ಅಂಕಣಗಳು

ಮುಝಫರ್‌ನಗರದ ಸುತ್ತ ಮೂಲಭೂತವಾದಿಗಳ ಹುತ್ತ!

ಮುಝಫರ್‌ನಗರದ ಸುತ್ತ ಮೂಲಭೂತವಾದಿಗಳ ಹುತ್ತ!
Published On :

'ಸೆಕ್ಯುಲರಿಸಂ' ಎಂಬ ಹೆಸರಿನ ಹಚ್ಚೆ ಹಾಕಿಸಿಕೊಂಡು ಅಡ್ಡಾಡುವ ಸೋನಿಯಾ-ಮನಮೋಹನ್‌ರ ಕೇಂದ್ರ ಸರ್ಕಾರ ಅಥವಾ ಅಖಿಲೇಶ್ ಯಾದವ್‌ರ ರಾಜ್ಯ ಸರ್ಕಾರ, ಮುಝಫರ್‌ನಗರ ಗಲಭೆಯ ಹಿಂದೆ ಗಹನ ಮತ್ತು ಘೋರ ಸತ್ಯವೊಂದಿದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮುಂದಾಗುವುದಿಲ್ಲ ಬಿಡಿ.

ಮುಝಫರ್‌ನಗರದ ಕೋಮುದಳ್ಳುರಿ ತುಸು ಆರಿರುವ ಸಮಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯವರು ಆ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಇದೇನೇ ಇದ್ದರೂ ಈಗ ಘಟನೆಯ ಬಗ್ಗೆ ನಿರುದ್ವಿಗ್ನ ವಿಮರ್ಷೆ ಮಾಡುವ ಸಮಯವಂತೂ ಬಂದಿದೆ. ಈ ಗಲಭೆಯಲ್ಲಿ ಏನಾಯಿತು ಎಂದಷ್ಟೇ ಅಲ್ಲ, ಮುಖ್ಯವಾಗಿ ದೇಶದ ಮುಸ್ಲಿಂ ಸಮುದಾಯದಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ವಿಚಾರ ಮಾಡುವ ಸಮಯವಿದು. ಕೋಮು ಕಲಹಗಳ ಸಮಯದಲ್ಲಿ ನಾವು ಕೇವಲ ಹಿಂದುಗಳನ್ನು ದೂಷಿಸುವ ಚಾಳಿಗೆ ಎಷ್ಟು ಅಂಟಿಕೊಂಡಿದ್ದೇವೆಂದರೆ, ಅತಿ ಅಪಾಯಕಾರಿಯಾದ ವಿಷಯದತ್ತ ನಮ್ಮ ಗಮನ ಹರಿಯುತ್ತಲೇ ಇಲ್ಲ. ಭಾರತೀಯ ಮುಸ್ಲಿಂ ಸಮುದಾಯದಲ್ಲಿ ಹೆಚ್ಚುತ್ತಿರುವ ಮೂಲಭೂತವಾದದ ಬಗ್ಗೆ ನಮ್ಮಲ್ಲಿ ಚರ್ಚೆಯಾಗುವುದೇ ಇಲ್ಲ. ಇಂಥ ಗಲಭೆಗಳಲ್ಲಿ ಹಿಂದುಗಳಿಗಿಂತ ಮುಸಲ್ಮಾನರೇ ಅಧಿಕಸಂಖ್ಯೆಯಲ್ಲಿ ಸಾಯುವ ಕಾರಣದಿಂದ ಆ ಬಗ್ಗೆ ಮಾತನಾಡುವುದಕ್ಕೆ ನಾವು ಹಿಂಜರಿಯುತ್ತೇವೆ. ಅಥವಾ ಹಾಗೆ ಮಾತನಾಡುವುದು ರಾಜಕೀಯವಾಗಿ ತರವಲ್ಲ ಎನ್ನುವ ಯೋಚನೆ ನಮ್ಮನ್ನು ತಡೆಹಿಡಿಯುತ್ತದೆ. ಮುಝಫರ್‌ನಗರದ ಹಳ್ಳಿಗಳೆಲ್ಲ ಈಗ ಖಾಲಿ ಹೊಡೆಯುತ್ತಿವೆ. ಪ್ರಾಣಭೀತಿಯಿಂದ ಅಲ್ಲಿನ ಬಡ ಮುಸ್ಲಿಂ ಕುಟುಂಬಗಳೆಲ್ಲ ಮನೆ ಬಿಟ್ಟು ಹೋಗಿವೆ. ಹಾಗಾಗೇ ಮುಸ್ಲಿಂ ಮೂಲಭೂತವಾದದ ಬದಲು, ಆಡಳಿತ ವರ್ಗದ ಅಸಾಮರ್ಥ್ಯ ಮತ್ತು ಹಿಂದುಗಳ ವಂಚನೆಯೇ ಈ ಪರಿಸ್ಥಿತಿಗೆ ಮುಖ್ಯ ಕಾರಣ ಎಂದು ಸುಲಭವಾಗಿ ದೂಷಿಸಿಬಿಡಬಹುದು. ಆದರೆ, ಭಾರತೀಯ ಮುಸಲ್ಮಾನರಲ್ಲಿ ಹೆಚ್ಚುತ್ತಿರುವ ಮೂಲಭೂತವಾದದ ಸತ್ಯದರ್ಶನ ನಮಗಾಗಲೇಬೇಕು. ಭವಿಷ್ಯದಲ್ಲಿ ಎದುರಾಗುವ ಅಪಾಯಗಳು ಮತ್ತು ಪರಿಣಾಮಗಳನ್ನು ಎದುರಿಸಲು ಸಜ್ಜಾಗಲೇಬೇಕು.
'ಸೆಕ್ಯುಲರಿಸಂ' ಎಂಬ ಹೆಸರಿನ ಹಚ್ಚೆ ಹಾಕಿಸಿಕೊಂಡು ಅಡ್ಡಾಡುವ ಸೋನಿಯಾ-ಮನಮೋಹನ್‌ರ ಕೇಂದ್ರ ಸರ್ಕಾರ ಅಥವಾ ಅಖಿಲೇಶ್ ಯಾದವ್‌ರ ರಾಜ್ಯ ಸರ್ಕಾರ, ಮುಝಫರ್‌ನಗರ ಗಲಭೆಯ ಹಿಂದೆ ಗಹನ ಮತ್ತು ಘೋರ ಸತ್ಯವೊಂದಿದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮುಂದಾಗುವುದಿಲ್ಲ ಬಿಡಿ. ತಮ್ಮ ಸಹೋದರಿಯ ಗೌರವ ಉಳಿಸಲು ಇಬ್ಬರು ಜಾಟ್ ಯುವಕರು ಮುಂದಾದಾಗ ಅವರ ಮೇಲೆ ಅಲ್ಲಿನ ಮುಸಲ್ಮಾನರು ನಡೆಸಿದ ಹಲ್ಲೆಯಲ್ಲಿ ಆ ಕಟು ಸತ್ಯ ಸ್ಪಷ್ಟವಾಗಿ ಪ್ರಕಟಗೊಂಡಿತು. ಇನ್ನು ಹಿಂದುಗಳ ಮತ್ತು ರಕ್ಷಣಾ ದಳಗಳ ಮೇಲೆ ದಾಳಿಮಾಡಲು ಮುಸ್ಲಿಂ ಗಲಭೆಕೋರರು ಆಟೋಮೆಟಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎನ್ನುವ ವದಂತಿಯಲ್ಲೂ ಆ ನಿಷ್ಠುರ ಸತ್ಯ ಅಸ್ಪಷ್ಟವಾಗಿ ಗೋಚರವಾಯಿತು. ಅಲ್ಲಿ ನಿಜಕ್ಕೂ ನಡೆದದ್ದೇನು ಎನ್ನುವ  ವಿವರಗಳೆಲ್ಲ ಎಷ್ಟೊಂದು ಅಸ್ಪಷ್ಟವಾಗಿದ್ದವೆಂದರೆ, ಕೂಡಲೇ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಲಕ್ನೋದ ಪರಿಚಿತ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಪ್ರಶ್ನಿಸಿದೆ. ಅವರಿಗೂ ಕೂಡ ಮುಸಲ್ಮಾನರು ಆಟೊಮೆಟಿಕ್ ಗನ್‌ಗಳನ್ನು ಬಳಸಿದ ಸುದ್ದಿ ಗೊತ್ತಾಯಿತಂತೆ.
ಅವರು ಹಾಗಂತ ಕೂಡಲೇ ಇನ್ನೊಂದು ಪ್ರಶ್ನೆ ರೂಪುತಾಳಿತು. 'ಹಾಗಿದ್ದರೆ ಪಶ್ಚಿಮ ಉತ್ತರಪ್ರದೇಶದ ಯುವ ಮುಸಲ್ಮಾನರಲ್ಲಿ ಕೊಂಚ ಮತಾಂಧತೆ ಹೆಚ್ಚುತ್ತಿದೆ ಎಂದು ನಿಮಗನಿಸುತ್ತಿದೆಯೇ?' ಎಂದು ನಾನವರಿಗೆ ಕೇಳಿದೆ. ನನ್ನ ಮಾತನ್ನು ಅರ್ಧಕ್ಕೇ ಕತ್ತರಿಸಿ ಅವರು ಹೇಳಿದರು- "ಕೊಂಚ ಮತಾಂಧತೆ ಅಂದರೇನು? ನೀವು ಯಾವತ್ತಾದರೂ ದೇವಬಂದ್‌ನ ದಾರ್-ಉಲ್-ಉಲೂಮ್ ಸಂಘಟನೆಯ ಬಗ್ಗೆ ಕೇಳಿದ್ದೀರಾ? ಮುಝಫರ್‌ನಗರ ಮತ್ತು ಶಾಮ್ಲಿ ಪ್ರದೇಶಗಳಲ್ಲಿ ಜಿಹಾದಿ ಶಕ್ತಿಗಳು ಬೆಳೆಯುತ್ತಿವೆ ಮತ್ತು ಅವರಿಗೆ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳು ಸರಬರಾಜಾಗುತ್ತಿವೆ ಎನ್ನುವುದಕ್ಕೆ ವರ್ಷಗಳಿಂದ ಹಲವಾರು ಪುರಾವೆಗಳನ್ನು ಕಲೆಹಾಕಲಾಗಿದೆ. 80 ಮತ್ತು 90ರ ದಶಕದಿಂದಲೂ ಮೂಲಭೂತವಾದಿಗಳು ಈ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ" ಎಂದರು.
ನಿಮಗೆ ಉಮರ್ ಶೇಖ್ ನೆನಪಿದ್ದಾನಾ? ಅದೇ 1994ರಲ್ಲಿ 4 ಜನ ವಿದೇಶಿಯರನ್ನು ಒತ್ತೆಯಾಳಾಗಿಟ್ಟುಕೊಂಡ ವ್ಯಕ್ತಿ? ಈ ಕುಕೃತ್ಯ ನಡೆಸಿದ ಆತನನ್ನು ಬಂಧಿಸಿ ಜೈಲಿಗಟ್ಟಲಾಯಿತಾದರೂ ಮುಂದಿನ ವರ್ಷಗಳಲ್ಲಿ ಐಸಿ-814 ವಿಮಾನ ಅಪಹರಣ ಮಾಡಿದ ಉಗ್ರರು, ಉಮರ್ ಶೇಖ್‌ನನ್ನು ಬಂಧಮುಕ್ತಗೊಳಿಸಿದ್ದರು. ಆತ ಮುಂದೆ, ಡೇನಿಯಲ್ ಪರ್ಲ್ ಎಂಬ ಪತ್ರಕರ್ತನ ಹತ್ಯೆ(ಶಿರಚ್ಛೇದ) ಮತ್ತು ಇನ್ನಿತರ ಹಿಂಸಾತ್ಮಕ ಜಿಹಾದಿ ಕೃತ್ಯಗಳನ್ನು ನಡೆಸುತ್ತಾ ಹೋದ.
ಈ ಮುಝಫರ್‌ನಗರ ಮತ್ತದರ ಸುತ್ತಮುತ್ತಲಿನ ಪ್ರದೇಶಗಳೆಲ್ಲ ಮೊದಲಿನಿಂದಲೂ ಜಿಹಾದಿಗಳಿಗೆ ಸುರಕ್ಷಿತ ನೆಲೆಯಾಗಿವೆ. ದುರದೃಷ್ಟವೆಂದರೆ, ಈ ಮಗ್ಗುಲಿಗೆ ಮಾಧ್ಯಮದವರು ತಿರುಗದೇ ಇದ್ದದ್ದು. ಇದುವರೆಗೂ ಮಾಧ್ಯಮಗಳಲ್ಲಿ ಬಂದ ಸುದ್ದಿಯೇನು? ಹೇಗೆ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಈ ಕೋಮು ದಳ್ಳುರಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಟೀಕೆಯಷ್ಟೆ! ಇದು ಎಲ್ಲರಿಗೂ ಗೊತ್ತಿರುವ ವಿಷಯವೇ . ರಾಜಕಾರಣಿಗಳು ಮೊದಲಿನಿಂದಲೂ ಅದನ್ನೇ ಮಾಡುತ್ತಾ ಬಂದಿದ್ದಾರೆ. ಗೊತ್ತಿರದ ವಿಷಯವೆಂದರೆ ಅಂತಾರಾಷ್ಟ್ರೀಯ ಜಿಹಾದ್‌ನ ಪ್ರಭಾವ ಅಲ್ಲಿ ಹೆಚ್ಚುತ್ತಿರುವುದು ಮತ್ತು 'ಸೆಕ್ಯುಲರ್‌' ಸರ್ಕಾರ ಪರಿಸ್ಥಿತಿಯನ್ನು ತಡೆಯಲು ಶಕ್ತವಾಗಿದ್ದರೂ ಆ ಕೆಲಸಕ್ಕೆ ಮುಂದಾಗಲಿಲ್ಲ ಎನ್ನುವುದು.
  ಅಖಿಲೇಖ್‌ರ ನೇತೃತ್ವದ ಸಮಾಜವಾದಿ ಪಕ್ಷ ಮುಸಲ್ಮಾನರನ್ನು ಒಲಿಸಿಕೊಳ್ಳುವ ಚಪಲಕ್ಕೆ ಬಿದ್ದು ಹಿಂದುಗಳ ಮೇಲೆ ಹರಿಹಾಯುತ್ತಿದೆ. ಆದರೆ ಅದರ ಈ ತಂತ್ರ ಫಲಕೊಟ್ಟಿಲ್ಲ. ಉತ್ತರ ಪ್ರದೇಶ ಸರ್ಕಾರದ ಪ್ರಮುಖ ನಾಯಕ ಆಝಂ ಖಾನ್ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಹಿಂದು ಮತ್ತು ಮುಸಲ್ಮಾನರ ಮಧ್ಯೆ ದ್ವೇಷ ಬಿತ್ತಲು ಪ್ರಯತ್ನಿಸುತ್ತಲೇ ಬಂದಿದೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳುತ್ತಿವೆ.
'ಇದೆಲ್ಲ ನಿಜ' ಎಂದು ಹೇಳುತ್ತಾರೆ ಆ ನಿವೃತ್ತ ಅಧಿಕಾರಿ. ಹಿಂದು ಮತ್ತು ಮುಸಲ್ಮಾನರ ನಡುವೆ ದೊಡ್ಡ ಬಿರುಕು ಕಾಣಿಸಿಕೊಂಡದ್ದಕ್ಕೆ ಮುಖ್ಯ ಕಾರಣ ಆಯಾ ಧರ್ಮದ ನಾಯಕರೇ ಎಂದರವರು. 'ಹಾಗಿದ್ದರೆ ಇದರಿಂದಾಗಿ ನರೇಂದ್ರ ಮೋದಿಯವರಿಗೆ ಲಾಭವಾಗಲಿದೆಯೇ?' ಎನ್ನುವ ಪ್ರಶ್ನೆಯನ್ನು ಮುಂದಿಟ್ಟೆ. 'ಇಲ್ಲ' ಎಂದು ಹೇಳುವುದಕ್ಕೆ ಅವರಿಗೆ ಸಾಧ್ಯವಿಲ್ಲ ಎನ್ನುವುದು ನನಗೆ ಗೊತ್ತಿತ್ತು. "ಬಿಜೆಪಿಗೆ ಹೇಳಿಕೊಳ್ಳುವಷ್ಟು ಬೆಂಬಲ ಇಲ್ಲಿ ಇಲ್ಲ. ಆದರೆ ಮೋದಿಯವರಿಗಂತೂ ಬೆಂಬಲ ಸಿಗಲಿದೆ. ಮತಗಳ ಧ್ರುವೀಕರಣ ಆಗುತ್ತದೆ ಎನ್ನುವ ಕಾರಣದಿಂದಲ್ಲ, ಬದಲಾಗಿ ಅವರು ಬದಲಾವಣೆ ತರಲು ಶಕ್ತರು ಎನ್ನುವ ಕಾರಣಕ್ಕೆ. ನರೇಂದ್ರ ಮೋದಿಯವರನ್ನು ನಿಜವಾದ ನಾಯಕ ಎಂದು ನೋಡಲಾಗುತ್ತಿದೆ" ಎಂದರು.
ಏನಾಗುತ್ತದೆ ಎನ್ನುವುದು ಮುಂದಿನ ಲೋಕಸಭಾ ಚುನಾವಣೆಯ ನಂತರವೇ ತಿಳಿಯಲಿದೆ. ಆದರೆ ಮತಗಳ ಧ್ರುವೀಕರಣದಿಂದ ಉಂಟಾಗುವ ಅಪಾಯದ ಬಗ್ಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಲ್ಯಾಪ್‌ಟಾಪ್ ವಿತರಿಸಿ ಮತ್ತು ಮುಸ್ಲಿಂ ಟೋಪಿಯನ್ನು ಧರಿಸಿ ಜನರನ್ನು ಮೂರ್ಖರನ್ನಾಗಿಸಬಹುದು ಎಂದು ಅಖಿಲೇಶ್ ಭಾವಿಸಿದ್ದಾರೆ. ಆದರೆ ಜನರಿಗೆ ಅಖಿಲೇಶ್‌ರಲ್ಲಿ ನಾಯಕತ್ವದ ಗುಣವಿಲ್ಲ ಎನ್ನುವುದಂತೂ ಚೆನ್ನಾಗಿ ತಿಳಿದಿದೆ. ತಮ್ಮ ಪ್ರತಿ ಹೆಜ್ಜೆಯಲ್ಲೂ ಅಖಿಲೇಶ್, ತಮ್ಮ ಬಳಿ ಹೊಸ ಆಲೋಚನೆಗಳಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾ ಸಾಗಿದ್ದಾರೆ. ಅವರನ್ನು ದುರ್ಬಲ ಮುಖ್ಯಮಂತ್ರಿಯೆಂದೇ ಆ ರಾಜ್ಯದಲ್ಲಿ ನೋಡಲಾಗುತ್ತಿದೆ. ಒಂದು ರಾಜ್ಯದ ಮುಖ್ಯಮಂತ್ರಿ ದುರ್ಬಲನಾಗಿದ್ದರೆ, ಕೋಮುಗಳ ನಡುವಿನ ಅಂತರ ಹೆಚ್ಚುತ್ತಲೇ ಸಾಗುತ್ತದೆ, ಸಮಸ್ಯೆಗಳು ಶುರುವಾಗುತ್ತವೆ. ಆ ನಿವೃತ್ತ ಪೊಲೀಸ್ ಅಧಿಕಾರಿ ಹೇಳಿದ ಕೊನೆಯ ಮಾತಲ್ಲೂ ಇದೇ ಭಾವವಿದೆ. ಅವರು ಹೇಳುತ್ತಾರೆ- "ಸರ್ಕಾರವೊಂದು ಕೋಮು ಗಲಭೆಯ ವೇಳೆಯಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರರೂಪ ತಾಳುತ್ತದೆ. ಇಂಥದ್ದೇ ಸನ್ನಿವೇಶ ಮುಝಫರ್‌ನಗರದಲ್ಲಿ ಎದುರಾಗಿದೆ"
ಉತ್ತರಪ್ರದೇಶದಲ್ಲಿ ಘಟಿಸಿದ ಅತಿಕೆಟ್ಟ ಹಿಂಸಾಚಾರಗಳಲ್ಲಿ ಇದೂ ಒಂದು. ಹಿಂದು-ಮುಸ್ಲಿಂ ಕಲಹಗಳ ದೀರ್ಘ ಇತಿಹಾಸ ಹೊಂದಿರುವ ಆ ರಾಜ್ಯದಲ್ಲಿ ಈಗ ನಡೆದಿರುವ ಘಟನೆ ಅಪಶಕುನವೇ ಸರಿ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ಧ ಸ್ಥಿತಿಯ ಝಳ ಭಾರತೀಯ ಮುಸಲ್ಮಾನರಿಗೂ ತಾಕುತ್ತಿದೆ.  ಹಿಂದೆಲ್ಲ ಇಂಥ ಮಾತುಗಳನ್ನು ನಾನು ಪಾಕಿಸ್ತಾನಿ ಮುಸಲ್ಮಾನರಿಂದ ಕೇಳಿದ್ದೇನೆ. ಆದರೀಗ "ಇಸ್ಲಾಮಿಕ್ ಗುರಿ"ಯೊಂದಿಗೆ ಗರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಭಾರತದ ಕೆಲ ಮುಸಲ್ಮಾನರೂ ಅದೇ ಧಾಟಿಯಲ್ಲಿ ಮಾತನಾಡತೊಡಗಿದ್ದಾರೆ.

- ತವ್ಲೀನ್ ಸಿಂಗ್,
ಪತ್ರಕರ್ತೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.