ಅಂಕಣಗಳು

ನಾವೆಲ್ಲ ಪ್ರಜಾಪ್ರಭುತ್ವಕ್ಕೆ ಎಷ್ಟು ಅರ್ಹರು?

ನಾವೆಲ್ಲ ಪ್ರಜಾಪ್ರಭುತ್ವಕ್ಕೆ ಎಷ್ಟು ಅರ್ಹರು?
Published On :

ನಮ್ಮದು ಸಾವಿರಾರು ವರ್ಷಗಳಿಂದ ಅರಮನೆ ಸಂಸ್ಕೃತಿಗೆ ಒಗ್ಗಿಹೋಗಿರುವ ದೇಶ. ರಾಜ ಒಳ್ಳೆಯವನಾದರೆ ಕೊಂಡಾಡುವುದು, ಕೆಟ್ಟವನಾದರೆ ಅಂಥ ರಾಜ ಸಿಕ್ಕಿದ್ದು ದುರ್ದೈವವೆಂದು ತಮ್ಮ ಅದೃಷ್ಟವನ್ನೇ ಶಪಿಸಿಕೊಂಡು ಸುಮ್ಮನಾಗುವ ಜಾಯಮಾನ ನಮ್ಮದು. ರಾಜರ ಆಯ್ಕೆಯಲ್ಲಾಗಲೀ, ಬದಲಾವಣೆಯಲ್ಲಾಗಲೀ ಪಾತ್ರವಹಿಸಿದ ಅನುಭವ ನಮ್ಮ ವಂಶವಾಹಿಯಲ್ಲೇ ಇಲ್ಲ. ಅವನು ಧೂರ್ತನಾಗಿದ್ದರೂ, ಸರಿ ರಾಜಾ ಪ್ರತ್ಯಕ್ಷ್ಯ ದೇವತಾ ಎಂದು ಪೂಜಿಸಿಕೊಂಡು ಬಂದ ಪದ್ಧತಿ ನಮ್ಮದು. ಮಹಾರಾಜನ ಹಿರಿಯ ಮಗನನ್ನೋ ಇಲ್ಲಾ ಮಹಾರಾಜ ತನ್ನ ಉತ್ತರಾಧಿಕಾರಿ ಎಂದು ಘೋಷಿಸಿದ ಇನ್ನೊಬ್ಬನನ್ನೋ ಯುವರಾಜ ಎಂದು ಒಪ್ಪಿಕೊಂಡು, ಅಪ್ಪಿಕೊಂಡು, ತಲೆಯ ಮೇಲಿಟ್ಟುಕೊಂಡು ಮೆರೆಸಿಕೊಂಡು ಬಂದ ಸಂಸ್ಕೃತಿ ನಮ್ಮದು. ಒಂದು ವೇಳೆ ರಾಜನೇ ನಮ್ಮ ಜೊತೆ ಸಮಾನವಾಗಿ ಬೆರೆಯಲು ಬಂದರೆ ನಾವೇ ಕೀಳರಿಮೆಯಿಂದ ದೂರಸರಿದು ರಾಜನಿಗೊಂದು ಗತ್ತುಗೈರತ್ತು ಇರಲೇಬೇಕೆಂದು ಪ್ರತಿಪಾದಿಸುತ್ತೇವೆ. ಇಂಥ ಮನಸ್ಥಿತಿ ಹೊಂದಿರುವವರಿಗೆ ಏಕ್‌ದಂ ಆಳುವವರನ್ನು ಆಯ್ಕೆಮಾಡುವ, ಬದಲಾವಣೆ ಮಾಡುವ, ಸ್ವಾತಂತ್ರ್ಯ ಸಿಕ್ಕರೆ ಅದರ ಬೆಲೆ ಅರಿಯದ ಜನ ಏನು ಮಾಡುತ್ತಾರೆಂಬುದಕ್ಕೆ ಸ್ವಾತಂತ್ರ್ಯಾನಂತರದ  ನಮ್ಮ ರಾಜಕೀಯ ವ್ಯವಸ್ಥೆಯನ್ನು ವಿಶ್ಲೇಷಿಸಿ ನೋಡಿದರೆ ಉತ್ತರ ಸಿಕ್ಕೀತು.
ಜವಹರ್‌ಲಾಲ್ ನೆಹರು ಭಾರತದ ಮೊದಲ ಪ್ರಧಾನಿಯಾದದ್ದು ನಿಜವಾದ ಪ್ರಜಾಪ್ರಭುತ್ವ ಮಾರ್ಗದಿಂದಲ್ಲ, ಅವರಿಗೆ ಚುನಾವಣೆಯಲ್ಲಿ ಗೆಲ್ಲುವಷ್ಟು ಬೆಂಬಲವಿರಲಿಲ್ಲ. 16 ರಾಜ್ಯಗಳಲ್ಲಿ 13 ರಾಜ್ಯಗಳು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪರವಾಗಿದ್ದವು. ಹಿಂದೆ ಅರಮನೆಗಳಲ್ಲಿ ನಡೆಯುತ್ತಿದ್ದ ಕುತಂತ್ರಗಳಂತೆಯೇ ಇಲ್ಲಿಯೂ ತಂತ್ರಗಾರಿಕೆ ನಡೆದು ಸರ್ದಾರ್ ಪಟೇಲ್ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲಾಯಿತು. ಇಲ್ಲಿಯೂ ಸಾಕಾರಗೊಂಡಿದ್ದು ಮಹಾತ್ಮ ಗಾಂಧಿಯೆಂಬ ಏಕವ್ಯಕ್ತಿಯ ಮನದಿಂಗಿತವೇ ಹೊರತು ಪ್ರಜಾಪ್ರಭುತ್ವದ ಅಡಿಗಲ್ಲಾದ ಬಹುಮತವೆಂಬ ಪ್ರಕ್ರಿಯೆಯಲ್ಲ.  
ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಹದಿನೇಳು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ನೆಹರು ತಮ್ಮ ಪ್ರಧಾನಿ ಪಟ್ಟವನ್ನು ಅರಸೊತ್ತಿಗೆ ಎಂದೇ ಭಾವಿಸಿದ್ದರು ಎಂಬುದಕ್ಕೆ ಅವರ ಆಗಿನ ನಡವಳಿಕೆಗಳೇ ಸಾಕ್ಷಿ. ಆಗಿನ ಕಾಲದಲ್ಲಿ ಉತ್ತರಾಧಿಕಾರಿಗಳನ್ನು ನೇಮಿಸುವ ಮಹಾರಾಜರುಗಳಂತೆ ನೆಹರು ಕೂಡ ತಮ್ಮ ಉತ್ತರಾಧಿಕಾರಿ ತಮ್ಮ ಏಕಮಾತ್ರ ಪುತ್ರಿಯೇ ಆಗಬೇಕೆಂದು ಬಯಸಿದ್ದರು ಮತ್ತು ಅದನ್ನು ಈಡೇರಿಸಿಕೊಡುವಂತೆ ಕೆಲವು ಪ್ರಭಾವೀ ಕಾಂಗ್ರೆಸ್ ನಾಯಕರಲ್ಲಿ ವಿನಂತಿಸಿಕೊಂಡೂ ಇದ್ದರು ಎಂಬುದು ಈಗ ಗೌಪ್ಯವಾಗೇನೂ ಉಳಿದಿಲ್ಲ. ಅದರಂತೆಯೇ ಅವರ ಮರಣಾನಂತರ ಅವರ ಮಗಳು ಇಂದಿರಾ ಗಾಂಧಿಯವರಿಗೆ ಪಟ್ಟಕಟ್ಟಲು ಸರ್ವಪ್ರಯತ್ನಗಳೂ ನಡೆದವು. ಆದರೆ ಆಕೆಯೇ ತಕ್ಷಣಕ್ಕೆ ಒಲ್ಲೆ ಎಂದಿದ್ದಕ್ಕೆ ಶಾಸ್ತ್ರಿಯವರನ್ನು ಪ್ರಧಾನಿಯನ್ನಾಗಿ ಮಾಡಲಾಯಿತು. ಅವರು ಪ್ರಧಾನಿಯಾಗಿ ಹತ್ತೊಂಬತ್ತು ತಿಂಗಳು ಕಳೆದಿರಲಿಲ್ಲ, ಚರಿತ್ರೆ ಪುನರಾವರ್ತನೆಗೊಂಡೇಬಿಟ್ಟಿತು. ಹಿಂದೆ ಅರಮನೆಗಳಲ್ಲಿ ಸ್ಥಿತ್ಯಂತರದ ಸಂದರ್ಭಗಳಲ್ಲಿ ಸಂಭವಿಸುತ್ತಿದ್ದ ಸಂಶಯಾಸ್ಪದ ಸಾವುಗಳಂತೆಯೇ ಇಲ್ಲಿಯೂ ಶಾಸ್ತ್ರಿಯವರ ಸಾವು ಸಂಭವಿಸಿ ಸಿಂಹಾಸನ ಖಾಲಿಯಾಯಿತು. ಯಾರನ್ನಾದರೂ ಕೂರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ನೆಹರು ಆಶಿಸಿದ್ದಂತೆ ಇಂದಿರಾರನ್ನೇ ಕೂರಿಸಲಾಯಿತು. ಇಲ್ಲಿಂದಲೇ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಲಾಯಿತು.
ಇನ್ನು ಇಂದಿರಾ ತಮ್ಮ ಉತ್ತರಾಧಿಕಾರಿಯನ್ನು ಮೊದಲೇ ಸನ್ನದ್ಧಗೊಳಿಸುವ ದೃಷ್ಟಿಯಿಂದ ಸಂಜಯ್ ಗಾಂಧಿಯವರನ್ನೇನೋ ತಯಾರು ಮಾಡಿದ್ದರು, ಆದರೆ ವಿಧಿಯ ಲೆಕ್ಕಾಚಾರವೇ ಬೇರೆ ಇದ್ದುದರಿಂದ ರಾಜಕಾರಣದಿಂದ ದೂರವೇ ಉಳಿದಿದ್ದ ಇನ್ನೊಬ್ಬ ಮಗನನ್ನು ಬಲವಂತವಾಗಿಯೇ ಎಳೆದು ತಂದರು. ಇಂದಿರಾರ ಅನಿರೀಕ್ಷಿತ ಅಂತ್ಯದ ನಂತರ ಅನನುಭವಿ ರಾಜೀವ್‌ರನ್ನು ಪ್ರಧಾನಿ ಮಾಡಲಾಯಿತು. ಅವರು ಒಂದಷ್ಟು ವರ್ಷ ಅಧಿಕಾರ ನಡೆಸಿದರು. ಅವರ ನಂತರ, ಅವರ ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಅಧಿಕಾರ ವಹಿಸಿಕೊಳ್ಳುವ ಅರ್ಹತೆ ಇಲ್ಲದ್ದರಿಂದ, ಹುಟ್ಟಿನಿಂದ ಈ ದೇಶದ ಪ್ರಜೆಯೇ ಅಲ್ಲದ ಅವರ ಶ್ರೀಮತಿಯವರನ್ನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಬೇಡಿಕೊಳ್ಳಲಾಯಿತು. ತನ್ನ ಅತ್ತೆ ಹಾಗೂ ತನ್ನ ಗಂಡನ ಹತ್ಯೆಯನ್ನು ಕಣ್ಣಾರೆ ಕಂಡು ಅಧೀರರಾಗಿದ್ದ ಸೋನಿಯಾ ಅವರು ಬಿಲ್‌ಕುಲ್ ಒಲ್ಲೆ ಎನ್ನಲು ನೆಹರು ವಂಶಸ್ಥರಲ್ಲದ ಪಿ.ವಿ ನರಸಿಂಹರಾವ್‌ರನ್ನು ಗದ್ದುಗೆಯಲ್ಲಿ ಕೂರಿಸಲಾಯಿತು. ಪಿವಿಎನ್ ನಂತರ ನಾಯಕತ್ವ ವಹಿಸಿಕೊಳ್ಳಲು ಸೋನಿಯಾಗಾಂಧಿಯವರು ಮನಸ್ಸು ಮಾಡುತ್ತಿದ್ದಂತೆಯೇ ಅವರನ್ನು ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಆಗಿನ ಅಧ್ಯಕ್ಷರಾಗಿದ್ದವರನ್ನು ಕೆಳಗಿಳಿಸಲು ಮಾಡಿದ ತಂತ್ರಗಳು ಅರಸೊತ್ತಿಗೆಯನ್ನು ನೆನಪಿಸಿತೇ ಹೊರತು ಪ್ರಜಾಪ್ರಭುತ್ವದ ಲಕ್ಷಣಗಳನ್ನಂತೂ ಅಲ್ಲ. 2004ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಬರದೆ, ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದ ಮೇಲೆ, ದೇಶದ ನಾಯಕತ್ವ ವಹಿಸಿಕೊಳ್ಳಲು ಕಾಂಗ್ರೆಸ್ ಇರಲಿ, ಇತರೆ ಪಕ್ಷಗಳೂ ನೆಹರು ಕುಟುಂಬಕ್ಕೇ ಶರಣು ಹೋಗಿದ್ದು ನಮ್ಮ ಪ್ರಜಾಪ್ರಭುತ್ವದ ಬಲಹೀನತೆಯೆಂದೇ ಹೇಳಬೇಕು.   ಸೋನಿಯಾ ಪ್ರಧಾನಿಯಾಗಲು ಒಂದು ಗೌಪ್ಯ ತಾಂತ್ರಿಕ ಸಮಸ್ಯೆ (ಪೌರತ್ವದ ಸಮಸ್ಯೆಯೆಂಬ ಗುಮಾನಿ ಇದೆ) ಎದುರಾಗಿದ್ದು, ಆದರೂ ಆ ಸ್ಥಾನಕ್ಕೆ ಅವರು ಸೂಚಿಸಿದವರನ್ನೇ ನೇಮಿಸಿದ್ದು, ನಂತರ ಸರ್ಕಾರದ ಮೇಲೆ ಸಂಪೂರ್ಣ ಹಿಡಿತವಿರುವ ಒಂದು ಹುದ್ದೆಯನ್ನು ಸಂವಿಧಾನಾತ್ಮವಾಗೇ ಸೃಷ್ಟಿಸಿ ಅವರಿಗೆ ಕೊಟ್ಟಿದ್ದು, ನಂತರ ಸಚಿವರಾದಿಯಾಗಿ ಎಲ್ಲರೂ ಪ್ರಧಾನಿ ಪೀಠಕ್ಕಿಂತ ಇದಕ್ಕೇ ಹೆಚ್ಚು ನಿಷ್ಠರಾಗಿ ನಡೆದುಕೊಂಡಿದ್ದು ನಮಗೆ ಪ್ರಜಾಪ್ರಭುತ್ವದ ಬಗೆಗಿರುವ ಗೌರವಕ್ಕಿಂತಲೂ ಅರಸೊತ್ತಿಗೆ ಬಗೆಗಿರುವ ಒಲವೇ ಹೆಚ್ಚು ಎಂಬುದನ್ನು ತೋರಿಸುತ್ತದೆ. ರಾಜಕಾರಣಿಗಳನ್ನು ಬಿಟ್ಟುಬಿಡಿ, ಅವರು ತಮ್ಮ ಅಧಿಕಾರ ಭದ್ರತೆಗಾಗಿ ಒಬ್ಬರನ್ನು ಓಲೈಸಿಕೊಂಡು ಇದ್ದುಬಿಡುವುದು ಅನಿವಾರ್ಯವೆಂದು ಭಾವಿಸಿಕೊಂಡುಬಿಟ್ಟಿರುತ್ತಾರೆ, ಅದಕ್ಕೆ ಆ ರೀತಿ ನಡೆದುಕೊಳ್ಳುತ್ತಾರೆ. ಆದರೆ ಜನಗಳೂ ಸಹ, ಗಾಂಧಿ ಕುಟುಂಬ, ಗೌಡರ ಕುಟುಂಬ, ರೆಡ್ಡಿ ಕುಟುಂಬ, ಯಾದವ್ ಕುಟುಂಬ, ಅಬ್ದುಲ್ಲಾ ಕುಟುಂಬ, ಪಾಸ್ವಾನ್ ಕುಟುಂಬ, ದೇಶ್‌ಪಾಂಡೆ ಕುಟುಂಬ ಎಂದು ಹೀಗೇ ದೇಶಕ್ಕೊಂದು, ರಾಜ್ಯಕ್ಕೊಂದು ಜಿಲ್ಲೆಗೊಂದೊಂದು ಕುಟುಂಬವನ್ನೇ ಓಲೈಸುತ್ತಾ ವಂಶವಾಹಿನಿ ರಾಜಕಾರಣಕ್ಕೆ ಇಂಬು ಕೊಡುವುದನ್ನು ಪ್ರಜಾಪ್ರಭುತ್ವ ಎಂದು ಹೇಗೆ ಪರಿಗಣಿಸಲಾದೀತು?
ದೇಶ ಎದುರಿಸುತ್ತಿರುವ ಪರಿಸ್ಥಿತಿಗೆ ಕುಟುಂಬ ರಾಜಕಾರಣವೇ ಕಾರಣ ಎಂಬ ಸತ್ಯ ಎಲ್ಲರಿಗೂ ಗೊತ್ತಿದ್ದರೂ, ಮಹಾರಾಜನ ನಂತರ ಯುವರಾಜನಿಗೇ ಪಟ್ಟಕಟ್ಟಬೇಕೆಂಬ ಅರಸೊತ್ತಿಗೆಯ ನಿಯಮದಂತೆ ಆಡಳಿತಾನುಭವವಿಲ್ಲದ ಆ ಕುಟುಂಬದ ಕುಡಿಯನ್ನೇ ಗದ್ದುಗೆಗೇರಿಸುವ ಬಗ್ಗೆ ಚರ್ಚಿಸುತ್ತಿರುವುದನ್ನು ನೋಡಿದರೆ ನಾವು ಪ್ರಜಾಪ್ರಭುತ್ವಕ್ಕೆ ಎಷ್ಟು ಅರ್ಹರು ಎಂಬ ಅನುಮಾನ ಸಹಜವಾಗಿ ಮೂಡುತ್ತದೆ.
ಇನ್ನು ಪ್ರಜಾಪ್ರಭುತ್ವದ ಬಗ್ಗೆ ಜನರಿಗೆ ನಿಜವಾಗಲೂ ಕಾಳಜಿ ಇದ್ದಿದ್ದರೆ, ತಮ್ಮ ಪ್ರತಿನಿಧಿಯನ್ನು ತಾವೇ ಆಯ್ಕೆಮಾಡುವ ಹಕ್ಕು ಸಿಕ್ಕಿದೆಯೆಲ್ಲಾ ಎಂಬ ಖುಷಿಯಲ್ಲಿ, ಕೆಲಸ ಮಾಡಿದವರನ್ನು ಉಳಿಸಿಕೊಳ್ಳಲು, ಮಾಡದವರನ್ನು ಮನೆಗೆ ಕಳಿಸಲು, ಯೋಗ್ಯರನ್ನು ಚುನಾಯಿಸಲು ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ನೂರಕ್ಕೆ ನೂರರಷ್ಟು ಮತದಾನವಾಗಬೇಕಿತ್ತು. ಆದರೆ ಆಗುತ್ತಿರುವುದೇನು? ಪ್ರತಿ ಬಾರಿ ಚುನಾವಣೆಯಲ್ಲೂ ವಿಶೇಷ ಸಂದರ್ಭಗಳಲ್ಲಿ ಶೇ60 ರ ಗಡಿಯನ್ನು ಮುಟ್ಟಿ ಮಾಮೂಲಿ ಸಂದರ್ಭಗಳಲ್ಲಿ ಶೇ.50 ರ ಗಡಿಯನ್ನೂ ದಾಟದೆ ಮತದಾನ ಪ್ರಕ್ರಿಯೆ ಅಂತ್ಯಗೊಳ್ಳುತ್ತಿದೆ. ಇನ್ನು ಸುಶಿಕ್ಷಿತರೇ ವಾಸಿಸುವ ನಗರಪ್ರದೇಶಗಳಲ್ಲಂತೂ ವಿಶೇಷ ಸಂದರ್ಭಗಳಲ್ಲಿ 50 ರ ಗಡಿ ದಾಟುವುದೇ ಒಂದು ದೊಡ್ಡ ವಿಷಯ. ಬಾಕಿಯಂತೆ 40-45 ಪ್ರತಿಶತ ಅಷ್ಟೆ. ಇನ್ನು ನಗರಸಭೆ ಚುನಾವಣೆಗಳಲ್ಲಂತೂ ಶೇ.40 ರ ಗಡಿಯನ್ನೂ ಮುಟ್ಟುವುದಿಲ್ಲ. ಇಷ್ಟು ಪ್ರಮಾಣದಲ್ಲಿ ಮತದಾನವಾಗಲಿಕ್ಕೆ ಚುನಾವಣಾ ಆಯೋಗ ಎಷ್ಟು ಜಾಹೀರಾತುಗಳನ್ನು ನೀಡಬೇಕು, ಎಷ್ಟು ಜನ ಪ್ರತಿಷ್ಠಿತರನ್ನು ಚುನಾವಣಾ ರಾಯಭಾರಿಗಳನ್ನಾಗಿ ಮಾಡಿ, ಅವರ ಬಾಯಿಂದ ಮತದಾನ ಶ್ರೇಷ್ಠ ಕರ್ತವ್ಯವೆಂದು ಹೇಳಿಸಬೇಕು. ನಾವು ಪ್ರಜಾಪ್ರಭುತ್ವಕ್ಕೆ ನಿಜವಾಗಲೂ ಅರ್ಹರೇ ಆದರೆ ನಮ್ಮ ಕರ್ತವ್ಯದ ಬಗ್ಗೆ ನಮಗ್ಯಾರೋ ಏಕೆ ಜಾಗೃತಿ ಉಂಟುಮಾಡಬೇಕು?
ಇನ್ನು ನಾವು ಯಾರಿಗೆ ಮತ ನೀಡುತ್ತಿದ್ದೇವೆ, ಏಕೆ ನೀಡುತ್ತಿದ್ದೇವೆ ಎಂದು ತಿಳಿದು ಮತದಾನ ಮಾಡುವುದರಲ್ಲೇ ನಿಜವಾದ ಪ್ರಜಾಪ್ರಭುತ್ವದ ಸಾರ್ಥಕತೆ ಅಡಗಿರುವುದು. ಆದರೆ ನಮ್ಮಲ್ಲಿ ಐವತ್ತು ಭಾಗ ಮತದಾನ ಮಾಡುವುದೇ ಇಲ್ಲ, ಮಾಡುವವರ ಪೈಕಿ ಮನೆ ಯಜಮಾನ ಹೇಳಿದನೆಂದೋ, ಊರ ಯಜಮಾನ ಹೇಳಿದನೆಂದೋ, ಮಠಾಧೀಶರು ಹೇಳಿದರೆಂದೋ, ತಮ್ಮ ಜಾತಿಯವನೆಂದೋ, ಹಣ ಹೆಂಡ ಕೊಟ್ಟನೆಂತಲೋ ಮತ ಹಾಕುತ್ತಾರೆ. ಅರ್ಹತೆಯನ್ನು ನೋಡಿ ಮತ ಹಾಕುವವರು ತುಂಬಾ ಕಮ್ಮಿ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಅಭ್ಯರ್ಥಿಯೆಂದರೆ ತಮ್ಮ ಮನೆಯ ಮದುವೆ ಮುಂಜಿಗಳಿಗೆ ಕರೆದರೆ ಬರುವಂಥವರು, ಸ್ವಲ್ಪ ಧನಸಹಾಯ ಮಾಡುವಂಥವರು, ಊರಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ದುಡ್ಡು ಕೊಡುವಂಥವರು, ಪರಸ್ಪರ ಜಗಳವಾಡಿಕೊಂಡು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದರೆ ಬಂದು ಬಿಡಿಸುವಂಥವರು. ಅವರ ದೃಷ್ಟಿಯಲ್ಲಿ ಗ್ರಾಮಪಂಚಾಯತಿ ಸದಸ್ಯರ ಚುನಾವಣೆಯಿಂದ ಹಿಡಿದು ಸಂಸತ್ ಸದಸ್ಯರ ಚುನಾವಣೆವರೆಗೂ ಉತ್ತಮ ಅಭ್ಯರ್ಥಿಯೆಂದರೆ ಇವರೇ. ಅವರಿಗೆ ರಾಜ್ಯದ, ದೇಶದ ಸಮಸ್ಯೆಗಳ ಪರಿಜ್ಞಾನ ಹಾಗೂ ಅವುಗಳಿಗೆ ಪರಿಹಾರ ಸೂಚಿಸುವ ಬುದ್ಧಿಮತ್ತೆ ಇರಬೇಕೆಂದೇನೂ ಇಲ್ಲ. ಒಂದು ವೇಳೆ ಈ ಎರಡು ಕೆಟಗರಿಗೆ ಸೇರಿದ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಎದುರುಬದಿರು ಸ್ಪರ್ಧಿಸಿದರೆ ಅವರ ಆಯ್ಕೆ ಮೊದಲನೇ ಕೆಟಗರಿಗೆ ಸೇರಿದವರಾಗಿರುತ್ತಾರೆಯೇ ವಿನಃ ಎರಡನೇ ಕೆಟಗರಿಯವರಿಗಲ್ಲ. ಹಾಗಾಗಿಯೇ ನಮ್ಮಲ್ಲಿ ವಿದ್ಯಾವಂತರೆನಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬಾರದೇ ಇರುವುದು.
ಇನ್ನು ನಗರಪ್ರದೇಶಗಳಲ್ಲಿನ ಸುಶಿಕ್ಷಿತ ಮತದಾರರ ಬಗ್ಗೆಯಂತೂ ಹೇಳತೀರದು. ಗ್ರಾಮೀಣ ಪ್ರದೇಶಗಳ ಜನರಿಗೆ  ಕಡೇಪಕ್ಷ ತಮ್ಮ ಗ್ರಾಮಪಂಚಾಯಿತಿ ಸದಸ್ಯರ್ಯಾರು, ಅಧ್ಯಕ್ಷರು ಯಾರು ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ ಶಾಸಕರು, ಸಂಸದರು, ಸಚಿವರು ಯಾರ್ಯಾರು ಎಂಬುದಾದರೂ ತಿಳಿದಿರುತ್ತದೆ. ಆದರೆ ನಗರಪ್ರದೇಶಗಳ ಸುಶಿಕ್ಷಿತ ಜನರೆನಿಸಿಕೊಂಡವರಿಗೆ ತಮ್ಮ ಏರಿಯಾ ಕಾರ್ಪೊರೇಟರ್ ಆಗಲೀ, ಶಾಸಕ, ಸಂಸದ, ಸಚಿವರು ಯಾರ್ಯಾರು ಎಂಬುದೇ ತಿಳಿದಿರುವುದಿಲ್ಲ. ಒಂದು ರಸ್ತೆ ಸರಿಯಿಲ್ಲ ಎಂದಾದರೆ, ನಲ್ಲಿಯಲ್ಲಿ ಸರಿಯಾದ ಸಮಯಕ್ಕೆ ಸಾಕಷ್ಟು ನೀರು ಬರಲಿಲ್ಲವೆಂದಾದರೆ, ಕರೆಂಟ್ ಹೋದರೆ, ಯಾವುದಾದರೂ ದರ ಏರಿಸಿದರೆ ಕೂತಲ್ಲಿ ನಿಂತಲ್ಲಿ ಸರ್ಕಾರದ ಬಗ್ಗೆ ಮಾತಾಡುವ ಈ ವಿದ್ಯಾವಂತರೆನಿಸಿಕೊಂಡ ಮಂದಿ ಚುನಾವಣೆ ದಿನದಂದು ಮಾತ್ರ ಮತದಾನ ಮಾಡಲು ಬರುವುದಿಲ್ಲ. ಮತದಾನ ಮಾಡಲೆಂದೇ ಕೊಟ್ಟ ರಜೆಯನ್ನೂ ಉಪಯೋಗಿಸಿಕೊಂಡು ಮಜಾ ಮಾಡಲೆಂದು ಟ್ರಿಪ್ ಹೊರಟುಬಿಡುತ್ತಾರೆ. ಸಾಂವಿಧಾನಾತ್ಮಕವಾಗಿ ತಮಗೆ ಸಿಕ್ಕಿರುವ ಹಕ್ಕಿನ ಬಗ್ಗೆ ಇಷ್ಟೊಂದು ಅಸಡ್ಡೆ ಹೊಂದಿರುವ ಇವರು ಪ್ರಜಾಪ್ರಭುತ್ವಕ್ಕೆ ಎಷ್ಟರಮಟ್ಟಿಗೆ ಅರ್ಹರಾಗುತ್ತಾರೆ?
ಈ ರೀತಿಯ ಅಸಡ್ಡೆಗೆ ಕಾರಣವೂ ಇಲ್ಲದಿಲ್ಲ. ಅರಸೊತ್ತಿಗೆ ಕಾಲದಲ್ಲಾದರೂ ರಾಜನಾಗುವವನಿಗೆ ಶಸ್ತ್ರಜ್ಞಾನ ಶಾಸ್ತ್ರಜ್ಞಾನ ಇರಲೇಬೇಕೆಂಬ ನಿಯಮವಿದ್ದಿತು. ಅದಕ್ಕಾಗಿಯೇ ರಾಜನಾಗಿ ಮಾಡುವ ಮೊದಲೇ ಅವನಿಗೆ ಎಲ್ಲ ಥರದ ತರಬೇತಿಗಳನ್ನು ಕೊಡಲಾಗುತ್ತಿತ್ತು. ರಾಜನಾಗಿದ್ದವನು ಜ್ಞಾನಿಯಾಗಿರುತ್ತಿದ್ದುದರಿಂದ ಸಹಜವಾಗಿಯೇ ಸಾಮಾನ್ಯ ಜನರಲ್ಲಿ ಅವನ ಬಗ್ಗೆ ಗೌರವಭಾವನೆ ಬರುತ್ತಿತ್ತು. ಆದರೆ ನಮ್ಮ ಈಗಿನ ವ್ಯವಸ್ಥೆಯಲ್ಲಿ ನೇತಾರನಾಗಬೇಕೆಂದವನಿಗೆ ಯಾವ ವಿದ್ಯಾರ್ಹತೆಯೂ ಬೇಕಿಲ್ಲ, ಯಾವ ಅನುಭವವೂ ಬೇಕಿಲ್ಲ. ಹಾಗಾಗಿಯೇ ಇಂದು ರಾಜಕಾರಣವೆಂಬುದು politics is the last resort for the scoundrels ಎಂಬಂತಾಗಿ ಅವಿದ್ಯಾವಂತರು, ಮೂರ್ಖರು, ಕುಡುಕರು, ಕೆಡುಕರು, ಅಂತಿಮ ತೀರ್ಪಷ್ಟೇ ಬಾಕಿಯಿರುವ ಕೊಲೆಗಾರರ ಸಂತೆಯಾಗಿಹೋಗಿದೆ. ಅಂಥವರು ಎಲ್ಲದರಲ್ಲಿಯೂ ತಮಗಿಂತ ಶ್ರೇಷ್ಠರಾದ ವಿದ್ಯಾವಂತ ಜನಗಳಿಂದ ಗೌರವವನ್ನು ಹೇಗೆ ತಾನೇ ನಿರೀಕ್ಷಿಸಿಯಾರು? ರಾಜಕಾರಣದಲ್ಲಿ ಇಂಥವರೇ ತುಂಬಿರುವುದರಿಂದ ಜನಗಳು ಚುನಾವಣೆಗಳ ಬಗ್ಗೆ ಅಸಡ್ಡೆ ತೋರುತ್ತಿದ್ದಾರೋ, ಇಲ್ಲಾ ವಿದ್ಯಾವಂತರು ಚುನಾವಣೆಗಳ ಬಗ್ಗೆ ಆಸಕ್ತಿ ತೋರದೇ ಇದ್ದುದರಿಂದಲೇ ರಾಜಕಾರಣದಲ್ಲಿ ಇಂಥವರು ತುಂಬಿಕೊಂಡರೋ ಹೇಳುವುದಂತೂ ಕಷ್ಟ. ಒಟ್ಟಿನಲ್ಲಿ ರಾಜಕಾರಣ ಶುದ್ಧವಾಗುವವರೆಗೆ ವಿದ್ಯಾವಂತ ಮತದಾರ ಮತ ಹಾಕುವುದಿಲ್ಲ, ವಿದ್ಯಾವಂತ ಮತದಾರ ಮತಹಾಕುವವರೆಗೆ ರಾಜಕೀಯ ಶುದ್ಧವಾಗುವುದಿಲ್ಲ ಎಂಬಂತಾಗಿಬಿಟ್ಟರೆ ಪ್ರಜಾಪ್ರಭುತ್ವಕ್ಕೆ ನಾವೆಷ್ಟು ಅರ್ಹರು ಎಂಬ ಪ್ರಶ್ನೆಗೆ ಉತ್ತರ ಸಿಗುವುದೇ ಇಲ್ಲ.


- ಫಣಿರಾಮಚಂದ್ರ
paniramachandra.hs@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.