ಅಂಕಣಗಳು

ಉದ್ಯೋಗವೇ ಭಾರತ ಲಕ್ಷಣ, ಪ್ರಣಾಳಿಕೆಯ ವ್ಯಾಖ್ಯಾನ

ಉದ್ಯೋಗವೇ ಭಾರತ ಲಕ್ಷಣ, ಪ್ರಣಾಳಿಕೆಯ ವ್ಯಾಖ್ಯಾನ
Published On :
ಬಿಜೆಪಿಯ ಪ್ರಣಾಳಿಕೆಯನ್ನು ಓದುವ ವ್ಯಕ್ತಿಯ ಮುಖವನ್ನು ಗಮನಿಸುತ್ತಿದ್ದರೆ ಒಂದು ಅಂಶಕ್ಕೆ ಅವರೆಲ್ಲರ ಮುಖದಲ್ಲಿ ಮಿನುಗು ಕಾಣಬಹುದು. ಮೋದಿ ಪರ ಜನಮತ ಸಿಗುವ ಸಾಧ್ಯತೆಗೆ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಇಂಬು ಕೊಡುವ ಅಂಶ ಎಂದರೆ- ಉದ್ಯೋಗಗಳು.
ಅದರ ಭರವಸೆಗಳ ಆಯಾಮ ಹಲವು ರೀತಿಯಲ್ಲಿದೆ. ಭಾರತವನ್ನು 'ಜಾಗತಿಕ ಉತ್ಪಾದನಾ ವಲಯ'ವನ್ನಾಗಿ ಪರಿವರ್ತಿಸುವುದಾಗಿ ಅದು ಹೇಳುತ್ತದೆ. ಅತಿವೇಗದ ಬುಲೆಟ್ ಟ್ರೇನ್‌ಗಳ ಚತುಷ್ಪಥ ನಿರ್ಮಾಣ, ನೂರು ಹೊಸ ನಗರಗಳ ಅಭಿವೃದ್ಧಿ, ರಫ್ತು ಚಟುವಟಿಕೆ ಆಧಾರದಲ್ಲಿ ಚೀನಾವನ್ನು ಏಷ್ಯದ ಟೈಗರ್ ಆಗಿಸಿರುವ ಬಂದರು ನಿರ್ಮಾಣದ ಯೋಜನೆಗಳನ್ನು ಇಲ್ಲಿಯೂ ಅನುಷ್ಠಾನಗೊಳಿಸುವ ಭರವಸೆ- ಇವೆಲ್ಲವುಗಳ ನಿಖರ ಪರಿಣಾಮ ಎಂದರೆ ಉದ್ಯೋಗ ಸೃಷ್ಟಿ. 
ಉತ್ಪಾದಕ ಚಟುವಟಿಕೆಗಳು ಯಾವತ್ತೂ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ)ಯ ಶೇ. 60 ಭಾಗ ನಗರಗಳಿಂದ ಬರುತ್ತಿರುವಾಗ ನಗರೀಕರಣದ ಯೋಜನೆ ಉದ್ಯೋಗ ಸೃಷ್ಟಿಗೆ ಸಹಕರಿಸಲಿದೆ ಎಂಬುದು ಸ್ಪಷ್ಟ. ಮೂಲಸೌಕರ್ಯ ಅಭಿವೃದ್ಧಿ ಎಂಬುದು ಇರುವ ಉದ್ಯೋಗಗಳು ಗಟ್ಟಿಗೊಳ್ಳುವುದಕ್ಕೆ ಸಹಕರಿಸುತ್ತದೆ. ಸಹಾಯಕ ಉದ್ದಿಮೆಗಳು ಹಾಗೂ ಮಧ್ಯಮ ಮಟ್ಟದ ಉದ್ಯಮ ವಲಯಗಳಿಗೆ ಉತ್ತೇಜನ ಕೊಡುವುದರಿಂದ ಉದ್ಯೋಗ ಮತ್ತು ಉದ್ಯಮಶೀಲತೆ ಎರಡಕ್ಕೂ ನೀರೆರೆಯುತ್ತದೆ. ದೊಡ್ಡ ದೊಡ್ಡ ಕೈಗಾರಿಕಾ ವಲಯಗಳು- ಪೆಟ್ರೋಕೆಮಿಕಲ್ ಸ್ಥಾವರ ಅಥವಾ ವಾಹನ ತಯಾರಿಕೆ ಕಾರ್ಖಾನೆ- ಇವುಗಳಿಗೆ ಸಮಾನಾಂತರವಾಗಿ ಮಧ್ಯಮ ಗಾತ್ರದ ಸಹಾಯಕ ಉದ್ದಿಮೆಗಳನ್ನು ರೂಪಿಸುವುದು ಉತ್ತಮ ವಿಚಾರ. 
ಕಾಂಗ್ರೆಸ್ ಕೂಡ ತನ್ನ ಪ್ರಣಾಳಿಕೆಯಲ್ಲಿ ಇಂಥ ಕೆಲವು ವಿಷಯಗಳಲ್ಲಿ ಬೇರೆಯದೇ ಭಾಷೆಯಲ್ಲಿ ಬದ್ಧತೆ ಮೆರೆದಿದೆ ಎಂಬುದೂ ನಿಜವೇ. ಹಾಗಾದರೆ ಮೋದಿ ಅವರ ಯೋಜನೆಗಳು ಭಿನ್ನವಾಗುವುದು ಹೇಗೆ?
ಇಲ್ಲಿ ಮೂರು ಮುಖ್ಯ ವ್ಯತ್ಯಾಸಗಳು ಇವೆ. ಮೊದಲನೇ ಅಂಶವಾಗಿ ನಾವು ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಳೆದ ಹತ್ತು ವರ್ಷಗಳ ಆಳ್ವಿಕೆಯನ್ನು ಗಮನಿಸಬೇಕು. ಭಾರತವನ್ನು ತಾನೂ ಉತ್ಪಾದಕ ಅರ್ಥವ್ಯವಸ್ಥೆಯನ್ನಾಗಿ ಪರಿವರ್ತಿಸುವುದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ನ ಪ್ರಣಾಳಿಕೆ, ಕಳೆದೊಂದು ದಶಕದಲ್ಲಿ ಅಂಥ ಎಲ್ಲ ಅವಕಾಶಗಳನ್ನು ಕೈಚೆಲ್ಲಿ ಕುಳಿತಿದೆ ಎಂಬುದನ್ನು ನಿರ್ಲಕ್ಷಿಸಲಾದೀತೆ? ರಾಹುಲ್ ಗಾಂಧಿ ಮಾತಾಡಿದ್ದೇ ಆಯಿತು. ಸೋನಿಯಾ ಗಾಂಧಿಯವರು ತಮ್ಮ ಸಮಾಲೋಚನಾ ಕೊಠಡಿಯಲ್ಲಿ ಎಲ್ಲರನ್ನೂ ಗುಂಪು ಹಾಕಿಕೊಂಡು ಸಮಾಜವಾದದ ಪಾಠ ಮಾಡಿದ್ದು ಭಾರತದ ಉತ್ಪಾದಕ ವಲಯಕ್ಕೆ ಕಿಂಚಿತ್ತೂ ಸಹಾಯ ಮಾಡಲಿಲ್ಲ. 
ಎರಡನೆಯದಾಗಿ, ಕಾಂಗ್ರೆಸ್ ನೀತಿ ಬದಲಾವಣೆ ಬಗ್ಗೆ ಸೂಚ್ಯವಾಗಿ ಪ್ರಸ್ತಾಪಿಸಿದರೆ ಮೋದಿ ಮೂಲಭೂತ ವಿಷಯಗಳಿಗೆ ಗಮನ ನೀಡಿದ್ದಾರೆ. ಬಹಳ ಸ್ಪಷ್ಟವಾದ ಮೂಲಸೌಕರ್ಯ ಅಭಿವೃದ್ಧಿ ನೀಲನಕ್ಷೆಯನ್ನು ಅವರು ತೆರೆದಿರಿಸಿದ್ದಾರೆ. ವಿದ್ಯುತ್ ಮತ್ತು ಇಂಧನ ಮೂಲಗಳನ್ನು ಸುಧಾರಿಸದೇ ಇದ್ದರೆ, ಕಲ್ಲಿದ್ದಲು ಮತ್ತು ಗಣಿಗಾರಿಕೆಯಲ್ಲಿ ಸ್ಪಷ್ಟತೆ ಇರದಿದ್ದರೆ ಎಷ್ಟೇ ನಗರಗಳನ್ನು ನಿರ್ಮಿಸಿದರೂ, ಕಾರ್ಖಾನೆಗಳನ್ನು ಕಟ್ಟಿದರೂ, ವಾಲ್‌ಮಾರ್ಟ್ ತಂದು ಶೈತ್ಯಾಗಾರಗಳ ಜಾಲವನ್ನೇ ತೆರೆದಿಟ್ಟರೂ ಉಪಯೋಗ ಶೂನ್ಯ. 
ಮೂರನೆಯದಾಗಿ, ಮೋದಿಯ ಉದ್ಘೋಷಗಳಲ್ಲಿ ಮಹತ್ತರವಾದ ಆಕಾಂಕ್ಷೆ ಇರುವುದು ಸ್ಪಷ್ಟವಾಗಿದೆ. ಏಕೆಂದರೆ ಪ್ರಣಾಳಿಕೆಯಲ್ಲಿ ಅಡಕವಾಗಿರುವ ಅಂಶಗಳನ್ನು ಮೋದಿ ಈ ಹಿಂದಿನ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ಈ ವರ್ಷದ ಜನವರಿ 19ರಂದು ದೆಹಲಿಯಲ್ಲಿ ಮಾಡಿದ ಭಾಷಣದಲ್ಲೂ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗಿರುವ ಬಹುತೇಕ ಅಂಶಗಳ ಹೊಳಹು ಇತ್ತು. ಗ್ರಾಹಕ- ಸಹಭಾಗಿ- ಉತ್ಪಾದಕ ನೆಲೆಯಲ್ಲಿ ಭಾರತವನ್ನು ಜಾಗತಿಕ ಪೂರೈಕೆ ಜಾಲಕ್ಕೆ ಬೆಸೆಯುವ ಬಗ್ಗೆ ಅವರು ಬಹಳ ದೃಢವಾಗಿ ಮಾತನಾಡಿದ್ದರು. ಗುಜರಾತ್‌ನಲ್ಲಿ ಆಗಿರುವಂತೆ ಅವರು ಜಾಗತೀಕರಣದ ಪರಿಕಲ್ಪನೆಯನ್ನು ಅಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಈ ಜಗತ್ತಿನೊಂದಿಗೆ ಅಸೌಖ್ಯದಿಂದಿರುವುದು ಸ್ಪಷ್ಟ. ಅದರ ಪ್ರಣಾಳಿಕೆ ಸಮಾಜವಾದದ ದೇಶಗಳು ಮತ್ತು ಅಲಿಪ್ತ ನೀತಿ ಪ್ರಸ್ತಾಪಗಳಲ್ಲಿ ತೊಡಗಿದ್ದರಲ್ಲಿ ಅಚ್ಚರಿಯೇನೂ ಇಲ್ಲ. 
ಮೇ 16ರ ನಂತರ ಅಧಿಕಾರ ಗದ್ದುಗೆಯನ್ನು ಹಿಡಿಯುವುದಕ್ಕೆ ನರೇಂದ್ರ ಮೋದಿ ಸಫಲರಾಗಿದ್ದೇ ಹೌದಾದಲ್ಲಿ, ಅವರ ಮಾರ್ಗದಲ್ಲಿ ಎದುರಾಗುವ ಸವಾಲುಗಳು ಯಾವವು? ಈ ಹಂತದಲ್ಲೂ ಮೂರು ವಿಷಯಗಳನ್ನು ಗಮನಿಸಬಹುದು.  
ಮೊದಲನೆಯದಾಗಿ, ಪ್ರಣಾಳಿಕೆಯಲ್ಲಿ ಹೇಳಿರುವ ಹೆಚ್ಚಿನ ಅಂಶಗಳ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಪ್ರಮುಖ ವ್ಯಕ್ತಿಗಳ ನಡುವೆ ಸಮನ್ವಯ ಬೇಕಾಗುತ್ತದೆ. ಈ ಹಂತದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆಯಬೇಕಾಗುತ್ತದೆ. 'ಟೀಮ್ ಇಂಡಿಯಾ' ಪರಿಕಲ್ಪನೆಯಲ್ಲಿ ಪ್ರಣಾಳಿಕೆ ಮಾತನಾಡುತ್ತದೆ. ರಾಜ್ಯಗಳನ್ನು ಪ್ರಭಾವಿಸುವ ಪ್ರಮುಖ ನೀತಿ ನಿರೂಪಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿ ಸೌಹಾರ್ದಯುತ ಮೈತ್ರಿಯೊಂದನ್ನು ಕಂಡುಕೊಳ್ಳಬೇಕಾಗಿರುವ ಅಗತ್ಯವನ್ನು ಪ್ರಣಾಳಿಕೆ ಮನಗಂಡಿದೆ. ಇದು ಉದಾತ್ತ ಯೋಜನೆಯೇ ಸರಿ. ಆದರೆ ಅನುಷ್ಠಾನದ ಮಾರ್ಗ ಕಷ್ಟ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. 
ಎರಡನೆಯದಾಗಿ, ಈ ಯೋಜನೆಗಳೆಲ್ಲ ಸರಿ. ಆದರೆ ಹಣವೆಲ್ಲಿದೆ? ಹಿಂದಿನ ಸರ್ಕಾರವು ಬಿಟ್ಟುಹೋಗಲಿರುವ ಸಂಪನ್ಮೂಲಗಳು ಅತ್ಯಂತ ಸೀಮಿತ. ಮೋದಿಯವರ ಬೃಹತ್ ಮೂಲಸೌಕರ್ಯ ನೀಲನಕ್ಷೆಗಳಿಗೆ ಹಣ ಎಲ್ಲಿಂದ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕ್ಷಮತೆ ಕುಂದಿರುವ ಸರ್ಕಾರಿ ಅಧಿಕಾರಿ ವಲಯದ ಜಾಲವನ್ನೇ ನೆಚ್ಚಿಕೊಳ್ಳುವುದೂ ದುಬಾರಿಯಾದೀತು. ಇವಕ್ಕೆಲ್ಲ ಖಾಸಗಿ ಬಂಡವಾಳವೇ ಬೇಕು. ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಶ್ರಮಿಸಬೇಕು. ಈ ಹಂತದಲ್ಲಿ ನೀತಿಗಳಲ್ಲಿ ನಿರಂತರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವುದು ಅತಿಮುಖ್ಯ. ಇದನ್ನು ಭಾರತ ಪ್ರದರ್ಶಿಸದೇ ಶತಮಾನಗಳೇ ಆಗಿಹೋಗಿವೆ ಎಂದರೆ ಉತ್ಪ್ರೇಕ್ಷೆಯಾಗುವುದಿಲ್ಲ. 
ಇವನ್ನೆಲ್ಲ ಸಾಧಿಸುವುದಕ್ಕೆ ನರೇಂದ್ರ ಮೋದಿಯವರು ಪ್ರಧಾನಿಯಂತಲ್ಲದೇ ಸಾಮಾಜಿಕ ಎಂಜಿನಿಯರ್ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. 'ನಾವು ನಮ್ಮ ಬಗ್ಗೆ ಅಲ್ಲದೇ ಇನ್ಯಾರ ಕುರಿತೂ ಹೆದರಿಕೆ ಪಟ್ಟುಕೊಳ್ಳಬೇಕಿಲ್ಲ' ಅಂತ ಕೆನಡಿ ಹೇಳಿದ್ದರು. ಆ ಮಾತನ್ನು ಭಾರತವೂ ಒಪ್ಪಿಕೊಳ್ಳುವಂತೆ ಮನದಟ್ಟು ಮಾಡಿಸುವ ಗುರುತರ ಜವಾಬ್ದಾರಿ ಅವರದ್ದಾಗುತ್ತದೆ. 
ಕೊನೆಯದಾಗಿ, ಭಾರತೀಯ ಸಮಾಜವು ಬದಲಾವಣೆಗಳನ್ನು ಬಹುಬೇಗ ಗ್ರಹಿಸುತ್ತದೆ ಎಂಬುದರ ಅರಿವಿರುವ ನರೇಂದ್ರ ಮೋದಿ ಅಂಥ ಬದಲಾವಣೆಗಳಿಗೆ ತ್ವರಿತವಾಗಿ ಮಣೆ ಹಾಕಬೇಕಾಗುತ್ತದೆ. ಆದರೆ ಬಿಜೆಪಿಯಲ್ಲಿ ಎಲ್ಲರೂ ಇದಕ್ಕೆ ಸಿದ್ಧರೇ? ಬಹುಬ್ರಾಂಡ್‌ನ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ವಿರೋಧಿಸಿರುವ ಪ್ರಣಾಳಿಕೆಯ ನಿಲವನ್ನೇ ಗಮನಿಸಬಹುದು. ಜಾಗತಿಕ ಪೂರೈಕೆ ಜಾಲಕ್ಕೆ ಭಾರತವೂ ಬೆಸೆದುಕೊಳ್ಳಬೇಕಾದರೆ ವಿದೇಶಿ ನೇರ ಬಂಡವಾಳವನ್ನು ಹೊರಗಿಡಲಾದೀತೆ ಎಂದು ಯೋಚಿಸಬೇಕು. ಅರ್ಥವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಗ್ರಹಿಸಿರುವ ಪ್ರಣಾಳಿಕೆಯಲ್ಲಿ ಇದೊಂದು ಅಂಶ ಚರ್ಚಾರ್ಹ ಮತ್ತು ತೊಡಕಿನ ಸಂಗತಿಯಂತೆ ಭಾಸವಾಗುತ್ತಿದೆ.
ಇಂಥ ತೊಡರುಗಳನ್ನು ನರೇಂದ್ರ ಮೋದಿ ಮೀರಿದ್ದೇ ಆದರೆ ಭಾರತದ ಸಾರ್ವತ್ರಿಕ ಬದಲಾವಣೆ ಜತೆಯಲ್ಲೇ ಬಿಜೆಪಿಯೂ ಹೊಸರೂಪ ಕಂಡುಕೊಳ್ಳಬಹುದು.
= ಅಶೋಕ್ ಮಲಿಕ್, ಅಂಕಣಕಾರರು, ವಿಶ್ಲೇಷಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.