು!

ಪರಿಸರ ಮಾಲಿನ್ಯ ಇಲಾಖೆ ಮೇಲಧಿಕಾರಿಗಳ ಸಂಶಯ

ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದ ಮೇಲೆ ನಿಗಾ ಇಡಲು ಸಿಸಿ ಕ್ಯಾಮೆರಾ ಅಳವಡಿಸುವುದು, ಪಂಚಿಂಗ್ ಸಿಸ್ಟಮ್ ಜಾರಿಗೊಳಿಸುವುದನ್ನು ಕೇಳಿದ್ದೇವೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬ್ಯಾನರ್ ಕಟ್ಟಿರುವ ಬಗ್ಗೆ ಫೋಟೋ ತೆಗೆದು ಮೇಲ್‌ಗೆ ಅಪ್‌ಲೋಡ್ ಮಾಡುವಂತೆ ತಾಕೀತು ಮಾಡಿದ ವಿದ್ಯಮಾನವಿದು. ಮೊನ್ನೆ ಗೌರಿ ಗಣೇಶ ಹಬ್ಬಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರತಿ ಜಿಲ್ಲೆಗಳಲ್ಲಿ 12 ಬ್ಯಾನರ್ ಹಾಕಲು ಮೇಲಿನಿಂದ ಆದೇಶ ಬಂದಿತ್ತು. ಬ್ಯಾನರ್‌ನ್ನೂ ಬೆಂಗಳೂರಿನಿಂದ ಕಳಿಸಿದ್ದರು. ಆದರೆ ಬ್ಯಾನರ್ ಹಾಕುತ್ತಾರೆ ಎಂದು ಏನು ಗ್ಯಾರಂಟಿ? ಬ್ಯಾನರ್ ಹಾಕದೆ, ಹಾಕಿದ್ದೇವೆ ಎಂದು ಬೇಕಾಬಿಟ್ಟಿ ಬಿಲ್ ಮಾಡಿದರೆ? ಈ ಸಂಶಯ ನಿವಾರಣೆಗೆ ಮೇಲಧಿಕಾರಿಗಳು ಕಂಡುಕೊಂಡ ಉಪಾಯ, ಬ್ಯಾನರ್ ಕಟ್ಟಿದ ಬಗ್ಗೆ ಫೋಟೋ ತೆಗೆದು ಅಪ್‌ಲೋಡ್ ಮಾಡಿ ಕಳುಹಿಸುವುದು! ಊರೆಲ್ಲ ಗೌರಿ ಗಣೇಶ ಹಬ್ಬ ಸಂಭ್ರಮವಿದ್ದರೆ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಇಂಟರ್‌ನೆಟ್ ಮುಂದೆ ಕೂತು ಬ್ಯಾನರ್ ಕಟ್ಟಿದ ಫೋಟೋ ಅಪ್‌ಲೋಡ್ ಮಾಡುವುದರಲ್ಲೇ ನಿರತರಾಗಿದ್ದರು. ಹೇಗಿದೆ ಅಧಿಕಾರಿಗಳ ಬಗ್ಗೆ ಮೇಲಧಿಕಾರಿಗಳ ಸಂಶಯ!

ಸಂಘಟಕರಿಗೆ ನೇತ್ರಾವತಿ ನದಿ ನೀರು ಕುಡಿಸಿದ ವಿದ್ಯಾರ್ಥಿಗಳು!
ನೇತ್ರಾವತಿ ನದಿ ನೀರನ್ನು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಹರಿಸುವ ನದಿ ತಿರುವು ಯೋಜನೆ ದ.ಕ. ಜಿಲ್ಲೆಯಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಈ ಯೋಜನೆ ವಿರುದ್ಧ ಪ್ರತಿಭಟನೆ, ಸಭೆ, ಸಮಾರಂಭಗಳು ನಡೆಯುತ್ತಲೇ ಇವೆ. ಮಂಗಳೂರಿನ ಕೆಎಸ್ ರಾವ್ ರಸ್ತೆ ಬಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಇತ್ತೀಚೆಗೆ 'ನೇತ್ರಾವತಿ ನದಿ ತಿರುವು' ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಎಷ್ಟಿದೆ ಎಂದು ಪರೀಕ್ಷಿಸಲು ಉಪನ್ಯಾಸಕರು ರಸಪ್ರಶ್ನೆ ಹಮ್ಮಿಕೊಂಡಿದ್ದರು. ಆರಂಭದಲ್ಲೇ ಸುಲಭ ಪ್ರಶ್ನೆ ಕೇಳಲು ನಿರ್ಧರಿಸಿ, 'ಜಿಲ್ಲೆಯ ಜೀವನದಿ ಯಾವುದು' ಎಂದು ಕೇಳಿದ್ದೇ ತಡ ವಿದ್ಯಾರ್ಥಿಗಳು ಒಂದು ನಿಮಿಷ ಗಪ್‌ಚುಪ್. ಪ್ರಶ್ನೆ ಅರ್ಥವಾಗಿರಲಿಕ್ಕಿಲ್ಲ ಎಂದು ಉಪನ್ಯಾಸಕರು ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿದರು. ಆದರೂ ಮೌನವೇ ಆವರಿಸಿತ್ತು. ಯಾರಿಂದಲೂ ಉತ್ತರ ಬರಲಿಲ್ಲ. ಉಪನ್ಯಾಸಕರು ಮತ್ತೆ ಮತ್ತೇ ಅದೇ ಪ್ರಶ್ನೆ ಕೇಳಿದರು. ಕೊನೆಗೆ ಒಬ್ಬ ವಿದ್ಯಾರ್ಥಿ ಧೈರ್ಯ ಮಾಡಿ ಎದ್ದು ನಿಂತು, 'ತುಂಗಭದ್ರಾ' ಎಂದ. ಈ ಉತ್ತರ ಕೇಳಿದ ಉಪನ್ಯಾಸಕರು ಕಂಗಲಾಗಿ ರಸಪ್ರಶ್ನೆಯ ಉಸಾಬರಿಯೇ ಬೇಡ ಎಂದು ಅರ್ಧದಲ್ಲೇ ಕಾರ್ಯಕ್ರಮ ಮೊಟಕುಗೊಳಿಸಿದರು. ನೇತ್ರಾವತಿ ನದಿ ನೀರು ಕುಡಿದು ಗಂಟಲು ಸರಿಪಡಿಸಿಕೊಂಡು ಉಪನ್ಯಾಸಕರು ಪರಿಸ್ಥಿತಿ ಸರಿಪಡಿಸಿಕೊಂಡರು!

- ನಂಬೀರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com