ಅಂಕಣಗಳು

ಗ್ರಾಮ ಸ್ವರಾಜ್ಯದ ಕನಸನ್ನು ಕೊಲ್ಲಲಿದೆಯೇ ವಿದೇಶಿ ಬಂಡವಾಳ ಹೂಡಿಕೆ?

ಗ್ರಾಮ ಸ್ವರಾಜ್ಯದ ಕನಸನ್ನು ಕೊಲ್ಲಲಿದೆಯೇ ವಿದೇಶಿ ಬಂಡವಾಳ ಹೂಡಿಕೆ?
Published On :

ಸ್ವಾತಂತ್ರ್ಯ ಪೂರ್ವದಲ್ಲಿದ್ದ ಗ್ರಾಮ ಸ್ವರಾಜ್ಯವೇ ರಾಷ್ಟ್ರದ ಅಭಿವೃದ್ಧಿಯ ಮೂಲಮಂತ್ರ. ಅಲ್ಲಿಂದಲೇ ಶುರುವಾಗಲಿ ಅಭಿವೃದ್ಧಿಯ ತಂತ್ರ ಎನ್ನುವ ತತ್ವದಡಿ ಕೆಲಸ ಆರಂಭವಾದರೆ ನಿಜಕ್ಕೂ ರಾಜ್ಯದ ಅಭಿವೃದ್ಧಿ ಸಾಧ್ಯ.

ಉದ್ಯಮಿಗಳನ್ನು ಆಹ್ವಾನಿಸಲೆಂದೇ ಚೀನಾಕ್ಕೆ ಹಾರಿದ ನಮ್ಮ ಮುಖ್ಯಮಂತ್ರಿಗಳಿಗೊಂದು ಚುಟುಕು ಇಲ್ಲಿದೆ. ನಿಮ್ಮ ಕಾರ್ಯವೈಖರಿ ಸ್ವಲ್ಪ ದಿನಗಳಲ್ಲಿಯೇ ಜನರ ಮೆಚ್ಚುಗೆ ಗಳಿಸುತ್ತ ಹೊರಟಿರುವುದರಿಂದ, ಯಾವುದೋ ಹುಚ್ಚು ಅವೇಶದಲ್ಲಿ, ದುಡುಕು ನಿರ್ಧಾರಗಳಿಂದ ಜನರು ಬಲಿಯಾಗುವುದು ಬೇಡ. ಪ್ರತಿಯೊಂದು ಹೆಜ್ಜೆಯಲ್ಲೂ ರಾಜ್ಯದ ಮತ್ತು ಜನರ ಹಿತಾಸಕ್ತಿ ಬಗ್ಗೆ ನಿಮಗೆ ಗಮನವಿರಲಿ.
"ನೀರು ಸೇದಿ ಸೇದಿ
ನೆಲವ ಅಗೆದು, ಅಗೆದು
ಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು
ಬೀಡಿ, ಸಿಗರೇಟ್ ಸೇದಿ
ಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದು
ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರು"
ಖ್ಯಾತ ಕವಿಯೊಬ್ಬರ ಈ ಮಾತು ಎಷ್ಟು ಸತ್ಯವಲ್ಲವೇ? ಆದರೆ ಅಭಿವೃದ್ಧಿಯ ಹೆಸರಿನಲ್ಲಿ, ಜಾಗತೀಕರಣ ಮತ್ತು ಪಾಶ್ಚಾತ್ಯೀಕರಣದ ದಾಂಧಲೆಯಲ್ಲಿ ಈಗಾಗಲೇ ನಮ್ಮ ಹಳ್ಳಿಗಳಲ್ಲಿ ಯುವಜನತೆ ಹಾಗೂ ಯುವಸಂಘಟನೆಗಳು ಕಡಿಮೆಯಾಗುತ್ತಿವೆ. ಇದಕ್ಕೆ ಕಾರಣ ನಮಗೆಲ್ಲ ತಿಳಿದೇ ಇದೆ. ಕಳೆದ ದಶಕದಲ್ಲಿ ಮಿತಿ ಮೀರಿ ವಿದೇಶಿ ಬಂಡವಾಳ ಹೂಡಿಕೆಗೆ ಆಹ್ವಾನ ಕೊಟ್ಟ ಪರಿಣಾಮವಿದು. ಇದರಿಂದಾಗಿ ನಮ್ಮ ಚಿಲ್ಲರೆ ವ್ಯಾಪಾರಿಗಳು ಚೆಲ್ಲಾಪಿಲ್ಲಿಯಾದರು.  ಕಂಪನಿಗಳ ನಿರ್ಮಾಣಕ್ಕೆಂದು ರೈತರಿಗೆ ಹಣದ ಆಮಿಷ ತೋರಿಸಿ ಕೃಷಿ ಭೂಮಿ ಕಸಿದುಕೊಂಡಿದ್ದಲ್ಲದೇ, ಗ್ರಾಮೀಣ ಯುವಕರು ನಗರಪ್ರದೇಶಗಳಿಗೆ ವಲಸೆ ಬರಲು ಕಾರಣಕರ್ತರಾದರು. ಯುವಜನತೆಯಿಲ್ಲದ ಹಳ್ಳಿಗಳು ಈಗ ವೃದ್ಧಾಶ್ರಮಗಳಾಗಿರುವುದು ಸುಳ್ಳಲ್ಲ.
ಉದ್ಯಮಿಗಳ ಅನೂಕೂಲಕ್ಕೆಂದು ಬೆಂಗಳೂರು ನಗರದ ಸುತ್ತಮುತ್ತ ಇರುವ ಎಲ್ಲ ಗ್ರಾಮಗಳೂ, ಕೃಷಿಭೂಮಿಯೂ (ತರಕಾರಿ ಬೆಳೆಯ ಭೂಮಿ) ಮಾರಾಟವಾಯಿತು. ಜಾಗ ಕೊಟ್ಟವರಿಗೆ/ಕಳೆದುಕೊಂಡವರಿಗೆ ಮೂಲಭೂತ ಸೌಕರ್ಯ ಕಲ್ಪಿಸಲೆಂದು ಸರ್ಕಾರವು ಸ್ಥಳೀಯರಿಗೆ ಕೊಡಬೇಕಾದ ಸೌಲಭ್ಯವನ್ನು ಅಲಕ್ಷಿಸಿತು. ಇದರಿಂದ ವಿಪರೀತ ಸಂಖ್ಯೆಯಲ್ಲಿ ಜನ ಬೆಂಗಳೂರಿಗೆ ವಲಸೆ ಬಂದರು. ಬಂದವರಿಗೆ ಜಾಗ ಕಲ್ಪಿಸುವ ಸಲುವಾಗಿ ಇಲ್ಲಿ ಇರುವವರನ್ನು ಮೂಲೆಗುಂಪು ಮಾಡಲಾಯಿತು. ಅವರಿಗಾಗಿ ಸ್ಥಳ, ನೀರು(ಗಾಳಿಯೂ ಕೂಡಾ) ನೀಡಬೇಕಾದ ಸಂದರ್ಭ ಸರ್ಕಾರಕ್ಕೆದುರಾಯಿತು. ಅದಕ್ಕೆ ಬಲಿಯಾದವರು ಇಲ್ಲಿನವರು (ಸ್ಥಳೀಯರು). ಇರೋಕ್ಕೆ ಜಾಗವಿಲ್ಲದೇ, ಕುಡಿಯಲು ನೀರಿಲ್ಲದೇ, ಉಸಿರಾಡಲು ಸರಿಯಾದ ಗಾಳಿ ಸಿಗದೇ, (ನೂರಕ್ಕೆ ತೊಂಬತ್ತು ಮಕ್ಕಳು ಬೆಂಗಳೂರಿನಲ್ಲಿ ಉಸಿರಾಟದ ತೊಂದರೆಯಿಂದ ನರಳುತ್ತಿದ್ದಾರೆ) ಒದ್ದಾಡಬೇಕಾಗಿದೆ.
ಒಂದು ಹೊಸ ಅಪಾರ್ಟ್‌ಮೆಂಟ್ ಕಟ್ಟುತ್ತಿದ್ದಾರೆ ಎಂದಾಗಲೇ ಅಲ್ಲಿ ಮೊದಲು ನೀರಿನ ಸಮಸ್ಯೆ ಎದುರಾಗುತ್ತದೆ. ಬೆಂಗಳೂರಿಗೆ ಬರುವವರ ಸಂಖ್ಯೆ ಎಷ್ಟಾಗುತ್ತಿದೆ ಎನ್ನುವುದನ್ನು, ಪ್ರತಿನಿತ್ಯ ಬೆಂಗಳೂರಿಗೆ ರೈಲಿನ, ಬಸ್‌ಗಳ ಮತ್ತು ವಿಮಾನದ ಮುಖಾಂತರ ಬರುವ, ಎಷ್ಟು ಜನ ವಾಪಸ್ಸು ಹೋಗುತ್ತಾರೆ ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಂಡಾಗಲೇ ತಿಳಿಯುವುದು.
ನಮ್ಮ ರೈತರಿಗೂ ಸಹ ಇಂದು ಕೃಷಿ ಜಮೀನಿನಲ್ಲಿ ದುಡಿಯಲು ಕೂಲಿಗಳು ಸಿಗದೇ, ತಮಗೂ ಪೂರ್ತಿ ದುಡಿಯಲಾಗದೇ, ಮಕ್ಕಳನ್ನು ನಗರಗಳಿಗೆ ಕಳಿಸುವುದು ಸಾಮಾನ್ಯವಾಗುತ್ತಿದೆ. ಕೆಲವರು ಜಮೀನನ್ನು ಪರಭಾರೆ ಮಾಡಿದರೆ, ಕೆಲವರು ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಿನ್ನಲು ಆಹಾರ ಪದಾರ್ಥಗಳಿಲ್ಲದೇ ಒದ್ದಾಡಬೇಕಾದ ಪರಿಸ್ಥಿತಿ ನಮ್ಮದಾಗುತ್ತದೆ. ಅಭಿವೃದ್ಧಿಯ ನೆಪದಲ್ಲಿ, ವಿದೇಶಿ ಕಂಪನಿಗಳ ಹೂಡಿಕೆ ಹಾವಳಿಯಲ್ಲಿ ನಮ್ಮ ರೈತರು ಕೃಷಿ ಭೂಮಿ ಕಳೆದುಕೊಳ್ಳಬೇಕಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಯುವಜನತೆಯನ್ನು ಹಳ್ಳಿಗಳಲ್ಲಿ ಉಳಿಸಲು ಯೋಜನೆಗಳನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ಯಾವುದೇ ಹೊಸ ಯೋಜನೆಗಳ ಅವಶ್ಯಕತೆಯಿಲ್ಲ. ಕೇವಲ ಜಾಗೃತಿ ಮೂಡಿಸುವ ದಿಕ್ಕಿನತ್ತ ಹೆಜ್ಜೆಯಿಡಬೇಕಾಗಿದೆ.
ಬೆಂಗಳೂರಿನ ಜನಸಂಖ್ಯೆ ಕಡಿಮೆ ಮಾಡದಿದ್ದಲ್ಲಿ, ಅತೀ ಘೋರ ದುಷ್ಪರಿಣಾಮಗಳು ಮುಂದಿನ ದಿನದಲ್ಲಿ ನೋಡಬೇಕಾಗುತ್ತದೆ. ಅದಕ್ಕಾಗಿ ಆಡಳಿತದಲ್ಲಿ ಕೆಲವು  ಸೂತ್ರಗಳನ್ನು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದರೆ ನಿಜಕ್ಕೂ ಈ ಸರ್ಕಾರಕ್ಕೊಂದು ಕೀರಿಟ ಸಿಕ್ಕ ಹಾಗೆಯೇ.  ಅದಕ್ಕಾಗಿ ಕೆಲ ಸಲಹೆಗಳು ಹೀಗಿವೆ - ಅರ್ಧ ವಿಧಾನಸೌದದ ಆಡಳಿತ ವರ್ಗವನ್ನು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ವರ್ಗಾಯಿಸಬಹುದು. ಕೆಲ ಉದ್ಯಮಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಕಳಿಸಬಹುದು, ಗ್ರಾಮೀಣ ಪ್ರದೇಶದಲ್ಲಿ ಜಮೀನು ಮಾರಾಟ ತಡೆಯುವುದರ ಜೊತೆಗೆ ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡುವುದು. ಎಲ್ಲದಕ್ಕಿಂತಲೂ ಮುಖ್ಯವಾಗಿ ಇಂದಿನ ಯುವಜನತೆಯನ್ನು ಹಳ್ಳಿಗಳಲ್ಲಿ ಉಳಿಯುವಂತೆ ಮಾಡುವುದು.
ಸ್ವಾತಂತ್ರ್ಯ ಪೂರ್ವದಲ್ಲಿದ್ದ ಗ್ರಾಮ ಸ್ವರಾಜ್ಯವೇ ರಾಷ್ಟ್ರದ ಅಭಿವೃದ್ಧಿಯ ಮೂಲಮಂತ್ರ. ಅಲ್ಲಿಂದಲೇ ಶುರುವಾಗಲಿ ಅಭಿವೃದ್ಧಿಯ ತಂತ್ರ ಎನ್ನುವ ತತ್ವದಡಿ ಕೆಲಸ ಆರಂಭವಾದರೆ ನಿಜಕ್ಕೂ ರಾಜ್ಯದ ಅಭಿವೃದ್ಧಿ ಸಾಧ್ಯ.  ವಿದೇಶಿ ಬಂಡವಾಳದತ್ತ ಗಮನ ಹರಿಸಿದೇ, ಮೊದಲು ನಮ್ಮ ಜನರನ್ನು ಅವರವರ ಸ್ಥಳದಲ್ಲಿಯೇ ಉಳಿಸಿಕೊಳ್ಳಲು ನೋಡಿದರೆ ಸಾಕು. ಬರೀ ವಿದೇಶಿ ಬಂಡವಾಳವಷ್ಟೇ ಅಲ್ಲ, ನಮ್ಮದೇ ದೇಶದ ಬೇರೆ ರಾಜ್ಯದವರ ವ್ಯಾಪಾರ ಹೂಡಿಕೆ ಸಹ ಸ್ಥಳೀಯರನ್ನು ಹೊರಗೆ ದೂಡುವ ಮಟ್ಟಕ್ಕೆ ಬಂದಿದೆ. ಅದಕ್ಕೊಂದು ಸಣ್ಣ ಉದಾಹರಣೆ ಬೆಂಗಳೂರಿನ ಹಳೆಯ ಪ್ರತಿಷ್ಠಿತ ಬಡಾವಣೆಯಾದ ಬಸವನಗುಡಿಯು ಇನ್ನು ಸ್ವಲ್ಪ ದಿನಗಳಲ್ಲಿ ಮಾರ್ವಾಡಿಗುಡಿಯಾಗಿ ಮಾರ್ಪಾಡಾಗುವುದರಲ್ಲಿ ಸಂಶಯವಿಲ್ಲ.



-ಶೋಭಾ.ಹೆಚ್.ಜಿ  ಸಂಪಾದಕರು,
ಸ್ತ್ರೀ ಜಾಗೃತಿ ಮಾಸಪತ್ರಿಕೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.