ಹುಣ್ಣು ಕೆರೆಯುವ ಕಾಯಕ
ದೇಶದಲ್ಲಿ ಹಿಂಸೆ - ವಿವಾದಗಳಿಲ್ಲದಿದ್ದರೆ ರಾಜಕಾರಣಿಗಳಿಗೆ ಕೆಲಸವೇ ಇರುವುದಿಲ್ಲ ಎಂಬ ಮಾತು ಸತ್ಯಕ್ಕೆ ತೀರಾ ಹತ್ತಿರ ಅನ್ಸುತ್ತೆ. ಒಂದು ರಾಜಕೀಯ ಪಕ್ಷ ಅಥವ ಒಬ್ಬ ರಾಷ್ಟ್ರೀಯ ನಾಯಕ ಎಂದೋ ನಡೆದ ಜನಾಂಗೀಯ ಕಲಹವನ್ನೋ , ಹತ್ಯಾಕಾಂಡವನ್ನೋ ನೆನಪಿಸುವುದರ ಮೂಲಕ ದೇಶದ ಜನರಿಗೆ ಯಾವ ಸಂದೇಶವನ್ನು ಕೊಡಬೇಕೆಂಬ ಪ್ರಜ್ಞೆ ಇಲ್ಲದಿದ್ದರೆ ಇತಿಹಾಸದಲ್ಲಿ ಘಟಿಸಿದಂತಹ ಘೋರ ಹಿಂಸೆ ಮತ್ತೆ ಜೀವ ಪಡೆದುಕೊಳ್ಳಬಹುದು. ಮತ್ತೆ ಜೀವಹಿಂಸೆ, ಹಿಂಸೆಗೆ ಪ್ರತಿಹಿಂಸೆ ಇದು ಹೀಗೇ ಪುನರಾವರ್ತನೆಯಾದರೆ ಯಾವ ದೇಶದ ಜನ ನೆಮ್ಮದಿಯಿಂದ ಬದುಕಲು ಸಾಧ್ಯ? ರಾಜಕಾರಣದ ಅಗ್ನಿಕುಂಡಕ್ಕೆ ಮುಗ್ಧ ಜನರ ಪ್ರಾಣಾಹುತಿಯಾಗುತ್ತಿರುವಾಗ ಯಾರಾದರೂ ತಮ್ಮದೊಂದು ಅಭಿವೃದ್ಧಿ ಹೊಂದಿದ ದೇಶ ಎಂದು ಹೇಗೆ ಹೇಳಬಲ್ಲರು? ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ಕಾಂಗ್ರೆಸ್ ಪದೇ ಪದೆ ಗೋದ್ರೋತ್ತರ ದುರ್ಘಟನೆಯನ್ನು ನೆನಪಿಸಿ ನರೇಂದ್ರ ಮೋದಿಯವರನ್ನು ದೋಷಿಯೆಂಬಂತೆ ಬಿಂಬಿಸಲು ಯತ್ನಿಸಿದರೆ ಮೋದಿ ಹೇಗೆ ತಾನೆ ಸುಮ್ಮನುಳಿದಾರು? ಇಂದಿರಾ ಗಾಂಧಿಯವರ ಹತ್ಯೆಯ ನಂತರ 1984ರಲ್ಲಿ ಸಿಖ್ ಹತ್ಯಾಕಾಂಡ ನಡೆದಾಗ ರಾಜೀವ್ ಗಾಂಧಿಯವರು 'ದೊಡ್ಡ ಮರವೊಂದು ಉರುಳಿದಾಗ ಅಕ್ಕಪಕ್ಕದ ಭೂಮಿ ಕಂಪಿಸುವುದು ಸಹಜ' ಎಂಬ ಹೇಳಿಕೆ ನೀಡಿದ್ದರ ಔಚಿತ್ಯವೇನು ಎಂದು ಮೋದಿ ಮಾತ್ರವಲ್ಲ ಈ ದೇಶದ ಸಾಮಾನ್ಯ ಪ್ರಜೆಯೂ ಪ್ರಶ್ನಿಸಬಹುದು. ಗಾಜಿನ ಮನೆಯಲ್ಲಿದ್ದವರು ಅನ್ಯರ ಮನೆಗೆ ಕಲ್ಲು ತೂರಬಾರದಲ್ಲವೇ?
ಸುದ್ದಿವಾಹಿನಿಯೊಂದು ರಾಹುಲ್ ಗಾಂಧಿಯವರ ಸಂದರ್ಶನ ನಡೆಸುತ್ತಿದ್ದಾಗ 1984 ರ ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲಾಯಿತು. ಆಗ ರಾಹುಲ ಗಾಂಧಿಯವರು 1984ರ ಘಟನೆಯಲ್ಲಿ ಕೆಲವು ಕಾಂಗ್ರೆಸ್ಸಿಗರು ಶಾಮೀಲಾಗಿರಬಹುದೆಂದು ಹೇಳಿಕೆ ನೀಡಿದರೂ ಶಾಮೀಲಾದವರ ಹೆಸರನ್ನು ಬಾಯ್ಬಿಡಲಿಲ್ಲ. ಇದು ಮಾಧ್ಯಮಗಳಲ್ಲಿ ಪ್ರಸಾರವಾದ ಮರುದಿನವೇ ದೆಹಲಿಯಲ್ಲಿ ಸಿಖ್ ಸಮುದಾಯದವರು ಜಾಗೃತರಾಗಿ ಹತ್ಯಾಕಾಂಡಕ್ಕೆ ಸಂಬಂಧಿಸಿದವರನ್ನು ಶಿಕ್ಷಿಸುವಂತೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿಂಸಾರೂಪವನ್ನು ಪಡೆದುಕೊಂಡಿದ್ದರೆ ಅದಕ್ಕೆ ಹೊಣೆ ಯಾರಾಗಬೇಕಿತ್ತು? ಇಂತಹ ಎಡವಟ್ಟುತನ ರಾಹುಲ್ ಗಾಂಧಿಯವರಿಗೆ ಬೇಕಿತ್ತೆ? ಈ ರೀತಿಯ ಹೇಳಿಕೆ ನೀಡುವುದರಿಂದಾಗಬಹುದಾದ ಪರಿಣಾಮವನ್ನು ಅರ್ಥಮಾಡಿಕೊಳ್ಳದ ಅವರು ದೇಶದ ಹಿತಾಸಕ್ತಿ ಎಂದರೇನೆಂಬುದನ್ನು ಅರ್ಥಮಾಡಿಕೊಳ್ಳಬಲ್ಲರೇ? ಗೋದ್ರಾ ಮತ್ತು ಆ ನಂತರದ ಘಟನೆಯೇ ಆಗಲಿ, ಸಿಖ್ ಹತ್ಯಾಕಾಂಡವೇ ಆಗಲಿ ಇವುಗಳನ್ನು ಯಾವ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಒಮ್ಮೆ ಆದ ಹುಣ್ಣನ್ನು ಮತ್ತೆ -ಮತ್ತೆ ಕೆರೆದುಕೊಂಡರೆ ಗಾಯ ಮಾಯುವುದು ಯಾವಾಗ? ತಲೆಮಾರಿನಿಂದ ತಲೆಮಾರಿಗೆ ದ್ವೇಷವನ್ನು ಬಳುವಳಿಯಾಗಿ ವರ್ಗಾಯಿಸುವುದರ ಮೂಲಕ ಎಂತಹ ರಾಷ್ಟ್ರ ಕಟ್ಟಲು ಸಾಧ್ಯ? ಸೂಕ್ಷ್ಮ ವಿಚಾರಗಳನ್ನು ನಿರ್ವಹಿಸುವಲ್ಲಿ ಕೊಂಚ ಎಡವಿದರೆ ಮತ್ತೊಂದು ದುರಂತ ನಡೆದುಹೋಗುತ್ತದೆ. ಇದಕ್ಕೆ ರಾಜಕಾರಣಿಗಳು ಮಾತ್ರವಲ್ಲ ಮಾಧ್ಯಮಗಳೂ ಕಾರಣವಾಗಬಲ್ಲವು ಎಂದು ಸಂಶಯಿಸಿದರೆ ತಪ್ಪೆ?
-ಅಣ್ಣಪ್ಪ ಮಂಜುನಾಥ ಶಿರೂರ್
ಶಿಕ್ಷಕರು, ಬಿಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

