ದೇಶದ ಸಂಸದರೆಲ್ಲರೂ ನೈರ್ಮಲ್ಯದ ಪ್ರಚಾರ ಮಾಡಲಿ

2013ರಲ್ಲಿ ಯೋಜನಾ ಆಯೋಗವು ರಾಷ್ಟ್ರವ್ಯಾಪಿ ಸಂಪೂರ್ಣ ನಿರ್ಮಲೀಕರಣದ ಅಧ್ಯಯನ ಮಾಡಿತ್ತು. ಈ ಅಧ್ಯಯನದಲ್ಲಿ 27 ರಾಜ್ಯಗಳಿಂದ 11519 ಮನೆಗಳ ಸಮೀಕ್ಷೆ ಮಾಡಲಾಯಿತು. ಅಂದರೆ ಇದೊಂದು ವಿಸ್ತೃತ ಸಮೀಕ್ಷೆಯೇ ಆಗಿತ್ತು. ಈ ಅಧ್ಯಯನದಲ್ಲಿನ ಅತ್ಯಂತ ಆಘಾತವುಂಟು ಮಾಡುವಂಥ ಸಂಗತಿಯೆಂದರೆ, ಇಂದಿಗೂ 72.63 ಪ್ರತಿಶತ ಗ್ರಾಮೀಣ ಪರಿವಾರಗಳು 'ಬಯಲು ಶೌಚಾಲಯವನ್ನೇ' ಆಧರಿಸಿವೆ ಎನ್ನುವುದು. ಇದರರ್ಥವೇನೆಂದರೆ, ಅವರು ಬೇಲಿಯ ಹಿಂದೆ, ರೈಲ್ವೆ ಟ್ರ್ಯಾಕ್ಗಳ ಮೇಲೆ ಅಥವಾ ಇನ್ನೆಲ್ಲೋ ಹೊರಗೆ ಶೌಚಕ್ಕೆ ಹೋಗುತ್ತಾರೆ ಎಂಬುದು.
ಹಿಂಡೋಲ್ ಸೇನ್ಗುಪ್ತಾ ಅವರ ಪುಸ್ತಕದ ಆಧಾರದ ಮೇಲೆ ನಾನು ನನ್ನ ಹಿಂದಿನ ಲೇಖನವನ್ನು ಬರೆದಿದ್ದೆ. ಅವರು ಹೇಳುತ್ತಾರೆ: ತೆರೆದ ಆಕಾಶದಡಿಯಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳುತ್ತಾ ಶೌಚ ಮಾಡುವವರಿಗೂ ಮತ್ತು ಶೌಚಾಲಯದಲ್ಲಿ ಕೂಡುವವರಿಗೂ ನಡುವಿನ ವ್ಯತ್ಯಾಸವೇನು? ವ್ಯತ್ಯಾಸವನ್ನು ಸಮೀಕ್ಷೆ ಸೂಚಿಸುತ್ತದೆ. ಒಂದು ವೇಳೆ ಒಂದು ಗ್ರಾಮ ಪಂಚಾಯಿತಿಗೆ ನಿರ್ಮಲ ಗ್ರಾಮ ಪಂಚಾಯಿತಿಯ ದರ್ಜೆ ಸಿಗುತ್ತದೆಂದರೆ ಅಥವಾ ಗ್ರಾಮವೊಂದು ಶೌಚಾಲಯವನ್ನು ಬಳಸುತ್ತದೆ ಎಂದರೆ, ಅಲ್ಲಿನ ಪರಿವಾರಗಳು 35 ಪ್ರತಿಶತದಷ್ಟು ರೋಗ ಮುಕ್ತವಾಗುತ್ತವೆ. ಶೌಚಾಲಯಗಳನ್ನು ಬಳಸುವುದರಿಂದ ತಮ್ಮ ಸಾಮಾನ್ಯ ಸ್ವಾಸ್ಥ್ಯ ಸುಧಾರಿಸಿದೆಯೆಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಕುಟುಂಬದ ಮಹಿಳೆಯರು ಸುರಕ್ಷಿತ ಭಾವನೆಯನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ. ಜನರಿಗೆ ಶೌಚಾಲಯ ಸುನಿಶ್ಚಿತವಾಗಬೇಕು ಎನ್ನುವ ಕಾರಣಕ್ಕೆ ನಾವು, ಗಾಂಧಿನಗರ ಮತ್ತು ಇನ್ನುಳಿದ ಪ್ರದೇಶಗಳ ಸಂಸದರು ಅಭಿಯಾನ ಕೈಗೊಂಡಿದ್ದೇವೆ. ಹಿಂಡೋಲ್ ಸೇನ್ ಅವರ ಪುಸ್ತಕ ಹೇಳುತ್ತದೆ- "ಪಬ್ಲಿಕ್ ಹೆಲ್ತ್ ಅಸೋಶಿಯೇಷನ್'ನ ಪ್ರಕಾರ ಕೇವಲ ಅರ್ಧದಷ್ಟು ಭಾರತೀಯರು ಮಾತ್ರ ಶೌಚ ಮುಗಿಸಿದ ನಂತರ ತಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುತ್ತಾರೆ. ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ಆಹಾರ ಭದ್ರತಾ ವಿಧೇಯಕದ ತುಲನೆಗಿಂತ ಶೌಚಾಲಯದ ಸಮಸ್ಯೆಯೇ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ-ಅತಿಸಾರದಿಂದ ಸಾವು." ಎಂದು.
ನಿಮಗೆ ಗೊತ್ತೆ, ಎಷ್ಟು ಭಾರತೀಯ ಮಕ್ಕಳು ಅಪೌಷ್ಟಿಕತೆ ಮತ್ತು ಕಡಿಮೆ ತೂಕದಿಂದ ಬಳಲುತ್ತಿದ್ದಾರೆಂದು? 5 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿನ ಅಪೌಷ್ಟಿಕತೆಗೆ ಪ್ರಮುಖ ಕಾರಣ ಅತಿಸಾರ ಎಂದು ಹೇಳುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಯುನಿಸೆಫ್ನ ಪ್ರಕಾರ ಶೌಚದ ನಂತರ, ಎಲ್ಲರೂ ಸಾಬೂನಿನಿಂದ ಕೈತೊಳೆದುಕೊಂಡರೆ, ಭಾರತದಲ್ಲಿನ ಸಾವಿನ ಸಂಖ್ಯೆಯನ್ನು 40 ಪ್ರತಿಶತದಷ್ಟು ತಪ್ಪಿಸಬಹುದು. ಪ್ರಸ್ತುತ, ಪ್ರಪಂಚದಲ್ಲಿ ಅತಿಸಾರದಿಂದ ಸಾಯುವ ಪ್ರತಿ 4 ಮಕ್ಕಳಲ್ಲಿ ಒಂದು ಮಗು ಭಾರತದ್ದಾಗಿರುತ್ತದೆ!
ಕೊನೆಯದಾಗಿ: 2013ರ ಮೊದಲ ಆರು ತಿಂಗಳಲ್ಲಿ ಭಾರತ, ಪರ್ತಕರ್ತರ ಪಾಲಿಗೆ ಎರಡನೇ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಯಿತು. ಮೊದಲನೆಯ ಸ್ಥಾನದಲ್ಲಿ ಬಶಾಹರ್ ಅಲ್ ಅಸದ್ರ ಸರ್ಕಾರಿ ದಳಗಳು ಮತ್ತು ಬಂಡಾಯವೆದ್ದಿರುವ ಜನರ ನಡುವಿನ ಭೀಷಣ ಗೃಹಯುದ್ಧದಲ್ಲಿ ಸಿಲುಕಿರುವ 'ಸಿರಿಯಾ' ಇತ್ತು.
ಲಂಡನ್ ಮೂಲದ ಇಂಟರ್ನ್ಯಾಷನಲ್ ನ್ಯೂಸ್ ಸೇಫ್ಟಿ ಇನ್ಸ್ಟಿಟ್ಯೂಟ್ನ ಪ್ರಕಾರ, ಆ ಅವಧಿಯಲ್ಲಿ ಸಿರಿಯಾದಲ್ಲಿ 8ಪತ್ರಕರ್ತರು ಮೃತಪಟ್ಟರೆ, ಭಾರತದಲ್ಲಿ ಮಡಿದ ಪತ್ರಕರ್ತರ ಸಂಖ್ಯೆ 6!
ಹಾಗಂತ, ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಆಪತ್ತು ಎದುರಾಗಿದೆ ಎನ್ನುವ ಹಾಗಿಲ್ಲ, ಈಗ್ಗೆ ನಾಲ್ಕು ವರ್ಷಗಳ ಹಿಂದೆ ಕೂಡ ಪತ್ರಕರ್ತರಿಗೆ ಅಪಾಯಕಾರಿಯಾದ ಪ್ರಮುಖ 5 ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿತ್ತು! 1977ರಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವನಾಗಿ, ಪೂರ್ವ ಸಚಿವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯೊಂದನ್ನು ನಿಯೋಜಿಸಿದ್ದೆ. ಅದರ ಕೆಲಸ, ಸೆನ್ಸರ್ಶಿಪ್ನ ಹೆಸರಲ್ಲಿ ಮಾಧ್ಯಮಗಳ ಮೇಲೆ ಹಿಂದಿನ ಸರ್ಕಾರ ತೋರಿದ ಅತಿರೇಕದ ವರ್ತನೆಗಳ ಬಗ್ಗೆ ಶ್ವೇತಪತ್ರವನ್ನು ತಯಾರು ಮಾಡುವುದಾಗಿತ್ತು. ಆ ಸಮಿತಿ ಆಗಸ್ಟ್ 1977ರಲ್ಲಿ ಶ್ವೇತಪತ್ರವನ್ನು ಸಂಸತ್ತಿನ ಮುಂದಿರಿಸಿತು. ಅದರಲ್ಲಿನ ಅಂಶಗಳು ಎದೆ ಝಲ್ಲೆನಿಸುವಂತಿದ್ದವು. ತುರ್ತುಪರಿಸ್ಥಿತಿಯ ಸಮಯದಲ್ಲಿ 253 ಪರ್ತಕರ್ತರನ್ನು ಬಂಧಿಸಲಾಗಿತ್ತು. ಅದರಲ್ಲಿ 110 ಮಂದಿಯನ್ನು ಮೀಸಾದ ಅಡಿಯಲ್ಲಿ, 110 ಜನರನ್ನು ಡಿಐಆರ್ನ ಅಡಿಯಲ್ಲಿ ಮತ್ತು 33 ಮಂದಿಯನ್ನು ಅನ್ಯ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿತ್ತು. ಬಿಬಿಸಿಯ ಅತ್ಯಂತ ಪ್ರಖ್ಯಾತ ಪತ್ರಕರ್ತ ಮಾರ್ಕ್ ಟುಲಿ ಸಹಿತ 29 ವಿದೇಶಿ ಪತ್ರಕರ್ತರಿಗೆ ಭಾರತವನ್ನು ಪ್ರವೇಶಿಸದಂತೆ ಪ್ರತಿಬಂಧ ಹೇರಲಾಗಿತ್ತು. ಇಂದಿರಾ ಸರ್ಕಾರ 51 ವಿದೇಶಿ ಪತ್ರಕರ್ತರ ಮಾನ್ಯತೆಯನ್ನು ಸಮಾಪ್ತಿ ಮಾಡಿತ್ತ್ತು!
- ಎಲ್.ಕೆ. ಆಡ್ವಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


