ಅಂಕಣಗಳು

ಬಿಜೆಪಿಗೆ ವಲಸಿಗರ ಹರಿವು ಹೊರೆಯಾಗಬಾರದೆಂದರೆ...

ಬಿಜೆಪಿಗೆ ವಲಸಿಗರ ಹರಿವು ಹೊರೆಯಾಗಬಾರದೆಂದರೆ...
Published On :

2004ರ ಚುನಾವಣೆಗಳಲ್ಲಿ ಸೋಲನುಭವಿಸಿದ್ದ ಸುಮಾರು 4 ಹೈಪ್ರೋಫೈಲ್ ಹೊಸ ನಾಯಕರನ್ನು ರಾಜ್ಯಸಭೆಗೆ ಕರೆದೊಯ್ದು ಕೂಡಿಸಿತ್ತು ಬಿಜೆಪಿ. ಆದರೆ ಅವರಿಂದ ಆ ಪಕ್ಷಕ್ಕೆ ಆದ ಲಾಭ ಮಾತ್ರ ದೊಡ್ಡ ಸೊನ್ನೆ. ಅದಾಗ್ಯೂ ರಾಜಕೀಯ ವಲಯದಲ್ಲಿ, "ಸೆಕ್ಯುಲರ್ ತಟ್ಟೆಯಲ್ಲಿ ಊಟ ಮಾಡಿದವರನ್ನು ಬರಸೆಳೆದು ಬಿಗಿದಪ್ಪುವಲ್ಲಿ ಬಿಜೆಪಿಯದ್ದು ಎತ್ತಿದ ಕೈ" ಎನ್ನಲಾಗುತ್ತದೆ.


ವಿದ್ಯಾಚರಣ್ ಶುಕ್ಲಾ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅತಿ ಹೆಚ್ಚು ದ್ವೇಷಿಸಲ್ಪಟ್ಟ ವ್ಯಕ್ತಿ. ಸೆನ್ಸರ್ಶಿಪ್ ಅಸ್ತ್ರವನ್ನು ಬಳಸಿ ಮಾಧ್ಯಮಗಳಿಂದ ಸುದ್ದಿಯ ಹರಿವು ತಡೆಯುವ ಜವಾಬ್ದಾರಿಯನ್ನು ಶುಕ್ಲಾ ಅವರಿಗೆ ಕೊಡಲಾಗಿತ್ತು. ಇಂದಿರಾ ಗಾಂಧಿಯವರ ಆ ನಿರ್ದಯ ಆದೇಶವನ್ನು ಅಷ್ಟೇ ನಿರ್ದಯವಾಗಿ ನಿರ್ವಹಿಸಿದ್ದರು ಶುಕ್ಲಾ.
ಪ್ರಶಾಂತ ಕಾಲದಲ್ಲಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಶುಕ್ಲಾರ ಪರಿಚಯ ನನಗಿರಲಿಲ್ಲ. ಜನಮೋರ್ಚಾದ(ಮುಂದೆ ಜನತಾದಳವಾಗಿ ಬದಲಾದ) ಆರಂಭಿಕ ದಿನಗಳಲ್ಲಿ ಅರುಣ್ ನೆಹರು ಅವರು ನನಗೆ ಶುಕ್ಲಾರ ಪರಿಚಯ ಮಾಡಿಕೊಟ್ಟಿದ್ದರು. ಮೊದಲ ನೋಟದಲ್ಲೇ ನನ್ನನ್ನು ಆಕರ್ಷಿಸಿದ ಅವರ ಗುಣವೆಂದರೆ, ಅವರ ಉಡುಗೆಯ ವೈಖರಿ. ನಿಜ ಹೇಳ ಬೇಕೆಂದರೆ, ಧೋತಿಯನ್ನು ಅವರಷ್ಟು ಸೊಗಸಾಗಿ ತೊಟ್ಟವರನ್ನು ನಾನು ಇದುವರೆಗೂ ಕಂಡಿಲ್ಲ.
ದುರದೃಷ್ಟವಶಾತ್, ಅವರ ಉಡುಗೆಯ ಸೊಬಗು ಹಿಂದೆ ನಡೆದದ್ದನ್ನೆಲ್ಲ ಮರೆಸುವಷ್ಟು ಪರಿಣಾಮಕಾರಿಯೇನೂ ಆಗಿರಲಿಲ್ಲ. ನನ್ನ ಪೀಳಿಗೆಗೆ, ಶುಕ್ಲಾ ಮತ್ತು ತುರ್ತುಪರಿಸ್ಥಿತಿ ಎನ್ನುವ ಹೆಸರು ಬಿಡಿಸಲಾಗದ ಬಂಧನವಾಗಿಯೇ ಎದುರಾಗುತ್ತವೆ. ಅವರು 2004ರಲ್ಲಿ ಎಲ್.ಕೆ. ಆಡ್ವಾಣಿಯವರೊಂದಿಗೆ ವೇದಿಕೆ ಹಂಚಿಕೊಂಡಾಗ ಯಾಕೆ ನನಗೆ ಹೇಸಿಗೆ ಹುಟ್ಟಿತ್ತು ಎನ್ನುವುದನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ನೆನಪಿನ ಶಕ್ತಿ ದುರ್ಬಲವಾಗಿರುವವರಿಗೆ ಈ ವಿಷಯವನ್ನು ನೆನಪಿಸುತ್ತಿದ್ದೇನೆ- ಶುಕ್ಲಾ 2004ರ ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಮಹಾಸಮುಂಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಸೋತ ಕೂಡಲೇ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿಕೊಂಡರು.
ಮತ್ತೆ ನನಗೆ ಶುಕ್ಲಾ ಅವರ ನೆನಪಾಗಿದ್ದು, ಈಗ ಕಾಂಗ್ರೆಸ್ನ ಪ್ರಭಾವಿ ನಾಯಕರು ಅನಾಯಾಸವಾಗಿ ತಮ್ಮ ಪಕ್ಷ ತೊರೆದು ನರೇಂದ್ರ ಮೋದಿಯವರಿಗೆ ತಮ್ಮ ನಿಷ್ಠೆಯನ್ನು ತೋರಿಸುತ್ತಿರುವುದನ್ನು ನೋಡಿಯೇ. ಸಿನೆಮಾ ತಾರೆಯರ ತಾರಾಮಂಡಲವನ್ನು ಮತ್ತು ರಾಜಕೀಯಕ್ಕೆ ಬರುವ ಅಪರಿಮಿತ ತುಡಿತ ಹೊಂದಿದವರನ್ನು ಹೊರತುಪಡಿಸಿ, ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ನ ಪಶ್ಚಿಮ ಬಂಗಾಳದ ಅಭ್ಯರ್ಥಿಗಳ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ, ಅದರಲ್ಲಿರುವ 'ಹೊಸಬರೆಲ್ಲರೂ' ಮೊದಲಿನಿಂದಲೂ ರಾಜಕೀಯದಲ್ಲಿ ಇರುವವರೇ! ರಾವ್ ಇಂದರ್ಜಿತ್ ಸಿಂಗ್, ಡಿ. ಪುರಂದೇಶ್ವರಿ, ಸೋನಾರಾಮ್ ಚೌಧರಿ, ಜಗದಂಬಿಕಾ ಪಾಲ್, ಸತ್ಪಾಲ್ ಮಹಾರಾಜ್ ಮತ್ತು ಮೊದಲಿನಿಂದಲೂ ಚಂಚಲ ಪ್ರವೃತ್ತಿಯನ್ನು ಮೈವೆತ್ತ ಜೈ ನಾರಾಯಣ್ ನಿಶಾದ್ ಹಾಗೂ ಭೃಜಭೂಷಣ್ ಸಿಂಗ್ಗಳೇ!
ಬಹುತೇಕರನ್ನು 'ಅಡ್ಜಸ್ಟ್' (ಅನೀತಿ ಎನ್ನುವ ಪದಕ್ಕೆ ಅದ್ಭುತ ಪರ್ಯಾಯವಿದು) ಮಾಡಲಾಗಿದ್ದರೆ, ಇನ್ನುಳಿದವರಿಗೆ ಭವಿಷ್ಯತ್ತಿನ ಬಗ್ಗೆ ಭರವಸೆ ಕೊಟ್ಟು ಒಳಗೆ ಬಿಟ್ಟುಕೊಳ್ಳಲಾಗಿದೆ. ಚುನಾವಣೆಗೂ ಮುನ್ನ ಇಂಥ ಅಭ್ಯರ್ಥಿಗಳಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವುದರಲ್ಲಿ ಬಿಜೆಪಿಯ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿಯೇ ಇದೆ. 2004ರ ಚುನಾವಣೆಗಳಲ್ಲಿ ಸೋಲನುಭವಿಸಿದ್ದ ಸುಮಾರು 4 ಹೈಪ್ರೋಫೈಲ್ ಹೊಸ ನಾಯಕರನ್ನು ರಾಜ್ಯಸಭೆಗೆ ಕರೆದೊಯ್ದು ಕೂಡಿಸಿತ್ತು ಬಿಜೆಪಿ. ಆದರೆ ಅವರಿಂದ ಆ ಪಕ್ಷಕ್ಕೆ ಆದ ಲಾಭ ಮಾತ್ರ ದೊಡ್ಡ ಸೊನ್ನೆ. ಅದಾಗ್ಯೂ ರಾಜಕೀಯ ವಲಯದಲ್ಲಿ, "ಸೆಕ್ಯುಲರ್ ತಟ್ಟೆಯಲ್ಲಿ ಊಟ ಮಾಡಿದವರನ್ನು ಬರಸೆಳೆದು ಬಿಗಿದಪ್ಪುವಲ್ಲಿ ಬಿಜೆಪಿಯದ್ದು ಎತ್ತಿದ ಕೈ" ಎನ್ನಲಾಗುತ್ತದೆ. ತಮ್ಮ ಪಕ್ಷದ ಸಾಮಾಜಿಕ ವಿಸ್ತಾರವನ್ನು ಹೆಚ್ಚಿಸಬೇಕು ಎನ್ನುವ ನಿಜವಾದ ಬಯಕೆಯಿಂದ ಅದು ಹಾಗೆ ಮಾಡುತ್ತದೋ ಅಥವಾ ಬೇರೆ ವಿಚಾರದವರಿಗೂ ತಾವು ಜಾಗಕೊಡುತ್ತೇವೆ ಎಂದು ತೋರಿಸಿಕೊಳ್ಳಲೋ ಎನ್ನುವುದು ಮನೋವಿಜ್ಞಾನಿಗಳು ತಲೆಕೆಡಿಸಿಕೊಳ್ಳಬೇಕಾದ ವಿಚಾರ.   
ಸಂಕ್ಷಿಪ್ತವಾಗಿ ರಾಜಕೀಯ ಪರಿಭಾಷೆಯಲ್ಲಿ ಹೇಳಬೇಕೆಂದರೆ, ಬಿಜೆಪಿಯನ್ನು ಸೇರುತ್ತಿರುವವರ ಹರಿವನ್ನು ನೋಡಿ ವಿರೋಧ ಪಕ್ಷ ನಿದ್ದೆಗೆಟ್ಟಿರುವುದಂತೂ ಖರೆ. ಎಲ್ಲಕ್ಕಿಂತ ಮುಖ್ಯವಾಗಿ, ಮೋದಿ ಅಧಿಕಾರಕ್ಕೆ ಬಂದರೆ ಭಾರತ 'ಕೋಮುವಾದದ ಅಜೀರ್ಣದಿಂದ' ಬಳಲುತ್ತದೆ ಎನ್ನುವ ಕಾಂಗ್ರೆಸ್ (ಮತ್ತು ಆಪ್)ನ ಮಾತಿನ ಹಿನ್ನೆಲೆಯಲ್ಲಿ ನೋಡಿದಾಗ, ಈ ವಲಸಿಗರು 'ಜಾತ್ಯತೀತತೆ ಮತ್ತು ಕೋಮುವಾದ' ಎನ್ನುವ ಕಾಂಗ್ರೆಸ್ನ ಪದಗಳ ನಿಜ ಸ್ವರೂಪವನ್ನು (ಬೌದ್ಧಿಕ ದುರುಪಯೋಗ) ಬಯಲು ಮಾಡುತ್ತಿದ್ದಾ ಎನ್ನುವುದಂತೂ ನಿಜ. ವ್ಯಂಗ್ಯವೆಂದರೆ, ಇದರಿಂದ, 'ತಮ್ಮದು ಸೈದ್ಧಾಂತಿಕ ಪಕ್ಷ' ಎಂದು ಹೇಳುವ ಬಿಜೆಪಿಯ ಹುಸಿ ಗ್ರಹಿಕೆಯೂ ಬೆತ್ತಲಾಗುತ್ತದೆ. ಶುರುವಾತಿನಲ್ಲಿ ಒಂದು ಸಿದ್ಧಾಂತವನ್ನು ಪಕ್ಷಗಳು ಪಾಲಿಸಿಕೊಂಡು ಹೋಗುತ್ತವೆ, ಆದರೆ ಅಧಿಕಾರವೆನ್ನುವುದು ದೃಢನಂಬಿಕೆಗಳನ್ನೆಲ್ಲ ಕರಗಿಸಿಬಿಡುತ್ತದೆ. ಅರಿಯದೆಯೇ ಈ ಹೊಸಬರು, ಹಿಂದು ನ್ಯಾಷನಲಿಸಂನಿಂದ ಹಿಂದು ರಿಪಬ್ಲಿಕನಿಸಂ(ಗಣತಂತ್ರವಾದ) ಎನ್ನುವ ಬಿಜೆಪಿಯ ದಾರಿಗೆ ಸಹಾಯ ಮಾಡಿದ್ದಾರೆ. ಮೋದಿಯವರಡಿಯಲ್ಲಿ ಬಿಜೆಪಿಯು ತನ್ನ ಆಡಳಿತ ಕೇಂದ್ರಿತ ದೃಷ್ಟಿಕೋನದ ವಿಕಾಸವನ್ನು ಮತ್ತೊಮ್ಮೆ ಪುನರುಚ್ಚರಿಸ ಬಹುದು. ಮೋದಿ ಪ್ರಧಾನಿ ಹುದ್ದೆಗೇರುವ ಸಾಧ್ಯತೆಗಳು ಹೆಚ್ಚಿರುವುದರಿಂದ, 10 ವರ್ಷದ ಹಿಂದೆ ಅಚಾನಕ್ಕಾಗಿ ನಿಂತು ಹೋದ ಈ ಪ್ರಕ್ರಿಯೆಗೆ ಮರುಚಾಲನೆ ಸಿಗಬಹುದು.
1991ರಲ್ಲಿ, ಮೊದಲ ಬಾರಿಗೆ ಬಿಜೆಪಿ ಆರ್ಎಸ್ಎಸ್ ವಲಯದಿಂದ ಹೊರಗಿರುವವರನ್ನು ತನ್ನತ್ತ ಸೆಳೆಯತೊಡಗಿತ್ತು. ಆ ರೀತಿ ಬಂದವರಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ಮಿಲಿಟರಿ ಅಧಿಕಾರಿಗಳ ದಂಡೇ ಇತ್ತು. ಲೆಫ್ಟಿನೆಂಟ್ ಜನರಲ್ ಜಾಕೋಬ್,  ಲೆಫ್ಟಿನೆಂಟ್ ಜನರಲ್ ಕೆ.ಪಿ. ಕ್ಯಾಂಡೇತ್, ಬ್ರಜೇಶ್ ಮಿಶ್ರಾ, ಎಸ್.ಸಿ ದೀಕ್ಷಿತ್ ಮತ್ತು ಬಿ.ಪಿ. ಸಿಂಘಲ್ರಂಥವರು ಆ ತಂಡದಲ್ಲಿದ್ದರು. ಎಲ್ಲಕ್ಕಿಂತ ಕುತೂಹಲಕರ ಸಂಗತಿಯೆಂದರೆ, ಈ ವ್ಯಕ್ತಿಗಳು 1991ರ ನಂತರ ಪಕ್ಷವನ್ನು ಪರಿತ್ಯಜಿಸಲಿಲ್ಲ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು ಎನ್ನುವುದು. ಜನತಾ ದಳದ ಅಳಿದುಳಿದ ನಾಯಕರನ್ನೂ ಬಾಚಿಕೊಳ್ಳುವ ಬಿಜೆಪಿಯ ಆಕಾಂಕ್ಷೆಯೂ, ಆ ಪಕ್ಷದ ಸಾಮಾಜಿಕ ಪರಿಧಿಯ ವಿಸ್ತರಣೆಗೆ ಸಹಕಾರಿಯಾಯಿತು. ಇಂದು ಬಿಜೆಪಿಗೆ ಮಧ್ಯಮ ವರ್ಗದ ಮತ್ತು ಇತರ ಹಿಂದುಳಿದ ವರ್ಗದ ಮತಗಳ ಮೇಲೆ ಹಿಡಿತವಿದ್ದರೆ, ಅದಕ್ಕೆ ಮೂಲ ಕಾರಣ- 1990ರಲ್ಲಿ ಅದು ಹೊಸಬರನ್ನು ಪಕ್ಷದೊಳಗೆ ಬಿಟ್ಟುಕೊಂಡದ್ದೇ ಆಗಿದೆ.
ಇನ್ನೊಂದೆಡೆ, ಅಟಲ್ ಬಿಹಾರಿ ವಾಜಪೇಯಿ ಇನ್ನೊಂದು ಅವಧಿಗೆ ಸರ್ಕಾರ ರಚಿಸಲು ಸಫಲರಾಗುತ್ತಾರೆ ಎಂದೆಣಿಸಿ 2004ರಲ್ಲಿ ಬಿಜೆಪಿಗೆ ಸೇರಿದವರು, ಅದು ಸುಳ್ಳಾದಾಗ ಅಲ್ಲಿಂದ ಹೊರ ನಡೆದುಬಿಟ್ಟರು. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ದೋಣಿ ಏರಿದ್ದನ್ನು ಕಂಡಕೂಡಲೇ ಎಷ್ಟೋ ಸೆಲೆಬ್ರಿಟಿಗಳು ಮತ್ತು ಸಿನೆಮಾ ತಾರೆಯರೂ ಬಿಜೆಪಿಯಿಂದ ಮೆಲ್ಲಗೆ ನುಣುಚಿಕೊಂಡುಬಿಟ್ಟರು.
ಅವರು ಪಕ್ಷದಲ್ಲಿ, ಅದರಲ್ಲೂ ಮುಖ್ಯವಾಗಿ ಪಕ್ಷದ ಜೊತೆ ಎಲ್ಲಾ ಸಮಯದಲ್ಲೂ ಇದ್ದ ಹಳೆಯ ನಿಷ್ಠಾವಂತ ನಾಯಕರಲ್ಲಿ ಅಸಮಾಧಾನ ಮೂಡಿಸಿ ಹೊರಟುಹೋದರು. ಬಹುಶಃ ಇದೇ ಕಾರಣಕ್ಕೋ ಏನೋ, 2004 ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರು ಯಾಂತ್ರಿಕವಾಗಿ ವರ್ತಿಸಿದ್ದು. ಇನ್ನು ಇದೇ ವೇಳೆಯಲ್ಲೇ, ಅಂದರೆ ಬಿಜೆಪಿ ಚುನಾವಣೆಯಲ್ಲಿ ಸೋತಾಕ್ಷಣ ಹೊಸಬರೆಲ್ಲ ಕೂಡಲೇ ಹೊರ ನಡೆದಿದ್ದನ್ನು ನೋಡಿ ಬಿಜೆಪಿ ಹೊಸಬರಿಗೆ ಮಾನಸಿಕವಾಗಿ ಬಾಗಿಲು ಹಾಕಿಬಿಟ್ಟಿತು. 2004ರಿಂದ ಸೆಪ್ಟೆಂಬರ್ 2013ರ ವರೆಗೂ ಬಿಜೆಪಿ ಹೊಸರಕ್ತದಿಂದ ವಂಚಿತವಾಗಿತ್ತು.
ಇಂದು ಕೂಡ ಮತ್ತೊಮ್ಮೆ ಬಿಜೆಪಿಗೆ ಅನ್ಯ ಪಕ್ಷಗಳ ನಾಯಕರು ಹರಿದು ಬರುತ್ತಿದ್ದಾರೆ. ಈ ಕೆಲಸವನ್ನು ಅದು ಜಾಗರೂಕವಾಗಿ ನಿರ್ವಹಿಸಿದರೆ, ನಿಸ್ಸಂಶಯವಾಗಿಯೂ ಕಾಂಗ್ರೆಸ್ ಕಂಗಾಲಾಗಲಿದೆ ಮತ್ತು ಬಿಜೆಪಿಯ ಸಾಮಾಜಿಕ ನಿಲುಕು ಇನ್ನಷ್ಟು ಹೆಚ್ಚಲಿದೆ. ಒಂದು ವೇಳೆ ಅಲಕ್ಷ್ಯ ತೋರಿದರೆ, ಬಿಜೆಪಿ 'ಅವಕಾಶವಾದಿಗಳ ಪಕ್ಷ'ವೆಂದು ಕರೆಸಿಕೊಳ್ಳುವುದು ನಿಶ್ಚಿತ.


- ಸ್ವಪನ್ದಾಸ್ ಗುಪ್ತಾ
swapan55@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.