ಮತ ಹಾಕದವರಿಗೆ ಪ್ರತಿನಿಧಿಗಳ ಪ್ರಶ್ನಿಸುವ ಹಕ್ಕೆಲ್ಲಿ?

ಹದಿನಾರನೇ ಲೋಕಸಭೆ ಚುನಾವಣೆ ಕರ್ನಾಟಕದ 28 ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಏ. 17 ರಂದು ನಡೆಯಲಿದೆ. ಮತದಾರರ ಪಟ್ಟಿ ಪ್ರಕಾರ 4,46,94,658 ಮತದಾರರು ಈ ಬಾರಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 20 ರಿಂದ 40 ವಯೋವಾನದವರೇ ಒಟ್ಟು ಮತದಾರರ ಪೈಕಿ 25 ಪ್ರತಿಶತ ಮತಗಳನ್ನು ಹಾಕುವವರಿದ್ದು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅಚ್ಚರಿಯೆಂದರೆ, ಇವಿಷ್ಟೂ ಜನರು ವೋಟನ್ನು ಹಾಕುವುದೇ ಸಂದೇಹ. ಈ ಅನುಮಾನಕ್ಕೆ ಕಾರಣವೂ ಇದೆ. ಅನಿವಾರ್ಯ ಕಾರಣಗಳನ್ನು ನೀಡಿದರೂ ಕನಿಷ್ಠ ಪಕ್ಷ 100ರಲ್ಲಿ 90 ರಿಂದ 95 ಜನರು ವೋಟು ಹಾಕಬೇಕಾಗುತ್ತದೆ. ಆದರೆ ಹಿಂದಿನ ಲೋಕಸಭೆ ಚುನಾವಣೆಗಳ ಲೆಕ್ಕ ತೆಗೆದು ನೋಡಿದರೆ, 2004ರಲ್ಲಿ ಪುರುಷ ಮತದಾರರಲ್ಲಿ ಶೇ. 67.2 ಮಾತ್ರ ಮತ ಚಲಾಯಿಸಿದರೆ, ಮಹಿಳೆಯರಲ್ಲಿ 63 ಪ್ರತಿಶತ ಮಾತ್ರ ಮತದಾನ ಮಾಡಿದರು. 2009ರ ಮತದಾನದ ಪ್ರಮಾಣ ಏರಿಕೆಯಾಗುವುದರ ಬದಲು ಇಳಿಮುಖವಾಯಿತು. 2009 ರಲ್ಲಿ ಶೇ. 60.9 ಪುರುಷರು ಮತ್ತು ಶೇ. 56.6 ಮಹಿಳೆಯರು ಮಾತ್ರ ಮತ ಚಲಾಯಿಸಿದರು.
ಇನ್ನೂ ಸ್ವಲ್ಪ ಹಿಂದಿನ ಲೆಕ್ಕ ತೆಗೆದು ನೋಡೋಣ. 1957ರಲ್ಲೊಮ್ಮೆ ನಮ್ಮ 100 ಜನರಲ್ಲಿ 70 ಜನ ಮತದಾನ ಮಾಡಿದ್ದರು. ಅದಾದಮೇಲೆ ಏನಾಯಿತೋ ಗೊತ್ತಿಲ್ಲ, ನಾವು 100ರಲ್ಲಿ ಅಂದಾಜು 65 ಜನರು ಮಾತ್ರ ಕಳೆದ ನಾಲ್ಕು ಚುನಾವಣೆಗಳಲ್ಲಿ (ವಿಧಾನಸಭೆ ಮತ್ತು ಲೋಕಸಭೆ) ಮತ ಚಲಾಯಿಸಿದ್ದೇವೆ. (ವಿಧಾನಸಭೆ ಚುನಾವಣೆಗಳಲ್ಲಿ 1994ರಲ್ಲಿ 100ಕ್ಕೆ 69, 1999ರಲ್ಲಿ 68, 2007ರಲ್ಲಿ 66 ಮತ್ತು ಕಳೆದ 2008ರಲ್ಲಿ 65 ಮತ್ತು ಲೋಕಸಭೆ ಚುನಾವೆಣೆಯಲ್ಲಿ 2004ರಲ್ಲಿ 65 ಮತ್ತು 2009 ರಲ್ಲಿ 59) ಉಳಿದ 35 ಜನರು ನಮ್ಮನ್ನು ಆಳಬೇಕಿರುವ ರಾಜಕಾರಣಿಗಳಿಗೆ ತಮ್ಮಿಂದ ಆಗಬೇಕಾದ್ದೇನೂ ಇಲ್ಲ ಎಂಬ ನಿರ್ಣಯ ಮಾಡಿದಂತಿದೆ. ಮತದಾನ ಮಾಡದವರಿಗೆ ನಮ್ಮನ್ನಾಳುವವವರನ್ನು ಪ್ರಶ್ನಿಸುವ ಹಕ್ಕೂ ಇರುವುದಿಲ್ಲ. ಏಕೆಂದರೆ ನಾಯಕರ ಆಯ್ಕೆಯಲ್ಲಿ ಇವರ ಪಾತ್ರ ಶೂನ್ಯ. ಉಳಿದ 35 ಜನರಲ್ಲಿ ಕನಿಷ್ಠ ಪಕ್ಷ 25 ರಿಂದ 30 ಜನರು ಮತದಾನದ ಹಕ್ಕನ್ನು ಚಲಾಯಿಸಿದ್ದೇ ಆಗಿದ್ದಲ್ಲಿ ಫಲಿತಾಂಶ ಬೇರೆಯದ್ದೇ ರೂಪಪಡೆಯುತ್ತಿತ್ತೇನೋ?
ಕರ್ನಾಟಕದಲ್ಲಿ ಮತದಾನದ ಪ್ರಮಾಣ ಹೀಗೆ ಕೆಳಮುಖದ ಹಾದಿ ಹಿಡಿದಿದ್ದರೆ, ಪಕ್ಕದ ತಮಿಳುನಾಡಿನ ಮತದಾರ 2001ರಲ್ಲಿ 59, 2006ರಲ್ಲಿ 70, 2011ರಲ್ಲಿ 78 ಪ್ರತಿಶತ ಮತ ಚಲಾಯಿಸಿ ಹಂತಹಂತವಾಗಿ 90 ರ ಆಜುಬಾಜು ಬರಲು ಉತ್ಸುಕರಾಗಿದ್ದಾರೆ. ಪ್ರತಿ ಚುನಾವಣೆಯಲ್ಲಿ ಈ ಪ್ರಮಾಣ ಏರಿಕೆಯಾಗಿದೆಯೇ ಹೊರತು ಇಳಿಕೆಯಂತೂ ಸುಳ್ಳು. ಅದಕ್ಕೆ ಅಲ್ಲಿ ಗಟ್ಟಿ ಸರ್ಕಾರ ಬರುವಲ್ಲಿ ಇದೂ ಪ್ರಮುಖ ಕಾರಣ. ಹಿಂದುಳಿದ ರಾಜ್ಯವೆಂದು ಕರೆಸಿಕೊಳ್ಳುವ ಉತ್ತರ ಪ್ರದೇಶದಲ್ಲೂ ಇತ್ತೀಚಿನ ಚುನಾವಣೆಯಲ್ಲಿ 14 ಪ್ರತಿಶತ ಹೆಚ್ಚಿನ ಮತದಾನ ಪ್ರಮಾಣ ಕಂಡುಬಂದಿದೆ.
ಈ ಅಂಕಿ ಅಂಶಗಳು ಮತದಾನದ ಪ್ರಮಾಣ ಮತ್ತು ಅದರ ಫಲಿತಾಂಶಗಳ ಸಂಬಂಧಗಳನ್ನು ಎತ್ತಿ ತೋರಿಸುತ್ತವೆ. ಪ್ರಜೆಗಳೇ ಪ್ರಭುಗಳಾಗಿರುವ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದವರು ಎಂದು ಹೇಳಿಕೊಳ್ಳುವಾಗ ಮೇಲಿನ ಅಂಕಿ ಅಂಶಗಳು ನಮ್ಮನ್ನು ತರ್ಕಕ್ಕೀಡುಮಾಡುತ್ತವೆ. ಅರ್ಧಕ್ಕಿಂತ ತುಸು ಹೆಚ್ಚು ಜನ ಮಾತ್ರ ಮತದಾನ ಮಾಡಿ ಗೆಲ್ಲಿಸಿದ ರಾಜಕಾರಣಿಯೊಬ್ಬ ಹೇಗೆ ಎಲ್ಲರ ಪ್ರತಿನಿಧಿಯಾಗಿತ್ತಾನೆ? ಈ ಬಗ್ಗೆ ಚಿಂತಿಸಲು ಇದು ಸಕಾಲ.
ಏಪ್ರಿಲ್ನಲ್ಲಿ ಮತದಾರನ ಜವಾಬ್ದಾರಿಯ ಪರೀಕ್ಷೆ ಎದುರಾಗಲಿದೆ. ವರ್ಷಗಟ್ಟಲೇ ದುಂಬಾಲುಬಿದ್ದು, ಹೆಣಗಾಡಿ ಅವಕಾಶಗಳನ್ನು ಬಳಸಿಕೊಂಡು ಪಕ್ಷದ ಟಿಕೆಟ್ ಗಿಟ್ಟಿಸಿದ ಅಭ್ಯರ್ಥಿಗೂ ಇದು ಅಗ್ನಿ ಪರೀಕ್ಷೆ. ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಮಿತ್ರ ಪಕ್ಷಗಳ ಸರ್ಕಾರಕ್ಕೆ ಅವಕಾಶ ನೀಡಿದ್ದೇವೆ. ಸಾಧಕ ಬಾಧಕಗಳನ್ನು ಮೂಕಪ್ರೇಕ್ಷಕರಾಗಿ ನೋಡಿದ್ದೇವೆ. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರ ಅನುಭವಿಸಿದ ಪಡಿಪಾಟಲುಗಳು, ಅಧಿಕಾರ ಕೇಂದ್ರೀಕರಣಕ್ಕಾಗಿ ಆದ ಒಳಜಗಳಗಳು, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದುಂಟಾದ ಗೋಜಲುಗಳು, ಬಿಟ್ಟೂ ಬಿಡದೇ ಮೈಮೇಲೆ ಬಂದ ಸರಣಿ ಹಗರಣಗಳು, ಅಧಿಕಾರದಲ್ಲಿ ಉಳಿಯಲು ಮಾಡಿದ ಸರ್ಕಸ್ಸುಗಳು ಎಲ್ಲರಿಗೂ ಗೊತ್ತಿದೆ. ಆಯಾ ಸಂದರ್ಭಗಳಲ್ಲಿ ಮಾತ್ರ ಚುನಾಯಿತ ಸರ್ಕಾರದ ಬಗ್ಗೆ ಅಸಹನೆ, ರೇಜಿಗೆ ಹುಟ್ಟಿ ಕೊನೆಗೆ ಈ ಬಾರಿಯಾದರೂ ಉತ್ತಮ ಸರ್ಕಾರವನ್ನು ಆರಿಸಿ ತರಬೇಕೆಂಬ ಆಸೆ ಮನಸನ್ನು ಹೊಕ್ಕು ಅಲ್ಲೇ ಕುಳಿತುಬಿಡುತ್ತದೆ. ಆದರೆ ಮತ್ತೆ ನಾವು ಮತದಾರರು ನಿರ್ಣಾಯಕ ಹಂತದಲ್ಲಿ ಎಡವಿಬಿಡುತ್ತೇವೆ. ಮತ್ತದೇ ರಾದ್ಧಾಂತಗಳು, ನಮ್ಮ ಮತ್ತದೇ ಗೋಳು, ಅಸಹನೆ, ರೇಜಿಗೆ ಪುನರಾವರ್ತನೆಯಾಗುತ್ತವೆ. ಕೆಲ ಸುಶಿಕ್ಷಿತ ವರ್ಗದ ಜನರಂತೂ ಇದೊಂದು ರಗಳೆ ಎಂಬಂತೆ ಮತ್ತಿದರ ಗೊಡವೆಯೇ ಬೇಡವೆಂಬಂತೆ ಮತದಾನವನ್ನು ತಿರಸ್ಕರಿಸುತ್ತಾರೆ. ಅರೇ, ನೀವು, ನಾವು ತಿರಸ್ಕರಿಸಿದ ಮಾತ್ರಕ್ಕೆ ಆಯ್ಕೆಗೊಂಡ ಅಭ್ಯರ್ಥಿ ನಮ್ಮನ್ನು ಪ್ರತಿನಿಧಿಸದೇ ಇರುತ್ತಾನಾ ಅಥವಾ ಮತದಾನವನ್ನು ತಿರಸ್ಕರಿಸಿದವರಿಗಾಗಿಯೇ ಒಬ್ಬ ನಾಯಕನೇನಾದರೂ ಹುಟ್ಟುತ್ತಾನಾ? ಇಲ್ಲವಲ್ಲ. ಈ ಹಕ್ಕನ್ನು ತಿರಸ್ಕರಿಸುವುದರಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ನಾವೇ ವಿರೋಧಿಸಿದಂತೆ ಅಲ್ಲವೇ.
ನಮ್ಮಲ್ಲಿ ಕೆಲವರು ಈ ಹಕ್ಕನ್ನು ಮಾರಿಕೊಳ್ಳುವುದಕ್ಕೂ ತಯಾರಾಗುತ್ತಾರೆ. ಏಕೆಂದರೆ ಅವರಲ್ಲಿ ಯಾರಿಗೆ ಮತ ಹಾಕಬೇಕೆನ್ನುವುದರ ವಿವೇಚನಾ ಶಕ್ತಿ ಇರದೇ ಇರುವುದು ಮತ್ತು ಅವರನ್ನು ಆರಿಸಿ ತಂದರೆ ಮುಂದೆ ಆಗಬಹುದಾದ ಪ್ರಯೋಜನದ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಅಥವಾ ಆ ಕ್ಷಣದಲ್ಲಿ ಅಭ್ಯರ್ಥಿ ನೀಡುವ ಯಾವುದೋ ಆಮಿಷಕ್ಕೆ ಬಲಿಯಾಗುವುದು. ಈ ಎಲ್ಲ ಕಾರಣಗಳು ಇವರನ್ನು ಮತದಾನದ ಹಕ್ಕನ್ನೇ ಮಾರಿಕೊಳ್ಳುವಂತೆ ಮಾಡುತ್ತವೆ. ಆದರೆ ನಿರ್ಣಾಯಕ ಹಂತದಲ್ಲಿರುವಾಗ ಎಸಗುವ ಈ ತಪ್ಪು ಮುಂದೆ 5 ವರ್ಷಗಳವರೆಗೂ ನಮ್ಮನ್ನು ಕಾಡುತ್ತದೆ ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ.
ನಮ್ಮನ್ನು ಆಳುವ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಮುಕ್ತವಾಗಿ ಚರ್ಚೆಗಳಾಗಬೇಕು. ಈ ಮೊದಲು ಕ್ಷೇತ್ರದಲ್ಲಿ ಆತ ಮಾಡಿದ ಕೆಲಸಗಳನ್ನು ಪಟ್ಟಿ ಮಾಡಬೇಕು. ಯಾವ ಯೋಜನೆಗಳನ್ನು ಆತ ಕ್ಷೇತ್ರಕ್ಕೆ ತಂದಿದ್ದಾನೆ, ಎಷ್ಟು ಅನುದಾನವನ್ನು ಕೇಂದ್ರದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದಾನೆ, ಅದರ ಸದ್ವಿನಿಯೋಗ ಎಷ್ಟರ ಮಟ್ಟಿಗೆ ಆಗಿದೆ, ಅಭಿವೃದ್ಧಿ ಕೆಲಸಗಳೇನಾಗಿವೆ, ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಆ ವ್ಯಕ್ತಿಯ ನಡವಳಿಕೆ ಹೇಗಿದೆ, ಪಕ್ಷಕ್ಕೆ ನಿಷ್ಠಾವಂತನಾಗಿ ನಡೆದುಕೊಳ್ಳುತ್ತಿದ್ದಾನೋ ಅಥವಾ ಪಕ್ಷಾಂತರವನ್ನೇ ತನ್ನ ಅಭ್ಯಾಸ ಮಾಡಿಕೊಂಡಿದ್ದಾನೋ? ಒಟ್ಟಾರೆ ಅಭ್ಯರ್ಥಿಯ ಬದ್ಧತೆಯ ಬಗ್ಗೆ ಮುಕ್ತವಾಗಿ ವಿಶ್ಲೇಷಣೆಗಳಾಗಬೇಕು. ಯೋಗ್ಯ ವ್ಯಕ್ತಿಯೊಬ್ಬರಿಗೆ ಹಲವಾರು ಅಡೆತಡೆಗಳಿಂದ ಪ್ರತಿಷ್ಠಿತ ಪಕ್ಷದಿಂದ ಟಿಕೆಟ್ ವಂಚಿತರಾಗಿ ಹತಾಶರಾಗಿದ್ದಲ್ಲಿ ಕಣದಿಂದ ಹಿಂದೆ ಸರಿಯದೇ ಪಕ್ಷೇತರರಾಗಿಯಾದರೂ ಸ್ಪರ್ಧಿಸುವಂತೆ ಬೆಂಬಲಿಸಬೇಕು. ಸುಶಿಕ್ಷಿತರು, ಶ್ರೀಸಾಮಾನ್ಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಕ್ಷಣಿಕ ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಿದೆ. ಒಂದು ಬಾರಿ ಇದರ ಬಗ್ಗೆ ಶ್ರೀಸಾಮಾನ್ಯ ಜಾಗೃತಗೊಂಡರೆ ಯಾವುದೇ ಆಮಿಷಕ್ಕೂ ಅಷ್ಟು ಸುಲಭವಾಗಿ ಬೀಳಲಾರ. ಮಹಿಳೆಯರ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಪದವಿ ಕಾಲೇಜುಗಳಲ್ಲಿ ಉಪನ್ಯಾಸಕ ವರ್ಗವು ವಿದ್ಯಾರ್ಥಿಗಳಿಗೆ ಈ ವಿಷಯವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಚರ್ಚಾಕೂಟ, ಸ್ಪರ್ಧೆಗಳನ್ನು ಏರ್ಪಡಿಸುವ ಸಂಪ್ರದಾಯ ಬೆಳೆಸಬೇಕು. ವಿದ್ಯಾರ್ಥಿಗಳನ್ನು ಆಯಾ ಕ್ಷೇತ್ರಗಳಲ್ಲಿ ಶ್ರೀಸಾಮಾನ್ಯರಿಗೆ ಜಾಗೃತಿ ಮೂಡಿಸುವಷ್ಟು ಸಮರ್ಥರನ್ನಾಗಿಸುವ ಅಗತ್ಯವಿದೆ. ಹೊಸ ಮತದಾರರು ಇನ್ನೊಬ್ಬರನ್ನು ಅನುಸರಿಸದೇ ಸ್ವಂತ ಮತ್ತು ಸಮಚಿತ್ತದ ನಿರ್ಣಯವನ್ನು ಮಾಡಿ ಮತ ಚಲಾಯಿಸಬೇಕಿದೆ.
ಈಗಾಗಲೇ ಚುನಾವಣೆ ಆಯೋಗವು ದಕ್ಷ ಅಧಿಕಾರಿ ವರ್ಗವನ್ನು ಚುನಾವಣೆಗೆ ನೇಮಿಸಿದೆ. ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಕೊಡಲು ಪ್ರಾರಂಭಿಸಿದ್ದು, ನಕಲಿ ಮತದಾನ ಮತ್ತು ತಿರಸ್ಕೃತ ಮತದಾನದ ಪ್ರಮಾಣವೂ ಆದಷ್ಟು ಕಡಿಮೆ ಆಗಲೆಂದು ಪಣತೊಟ್ಟಿದೆ. ಕನಿಷ್ಠಪಕ್ಷ ನಮ್ಮ ಮತದಾನದ ಪ್ರಮಾಣ 90 ಪ್ರತಿಶತ ದಾಟಿದರೆ ಸುಭದ್ರ ಸರ್ಕಾರ ದೇಶದಲ್ಲಿ ನೆಲೆಯೂರಲು ಸಾಧ್ಯ.
ಚುನಾವಣಾ ದಿನದಂದು ನಮ್ಮೆಲ್ಲ ವೈಯಕ್ತಿಕ ಕಮಿಟ್ಮೆಂಟುಗಳನ್ನು ಬದಿಗೊತ್ತಿ ಅಸಡ್ಡೆ ಮಾಡದೇ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯೋಣ. ಏಕೆಂದರೆ ಮುಂದಿನ 5 ವರ್ಷಗಳಿಗಾಗಿ ನಾವು ಕಣದಲ್ಲಿರುವ ವ್ಯಕ್ತಿಗಳ ಜೊತೆಗೆ ಕಮಿಟ್ ಆಗಬೇಕಿದೆ!
-ಡಾ. ಅಶೋಕ ಪಾಟೀಲ ಎಂ.ಡಿ ಗದಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


