ಅಂಕಣಗಳು

ಈ ಮಾರುತವನ್ನು ರೂಪಿಸಿದ ತಂಗಾಳಿಯ ಜಾಡನ್ನು ತಡವುತ್ತ...

ಈ ಮಾರುತವನ್ನು ರೂಪಿಸಿದ ತಂಗಾಳಿಯ ಜಾಡನ್ನು ತಡವುತ್ತ...
Published On :

'ಫಸ್ಟ್ ಟೈಮ್ ವೋಟು. ಯಾರಿಗಪ್ಪಾ ನಿಂದು?' ಅಜ್ಜ ಕೇಳಿದ ಪ್ರಶ್ನೆಗೆ ಆ ಹುಡುಗ, 'ಹಂಗೆಲ್ಲ ಹೇಳಕಾಗಲ್ಲ. ಗೌಪ್ಯ ಮತದಾನ ಅಲ್ವಾ' ಅಂತ ನಕ್ಕನಾದರೂ ಆ ವಿಷಯವನ್ನು ಅಲ್ಲಿಗೇ ಬಿಡುವ ನಿರಾಸಕ್ತಿಯನ್ನೇನೂ ತೋರದೇ ಅಜ್ಜನೆದುರು ಖುರ್ಚಿ ಎಳೆದುಕೊಂಡು ಕುಳಿತ. ಇಬ್ಬರ ನಡುವೆ ಹರಟೆಯ ಉಮೇದಿಯೊಂದು ಬಸಿರಾದಂತಿತ್ತು.
'ನೀವೆಲ್ಲ ಬಿಸಿರಕ್ತದವರು. ಮೋದಿ ಸರ್ಕಾರ್ ಅನ್ನೋವ್ರ ಸಾಲಿನಲ್ಲೇ ಇರ್ಬಹುದು ಬಿಡು' ಅಜ್ಜ ತನ್ನ ಗುಟ್ಟೇನನ್ನೂ ಬಿಟ್ಟುಕೊಡದೇ ತನಗೆಲ್ಲ ಗೊತ್ತು ಎಂಬ ಭಾವನೆಯಲ್ಲಿ ಹೇಳಿದ. ಮೊಮ್ಮಗನೂ ಕಿಲಾಡಿಯೇ. 'ಬಿಸಿರಕ್ತ ಅಂದುಬಿಟ್ರೆ ಆಯ್ತಾ? ಯುವ ನೇತಾರ ರಾಹುಲ್ ಗಾಂಧಿಗೂ ಮತ ಹಾಕಬಹುದಲ್ವಾ' ಅಂದ. 'ಯುವಕನೇನೋ ಹೌದು. ಆದ್ರೆ ಏನ್ ಹೇಳುತ್ತೆ ಅಂತ ಮಾತ್ರ ಗೊತ್ತಾಗಲ್ಲ. ಒಂಥರಾ ಪಾಪ...' ಅಂದ ಅಜ್ಜ. 'ಅಲ್ಲಿಗೆ ತಮ್ಮದೂ ಮೋದಿ ಹಾದಿನೇನಾ' ಅಜ್ಜನನ್ನು ಹಿಡಿದು ಹಾಕಿದ ಉತ್ಸಾಹದಲ್ಲಿ ಈತ ಕೇಳಿದ.
'ಟಿವಿ- ಪೇಪರ್ರು ನೋಡ್ತಿದೀನಿ. ಮೋದಿ- ಮೋದಿ ಅಂತ ಎಲ್ಲ ಹೇಳ್ತಿದಾರೆ. ನಮಗೆಲ್ಲ ಯಾರು ಬಂದ್ರೆ ಏನಪ್ಪ? ನಿಮ್ಮ ವಯಸ್ಸಿನಲ್ಲಿ ನಾವೂ ಬದಲಾವಣೆ ಮತ್ತೊಂದು ಅಂತೆಲ್ಲ ಉತ್ಸಾಹದಲ್ಲಿ ಇದ್ವಿ. ಈಗ ಎಲ್ಲರೂ ಒಂದೇ ಅನ್ನಿಸ್ತಿದೆ. ಹತ್ತುವರ್ಷ ಅವರು ಆಳಿದ್ದಾರಲ್ಲ ಅಂತ ಹೆಚ್ಚಿನವರು ಈಗ ಮೋದಿ-ಮೋದಿ ಅಂತಿರ್ಬಹುದು. ರಾಜಕಾರಣಿಗಳ ಹಣೆಬರಹವೆಲ್ಲ ಒಂದೇ' ಅಂತ ಅಜ್ಜನ ರಾಗ.
ಮೊಮ್ಮಗ ಸ್ವಲ್ಪ ರಾಂಗ್ ಆದ. 'ಹಣೆಬರಹ ರಾಜಕಾರಣಿಗಳದ್ದೆಲ್ಲ ಒಂದೇ. ಯಾಕೆಂದರೆ ಬರೆದವರು ಜನರೇ ನೋಡಿ. ಇವರ ಯೋಗ್ಯತೆ ಇಷ್ಟಿರುವಾಗ ಇನ್ನೆಂಥವರು ಸಿಗ್ತಾರೆ ಹೇಳಿ? ತಮಗೆ ರಾಜಕೀಯ ಭಾರಿ ಗೊತ್ತು ಎನ್ನುವ ಜನಕ್ಕೆ ಯಾರ ಬಳಿ ಏನು ಕೇಳಬೇಕು ಅಂತಲೇ ಗೊತ್ತಿಲ್ಲ. ಪಟ್ಟಣ ಪಂಚಾಯತ್ ಚುನಾವಣೆಗೆ ನಿಂತವ ಮತ ಕೇಳಲು ಬಂದಾಗ ನಮ್ಮನೆ ಎದುರಿನ ಮೋರಿ ಸರಿ ಮಾಡ್ಸಿಲ್ಲ ಅಂತ ಕೇಳ್ತಾರೆ. ಒಪ್ಕೋಳೋಣ. ಎಂಪಿ ಎಲೆಕ್ಷನ್ಗೆ ನಿಂತವನಿಗೂ ಅದೇ ಪ್ರಶ್ನೆ, ಎಂಎಲ್ಲೆಗೂ ಅದೇ. ನಮ್ಮೂರಿನ ಬೆಳೆಗೆ ಮಾರುಕಟ್ಟೆ ಇರದೇ ಇರುವಾಗ ಅದೇ ಬೆಳೆಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು. ಆಗ ಸಂಸದನಾಗಿ ನೀನೇನು ಮಾಡುತ್ತಿದ್ದೆ ಎಂಬ ಧಾಟಿಯ ಪ್ರಶ್ನೆಗಳನ್ನು ಕೇಳಿದವರು ಎಷ್ಟು ಮಂದಿ ಇದ್ದಾರೆ? ಎಲ್ಲರೂ ಭ್ರಷ್ಟರು ಅಂತ ಬಯ್ದುಕೊಂಡು ಕೊನೆಗೆ ಜಾತಿಬಾಂಧವನಿಗೆ ಮತ ಹಾಕಿ ಬಂದ ನೀವೆಲ್ಲರೂ ಈ ದೇಶವನ್ನು ಹೀಗೆ ಇಟ್ಟಿದ್ದೀರಿ. '
ಅಜ್ಜನಿಗೆ ನಿಜಕ್ಕೂ ಈಗೋ ಹರ್ಟ್ ಆಗಿತ್ತು. ಈಗಿನ ಹುಡುಗರಿಗೆಲ್ಲ ಏನು ಗೊತ್ತು ಅನ್ನೋ ಉಡಾಫೆಯಲ್ಲೇ ಆತ ಮಾತು ಶುರು ಮಾಡಿದ್ದ. ಮೊಮ್ಮಗನ ಮಾತುಗಳು ಆತನ ಸಿನಿಕತನವನ್ನು ಅಲ್ಲಾಡಿಸಿದ್ದವು. 'ಸಿದ್ಧಾಂತದ ಮೇಲೆ ಮತ ಹಾಕೋಕೆ ಯಾರಿಗಿದೆ ಅದು? ಬಿಜೆಪಿಯವರು ಹಿಂದುತ್ವ ಅಂದ್ರು. ಮಸೀದಿ ಕೆಡವಿದವರು ಇವರೇನಾ ಅಂತ ಈಗದೇನೋ ಹೊಸದಾಗಿ ಚರ್ಚೆ ಆಗುತ್ತಿದೆ...'
'ಅಯ್ಯೋ. ಆ ಚರ್ಚೆ ಬೇಕಾಗಿರೋದು ಟಿವಿ ಚಾನೆಲ್ಗಳಿಗೆ ಮಾತ್ರ ಅಜ್ಜ. ಅಲ್ಲಿಂದ ದೇಶ ಎಷ್ಟೋ ಮುಂದೆ ಬಂದಾಗಿದೆ.'
ಅಜ್ಜನಿಗೆ ಈ ಮೊಮ್ಮಗ ಅಡಿಗಡಿಗೆ ತನ್ನದೇ ವಾದ ತೆಗೆದು ಎಲ್ಲವನ್ನೂ ಅಲ್ಲಗಳೆಯುತ್ತಿರುವುದು ಕಿರಿಕಿರಿ ಎನಿಸಿತು. ಏನಾದರೂ ಕೌಂಟರ್ ಕೊಡಲೇಬೇಕಿತ್ತು. 'ಹೌದಪ್ಪಾ, ನಿಮಗೆಲ್ಲ ಈ ಕ್ಷಣದ ಉನ್ಮಾದ. ರಾಮಜನ್ಮಭೂಮಿ ಆಂದೋಲನದಿಂದಲೇ ಎರಡು ಸ್ಥಾನಗಳನ್ನು ಗೆಲ್ಲುತ್ತಿದ್ದ ಬಿಜೆಪಿ ಅಧಿಕಾರ ಹಿಡಿವ ಹಂತದವರೆಗೂ ಬಂತು. ಈಗ ನಿಮಗೆ ಅದರ ವಿಷಯವೂ ಬೇಡ, ಅದರ ರೂವಾರಿ ಆಡ್ವಾಣಿಯವರೂ ಬೇಡ. ಈ ಮೋದಿ ಹಿರಿತಲೆಗಳನ್ನೆಲ್ಲ ಬದಿಗೆ ಸರಿಸಿ ಮೊನಚು ಭಾಷೆಯಲ್ಲಿ ಮಾತಾಡ್ತಿದಾರೆ. ಅದಕ್ಕೆ ಸರಿಯಾಗಿ ಬೆಲೆ ಏರಿಕೆ, ಹಗರಣ ಅಂತ ಕಾಂಗ್ರೆಸ್ನವರು ಹೆಸರು ಕೆಡಿಸಿಕೊಂಡಿದಾರೆ. ಇದನ್ನೇ ಮೋದಿ ಹವಾ ಅಂತಿದೀರಿ. ಎಂತೆಂಥ ಹವಾ ನೋಡಿಲ್ಲ ನಾವು...'
'ಓಹೋ. ಸಿಂಪಲ್ಲಾಗಿ ಒಂದು ಪ್ರಶ್ನೆ ಅಜ್ಜ. ಬಿಜೆಪಿಗೆ 180ಕ್ಕೂ ಹೆಚ್ಚು ಸ್ಥಾನ ಬರಲಿದೆ ಅಂತಲೇ ಎಲ್ಲ ಸಮೀಕ್ಷೆಗಳು ಹೇಳ್ತಿವೆ. ನೀವು ಹೇಳಿದ ಆಡಳಿತ ವಿರೋಧಿ ಅಲೆಗಳೆಲ್ಲ ಹೀಗೆ ಇದ್ದಾಗಲೂ ಮೋದಿ ಬದಲಿಗೆ ಆಡ್ವಾಣಿಯವರನ್ನೋ ಅಥವಾ ಸಾಮೂಹಿಕ ನಾಯಕತ್ವವನ್ನೋ ಬಿಂಬಿಸಿದ್ದರೆ ಬಿಜೆಪಿ ಪರ ಇದೇ ಅಭಿಪ್ರಾಯ ವ್ಯಕ್ತವಾಗುತ್ತಿತ್ತೇ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಕೊಟ್ಟುಕೊಂಡರೆ ಮೋದಿ ಅಲೆ ಇದೆಯೋ, ಇಲ್ಲವೋ ಅರ್ಥವಾಗುತ್ತದೆ. ರಾಜ್ಕಪೂರ್- ನರ್ಗೀಸ್ ಸಿನಿಮಾಗಳು ಹೆಂಗಿರ್ತಿದ್ವು ಗೊತ್ತಾ ಅಂತ ನೀವು ಮಾತಾಡುತ್ತೀರಿ. ನಾವು ಆ ಜಾಗದಲ್ಲಿ ಹೊಸಬರ ಹೆಸರುಗಳನ್ನು ಹೇಳಿದರೆ ಅದರರ್ಥ ಹಳೆಯದನ್ನು ಮರೆತಿದ್ದೇವೆ ಅಂತಲ್ಲ. ವರ್ತಮಾನಕ್ಕೆ ಹೊಂದಿಕೊಳ್ಳುವ ಹೊಸ ವ್ಯಾಖ್ಯಾನಕ್ಕೆ ತೆರೆದುಕೊಂಡಿದ್ದೀವಿ ಎಂದಷ್ಟೇ ಅರ್ಥ'
ಟ್ವಿಟ್ಟರ್-ಫೇಸ್ಬುಕ್ಗಳ ಜಮಾನಾದ ಹುಡುಗರು ಹೀಗೆಲ್ಲ ವಾದಕ್ಕೂ ನಿಲ್ಲುತ್ತಾರೆ ಅಂತ ಅಜ್ಜನ ನಿಲುಕಿಗೆ ಹೇಗೆ ತಾನೇ ದಕ್ಕಿರಲು ಸಾಧ್ಯ? 'ಸಿದ್ಧಾಂತದ ಗಂಭೀರ ಮಾತುಗಳನ್ನು ಸಿನಿಮಾ ಹೋಲಿಕೆಯಲ್ಲಿ ತೇಲಿಸಬೇಡ' ಅಂದು ಎತ್ತಲೋ ನೋಡಿದರು.
'ಖಂಡಿತ ಸೀರಿಯಸ್ ಆಗ್ಬೇಕು ಅಜ್ಜ. ಸೀರಿಯಸ್ ಆಗೋದು ಅಂದ್ರೆ ಮೊದಲು ಸಿನಿಕತೆ ತೊರೆಯಬೇಕಲ್ವೇ? ಹಾಗಾಗಬೇಕಾದ್ರೆ ಏನೂ ಬದಲಾಗ್ತಿಲ್ಲ ಎಂಬ ಅಸಡ್ಡೆ ಬಿಟ್ಟು, ಎಲ್ಲ ಲೋಪಗಳ ನಡುವೆಯೂ ಇರುವ ಪಾಸಿಟಿವ್ ಅಲೆಗಳನ್ನು ನೋಡ್ಲೇಬೇಕಲ್ವೇ? ನಿಮ್ಮ ಕಾಲದ ಬದಲಾವಣೆ ನೀವು ಹೇಳಿ. ಈಗಿನ ಬದಲಾವಣೆಗಳನ್ನು ನಾನು ಹೇಗೆ ಅರ್ಥ ಮಾಡಿಕೊಳ್ತಿದೇನೆ ಅಂತ ನಾನು ಹೇಳ್ತೇನೆ. ನಿಮ್ಮ ಜಮಾನಾದ ರಾಮಜನ್ಮಭೂಮಿ ಚಳವಳಿಯೇ ಬಿಜೆಪಿಗೆ ಹೆಚ್ಚು ಸೀಟು ಬರುವಂತೆ ಮಾಡಿದ್ದು ಅಂದ್ರಲ್ಲ. ಹೇಗದು?'
'ರಾಮನ ಹೆಸರು ಹಿಂದುಗಳನ್ನೆಲ್ಲ ಒಂದಾಗುವಂತೆ ಮಾಡಿತು. ಜಾತಿಗಳಲ್ಲಿ ಹರಿದು ಹಂಚಿದ್ದವರು ಆಯಾ ಜಾತಿಯನ್ನು ಪ್ರೇರೇಪಿಸುವ ಪಕ್ಷಗಳಿಗೆ ಮತ ಹಾಕ್ತಿದ್ರು. ಅಯೋಧ್ಯೆಯ ಆಂದೋಲನ ಮೇಲ್ಜಾತಿ-ಕೆಳಜಾತಿಯವರನ್ನೆಲ್ಲ ಬಿಜೆಪಿಗೆ ಮತ ಹಾಕುವಂತೆ ಕೆಲಕಾಲ ಪ್ರೇರೇಪಿಸಿತು.' ತನ್ನ ಈ ಮಾತಿಗೂ ಮೊಮ್ಮಗ ಅಪಸ್ವರ ತೆಗೆಯಬಹುದೆಂಬ ಭೀತಿಯಲ್ಲೇ ಅಜ್ಜ ಹೀಗೆಲ್ಲ ಹೇಳಿದರು.
'ಸರಿಯಾಗಿ ಹೇಳಿದಿರಿ' ಅಂತ ಮುಖವರಳಿಸಿದ ಮೊಮ್ಮಗ. 'ಆದರೆ ಬಿಜೆಪಿಗೆ ಈ ಟ್ರೆಂಡ್ ಮುಂದುವರಿಸಿಕೊಳ್ಳಲಿಕ್ಕಾಗಲಿಲ್ಲ. ಏಕೆಂದರೆ ದಲಿತರು-ಹಿಂದುಳಿದವರಿಗೆ ರಾಮಜನ್ಮಭೂಮಿ ಚಳವಳಿ ಮೂಲಕ ಕೊಟ್ಟ ಐಡೆಂಟಿಟಿಯನ್ನು ವಿಶ್ವಾಸವಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅದರರ್ಥ ಮತ್ತೆ ಮತ್ತೆ ರಾಮಜಪ ಮಾಡಬೇಕಿತ್ತು ಅಂತಲ್ಲ. ಆ ಜಪ ಮಾಡಬೇಕಾದ ಕೆಲಸ ಮಾಡಿತ್ತು. ಮುಂದಿನ ವಿಧಿಗೆ ದಾಟಬೇಕಿತ್ತು. ಮುಂದಿನ ವಿಧಿ ಅಂದರೆ ದೇವಾಲಯ ಕಟ್ಟುವುದು ಅಂತಲ್ಲ. ದೊಡ್ಡ ಜನವರ್ಗ ಹೊಸದಾಗಿ ದೊರೆತ ಐಡೆಂಟಿಟಿಯಲ್ಲಿ ಸಮಾಧಾನ ಕಾಣುವ ವಿಶ್ವಾಸದ ಮಾರ್ಗಗಳಿರಬೇಕಿತ್ತು. ಆಗಿದ್ದೇನು? ಕಲ್ಯಾಣ್ ಸಿಂಗ್ರಂಥ ಹಿಂದುಳಿದ ವರ್ಗದ ನಾಯಕರು ಏನೇನೋ ಕಾರಣಗಳಿಂದ ಹಂತಹಂತವಾಗಿ ನೇಪಥ್ಯಕ್ಕೆ ಸರಿಯುವಂತಾಯಿತು. ಬಿಜೆಪಿಯಲ್ಲಿರುವ ಮೇಲ್ವರ್ಗದವರು ನಿಮ್ಮ ಆಕ್ರೋಶವನ್ನು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂಬ ಕೊಂಕುಗಳಿಗೆ ದಾರಿಯಾಯಿತು. ಮತ್ತೆ ಜಾತಿ ಸಮೀಕರಣಗಳ ಪ್ರಾದೇಶಿಕ ಪಕ್ಷಗಳು ಲಾಭ ಪಡೆದುಕೊಳ್ಳತೊಡಗಿದವು ಎಂಬ ಅಂಶ ಅಯೋಧ್ಯೆಯನ್ನು ತನ್ನೊಳಗಿಟ್ಟುಕೊಂಡಿರುವ, ಅತಿಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ರಾಜಕಾರಣ ನೋಡಿದರೆ ತಿಳಿಯುತ್ತದೆ...'
'ಸುಮಾರು ತಿಳಿದುಕೊಂಡಿದೀಯಾ. ಈಗ ಈ ಕತೆಯಲ್ಲಿ ಬದಲಾಗಿರೋದೇನು?' ಅಜ್ಜನ ಪ್ರಶ್ನೆ.
'ಇದಕ್ಕೆ ಉತ್ತರ ಮೋದಿ ಎಂಬ ಪದಕ್ಕೇ ಬಂದು ನಿಲ್ಲುತ್ತದೆ. ನರೇಂದ್ರ ಮೋದಿ ಮೂಲವನ್ನು ಜಾತಿಜಾಲದಲ್ಲೇ ಹುಡುಕುವುದಾದರೆ ಕಾಣುವುದು ಒಬಿಸಿ ಬೇರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೋ, ಮೋದಿ ಪ್ರಧಾನಿಯಾಗುತ್ತಾರೋ ಎಂಬ ಮಾತುಗಳು ಹಾಗಿರಲಿ. ಇಂಥ ಬೇರುಗಳಿಂದ ಬಂದವನೊಬ್ಬ ರಾಮಮಂದಿರವನ್ನು ಆಶಿಸುವ ಪಾಳೆಯದಿಂದ ಭಾರತದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗಿರುವುದು ದೇಶದ ಮಟ್ಟಿಗೆ ಬದಲಾವಣೆಯ ಸಂಗತಿ ಅಲ್ಲ ಎನ್ನುವುದಾದರೆ, ಇನ್ಯಾವುದನ್ನು ಬದಲಾವಣೆ ಎಂದು ವಿವರಿಸೋಣ? ಆತ ತನ್ನ ಜಯಕ್ಕಾಗಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿರುವುದೂ ಕಾಶಿ- ಅಯೋಧ್ಯೆಗಳನ್ನು ಹೊತ್ತಿರುವ ನೆಲದಲ್ಲೇ. ಕಲ್ಯಾಣ್ ಸಿಂಗ್ ಸೇರಿದಂತೆ ಕೆಳವರ್ಗದ ಮುಖಂಡರ ಮಾತುಗಳಿಗೆ ಅಲ್ಲಿ ಮತ್ತೆ ಬೆಲೆ ಬಂದಿದೆ. ಟಿಕೆಟ್ ಹಂಚಿಕೆಯಲ್ಲಿ ಆ ವರ್ಗದವರಿಗೆ ನ್ಯಾಯ ಲಭಿಸಿದೆ. ಇದರಿಂದ ಹಿಂದುತ್ವದ ಪರಿವಾರದಲ್ಲಿರುವ ಮೇಲ್ವರ್ಗಕ್ಕೆ ತನ್ನ ಪ್ರಾಮುಖ್ಯ ತಗ್ಗಿದಂತೆ ಅನ್ನಿಸದೇ ಅಂತ ನೀವು ಕೇಳಬಹುದೇನೋ?'
ಅಜ್ಜ ಈ ಬಾರಿ ತಟ್ಟನೇ ಉತ್ತರ ಕೊಟ್ಟ. 'ನನಗನಿಸಿದಂತೆ ಮೋದಿಯವರನ್ನು ಹೆಚ್ಚು ಮೆರೆದಾಡಿಸುತ್ತಿರುವುದೇ ಮೇಲ್ವರ್ಗ!'
'ಇಲ್ಲಿಯೇ ಸ್ವಾರಸ್ಯವಿರೋದು.. ಮೋದಿ ಬದಲಾವಣೆ ತರುತ್ತಾರೆ ಎಂದು ಆಶಿಸುವುದಕ್ಕೂ ಪೂರ್ವಭಾವಿಯಾಗಿ ಸಮಾಜದ ಮನಸ್ಥಿತಿಯಲ್ಲೊಂದು ಬದಲಾವಣೆ ಆಗಿದೆ. ಕೆಲವು ವಲಯಗಳ ನಾಯಕತ್ವ ತನ್ನದೇ ಇರಬೇಕು ಎಂಬ ಮನಸ್ಥಿತಿಯಿಂದ ಮೇಲ್ವರ್ಗ ಹೊರಗೆ ಬಂದಿದೆ. ಮಾತಾ ಅಮೃತಾನಂದಮಯಿ ಅವರ ಅಪ್ಪುಗೆಯ ಆಶೀರ್ವಾದ ಸ್ವೀಕರಿಸುವಾಗ ಮೇಲ್ವರ್ಗದ ಹಿಂದು ಅವರ ಬೆಸ್ತ ಜಾತಿಯ ಬಗ್ಗೆ ವಿಚಾರ ಮಾಡದೇ ಅವರನ್ನು ಹಿಂದುತ್ವದ ಪ್ರತಿನಿಧಿಯಾಗಿ ವಿನೀತವಾಗಿ ಸ್ವೀಕರಿಸುತ್ತಾನೆ. ಯಾದವ ಕುಲದ ಬಾಬಾ ರಾಮ್ದೇವ್ರನ್ನು ಗುರುವಾಗಿ ನೋಡಿ ಅವರ ಕೋರ್ಸುಗಳಿಗೆ ಸೇರಿಕೊಳ್ಳುವುದಕ್ಕೆ ಯಾವ ಬ್ರಾಹ್ಮಣ್ಯವೂ ಅಡ್ಡಿ ಬರುವುದಿಲ್ಲ. ದಲಿತರ ಜತೆ ನಿಂತು ಬ್ರಾಹ್ಮಣರು ಮತ ಹಾಕಿ ಮಾಯಾವತಿ ನಾಯಕತ್ವವನ್ನು ಒಮ್ಮೆ ಒಪ್ಪಿಕೊಂಡಿದ್ದಾಗಿದೆ. ಬಹುಶಃ ಇವೆಲ್ಲ ಕೆಳಜಾತಿಯವರು ಮೇಲ್ವರ್ಗದವರ ಬಗ್ಗೆ ಮೆದುವಾಗುವುದಕ್ಕೆ ಕಾರಣಗಳನ್ನು ಒದಗಿಸಿದೆ. ಪ್ರಾರಂಭದ ಸಂಘರ್ಷಗಳೇನೇ ಇದ್ದರೂ ಸಾಮರಸ್ಯ ಸಾಧ್ಯವಾಗುವುದು ಸೌಹಾರ್ದದಿಂದಲೇ. ಅಂಥ ವಾತಾವರಣವೊಂದರಲ್ಲಿ ಮೋದಿ ನಿಂತಿದ್ದಾರೆ ಮತ್ತು ಅದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಹಿಂದುಳಿದವರ ನೇತಾರ ಎನ್ನಿಸಿಕೊಳ್ಳಲು 'ನೋಡಿ, ಶತಮಾನಗಳಿಂದ ಅವರು ನಿಮ್ಮನ್ನು ತುಳಿದರು...' ಎಂದೇ ಮಾತನಾಡಬೇಕೆಂಬ ಅಘೋಷಿತ ನಿಯಮವನ್ನು ಮೋದಿ ಮುರಿದಿದ್ದಾರೆ. ಅದಕ್ಕೆ ಸರಿಯಾಗಿ ಕೇವಲ ಮೀಸಲು-ಸವಲತ್ತುಗಳ ಆಮಿಷಕ್ಕೆ ಬಲಿಯಾಗುತ್ತಿದ್ದರೆ ತಾವು ಇದ್ದಲ್ಲೇ ಇರುತ್ತೇವೆಂಬುದು ಹಿಂದುಳಿದ ದೊಡ್ಡ ಜನವರ್ಗಕ್ಕೆ ಅರ್ಥವಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಈ ಸವಲತ್ತಿನ ಸಮರದಲ್ಲಿ ಎಲ್ಲ ಪಕ್ಷಗಳ ಆದ್ಯತೆ ಮುಸ್ಲಿಮರಿಗೆ ಇರುವುದರ ವಾಸ್ತವವೂ ಅವರನ್ನು ಅಲುಗಾಡಿಸಿದೆ. ರಾಮಜನ್ಮಭೂಮಿ ಆಂದೋಲನದ ನಂತರ ಇದೇ ಮೊದಲ ಬಾರಿ 'ಹಿಂದುತ್ವ'ದ ವ್ಯಾಖ್ಯೆಯಲ್ಲಿ ತಕರಾರಿಲ್ಲದೇ ಸೇರಿಕೊಳ್ಳುವ ಕೆಳವರ್ಗದ ಉತ್ಸುಕತೆ ಉತ್ತರ ಪ್ರದೇಶದಂಥ ನೆಲದಲ್ಲಿ ಢಾಳಾಗಿಯೇ ಕಾಣುತ್ತಿದೆ....
ಇನ್ನು ಮೇಲ್ವರ್ಗದ ಈಗಿನ ತಲೆಮಾರಿನ ಲಹರಿಯೇ ಬೇರೆ. ಮೀಸಲಿನ ಬಗ್ಗೆ ಅಸಮಾಧಾನಗಳಿರುವುದು ಹೌದಾದರೂ ಅದಕ್ಕೆ ಉದ್ಯೋಗ ಬೇಕು. ಉದ್ಯಮಶೀಲತೆ ಬೇಕು. ಅಂಥದೊಂದು ಅರ್ಥವ್ಯವಸ್ಥೆ ಕಟ್ಟುವ ಎಲ್ಲ ಆಸೆಗಳನ್ನೂ ಮೋದಿ ಹುಟ್ಟಿಸುತ್ತಿದ್ದಾರೆ. ಆಡಳಿತ ವಿರೋಧಿ ಅಲೆ, ಮೋದಿ ಅಬ್ಬರದ ಪ್ರಚಾರ ಅಂತ ಏನೆಲ್ಲ ಚರ್ಚಿಸಬಹುದು. ಆದರೆ 'ಅಬ್ ಕಿ ಬಾರ್ ಮೋದಿ ಸರ್ಕಾರ್' ಘೋಷಣೆ ಹಿಂದೆ ಇಷ್ಟೆಲ್ಲ ಸಾಮಾಜಿಕ ತುಡಿತಗಳಿವೆ. ಆಡ್ವಾಣಿ ರಥಯಾತ್ರೆಯ ಮುಂದುವರಿದ ಹಿಂದುತ್ವದ ಹೊಸಯಾನಕ್ಕೆ ಮೋದಿ ನೇತಾರ. ಹರಸುವುದು ಇತಿಹಾಸಕ್ಕೆ ಬಿಟ್ಟ ವಿಚಾರ.'
ನನನ
ಅಜ್ಜ ಸುಮ್ಮನಾದದ್ದು ಅಚ್ಚರಿಗೋ, ಗೊಂದಲಕ್ಕೊ ತಿಳಿಯಲಿಲ್ಲ. ಇದೇ ಮೊದಲ ಬಾರಿಗೆ ಮತ ಚಲಾಯಿಸಲು ಹೊರಟಿರುವ ಈ ದೇಶದ ಬರೋಬ್ಬರಿ 12 ಕೋಟಿ ಯುವ ಮತದಾರರು, 'ಮತ ಯಾರಿಗೆ ಹಾಕಲಿ' ಅಂತ ಹಿರಿಯರನ್ನು ಕೇಳಿರುವ ಯಾವುದೇ ಸುಳಿಹುಗಳಿಲ್ಲ!

-ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.