ಅಂಕಣಗಳು

ಸಂಗೀತದ ಮೂಲಕ ಸಂತಸವನ್ನು ಸಿಂಪಡಿಸುತ್ತಿದ್ದ ಕಾಳಿಂಗರಾಯರು

ಸಂಗೀತದ ಮೂಲಕ ಸಂತಸವನ್ನು ಸಿಂಪಡಿಸುತ್ತಿದ್ದ ಕಾಳಿಂಗರಾಯರು
Published On :

ಕನ್ನಡದ ಕೋಗಿಲೆ ಪಾಂಡೇಶ್ವರ ಕಾಳಿಂಗರಾಯರು ನಮ್ಮೊಂದಿಗಿದ್ದಿದ್ದರೆ, ಅವರಿಗೀಗ ನೂರು ವರ್ಷಗಳಾಗಿರುತ್ತಿದ್ದವು. ಸಂಗೀತ ಕ್ಷೇತ್ರದಲ್ಲಿನ ಅವರ ಪರಿಶ್ರಮ, ಪಾಂಡಿತ್ಯ ಅಸಾಮಾನ್ಯವಾದದ್ದು. ಆ ಕಲಾರಾಧಕನ ಸೇವೆಯನ್ನು, ಸರಳತೆಯನ್ನು ನೆನೆಯುತ್ತಾ ಹೀಗೊಂದು ಅಕ್ಷರನಮನ...

'ಕನ್ನಡದ ಕೋಗಿಲೆ' ಎಂದೇ ಚಿರಪರಿಚಿತರಾಗಿದ್ದ ಪಾಂಡೇಶ್ವರದ ಕಾಳಿಂಗರಾಯರು ಕಣ್ಮರೆಯಾಗಿ ಮೂವತ್ತ ಮೂರು ವರ್ಷಗಳೇ ಕಳೆದುಹೋಗಿವೆ. 1914ರಲ್ಲಿ ಜನ್ಮ ತಳೆದ ರಾಯರು ಈಗ ಇದ್ದಿದ್ದರೆ ಆಯುಷ್ಯದಲ್ಲಿ ಸೆಂಚುರಿಯ ಅಂಚನ್ನು ಮುಟ್ಟಿರುತ್ತಿದ್ದರು, ಹಾಗಾಗಲಿಲ್ಲ. ಕೇವಲ ಅರವತ್ತೇಳರ ಪ್ರಾಯಕ್ಕೆ ಮತ್ತೆ ಮರಳಿ ಬಾರದೆಡೆಗೆ ಕೈ ಬೀಸಿಕೊಂಡು ಹೊರಟೇ ಹೋದರು. ಆದರೂ ಸುಗಮ ಸಂಗೀತ ಲೋಕದಲ್ಲಿ ಇಂದಿಗೂ ಅವರ ಹೆಸರು ಹಚ್ಚಹಸಿರು. ಅಲ್ಲದೇ ಭವಿಷ್ಯದಲ್ಲಿ ಬರುವ ಬಹುತೇಕ ವರ್ಷಗಳ ಕಾಲ ಅವರ ಹೆಸರೇನೂ ಮಾಸಲಾರದು. ಅಂತಹ ಛಾಪನ್ನು ಜನಮಾನಸದಲ್ಲಿ ಭದ್ರವಾಗಿ ನಮ್ಮೆಲ್ಲರಿಗೂ ಅಚ್ಚುಮೆಚ್ಚಾಗಿದ್ದ ಕಾಳಿಂಗರಾಯರು ಒತ್ತಿಹೋಗಿದ್ದಾರೆ. ಈ ದೃಷ್ಟಿಯಿಂದ ಅವರೊಬ್ಬ ಚಿರಂಜೀವಿಯೇ ಹೌದು.
ಕಾಳಿಂಗರಾಯರದ್ದು ಬಹುಮುಖದ ವರ್ಣರಂಜಿತ ವ್ಯಕ್ತಿತ್ವ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಗವಾಯಿ , ಕರ್ನಾಟಕ ಸಂಗೀತ ಪದ್ಧತಿಯಲ್ಲಿ ವಿದ್ವಾನ್, ಸುಗಮ ಸಂಗೀತದಲ್ಲಿ ಸಾರ್ವಭೌಮ್; ನಟನೆಯಲ್ಲಿ ನಟ ರತ್ನಾಕರ, ನಿರ್ದೇಶನದಲ್ಲಿ ಅದ್ವಿತೀಯ, ರೂಪಿನಲ್ಲಿ ಮನ್ಮಥಸ್ವರೂಪಿ. ಈ ಗುಣ ವಿಶೇಷಗಳಲ್ಲದೇ ಎಂತಹ ಕಾಲದಲ್ಲೂ ಅಹಂಕಾರದ ನೆರಳೂ ಸಹ ಅವರಿಗೆ ಅಂಟಿಕೊಳ್ಳಲಿಲ್ಲ. ಬದಲಿಗೆ ಸದಾ ಕಾಲವೂ ಸರಳ, ಸೌಜನ್ಯ, ಸ್ನೇಹ, ಸನ್ನಡತೆ, ಇಂತಹ ಅತಿ ಮುಖ್ಯವೆನಿಸುವ ಮಾನವೀಯ ಗುಣ ವಿಶೇಷಗಳನ್ನು ಸಾಂಕೇತಿಸುತ್ತಾ ಸಕಲರಲ್ಲೂ ಸಂತಸವನ್ನು ಸಿಂಪಡಿಸುತ್ತಿದ್ದವರು ಕಾಳಿಂಗರಾಯರು.
ಸುಗಮ ಸಂಗೀತವನ್ನು ಹಾಡುವುದರಲ್ಲಿ ಕಾಳಿಂಗರಾಯರು ಗಳಿಸಿದ್ದ ಪರಿಶ್ರಮ, ಪಾಂಡಿತ್ಯ ಅಸಾಮಾನ್ಯವಾದದ್ದು, ಅಪೂರ್ವವಾದದ್ದು, ಅಚ್ಚರಿಗೊಳಿಸುವಂತಹುದು. ಅಲ್ಲದೇ ಹಾಡುವಾಗ ಪ್ರಧಾನವಾಗಿ ಆಂಗಿಕ ಭಾಷೆಯನ್ನು (ಇ್ಟಜಣ ಟಛಟ್ಜ್ಡಿಛ್ಜಜ)ಅಳವಡಿಸಿಕೊಂಡು ನಲಿಯುತ್ತ, ಗೀತೆಗಳಲ್ಲಿ ಬರುವ ಸಂದರ್ಭಕ್ಕೆ ತಕ್ಕಂತೆ ಮೈಕನ್ನು ಮುಷ್ಠಿಯಲ್ಲಿ ಬಿಗಿ ಹಿಡಿದು ಅವರು ಹಾಡುತ್ತಿದ್ದ ಶೈಲಿ ಅವರಿಗೇ ಮೀಸಲು. ಆ ಶೈಲಿಯನ್ನು ಅನುಕರಿಸಲು ಸಾಧ್ಯವೇ ಆಗದು ಎಂಬಷ್ಟರ ಮಟ್ಟಿಗೆ ಅದು ಅನನುಕರಣೀಯ (್ಡಟ್ಝಿಟ್ಝಡಿಛಛಿಟಜ).
ಕಾಳಿಂಗರಾಯರು ಮಹಾ ವಸ್ತ್ರ ವ್ಯಸನಿ. ಸಾಮಾನ್ಯವಾಗಿ ಸೂಟು ಬೂಟು ಟೈ ಹಾಕಿಕೊಳ್ಳದೇ ಅವರು ವೇದಿಕೆಯ ಮೇಲೆ ಪ್ರತ್ಯಕ್ಷರಾಗುತ್ತಿದ್ದುದು ಬಲು ಅಪರೂಪಕ್ಕೆ. ಎಂತಹ ಸುಡು ಬೇಸಿಗೆಯ ದಿನಗಳಲ್ಲೂ ಸೂಟು ಬೂಟುಧಾರಿಯಾಗಿಯೇ ಬಂದು ವೇದಿಕೆಯನ್ನೇರಿ ನಿಂತುಕೊಂಡೇ ತಾಸುಗಟ್ಟಲೆ ಹಾಡುತ್ತಿದ್ದುದು ರಾಯರಿಗೆ ಮಾಮೂಲು. ಕೊನೆ ಕೊನೆಯಲ್ಲಿ ಕೈ ಕಾಲು ಮುರಿದು ಕೊಂಡಿದ್ದಾಗಲೂ ವೈದ್ಯರಷ್ಟೇ ಅಲ್ಲದೆ ಯಾರೆಷ್ಟೇ ಬೇಡಿಕೊಂಡರೂ ರಾಯರು ನಿಂತು ಹಾಡುತ್ತಿದ್ದರೇ ಹೊರತು ಕುಳಿತು ಹಾಡುತ್ತಿರಲಿಲ್ಲ.
ಮತ್ತೊಂದು ಮಾತು: ಕನ್ನಡದ ಖ್ಯಾತ ಕವಿಗಳ ಪೈಕಿ ಕೆಲವರು ತಮ್ಮ ಗೀತೆಗಳನ್ನು ಕಾರ್ಯಕ್ರಮಗಳಲ್ಲಿ ಹಾಡಬೇಕೆಂದು ಪ್ರಾರ್ಥಿಸಲು ಅವರೇ ಸ್ವಯಂ ರಾಯರ ಮನೆಗೆ ಆಗಾಗ ಬರುತ್ತಿದ್ದುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ರಾಜರತ್ನಂ, ನರಸಿಂಹಸ್ವಾಮಿ, ಬೇಂದ್ರೆ, ಹುಯಿಲಗೋಳ ನಾರಾಯಣರಾಯರು, ಕುವೆಂಪು ಇವರೆಲ್ಲರ ಕವನಗಳು ರಾಯರ ರಾಗ ಸಂಯೋಜನೆ ಹಾಗೂ ಕಂಠಸಿರಿಯಿಂದ ಮೇಲಿಂದ ಮೇಲೆ ಹೊರಹೊಮ್ಮುತ್ತಿದ್ದರಿಂದಲೇ ಅವು ನಾಡಿನಾದ್ಯಂತ ಜನರ ಮನಮುಟ್ಟಿದ್ದು, ಹೃದಯವನ್ನು ತಟ್ಟಿದ್ದು. ನಮ್ಮ ಕವಿವರೇಣ್ಯರು ಅಪಾರ ಜನಪ್ರಿಯತೆ ಗಳಿಸಲು ಕಾಳಿಂಗರಾಯರು ಮುಖ್ಯ ಕಾರಣರು ಎಂಬುದು ಸತ್ಯ.
ಇನ್ನೊಂದು ವಿಚಾರವೆಂದರೆ ಕಾಳಿಂಗರಾಯರು ಸ್ವಭಾವದಲ್ಲಿ ಪ್ರಯೋಗಪ್ರಿಯರು. ಸಂಗೀತ ಕ್ಷೇತ್ರದಲ್ಲಿ ಯಾವಾಗಲೂ ಏನಾದರೊಂದನ್ನು ಹೊಸದಾಗಿ ಮಾಡಬೇಕೆಂದು ಹಪಹಪಿಸುತ್ತಿದ್ದವರು ಅವರು. 1950ರ ದಶಕದಲ್ಲೇ ತ್ಯಾಗರಾಜರ, ಮುತ್ತು ಸ್ವಾಮಿ ದೀಕ್ಷಿತರ, ಸ್ವಾತಿ ತಿರುನಾಳರ ಕೀರ್ತನೆಗಳಿಗೆ ಪಾಶ್ಚಾತ್ಯ ವಾದ್ಯಗಳ ನಾದವೈವಿಧ್ಯತೆಯನ್ನು ಸೇರಿಸಿ ಹೇಗೆ ಹಾಡಬಹುದೆಂಬುದನ್ನು ಪ್ರತ್ಯಕ್ಷವಾಗಿ, ಪ್ರಖ್ಯಾತ ಸಂಗೀತ ವಿದ್ವಾಂಸರ ಸಾನಿಧ್ಯದಲ್ಲಿ ತೋರಿಸಿ, ಕೇಳಿದವರೆಲ್ಲಾ "ನಾವು ಮಡಿವಂತಿಕೆಯಿಂದ ಶಾಸ್ತ್ರಬದ್ಧವಾಗಿ ಅನಾದಿಕಾಲದಿಂದಲೂ ಹಾಡಿಕೊಂಡು ಬರುತ್ತಿರುವ ಈ ಕೀರ್ತನೆಗಳನ್ನು ಹೀಗೂ ಹಾಡಬಹುದೇ?" ಎಂದು ನಿಬ್ಬೆರಗಾಗಿ ಹುಬ್ಬೇರಿಸುವಂತೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು ಕಾಳಿಂಗರಾಯರು.
ಒಮ್ಮೆಯಂತೂ ಭಿಕ್ಷುಕಿಯೊಬ್ಬಳು ಎತ್ತರದ ಧ್ವನಿಯಲ್ಲಿ ಹಾಡಿಕೊಂಡು ಹೋಗುತ್ತಿರಲು ಅವಳನ್ನು ಕರೆಸಿ, ಅವಳಿಗೆ ಕೆಲವು ಗೀತೆಗಳನ್ನು ಕಲಿಸಿ, ಅವಳಿಂದಲೇ ಹಾಡಿಸಿ, ಆ ಹಾಡುಗಳನ್ನು 'ಭಕ್ತರಾಮದಾಸ್‌' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ಪ್ರತಿಮಾದೇವಿಯರ ತುಟಿ ಚಲನೆಗೆ ಅಳವಡಿಸಿ ದಾಖಲೆ ನಿರ್ಮಿಸಿದವರು ನಮ್ಮ ರಾಯರು.
ನನ್ನ ಹಾಗೂ ಕಾಳಿಂಗರಾಯರ ನಂಟು ಮೂರು ದಶಕಗಳಿಗೂ ಮೀರಿದ್ದು. ಅವರು ಹಾಡಿದ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ಕೇಳಿ ಆನಂದಿಸಿದವನು ನಾನು. ಅವರ ಕಾಲದಲ್ಲಿ ಹಾಗೂ ಅವರ ನಂತರದಲ್ಲಿ ಸುಗಮ ಸಂಗೀತವನ್ನು ಹಾಡುವ, ಸೊಗಸಾಗಿಯೇ ಹಾಡುವ ಸಾಕಷ್ಟು ಮಂದಿ ಗಾಯಕರ ಪರಿಚಯ ನನಗಿದೆ. ಆದರೆ ಒಟ್ಟಾರೆಯಾಗಿ ಎಲ್ಲವನ್ನೂ ಪರಿಗಣಿಸಿದಾಗ ನಮ್ಮ ಇಂದಿನ ಸುಗಮ ಸಂಗೀತ ಕಲಾವಿದರ ಪೈಕಿ ಬಹುತೇಕರು (ಎಲ್ಲರೂ ಅಂದರೂ ತಪ್ಪಾಗದು) ಕಾಳಿಂಗರಾಯರ ಸರಿಸಮಕ್ಕೆ ಎಂಬುದು ಹಾಗಿರಲಿ, ಅವರ ಸಮೀಪಕ್ಕೂ ಬರಲು ಸಾಧ್ಯವಾಗಿಲ್ಲ. ನನ್ನ ಈ ಮಾತಿಗೆ ಕುಮ್ಮಕ್ಕು ಸಿಗುವಂತೆ ಕಾಳಿಂಗರಾಯರ ಪರಮಾಪ್ತರಲ್ಲೊಬ್ಬರಾದ ಮಾಸ್ಟರ್ ಹಿರಣ್ಯಯ್ಯನವರು ಒಂದೆಡೆ ಹೀಗೆ ಬರೆದಿದ್ದಾರೆ-
"ಪತ್ರಿಕೆಯೊಂದರಲ್ಲಿ ಓದಿದ ನೆನಪು. ವಾರಣಾಸಿಯಲ್ಲಿ ಭಾರತರತ್ನ, ನಾದಬ್ರಹ್ಮ, ಶಹನಾಯಿ ವಾದಕರಾದ ಬಿಸ್ಮಿಲ್ಲಾ ಖಾನ್‌ರ ಸರಳತೆ, ಬೆಳೆಯುತ್ತಿರುವ ಬೇರೊಬ್ಬ ಶಹನಾಯಿ ಕಲಾವಿದನನ್ನು ಕರೆಸಿ, ಕೇಳಿ, ಆನಂದಿಸಿ, ಆಶೀರ್ವದಿಸಿ, ಆದರಿಸಿದ ಪರಿ, ಅವರ ಆ ಹೃದಯ ಶ್ರೀಮಂತಿಕೆ ಇವುಗಳ ಬಗ್ಗೆ ಬರೆದಿದ್ದ ಲೇಖನವನ್ನು ಓದಿದಾಗ ಆ ಕೂಡಲೇ ನನಗೆ ನೆನಪಾದವರು ಪಿ.ಕಾಳಿಂಗರಾಯರು. ಅದೇ ಮಟ್ಟದ ಕಲಾವಂತ. ಅದೇ ಪರಿ ಅಬಾಲವೃದ್ಧರಾದಿಯಾಗಿ, ಪಂಡಿತಪಾಮರ ಭೇದರಹಿತರಾಗಿ, ಸಮತೆ ಸಮಾನತೆಗಳ ಆಗರವಾಗಿ, ನಿರ್ಮಲ ನಿರ್ವಿಕಾರ ಹೃದಯ ಶ್ರೀಮಂತಿಕೆಯ ಪ್ರತೀಕವಾಗಿ, ಬಾಳಿ ಬದುಕಿ, ಅಳಿದ ಮೇಲೂ ಉಳಿದುಕೊಂಡಿರುವ ರಾಯರಂಥವರನ್ನೇ ಕಂಡು ಹಿಂದಿನವರು ಹೀಗೆ ಹೇಳಿರಬಹುದು-"ವಿದ್ಯಾಧದಾತಿ ವಿನಯಂ" ಎಂದು.
ಆದರೆ ಇಂದಿನ ಕೆಲವು ಹಸಿ-ಹಸಿ ಕಲಾವಿದರು ತಮ್ಮಲ್ಲಿನ ಅಲ್ಪವನ್ನೋ, ಇಲ್ಲಾ ಶೂನ್ಯವನ್ನೋ ಪರಿಪೂರ್ಣವೆಂದೇ ಭ್ರಮಿಸಿ, ತಾವೇ ಸರ್ವಜ್ಞರೆಂದು ನಂಬಿ, ವಿನಾಕಾರಣ ಉಬ್ಬಿ -ಕೊಬ್ಬಿ, ಬೆಳೆಯದೆ, ಇರುವಾಗಲೇ ಉಳಿಯದೆ ಅಳಿದು ಹೋಗುತ್ತಿರುವವರನ್ನು ಕಂಡಾಗ, ಅದೇ ಹಿಂದಿನವರು ಹೇಳಿರುವ- "ಅಲ್ಪ ವಿದ್ಯಾ ಮಹಾಗರ್ವಿ" ಎಂಬುದರ ಸರಳತೆ ಗೋಚರಿಸುವುದು"- ಎಂದಿದ್ದಾರೆ. ಎಂತಹ ಅಭಿಪ್ರಾಯ!
ಕಾಳಿಂಗರಾಯರನ್ನು ಹತ್ತಿರದಿಂದ ಕಂಡಿದ್ದ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೇಳುವುದು ಹೀಗೆ-"ಸುಗಮ ಸಂಗೀತಕ್ಕೂ ಪ್ರಸಿದ್ಧಿ, ಹಣ ಹಾಗೂ ಮಾಧ್ಯಮಗಳ ಬಲ ಎಲ್ಲವೂ ಸಿಗುತ್ತದೆ. ತಕ್ಕ ಮಟ್ಟಿನ ಸಾಧನೆ ಮಾಡಿದವರಿಗೂ ಏನಾದರೊಂದು ಸನ್ಮಾನ ಪ್ರಶಸ್ತಿಗಳ ಮನ್ನಣೆ ಇದೆ. ಆದರೆ ಅಂಥದ್ದೊಂದು ಜನಪ್ರಿಯ ಸಂಗೀತ ಶಾಖೆಯನ್ನು ಬಿತ್ತಿ ಬೆಳೆದದ್ದಲ್ಲದೇ ಅದರ ಸಮಸ್ತಾಂಗಗಳನ್ನು ಎತ್ತರದ ನೆಲೆಯಲ್ಲಿ ಮೈಗೂಡಿಸಿಕೊಂಡು ಕವಿತಾ ಸಂಗೀತವೇ ಮೈದಾಳಿ ಬಂದಂತಿದ್ದ ಕಾಳಿಂಗರಾಯರಿಗೆ ಸಮವೆನ್ನಿಸಬಹುದಾದ ಕಲಾಭಿಜ್ಞರು ಯಾರೂ ಕಾಣುತ್ತಿಲ್ಲ. ಈ ಮಾತು ಈಗಿನ ಅನೇಕ ಗಾಯಕಿಯರಿಗೆ ಪ್ರಿಯವೆನಿಸದಿದ್ದರೂ ಅದು ಸತ್ಯ. ಸತ್ಯವಾಗಿಯೂ ಸತ್ಯ" -ಎಂದಿದ್ದಾರೆ.
ಅಂತಹ ಮಹಾನ್ ಗಾಯಕ ಕಾಳಿಂಗರಾಯರು ಕಾಲೈಕ್ಯರಾಗಿ ಹೋದರು. ಮತ್ತೆ ಅವರಂತಹ ಮತ್ತೊಬ್ಬ ಕಲಾವಿದನನ್ನು ಕಾಣಬೇಕಾದರೆ ನಮ್ಮ ನಾಡು ಪುಣ್ಯ ಪಡೆದಿರಬೇಕು. ನಾವೂ ಪುಣ್ಯ ಪಡೆದಿರಬೇಕು.


- ಬಿ.ಎಸ್. ಕೇಶವರಾವ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.