ಇದು ಚುನಾವಣೆಯ ವರ್ಷ ಎನ್ನುವುದು ಕರ್ನಾಟಕದ ಜನಸಾಮಾನ್ಯರಿಗೆ ಗೊತ್ತಾಗುತ್ತಿರುವುದು ಉತ್ತರ ಭಾರತದ ರಾಜ್ಯಗಳಲ್ಲಿ ಸದ್ಯದಲ್ಲೇ ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಚಾರದ ಗದ್ದಲದಿಂದ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಚಟುವಟಿಕೆ ಎಂದರೆ ಪಕ್ಷಗಳ ಆಂತರಿಕ ಆಗು-ಹೋಗುಗಳ ವಿಚಾರ ವಿನಿಮಯ ಅಷ್ಟೇ.
ಸುಮಾರು ಐದು ವರ್ಷಗಳ ಹಿಂದೆ (ಏಳೆಂಟು ತಿಂಗಳು ಕಡಿಮೆ) ಯಡಿಯೂರಪ್ಪ ಅವರು ಬಿಜೆಪಿಯ "ಪ್ರಶ್ನಾತೀತ" ನಾಯಕರಾಗಿದ್ದ ದಿನಗಳಲ್ಲಿ ಹದಿನೆಂಟು ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷವನ್ನು ದಡಮುಟ್ಟಿಸಿದ್ದರು ಎನ್ನಬಹುದು.
ಈಗಿನ ಪರಿಸ್ಥಿತಿ ಬದಲಾಗಿದೆ. ಯಡಿಯೂರಪ್ಪ ಅವರ ವೈಯಕ್ತಿಕ ಪ್ರತಿಷ್ಠೆ ಹಾಗೂ ರಾಜ್ಯ ಪ್ರಬಲ ರಾಜಕೀಯ ಸಮುದಾಯದ ಬೆಂಬಲಗಳೆರಡೂ ಕುಗ್ಗಿರುವುದು ಸ್ಪಷ್ಟ. ವಿಧಾನ ಸಭೆಯ ಫಲಿತಾಂಶವೇ ಇದಕ್ಕೆ ನಿದರ್ಶನ. ಕಾಂಗ್ರೆಸ್ಸೂ ಇನ್ನು ಲೋಕಸಭೆ ಚುನಾವಣೆ ಸಿದ್ಧತೆಯ ವಿಚಾರದಲ್ಲಿ ಮಂದಗತಿಯಲ್ಲೆ ಸಾಗಿದೆ. ಪಕ್ಷದ ಸ್ಥಳೀಯ ನಾಯಕರಿಗೆ, ರಾಜ್ಯದಲ್ಲಿ ರಾಜಕೀಯವಾಗಿ ಯಾವ ತೊಂದೆರೆಯೂ ಇಲ್ಲ. ಸವಾಲನ್ನೆಸೆಯುವ ಎದುರಾಳಿಯೇ ಇಲ್ಲ ಎನ್ನುವ ನಂಬಿಕೆ ಇರುವಂತಿದೆ.
ಆದ್ದರಿಂದ ಸಾರ್ವಜನಿಕ ಜೀವನದಲ್ಲಿ ಆಸಕ್ತಿ ಇರುವ ಜನವರ್ಗಗಳಲ್ಲಿ ಪ್ರತ್ಯಕ್ಷ ರಾಜಕೀಯಕ್ಕೆ ಸಂಬಂಧ ಪಡದೇ ಇರುವ ಆದರೆ ರಾಜಕೀಯದ ಸೋಂಕು ಇರಬಹುದಾದ ವಿಷಯಗಳ ಚರ್ಚೆಗೇ ಹೆಚ್ಚು ಒಲವು ಕಂಡುಬಂದಿರುವುದು.
ಅದರಲ್ಲಿ ಅತಿ ಪ್ರಮುಖವಾದ ವಿಚಾರ ಎಂದರೆ ಲೋಕಸೇವಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರ (ಒಂದು ಪ್ರತಿಷ್ಠಿತ ಹುದ್ದೆಗೆ 75 ಲಕ್ಷ ರುಪಾಯಿಗಳಿಂದ ಒಂದು ಕೋಟಿ ರುಪಾಯಿಗಳವರೆಗೂ ಲಂಚ) ಹಾಗೂ ಅದರ ವಿರುದ್ಧ ಕೆಲವರು ನ್ಯಾಯಾಲಯದ ಮೂಲಕ ನಡೆಸಿರುವ ಹೋರಾಟ. ಹೈಕೋರ್ಟಿನಲ್ಲಿ 2011ರ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕದ ಸಂಬಂಧದ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದಾಗ, ರಾಜ್ಯ ಸರ್ಕಾರ ಆರಂಭದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದೂ ಒಂದು ಹಗರಣ ಅಷ್ಟೇ ಎನ್ನುವಂತಿತ್ತು ಸರ್ಕಾರದ ನಿಲವು.
ಆದರೆ ಹೈಕೋರ್ಟಿನ ಮುಂದೆ ಧಾರಾಕಾರವಾಗಿ ಹರಿದು ಬಂದು ಸಾಕ್ಷ್ಯ- ಆಧಾರಗಳ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಮುಖವನ್ನು ಉಳಿಸಿಕೊಳ್ಳುವುದಕ್ಕಾದರೂ ಕಾರ್ಯಶೀಲವಾಗಬೇಕಾಯಿತು. ಅದರ ಪರಿಣಾಮ ವಾಸ್ತವದಲ್ಲಿ ಪ್ರಜ್ಞಾವಂತ ಸಮಾಜಕ್ಕೆ ಸಿಡಿಲು ಬಡಿದಂತಾಗಿದೆ. ನಿಜ, ಈಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ರಾಜಕೀಯವಾಗಿ 2011ರ ಲೋಕಸೇವಾ ಆಯೋಗದ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಉದ್ದೇಶ ಇರುವಂತೆ ಕಂಡುಬಂದಿಲ್ಲ. ಆದರೂ ಸರ್ಕಾರ ಸಹಜವಾದ ಚೋಬದ್ರತನದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವುದು ನಿಧಾನವಾಯಿತು. ಹೈಕೋರ್ಟಿನ ನ್ಯಾಯಪೀಠದ ಚಾಟಿ ಬಲವಾಗಿಯೇ ಬೀಸಿತ್ತು.
ಈಗ, ಈ ಹಗರಣದ ತನಿಖೆ ನಡೆಸಿದ ಸಿಐಡಿ, ಸರ್ಕಾರಕ್ಕೆ ಎಂಟು ಮಂದಿ ಆರೋಪಿಗಳತ್ತ ಖಚಿತವಾಗಿ ತೋರು ಬೆರಳನ್ನು ತೋರಿಸಿ, ಕರಡು ಆರೋಪಗಳ ಪಟ್ಟಿಯನ್ನೂ ಸಲ್ಲಿಸಿ, ಅವರೆಲ್ಲರ ವಿರುದ್ಧ (ಅಲ್ಲಿ ಪ್ರತಿಷ್ಠಿತರಿದ್ದಾರೆ, ಅತಿ ಪ್ರತಿಷ್ಠಿತರೂ ಇದ್ದಾರೆ) ಮೊಕದ್ದಮೆಗಳನ್ನು ಹೂಡಲು ಅನುಮತಿಯನ್ನು ವಿಧಿಬದ್ಧವಾಗಿ ಕೇಳಿದೆ. ಸರ್ಕಾರಕ್ಕೆ ಈ ಕಾಯಿದೆಬದ್ಧ ಬೇಡಿಕೆಯನ್ನು ತಿರಸ್ಕರಿಸುವುದಕ್ಕೆ ಯಾವ ಕಾರಣವೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಂದು ಕಡೆ "ಆಯೋಗದಲ್ಲಿ ಹದಗೆಟ್ಟ ವಾತಾವರಣ ಇರಬಹುದು. ಹಾಗೆಂದ ಮಾತ್ರಕ್ಕೇ ಸಂವಿಧಾನಾತ್ಮಕವಾದ ಸಂಸ್ಥೆಯನ್ನು ರದ್ದು ಮಾಡುವಂತಿಲ್ಲ. ದುರಸ್ತಿ ಮಾಡಬೇಕು, ಮಾಡೋಣ್ವಂತೆ" ಎಂದಿದ್ದಾರೆ. ಅಲ್ಲಿಗೆ ಸಿಐಡಿಯ ಬೇಡಿಕೆಗೆ ಒಪ್ಪಿಗೆ ಸಿಗುವುದು ಹೆಚ್ಚು ಕಡಿಮೆ ಖಚಿತ ಎಂದಾಯಿತು. ಮುಂದೆ ವಿಶೇಷ ನ್ಯಾಯಾಲಯ, ವಿಶೇಷ ಪ್ರಾಸಿಕ್ಯೂಟರ್‌ಗಳ ನೇಮಕಗಳೆಲ್ಲವೂ ನಿರೀಕ್ಷಿಸಬಹುದಾದ ಕ್ರಮಗಳೇ. ಆದರೆ ಈ ಪ್ರಕರಣದಲ್ಲಿ ಶೀಘ್ರ ನ್ಯಾಯದಾನವನ್ನು ನಿರೀಕ್ಷಿಸುವುದು ಕಷ್ಟ.
ಅಕ್ರಮ ಗಣಿಗಾರಿಕೆ: ಅದೇ ರೀತಿ ಕಬ್ಬಿಣದ ಅದಿರನ್ನು ಬೇಲೆಕೇರಿ ರೇವಿನಿಂದ ಅಕ್ರಮವಾಗಿ ವಿದೇಶಗಳಿಗೆ ಕಳಿಸಿದ ಪ್ರಕರಣದ ತನಿಖೆಯಲ್ಲೂ ಒಂದು ಹಂತ ಮುಗಿದಿದ್ದು, ಕೆಲವು ಕಂಪನಿಗಳು ಹಾಗೂ ವ್ಯಕ್ತಿಗಳ ವಿರುದ್ಧ ನ್ಯಾಯಾಂಗದ ವಿಚಾರಣೆಗೆ ವ್ಯವಸ್ಥೆಯಾಗಬೇಕೆನ್ನುವ ಬೇಡಿಕೆಯನ್ನೂ ಸಿಐಡಿ ಸರ್ಕಾರದ ಮುಂದಿಟ್ಟಿದೆ.
ಅಕ್ರಮ ಗಣಿಗಾರಿಕೆಯ ಹಗರಣದಲ್ಲಿ ವಿದೇಶಿ ಹಣದ ಅವ್ಯವಹಾರದ ಪ್ರಸ್ತಾವೂ ಇರುವುದರಿಂದ, ಕರ್ನಾಟಕ, ಆಂಧ್ರ, ಗೋವಾ ರಾಜ್ಯಗಳಲ್ಲೂ ಇಂತಹ ವ್ಯವಹಾರ ನಡೆದಿರುವುದರಿಂದ, ಇಲ್ಲಿ ರಾಷ್ಟ್ರೀಯ ಆಸಕ್ತಿಯೂ ಇದ್ದೇ ಇದೆ.
ಕರ್ನಾಟಕದ ಮಟ್ಟಿಗೆ ಈ ಹಗರಣಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ರಾಜಕೀಯವಾಗಿ ಮುಖ್ಯ. ಎಸ್ಸೆಮ್ ಕೃಷ್ಣ ಸರ್ಕಾರದ ಕಾಲದ್ದೂ ಹಗರಣಗಳಿವೆ. ಅನಂತರದ ಧರಂಸಿಂಗ್- ಕುಮಾರಸ್ವಾಮಿ ಅವರ ಕಾಲದ್ದೂ ಇವೆ. ಆದರೆ ಅತಿ ಹೆಚ್ಚು ಪ್ರಚಾರ ಪಡೆದಿರುವುದು ಯಡಿಯೂರಪ್ಪ ಅವರ ಕಾಲದಲ್ಲಿ ಬೆಳಕಿಗೆ ಬಂದ ಹಗರಣಗಳು.
ನ್ಯಾಯಾಲಯದ ವಿಚಾರಣೆ ಎಂದರೆ ಕಾಲಮಿತಿ ಇಲ್ಲ ಎಂದೇ ಅರ್ಥ. ನ್ಯಾಯಾಲಯದ ವೇದಿಕೆಯ ಹೊರಗಡೆ, ಹಗರಣಗಳಿಗೆ ಸಂಬಂಧಪಟ್ಟಂತೆ ಬಗೆ ಬಗೆಯ ವಿವರಗಳು ಹಲವು ಮೂಲಗಳಿಂದ ಪ್ರಕಟವಾಗುವುದೂ ಉಂಟು. ಈ ಪರಿಸ್ಥಿತಿ ಅಧಿಕಾರಸ್ಥ ರಾಜಕಾರಣಿಗಳ (ಮಾಜಿ ಹಾಗೂ ಹಾಲಿ) ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದಾದರೂ ಒಂದೆರಡು ಪ್ರಕರಣಗಳನ್ನು ಆರಿಸಿ ಕ್ಷಿಪ್ರಗತಿಯ ವಿಚಾರಣೆಗೆ ಅದನ್ನು ಗುರಿಪಡಿಸುವುದು ಸೂಕ್ತ. ಆದರೆ ಅಂತಹ "ಆಯ್ಕೆ ವ್ಯವಸ್ಥೆ" ಕಾಯಿದೆಯ ಚೌಕಟ್ಟಿನಲ್ಲಿ ಸಾಧ್ಯವೇ ಇಲ್ಲವೇ ಎನ್ನುವುದರ ಪರಿಶೀಲನೆಯಾಗಬೇಕು. ಜನರ ಗಮನ ಸೆಳೆಯುವ ರೀತಿಯಲ್ಲಿ ನ್ಯಾಯಾಲಯಗಳಲ್ಲಿನ ವಿಚಾರಣೆ ನಡೆಯದೇ ಹೋದರೆ, ಬೀದಿಯಲ್ಲಿ ಜನರೇ ತಮಗೆ ತೋಚಿದಂತೆ ಮಾತಾಡಿಕೊಳ್ಳುವುದು ಸಾರ್ವಜನಿಕ ಜೀವನಕ್ಕೆ ಒಳ್ಳೆಯದಲ್ಲ.
ರಾಜಕೀಯ ನಿಂತ ನೀರಲ್ಲ: ನಿಜ, ಮೊದಲೆ ಹೇಳಿದಂತೆ ಈಗ ರಾಜ್ಯದಲ್ಲಿ ಹೇಳಿಕೊಳ್ಳುಂತಹ ರಾಜಕೀಯ ಚಟುವಟಿಕೆ ಬಹಿರಂಗವಾಗಿ ಕಂಡುಬಂದಿಲ್ಲ. ಆದರೆ ರಾಜಕೀಯ ನಿಂತ ನೀರಲ್ಲ. ರಾಜಕಾರಣಿಗಳು ಅಲ್ಲಿ- ಇಲ್ಲಿ ಸೇರುತ್ತಲೇ ಇರುತ್ತಾರೆ. ಅಲ್ಲೇನೂ ವೇದಾಂತದ ಪ್ರಸ್ತಾಪ ಮಾಡುವುದಿಲ್ಲ. ರಾಜಕೀಯ ಕುರಿತೇ ಮಾತನಾಡುವುದು.
ಬೇರೆ ಬೇರೆ ನೆಪಗಳಲ್ಲಿ ಸಣ್ಣ-ಪುಟ್ಟ ಕೂಟಗಳು ನಡೆಯುತ್ತಿವೆ. ಎಲ್ಲರೂ ಸಮಾನಮನಸ್ಕರನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ. ಅದು ಒಂದು ರೀತಿಯಲ್ಲಿ ನಿರಂತರ ಚಟುವಟಿಕೆ ಎನ್ನಬಹುದು. ರಾಜ್ಯದ ಅತಿ ದೊಡ್ಡ ಪಕ್ಷವಾಗಿ, ಅಧಿಕಾರದ ಸೂತ್ರಗಳನ್ನು ಹಿಡಿದಿರುವ ಕಾಂಗ್ರೆಸ್ಸಿನಲ್ಲಿ ಅಧಿಕಾರ ಇರುವುದು- ಇಲ್ಲದಿರುವವರ ನಡುವೆ ಸಮನ್ವಯದ ಸಾಧನೆಯ ಮಾರ್ಗ ಹಾಗೂ ಸಮಿತಿಯ ರಚನೆ ಪ್ರಸ್ತಾಪ ನಿಂತಿಲ್ಲ. ದೆಹಲಿಯ ಪ್ರಭಾರಿ ದಿಗ್ವಿಜಯ ಸಿಂಗ್ ಅವರಿಗೆ ಈ ಕಡೆ ಬರಲು ಪುರುಸೊತ್ತಾಗಿಲ್ಲ.
ಅದೇ ರೀತಿ, ಮಂತ್ರಿ ಮಂಡಲದ, ಶಾಸಕರ ಸಾಧನೆಯ ಪರಿಶೀಲನೆಯ ಮಾತೂ, ಆಗಾಗ ಕೇಳಿ ಬಂದರೂ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಪರಮೇಶ್ವರ ಗಡುವುಗಳನ್ನು ಕೊಟ್ಟರೂ, ವಾಸ್ತವದಲ್ಲಿ ಅದೂ ನೆನೆಗುದಿಗೆ ಬಿದ್ದಂತಿದೆ. ಸರ್ಕಾರದಲ್ಲಿ ಸೇರಿ ಕೊಂಡಿರುವವರು ಇನ್ನೂ ಚುನಾವಣೆಯ ಗುಂಗಿನಲ್ಲೇ ಇದ್ದಾರೆ. ರಾಜ್ಯ ಮಟ್ಟದಲ್ಲಿ ಆಗಬೇಕಾದ ಸುಧಾರಣೆ, ನೇಮಕಗಳಿಗೂ ವರಿಷ್ಠರ ಆದೇಶ ಬೇಕು. ಕೇಂದ್ರದ ಪ್ರತಿನಿಧಿಗಳ ಸಮ್ಮುಖದಲ್ಲೇ ಚರ್ಚೆಯಾಗಿ ಒಡಂಬಡಿಕೆಯಾಗಬೇಕೆನ್ನುವ ಸನ್ನಿವೇಶ ಯಾವ ಪಕ್ಷಕ್ಕೂ ಒಳ್ಳೆಯದಲ್ಲ. ಅಧಿಕಾರ ಕೈಯಲ್ಲಿರುವುದರಿಂದ ಅಧಿಕಾರಸ್ಥ ರಾಜಕಾರಣಿಗಳು ಸಮಸ್ಯೆಗಳ ಪರಿಶೀಲನೆಯನ್ನು ಮುಂದಕ್ಕೆ ಹಾಕುವುದರಲ್ಲಿ ಯಶಸ್ವಿಯಾಗಬಹುದು.
ಆದರೆ ಆ ಪ್ರವೃತ್ತಿಯೇ, ಅಧಿಕಾರ ಇಲ್ಲದವರು ಗುಂಪುಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬಹುದು. ಇನ್ನೆರಡು- ಮೂರು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ದಿಷ್ಟವಾದ ರೂಪದಲ್ಲಿ ಸಾಧನೆಗಳನ್ನು ಪ್ರದರ್ಶಿಸದೇ ಹೋದರೆ, ಅನಂತರ ಎಲ್ಲವೂ ಚುನಾವಣೆಗಳ ದಾಂಧಲೆಯಲ್ಲಿ ಮುಳುಗಿ ಪರಿಸ್ಥಿತಿ, ನಿಭಾಯಿಸಲಾಗದಷ್ಟು ಜಟಿಲವಾಗಬಹುದು. ಅದು ಹಿಂದಿನ ಅನುಭವದ ಮಾತು. ಭಾರತೀಯ ಜನತಾ ಪಾರ್ಟಿಗೆ ಬೆಂಬಲ ಕೊಡಲು ಕರ್ನಾಟಕ ಜನತಾ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ. ಹಾಗೆಂದು ಹೇಳಿದ್ದಾಗಿದೆ. ಆದರೆ ಪಕ್ಷಗಳ ವಿಲೀನದ ಪ್ರಶ್ನೆ ಸದ್ಯಕ್ಕೆ ಬಿಡಿಸಲಾಗದ ಗಂಟಾಗಿ ಕೂತಿದೆ.
ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಪಟ್ಟಿ ಪ್ರಕಟವಾಗಿದೆ. ಅದನ್ನು ಸ್ವಲ್ವ ಕಾಲ ತಡೆ ಹಿಡಿಯಬಹುದಿತ್ತೇನೋ ಎನ್ನುವುದು ಯಡಿಯೂರಪ್ಪ ಉದ್ಗಾರ. ಪ್ರದೇಶ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಷಿ, ಯಡಿಯೂರಪ್ಪ ಬರುವುದಿದ್ದರೆ, ಪದಾಧಿಕಾರಿಗಳ ಪಟ್ಟಿಯನ್ನು ಬದಲಾಯಿಸಬಹುದು. (ಅಂದರೆ ಹಿಗ್ಗಿಸಬಹುದು ಎಂದೇ ಅರ್ಥ) ಎಂದಿದ್ದಾರೆ. ವಿಲೀನದ ವಿಷಯ ಅಲ್ಲಿಗೆ ನಿಂತಿದೆ. ಇದರ ನಡುವೆಯೇ ಬಿಎಸ್ಸಾರ್ ಕಾಂಗ್ರೆಸ್ಸಿನ ಶ್ರೀರಾಮುಲು ಬಿಜೆಪಿಗೆ ಬರಲು ಕೆಲವು ಷರತ್ತುಗಳನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ. ಅಂತಿಮ ನಿರ್ಧಾರ ದೆಹಲಿಯ ವರಿಷ್ಠರದ್ದೇ. ವರಿಷ್ಠರಿಗೆ ಆ ಅಧಿಕಾರವನ್ನು ಯಾರು ಕೊಟ್ಟರೋ ಗೊತ್ತಿಲ್ಲ.
ಜಾತ್ಯತೀತ ಜನತಾ ದಳದ ಶಾಸಕಾಂಗ ಪಕ್ಷದ ಸಭೆ ಸೇರಿತ್ತು. ಪಕ್ಷಕ್ಕೊಬ್ಬ ಉಪನಾಯಕ, ಮುಖ್ಯ ಸಚೇತಕರ ಆಯ್ಕೆ ಕುರಿತು ಚರ್ಚೆ ನಡೆಯಿತು. ನಿರ್ಧಾರದ ಹೊಣೆಯನ್ನು ಕುಮಾರಸ್ವಾಮಿ ಅವರಿಗೆ ಒಪ್ಪಿಸಲಾಯಿತು. ಅದನ್ನು ಅವರು ಸರ್ವೋಚ್ಚ ನಾಯಕ ದೇವೇಗೌಡರಿಗೆ ಒಪ್ಪಿಸಿದರು. ಇದೇನೂ ಹೊಸ ನಿರ್ಧಾರವಲ್ಲ. ಆ ಪಕ್ಷದಲ್ಲಿ ಎಲ್ಲ ನಿರ್ಧಾರಗಳೂ ಹೀಗೇ ಆಗುವುದು. ಇನ್ನು ಮುಂದಿನ ವಾರ ಮಹಾಲಯ ಅಮಾವಾಸ್ಯೆ ಕಳೆದ ಅನಂತರ ನವರಾತ್ರಿಯ ಶುಭ ದಿನಗಳಲ್ಲೇ ಮುಂದಿನ ನಿರ್ಧಾರ.
ಕಿಡಿಗೇಡಿತನ: ಈ ನರೇಂದ್ರ ಮೋದಿ ಯಾವ ಸೀಮೆಯ ವ್ಯಕ್ತಿ? ಕಾಂಗ್ರೆಸ್ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವ ಮಾತು ಈಗ ಹಳೆಯದಾಯಿತು. ನರೇಂದ್ರ ಮೋದಿ ಅವರ ಮಾತುಗಳಿಗೆ ಸಿಗುತ್ತಿರುವ ಪ್ರಚಂಡ ಪ್ರಚಾರ, ಸಾಮಾಜಿಕ ತಾಣಗಳಲ್ಲಿ (ಇಂಟರ್‌ನೆಟ್) ಅವರಿಗೆ ಸಿಕ್ಕಿರುವ ಸ್ಥಾನವನ್ನು ಗಮನಿಸಿ, ಕಾಂಗ್ರೆಸ್ ನೀತಿ ಬದಲಾಗಿದೆಯಂತೆ. ಅದಕ್ಕೇ ಪ್ರಗತಿಯ ವೇಗ ಕುರಿತ ನರೇಂದ್ರ ಮೋದಿಯ ಹೇಳಿಕೆಯನ್ನು ಅಲ್ಲಗಳೆಯಲು ವಿತ್ತಮಂತ್ರಿ ಚಿದಂಬರಮ್ ಮುಂದಾಗಿದ್ದು. ಇಲ್ಲಿ ನರೇಂದ್ರ ಮೋದಿ ತಪ್ಪು ಹೆಜ್ಜೆ ಇಟ್ಟಿದ್ದು ನಿಜ. ಆದರೆ ಕಾಂಗ್ರೆಸ್ ಅವರನ್ನು ಮಾತಿನಲ್ಲಿ ರಾಜಕೀಯ ವಿಚಾರಗಳಲ್ಲಿ ಎದುರಿಸುವುದು ಕಷ್ಟವೇ. ಆದರೂ ಸಮರ ಆರಂಭವಾಗಿದೆ.
- ಸತ್ಯ
anisikeprabha@gmail.com