ಬೇಜವಾಬ್ದಾರಿಯ ಆಳ ತೋರುವ ಕೊಳವೆಬಾವಿಗಳು

ಲೋಕಸಭೆಯಲ್ಲಿ ಲಿಖಿತ ಉತ್ತರ ಕೊಡುವ ( ಪ್ರ.ಸಂ. 3247. 11ಮೇ. 2014 ಮ. 22- 1935 ಜಯಶ್ರೀ ಬೇನ್ ಪಟೇಲ್ ) ಹಂತ ತಲುಪಿರುವ ಪ್ರಕರಣಕ್ಕೆ ನಮಲ್ಲಿ ಮಾತ್ರ ಇನ್ನೂ ಅಧಿಸೂಚನೆ ಹೊರತು ಪಡಿಸಿದರೆ ಬೇರೆ ದಾರಿಯೇ ಕಾಣುತ್ತಿಲ್ಲ. ಪ್ರಸಕ್ತ ವರ್ಷ ಹೊರತುಪಡಿಸಿದರೆ 2009 ರಿಂದ 175 ಕ್ಕೂ ಹೆಚ್ಚು ಮಕ್ಕಳು ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಆಶ್ಚರ್ಯವೆಂದರೆ ಫೆ. 11, 2010 ರಲ್ಲೇ ಸುಪ್ರಿಂ ಕೋರ್ಟ್ ಇದಕ್ಕೆ ಒಂದು ಸ್ಪಷ್ಟ ಮತ್ತು ಅತೀ ಅಗತ್ಯವಾದ ಆದೇಶವನ್ನು ಹೊರಡಿಸಿದೆ. ಕೊಳವೆ ಬಾವಿಗಳ ದುರಂತವನ್ನು ಹೇಗೆ ತಡೆಗಟ್ಟಬಹುದೆಂದು ಅದು ಸೂಚಿಸಿದೆ. ಆದರೆ ಮರು ಆದೇಶ ಹೊರಡಿಸುವವರೆಗೂ ಯಾವ ಸರ್ಕಾರಗಳೂ ಇದಕ್ಕೆ ಭಾದ್ಯಸ್ಥರಾಗಲೇ ಇಲ್ಲ.
ಅಷ್ಟಕ್ಕೂ ಇಲ್ಲಿಯವರೆಗೂ ಕೊಳವೆ ಬಾವಿಗೆ ಸಿಕ್ಕಿ ಸಾವನ್ನಪ್ಪಿದ ಮಕ್ಕಳು ತೀರ ಬಡವರ್ಗದ ಹಿನ್ನೆಲೆಯವರು ಮತ್ತು ಸಂಪೂರ್ಣ ಹಳ್ಳಿಯ ಪರಿಸರದವರು ಎನ್ನುವುದು ಗಮನಾರ್ಹ. ಯಾವುದೇ ಸ್ಥಿತಿವಂತರ ಮಕ್ಕಳು ಇಲ್ಲಿಯವರೆಗೂ ಕೊಳವೆ ಬಾವಿಗೆ ಬಿದ್ದ ಉದಾಹರಣೆಗಳಿಲ್ಲ. ಹಾಗಾಗಿ ಇದು ಸರ್ಕಾರಕ್ಕೆ ಉಪೇಕ್ಷೆಯ ವಿಷಯವಾಗಿದೆಯೇ?
ಅಸಲಿಗೆ ಕೊಳವೆ ಬಾವಿ ಕೊರೆಯುವ ಮುನ್ನವೇ ಸುಪ್ರೀಂ ಕೋರ್ಟ್ ಆದೇಶ ಅನ್ವಯವಾಗುತ್ತದೆ. 12 ಸೆಪ್ಟೆಂಬರ್ 2013ರ ಅದರ ಮರು ಆದೇಶದ ಪ್ರಕಾರ ಕೊಳವೆ ಬಾವಿಯನ್ನು ಉಪಯೋಗಿಸದೇ ಬಿಟ್ಟ ಪಕ್ಷದಲ್ಲಿ ನಡೆವ ದುರಂತಕ್ಕೆ ಅಯಾ ಕ್ಷೇತ್ರಾಧಿಕಾರಿ ಸೇರಿದಂತೆ ಸ್ಥಳೀಯ ಆಡಳಿತ ಮತ್ತು ಮಾಲೀಕ ಬಾಧ್ಯಸ್ಥರಾಗಿರುತ್ತಾರೆ. ದುರಂತವೆಂದರೆ ತುಂಬಾ ನಿಖರವಾಗಿ ಮೂರು ತನಿಖಾ ವರದಿಗಳು ನೀಡಿದ ವರದಿಯ ಆಧಾರದ ಮೇಲೆ ಈ ನಿಲುವಳಿಯನ್ನು ರೂಪಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದರೂ ನಮಲ್ಲಿ ಅದಕ್ಕೊಂದು ನಿಖರ ಕ್ರಮ ಕೈಗೊಳ್ಳದ ಸರ್ಕಾರ ಈಗ ಪ್ರತಿ ಜಿಲ್ಲಾ ಆಡಳಿತವನ್ನು ಮಣ್ಣು ಅಗೆಯಲು ನಿಲ್ಲಿಸುತ್ತಿದೆ! ಸುಪ್ರೀಂ ಕೋರ್ಟ್ ಹೀಗೊಂದು ಕಠಿಣ ಆದೇಶ ಹೊರಡಿಸುವ ಮೊದಲು ಮೂರು ಪ್ರಮುಖ ವರದಿಗಳನ್ನು ಉಲ್ಲೇಖಿಸಿತ್ತು (Child Rights and Development (CCRD), Social Awareness Society for Youths (SASY), Resource Centre for Participatory Development Studies (RCPDS)..). ಅದರ ಪ್ರಕಾರ ಕೊಳವೆ ಬಾವಿ ಕೊರೆಸುವವರು ಕನಿಷ್ಠ 15 ದಿನ ಮೊದಲು ಸ್ಥಳೀಯ ಆಡಳಿತಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯಬೇಕು.(ಕರ್ನಾಟಕದಲ್ಲಿ ಅಧಿಕೃತ ಮಾಹಿತಿ ನೀಡಿದ ಬಾವಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ)
ಕೊಳವೆ ಬಾವಿ ಕೊರೆಯುವ ಎಜೆನ್ಸಿ ಅಧಿಕೃತ ದಾಖಲೆಯನ್ನು ಆಡಳಿತಾಧಿಕಾರಿಗೆ ಸಲ್ಲಿಸಿರಬೇಕು. ಬಾವಿಯ ಸುತ್ತ ಕನಿಷ್ಠ ಆರು ಅಡಿ ಬೇಲಿಯನ್ನು ಹಾಕಿ ಅದು ಸುಲಭವಾಗಿ ಎಲ್ಲಾ ಕಡೆಯಿಂದಲೂ ಕಾಣುವಂತಿರಬೇಕು ಮತ್ತದು ಕಾಮಗಾರಿ ಮುಗಿಯುವವರೆಗೂ ಲಭ್ಯವಿರಬೇಕು. (ಈ ರೀತಿಯ ಸುರಕ್ಷತೆಯನ್ನು ಕೈಗೊಂಡ ಒಂದೇ ಒಂದು ಕಾಮಗಾರಿಯೂ ನಮ್ಮಲ್ಲಿ ಕಂಡುಬಂದಿಲ್ಲ)
0.50್ಢ0.50್ಢ0.60 ಸೈಜಿನ 2 ಅಡಿ ಎತ್ತರ- ಅಗಲದ ಸಿಮೆಂಟ್ ಬಾಕ್ಸನ್ನು ಕಡ್ಡಾಯವಾಗಿ ನಿರ್ಮಿಸಬೇಕು. (ಯಾವ ಬಾವಿಗೂ ಇದನ್ನು ನಿರ್ಮಿಸಿದ ಉದಾ. ಗಳಿಲ್ಲವೇ ಇಲ್ಲ)
ಅಕಸ್ಮಾತ ಕಾಮಗಾರಿ ಮುಗಿಯದಿದ್ದರೆ ಕೊರೆದ ಭಾಗವನ್ನು ಹಾಗೇ ಬಿಡದೆ ಸೂಕ್ತ ಮುಚ್ಚಳ ಬಳಸಿ ಅಥವಾ ಮಣ್ಣಿನ ದಿಬ್ಬ ನಿರ್ಮಿಸಿ ಮುಚ್ಚಬೇಕು.(ನೀರು ಬಂದಿದ್ದರೆ ಮಾತ್ರ ಹೀಗೆ ಮಾಡಿದ್ದು ನಮ್ಮಲ್ಲಿ ಕಾಣಸಿಗುತ್ತಿದೆ)
ಈ ಎಲ್ಲಾ ಕೆಲಸ ನಡೆಯುವಾಗ ಸ್ಥಳೀಯ ಆಡಳಿತಾಧಿಕಾರಿ ಕೆಲಸ ಪೂರ್ತಿ ಮುಗಿಯುವವರೆಗೂ ಒಬ್ಬ ವ್ಯಕ್ತಿಯನ್ನು ನಿಗಾ ವಹಿಸಲು ಅಲ್ಲಿರುವಂತೆ ನೋಡಿಕೊಳ್ಳತಕ್ಕದ್ದು. (ಒಂದೇ ಒಂದು ಕೊಳವೆ ಬಾವಿಗೂ ಸ್ಥಳೀಯ ಆಡಳಿತ ನಿಗಾ ಅಧಿಕಾರಿಯನ್ನು ನೇಮಿಸಿಲ್ಲ)
ಜಿಲ್ಲಾಧಿಕಾರಿ, ತಾಲೂಕು ದಂಡಾಧಿಕಾರಿ, ಗ್ರಾಮ ಪಂಚಾಯತ್ ಸಿ.ಇ.ಒ, ಯೋಜನಾಧಿಕಾರಿ ಅಥವಾ ಬ್ಲಾಕ್ ಡೆವಲಪ್ ಮೆಂಟ್ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕಿದ್ದು, ಅಕಸ್ಮಾತ ಕೊಳವೆ ಬಾವಿ ವಿಫಲವಾದಲ್ಲಿ ಸೂಕ್ತವಾಗಿ ಮೇಲೆ ತಿಳಿಸಿದಂತೆ ಸಿಮೆಂಟ್ ಕಟ್ಟೆ ನಿರ್ಮಿಸಿ ಅದನ್ನೂ ಕೂಡಲೆ ಮುಚ್ಚುವ ಕೆಲಸ ಮಾಡಿಸಬೇಕು.
ಯಾವುದೇ ಕಾರಣಕ್ಕೂ ಮೇಲ್ಕಂಡ ಕಾನೂನು ಉಲ್ಲಂಘಿಸುವವರ ವಿರುದ್ಧ ಕೂಡಲೆ ಸ್ಥಳೀಯ ಆಡಳಿತ ಜೀವ ಹಾನಿ ಸಂಬಂಧಿತ ಕ್ರಿಮಿನಲ್ ಕೇಸು ದಾಖಲಿಸುವಂತೆ ಸೂಚಿಸಲಾಗಿದೆ.
ಇಲ್ಲಿಯವರೆಗೆ ಒಟ್ಟು ಮೂರು ಕೇಸು ದಾಖಲಾಗಿದ್ದು ಅವೆಲ್ಲವುಗಳಿಗೆ ಸುಲಭ ಜಾಮೀನು ಲಭ್ಯವಿದೆ.
ಆದರೆ ನಮ್ಮಲ್ಲೇನಾಗುತ್ತಿದೆ ನೋಡಿ. ಪ್ರತಿ ಪ್ರಕರಣದಲ್ಲೂ ಜೀವ ಉಳಿಸುವ ಹೋರಾಟಕ್ಕೆ ಕನಿಷ್ಠ ಆರೆಂಟು ಲಕ್ಷ ರುಪಾಯಿಗಳನ್ನು ಖರ್ಚು ಮಾಡುತ್ತಿರುವ ಸರ್ಕಾರಗಳು (ಆಂಧ್ರ ಪ್ರದೇಶ 18, ಮಧ್ಯ ಪ್ರದೇಶ 35, ಗುಜರಾತ್ 27 ಹಾಗೂ ಮಹಾರಾಷ್ಟ್ರ 42- ಕಳೆದ ವರ್ಷ ಅತಿ ಹೆಚ್ಚು ಕೇಸ್ಗಳು ದಾಖಲಾಗಿರುವ ರಾಜ್ಯಗಳು.) ತುಸು ನಿಗಾ ವಹಿಸಿದ್ದರೂ ಸಾಕಿತ್ತು ಇವೆಲ್ಲಾ ಬಡ ಮಕ್ಕಳ ಪ್ರಾಣ ಉಳಿಸಬಹುದಿತ್ತು. ಅವಗಢ ಸಂಭವಿಸಿದಾಗಲೇ ಸರ್ಕಾರ ಎಚ್ಚೆತ್ತು ಜಿಲ್ಲಾಡಳಿತ ಸೇರಿದಂತೆ ಅಂತರಾಜ್ಯ ಪರಿಣಿತರು ದಾಪುಗಾಲಿಡುತ್ತರೆ. ಸಮರೋಪಾದಿಯಲ್ಲಿ ನೆಲ ಬಗೆಯಲು ನಿಂತುಬಿಡುತ್ತಾರೆ. ಬಾವಿ ಕೊರೆಯುವ ಮುನ್ನ ಇಷ್ಟೆಲ್ಲಾ ಮಾಡುವ ಬದಲು ಒಬ್ಬ ಅಧಿಕಾರಿ ನಿಯತ್ತಾಗಿ ನಿಂತು ಬಾವಿಯ ಬಾಯಿ ಮುಚ್ಚಿಸಲು ಆಗೋದಿಲ್ಲವೇ? (ಇದಕ್ಕೂ ಒಬ್ಬ ಮಂತ್ರಿ ಮಹೋದಯರ ಮಕ್ಕಳು ಬಲಿಯಾಗುವವರೆಗೂ ಕಾಯಬೇಕಾ?)
ಇಲ್ಲಿಯವರೆಗಿನ ಕೊಳವೆ ಬಾವಿಗೆ ಬಿದ್ದು ಮಕ್ಕಳು ಮರಣವನ್ನಪ್ಪಿರುವ ಯಾವುದೇ ಘಟನೆಯಲ್ಲಾಗಲ್ಲಿ ಯಾವ ಆಡಳಿತದ ಯಾವುದೇ ಸ್ತರದ ಸಿಬ್ಬಂದಿ/ಅಧಿಕಾರಿಯನ್ನೂ ಜವಾಬ್ದಾರರನ್ನಾಗಿಸಿಲ್ಲ. ಹೀಗಾದಾಗ ಕಾನೂನು ಜಾರಿಯಾಗುವುದಾದರೂ ಹೇಗೆ?
ಅಗತ್ಯವಿರುವ ಕಠಿಣ ಕಾನೂನು ಪಾಲನೆಯನ್ನು ಜಾರಿಗೊಳಿಸುವ ಬದಲಾಗಿ ಮತ್ತೆ ಕರ್ನಾಟಕ ಅಂತರ್ಜಲ ಕಾಯಿದೆ-2012 ನ್ನು ಮೊನ್ನೆ ಜೂನ್ನಲ್ಲಿ ಕರ್ನಾಟಕ ಸರ್ಕಾರ ಜಾರಿ ಮಾಡಿದೆ. ಕುಚ್ಯೋದ್ಯವೆಂದರೆ ನಮ್ಮಲ್ಲಿ ಜಾರಿಯಾದ ಕಾಗದದ ಆದೇಶಗಳು ಎಷ್ಟು ಸರಿಯಾಗಿ ಪಾಲಿಸಲ್ಪಡುತ್ತವೆ ಎನ್ನುವುದನ್ನು ನೋಡಬೇಕಾದವರು ಬಾವಿಗಳಿಗಿಂತ ಕೆಳಗಿದ್ದಾರೆ!
ಆದರೆ ಅಗತ್ಯವಿರುವುದು ಕೇವಲ ಕೊರೆದು ಬಿಟ್ಟ ಬಾವಿಯ ಬಾಯಿ ಮುಚ್ಚುವಂತೆ ನೋಡಿಕೊಳ್ಳುವ ಸಣ್ಣ ಪ್ರಾಮಾಣಿಕ ಕೆಲಸವೇ ಹೊರತಾಗಿ ಮಕ್ಕಳು ಬಾವಿಗೆ ಬಿದ್ದ ಮೇಲೆ ಖರ್ಚು ಮಾಡುವ ಆರೆಂಟು ಲಕ್ಷ, ಪರಿಹಾರ ಧನ ಮತ್ತು ವಿಧಾನಸಭೆಯಲ್ಲಾಗುವ ಜಗಳಗಳಲ್ಲ. ಇಂಥ ಕನಿಷ್ಠ ಮಾನವೀಯ ಕಾರ್ಯವನ್ನೂ ಸರ್ಕಾರಕ್ಕೆ ಸೂಕ್ತವಾಗಿ ನಿರ್ವಹಿಸಲಾಗುತ್ತಿಲ್ಲ ಎಂದ ಮೇಲೆ ಬಡ ಮಕ್ಕಳನ್ನು ದೇವರೇ ರಕ್ಷಿಸಬೇಕಷ್ಟೇ.
-ಸಂತೋಷಕುಮಾರ ಮೆಹೆಂದಳೆ, ಕೈಗಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


