ಪಕ್ಷಕ್ಕೆ ಪ್ರೀತಿ ಹರಿಸಿದವರನ್ನು ಮರೆಯುವುದು ಬೇಡ

ಈ ಬಾರಿಯ ಚುನಾವಣೆಗಳಲ್ಲಿ ಮೊತ್ತ ಮೊದಲ ಬಾರಿಗೆ ಮತಚಲಾಯಿಸುವ ಹಕ್ಕು ಪಡೆದ ಯುವ ಮತದಾರರಿಗೆ ಹಿಂದೆಂದೂ ಕಾಣದ ಪ್ರಾಶಸ್ತ್ಯವನ್ನು ರಾಜಕೀಯ ಪಕ್ಷಗಳು ನೀಡಿರುವುದನ್ನು ನಾವು ಕಂಡಿದ್ದೇವೆ. ನನಗೆ ಈ ಹಕ್ಕು ದೊರಕ್ಕಿದ್ದು 1977 ರಲ್ಲಿ. ಈ ಬಾರಿಯ ಚುನಾವಣೆಯ ರೀತಿಯಲ್ಲಿಯೇ 1977ರ ಚುನಾವಣೆ ಅತ್ಯಂತ ಮಹತ್ವ ಪಡೆದಿತ್ತು. ದೇಶವನ್ನು 22 ತಿಂಗಳ ಕಾಲ ತುರ್ತು ಪರಿಸ್ಥಿತಿಯಲ್ಲಿಟ್ಟು ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದ್ದ ಸರ್ಕಾರದ ವಿರುದ್ಧ ಅಂದು ಅನೇಕರು ಮತ ಚಲಾಯಿಸಿ ದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಅಧಿಕಾರಕ್ಕೆ ತಂದದ್ದು ಇತಿಹಾಸದ ಪ್ರಮುಖ ಘಟನೆ. 1971 ರಿಂದ ಇದುವರೆಗೂ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ.
ಚುನಾವಣೆಗಳಲ್ಲಿ ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗುವ ಮುಂಚೂಣಿ ನಾಯಕರ ಬಗ್ಗೆ ಎಲ್ಲಾ ಮಾಧ್ಯಮಗಳು ಸವಿಸ್ತಾರವಾಗಿ, ರೋಚಕವಾಗಿ ವರದಿ ಮಾಡುತ್ತವೆ. ಆದರೆ ಚುನಾವಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಅಷ್ಟು ವರದಿಯಾಗುವುದಿಲ್ಲ. ಒಂದು ರೀತಿಯಿಂದ ಅವರು ಯಾರೂ ಕೇಳದ, ಕಾಣದ, ಗೌರವಿಸದ ಅನಾಮಧೇಯರಾಗಿಯೇ ಉಳಿದುಬಿಡುತ್ತಾರೆ. ನನ್ನ ಈ ನಾಲ್ಕು ದಶಕಗಳ ಚುನಾವಣಾ ಕಾರ್ಯದ ಅನುಭವದಲ್ಲಿ ಮತದಾರರಿಂದ-ಕಾರ್ಯಕರ್ತರಿಂದ ಪ್ರೇರಣೆ ಪಡೆದ ಅನೇಕ ಘಟನೆಗಳು ನಡೆದಿವೆ. ಅತ್ಯಂತ ಪ್ರಾಮಾಣಿಕವಾಗಿ-ನಿಷ್ಠೆಯಿಂದ, ತನ್ನ ಪಕ್ಷದ ಹಾಗೂ ಅಭ್ಯರ್ಥಿಯಗೆಲುವಿಗಾಗಿ ಹಗಲಿರುಳು ದುಡಿದ ಅನೇಕ ಸಮರ್ಪಿತ ಕಾರ್ಯಕರ್ತರನ್ನು ಕಂಡಿದ್ದೇನೆ, ಅವರಿಂದ ಸ್ಫೂರ್ತಿ ಪಡೆದಿದ್ದೇನೆ.
1975ರ ಜೂನ್ 26 ರಿಂದ 1977 ಮಾರ್ಚ್ ತಿಂಗಳವರೆಗೂ ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಒಂದು ರೀತಿಯಿಂದ ಇಡೀ ದೇಶವನ್ನೇ ಸೆರಮನೆಯನ್ನಾಗಿಸಿದ ಕಾಲವದು. 1976 ರಲ್ಲಿ ನಾವೆಲ್ಲರೂ ಸೆರಮನೆಯಲ್ಲಿ ಇದ್ದ ಸಮಯ. ಆಗ ಬೆಂಗಳೂರಿನಿಂದ ವಿಧಾನ ಪರಿಷತ್ ಪದವೀಧರರ ಕ್ಷೇತ್ರದಿಂದ ಚುನಾವಣೆಗಳನ್ನು ಘೋಷಿಸಲಾಯಿತು. ಆಗ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ಸಂಸ್ಥಾ ಕಾಂಗ್ರೆಸ್ ಪಕ್ಷದಿಂದ ದಿವಂಗತ ವಿ. ಎಸ್. ಕೃಷ್ಣಯ್ಯರ್ ಅವರನ್ನು, ಇನ್ನೊಂದು ಸ್ಥಾನಕ್ಕೆ ನಮ್ಮ ಪಕ್ಷದಿಂದ (ಭಾರತೀಯ ಜನಸಂಘದಿಂದ) ಅಂದು ನಮ್ಮೊಡನೆ ಸೆರಮನೆಯ ವಾಸಿಯಾಗಿದ್ದ ವಕೀಲ ದಿವಂಗತ ಗುಂಡಯ್ಯ ಶೆಟ್ಟಿಯವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದೆವು. ಚುನಾವಣಾ ಪ್ರಚಾರಕ್ಕೇ ಆಸ್ಪದವಿಲ್ಲದಿದ್ದಾಗ ಜೈಲಿನಲ್ಲಿದ್ದ ವ್ಯಕ್ತಿಯನ್ನು ನಮ್ಮ ಅಭ್ಯರ್ಥಿಯೆಂದು ನಿರ್ಧರಿಸಿದ್ದೆವು! ಅಭ್ಯರ್ಥಿಯೊಬ್ಬ ನಾಮಪತ್ರ ಸಲ್ಲಿಸಲು ಹೋದಾಗ ಸಾಕಷ್ಟು ಜನ ಬೆಂಬಲಿಗರು ಸಾಥ್ ಕೊಡುವುದನ್ನು ನಾವು ನೋಡಿದ್ದೇವೆ. ಆದರೆ ಅಂದು ಗುಂಡಯ್ಯ ಶೆಟ್ಟರಿಗೆ ಆ ಯೋಗ ಇರಲಿಲ್ಲ. ನಾಮಪತ್ರ ಸಲ್ಲಿಸುವಾಗಲೂ ಬೆಂಗಳೂರಿನಲ್ಲಿ ಹೆಸರುವಾಸಿ ವಕೀಲರಾಗಿದ್ದ ನಮ್ಮ ಅಭ್ಯರ್ಥಿ ಪೋಲಿಸರ ಕೈಕೊಳದೊಂದಿಗೆ ಚುನಾವಣಾಧಿಕಾರಿಗಳ ಬಳಿ ಹೋದ ಪ್ರಸಂಗವದು. ಅವರೊಂದಿಗೆ ಇದ್ದದ್ದು ಅವರ ನಾಮಪತ್ರದ ಸೂಚಕರಾದ ನಾಲ್ಕು ಮಂದಿ ಮಾತ್ರ. ಅಂದು ಪದವೀಧರ ಮತದಾರರನ್ನು ನೊಂದಾಯಿಸುವುದೇ ಬಹಳ ಪ್ರಯಾಸದಾಯಕವಾಗಿತ್ತು. ಜೊತೆಗೆ ವಿರೋಧ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿರುವವರು ಯಾವಾಗ ಬಂಧನಕ್ಕೆ ಒಳಗಾಗುತ್ತಾರೋ ಎಂಬ ಆತಂಕವೇ ಎಲ್ಲೆಡೆ. ಅಂತಹ ದುರ್ಗಮ ಪರಿಸ್ಥಿತಿಯಲ್ಲಿ ನಮ್ಮ ಪ್ರಾಮಾಣಿಕ ಕಾರ್ಯಕರ್ತರು ಇಂದು ಯೋಚಿಸಲೂ ಆಗದಂತಹ ಅದ್ಭುತವಾದ ಧೈರ್ಯದಿಂದ ಚುನಾವಣಾ ಕೆಲಸ ಮಾಡಿ ನಮ್ಮೊಡನೆ ಜೈಲಿನಲ್ಲಿದ್ದ ಗುಂಡಯ್ಯ ಶೆಟ್ಟರನ್ನು ಜಯಗಳಿಸುವಂತೆ ಮಾಡಿಯೇ ಬಿಟ್ಟರು! ಆ ಕಾರ್ಯಕರ್ತರನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಚುನಾವಣಾ ಕಾರ್ಯದಲ್ಲಿ ಒಂದು ಪೈಸೆ ಹಣವನ್ನು ಅಪೇಕ್ಷಿಸದೇ, ಅಂಥ ವಿಷಮಯ ಸನ್ನಿವೇಶಕ್ಕೆ ಹೆದರದೆ ದುಡಿದ ಅಂಥವರನ್ನು ಇಂದು ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ. ಈ ರೀತಿಯ ಅನೇಕ ಘಟನೆಗಳನ್ನು ಕಂಡಿದ್ದರಿಂದಲೇ ಒಳ್ಳೆಯ ರಾಜಕಾರಣ ಕುರಿತು ನನ್ನಲ್ಲಿ ಇನ್ನೂ ವಿಶ್ವಾಸ ಉಳಿದಿದೆಯೆಂದರೆ ತಪ್ಪಾಗದು. ಈಗ ನಡೆದ ಚುನಾವಣಾ ಸಂದರ್ಭದಲ್ಲಿಯೇ ಅನೇಕರು ತಮ್ಮ ಕಾರ್ಯವೈಖರಿಯ ಮೂಲಕ ಸ್ಫೂರ್ತಿ ಕೊಟ್ಟಿದ್ದಾರೆ. ಅಂಥ ಮೂರು-ನಾಲ್ಕು ಘಟನೆಗಳನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ.
ನಮ್ಮ ಪಕ್ಷ ಚುನಾವಣಾ ಸಿದ್ಧತೆಯನ್ನು ಕಳೆದ 6 ತಿಂಗಳಿಂದಲೇ ಪ್ರಾರಂಭಮಾಡಿತು. ಬಿಜೆಪಿಯ ನೇರ ಕಾರ್ಯಕರ್ತರಲ್ಲದವರೂ ಅನೇಕ ವೇದಿಕೆಗಳ ಮೂಲಕ ತಮ್ಮ ಕೊಡುಗೆ ನೀಡಿದ್ದಾರೆ. ನಮೋ ಬ್ರಿಗೇಡ್, ನಮೋ ಅಭಿಮಾನಿಗಳ ಸಂಘ, ನೇಷನ್ ಫಸ್ಟ್, ಫ್ರೆಂಡ್ಸ್ ಆಫ್ ಬಿಜೆಪಿ... ಇಂತಹ ಹತ್ತಾರು ಸಂಘಟನೆಗಳು ದೇಶದಲ್ಲಿ ಬದಲಾವಣೆ ತರುವ ಆಕಾಂಕ್ಷೆಯಿಂದ ಕೆಲಸ ಮಾಡಿವೆ. ಫ್ರೆಂಡ್ಸ್ ಆಫ್ ಬಿಜೆಪಿ ಕಾರ್ಯಕ್ರಮಕ್ಕಾಗಿ ನಾನು ದಾವಣಗೆರೆಗೆ ಹೋದಾಗ ಪರಿಚಯವಾದವರು ಆರ್. ಟಿ. ಅರುಣ್ ಕುಮಾರ್. ಇವರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧಕರಾಗಿ ಅನೇಕ ವರ್ಷ ಸೇವೆಸಲ್ಲಿಸಿದ್ದಾರೆ. ಸಾಂಸ್ಕೃತಿಕ ರಂಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ಸುಮಾರು ಏಳು ವರ್ಷಗಳ ಹಿಂದೆ ಭೀಕರ ವಾಹನ ಅಪಘಾತವೊಂದರಲ್ಲಿ ಜರ್ಝರಿತರಾಗಿ ಆಸ್ಪತ್ರೆ ಸೇರಿದ್ದ ಅರುಣ್ ಅವರಿಗೆ ತಮ್ಮ ಶಾರೀರಿಕ ಸ್ವಾಸ್ಥ್ಯವನ್ನು ಮತ್ತು ಕಳೆದು ಹೋಗಿದ್ದ ನೆನಪಿನ ಶಕ್ತಿಯನ್ನು ವಾಪಸು ಪಡೆಯಲು ಸುಮಾರು ಒಂದು ವರ್ಷವೇ ಬೇಕಾಯಿತು. ಅದೇ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಿ ಸಹ ತೀವ್ರ ಕ್ಷೋಭೆಯನ್ನು ಎದುರಿಸಬೇಕಾಯಿತು. ಆದರೆ ಈ ಹೋರಾಟಗಾರ ಅದನ್ನೆಲ್ಲ ಎದುರಿಸಿ ಜಯಶಾಲಿಯಾಗಿ ಮತ್ತೆ ಕಾರ್ಯತತ್ಪರರಾದರು. ಆದರೆ ಅರುಣ್ ಅವರಿಗೆ ನಾಲ್ಕು ವರ್ಷದ ಹಿಂದೆ ಮಹಾಮಾರಿಯಾದ ಕ್ಯಾನ್ಸರ್ ಕಾಯಿಲೆ ಬಂದೆರಗಿತು. ಅದರ ವಿರುದ್ಧವೂ ಹೋರಾಟ ಮಾಡಿ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಚಿಕಿತ್ಸೆಗಳ ನಂತರ ಜಯದ ನಗೆ ಬೀರಿದರು. ನಾನು ಅಂದು ಹೋದಾಗ ಅವರ ಶಾರೀರಿಕ ಸ್ಥಿತಿಯನ್ನು ನೋಡಿ ಮನಸ್ಸಿಗೆ ಕಸಿವಿಸಿ ಎನಿಸಿತು. ಮನೆಯಲ್ಲಿ ಓಡಾಡಲು ಸಹ ತುಂಬಾ ಶ್ರಮ ಪಡಬೇಕಾದ ಅರುಣ್ ತಮ್ಮೆಲ್ಲ ಕಷ್ಟ-ವೇದನೆಗಳನ್ನು ಮೂಲೆಗೆ ಬಿಸಾಡಿ ಈ ಚುನಾವಣಾ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಮೊಬೈಲ್ ಹಾಗೂ ಲ್ಯಾಪ್ಟಾಪ್ ಮೂಲಕವೇ ಎಲ್ಲಾ ಸ್ನೇಹಿತರನ್ನು ಸಂಘಟಿಸಿ ಸುಮಾರು 300-400 ವ್ಯಕ್ತಿಗಳ ಫ್ರೆಂಡ್ಸ್ ಆಫ್ ಬಿಜೆಪಿ ಸಭೆಯನ್ನು ಭರ್ಜರಿಯಾಗಿಯೇ ಆಯೋಜಿಸಿಬಿಟ್ಟರು. ನರೇಂದ್ರ ಮೋದಿಯವರು ಹಿಂದಿಯಲ್ಲಿ ರಚಿಸಿರುವ ಕವಿತೆ ಅರುಣ್ ಕುಮಾರ್ರಿಂದ ಕನ್ನಡಕ್ಕೆ ತರ್ಜುಮೆಗೊಂಡು ಅಂದಿನ ಕಾರ್ಯಕ್ರಮದ ವೇದಿಕೆಯಲ್ಲಿ ರಾರಾಜಿಸುತ್ತಿತ್ತು. ಬಹಳ ಉತ್ತಮವಾದ ಆಡಿಯೋ ಪ್ರಚಾರ ಗೀತೆಯನ್ನು ಸಂಯೋಜಿಸಿದ್ದಾರೆ. ಕರ್ನಾಟಕದ ಚುನಾವಣೆಗೆ 30 ದಿನಗಳಿದ್ದಾಗ ಪ್ರಾರಂಭಗೊಂಡ ಅರುಣ್ರ 'ಜಾಗೃತಿ ಸಂದೇಶ' ಅಂದಿನಿಂದ ಚುನಾವಣೆ ದಿನದವರೆಗೂ ಒಂದು ದಿನವೂ ತಪ್ಪದಂತೆ ನನ್ನನ್ನು ಒಳಗೊಂಡಂತೆ ರಾಜ್ಯದ ನೂರಾರು ವ್ಯಕ್ತಿಗಳ ಮೊಬೈಲ್ನಲ್ಲಿ ಬೆಳ್ಳಂ ಬೆಳಗ್ಗೆ ಮೂಡಿಬರುತ್ತಿತ್ತು.
ರಾಜಾಜಿನಗರ ಕ್ಷೇತ್ರದಲ್ಲಿ ಮನೆಮನೆಗಳಿಗೆ ಭೇಟಿ ಕೊಟ್ಟಾಗ ಎದುರಾದ ಈ ಅನುಭವ ನನ್ನಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಒಂದು ಮನೆಯ ಒಳಗೆ ಹೋದಾಗ ಒಂದು ವಿಶೇಷ ಹಾಸಿಗೆಯಲ್ಲಿ ಮಲಗಿದ್ದ ಸುಮಾರು 35ರ ಆಸುಪಾಸಿನ ಅಶೋಕ್ ಜೈನ್ರನ್ನು ಭೇಟಿ ಮಾಡಿದೆ. ಕೆಲವು ತಿಂಗಳ ಹಿಂದೆ ಅರಸೀಕೆರೆಯ ಬಳಿ ಹೆದ್ದಾರಿಯಲ್ಲಿ ಬರುವಾಗ ವಿಪರೀತ ವೇಗದಲ್ಲಿದ್ದ ಅವರ ಕಾರು ಮಗುಚಿಬಿದ್ದು ಇವರ ಬೆನ್ನುಮೂಳೆಗೆ ತೀವ್ರ ಧಕ್ಕೆ ಉಂಟಾಯಿತು. ದೀರ್ಘ ಶಸ್ತ್ರಚಿಕಿತ್ಸೆಯ ನಂತರವೂ ಅವರಿಗೆ ಸುಧಾರಿಸಿಕೊಳ್ಳಲಾಗಿಲ್ಲ. ಹಾಸಿಗೆಯ ಮೇಲೆಯೇ ಮಲಗಿಕೊಂಡಿರಬೇಕಾದ ಅವರು ಕತ್ತಿನಿಂದ ಕೆಳಗೆ ಸ್ಪರ್ಷಜ್ಞಾನವನ್ನು ನಿಧಾನವಾಗಿ ಪಡೆಯಬೇಕಿದೆ. ಈಗ ಬಲಗೈ ಚಲನೆ ತುಸು ಮಟ್ಟಿಗೆ ಪ್ರಾರಂಭವಾಗಿದೆ. ಇಂತಹ ಅಶೋಕ ಜೈನ್ ನನಗೆ ಹೇಳಿದ್ದು "ಸರ್, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು. ದೇಶಕ್ಕೆ ಒಬ್ಬ ನಾಯಕನ ಅವಶ್ಯಕತೆ ಇದೆ. ನಾನು ಮತ ಚಲಾಯಿಸಲು ಉತ್ಸುಕನಾಗಿದ್ದೇನೆ. ನನ್ನ ದೇಹ ಸ್ಥಿತಿ ನೋಡಿ ನೀವು ಬೇಜಾರು ಮಾಡಿಕೊಳ್ಳಬೇಡಿ. ದೇಶದ ಭವಿಷ್ಯ ಮುಖ್ಯ. ನಾನು ಮೊಬೈಲ್ ಮೂಲಕವೇ ನನ್ನೆಲ್ಲಾ ಬಂಧು-ಮಿತ್ರರಿಗೆ ನರೇಂದ್ರ ಮೋದಿಯವರ ಪರವಾಗಿ ಮತ ಚಲಾಯಿಸಲು ಮನವಿ ಮಾಡುತ್ತಿದ್ದೇನೆ" ಎಂದು ನಗೆ ಬೀರಿದರು.
ಇನ್ನೊಂದು ಪ್ರದೇಶದಲ್ಲಿ ಹೋಗುತ್ತಿದ್ದಾಗ ರಾಹುಲ್ ದೇಸಾಯಿ ಎಂಬ ಯುವಕ ಸಿಕ್ಕರು. ಅಂದು ಮುಂಜಾನೆ ತಾನೇ ಮತ ಚಲಾಯಿಸುವ ಏಕೈಕ ಉದ್ದೇಶದಿಂದ ಅಮೆರಿಕದಿಂದ ಬಂದಿರುವುದಾಗಿ, ಮತ ಚಲಾಯಿಸಿದ ಮಾರನೇ ದಿನವೇ ವಾಪಸು ತೆರಳುವುದಾಗಿಯೂ ಹೇಳಿದಾಗ ನನ್ನ ಕಣ್ಮುಂದೆ ಆ ಕ್ಷಣ ಹಾದುಹೋಗಿದ್ದು ಬೆಂಗಳೂರಿನಲ್ಲಿಯೇ ಇದ್ದರೂ ಚುನಾವಣಾ ದಿನವನ್ನು ಮನರಂಜನೆ ದಿನವಾಗಿ ಪರಿವರ್ತಿಸಿ, ಮನೆಯಲ್ಲೇ ಕುಳಿತುಕೊಳ್ಳುವವರದ್ದು!
ನಾನು ಈಗ ಹೇಳಲಿರುವ ಘಟನೆಯಂತೂ ನಂಬಲಿಕ್ಕೇ ಕಷ್ಟವಾಗಬಹುದು. ದಾವಣಗೆರೆಯ ನಮ್ಮ ಪಕ್ಷದ ಅಧ್ಯಕ್ಷ ಜೀವನ್ ಮೂರ್ತಿ ಅವರಿಗೆ ನಟರಾಜ್ ಮತ್ತು ಮೋಹನ್ ಎಂಬ ಇಬ್ಬರು ಸಹೋದರರು. ಒಂದು ರೀತಿಯಲ್ಲಿ ಇಡೀ ಕುಟುಂಬವೇ ಚುನಾವಣಾ ಅಭಿಯಾನದಲ್ಲಿ ಕಳೆದ ಕೆಲವು ತಿಂಗಳುಗಳಿಂದ ತೊಡಗಿಸಿಕೊಂಡಿತ್ತು. ಏಪ್ರಿಲ್ 16 ರಂದು, ಅಂದರೆ ಚುನಾವಣೆ ಹಿಂದಿನ ದಿನ ಮೋಹನ್ ಮನೆಯಿಂದ ನಟರಾಜ್ಗೆ ತುರ್ತು ಕರೆಯೊಂದು ಬಂದಿತು. ಅಲ್ಲಿ ಹೋಗಿ ನೋಡಿದಾಗ ಮೋಹನ್ ಆರೋಗ್ಯ ತೀವ್ರ ಗಂಭೀರ ಸ್ಥಿತಿ ತಲುಪಿತ್ತು. ತಕ್ಷಣ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ನಟರಾಜ್, ಮೋಹನ್ರನ್ನು ಆಸ್ಪತ್ರೆಗೆ ಒಯ್ದರೂ ಮೋಹನ್ ಪ್ರಾಣಪಕ್ಷಿ ಹಾರಿಹೋಗಿರುವುದನ್ನು ವೈದ್ಯರು ದೃಢಪಡಿಸಿದರು. ಮಾರನೇ ದಿನವೇ ಚುನಾವಣಾ ದಿನವಾದ್ದರಿಂದ ಈ ಸುದ್ದಿ ತಮ್ಮ ಇಷ್ಟು ತಿಂಗಳ ಪರಿಶ್ರಮವನ್ನು ವ್ಯರ್ಥಮಾಡಿಬಿಡುವ ಚಿಂತೆ ಬಂದಿತು. ಒಂದು ಕ್ಷಣ ಯೋಚಿಸಿದ ನಟರಾಜ್ ಆ ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಮಾರನೇ ದಿನ ಚುನಾವಣೆ ಇರುವುದನ್ನು ನಿವೇದಿಸಿಕೊಂಡು ದೇಹವನ್ನು ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲು ಮನವಿ ಮಾಡಿಕೊಂಡರು. ಹೊರಗಿನ ಲೋಕಕ್ಕೆ ಅದರಲ್ಲಿಯೂ ಜಿಲ್ಲಾ ಅಧ್ಯಕ್ಷರಾದ ಸಹೋದರ ಜೀವನ್ ಮೂರ್ತಿಗೆ ಈ ಸತ್ಯಾಂಶವನ್ನು ತಿಳಿಸದೆ, ಬದಲಿಗೆ ಮೋಹನ್ ಚಿಕಿತ್ಸೆಗೆ ಒಳಪಟ್ಟಿರುವನೆಂದು ತಿಳಿಸಿ ಚುನಾವಣಾ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಂಡರು.
ಶಾರೀರಿಕ ಕೊರತೆಗಳನ್ನೆಲ್ಲ ಲೆಕ್ಕಿಸದೇ ತಾವು ನಂಬಿದ ಕಾರ್ಯಕ್ಕೆ ಸಮರ್ಪಿಸಿಕೊಂಡ ಅರುಣ್ ಕುಮಾರ್, ತಮ್ಮ ದೇಹ ಸ್ಥಿತಿಯನ್ನು ಲೆಕ್ಕಿಸದೇ ತಮ್ಮದೊಂದು ಕೊಡುಗೆ ನೀಡಲು ನಿರ್ಧರಿಸಿದ ಅಶೋಕ್ ಜೈನ್, ಬಹಳ ದೂರದಿಂದ ಬಂದು ಮತದಾನ ಮಾಡಿಹೋದ ರಾಹುಲ್ ದೇಸಾಯಿ, ಕುಟುಂಬದಲ್ಲಾದ ದಾರುಣ ಪ್ರಸಂಗ ಈ ಮಹತ್ವದ ಚುನಾವಣಾ ಕಾರ್ಯದಲ್ಲಿ ಅಡ್ಡಿಯಾಗಬಾರದೆಂದು ಎಚ್ಚರಿಕೆ ವಹಿಸಿದ ನಟರಾಜ್ ಮತ್ತು ಜೀವನ್ ಮೂರ್ತಿ... ಇಂತಹ ನೂರಾರು ಮಂದಿ ಕಾರ್ಯಕರ್ತರನ್ನು, ಹಿತೈಷಿಗಳನ್ನು ಹಾಗೂ ಮತದಾರರನ್ನು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣೆ ನಂತರವೂ ಮರೆಯಬಾರದಲ್ಲವೇ? ಈ ರೀತಿಯ ಬದ್ಧತೆಯುಳ್ಳ ಕಾರ್ಯಕರ್ತರು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ವಿಷಾದದ ಸಂಗತಿ ಎಂದರೆ ಅವರನ್ನು ಯಾರೂ ಗುರುತಿಸುವುದಿಲ್ಲ.
= ಎಸ್. ಸುರೇಶ್ ಕುಮಾರ್
nimmasuresh.2009@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


