

ಈಗ ನೀವೆಲ್ಲಾ ಓದಲಿರುವ ಕಥೆ ವಿನಾಯಕ ಗೋರೆ ಎಂಬ ಧೀರನನ್ನು ಹಾಗೂ ಅವನ ಮಮತಾಮಯಿ ತಾಯಿಯನ್ನು ಕುರಿತದ್ದು. ವಿನಾಯಕ ಗೋರೆ, ಮುಂಬಯಿಯ ಒಂದು ಪ್ರಮುಖ ಪ್ರದೇಶವಾದ ವಿಲೇಪಾರ್ಲೆಯಲ್ಲಿದ್ದ. ಈತನದ್ದು, ತಂದೆ-ತಾಯಿ ಹಾಗೂ ಸೋದರಿಯಿಂದ ಕೂಡಿದ ಪುಟ್ಟ ಕುಟುಂಬ. ವಿನಾಯಕನ ತಂದೆ ವಿಷ್ಣು ಗೋರೆ ಐಸಿಐಸಿಐ ಬ್ಯಾಂಕ್ನಲ್ಲಿ ಮುಂಬಯಿ ವಲಯದ ಡಿಜಿಎಂ (ಡೆಪ್ಯುಟಿ ಜನರಲ್ ಮೆನೇಜರ್) ಆಗಿದ್ದರು. ವಿನಾಯಕನ ತಾಯಿಯ ಹೆಸರು ಅನುರಾಧಾ ಗೋರೆ. ಈಕೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಯಾವ ಆ್ಯಂಗಲ್ನಿಂದ ನೋಡಿದರೂ, ವಿನಾಯಕ ಗೋರೆಯದು ಶ್ರೀಮಂತ ಕುಟುಂಬ. ಭವಿಷ್ಯದಲ್ಲಿ, ಮಗನನ್ನು ಚಾರ್ಟೆಡ್ ಅಕೌಂಟೆಂಟ್ ಮಾಡಬೇಕೆಂಬುದು ವಿಷ್ಣು ಗೋರೆಯ ಆಸೆಯಾಗಿತ್ತು.
ಈ ಕುಟುಂಬದವರೆಲ್ಲ ವಾಸವಿದ್ದರಲ್ಲ; ಆ ಮನೆಯ ಎದುರಿಗೆ ವಿಶಾಲ ಮೈದಾನವಿತ್ತು. ಅಲ್ಲಿ ವಾರಕ್ಕೆ ಮೂರು ಬಾರಿ ಪೊಲೀಸ್ ಕವಾಯತು ನಡೆಯುತ್ತಿತ್ತು. ಪುಟ್ಟ ಹುಡುಗ ವಿನಾಯಕ ಅದನ್ನೇ ಬೆರಗು ಮತ್ತು ಅಭಿಮಾನದಿಂದ ನೋಡುತ್ತಾ ನಿಂತುಬಿಡುತ್ತಿದ್ದ. ಶಾಲೆಯಿಂದ ಬಂದಾಕ್ಷಣ ಬೆಳಗಿನಿಂದ ಸಂಜೆಯವರೆಗೂ ಏನೇನಾಯ್ತು ಎಂದೆಲ್ಲಾ ಹೆತ್ತವರಿಗೆ ವರದಿ ಒಪ್ಪಿಸುವುದು ವಿನಾಯಕ ಗೋರೆಯ ಅಭ್ಯಾಸವಾಗಿತ್ತು. ಹೈಸ್ಕೂಲಿನಲ್ಲಿದ್ದ ಸಂದರ್ಭದಲ್ಲಿ ಅದೊಂದು ಸಂಜೆ ಮನೆಗೆ ಬಂದವನೇ, ತಂದೆ-ತಾಯಿಯ ಎದುರು ಕೂತು ಹೇಳಿದ: 'ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರೂ ಮಾತೃಋಣ -ಮಾತೃಭೂಮಿಯ ಋಣವನ್ನು ತೀರಿಸಬೇಕಂತೆ. ಅದರಲ್ಲೂ ಮಾತೃಭೂಮಿಯ ಋಣ ತೀರಿಸುವುದು ಅತ್ಯಂತ ಶ್ರೇಷ್ಠ ಕೆಲಸವಂತೆ. ಹಾಗಂತ ಇವತ್ತು ನಮ್ಮ ಪಿ.ಟಿ. ಸರ್ ಹೇಳಿದ್ರು. ಅವರ ಮಾತುಗಳನ್ನು ಕೇಳಿದಾಗಿನಿಂದ ಅದೇ ವಿಷಯವನ್ನು ಹತ್ತು ಹಲವು ರೀತಿಯಲ್ಲಿ ಯೋಚಿಸಿ, ಲೆಕ್ಕಾಚಾರ ಮಾಡಿ ಕಡೆಗೆ ಒಂದು ನಿರ್ಧಾರಕ್ಕೆ ಬಂದಿದೀನಿ. ಏನೆಂದರೆ, ತುಂಬಾ ಚೆನ್ನಾಗಿ ಓದಿ ಡಿಸ್ಟಿಂಕ್ಷನ್ನಲ್ಲಿ ಡಿಗ್ರಿ ಮುಗಿಸ್ತೇನೆ. ಆದರೆ ಭವಿಷ್ಯದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗುವುದಿಲ್ಲ. ಬದಲಾಗಿ ಸೇನೆಗೆ ಸೇರ್ಕೋತೀನಿ. ದೇಶದ ವೀರಯೋಧ ಅನ್ನಿಸಿಕೊಳ್ತೇನೆ. ಈ ನಿರ್ಧಾರವನ್ನು ಬದಲಿಸುವ ಪ್ರಯತ್ನಕ್ಕೆ ಮುಂದಾಗಬೇಡಿ, ಪ್ಲೀಸ್...'
ಮಕ್ಕಳು ಇಂಥ ಮಾತುಗಳನ್ನಾಡಿದರೆ, ಹೆಚ್ಚಿನ ತಂದೆ -ತಾಯಿಗಳು ಛೀಮಾರಿ ಹಾಕುತ್ತಾರೆ. ಸೈನಿಕ ಆದರೆ ಎಷ್ಟೆಲ್ಲಾ ಕಷ್ಟಗಳಿವೆ, ಏನೆಲ್ಲಾ ಅಪಾಯಗಳಿವೆ ಎಂದು ವಿವರಿಸುತ್ತಾರೆ. ಕನಸಿನಲ್ಲೂ ಅಂಥ ಯೋಚನೆ ಮಾಡಬೇಡ. ನೀನು ನೌಕರಿಗೆ ಸೇರದಿದ್ರೂ ಪರವಾಗಿಲ್ಲ. ದುಡಿಯದಿದ್ರೂ ಚಿಂತೆಯಿಲ್ಲ. ಸುಮ್ಮನೆ ನಮ್ಮ ಕಣ್ಮುಂದೆ ಇದ್ದು ಬಿಡು ಅನ್ನುತ್ತಾರೆ. ಸೇನೆಯಲ್ಲಿರುವವರಿಗೆ ಸಾವು ಯಾವಾಗ ಬೇಕಾದರೂ ಬರಬಹುದು ಎಂಬುದನ್ನು ಸಾಕ್ಷಿ ಸಮೇತ ವಿವರಿಸಿ, ಮಕ್ಕಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುತ್ತಾರೆ. ಆದರೆ, ವಿನಾಯಕ ಗೋರೆಯ ತಾಯ್ತಂದೆಯರು ಹಾಗೆ ಮಾಡಲಿಲ್ಲ. ಮಗನ ನಿರ್ಧಾರ ತಿಳಿದು ಖುಷಿಪಟ್ಟರು. ದೇಶಸೇವೆಗಿಂತ ಮಿಗಿಲಾದುದು ಯಾವುದೂ ಇಲ್ಲ. ನಿನ್ನ ನಿರ್ಧಾರವನ್ನು ನಾವು ಹೆಮ್ಮೆಯಿಂದ ಸ್ವೀಕರಿಸುತ್ತಾ ಇದೀವಿ ಎಂದರು.
1968ರ ಜುಲೈ 21, ವಿನಾಯಕ ಗೋರೆಯ ಜನ್ಮದಿನ. ಸೇನಾಧಿಕಾರಿಯಾಗಬೇಕು ಎಂದು ನಿರ್ಧರಿಸಿದ ಆತ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ. ಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ. ಅವನ ವಾರಿಗೆಯ ಉಳಿದವರೆಲ್ಲಾ ಡಾಕ್ಟರ್, ಎಂಜಿನಿಯರ್, ಲಾಯರ್ ಆಗುವ ಕನಸು ಕಾಣುತ್ತಿದ್ದಾಗ ಈತ ಸೇನಾಧಿಕಾರಿಯಾಗಲು ಹಂಬಲಿಸಿದ. ಡೆಹ್ರಾಡೂನ್ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆವ ಕನಸು ಕಂಡ. ಅಲ್ಲಿ ಪ್ರವೇಶ ಪಡೆಯಬೇಕೆಂದರೆ, ಪೂರ್ವಭಾವಿ ಪರೀಕ್ಷೆ (ಎಂಟ್ರೆನ್ಸ್ ಟೆಸ್ಟ್) ಎದುರಿಸಬೇಕಿತ್ತು. 1991ರಲ್ಲಿ ಎಂಟ್ರೆನ್ಸ್ ಟೆಸ್ಟ್ ಬರೆವ ಉದ್ದೇಶದಿಂದ ಇತರೆ ನಾಲ್ಕು ಮಂದಿಯೊಂದಿಗೆ ಡೆಹ್ರಾಡೂನ್ನ ರೈಲು ಹತ್ತಿದ ವಿನಾಯಕ. ನಾಲ್ಕು ದಿನ ಕಳೆದಿರಬೇಕು. ಆಗಲೇ, ಅನುರಾಧಾ ಗೋರೆಯವರಿಗೆ ಫೋನ್ ಬಂತು. ಆ ತುದಿಯಲ್ಲಿ, ವಿನಾಯಕನೊಂದಿಗೆ ಪರೀಕ್ಷೆ ಬರೆಯಲು ಹೋದ ಹುಡುಗರಿದ್ದರು. ಅವರು ಹೇಳಿದರು: 'ಆಂಟೀ, ನಾವು ವಾಪಸ್ ಬರ್ತಾ ಇದೀವಿ. ಮೆಡಿಕಲ್ ಟೆಸ್ಟ್ ಎದುರಿಸುವ ಉದ್ದೇಶದಿಂದ ವಿನಾಯಕ ಮಿಲಿಟರಿ ಕ್ಯಾಂಪಸ್ನಲ್ಲೇ ಉಳಿದಿದ್ದಾನೆ...' ಎಂಟ್ರೆನ್ಸ್ ಟೆಸ್ಟ್ನಲ್ಲಿ ಪಾಸ್ ಆದವರನ್ನು ಮಾತ್ರ ಮೆಡಿಕಲ್ ಟೆಸ್ಟ್ಗೆ ಉಳಿಸಿಕೊಳ್ಳುತ್ತಾರೆ ಎಂಬ ಸಂಗತಿ, ವಿನಾಯಕ ಗೋರೆಯ ಕುಟುಂಬದ ಎಲ್ಲರಿಗೂ ಗೊತ್ತಿತ್ತು. ಕಡೆಗೂ ಅಂದುಕೊಂಡಿದ್ದನ್ನು ಸಾಧಿಸಿದ ಮಗನ ಬಗ್ಗೆ ವಿಷ್ಣು-ಅನುರಾಧಾ ಗೋರೆ ದಂಪತಿ ಖುಷಿಪಟ್ಟರು.
ಎರಡು ವರ್ಷಗಳ ನಂತರ ಡೆಹ್ರಾಡೂನ್ನ ಮಿಲಿಟರಿ ಅಕಾಡೆಮಿಯಿಂದ ಡಿಸ್ಟಿಂಕ್ಷನ್ನಲ್ಲಿ ಪದವಿ ಪಡೆದು ಹೊರಬಂದ ವಿನಾಯಕ ಗೋರೆ. ಆರು ತಿಂಗಳ ತರಬೇತಿಯ ನಂತರ ಆತನಿಗೆ 'ಕ್ಯಾಪ್ಟನ್' ಹುದ್ದೆ ನೀಡಲಾಯಿತು. ಮೊದಲು ಪಂಜಾಬ್ ರೆಜಿಮೆಂಟ್ನಲ್ಲಿ ಕೆಲಸ ಮಾಡಬೇಕು ಎಂಬ ಆದೇಶ ಪತ್ರವೂ ಬಂತು. ನೌಕರರಿಗೆ ಹೊರಡುವ ಮೊದಲ ದಿನ, ಹೆತ್ತವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ವಿನಾಯಕ, ನಂತರ, ಅಮ್ಮನನ್ನು ಒಂದು ಬದಿಗೆ ಕರೆದು ಕೇಳಿದನಂತೆ: 'ಅಮ್ಮಾ, ಒಂದು ಮಾತು ಕೇಳ್ತೇನೆ. ನಡೆಸಿಕೊಡ್ತೀಯಾ?'
ಮಗ ಏನು ಕೇಳಬಹುದು ಎಂಬ ಕುತೂಹಲವನ್ನು ಅಂಗೈಲಿ ಹಿಡಿದುಕೊಂಡೇ ಅನುರಾಧ ಗೋರೆಯವರು -'ಖಂಡಿತ ಮಗನೇ. ನೀನು ಏನೇ ಕೇಳಿದ್ರೂ ನಡೆಸಿಕೊಡ್ತೇನೆ. ಕೇಳು' ಅಂದಿದ್ದಾರೆ. ಆಗ ವಿನಾಯಕ ಗಂಭೀರವಾಗಿ ಹೇಳಿದ ಮಾತು:'ದೇಶಸೇವೆಗೆ ಹೊರಟ ಸೈನಿಕರ ಜೀವಕ್ಕೆ ಯಾರೂ, ಯಾವತ್ತೂ ಗ್ಯಾರಂಟಿ ಕೊಡೋದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಕೆಲಸ ಮಾಡಬೇಕಾಗುತ್ತೋ ಗೊತ್ತಿಲ್ಲ. ಒಂದು ವೇಳೆ ನನಗೆ ಏನಾದ್ರೂ ಹೆಚ್ಚು ಕಡಿಮೆಯಾದರೆ, ಸಾರ್ವಜನಿಕರ ಮುಂದೆ ಅಳೋದಿಲ್ಲ ಅಂತ ಭಾಷೆ ಕೊಡು...'
ಈ ಮಾತು ಹೇಳಿದಾಗ ವಿನಾಯಕ ಗೋರೆಗೆ ಕೇವಲ 24 ವರ್ಷ. ತನ್ನ ಮಗ ಕೇವಲ ಸೈನಿಕನಲ್ಲ. ಆತ ಸೇನಾಧಿಕಾರಿ. ಒಂದು ಸೇನಾ ತುಕಡಿಯನ್ನು ಮುನ್ನಡೆಸುವ ಕ್ಯಾಪ್ಟನ್. ಅಂಥವನಿಗೆ ಖಂಡಿತ ಕೇಡಾಗುವುದಿಲ್ಲ ಎಂಬ ಆದಮ್ಯ ನಂಬಿಕೆಯಿಂದ, ಎಂಥ ಸಂದರ್ಭದಲ್ಲೂ ನಾನು ಕಣ್ಣೀರು ಹಾಕುವುದಿಲ್ಲ ಮಗನೇ. ಪ್ರಾಮಿಸ್ ಎಂದು ಬಿಟ್ಟರು ಅನುರಾಧಾ. ಆದರೆ, ಬದುಕುವುದು ಮಾತಾಡಿದಷ್ಟು ಸುಲಭವಲ್ಲ ತಾನೆ? ಪ್ರತಿ ವರ್ಷವೂ 15-20 ದಿನಗಳ ರಜೆಯಲ್ಲಿ ಮನೆಗೆ ಬಂದು, ನಂತರ ಮತ್ತೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಮಗ ಹೊರಟು ನಿಂತಾಗಲೆಲ್ಲ, ಕಣ್ತುಂಬಿಕೊಳ್ಳುತ್ತಿದ್ದರು ಅನುರಾಧಾ. ಆ ಸಂದರ್ಭದಲ್ಲಿ ವಿನಾಯಕ ಎಚ್ಚರಿಸುತ್ತಿದ್ದನಂತೆ: 'ಅಮ್ಮಾ, ನೀನು ಉಳಿದವರಂತೆ ಸಾಮಾನ್ಯ ಹೆಂಗಸಲ್ಲ. ನೀನು ವೀರಯೋಧನ ತಾಯಿ. ನಿನ್ನ ಕಣ್ಣಲ್ಲಿ ನೀರು ಬರಬಾರದು...!' ಮಗನ ಮಾತು ಕೇಳುತ್ತಿದ್ದಂತೆಯೇ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಹೇಗೋ ತಡೆ ಹಿಡಿದು, ಸಾರಿ ಕಣೋ. ನನಗೇ ಗೊತ್ತಾಗದೆ ಭಾವುಕಳಾಗುತ್ತೇನೆ ಅನ್ನುತ್ತಿದ್ದರಂತೆ ಅನುರಾಧಾ.
ಇದು 1995ರ ಮಾತು. ಆಗ ಕ್ಯಾಪ್ಟನ್ ವಿನಾಯಕ ಗೋರೆ ಮತ್ತು ತಂಡ ಭಾರತ-ಪಾಕಿಸ್ತಾನದ ಗಡಿ ನಿಯಂತ್ರಣಾ ರೇಖೆಯಲ್ಲಿರುವ, ಅತಿ ಸೂಕ್ಷ್ಮ ಪ್ರದೇಶವಾದ ಕುಪ್ವಾರದಲ್ಲಿ ಕೆಲಸ ನಿರ್ವಹಿಸುತ್ತಿತ್ತು. ಶತ್ರುಗಳು ಯಾವಾಗ ಬೇಕಾದರೂ ನುಗ್ಗಿ ಬರಬಹುದು ಎಂದು ಅವರಿಗೆ ಮಾಹಿತಿ ಬಂದಿತ್ತು. ಶತ್ರುಗಳನ್ನು ಹಿಮ್ಮೆಟ್ಟಿಸಲು ಆಪರೇಷನ್ ರಕ್ಷಕ್ ಎಂಬ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಡೀ ದೇಶ ನವರಾತ್ರಿಯ ಸಂಭ್ರಮದಲ್ಲಿ ಮೈಮರೆತಿದ್ದಾಗಲೇ, 1995 ಸೆಪ್ಟೆಂಬರ್ 26ರ ಮಧ್ಯರಾತ್ರಿ ಶತ್ರು ಸೇನೆಯ ತಂಡವೊಂದು ನುಗ್ಗಿ ಬರುತ್ತಿದೆ ಎಂಬ ಸುದ್ದಿ ಕಿವಿಗೆ ಬಿತ್ತು. 'ಭಾರತ ಮಾತಾಕೀ ಜೈ, ಹರಹರ ಮಹಾದೇವ್' ಎಂಬ ರಣಘೋಷದೊಂದಿಗೇ ಶತ್ರುಗಳ ಮೇಲೆ ಬಿದ್ದ ಕ್ಯಾಪ್ಟನ್ ವಿನಾಯಕನ ತಂಡ ಶತ್ರುಗಳನ್ನು ಹಿಮ್ಮೆಟ್ಟಿಸಿತು. ಹಲವರನ್ನು ಕೊಂದು ಹಾಕಿತು. ತನ್ನ ಸೈನಿಕರ ಕೂದಲೂ ಕೊಂಕಬಾರದು ಎಂದು ನಿರ್ಧರಿಸಿ ತಾನೇ ಮುಂದೆ ನಿಂತು ವಿನಾಯಕ ಹೋರಾಡುತ್ತಿದ್ದ. ಪಾಕ್ ಸೈನಿಕರಿಗೆ ಕಡೆಗೂ ಮರೆಯಲಾಗಂಥ ಪಾಠ ಕಲಿಸಿದೆವು ಎಂದು ವಿನಾಯಕ ಗೋರೆ ಮತ್ತು ಸಂಗಡಿಗರು ಅಂದುಕೊಂಡಾಗಲೇ ಆಗಬಾರದ ಅನಾಹುತ ಆಗಿಹೋಯಿತು. ಶತ್ರುಗಳ ಕಡೆಯಿಂದ ಏಕಾಏಕಿ ನುಗ್ಗಿ ಬಂದ ಗುಂಡುಗಳು ಕ್ಯಾಪ್ಟನ್ ವಿನಾಯಕ ಗೋರೆಯನ್ನು ಬಲಿ ತೆಗೆದುಕೊಂಡವು. ಶತ್ರುಗಳೊಂದಿಗೆ ಕಾದಾಡುತ್ತಲೇ ವಿನಾಯಕ ಕಥೆಯಾಗಿ ಹೋದ.
ಆನಂತರದ ದಿನಗಳ ಬಗ್ಗೆ ಅನುರಾಧಾ ಗೋರೆಯವರು ವಿವರಿಸುವುದು ಹೀಗೆ: ನನ್ನ ಬದುಕಲ್ಲಿ ಇಂಥದೊಂದು ಸಂದರ್ಭ ಎದುರಾಗಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಪ್ರತಿ ವರ್ಷವೂ ರಜೆಯ ಸಂದರ್ಭದಲ್ಲಿ ವಿನಾಯಕ ಮನೆಗೆ ಬರುತ್ತಿದ್ದ. ಹಾಗೆ ಬಂದಾಗಲೆಲ್ಲ, ಸತಾರಾದಲ್ಲಿರುವ ಅಜ್ಜಿ ಮನೆಗೆ ಹೋಗುತ್ತಿದ್ದ. ಅಲ್ಲಿ ಶಿವಾಜಿ ಮಹಾರಾಜರ ಕಾಲದ ಖಡ್ಗವಿತ್ತು. ಅಜ್ಜಿಯ ಊರಿಗೆ ಬಂದರೆ, ಅದನ್ನು ತೆಗೆದುಕೊಂಡು ಬಗೆಬಗೆಯಲ್ಲಿ ಕಸರತ್ತು ಪ್ರದರ್ಶಿಸುವುದು ಅವನ ಮೆಚ್ಚಿನ ಹವ್ಯಾಸವಾಗಿತ್ತು. ಛತ್ರಪತಿ ಶಿವಾಜಿ ಹಾಗೂ ಸ್ವಾಮಿ ವಿವೇಕಾನಂದರೇ ನನ್ನ ರೋಲ್ ಮಾಡೆಲ್ಗಳು ಅನ್ನುತ್ತಿದ್ದ ಆತ, ರಜೆಯಲ್ಲಿ ಈ ಇಬ್ಬರು ಮಹನೀಯರ ಪುಸ್ತಕಗಳನ್ನು ಓದುತ್ತಾ ಮೈಮರೆಯುತ್ತಿದ್ದ. 1995ರ ವೇಳೆಗೆ, ನಮ್ಮ ಯಜಮಾನರಿಗೆ ನಿವೃತ್ತಿಯಾಗಿತ್ತು. ನಾನು ಹೈಸ್ಕೂಲ್ನ ಪ್ರಿನ್ಸಿಪಾಲ್ ಹುದ್ದೆಯಲ್ಲಿದ್ದೆ. ವೃದ್ಧಾಪ್ಯದ ಒಂದೊಂದೇ ಲಕ್ಷಣಗಳು ನಮ್ಮ ಬದುಕನ್ನು ಆವರಿಸುತ್ತಿದ್ದ ಸಂದರ್ಭ ಅದು. ಸಹಜವಾಗಿಯೇ ನಾವು ಮಗನ ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಿದ್ದೆವು. ಈ ಬಾರಿ ರಜೆಗೆ ಬಂದಾಗ, ಮದುವೆಯ ಬಗ್ಗೆ ಕೇಳಬೇಕು ಅಂದುಕೊಂಡಿದ್ದೆವು. ಆಗಲೇ ಅವನ ಸಾವಿನ ಸುದ್ದಿ ಕಿವಿಗೆ ಅಪ್ಪಳಿಸಿತು. ಆಗಲೂ ನಾನು ನಂಬಲಿಲ್ಲ. ನನ್ನ ಮಗನದ್ದೇ ಹೆಸರಿನ ಮತ್ಯಾರೋ ತೀರಿಕೊಂಡಿರಬೇಕು. ಈ ಸಂದೇಶ ನಮಗೆ ಬೈ ಮಿಸ್ಟೇಕ್ ಬಂದಿರಬೇಕು ಅಂದ್ಕೊಂಡೆ. ಆದರೆ, ಐದು ದಿನಗಳ ನಂತರ ಶವಪೆಟ್ಟಿಗೆ ಬರುತ್ತಿದೆಯೆಂಬ ಸುದ್ದಿ ತಲುಪಿದಾಗ, ಓಹ್, ನನ್ನ ಮಗ ಒಂದು ನಕ್ಷತ್ರವಾಗಿ ಬಿಟ್ಟ ಅನ್ನಿಸಿತು. ಕೇವಲ 26ನೇ ವಯಸ್ಸಿಗೇ ಮಗ ಸತ್ತು ಹೋದಾಗ ಅಳದೇ ಇರುವುದಕ್ಕೆ ಸಾಧ್ಯವೆ? ಮನಸ್ಸಿಗೆ ಸಮಾಧಾನ ಆಗುವಷ್ಟು ಅತ್ತು ಬಿಡೋಣ ಅಂದುಕೊಂಡಾಗಲೇ ಅವನಿಗೆ ನೀಡಿದ್ದ ವಚನ ನೆನಪಾಯಿತು: 'ಮಗೂ, ಒಂದು ವೇಳೆ ನಿನ್ನ ಜೀವಕ್ಕೆ ಅಪಾಯವಾದರೆ, ಆಗಲೂ ನಾನು ಸಾರ್ವಜನಿಕವಾಗಿ ಅಳುವುದಿಲ್ಲ. ಪ್ರಾಮಿಸ್' ಎಂದಿದ್ದೆ ನಾನು. ಆ ಮಾತು ನೆನಪಾದ ತಕ್ಷಣ, ಅಮ್ಮಾ, ಏನ್ಮಾಡ್ತಾ ಇದೀಯ ಎಂದು ಮಗ ಕೇಳಿದಂತಾಯಿತು. ಅಷ್ಟೆ: ಕೆನ್ನೆಗೆ ಇಳಿಯುತ್ತಿದ್ದ ಕಂಬನಿ ಅಲ್ಲಿಯೇ ಬತ್ತಿ ಹೋಯಿತು.
ಹೌದು. ಎಲ್ಲವೂ ಒಂದು ಕೆಟ್ಟ ಕನಸಿನಂತೆ ಮುಗಿದುಹೋಗಿತ್ತು. ದೇಶ ರಕ್ಷಿಸಿದ ನನ್ನ ಮಗ ಕಥೆಯಾಗಿ ಹೋಗಿದ್ದ. ಗೋಡೆಯ ಮೇಲಿನ ಚಿತ್ರವಾಗಿ ಹೋಗಿದ್ದ. ಮಗನ ನೆನಪಾದಗಲೆಲ್ಲ ಕರುಳು ಕತ್ತರಿಸಿದಂತೆ ಆಗುತ್ತಿತ್ತು. ಶತ್ರುಗಳ ಗುಂಡೇಟು ಬಿದ್ದಾಗ ಆತ 'ಅಮ್ಮಾ' ಎಂದು ಚೀರಿದನೇನೋ. ಸಾಯುವ ಮುನ್ನ ನಮ್ಮನ್ನೆಲ್ಲಾ ನೋಡಲು ಆಸೆಪಟ್ಟನೇನೋ. ಸೇನಾ ಶಿಬಿರದಲ್ಲಿ ಒಳ್ಳೆಯ ಚಿಕಿತ್ಸೆ ದೊರಕಿದ್ದರೆ ಆತ ಬದುಕಿರುತ್ತಿದ್ದನೇನೋ ಅನಿಸುತ್ತಿತ್ತು. ಅದೇ ಸಂದರ್ಭದಲ್ಲಿ, ಮುತ್ತಿನಂಥ ಮಗನೇ ಕಣ್ಮರೆಯಾದ ಮೇಲೆ, ನಾನು ಯಾಕಾಗಿ ಬದುಕಬೇಕು ಅನ್ನಿಸಿತು. ಮರುದಿನದಿಂದ ಎಲ್ಲದರಲ್ಲೂ ನಿರಾಸಕ್ತಿ ಉಂಟಾಯಿತು. ಹೊರಗೆಲ್ಲೂ ಹೋಗಲೇಬಾರದು ಎಂದು ತೀರ್ಮಾನಿಸಿದೆ. ಹೀಗೇ ಆರು ತಿಂಗಳು ಕಳೆದುಹೋದವು. ಈ ಸಂದರ್ಭದಲ್ಲಿಯೇ ಒಂದು ಫೋನ್ ಬಂತು. ನಾನು ಕೆಲಸ ಮಾಡುತ್ತಿದ್ದೇನಲ್ಲ, ಆ ಶಾಲೆಯ ಮುಖ್ಯಸ್ಥರು ಲೈನ್ನಲ್ಲಿದ್ದರು: 'ಮೇಡಂ, ನಿಮ್ಮ ವಿನಾಯಕ ಇದ್ದನಲ್ಲ; ಅಂಥದೇ ಮನೋಭಾವದ ನೂರಾರು ಮಕ್ಕಳು ನಿಮ್ಮ ದರ್ಶನಕ್ಕಾಗಿ ಕಾತರಿಸಿದ್ದಾರೆ. ಎಲ್ಲರಿಗೂ ನಿಮ್ಮನ್ನು ನೋಡುವ ಆಸೆ. ನಿಮ್ಮ ಮಾತುಗಳನ್ನು ಕೇಳುವ ಆಸೆ. ದಯವಿಟ್ಟು ಶಾಲೆಗೆ ಬನ್ನಿ. ಮಕ್ಕಳೊಂದಿಗೆ ಮಾತಾಡಿ...'
ದಶಕಗಳಿಂದಲೂ ಮಕ್ಕಳೊಂದಿಗೆ ಇದ್ದವಳು ನಾನು. ಮಕ್ಕಳ ಮನಸ್ಸು ಎಂಥದೆಂದು ನನಗೆ ಗೊತ್ತಿತ್ತು. ಮಗನಿಗೆ ಪ್ರಾಮಿಸ್ ಮಾಡಿದ್ದಾಗಿದೆ. ಅದೆಷ್ಟೇ ಸಂಕಟವಾದರೂ ಸರಿ, ಸಾರ್ವಜನಿಕವಾಗಿ ಅಳಬಾರದು ಎಂದು ಗಟ್ಟಿ ನಿರ್ಧಾರದೊಂದಿಗೆ ಶಾಲೆಗೆ ಹೋದರೆ, ಅಲ್ಲಿ ಅಚ್ಚರಿಯೊಂದು ಕಾದಿತ್ತು. ಅವತ್ತು ಯಾವ ಮಗುವೂ ನನ್ನನ್ನು ಮಿಸ್ ಅನ್ನಲಿಲ್ಲ. ಮೇಡಂ ಎಂದು ಕರೆಯಲಿಲ್ಲ. ಬದಲಿಗೆ ಎಲ್ಲ ಮಕ್ಕಳೂ ಅಮ್ಮ, ಅಮ್ಮ, ಅಮ್ಮ, ಅಮ್ಮಾ... ಎಂದವು. ಹೌದು. ಆ ಎಲ್ಲ ದನಿಗಳಲ್ಲೂ ನನ್ನ ಮಗನೇ ಕಾಣಿಸಿದ!
ಅವತ್ತು ಬಹಳ ಹೊತ್ತು ವಿನಾಯಕನ ಬಗ್ಗೆಯೇ ಮಾತಾಡಿದೆ. ಮಗನನ್ನು ಕಳೆದುಕೊಂಡ ಸಂಕಟದಿಂದಲೇ ಹೀಗೆ ಹೇಳುತ್ತಿದ್ದೇನೆ: ಆವೇಶದ ಭರದಲ್ಲಿ ಸೇನೆಗೆ ಸೇರುವ ನಿರ್ಧಾರಕ್ಕೆ ಬರಬೇಡಿ. ಬಂಧುಗಳೊಂದಿಗೆ, ಹೆತ್ತವರೊಂದಿಗೆ ಚರ್ಚಿಸಿ, ಆನಂತರವೇ ಒಂದು ನಿರ್ಧಾರಕ್ಕೆ ಬನ್ನಿ ಎಂಬ ವಿನಂತಿಯೊಂದಿಗೆ ಮಾತು ನಿಲ್ಲಿಸಿದೆ. ಆನಂತರದ ಕ್ಷಣವನ್ನು ನಾನೆಂದೂ ಮರೆಯಲಾರೆ. ಶಾಲೆಯ ಅಷ್ಟೂ ಮಕ್ಕಳು ನುಗ್ಗಿ ಬಂದು ಹೇಳಿದವು : 'ಅಮ್ಮಾ, ವಿನಾಯಕನ ರೂಪದಲ್ಲಿ ನಾವೆಲ್ಲರೂ ಇದ್ದೇವೆ. ಮುಂದೆ ನಾವೂ ಸೇನೆ ಸೇರುತ್ತೇವೆ. ನಮಗೋಸ್ಕರ ಆಗಿಂದ್ದಾಗ್ಗೆ ನೀವು ಶಾಲೆಗೆ ಬರಬೇಕು. ಭಾಷಣ ಮಾಡಬೇಕು... ' ಆನಂತರದಲ್ಲಿ ಒಂದೊಂದೇ ಶಾಲೆಗೆ ಹೋಗುವುದು, ವಿನಾಯಕನ ಬಗ್ಗೆ ಮಾತಾಡುವುದು ನನ್ನ ಪಾಲಿಗೆ ಅಭ್ಯಾಸವೇ ಆಗಿ ಹೋಯಿತು. ಹೀಗೆ ಒಂದೊಂದು ಶಾಲೆಯ ಮೆಟ್ಟಿಲು ಹತ್ತಿ ಇಳಿದಾಗಲೂ ನನಗೆ ನೂರಾರು ಮಂದಿ ವಿನಾಯಕರು ಸಿಕ್ಕಿದರು. ಅವರೆಲ್ಲರದೂ ಒಂದೇ ಮಾತು: 'ಅಮ್ಮಾ, ನಾವೂ ನಿಮ್ಮ ಮಕ್ಕಳೇ. ನೀನು ಯಾವುದೇ ಸಹಾಯ ಕೇಳಿದರೂ ತುಂಬ ಖುಷಿಯಿಂದ ಮಾಡ್ತೇವೆ. ಆದರೆ ಒಂದೇ ಕಂಡೀಷನ್: ಯಾವುದೇ ಸಂದರ್ಭದಲ್ಲೂ ನೀನು ಭಾವುಕಳಾಗಬಾರದು. ಅಳಬಾರದು...'
ಕ್ಯಾಪ್ಟನ್ ವಿನಾಯಕ ಗೋರೆ ಕಣ್ಮರೆಯಾಗಿ 18 ವರ್ಷಗಳೇ ಕಳೆದು ಹೋಗಿವೆ. ಈ 18 ವರ್ಷಗಳಲ್ಲಿ 100ಕ್ಕೂ ಹೆಚ್ಚು ಶಾಲೆಗಳಲ್ಲಿ ಅನುರಾಧಾ ಗೋರೆ ಭಾಷಣ ಮಾಡಿದ್ದಾರೆ. ಸೇನೆಯಲ್ಲಿರುವವರ ಬದುಕು ಬವಣೆ ಕುರಿತು 8ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಅವರ ಭಾಷಣ ಕೇಳಿದ, ಪುಸ್ತಕ ಓದಿದ ನೂರಾರು ಯುವಕರು, ಸಂಭ್ರಮದಿಂದ ಸೇನೆಗೆ ಸೇರಿಕೊಂಡಿದ್ದಾರೆ. ಮಕ್ಕಳ ಈ ನಿರ್ಧಾರದಿಂದ ಹೆತ್ತವರೆಲ್ಲ ಖುಷಿಪಟ್ಟಿದ್ದಾರೆ. ಅದನ್ನು ಅನುರಾಧಾ ಅವರೊಂದಿಗೆ ಮುಖತಃ /ಪತ್ರದ ಮೂಲಕ ಹೇಳಿಕೊಂಡಿದ್ದಾರೆ. ಅದನ್ನು ನೆನಪಿಸಿಕೊಂಡು ಅನುರಾಧಾ ಅವರು ಹೇಳುತ್ತಾರೆ: ಸೇನೆಗೆ ಸೇರಿರುವ ಎಲ್ಲ ಮಕ್ಕಳೂ ಸರ್ವೀಸ್ ಮುಗಿಸಿ, ಸಂಭ್ರಮದಿಂದ ಹಿಂದಿರುಗಲಿ. ಅದಷ್ಟೇ ನನ್ನ ಪ್ರಾರ್ಥನೆ, ಹಾರೈಕೆ...
ಅನುರಾಧಾ ಅವರ ಭಾಷಣದ ತುಣುಕುಗಳು ಯು-ಟ್ಯೂಬ್ನಲ್ಲಿವೆ. ಸಾಧ್ಯವಾದರೆ ನೋಡಿ. ಕರುಳ ಕುಡಿಯನ್ನು ಕಳೆದುಕೊಂಡ ಸಂಕಟ ಎದೆಯೊಳಗಿದ್ದರೂ, ಉಳಿದವರ ಮಕ್ಕಳ ಒಳಿತಿಗಾಗಿ ಪ್ರಾರ್ಥಿಸುವ ಈ ಅಮ್ಮನ ತ್ಯಾಗ ಹಾಗೂ ಜೀವನ ಪ್ರೀತಿಗೆ ನಮಸ್ಕಾರ.
- ಎ.ಆರ್. ಮಣಿಕಾಂತ್
armanikanth@gmail.com