ಸೋನಿಯಾ ಸೊಕ್ಕನ್ನು ಪರಿಚಯಿಸಿದ ನಟವರ್!

ಒಂದಂತೂ ಸತ್ಯ. ನಟವರ್ ಸಿಂಗ್ ಅವರ ಆತ್ಮಕತೆ 'ಒನ್ ಲೈಫ್ ಈಸ್ ನಾಟ್ ಇನಫ್' ನಮ್ಮನ್ನು ಅಷ್ಟೇನೂ ಚಕಿತಗೊಳಿಸಿಲ್ಲ. ನೆಹರು-ಗಾಂಧಿ ದರ್ಬಾರ್ನಲ್ಲಿ ದೀರ್ಘಕಾಲದವರೆಗೆ ದುಡಿದು, ನಂತರ ಆಹಾರಕ್ಕಾಗಿ ತೈಲ ಹಗರಣದಲ್ಲಿ ಭಾಗಿಯಾಗಿ ನಿರ್ದಾಕ್ಷಿಣ್ಯವಾಗಿ ಪಕ್ಷದಿಂದ ಉಚ್ಚಾಟಿತನಾದ ರಾಜಕಾರಣಿಯ ಈ ಪುಸ್ತಕದಲ್ಲಿ, ರಾಜಕೀಯ ಪಂಡಿತರಿಗೆ ಗೊತ್ತಿರದ ಸಂಗತಿಗಳೇನೂ ಇಲ್ಲ.
ಗಾಂಧಿ ಕುಟುಂಬದ ಮೇಲೆ ಎಷ್ಟು ಬೆಳಕು ಬೀಳುತ್ತದೋ ಅಷ್ಟರ ಮಟ್ಟಿಗೆ ಅದು ಸಾಮಾನ್ಯವಾಗಿ ಗೋಚರಿಸುತ್ತಾರೆ. ಏಕೆಂದರೆ ನಿಜಜೀವನದಲ್ಲಿ ಅವರು ಇರುವುದೇ ಹಾಗೆ. ಅವರೇನೂ ನಿಜವಾದ ಅರಸರೇ ಅಥವಾ ಸಾಧಕರೇ? ಸತ್ಯವೇನೆಂದರೆ ಸಾರ್ವಜನಿಕರಿಗೆ 'ಹೀರೋಗಳ' ಅವಶ್ಯಕತೆಯಿರುತ್ತದೆ. ಆ ಅವಶ್ಯಕತೆಯೇ ಗಾಂಧಿ ಕುಟುಂಬಕ್ಕೆ ಅವಕಾಶವಾಗಿ ಬಂದಿತು. ಮತ್ತು ಆ ಕುಟುಂಬದ ಸದಸ್ಯರು ತಾವು ಅರ್ಹರಲ್ಲದ ಸ್ಥಾನದಲ್ಲಿ ಕುಳಿತುಬಿಟ್ಟರು. ಅದೃಷ್ಟವಶಾತ್, ಇದುವರೆಗೂ ಆ ಕುಟುಂಬ ಧರಿಸಿದ್ದ ಮುಖವಾಡ ಜನಪ್ರಿಯತೆ ಕಳೆದುಕೊಂಡು ಅಜಮಾಸು ಹರಿದುಹೋಗಿದೆ. ನಟವರ್ರಂಥ ವ್ಯಕ್ತಿಗಳು ಅಳಿದುಳಿದ ಮುಖವಾಡವನ್ನು ಇನ್ನಷ್ಟು ಹರಿದುಹಾಕುತ್ತಿದ್ದಾರಷ್ಟೆ.
ಪ್ರಕಟಿತ ಆಯ್ದ ಬರಹಗಳಲ್ಲಿ ನಾನು ಆಸಕ್ತಿಯಿಂದ ಹುಡುಕುತ್ತಿದ್ದ ಸಂಗತಿಯೆಂದರೆ, ಅದ್ಹೇಗೆ ನಟವರ್ ಸಿಂಗ್ ಹೆಸರು ಪೌಲ್ ವಾಕರ್ ವರದಿಯಲ್ಲಿ(ಆಹಾರಕ್ಕಾಗಿ ತೈಲ ಹಗರಣದ ಕುರಿತು) ಕಾಣಿಸಿಕೊಂಡಿತು ಎನ್ನುವುದಾಗಿತ್ತು. ಆದರೆ ಕಥನಕುಶಲಿ ಸಿಂಗ್ ನಮ್ಮ ಆಸಕ್ತಿ ತಣಿಸುವ ಮಾಹಿತಿ ನೀಡುವುದರಿಂದ ತಪ್ಪಿಸಿಕೊಂಡಿದ್ದಾರೆ. ಅವರೂ ಕೂಡ ಆಹಾರಕ್ಕಾಗಿ ತೈಲ ಹಗರಣದ non-contractual beneficiary ಆಗಿದ್ದರು ಎನ್ನುವುದನ್ನು ವಾಕರ್ ವರದಿ ಹೇಳಿತ್ತು. ಈ ವರದಿ 2005ರಲ್ಲಿ ಬಹಿರಂಗಗೊಂಡು, ನಟವರ್ ತಮ್ಮ ಅಧಿಕಾರ ಕಳೆದುಕೊಂಡಿದ್ದರು. ಅದಾದ ಕೆಲ ಸಮಯದ ಬಳಿಕ ಅವರು ಕಾಂಗ್ರೆಸ್ನಿಂದ ಹೊರಬೀಳಬೇಕಾಯಿತು.
ಆ ಪುಸ್ತಕ ಇನ್ನೂ ನಮ್ಮ ಕೈ ಸೇರಿಲ್ಲವಾದ್ದರಿಂದ ಆ ತನಿಖಾ ವರದಿಯಲ್ಲಿ ಏಕೆ ಮತ್ತು ಹೇಗೆ ತಮ್ಮ ಹೆಸರು ಸೇರಿಕೊಂಡಿತು ಎನ್ನುವುದನ್ನು ಅವರು ಹೇಳಿದ್ದಾರೋ ಇಲ್ಲವೋ ತಿಳಿಯದು. ಆದರೆ ಆ ವರದಿಯಲ್ಲಿ ತಮ್ಮ ಜೊತೆಗೆ ಕಾಂಗ್ರೆಸ್ ಪಕ್ಷದ ಹೆಸರೂ ಏಕೆ ಸೇರಿಕೊಂಡಿತು ಎನ್ನುವ ಬಗ್ಗೆ ವಿವರಿಸಿರುವುದಾಗಿ ಅವರು ಹೇಳುತ್ತಿದ್ದಾರೆ. ಒಂದು ವೇಳೆ ವಾಕರ್ ವರದಿಯಲ್ಲಿ ನಟವರ್ ಹೆಸರು ಅನ್ಯಾಯವಾಗಿ ಸೇರಿಕೊಂಡಿದೆ ಎಂದಾಗಿದ್ದರೆ, ಅದೇ ಹಗರಣದಲ್ಲಿ ಎಐಸಿಸಿಯೂ ಫಲಾನುಭವಿಯಾಗಿರುವುದರಿಂದ, ಅದರಲ್ಲಿ ಯಾರು ಬೆಲೆ ತೆರಬೇಕಾಯಿತು ಎನ್ನುವುದೂ ನಮಗೆ ತಿಳಿಯಬೇಕಿದೆ.
ಅಥವಾ ಕಾಂಗ್ರೆಸ್ನ ಪರಂಪರೆಯಲ್ಲಿ ರಾಣಿ ಎಂದಿಗೂ ತಪ್ಪುಮಾಡಲಾರಳೇ? 'ನಟವರ್ರನ್ನು ಕಿತ್ತೆಸೆಯೋಣ' ಎಂದು ಆಜ್ಞೆ ನೀಡುವುದಕ್ಕೂ ಮುನ್ನ, ಸೇನಿಯಾ ಗಾಂಧಿ, "ಏಕೆ ಆ ಪಟ್ಟಿಯಲ್ಲಿ ತನ್ನ ಹಿಡಿತಲ್ಲೇ ಇರುವ ಕಾಂಗ್ರೆಸ್ ಪಕ್ಷದ ಹೆಸರೂ ಸೇರಿಕೊಂಡಿತು" ಎನ್ನುವುದನ್ನು ತನ್ನ ಸೇವಕರಿಗೆ ತಿಳಿಸಿ ಹೇಳಲಿಲ್ಲ? ಆ ಹಗರಣದಲ್ಲಿ ಎಐಸಿಸಿ non-contractual beneficiary ಎಂದು ಎರಡೂ ಬಾರಿ ಬಹಿರಂಗಗೊಂಡಿತು. ಆದರೂ ಬಿಜೆಪಿ ಮತ್ತು ಮಾಧ್ಯಮಗಳ ವೈಫಲ್ಯದಿಂದಾಗಿ ಎಐಸಿಸಿಗೆ ಈ ಬಗ್ಗೆ ಉತ್ತರಿಸುವ ಪ್ರಮೇಯವೇ ಎದುರಾಗಲಿಲ್ಲ. ಅಥವಾ ರಿಲಯನ್ಸ್ ಉದ್ಯಮ ಸಮೂಹವೂ ತಪ್ಪಿತಸ್ಥರ ಸ್ಥಾನದಲ್ಲಿದೆ ಎನ್ನುವ ಕಾರಣಕ್ಕೆ ಈ ವಿಷಯವನ್ನು ಎಲ್ಲರೂ ತೆಪ್ಪಗಾಗಿಬಿಟ್ಟರೇ?
ಇವೆಲ್ಲದರ ನಡುವೆ ಪ್ರಕಟವಾಗಿರುವ ಆತ್ಮಕತೆಯ ಆಯ್ದಭಾಗಗಳಲ್ಲಿ..ಅದರಲ್ಲೂ ಮುಖ್ಯವಾಗಿ ಸೋನಿಯಾ ಗಾಂಧಿಯವರ ಕೀಳುಮಟ್ಟದ ಗುಣವನ್ನು, ಅಹಂಕಾರವನ್ನು ತೋರಿಸುವ ಸಾಲುಗಳನ್ನು ಇಲ್ಲಿ ಗಮನಿಸಬೇಕು:
ಝಾಂಬಿಯನ್ ಅಧ್ಯಕ್ಷ ಕೆನೆತ್ ಕೌಂಡಾ ಎಐಸಿಸಿಯ ಆಹ್ವಾನದ ಮೇರೆಗೆ ದೆಹಲಿಗೆ ಬಂದಾಗ ಅವರನ್ನು ಲಲಿತ್ ಸೂರಿಯ ಹೊಟೆಲ್ನಲ್ಲಿ ಇಳಿಸಲಾಯಿತಂತೆ. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಸೋನಿಯಾ ನಟವರ್ರನ್ನು ಕರೆದು ಕೆನೆತ್ರನ್ನು ಸೂರಿ ಹೊಟೆಲ್ನಲ್ಲಿ ಇಳಿಸದಿರಲು ಹೇಳಿದರಂತೆ. ಆದರೆ ಅದಾಗಲೇ ಕೆನೆತ್ ಹೊಟೆಲ್ಗೆ ಬಂದು ತಮ್ಮ ರೂಮು ಸೇರಿಯಾಗಿತ್ತು. ಅವರನ್ನು ಬೇರೆ ಹೊಟೆಲ್ಗೆ ಕಳುಹಿಸಲು ನಟ್ವರ್ ಪ್ರಯತ್ನಪಟ್ಟರೂ, ಕೆನೆತ್ ಮಾತ್ರ "ನನಗೆ ಸೂರಿ ಹೊಟೆಲ್ ಸೂಕ್ತವಾಗಿದೆ, ಇಲ್ಲೇ ತಂಗುತ್ತೇನೆ" ಎಂದರಂತೆ. ಆದರೆ ಈ ಬಾರಿ ಸೋನಿಯಾರಿಂದ ನಟವರ್ಗೆ ತುಸು ಕಠೋರವಾಗಿಯೇ ಆಜ್ಞೆಯಾಯಿತು. "ಏನೇ ಆಗಲಿ ಕೆನೆತ್ ಮಾತ್ರ ಸೂರಿ ಹೊಟೆಲ್ನಲ್ಲಿರಬಾರದು"! ಕೊನೆಗೆ ಸೋನಿಯಾ ಮಾತೇ ನಡೆದು, ಕೆನೆತ್ ನಡುರಾತ್ರಿ ಇನ್ನೊಂದು ಹೊಟೆಲ್ಗೆ ಹೋಗಬೇಕಾಯಿತಂತೆ. ಇದರಿಂದ ಉಗ್ರರಾಗಿದ್ದ ಕೆನೆತ್ ಪ್ರತಿಭಟಿಸುತ್ತಲೇ ನಟವರ್ಗೆ ಹೇಳಿದರಂತೆ: "ಆದರೆ ನನಗೆ ಸೂರಿಯ ಪರಿಚಯ ಮಾಡಿಕೊಟ್ಟವರೇ ರಾಜೀವ್ ಗಾಂಧಿ...'
ಲಲಿತ್ ಸೂರಿಯ ವೃತ್ತಿ ಜೀವನದ ಏಳಿಗೆಯ ಬಗ್ಗೆ ಪರಿಚಯವಿದ್ದವರಿಗೆ, ಸೋನಿಯಾ ಏಕೆ ಅವರ ಬಗ್ಗೆ ಅಷ್ಟೊಂದು ಮಾತ್ಸರ್ಯ ಪ್ರದರ್ಶಿಸಿದರು ಎನ್ನುವುದು ತಿಳಿಯುತ್ತದೆ. ಚಿಕ್ಕ ವ್ಯಾಪಾರಿಯಾಗಿದ್ದ ಲಲಿತ್ ಸೂರಿ ಅದ್ಹೇಗೋ ಪ್ರಯತ್ನಪಟ್ಟು ಗಾಂಧಿ ದರ್ಬಾರ್ನ ಆಂತರಿಕ ವಲಯದಲ್ಲಿ ತೂರಿಕೊಂಡುಬಿಟ್ಟರು. ಒಮ್ಮೆ ಅವರು ಅಲ್ಲಿಗೆ ಸೇರಿದ ನಂತರ ಬಲಿಷ್ಠರಾಗುತ್ತಲೇ ಸಾಗಿದರು. ಬೃಹತ್ ಹೊಟೆಲ್ ಉದ್ಯಮದ ಒಡೆಯರಾಗಿಬಿಟ್ಟರು. ಸೂರಿ ಈಗ ಇಲ್ಲವಾದರೂ, ಆ ಹೊಟೆಲ್ಗಳಿಗೆಲ್ಲ ಅವರದ್ದೇ ಹೆಸರಿದೆ.
ಗಾಂಧಿ ಕುಟುಂಬದ ಸಂಪರ್ಕದಿಂದಾಗಿ ಬೆಳೆದ ಸೂರಿ, ತಾವು ಲೂಟಿ ಮಾಡಿದ ಹಣವನ್ನು ಆ ಕುಟುಂಬದೊಂದಿಗೆ ಹಂಚಿಕೊಳ್ಳಲಿಲ್ಲ ಎನ್ನುವುದೇ ಮೇಲೆ ತಿಳಿಸಿದ ಮತ್ಸರಪೂರಿತ ಘಟನೆಗೆ ಕಾರಣವೇ? ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟವೇ. ಆದರೆ ಸೂರಿ ಮಾತ್ರ ಸೋನಿಯಾರ ಪ್ರತೀಕಾರ ಮನೋಭಾವದಿಂದ ಎಷ್ಟು ಹೆದರಿದ್ದರೆಂದರೆ, ರಕ್ಷಣೆ ಪಡೆಯುವುದಕ್ಕಾಗಿ ಹೇಗೋ ತಿಣುಕಾಡಿ ರಾಜ್ಯಸಭಾ ಸದಸ್ಯರಾದರು.
ಮೇಲಿನ ಘಟನೆಯಲ್ಲಿ ಸೋನಿಯಾರನ್ನು ನಿರ್ದಯಿ ಎಂದು ಕರೆಯುವುದು ತಪ್ಪಾದೀತು. ಏಕೆಂದರೆ ಅದು ನಿರ್ದಯೆಯಲ್ಲ. ನೇರವಾಗಿ ಅಥವಾ ಪರೋಕ್ಷವಾಗಿ ಸಿಗುವ ಅಧಿಕಾರದ ದುರುಪಯೋಗ ಮಾಡುವ ಮೂಲಕ ಬರುವ ಅಹಂಕಾರ ಅಥವಾ ಸಂಪೂರ್ಣ ಸೊಕ್ಕು. ಆಕೆಯಲ್ಲಿನ ನಿರ್ದಯ ಗುಣ 'ಕೆಲಸ ಮಾಡದ' ಪಕ್ಷದ ಕಾರ್ಯಕರ್ತರಿಗೆ ಶತ್ರುವಾದರೆ. ಆಕೆಯ ಸೊಕ್ಕು, ಭ್ರಷ್ಟರಿಗೆ ಆಶ್ರಯ ನೀಡುವ ವರವಾಗಿದೆ(ಅವರು ಗುಲಾಮರಂತೆ ವರ್ತಿಸಿದರೆ ಮಾತ್ರ). ಸೂರಿ ಪ್ರಕರಣದಲ್ಲಿ ನಮಗೆ ಕಾಣಿಸುವುದು ಸೋನಿಯಾರ ಸೊಕ್ಕು: "ನಮಗೆ ವಂಚಿಸಿದ ಮೇಲೆಯೂ ಈ ವ್ಯಕ್ತಿ ಹೇಗೆ ಸುಖದಿಂದಿದ್ದಾನೆ?" ಎನ್ನುವ ಸೊಕ್ಕದು!
ಒಂದು ವೇಳೆ ಸೋನಿಯಾರಿಗೆ ಏನೇ ಆದರೂ ತಮ್ಮ ಕುಟುಂಬದ ಗೌರವ ಉಳಿಸಬೇಕು ಎನ್ನುವ ಇರಾದೆ ಇದ್ದಿದ್ದರೆ ನಿಸ್ಸಂಶಯವಾಗಿಯೂ ತಮ್ಮ ಇಟಾಲಿಯನ್ ಗೆಳೆಯ ಒಟ್ಟಾವಿಯೋ ಕ್ವಾಟ್ರೋಚಿಯನ್ನು(ಬೋಫೋರ್ಸ್ ಹಗರಣದ ವಿಷಯವಾಗಿ) ಭಾರತದ ಮುಂದೆ ಮಂಡಿಯೂರಿಸಿ ಉತ್ತರದಾಯಿಯಾಗಿಸುತ್ತಿದ್ದರು. ಆದರೆ ಗಾಂಧಿ ಕುಟುಂಬದ ವಾರಸುದಾರಿಕೆ ಸೋನಿಯಾಗೆ ಬಂದ ತಕ್ಷಣ ಹೇಗೆ ಕ್ವಾಟ್ರೋಚಿ ಭಾರತಕ್ಕೆ ಆಜ್ಞೆ ನೀಡತೊಡಗಿದನೋ ನೆನಪಿಸಿಕೊಳ್ಳಿ? ಹಾಗಾಗೇ ಈ ಸಂಬಂಧದಲ್ಲಿ ಒಂದೇ ರಾಷ್ಟ್ರದವರು ಎನ್ನುವ ಸ್ನೇಹಪರತೆಗಿಂತ, ಹಣದ ವಹಿವಾಟು ಹೆಚ್ಚಿಗೆ ನಡೆದಿದೆ ಎಂದು ಅನುಮಾನವಾಗುತ್ತದೆ.
ನಟವರ್ ಅಂತೂ ತಮ್ಮ ಪಾಲಿನ ಏಟು ಕೊಟ್ಟಿದ್ದಾರೆ. ಆದರೆ ಇದ್ದುದನ್ನು ಇದ್ದಂತೆಯೇ ಹೇಳಿಲ್ಲ. ದೇಶವನ್ನು ಮುನ್ನಡೆಸುವಲ್ಲಿ ರಾಜೀವ್ ಗಾಂಧಿಗಿದ್ದ ಅನನುಭವವಾಗಲಿ ಅಥವಾ ಯಾವ ಅರ್ಹತೆಯೂ ಇಲ್ಲದ ರಾಹುಲ್ ಮತ್ತು ಪ್ರಿಯಾಂಕಾರನ್ನು ಸೋನಿಯಾ ಮುಂದೆ ತಂದ ವಿಷಯವಾಗಲಿ...ಈ ಬಗ್ಗೆ ಆತ್ಮಕತೆ ಬೆಳಕು ಚೆಲ್ಲಿದಂತಿಲ್ಲ. ನಟವರ್ ಇನ್ನೂ ಉತ್ತಮವಾಗಿ ಬರೆಯಬಹುದಿತ್ತೇನೋ?
ಒಂದು ವೇಳೆ ತಾವೂ ಆತ್ಮಕತೆ ಬರೆದು ಉತ್ತರಿಸುವುದಾಗಿ ಹೇಳಿರುವ ಸೋನಿಯಾರ ಮಾತು ನಿಜವೇ ಆದರೆ ನಾವು ನಟವರ್ಗೆ ಋಣಿಯಾಗಿರಲಿದ್ದೇವೆ. ಆದರೆ ಸೋನಿಯಾರ ಆತ್ಮಕತೆಯನ್ನು ಬರೆಯುವವರ್ಯಾರು? ಅವರ ಸ್ನೇಹಿತ, ಪತ್ರಕರ್ತ ಸುಮಿತ್ ದುಬೆಗೆ ಈ ಕೆಲಸ ವಹಿಸಬಹುದೇನೋ? ಒಂದು ವೇಳೆ ಸೋನಿಯಾ ಆತ್ಮಕತೆ ಬೆಳಕು ಕಂಡಿತೆಂದರೆ, ಭಾರತದ ರಾಜಕೀಯ ಇನ್ನಷ್ಟು ಸಂಪನ್ನವಾಗುತ್ತದೆ. ಪಶ್ಚಿಮ ರಾಷ್ಟ್ರಗಳ ಪ್ರಭಾವಿ ರಾಜಕಾರಣಿಗಳು ಅತ್ಯಂತ ರಹಸ್ಯ ಸಂಗತಿಗಳನ್ನು ತಮ್ಮ ಆತ್ಮಕತೆಯ ಮೂಲಕ ಬಹಿರಂಗಗೊಳಿಸುತ್ತಾರೆ. ಎಲ್.ಕೆ. ಆಡ್ವಾಣಿಯವರನ್ನು ಬಿಟ್ಟು ನಮ್ಮಲ್ಲಿ ಅಂಥ ಧೈರ್ಯವನ್ನು ತೋರಿಸಿದವರ್ಯಾರೂ ಇಲ್ಲ. ಬಹುಶಃ ಇದಕ್ಕೆ ಕಾರಣ, ನಮ್ಮ ಬಹುತೇಕ ರಾಜಕಾರಣಿಗಳು ಶಾಲೆಯನ್ನೂ ಮುಗಿಸದೇ ಹೊರಬಿದ್ದವರು. ಎಷ್ಟೋ ಜನರಿಗೆ ಒಂದು ವಾಕ್ಯವನ್ನೂ ಸರಿಯಾಗಿ ಬರೆಯಲುಬಾರದು. ಸತ್ಯವೇನೆಂದರೆ, ಅವರ ಜೀವನಿಂದ ಇತಿಹಾಸಕ್ಕೆ ಲಾಭವಾಗುವಂಥ ಸಂಗತಿಗಳು ಇರುವುದೇ ಇಲ್ಲ!
-ವೀರೇಂದ್ರ ಕಪೂರ್
virendra1946@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


