ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಬುದ್ಧಿಜೀವಿಗಳ ಬೆದರಿಕೆ
ನರೇಂದ್ರ ಮೋದಿಯವರನ್ನು ತನ್ನ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಬಿಂಬಿಸುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಪರ ವಿರೋಧಿ ಪ್ರತಿಕ್ರಿಯೆಗಳು ಬರುತ್ತಿವೆ. ಈ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ಬುದ್ದಿಜೀವಿಗಳ ಧಾಟಿ ಹಾಗು ಶೈಲಿಯ ಬಗೆಗೆ ಗಂಭೀರವಾದ ಚರ್ಚೆಯಾಗುವುದು ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಎಲ್ಲರಿಗೂ ದತ್ತವಾಗಿರುವ ಒಂದು ವಿಶೇಷ ಹಕ್ಕು. ಈ ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಬುದ್ಧಿಜೀವಿಗಳ ಪಾಲಿಗೆ ವಿಶೇಷ ಹಕ್ಕಿನಂತಾಗಿರುವುದು ದುರದೃಷ್ಟಕರ ಸಂಗತಿ. ಅದರಲ್ಲಿಯು ಕೆಲವು ಕನ್ನಡ ಬುದ್ಧಿಜೀವಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಪಪ್ರಚಾರಕ್ಕೆ, ಬೆದರಿಕೆಗೆ ಮತ್ತು ಆರೋಗ್ಯಕರ ಸಮಾಜದ ತೇಜೋವಧೆಗೆ ನಿರ್ಲಜ್ಜವಾಗಿ, ನಿರಂತರವಾಗಿ ಏಕ ಮುಖ ಚಿಂತನೆಯಿಂದ ಕಾರ್ಯಪ್ರವೃತ್ತರಾಗಿರುವುದು ಗಾಬರಿ ಹುಟ್ಟಿಸುವಂತಿವೆ.
ಇತ್ತೀಚೆಗೆ ಬುದ್ದಿಜೀವಿಯೊಬ್ಬರು ನರೇಂದ್ರ ಮೋದಿಯ ಬಗೆಗೆ ವ್ಯಕ್ತಪಡಿಸಿದ ಅಭಿಪ್ರಾಯದ ರೀತಿ ಅವುಗಳಲ್ಲಿ ಒಂದು. ಮೋದಿಯವರ ವೈಯಕ್ತಿಕ ತೇಜೋವಧೆಗಾಗಿ ಇನ್ನಿಲ್ಲದ ಅಪಪ್ರಚಾರದಲ್ಲಿ (ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸುವಂತೆ) ತೊಡಗಿದ ಈ ಬುದ್ಧಿಜೀವಿಗಳು ಸ್ವತಂತ್ರ ವಿಚಾರಗಳನ್ನು ಹತ್ತಿಕ್ಕಲು ಯಾವ ಮಟ್ಟಕ್ಕೆ ಇಳಿಯಬಲ್ಲರೆಂಬುದಕ್ಕೆ ಇದು ನಿದರ್ಶನ. ನರೇಂದ್ರ ಮೋದಿಯವರ ವಿರುದ್ಧವಾಗಿ ಅಥವಾ ಹಿಂದುತ್ವವನ್ನು ವಿರೋಧಿಸಲು ಅವರಿಗಿರುವ ಹಕ್ಕನ್ನು ಎಲ್ಲರೂ ಗೌರವಿಸುತ್ತಾರೆ. ಅಂತೆಯೇ ಇನ್ನೊಂದು ವರ್ಗದವರ ಅಥವಾ ಕೆಲವು ಮಾಧ್ಯಮದವರ ಹಿಂದುತ್ವವಾದಿ ನಿಲುವನ್ನ ಅಥವಾ ನರೇಂದ್ರ ಮೋದಿಯವರ ಉತ್ತಮ ಆಡಳಿತ ಶೈಲಿಯನ್ನು ಪ್ರಶಂಶಿಸುವ ಹಕ್ಕನ್ನು ಮಾಧ್ಯಮಗಳೋ ಇನ್ಯಾರೋ ಪ್ರಕಟಿಸಿದರೆ ಬುದ್ಧಿಜೀವಿಗಳಲ್ಲಿ ಅದಕ್ಕೆ ಚರ್ಚೆಯ ಬದಲಾಗಿ ಅಪಪ್ರಚಾರ, ತಿರಸ್ಕಾರವೇಕೆ? ಇನ್ನೊಂದು ವಾದವನ್ನು ಹತ್ತಿಕ್ಕುವ ಬೆದರಿಕೆಯೇಕೆ? ಒಟ್ಟಾರೆಯಾಗಿ ಇಬ್ಬರ ನಡುವೆ ನಡೆಯಬೇಕಾದ ಚರ್ಚೆ ನಾಗರಿಕ ಸಮಾಜಕ್ಕೆ ಭೂಷಣ ತರುವಂತಿರಬೇಕು. ರಾಜಕಾರಣಿಗಳಿರಲಿ, ಲೇಖಕರಿರಲಿ ಅಥವಾ ಬುದ್ಧಿಜೀವಿಗಳಿರಲಿ ತಮ್ಮ ಎಲ್ಲಾ ನಿಲುವುಗಳನ್ನು ಸಮಾಜಕ್ಕೆ ಸ್ಪಷ್ಟಪಡಿಸಲು ಅನಿವಾರ್ಯವಾಗಿ ಮಾಧ್ಯಮವನ್ನು ಅವಲಂಬಿಸಬೇಕಾಗಿದೆ. ಆದರೆ ಬುದ್ಧಿಜೀವಿಗಳು, ಮಾಧ್ಯಮದಲ್ಲಿ ತಮ್ಮ ವಿಷಪೂರಿತ ಏಕಮುಖಿ ಪ್ರಚಾರದ ಭಾಷಣ ಮತ್ತು ಲೇಖನಗಳನ್ನು ಮಾತ್ರ ಮುದ್ರಿಸುವಂತೆ ಒತ್ತಾಯ, ಬೆದರಿಕೆಗಳಲ್ಲಿ ನಿರತವಾದರೆ ಗತಿ ಏನು? ಸಮಕಾಲೀನ ಕರ್ನಾಟಕದಲ್ಲಿ ಇಂಥ ವಿಷಮ ಸನ್ನಿವೇಶ ಈಗ ಜನರ ಮತ್ತು ಮಾಧ್ಯಮಗಳ ಮುಂದಿದೆಯೆಂದೇ ನಾವೆಲ್ಲಾ ತೀವ್ರವಾಗಿ ಆತಂಕಗೊಂಡಿದ್ದೇವೆ. ಬುದ್ಧಿಜೀವಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಜನರ ಅಥವಾ ಮಾಧ್ಯಮಗಳ ಅಭಿಪ್ರಾಯಗಳನ್ನು ಒಪ್ಪದಿರಲು, ಖಂಡಿಸಲು ನಿಮಗೆ ಹಕ್ಕಿದೆ. ಆದರೆ, ನಿಮ್ಮ ಟೀಕೆ ಟಿಪ್ಪಣಿಗಳು, ಬೆದರಿಕೆಗಳು ಅಪಪ್ರಚಾರಕ್ಕೆ ಮತ್ತು ಸ್ವಸ್ಥ ಸಮಾಜದ ತೇಜೋವಧೆ ಮಟ್ಟಕ್ಕೆ ಇಳಿಯಬಾರದು. ಈ ಅಪಪ್ರಚಾರಕ್ಕೆ, ಬೆದರಿಕೆಗೆ ಮತ್ತು ಸ್ವಸ್ಥ ಸಮಾಜದ ತೇಜೋವಧೆಯ ದಾಳಿಗಾಗಿ ನೀವು ಅನುಸರಿಸುವ ತಂತ್ರಗಳು, ಬಳಸಿಕೊಳ್ಳುವ ವ್ಯಕ್ತಿಗಳು ಇದೆಲ್ಲಾ ಯಾವ ಮಟ್ಟ ತಲುಪಿದೆ ಎಂದರೆ ಮತ್ತೆ ನಾವು ಸ್ವತಂತ್ರ ಪೂರ್ವ ಯುಗದ ಆಂಗ್ಲರ ಕ್ರೌರ್ಯ ಪರಿಸರಕ್ಕೆ ಹಿಂದಿರುಗುತ್ತಿರುವಂತೆ ಭಾಸವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ತಾವೆಲ್ಲಾ ಬುದ್ಧಿಜೀವಿಗಳು ಒಂದೆಡೆ ಸೇರಿ ಈ ಸಂದರ್ಭವನ್ನು ಕುರಿತು ಸಾಧ್ಯವಾದ ಮಟ್ಟಿಗೆ ವಸ್ತುನಿಷ್ಠವಾಗಿ ಚರ್ಚೆ ನಡೆಸಿ, ಇಂಥ ವಾದ ವಿವಾದಗಳ ಗಾಂಭೀರ್ಯವನ್ನು ಕಾಪಾಡಿಕೊಂಡು ಬರಬೇಕಾಗಿ ವಿನಯ ಪೂರ್ವಕ ಮನವಿ. ಈಗ ಹಲವಾರು ವರ್ಷಗಳಿಂದ ಬುದ್ಧಿಜೀವಿಗಳಲ್ಲಿ ವಿಷಯಗಳ ಆಯ್ಕೆ, ಅವುಗಳನ್ನು ರೋಮಾಂಚನಕಾರಕವಾಗಿ ಬಿಂಬಿಸುವುದು, ಇಲ್ಲದ ಭಯವನ್ನು ಸೃಷ್ಟಿಸಿ ವೈಭವೀಕರಿಸುವುದು, ವ್ಯಕ್ತೀಕರಿಸುವುದು ಕುರಿತಂತೆ ಸಾಕಷ್ಟು ಚರ್ಚೆಯಾಗುತ್ತಲಿದ್ದು, ಬುದ್ಧಿಜೀವಿಗಳ ಭಾಷೆ, ನಡತೆಯನ್ನು (ಮುಖ್ಯವಾಗಿ ನಡತೆಯನ್ನು) ಕಾನೂನು ಮೂಲಕ ನಿಯಂತ್ರಿಸಬೇಕೆ ಅಥವಾ ಸ್ವಯಂ ನಿಯಂತ್ರಣವೇ ಸರಿಯಾದ ಮಾರ್ಗವೇ ಅಥವಾ ಇನ್ಯಾವುದಾದರೂ ಮಾರ್ಗಗಳಿವೆಯೇ ಎಂಬ ಚರ್ಚೆಯು ಬೇಕಾಗಿದೆ.
ಬುದ್ಧಿಜೀವಿಗಳಲ್ಲಿ ಕೊನೆಯಲ್ಲೊಂದು ವಿಜ್ಞಾಪನೆ: ಮಾದ್ಯಮಗಳಲ್ಲಿ ಚರ್ಚೆಗೆ ಕಿಡಿ ಹಚ್ಚಿ ಓಡಿ ಹೋಗಬೇಡಿ (ದೇಶ ಬಿಟ್ಟು ಕೂಡ). ಪೂರ್ತಿ ಚರ್ಚೆಯಲ್ಲಿ ಭಾಗವಹಿಸಿ. ಮಧ್ಯದಲ್ಲೇ ಪಲಾಯನ ಬೇಡ. ನಿಮ್ಮ ವಾದವನ್ನೇ ಎಲ್ಲರೂ ಒಪ್ಪಿಕೊಳ್ಳಬೇಕೆಂಬ ಏಕ ಮುಖ ಧೋರಣೆ ಬೇಡ. ನಿಮ್ಮ ವಿಚಾರದ ವಿರುದ್ಧ ಇರುವ ವಾದಗಳಿಗೆ ಸರಿಯಾದ ಸಾಕ್ಷಿ, ಆಧಾರ ಪ್ರಸ್ತುತ ಪಡಿಸಿದಾಗ ನೀವು ನಿಮ್ಮ ವಾದಗಳಿಗೆ ಸರಿಯಾದ ಸಾಕ್ಷಿ, ಆಧಾರ ಪ್ರಸ್ತುತ ಪಡಿಸಿ. ಆ ಮೂಲಕ ಒಂದು ಮಂಥನವಾಗಲಿ. ಅದು ಬಿಟ್ಟು ಚರ್ಚೆಯ ಮಧ್ಯದಲ್ಲೇ ನಿಮ್ಮ ವಾದವನ್ನು ಮುಗಿಸಿ ಮತ್ತೆ ಚರ್ಚೆಯೇ ನಡೆಯಬಾರದು ಎಂದುಕೊಳ್ಳುತ್ತಾ ಎದ್ದು ಹೋಗಿ ಮಾಧ್ಯಮವನ್ನಾಗಲಿ, ಇತರರನ್ನಾಗಲಿ ಹೊರಗಡೆ ನಿಂತು ಟೀಕಿಸುವುದು, ಚರ್ಚೆಯ ಇನ್ನೊಂದು ಮುಖಕ್ಕೆ ದಾಳಿ ಇಡುವುದು, ಬೆದರಿಕೆ ಒಡ್ಡುವುದು ಮಾಡಬೇಡಿ. ನಿಮ್ಮ ವಿಚಾರದ ಬಗ್ಗೆ ಜನರಲ್ಲಿ, ಸಮಾಜದಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಶ್ನೆಗಳಿವೆ. ಅವುಗಳಿಗೆ ಉತ್ತರಿಸಿ. ಅದೂ ಒಂದು ಒಳ್ಳೆಯ ಸಾಹಿತ್ಯವಾಗಿ ಹರಿಯಲಿ.
(ಬಹು ಸಂಖ್ಯಾತ ಓದುಗರು ಈ ಹೇಳಿಕೆಗೆ ಒಪ್ಪಿಗೆ ಕೊಡುತ್ತಾರೆ ಎಂಬ ಭಾವನೆಯಿಂದ.....)
- ಅರವಿಂದ ಸಿಗದಾಳು, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

