

ಯಾವ ವರದಿಯನ್ನು ಸರ್ಕಾರ ನಗಣ್ಯ ಎಂದು ಭಾವಿಸಿತ್ತೋ, ಅದೇ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿತು
ಸೇನೆಯ ಗುಪ್ತ ನಿಧಿಯನ್ನು ಜಮ್ಮು-ಕಾಶ್ಮೀರ ಸರ್ಕಾರವನ್ನು ಉರುಳಿಸಲು ಬಳಸಿಕೊಂಡಿದ್ದು, ತನ್ನ ನಂತರ ಅಧಿಕಾರಕ್ಕೆ ಬರಲಿದ್ದ ವ್ಯಕ್ತಿಯ ಮುಖಕ್ಕೆ ಮಸಿ ಬಳಿಯಲು ಎನ್‌ಜಿಓಗೆ ರುಷುವತ್ತು ನೀಡಿದ್ದು, ಅತ್ಯಾಧುನಿಕ ಕಳ್ಳಗಿವಿಗಳನ್ನು ಖರೀದಿಸಿದ್ದು ಮತ್ತು ತಾನೇ ರಚಿಸಿದ ಸೇನೆಯ ಗುಪ್ತ ದಳದ ಮೂಲಕವೇ ಈ ಎಲ್ಲ ಕಾರ್ಯಾಚರಣೆ ನಡೆಸಿದ್ದೂ ಸೇರಿದಂತೆ ನಿವೃತ್ತ ಸೇನಾ ಜನರಲ್ ವಿ.ಕೆ. ಸಿಂಗ್ ಮೇಲೆ ನಾನಾ ಆರೋಪಗಳನ್ನು ಹೊರಿಸುವ ರಹಸ್ಯ ವರದಿಯೊಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ಬೆಳಕು ಕಂಡಿತು. ಟಿವಿ ಚಾನೆಲ್‌ಗಳ ಪರದೆಯ ಮೇಲೆ ಇದು ಬ್ರೇಕ್ ಆದ ಕೂಡಲೇ ವಾರ್ತಾ ಸಚಿವ ಮನೀಶ್ ತಿವಾರಿ ಎಂದಿನಂತೆ ಬೈಟ್ ನೀಡಿದರು. 'ಇದು ತೀರಾ ಗಂಭೀರ ವಿಷಯ. ದೇಶಕ್ಕೆ ಗಂಡಾಂತರ ತರುವಂತಹ ಬೆಳವಣಿಗೆ, ಸರ್ಕಾರ ಇದನ್ನು ಕೂಲಂಕಷವಾಗಿ ಪರಿಶೀಲಿಸಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತದೆ' ಎಂದರು. ಇದರ ಜೊತೆಗೆ ಈ ಎಲ್ಲ ಆರೋಪಗಳನ್ನು ಹೊರಿಸಿದ್ದ ಸೇನೆಯ ಆಂತರಿಕ ತನಿಖಾ ತಂಡ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಶಿಫಾರಸು ಮಾಡಿದ್ದಾಗಿಯೂ ವರದಿಯಾಗಿತ್ತು. ಭಾರತೀಯ ಸೇನೆ ಎಂದೂ ಹಾಕಿದ ಗೆರೆ ದಾಟಿದ್ದಿಲ್ಲ. ಎಷ್ಟೇ ಪ್ರಭಾವಿ ದಂಡನಾಯಕರಾದರೂ, ರಾಜಕೀಯ ಬಾಸ್‌ಗಳ ವಿರುದ್ಧ ಕಮಕ್‌ಕಿಮಕ್ ಎಂದಿದ್ದಿಲ್ಲ. ಎಂದೂ ರಾಜಕೀಯ ಮಾಡಿದ್ದಿಲ್ಲ. ಅಂತಹ ಸೇನೆಯ ಮೇಲೆ ಅದರಲ್ಲೂ ಸೇನೆಯ ಮುಖ್ಯಸ್ಥರ ಮೇಲೆ ಇಂತಹ ಆರೋಪ!
ಮೇಲ್ನೋಟಕ್ಕೆ ಇದು ತೀರಾ ಗಂಭೀರ ವಿಷಯವೇ ಸರಿ. ಸೇನಾಧಿಕಾರಿಯಾದವರು ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದಾದರೆ ಅದರ ಬಗ್ಗೆ ಸೂಕ್ತ ತನಿಖೆ ಆಗಿ ಕ್ರಮ ಕೈಗೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮನೀಶ್ ತಿವಾರಿ ನೀಡಿದ ಬೈಟ್‌ಗಷ್ಟೇ ಈ ಪ್ರಕರಣ ಕೊನೆಗೊಂಡಿತು. ರಕ್ಷಣಾ ಮಂತ್ರಾಲಯವೂ ಇದಕ್ಕೆ ತಕ್ಕಂತೆ ಸ್ಪಂದಿಸಲಿಲ್ಲ. ರಕ್ಷಣಾ ಮಂತ್ರಿ ಎ.ಕೆ. ಆ್ಯಂಟನಿ ಈ ಬಗ್ಗೆ ತುಟಿ ಬಿಚ್ಚಲಿಲ್ಲ. ವರದಿ ಬಯಲಾದಷ್ಟೇ ವೇಗವಾಗಿ ಆವಿಯಾಯಿತು. ಹಾಗಾದರೆ ಈ ವರದಿ ಸುಳ್ಳೇ? ಇಡೀ ಪ್ರಕರಣ ಕಲ್ಪಿತವೇ? ಅಸಲು ನಡೆದದ್ದೇನು ಎಂಬುದನ್ನು ಅಂಕಣಕಾರ ಪ್ರವೀಣ್ ಸ್ವಾಮಿ ಫಸ್ಟ್‌ಪೋಸ್ಟ್ ಜಾಲತಾಣದಲ್ಲಿ ಸಾದ್ಯಂತವಾಗಿ ವಿವರಿಸಿದ್ದಾರೆ. ಈ ವರದಿ ಸರ್ಕಾರದ ಕೈ ಸೇರಿದ್ದು ಕಳೆದ ಮಾರ್ಚ್ ತಿಂಗಳಲ್ಲಿ. ಅಂದರೆ ಆರು ತಿಂಗಳ ಹಿಂದೆ. ನಿಜಕ್ಕೂ ಈ ವರದಿ ಗಂಭೀರವಾದದ್ದು ಎಂದು ಸರ್ಕಾರಕ್ಕೆ ಅನ್ನಿಸಿದ್ದರೆ ಅದರ ಬಗ್ಗೆ ಮಾಹಿತಿ ಕಲೆ ಹಾಕಲು ಅಥವಾ ಕ್ರಮಕ್ಕೆ ಮುಂದಾಗಲು ಸರ್ಕಾರಕ್ಕೆ ಆರು ತಿಂಗಳು ಬೇಕಾಗಿರಲಿಲ್ಲ. ವರದಿ ಕೈ ಸೇರಿದ ಕೂಡಲೇ ವ್ಯವಸ್ಥೆಯ ವಿರುದ್ಧ ಸಂಚು ಹೂಡಿದ ಆರೋಪದ ಮೇಲೆ ವಿ.ಕೆ. ಸಿಂಗ್ ವಿರುದ್ಧ ಸರ್ಕಾರ ತನಿಖೆ ನಡೆಸಬಹುದಾಗಿತ್ತು. ಏಕೆಂದರೆ ಇದು ಅತ್ಯಂತ ಸೂಕ್ಷ್ಮ ವಿಚಾರ. ಆದರೆ ಸರ್ಕಾರ ಅಂತಹ ಯಾವುದೇ ಘನ ಕಾರ್ಯಕ್ಕೆ ಮುಂದಾಗಲಿಲ್ಲ. ಪ್ರತಿನಿತ್ಯ ಸರ್ಕಾರಕ್ಕೆ ಹರಿದು ಬರುವ ಎಷ್ಟೋ ಮಾಹಿತಿಯಂತೆಯೇ ಇದನ್ನು ಸಹ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಇಷ್ಟಕ್ಕೂ ವರದಿಯನ್ನು ಪರಿಶೀಲಿಸಿದರೆ ಅದರಲ್ಲಿರುವ ಅನೇಕ ಅಂಶಗಳು ಅವಾಸ್ತವ ಎಂಬುದು ತಿಳಿಯುತ್ತದೆ. ಪ್ರಕ್ಷುಬ್ಧ ಅಥವಾ ಸಂಘರ್ಷದ ವಲಯಗಳಲ್ಲಿ ಕಾರ್ಯಾಚರಿಸಲು ಸೇನೆಗೆ ಕೆಲವು ವಿಶೇಷಾಧಿಕಾರ ನೀಡುವ ಕಾಯ್ದೆ (AFSPA)ಯನ್ನು ಜಮ್ಮು-ಕಾಶ್ಮೀರದಿಂದ ತೆಗೆಯುವಂತೆ ಅಲ್ಲಿನ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೇಂದ್ರ ಸರ್ಕಾರವನ್ನು ಪೀಡಿಸುತ್ತಲೇ ಇದ್ದಾರೆ. ಕಾಶ್ಮೀರದಲ್ಲಿ ಸಹಜ ಸ್ಥಿತಿ ಕಾಯಮ್ಮಾಗಲು ಇದು ಅತ್ಯಗತ್ಯ ಎಂಬುದು ಉಮರ್ ನಿಲುವು. ಆದರೆ ಎಲ್ಲಿ ಯಾವಾಗ ಉಗ್ರರು ಹೇಗೆ ದಾಳಿ ಮಾಡುತ್ತಾರೆ ಎಂಬುದೇ ತಿಳಿಯದಂತಹ ಪ್ರದೇಶದಲ್ಲಿ ಇಂತಹ ವಿಶೇಷಾಧಿಕಾರ ಇಲ್ಲದೆ ಕಾರ್ಯಾಚರಿಸುವುದು ಅಸಾಧ್ಯ ಎಂಬುದು ಸೇನೆಯ ನಿಲುವು. ಈ ವಿಚಾರದಲ್ಲಿ ಸರ್ಕಾರ ಸಹ ಸೇನೆಯ ಮಾತಿಗೇ ಸೊಪ್ಪು ಹಾಕಿದೆ. ಹೀಗಿರುವಾಗ ಈ ಕಾಯ್ದೆ ವಿಚಾರವಾಗಿ ಇರುವ ಭಿನ್ನಾಭಿಪ್ರಾಯವನ್ನೇ ನೆಪವಾಗಿಸಿಕೊಂಡು ಸೇನಾ ಮುಖ್ಯಸ್ಥರು ಜನರಿಂದ ಆಯ್ಕೆಯಾದ ಸರ್ಕಾರವನ್ನು ಪಲ್ಲಟ ಮಾಡಲು ಮುಂದಾಗುತ್ತಾರೆ ಎನ್ನುವುದನ್ನು ಒಪ್ಪುವುದು ಕಷ್ಟ. ಅದರಲ್ಲೂ ವರದಿ ಹೇಳುವಂತೆ ಸೇನಾ ಮುಖ್ಯಸ್ಥರಾಗಿದ್ದ ಸಿಂಗ್ ಈ ಕೆಲಸಕ್ಕೆ (ಸರ್ಕಾರದ ಪಲ್ಲಟ) ಬಳಸಿಕೊಂಡ ವ್ಯಕ್ತಿ ಮೀರ್. ಈ ಮೀರ್ ಪಕ್ಷೇತರ ಸದಸ್ಯ. ಮೇಲಾಗಿ ಸರ್ಕಾರದಲ್ಲಿ ಸಚಿವ. ಅಲ್ಲದೆ, ಕಾರ್ಯಾಚರಣೆಗೆ ಸಿಂಗ್ ಸೇನೆಯ ರಹಸ್ಯ ನಿಧಿಯಿಂದ ಮಂಜೂರು ಮಾಡಿದ್ದು 1.12 ಕೋಟಿ ರುಪಾಯಿ! ಜಮ್ಮು-ಕಾಶ್ಮೀರದಲ್ಲಿ ಅಧಿಕಾರದಲ್ಲಿರುವುದು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್‌ನ ಸಂಯುಕ್ತ ಸರ್ಕಾರ. ಈ ಎರಡು ಪಕ್ಷಗಳ ಒಟ್ಟು ಸಂಖ್ಯೆ ಸರಳ ಬಹುಮತಕ್ಕಿಂತ ಹೆಚ್ಚಿದೆ. ಪ್ರತಿಪಕ್ಷದಲ್ಲಿರುವುದು ಪಿಡಿಪಿ ಮತ್ತು ಬಿಜೆಪಿ. ಈ ಎರಡು ಪಕ್ಷಗಳು ಒಂದಾಗುವುದು ಅಸಾಧ್ಯದ ಮಾತು. ಹಾಗೊಂದು ವೇಳೆ ಕೈಜೋಡಿಸಿದರೂ ಬಹುಮತ ಕಷ್ಟ. ಹೀಗಿರುವಾಗ ಇವೆರಡು ಪಕ್ಷಗಳ ಜೊತೆಗೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳ ಸದಸ್ಯರನ್ನು ಸೆಳೆದು ಪರ್ಯಾಯ ಸರ್ಕಾರ ರಚಿಸುವುದೆಂದರೆ ಅದು ಒಂದು ಸುಂದರ ಸ್ವಪ್ನವೇ ಸರಿ. ಇಂತಹ ಸ್ವಪ್ನ ಸಾಕಾರಗೊಳಿಸಲು ಆರಿಸಿಕೊಂಡಿರುವ ವ್ಯಕ್ತಿಯಾದರೂ ಯಾರು? ಪಕ್ಷೇತರ ಶಾಸಕ ಇಷ್ಟೆಲ್ಲ ಮಾಡಲು ಸಾಧ್ಯವೇ? ಮತ್ತು ಇಂದಿನ ಪರಿಸ್ಥಿತಿಯಲ್ಲಿ ಶಾಸಕರ ಬೆಂಬಲ ಚೀಪಾಗಿ ಸಿಗುವ ವಸ್ತುವಲ್ಲ. ಅದು ಬಲು ದುಬಾರಿ. ಜಾರ್ಖಂಡದಲ್ಲಿ ಪಕ್ಷೇತರನಾಗಿದ್ದುಕೊಂಡು ಸರ್ಕಾರ ರಚಿಸಿದ್ದ ಮಧು ಕೋಡಾರನ್ನು ಕೇಳಿದರೆ ಬೆಂಬಲದ ಬೆಲೆ ಎಷ್ಟು ದುಬಾರಿ ಎಂಬುದು ತಿಳಿಯುತ್ತದೆ. ಒಂದು ಚುನಾವಣೆ ಗೆಲ್ಲಲು ಹತ್ತಾರು ಕೋಟಿ ಹಣ ಬೇಕಿರುವಾಗ ನಾಲ್ಕು ಪಕ್ಷಗಳನ್ನು ಒಡೆದು ಒಂದು ಪರ್ಯಾಯ ಸರ್ಕಾರ ರಚಿಸಬೇಕೆಂದಾದರೆ ಅದು ದುಬಾರಿ ಸರ್ಕಸ್ಸೆ ಸರಿ. ಕೇವಲ ಒಂದೂ ಚಿಲ್ಲರೆ ಕೋಟಿ ರುಪಾಯಿಗಳಲ್ಲಿ ಈ ಸರ್ಕಸ್ ನಡೆಸಬಹುದು ಎಂದು ಕನಸು ಕಾಣಲೂ ಸಾಧ್ಯವಿಲ್ಲ. ಅಂತಹ ಕನಸು ಕಾಣಲು ಸಿಂಗ್ ಅವರಾಗಲಿ ಮೀರ್ ಆಗಲಿ ಮುಂಗೇರಿ ಲಾಲರೂ ಅಲ್ಲ.
ಈ ವರದಿ ಆರೋಪಿಸಿರುವಂತೆ ಸಿಂಗ್ ಅವರಿಗೆ ನಿಜಕ್ಕೂ ಉಮರ್ ಅಬ್ದುಲ್ಲಾ ಸರ್ಕಾರ ಕಿತ್ತೊಗೆಯಬೇಕು ಎಂಬ ಮನಸ್ಸಾಗಿದ್ದರೆ ನೇರವಾಗಿ ಉಮರ್‌ಗೆ ಬೆಂಬಲವಾಗಿರುವ ರಾಹುಲ್ ಗಾಂಧಿ ಅವರನ್ನೇ ಮನವೊಲಿಸಿದ್ದರೆ ಸಾಕಿತ್ತು. ಅದಕ್ಕೆ ಇಷ್ಟೆಲ್ಲ ಪಾಡು ಬೀಳುವುದೂ ಬೇಕಿರಲಿಲ್ಲ. ಇದು ಆ ವರದಿಯ ಗಾಂಭೀರ್ಯದ ಬಗ್ಗೆ ಆಯಿತು. ಇನ್ನು ಈ ವರದಿ ಆರು ತಿಂಗಳ ನಂತರ ಬೆಳಕು ಕಂಡಿದ್ದಾದರೂ ಹೇಗೆ ಮತ್ತು ಏಕೆ? ಈ ಬೆಳವಣಿಗೆಗೆ ಕೆಲವೇ ದಿನಗಳ ಮುಂಚೆ ಹರ್ಯಾಣದ ರೇವಾರಿಯಲ್ಲಿ ಬಿಜೆಪಿಯ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೊಡ್ಡ ರ್ಯಾಲಿ ನಡೆಸಿದ್ದರು. ಅದರಲ್ಲಿ ಹೆಚ್ಚಿನ ಮಂದಿ ನಿವೃತ್ತ ಸೇನಾ ಸಿಬ್ಬಂದಿ ಇದ್ದರು. ಸಹಜವಾಗಿಯೇ ವಿ.ಕೆ. ಸಿಂಗ್ ಅವರ ಕೈ ಇದರ ಹಿಂದಿತ್ತು. ವೇದಿಕೆಯ ಮೇಲೆ ಮೋದಿ ಜೊತೆ ಕಾಣಿಸಿಕೊಂಡ ಸಿಂಗ್ ಸೇನೆ ಮತ್ತು ಸೇನಾ ಸಿಬ್ಬಂದಿಯ ಬಗೆಗೆ ಸರ್ಕಾರದ ಕಡೆಗಣನೆಯನ್ನು ಟೀಕಿಸಿದ್ದರು. ವೇತನ, ಪಿಂಚಣಿ ಮುಂತಾದ ವಿಷಯಗಳಲ್ಲಿ ಏಕರೂಪತೆ ಕುರಿತಾದ ಸೇನೆಯ ಬೇಡಿಕೆ ಈಡೇರದಿರುವ ಬಗ್ಗೆ ಹರಿಹಾಯ್ದಿದ್ದರು. ಆಗ ಸಿಂಗ್ ಮುಖಕ್ಕೆ ಮಸಿ ಬಳಿಯಲು ಸರ್ಕಾರದ ಕಣ್ಣಿಗೆ ಬಿದ್ದಿದ್ದು ಈ ಸಂಚಿನ ವರದಿ. ಯಾವ ವರದಿಯನ್ನು ಸರ್ಕಾರ ನಗಣ್ಯ ಎಂದು ಭಾವಿಸಿತ್ತೋ, ಯಾವ ವರದಿಯ ಮೇಲೆ, ಕ್ರಮ ಅನಗತ್ಯ ಎಂದು ಆರು ತಿಂಗಳಿಂದ ಅದು ಧೂಳು ತಿನ್ನಲು ಬಿಟ್ಟಿತ್ತೋ, ಅದೇ ವರದಿಯನ್ನು ಪ್ರಧಾನಿ ಕಾರ್ಯಾಲಯದ ಉನ್ನತ ಮೂಲಗಳ ಮೂಲಕ ಪತ್ರಕರ್ತರ ಕಿವಿಗೆ ಉಸುರಿಸಿತು. ಕೆಲವು ತಿಂಗಳ ಹಿಂದೆ ಜನ್ಮ ದಿನಾಂಕದ ವಿವಾದದ ಕುರಿತಾಗಿ ಸಿಂಗ್ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿದ್ದಾಗಲೂ, ಕೇಂದ್ರ ಸರ್ಕಾರದ ವಿರುದ್ಧ ಕ್ಷಿಪ್ರಕ್ರಾಂತಿಗೆ ಅವರು ಯೋಜನೆ ರೂಪಿಸಿದ್ದಾರೆ ಎಂಬಂತಹ ವರದಿಯನ್ನು ಸರ್ಕಾರವೇ ಪ್ಲಾಂಟ್ ಮಾಡಿಸಿ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡಿತ್ತು. ಈಗ ಸಿಂಗ್ ಮೋದಿ ಜೊತೆ ಕಾಣಸಿಕೊಂಡ ಕೂಡಲೇ ಅವರನ್ನು ಹಣಿಯಲು, ಹೆಸರಿಗೆ ಕಳಂಕ ತರಲು ಸರ್ಕಾರ ಇಂತಹ ಗುಪ್ತ ವರದಿಗಳ ಮೊರೆ ಹೋಗಿದೆ. ಜೊತೆಗೆ ಸಿಬಿಐ ತನಿಖೆಯ ಭೂತವನ್ನೂ ತೆರೆದಿದೆ.
ಜನರಿಗೆ ಮಾಹಿತಿ ಹಕ್ಕು ನೀಡಿದ್ದೇ ನಾವು ಎಂದು ಕೊಚ್ಚಿಕೊಳ್ಳುವ ಸರ್ಕಾರ ಮತ್ತು ಕಾಂಗ್ರೆಸ್, ತನ್ನ ವಿರುದ್ಧ ಇರುವ ಜನದನಿಯನ್ನು ಹತ್ತಿಕ್ಕಲು ಇಂತಹ ವಾಮ ಮಾರ್ಗಗಳಲ್ಲಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ವಿ.ಕೆ. ಸಿಂಗ್ ಅವರ ಕುರಿತಾದ ಬೆಳವಣಿಗೆಗಳಲ್ಲಿ ಇನ್ನೊಂದು ವಿಷಯ ಅಷ್ಟಾಗಿ ಬೆಳಕಿಗೆ ಬರಲಿಲ್ಲ. ಅದೆಂದರೆ ವಿಶ್ವವಿದ್ಯಾಲಯ ಧನ ವಿನಿಯೋಗ ಮಂಡಳಿ (ಯುಜಿಸಿ) ಸದಸ್ಯತ್ವದಿಂದ ಸರ್ಕಾರ ಯೋಗೇಂದ್ರ ಯಾದವ್ ಅವರನ್ನು ಉಚ್ಛಾಟಿಸಿರುವುದು. ಈ ಯೋಗೇಂದ್ರ ಯಾದವ್ ಚುನಾವಣಾ ಸಮೀಕ್ಷೆಗಳ ಸಮಯದಲ್ಲಿ ಅವುಗಳ ವಿವರಣಾಕಾರರಾಗಿ ಟಿವಿಗಳಲ್ಲಿ ರಾರಾಜಿಸುತ್ತಾರೆ. ಅಣ್ಣಾ ಹಜಾರೆ ಅವರ ಲೋಕಪಾಲ ಆಂದೋಲನದ ಸಂದರ್ಭದಲ್ಲಿ ಅವರ ಜೊತೆ ಕಾಣಿಸಿಕೊಂಡಿದ್ದ ಯಾದವ್ ನಂತರ ಅರವಿಂದ ಕೇಜ್ರಿವಾಲ್ ಸ್ಥಾಪಿಸಿದ ಆಮ್ ಆದ್ಮಿ ಪಾರ್ಟಿ ಸದಸ್ಯರಾದರು. ವರ್ಷಾಂತ್ಯಕ್ಕೆ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ. ಅದರ ಮತಗಳನ್ನು ಆಮ್ ಆದ್ಮಿ ಪಾರ್ಟಿ ಕಸಿಯಲಿದೆ ಎಂದು ಬಹುತೇಕ ಎಲ್ಲ ಚುನಾವಣಾ ಸರ್ವೆಗಳೂ ಹೇಳುತ್ತಿವೆ.
ಇದು ಸಹಜವಾಗಿಯೇ ಕಾಂಗ್ರೆಸ್‌ನ ನಿದ್ದೆ ಕೆಡಿಸಿದೆ. ಆಮ್ ಆದ್ಮಿ ಪಕ್ಷ ಕಟ್ಟುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದಾಗ ಅವರ ವಿರುದ್ಧ ವರ್ಷಗಳ ಹಿಂದಿನ ಯಾವುದೋ ತೆರಿಗೆ ವಂಚನೆಯ ಆರೋಪ ಹೊರಿಸಿ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದ ಸರ್ಕಾರ ಈಗ ಯಾದವ್ ವಿರುದ್ಧ ತಿರುಗಿ ಬಿದ್ದಿದೆ. ಯಾದವ್ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿರುವುದರಿಂದ ಅವರು ಯುಜಿಸಿ ಮಂಡಳಿಯನ್ನು ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳಬಹುದು ಎಂಬ ಕುಂಟು ನೆಪ ನೀಡಿ ಅವರನ್ನು ಉಚ್ಛಾಟಿಸಿದೆ. ವಿಪರ್ಯಾಸವೆಂದರೆ ಯುಜಿಸಿಯ ಸದಸ್ಯರು ರಾಜಕೀಯ ಪಕ್ಷಗಳಿಗೆ ಕೆಲಸ ಮಾಡಬಾರದು ಎಂದು ಯುಜಿಸಿ ಕಾಯ್ದೆಯಲ್ಲಿ ಎಲ್ಲೂ ಉಲ್ಲೇಖ ಇಲ್ಲ. ಅಲ್ಲದೆ 2011ರಲ್ಲಿ ಯಾದವ್ ಅವರನ್ನು ಯುಜಿಸಿಗೆ ನೇಮಕ ಮಾಡಿದ ಸಂದರ್ಭದಲ್ಲೇ ಅವರು ಸಮಾಜವಾದಿ ಜನರಂಗ ಎಂಬ ನೋಂದಾಯಿತ ಪಕ್ಷದ ಸದಸ್ಯರಾಗಿದ್ದರು. ಇದನ್ನು ಸ್ವತಃ ಯಾದವ್ ತಮಗೆ ನೀಡಲಾಗಿದ್ದ ನೋಟಿಸ್‌ಗೆ ಉತ್ತರವಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೆ ನಾನು ನಡೆದಿದ್ದೇ ದಾರಿ, ಬೇರೆಯವರಿಗಿಲ್ಲ ರಹದಾರಿ ಎಂಬ ಮನೋಧರ್ಮದ ಕಾಂಗ್ರೆಸ್‌ಗೆ ಮತ್ತು ಅದು ನಡೆಸುತ್ತಿರುವ ಸರ್ಕಾರಕ್ಕೆ ಈ ಎಲ್ಲ ಸತ್ಯಗಳೂ ಮಿಥ್ಯೆಯಂತೆಯೇ ಕಾಣುತ್ತದೆ. ಜಾರ್ಜ್ ಫರ್ನಾಂಡಿಸ್ ಈ ಹಿಂದೆ ಹೇಳಿದಂತೆ- ದಬ್ಬಾಳಿಕೆ, ದಮನಕಾರಿ ಮನೋಭಾವ ಕಾಂಗ್ರೆಸ್‌ನ ಡಿಎನ್‌ಎದಲ್ಲಿಯೇ ಹಾಸುಹೊಕ್ಕಾಗಿದೆ. ಅದನ್ನು ಬದಲಿಸಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿಯ ಕರಾಳ ದಿನಗಳು ಕಳೆದು ಮೂರೂವರೆ ದಶಕಗಳೇ ಕಳೆದಿವೆ. ಆದರೂ ಕಾಂಗ್ರೆಸ್‌ನಲ್ಲಿ ಆ ಮನಸ್ಥಿತಿ ಇನ್ನೂ ಮಾಸಿದಂತೆ ಕಾಣುತ್ತಿಲ್ಲ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com