ಅಂಕಣಗಳು

ಬೌದ್ಧಿಕ ಗಣದಲ್ಲಿ ಮೋದಿ ಹುಟ್ಟಿಸಿರುವ ಕಂಪನ

ಬೌದ್ಧಿಕ ಗಣದಲ್ಲಿ ಮೋದಿ ಹುಟ್ಟಿಸಿರುವ ಕಂಪನ
Published On :

ಮೋದಿ ಪ್ರಧಾನಿಯಾದರೆ ಭಾರತವೇ ಅವಸಾನ ಹೊಂದಿದಂತೆ ಎಂದು ಬುದ್ಧಿಜೀವಿ ವರ್ಗದಲ್ಲಿ ಗುರುತಿಸಿರುವ ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಮೋದಿ ಪ್ರಧಾನಿಯಾಗಿದ್ದೇ ಹೌದಾದರೆ ಆಡಳಿತ ಹೀಗಿರಲಿ ಅಂತ ಇನ್ನು ಕೆಲವರು ಸಲಹೆ ನೀಡುತ್ತಿದ್ದಾರೆ. ಈ ನಡುವೆ ಎಡ-ಬಲಗಳ ಸಿದ್ಧಾಂತದಾಚೆಯ ಸಮೀಕರಣವೊಂದಕ್ಕೆ ಮೋದಿ ಉತ್ಸುಕರಾದಂತಿದೆ. ಒಟ್ಟಿನಲ್ಲಿ ಚಿಂತನ ಕೂಟಗಳಲ್ಲಿ ಮೋದಿ ಸೃಷ್ಟಿಸಿರುವ ಕಂಪನ ಎಂಥಾದ್ದು? ಕನ್ನಡಿ ಹಿಡಿದಿವೆ ಈ ಎರಡು ಲೇಖನಗಳು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದುಬಿಡಬಹುದು ಎಂಬುದು ಈವರೆಗಿನ ಸಮೀಕ್ಷೆಗಳು ಹುಟ್ಟುಹಾಕಿರುವ ಸಾಧ್ಯತೆ. ಯಾರೇನೇ 'ಹವಾ'ಗಳ ಬಗ್ಗೆ ಮಾತನಾಡಿದರೂ ಅನಿರೀಕ್ಷಿತ ಫಲಿತಾಂಶಗಳನ್ನು ಕೊಡುವ ಜಾಯಮಾನ ಭಾರತದ ಮತದಾರರಿಗಿದೆ. ಆದರೂ ಇಂದಿನ ಎಲ್ಲ ಚರ್ಚೆಗಳೂ, 'ಮೋದಿ ಪ್ರಧಾನಿಯಾದರೆ...' ಎಂಬ ಮಾತಿನೊಂದಿಗೇ ಪ್ರಾರಂಭವಾಗುವ ಅನಿವಾರ್ಯ ಸನ್ನಿವೇಶವೊಂದು ಸೃಷ್ಟಿಯಾಗಿರುವುದಂತೂ ಹೌದು.
ಈ ಹಿನ್ನೆಲೆಯಲ್ಲಿ 'ಬೌದ್ಧಿಕ ವರ್ಗ' ಎಂದು ಕರೆಸಿಕೊಳ್ಳುವ ಸಮೂಹದಿಂದ ಬಹಳಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಮರ್ತ್ಯಸೇನರೇ ಮೊದಲಾದ ಅರ್ಥಪರಿಣತರು ಇನ್ನೊಂದಿಷ್ಟು ಗಣ್ಯರನ್ನು ತಮ್ಮೊಂದಿಗೆ ಸೇರಿಸಿಕೊಂಡು 'ಮೋದಿ ಪ್ರಧಾನಿಯಾಗಬಾರದು' ಎಂದು ಜಗತ್ತಿನ ಪ್ರಮುಖ ಪತ್ರಿಕೆಗಳಿಗೆಲ್ಲ ಅಭಿಪ್ರಾಯ ಕಳುಹಿಸಿದ್ದಾಗಿದೆ. ಜಗದೀಶ್ ಭಗವತಿಯಂಥವರು ನರೇಂದ್ರ ಮೋದಿಯವರ ನಾಯಕತ್ವ ಆರ್ಥಿಕ ಪುನಶ್ಚೇತನಕ್ಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ. ಈ ಎಲ್ಲ ನಕಾರಾತ್ಮಕ- ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ಒಂದಂಶವಂತೂ ಸ್ಪಷ್ಟವಾಗುತ್ತಿದೆ. 'ನರೇಂದ್ರ ಮೋದಿ ಪ್ರಧಾನಿ ಆದರೆ' ಎಂಬ ಸಾಧ್ಯತೆಯ ಅಡಿ ಯೋಚನೆ ಮಾಡಿದಾಗ, ಅವರು ನೀತಿ- ನಿರೂಪಣೆಯಲ್ಲಿ ಆಯ್ದುಕೊಳ್ಳಬಹುದಾದ ವ್ಯಕ್ತಿಗಳು ಯಾರು ಎಂಬ ಬಗ್ಗೆ ಬೌದ್ಧಿಕ ವಲಯದಲ್ಲೊಂದು 'ತಲ್ಲಣ' ಸೃಷ್ಟಿಯಾಗಿದೆ. 'ಬಿಡ್ರೀ. ಮೋದಿ ಆಡಳಿತದಲ್ಲಿ ಆರೆಸ್ಸೆಸ್‌ನದೇ ನೀತಿ' ಅಂತ ಅವರ ವಿರೋಧಿಗಳೇನೋ ತೀರ್ಪು ಬರೆದುಬಿಡಬಹುದು. ಆದರೆ ಫಲಿತಾಂಶವನ್ನಷ್ಟೇ ಮಾನದಂಡವಾಗಿಸಿಕೊಳ್ಳುವ ಮೋದಿ, ಈ 'ಎಡ-ಬಲ'ವೆಂಬ ಸಿದ್ಧಾಂತಕೂಟಗಳ ಆಚೆಗೆ ತಮ್ಮ ವ್ಯಕ್ತಿಗಳನ್ನು ಆರಿಸಿಕೊಳ್ಳಲಿದ್ದಾರೆ ಅನ್ನೋದು ವಾಸ್ತವವನ್ನು ಬಯಸುವವರಿಗೆ ಅರ್ಥವಾಗುವ ಸಂಗತಿ.
ಆರೆಸ್ಸೆಸ್‌ನ ಸ್ವದೇಶಿ ವಿಚಾರಗಳಿಗೆ ತೀರ ವ್ಯತಿರಿಕ್ತವಾಗಿ ಹೋಗದೆ, ಹಾಗೆಂದು ಅವರ ಎಲ್ಲ ನೀತಿಗಳಿಗೆ ಜೈ ಎನ್ನದೇ ತನ್ನದೇ ನೋಟಗಳನ್ನೂ ಸಾಕಾರಗೊಳಿಸಿಕೊಳ್ಳುವ ಒತ್ತಡ ಮೋದಿ ಮೇಲೆ ಬೀಳಲಿದೆ. ಈ ಹೊಸ ಮಾದರಿಗೆ ಮೋದಿ ಯಾವ ಆರ್ಥಿಕ ಸಲಹೆಗಾರರನ್ನು ಅವಲಂಬಿಸಲಿದ್ದಾರೆ?
'ಕೇಳಿದರೆ ನಾನು ಸಹಾಯ ಮಾಡೋದಕ್ಕೆ ಸಿದ್ಧ' ಅಂತ ತಾವಾಗಿಯೇ ಘೋಷಿಸಿಕೊಂಡಿದ್ದಾರೆ ಖ್ಯಾತ ಅರ್ಥಶಾಸ್ತ್ರಜ್ಞ ಜಗದೀಶ್ ಭಗವತಿ. ಭಗವತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ಹೆಸರಾಂತ ಅರ್ಥಶಾಸ್ತ್ರಜ್ಞ. ಗುಜರಾತ್ ಮೂಲದವರು ಬೇರೆ. ವಯಸ್ಸಿನ ಕಾರಣದಿಂದ ಸಕ್ರಿಯ ಪಾತ್ರ ಸಾಧ್ಯವಾಗದಿದ್ದರೂ ತಮ್ಮ ಸಹವರ್ತಿ ಅರವಿಂದ ಪನಗಾರ್ಯರನ್ನು ನೀತಿ ನಿರೂಪಣೆಯ ಜಾಗದಲ್ಲಿ ಕಾಣುವ ತವಕ ಇವರಿಗಿದೆ. ಕೇಂದ್ರದಲ್ಲಿ ಬದಲಾವಣೆಯ ಕನಸು ಕಾಣುತ್ತಿರುವ ಮೋದಿ ಬೆಂಬಲಿಗರು ಈಗಾಗಲೇ ಆರ್ಥಿಕತೆಯ ವಿಚಾರಗಳಿಗೆ ಸಂಬಂಧಿಸಿ ಭಗವತಿ ಜತೆಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಭಗವತಿ ನೀಡಿದ ಸುಳುಹನ್ನೇ ನಂಬುವುದಾದರೆ ಪ್ರಧಾನಿಯ ಆರ್ಥಿಕ ಸಲಹೆಗಾರನ ಸ್ಥಾನ ಅರವಿಂದ್ ಪನಗಾರ್ಯ ಅವರನ್ನು ಹುಡುಕಿಕೊಂಡು ಬಂದರೂ ಅಚ್ಚರಿ ಇಲ್ಲ. ಕೊಲಂಬಿಯಾ ವಿವಿಯ ಪ್ರೊಫೆಸರ್ ಆಗಿರುವ ಪನಗಾರ್ಯ ಬಿಜೆಪಿಯ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಮೋದಿನಾಮಿಕ್ಸ್(ಮೋದಿ ಆರ್ಥಿಕತೆ)ಯ ಬೆಂಬಲಿಗರೂ ಹೌದು. ಇದಕ್ಕಿಂತ ಮುಖ್ಯವಾಗಿ ಭಗವತಿ ಆತ್ಮೀಯರು. ಭಗವತಿ ಹಾಗೂ ಪನಗಾರ್ಯ ಇಬ್ಬರೂ ಮುಕ್ತಮಾರುಕಟ್ಟೆಯ ಪ್ರತಿಪಾದಕರು. ಹಾಗಾಗಿ ಈ ವಿಚಾರದಲ್ಲಿ ಮೋದಿ ಬಿಜೆಪಿಗಿಂತಲೂ ಹೆಚ್ಚು ಉದಾರಿಯಾಗುತ್ತಾರೆ ಎನ್ನುವ ನಿರೀಕ್ಷೆ ಈ ಇಬ್ಬರದು.
ಸದ್ಯದ ಪರಿಸ್ಥಿತಿಯಲ್ಲಿ ಕುಸಿದಿರುವ ಅರ್ಥವ್ಯವಸ್ಥೆಯನ್ನು ಮೇಲೆತ್ತಲು, ಬೆಳವಣಿಗೆಗೆ ಹೊಸ ಚೇತರಿಕೆ ನೀಡಲು ವಿದೇಶಿ ಬಂಡವಾಳ ಹೂಡಿಕೆ, ವಿದೇಶಿ ವ್ಯಾಪಾರದ ವಿಚಾರದಲ್ಲಿ ಒಂದಷ್ಟು ಉದಾರತೆ ತೋರುವ ಅಗತ್ಯವಿದೆ ಎನ್ನುವ ಅಭಿಪ್ರಾಯವನ್ನು ಭಗವತಿ ಈಗಾಗಲೇ ವ್ಯಕ್ತಪಡಿಸಿದ್ದಾರೆ.
ವಿದೇಶಿ ಹೂಡಿಕೆ ಪ್ರಶ್ನೆ ಬಂದಾಗ ಎಫ್‌ಡಿಐ ಅನ್ನು ಬದಿಗಿಡುವಂತಿಲ್ಲ. ಆದರೆ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟರೆ ತನ್ನ ಅತಿದೊಡ್ಡ ಮತಬ್ಯಾಂಕ್ ಅನ್ನು ಕಳೆದುಕೊಳ್ಳುವ ಆತಂಕ ಬಿಜೆಪಿಯ ಹಿರಿಯ ತಲೆಯಾಳುಗಳದು. ಈ ವಿಚಾರದಲ್ಲಿ ಮೋದಿಗಿನ್ನೂ ಗೊಂದಲಗಳಿದ್ದಂತಿದೆ. ಮೋದಿ ಆರೆಸ್ಸೆಸ್‌ನ ಕೂಸು ಆಗಿರಬಹುದು. ಆದರೆ, ಅನೇಕ ವಿಚಾರಗಳಿಗೆ ಸಂಬಂಧಿಸಿ ಆರೆಸ್ಸೆಸ್, ಮೋದಿ ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯಗಳಿರುವುದು ಹೊಸ ವಿಚಾರವೇನಲ್ಲ. ಇದು ಎಫ್‌ಡಿಐ ವಿಚಾರಕ್ಕೂ ಅನ್ವಯಿಸುತ್ತದೆ. ಈ ವಿಚಾರದಲ್ಲಿ ಬಿಜೆಪಿ ಮತ್ತು ಮೋದಿ ನಡುವೆ ಒಂದಷ್ಟು ಭಿನ್ನಮತಗಳಿವೆ. ಮೋದಿ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಎಫ್‌ಡಿಐ ಕುರಿತು ನೇರವಾಗಿ ಬೆಂಬಲಿಸದಿದ್ದರೂ ಭವಿಷ್ಯದಲ್ಲಿ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ಇಂಥದ್ದೊಂದು ವಿಶ್ವಾಸ ಭಗವತಿ ಅವರಿಗೂ ಇದೆ. ಆರ್ಥಿಕ ಬೆಳವಣಿಗೆಯ ಅಗತ್ಯವನ್ನು ಮನದಲ್ಲಿಟ್ಟುಕೊಂಡು ಮೋದಿ ಎಫ್‌ಡಿಐ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುತ್ತಾರೆ ಭಗವತಿ. ಜತೆಗೆ, ಹಾಲಿ ಆರ್‌ಬಿಐ ಗವರ್ನರ್ ಕುರಿತು ಬಿಜೆಪಿಯ ಕೆಲ ಮುಖಂಡರಿಗೆ ಆಕ್ಷೇಪಗಳಿದ್ದ ಹೊರತಾಗಿಯೂ ಮೋದಿ ಸೈದ್ಧಾಂತಿಕ ನಿಲುವನ್ನು ಬದಿಗಿಟ್ಟು ರಘುರಾಂ ಸೇವೆಯನ್ನು ಬಳಸಿಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವನ್ನೂ ಭಗವತಿ ವ್ಯಕ್ತಪಡಿಸುತ್ತಾರೆ.
ನಿರ್ದಿಷ್ಟ ಹುದ್ದೆ ಅಂತಲ್ಲವಾದರೂ, ನರೇಂದ್ರ ಮೋದಿಯವರು ಆತುಕೊಳ್ಳಬಹುದಾದ ಇನ್ನೊಬ್ಬ ವ್ಯಕ್ತಿ ಅಂದರೆ ಅರುಣ್ ಶೌರಿ. 'ಮೋದಿ ಪ್ರಧಾನಿಯಾದರೆ..' ಎಂಬ ಸಾಧ್ಯತೆಯ ನೆರಳಲ್ಲಿ ನಿಂತು, ನೀತಿ ನಿರೂಪಣೆಗಳಲ್ಲಿ ಮೋದಿ ತರಬಹುದಾದ ಬದಲಾವಣೆಗಳ ಬಗ್ಗೆ ಶೌರಿಯವರು ಮಾಧ್ಯಮಗಳಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ಮಾತಾಡುತ್ತಿದ್ದಾರೆ. ಬಹುತೇಕ ನೀತಿ, ನಿರ್ಧಾರಗಳ ವಿಚಾರದಲ್ಲಿ ಮೋದಿ ಸ್ವತಂತ್ರ ನಿಲುವು ತೆಗೆದುಕೊಳ್ಳಬಹುದು ಎನ್ನುವ ವಿಶ್ವಾಸ ಅರುಣ್ ಶೌರಿ ಅವರಿಗೂ ಇದೆ. ಇದಕ್ಕೆ ಅವರು ಉದಾಹರಣೆಯಾಗಿ ನೀಡುವುದು ವಾಜಪೇಯಿ ಅವರನ್ನು. ಬಿಜೆಪಿಯಲ್ಲಿ ಆರೆಸ್ಸೆಸ್‌ನ ಪ್ರಭಾವ ಹೆಚ್ಚು. ಆದರೆ, ಅಟಲ್ ಅವರು ತಮ್ಮ ಆಡಳಿತಾವಧಿಯಲ್ಲಿ ಆರೆಸ್ಸೆಸ್ ಮತ್ತು ಸರ್ಕಾರವನ್ನು ಪ್ರತ್ಯೇಕವಾಗಿ ನೋಡಿದವರು. ಅದೇ ರೀತಿ ಮೋದಿಯಿಂದ ಕೂಡ ಒಂದಷ್ಟು ಉದಾರವಾದಿ ನಿಲುವುಗಳನ್ನು ನಿರೀಕ್ಷಿಸಬಹುದೆನ್ನುವ ಪರೋಕ್ಷ ಸುಳಿವು ನೀಡಿದ್ದಾರೆ ಶೌರಿ. ಶೌರಿಯ ಮಾತಿಗೆ ಮಹತ್ವ ಕೊಡಲು ಕಾರಣವೂ ಉಂಟು. ಶೌರಿ ಎಂಬ ಈ ನಿರೀಶ್ವರವಾದಿಗೆ ಬಿಜೆಪಿಯ ಹಲವು ನಿಲುವುಗಳಿಂದ ಬೇಸರಗಳಿರಬಹುದು. ಆದರೆ, ಒಕ್ಕೂಟ ವ್ಯವಸ್ಥೆ ಸೇರಿದಂತೆ ಹಲವು ನಿಲುವುಗಳಲ್ಲಿ ಮೋದಿ ಮತ್ತು ಶೌರಿ ನಡುವೆ ಸಾಕಷ್ಟು ಸಾಮ್ಯತೆ ಇದೆ. 'ಯುಪಿಎ ಆಡಳಿತದಲ್ಲಿ ರಾಜ್ಯಗಳನ್ನು ನೀತಿ ನಿರೂಪಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಯಿತು. ಪಾಲಿಸಿ ರೂಪಿಸುವಾಗ ಮುಖ್ಯಮಂತ್ರಿಗಳನ್ನು ಒಳಗೊಳ್ಳುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗುವ ಆಶಯವಿದೆ' ಅಂತಾರೆ ಶೌರಿ. ರಾಜ್ಯಗಳ ಚಲನಶೀಲತೆ- ಪಾತ್ರಗಳ ಕುರಿತು ಮೋದಿ ತಮ್ಮ ಭಾಷಣಗಳಲ್ಲಿ ಸಾಕಷ್ಟು ಪ್ರಸ್ತಾವಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮೋದಿ ಸರ್ಕಾರದಲ್ಲಿ ಶೌರಿ ಅವರಿಗೆ ಆಯಕಟ್ಟಿನ ಜಾಗ ಹುಡುಕಿಕೊಂಡು ಬಂದರೆ ವಿಶೇಷವೇನಿಲ್ಲ.
ಆರ್ಥಿಕ ನೀತಿ, ವಿದೇಶಿ ವಿದ್ಯಮಾನಗಳ ವಿಷಯದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರನ್ನೂ ಕಡೆಗಣಿಸುವಂತಿಲ್ಲ. ಇವರ ಪ್ರತಿಭೆಯ ಬಗ್ಗೆ ಮಾತಿಲ್ಲವಾದರೂ ಮೋದಿ, ಸ್ವಾಮಿ ವಿಷಯದಲ್ಲಿ ಜಾಗರೂಕ ನಡೆಯನ್ನೇ ಇಡುವ ಸಂಭವವಿದೆ. ಕಪ್ಪುಹಣ, ಯುಪಿಎ ಅಕ್ರಮಗಳ ತನಿಖೆ ಇವೆಲ್ಲ ಪ್ರಮುಖ ಸಂಗತಿಗಳೇ ಆದರೂ ಕೇವಲ ಅವಕ್ಕೇ ಗಮನಹರಿಸಿದರೆ ಸೇಡಿಗಾಗಿಯೇ ಅಧಿಕಾರಕ್ಕೆ ಬಂದರೇನೋ ಎಂಬ ಸಂದೇಶ ರವಾನೆಯಾದೀತು. ಈ ವಿಷಯಗಳಲ್ಲಿ ಸ್ವಾಮಿಯವರ ಅತ್ಯುತ್ಸಾಹವನ್ನು ಮೋದಿ ಬಹಳವಾಗಿಯೋನೂ ಬೆಂಬಲಿಸಲಿಕ್ಕಿಲ್ಲ. ಏಕೆಂದರೆ ಇಂದಿರಾರನ್ನು ಜೈಲಿಗಟ್ಟಿದ್ದೇ ಮೊರಾರ್ಜಿ ಸರ್ಕಾರದ ಸಾಧನೆ ಎಂಬಂತಾಗಿ ನಂತರದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪ್ರವರ್ಧಮಾನಕ್ಕೆ ಬಂದ ಇತಿಹಾಸ ಮೋದಿಗೆ ತಿಳಿದೇ ಇದೆ. ಗುಜರಾತಿಯೇ ಆದರೂ ಇನ್ನೊಬ್ಬ ಮೊರಾರ್ಜಿ ಆಗುವ ಸಾಹಸಕ್ಕೆ ಮೋದಿ ಹೋಗಲಾರರು!
ಸ್ವದೇಶಿ ಜಾಗರಣ್ ಮಂಚ್ ಹಾಗೂ ಎಸ್. ಗುರುಮೂರ್ತಿಯವರಂಥ ಅರ್ಥ ಪರಿಣತರೂ ವ್ಯವಸ್ಥೆಯ ಹೊರಗಿದ್ದುಕೊಂಡೇ ಕೆಲವು ಒತ್ತಡಗಳನ್ನು ಸೃಷ್ಟಿಸಬಹುದೇನೋ. ಇನ್ನು, ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಅಧಿಕಾರಿವರ್ಗದ ಭಾಗವಾಗಿದ್ದು ಈಗ ವಿದೇಶಿ ವಿದ್ಯಮಾನಗಳ ಕುರಿತು ನಿಖರ ಅಭಿಪ್ರಾಯಗಳನ್ನು ಹೊರಹಾಕುತ್ತಿರುವ ಜಿ. ಪಾರ್ಥಸಾರಥಿಯಂಥ ಗಣ್ಯರೂ ಮೋದಿಗೆ ಅಸ್ಪೃಶ್ಯರಾಗುವುದಿಲ್ಲ.
ಕೊನೆಯದಾಗಿ, 2009ರಲ್ಲಿ ಆಡ್ವಾಣಿ ಪ್ರಧಾನಿ ಹುದ್ದೆಗೆ ಬಿಂಬಿತವಾಗಿದ್ದಾಗ ಅವರ ಚಿಂತಕ ಕೂಟದಲ್ಲಿ ಸುಧೀಂದ್ರ ಕುಲಕರ್ಣಿಯಂಥ ಪತ್ರಕರ್ತರಿಗೆ ಭಾರಿ ಮೆರುಗಿತ್ತು. ಯಾರಿಗೇನು ಜಾಗವೋ ತಿಳಿದಿಲ್ಲವಾದರೂ, ಬರೀ ಉಪದೇಶಕ್ಕೆ ಸೀಮಿತಗೊಳ್ಳುವ ಪತ್ರಕರ್ತರ ಪಡೆಯನ್ನಂತೂ ಮೋದಿ ಹತ್ತಿರ ಸೇರಿಸಲಾರರು. ಎಂ. ಜೆ. ಅಕ್ಬರ್‌ರಂಥವರ ಸ್ಥಾನವೂ ಚಿಂತಕ ಕೂಟದಲ್ಲಿ ಗೌಣವಾಗುವ ಸಾಧ್ಯತೆಯೇ ಹೆಚ್ಚು.
-ಅಜಿತ್ ಮಠದಬೆಟ್ಟು, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.