ಅಂಕಣಗಳು

ಬೌದ್ಧಿಕ ಗಣದಲ್ಲಿ ಮೋದಿ ಹುಟ್ಟಿಸಿರುವ ಕಂಪನ

ಬೌದ್ಧಿಕ ಗಣದಲ್ಲಿ ಮೋದಿ ಹುಟ್ಟಿಸಿರುವ ಕಂಪನ
Published On :

ಮೋದಿ ಪ್ರಧಾನಿಯಾದರೆ ಭಾರತವೇ ಅವಸಾನ ಹೊಂದಿದಂತೆ ಎಂದು ಬುದ್ಧಿಜೀವಿ ವರ್ಗದಲ್ಲಿ ಗುರುತಿಸಿರುವ ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಮೋದಿ ಪ್ರಧಾನಿಯಾಗಿದ್ದೇ ಹೌದಾದರೆ ಆಡಳಿತ ಹೀಗಿರಲಿ ಅಂತ ಇನ್ನು ಕೆಲವರು ಸಲಹೆ ನೀಡುತ್ತಿದ್ದಾರೆ. ಈ ನಡುವೆ ಎಡ-ಬಲಗಳ ಸಿದ್ಧಾಂತದಾಚೆಯ ಸಮೀಕರಣವೊಂದಕ್ಕೆ ಮೋದಿ ಉತ್ಸುಕರಾದಂತಿದೆ. ಒಟ್ಟಿನಲ್ಲಿ ಚಿಂತನ ಕೂಟಗಳಲ್ಲಿ ಮೋದಿ ಸೃಷ್ಟಿಸಿರುವ ಕಂಪನ ಎಂಥಾದ್ದು? ಕನ್ನಡಿ ಹಿಡಿದಿವೆ ಈ ಎರಡು ಲೇಖನಗಳು.
ಬ್ರಿಟನ್‌ನ 'ಇಂಡಿಪೆಂಡೆಂಟ್‌' ಎನ್ನುವ ಪತ್ರಿಕೆಯಲ್ಲಿ ಏಪ್ರಿಲ್ 23 ರಂದು ಪತ್ರವೊಂದು ಪ್ರಕಟವಾಯಿತು.  "The idea of Modi in power fills us with dread' ಎನ್ನುವ ತಲೆಬರಹದಲ್ಲಿ ಪ್ರಕಟವಾದ ಆ ಪತ್ರವನ್ನು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೇಂಬ್ರಿಜ್, ಆಕ್ಸ್‌ಫರ್ಡ್ ಇನ್ನಿತ್ಯಾದಿ ಪ್ರಖ್ಯಾತ ವಿ.ವಿಗಳ ಸುಮಾರು 75 ಪ್ರೊಫೆಸರ್‌ಗಳು ಬರೆದಿದ್ದಾರೆ. ವಿಶೇಷವೆಂದರೆ ಇವರಲ್ಲಿ 70 ಮಂದಿ ಭಾರತೀಯ ಮೂಲದವರೇ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರೊಫೆಸರ್‌ಗಳಾದ ಚೇತನ್ ಭಟ್ ನೇತೃತ್ವದಲ್ಲಿ ಸಿದ್ಧವಾಗಿರುವ ಈ ಪತ್ರದಲ್ಲಿ ಹೊಸತೇನೂ ಇಲ್ಲ. ನಮ್ಮಲ್ಲಿನ ಎಲ್ಲಾ 'ಸರ್ಕಾರಿ ಬುದ್ಧಿಜೀವಿಗಳು' ಏನು ಬಡಬಡಿಸುತ್ತಿದ್ದಾರೋ ಅದೇ ಆ ಪತ್ರದಲ್ಲಿ ಕಾಪಿ ಪೇಸ್ಟ್ ಆಗಿದೆಯಷ್ಟೆ. 'ಮೋದಿ ಅಧಿಕಾರಕ್ಕೆ ಬರುವ ಕಲ್ಪನೆಯೇ ನಮ್ಮಲ್ಲಿ ಅಂಜಿಕೆ ಹುಟ್ಟಿಸುತ್ತಿದೆ. ಏಕೆಂದರೆ ಒಂದು ವೇಳೆ ಅವರು ಪ್ರಧಾನಿಯಾದರೆ ನಿಸ್ಸಂಶಯವಾಗಿಯೂ ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತರ ಮೇಲಿನ ಅತ್ಯಾಚಾರಗಳು, ನೆರೆರಾಷ್ಟ್ರಗಳೊಂದಿಗಿನ ತಿಕ್ಕಾಟಗಳೂ ಹೆಚ್ಚಾಗಲಿವೆ' ಎನ್ನುವುದು ಈ ಕರುಣಾಳುಗಳ ಭಯಕ್ಕೆ ಕಾರಣವಂತೆ.
 ವ್ಯಂಗ್ಯ ನೋಡಿ. ಭಾರತದಲ್ಲಿಯೇ ನೂರಾರು ವರ್ಷಗಳ ಕಾಲ ರಕ್ತದೋಕುಳಿಯಾಡಿದ ಬ್ರಿಟೀಷರ ನೆಲದಲ್ಲೇ ಈಗ ಆಶ್ರಯ ಪಡೆದು, ಅವರ ಗುಲಾಮರಾಗಿದ್ದಾರಿವರು! ಆದರೆ  ಹೆಸರೇ ಇಲ್ಲದ ಈ 75 ಮಂದಿಯನ್ನು ಯಾರೂ ಕೇರ್ ಮಾಡುತ್ತಿಲ್ಲ ಎನ್ನುವುದು ಸತ್ಯ.  ಆದರೆ ಅವರೆಲ್ಲ ಏಕೆ ಹೀಗಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ, ನಮ್ಮ ಬುದ್ಧಿಜೀವಿಗಳ ಅಂತರಂಗವನ್ನು ಇಣುಕಿ ನೋಡಬೇಕಾಗುತ್ತದೆ.
ಸ್ವಾತಂತ್ರ್ಯಾನಂತರದಿಂದ ಇಂಥ ಎಡಪಂಥೀಯ ಬುದ್ಧಿಜೀವಿಗಳನ್ನು ಕಾಂಗ್ರೆಸ್ ಪೋಷಿಸಿಕೊಂಡು ಬಂದಿದೆ. ಎಲ್ಲಾ ದೊಡ್ಡ ದೊಡ್ಡ ಆಕಾಡೆಮಿಗಳ ಪ್ರಮುಖ ಹುದ್ದೆಗಳು, ರಾಷ್ಟ್ರೀಯ ಪ್ರಶಸ್ತಿಗಳು, ವರ್ಷಕ್ಕೆ ಎರಡು ಮೂರು ಬಾರಿ ವಿದೇಶದ ಟ್ರಿಪ್‌ಗಳು, ಸರ್ಕಾರದಿಂದ ಪುಕ್ಕಟೆ ಸೌಲಭ್ಯ...ಹೀಗೆ ಅಧಿಕಾರದ ಆಕಾಶದಲ್ಲೇ ತೇಲುತ್ತಾ ಬಂದ ಇವರಿಗೆಲ್ಲ ಈಗ ಮೋದಿ ಎನ್ನುವ ವ್ಯಕ್ತಿತ್ವ ಎಲ್ಲಿ ತಮ್ಮ ಕಾಲು ಹಿಡಿದು ಕೆಳಗೆ ಜಗ್ಗುತ್ತದೋ ಎನ್ನುವ ಭಯ ಶುರುವಾಗಿದೆ.
ಈ ಭಯ ಕೇವಲ ಎಡಪಂಥೀಯ ಬುದ್ಧಿಜೀವಿಗಳಿಗಷ್ಟೇ ಅಲ್ಲ, ಆರ್‌ಎಸ್‌ಎಸ್‌ನ ಪ್ರಖಾಂಡ ಪಂಡಿತರನ್ನೂ ಅಲ್ಲಾಡಿಸುತ್ತಿದೆ! ಅಭಿವೃದ್ಧಿ ರಾಜಕೀಯಕ್ಕೇ ಒತ್ತುಕೊಡುವ ಮೋದಿ ಹಿಂದುತ್ವದ ಪಾಠ ಜಪಿಸುವ ಆರ್‌ಎಸ್‌ಎಸ್ ಅನ್ನು ಹೆಚ್ಚು ಸನಿಹ ಬಿಟ್ಟುಕೊಂಡವರಲ್ಲ. ಈ ಕಾರಣಕ್ಕಾಗಿಯೇ ಅವರು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಆರ್‌ಎಸ್‌ಎಸ್‌ನ ಬೌದ್ಧಿಕ ವಲಯ ಬುಸುಗುಡುತ್ತಲೇ ಅನಿವಾರ್ಯವಾಗಿ ಬೆಂಬಲ ಸೂಚಿಸಿತು. ಮೋದಿ ಪ್ರಧಾನಿಯಾದರೆ ತಮ್ಮ ಆಪ್ತರನ್ನೇ ದೊಡ್ಡ ಹುದ್ದೆಯಲ್ಲಿ ಕೂಡಿಸುತ್ತಾರೆ ಎನ್ನುವ ಮಾತಿದೆ. ಆದರೆ ಆ ಆಪ್ತ ವಲಯದಲ್ಲಿ ಆರ್‌ಎಸ್‌ಎಸ್ ಅಂತೂ ಇಲ್ಲ. ಈ ಕಾರಣಕ್ಕಾಗೇ ಕೆಲವು ಬಲಪಂಥೀಯ ಬುದ್ಧಿಜೀವಿಗಳೂ ಕೂಡ 'ಮೋದಿಗಿಂತ ಆಡ್ವಾಣಿಯವರೇ ಉತ್ತಮ' ಎನ್ನತೊಡಗಿದ್ದಾರೆ. 
ಕಾಂಗ್ರೆಸ್ ಕೃಪಾಪೋಷಿತ ಎಡಪಂಥೀಯರೂ ಆಡ್ವಾಣಿಗೆ ಜೈಕಾರ ಹಾಕಿದ್ದರ ಹಿಂದೆಯೂ ಒಂದು ಕಾರಣವಿದೆ.  ವಾಜಪೇಯಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗ, ಎಡಪಂಥೀಯ ಬುದ್ಧಿಜೀವಿಗಳನ್ನು ಸರ್ಕಾರದಿಂದ ಓಡಿಸಲಾಗುತ್ತದೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಆಡ್ವಾಣಿ -ವಾಜಪೇಯಿ ಜೋಡಿ ಬೌದ್ಧಿಕ ವಲಯದಲ್ಲಿ ಹೆಚ್ಚಿನ ಬದಲವಾಣೆಯನ್ನೇನೂ ಮಾಡದೇ ಯಥಾಸ್ಥಿತಿ ಕಾದುಕೊಂಡರು. ಅಲ್ಲದೇ, ಎತ್ತಬೇಕಾದರೂ ಹೊರಳುವ ಎಡಚರು ಕೂಡ ಸುಲಭವಾಗಿ ತಮ್ಮ ನಿಷ್ಠೆಯನ್ನು ಆಗ ಬಿಜೆಪಿಯತ್ತ ತಿರುಗಿಸಿದ್ದರು. ಬಿಜೆಪಿ ಅಧಿಕಾರ ಕಳೆದುಕೊಂಡಾಗ, ಬಂದಷ್ಟೇ ವೇಗದಲ್ಲಿ ಮತ್ತೆ ಕಾಂಗ್ರೆಸ್‌ನತ್ತ ಇವರೆಲ್ಲ ಹಾರಿಹೋದರು!
ಇನ್ನೊಂದೆಡೆ ಕಾಂಗ್ರೆಸ್ ಅನ್ನು ಒಳಗೊಳಗೇ ಬೆಂಬಲಿಸುತ್ತಾ, ಈಗ ಆಪ್‌ಗೆ ಬೆಂಬಲ ಸೂಚಿಸುತ್ತಿರುವ ಅರುಣಾ ರಾಯ್, ಮೇಧಾಪಾಟ್ಕರ್‌ರಂಥವರನ್ನೂ ಇದೇ ಪಟ್ಟಿಗೆ ಸೇರಿಸಬಹುದೇನೋ. ಅರುಣಾ ರಾಯ್, ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಸಮಿತಿಯ ಭಾಗವಾಗಿದ್ದವರು, ಮೇಧಾಪಾಟ್ಕರ್‌ಗೆ ರೈಟ್ ಲೈವ್ಲಿಹುಡ್, ದೀನಾನಾಥ್ ಮಂಗೇಶ್ಕರ್, ಮಹಾತ್ಮಾ ಫುಲೆ ಅವಾರ್ಡ್ ಮುಂತಾದ ಕಿರೀಟಗಳನ್ನೆಲ್ಲ ತೊಡಿಸುವುದರ ಹಿಂದೆ ಕಾಂಗ್ರೆಸ್ ಸರ್ಕಾರವೇ ಇತ್ತು. ಇನ್ನು ಆಪ್‌ನ ಯೋಗೇಂದ್ರ ಯಾದವ್‌ರನ್ನು ಇದೇ ಯುಪಿಎ ಸರ್ಕಾರ ಈ ಮೊದಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ಸಲಹಾ ಮಂಡಳಿಯ ಭಾಗವಾಗಿಸಿತ್ತು. ಕೇಂದ್ರದಲ್ಲಿ ಈ ಬಾರಿ ಆಪ್ ಬರಲಿ ಅಥವಾ ಕಾಂಗ್ರೆಸ್ಸೇ ಇರಲಿ.. ಇವರೆಲ್ಲರ ಸ್ಥಾನಮಾನಕ್ಕೇನೂ ಕುಂದುಂಟಾಗುವುದಿಲ್ಲ. ಆದರೆ ಎನ್‌ಡಿಎ ಬಂತೆಂದರೆ?
ಈ ಪ್ರಶ್ನೆಯೇ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರನ್ನೂ ತಳಮಳಕ್ಕೆ ತಳ್ಳಿದೆ. ನಳಂದಾ ವಿಶ್ವವಿದ್ಯಾಲಯದ ಪುನರ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 2,727 ಕೋಟಿ ರುಪಾಯಿಗಳನ್ನು ಮೀಸಲಿಟ್ಟು, ವಿ.ವಿ. ನಿರ್ಮಾಣದ ನೇತೃತ್ವವನ್ನು ಸೇನ್‌ಗೆ ವಹಿಸಿದೆ. ಆದರೆ ಸೇನ್ ಮತ್ತು ಅವರ 12 ಸದಸ್ಯರ ಬುದ್ಧಿಜೀವಿಗಳ ತಂಡ ಮಾತ್ರ ಇಷ್ಟು ವರ್ಷಗಳಿಂದ ಯಾವ ಕೆಲಸವನ್ನೂ ಮಾಡದೇ, ಹಣ ನುಂಗುತ್ತಾ ಕುಳಿತಿದ್ದಾರೆ. ಈ ತಂಡದ ಒಬ್ಬೊಬ್ಬ ಸದಸ್ಯನ ವಾರ್ಷಿಕ ಪಗಾರವೇ 80 ಸಾವಿರ ಅಮೆರಿಕನ್ ಡಾಲರ್‌ಗಳಷ್ಟಿದೆ! ಹೀಗಾಗಿ ಯುಪಿಎ ಹಾಕುತ್ತಿರುವ ಅನ್ನವನ್ನು ಎಲ್ಲಿ ಎನ್‌ಡಿಎ ಕಸಿದುಕೊಳ್ಳುತ್ತದೋ ಎನ್ನುವ ಚಿಂತೆ ಅಮರ್ತ್ಯ ಮತ್ತು ತಂಡಕ್ಕೆ.
ವ್ಯಂಗ್ಯವೆಂದರೆ ಇವರೆಲ್ಲ ತಮ್ಮ ಒಳಗುದಿಯನ್ನು ವ್ಯಕ್ತಪಡಿಸಲು ಆರಿಸಿಕೊಂಡಿರುವ ಮಾರ್ಗ 'ಸೆಕ್ಯುಲರಿಸಂ(ಆಪ್ ಅಥವಾ ಕಾಂಗ್ರೆಸ್) ಗಡ ಕಮ್ಯುನಲಿಸಂ(ಬಿಜೆಪಿ)'! ಪತ್ರಬರೆದು ಅಳುವ ಲಂಡನ್- ಭಾರತದ ಅಕಾಡೆಮಿಕ್ ವಲಯಗಳಿಗೆ, ಲಕ್ಷ ರುಪಾಯಿ ಸಂಬಳ ಎಲ್ಲಿ ಕೈತಪ್ಪುತ್ತದೋ ಎಂಬ ಚಿಂತೆಯಲ್ಲಿ ಆರ್ಭಟಿಸುವ ನಮ್ಮಲ್ಲಿನ ಅನಂತ ಬುದ್ಧಿಜೀವಿಗಳಿಗೆ ನಿಜಕ್ಕೂ ಭಾರತದ ಭಾವೈಕ್ಯತೆಯ ಬಗ್ಗೆ ಕಾಳಜಿಯಿದೆಯೆಂದುಕೊಂಡಿದ್ದೀರಾ? ಕೆಲಸ ಮಾಡದೇ ಕೂಳು ತಿನ್ನುತ್ತಾ ಬಂದ ಇವರಿಗೆಲ್ಲ ತಮ್ಮ ಅಸ್ತಿತ್ವವೆಲ್ಲಿ ಅಸಂಗತವಾಗುತ್ತದೋ ಎನ್ನುವ ಭಯವಷ್ಟೆ.
ದುರ್ದೈವವೆಂದರೆ ಭಾರತದ ಟೆಲಿಕಾಂ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ತಂತ್ರಜ್ಞಾನದ ಬಳಕೆಯಿಂದ ಸಾಕ್ಷರತೆಯನ್ನು ಹೆಚ್ಚಿಸಲು ಶ್ರಮಿಸಿದ ಸ್ಯಾಮ್ ಪಿತ್ರೋಡಾರಂಥ ತಿಳಿವಳಿಕಸ್ಥರೂ ಈಗ ಕೇವಲ ಕಾಂಗ್ರೆಸ್ ವ್ಯಾಮೋಹಿಗಳಾಗಿ ಬದಲಾಗಿರುವುದು. 2005ರಲ್ಲಿ ಅವರನ್ನು ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆ ಸಮಯದಲ್ಲಿ ಆ ಆಯೋಗ ಸರ್ಕಾರಕ್ಕೆ ಸುಮಾರು 300 ಶಿಫಾರಸುಗಳನ್ನು ಮಾಡಿತ್ತು. ಆದರೆ ಯುಪಿಎ ಬಹುತೇಕ ಎಲ್ಲಾ ಶಿಫಾರ್ಸುಗಳನ್ನೂ ಕಡೆಗಣಿಸಿತ್ತು. ಆದರೂ ಪಿತ್ರೋಡಾರಿಗೆ ಕಾಂಗ್ರೆಸ್ ಪಿತೃ ಸಮಾನವಾಗೇ ಕಂಡಿತು. ಏಕೆಂದರೆ ಅವರಿಗೆ ದೆಹಲಿಯ ಸಫ್ದರ್ ಜಂಗ್‌ನಲ್ಲಿರುವ ಲ್ಯೂಟಿನ್ಸ್‌ನಲ್ಲಿ ಸಕಲ ಸವಲತ್ತುಗಳೂ ಸಿಕ್ಕಿವೆ. ಐಷಾರಾಮಿ ಕಾರು..ಬಂಗಲೆ... ಬುದ್ಧಿಜೀವಿಗಳೆನಿಸಿಕೊಂಡವರಿಗೆ ಬೇಕಾಗಿರುವುದೂ ಇದೇ ಅಲ್ಲವೇ?
ಅವರಿಗೆ ಕಾಂಗ್ರೆಸ್ ಮತ್ತು ಅದರ ಕುಡಿಗಳ ಮೇಲೆ ಎಷ್ಟು ಮಮತೆ ಇದೆ ಎನ್ನುವುದನ್ನು ಅವರ ಮಾತಲ್ಲೇ ಕೇಳಿ: 'ರಾಹುಲ್ ಬಹಳ ಬುದ್ಧಿವಂತ, ಅವನ ಸಹೋದರಿ ಪ್ರಿಯಾಂಕ ಕೂಡ ಅಷ್ಟೆ. ನಾನು ಪಕ್ಷಪಾತಿಯಿರಬಹುದು. ಆದರೆ ನಾನು ಹೇಳುವುದು ಸತ್ಯ. ರಾಹುಲ್‌ಗೆ ಇತಿಹಾಸದ ಜ್ಞಾನ ಅದ್ಭುತವಾಗಿದೆ. ಅವನು ಹೃದಯಾಂತರಾಳದಿಂದ ಭಾರತೀಯರನ್ನು ಪ್ರೀತಿಸುತ್ತಾನೆ. ಅವನನ್ನು ಬೇರೆಯವರ ಜೊತೆ ಕಂಪೇರ್ ಮಾಡ್ಬೇಡಿ. ಅವನಿನ್ನೂ ಚಿಕ್ಕವ, ಕೇವಲ 40 ವರ್ಷವಷ್ಟೇ ಅವನಿಗೆ. ಅವನಿಗೊಂದು ಚಾನ್ಸ್ ಕೊಡಿ...'
ಪುಣ್ಯಕ್ಕೆ ಪ್ಲೀಸ್ ಪ್ಲೀಸ್ ಅನ್ನಲಿಲ್ಲ!

- ರಾಘವೇಂದ್ರ ಆಚಾರ್ಯ
raghu.bioastra@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.