ಅಂಕಣಗಳು

ಕಾವ್ಯಕಮ್ಮಟ ಎಫೆಕ್ಟ್!

Published On :

ಈಗಿರುವುದು ಎರಡೇ ಜಾತಿಗಳು - ಶ್ರೀಮಂತ, ಬಡವ.
ಇದನ್ನರಿತು ನಮ್ಮ ಹಿರಿ, ಕಿರಿ, ಮರಿ, ಸಾಹಿತಿಗಳೆಲ್ಲರೂ ಇನ್ಯಾವುದೇ ಬ್ರಾಹ್ಮಣ, ದಲಿತ, ಬಂಡಾಯ, ಕ್ರಾಂತಿ ಕಡೆಗೆ ಗಮನ ಹರಿಸದೆ ತಮ್ಮ ಪಾಡಿಗೇ ತಮ್ಮ ಓದು , ಬರಹಗಳಲ್ಲಿ ತೊಡಗಿಸಿಕೊಳ್ಳುವುದು!  ರಾಜಕೀಯವನ್ನು ರಾಜಕಾರಣಿಗಳಿಗೆ ಬಿಟ್ಟುಕೊಡುವುದು- 'ಕಾವ್ಯಕಮ್ಮಟ ಎಫೆಕ್ಟ್!
'ಎಂಬ ಶೀರ್ಷಿಕೆಯೊಂದಿಗೆ ರೂಪಲಕ್ಷ್ಮಿಯವರು ಹೀಗೊಂದು ಪೋಸ್ಟ್‌ನ್ನು ತಮ್ಮ ಫೇಸ್‌ಬುಕ್ ಗೋಡೆಗೇರಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಕುಪ್ಪಳ್ಳಿಯಲ್ಲಿ ನಡೆದ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿ ಬಂದ ನಂತರ ರೂಪಲಕ್ಷ್ಮಿಯವರು ಈ ರೀತಿಯ ಪೋಸ್ಟೊಂದನ್ನು ಹಾಕುವ ಮೂಲಕ ಸಾಹಿತ್ಯ ಪ್ರೇಮಿಗಳನ್ನು, ಲೇಖಕರನ್ನು ಚಿಂತನೆಗೆ ಹಚ್ಚಿದ್ದಾರೆ. ಪ್ರಸ್ತುತ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್‌ಗಳೂ ಬಂದಿವೆ.

ಆದಾಗ್ಯೂ, ರೂಪಲಕ್ಷ್ಮಿಯವರ ಪೋಸ್ಟ್‌ನ ಬಗ್ಗೆ ಹೇಳುವುದಾದರೆ ಅಲ್ಲಿ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಅದರಲ್ಲಿ ಅನುಭವವೂ, ಅನುಭಾವವೂ ಇರಬಹುದು.
ಅವರು ಹೇಳಿದಂತೆ ಈಗಿರುವುದು ಎರಡೇ ಜಾತಿ ಶ್ರೀಮಂತ ಮತ್ತು ಬಡವ. ಇದನ್ನರಿತು ನಮ್ಮ ಹಿರಿ, ಕಿರಿ, ಮರಿ, ಸಾಹಿತಿಗಳೆಲ್ಲರೂ ಇನ್ಯಾವುದೇ ಬ್ರಾಹ್ಮಣ, ದಲಿತ, ಬಂಡಾಯ, ಕ್ರಾಂತಿ ಕಡೆಗೆ ಗಮನ ಹರಿಸದೆ ತಮ್ಮ ಪಾಡಿಗೇ ತಮ್ಮ ಓದು, ಬರಹಗಳಲ್ಲಿ ತೊಡಗಿಸಿಕೊಳ್ಳುವುದು!

ಸಾಹಿತ್ಯ ಪರಂಪರೆಯ ಅಧ್ಯಯನ ದೃಷ್ಟಿಯಲ್ಲಿ  'ನವೋದಯ, ಪ್ರಗತಿಶೀಲ, ನವ್ಯ, ದಲಿತ -ಬಂಡಾಯ' ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳೆಂದು ಗುರುತಿಸಲ್ಪಟ್ಟಿವೆ. ಈ ನಾಲ್ಕು ಚಳುವಳಿಗಳಲ್ಲಿ ಎರಡು ಸ್ವಾತಂತ್ರ್ಯಪೂರ್ವ ಚಳುವಳಿಗಳಾದರೆ ಇನ್ನೆರಡು ಸ್ವಾತಂತ್ರ್ಯೋತ್ತರ ಕಾಲದ್ದಾಗಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಹಲವಾರು ಕವಿಗಳು, ಸಾಹಿತಿಗಳು ಇಂಥಾ ಸಾಹಿತ್ಯ ಚಳುವಳಿಯಲ್ಲಿ ಪಾಲ್ಗೊಂಡವರೇ ಆಗಿದ್ದರೂ, ಇದನ್ನು ಮೀರಿ ಬೆಳೆದ ಹಲವು ಸಾಹಿತಿಗಳು ಹೆಚ್ಚು ಪ್ರಸ್ತುತವೆನಿಸುತ್ತಾರೆ.

ಎಲ್ಲ ಬದಲಾವಣೆಗಳ ಜತೆಗೆ ಕಾಲಾನುಕಾಲಕ್ಕೆ ಸಾಹಿತ್ಯ ಸೃಷ್ಟಿಯಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಇಲ್ಲಿ ಸಾಹಿತಿ ಪ್ರತ್ಯೇಕ ಜಾತಿಗೆ, ವರ್ಗಕ್ಕೆ , ಪಂಗಡಕ್ಕೆ ಸೀಮಿತವಾಗಿರಬೇಕಂತೇನೂ ಇಲ್ಲ. ಉದಾಹರಣೆಗೆ ಕಾರಂತರು 'ಚೋಮನ ದುಡಿ' ರಚಿಸುವ ಮೂಲಕ ಅಲ್ಲಿ ದಲಿತ ಸಂವೇದನೆಯನ್ನು ಹುಟ್ಟು ಹಾಕಿದರು. ಕಾರಂತರೇನು ದಲಿತರಾಗಿರಲಿಲ್ಲ.. ಅಲ್ವಾ? ಒಬ್ಬ ಸಾಹಿತಿ ಒಂದೇ ಪ್ರಕಾರಕ್ಕೆ ಬ್ರಾಂಡ್ ಆಗುವ ಬದಲು ಸಮಾಜದ ಎಲ್ಲ ವ್ಯವಸ್ಥೆಗಳ ಬಗ್ಗೆಯೂ ತನ್ನನ್ನು ತೆರೆದುಕೊಳ್ಳುತ್ತಾ ಹೋಗಬೇಕು. ಅದು ಇಂದಿನ ಕಾಲದ ಅಗತ್ಯವೂ ಹೌದು.

ಒಂದು ಪ್ರಕಾರಕ್ಕೆ ಬ್ರಾಂಡ್ ಆಗುವ ಮೂಲಕ ಸಾಹಿತ್ಯ ಸೃಷ್ಟಿ ಮಾಡಿ ಅದೆಷ್ಟೋ ಜನ ಸಾಹಿತಿಗಳು ಮುಖ್ಯಧಾರೆಗೆ ಬಂದಿದ್ದಾರೆ ಎಂಬುದು ನಿಜ. ಆದರೆ ಎಲ್ಲ ಕಾಲದಲ್ಲೂ ಸಲ್ಲುವ, ಯಾವುದೇ ಕಟ್ಟುಪಾಡುಗಳಲ್ಲಿ ಬಂಧಿಯಾಗದೆ ಸಾಹಿತ್ಯ ರಚನೆ ಮಾಡಿದ ಸಾಹಿತಿಗಳು, ಅವರ ಕೃತಿಗಳೇ ಇಂದು ಶ್ರೇಷ್ಠಕೃತಿಗಳು ಎಂದೆನಿಸಿಕೊಂಡಿರುವುದು. ಕುವೆಂಪು, ಮಾಸ್ತಿ, ಬೇಂದ್ರೆ, ಅನಂತಮೂರ್ತಿ ಇವೆರಲ್ಲರೂ ಇಂಥಾ ಪ್ರಕಾರಗಳ ಚೌಕಟ್ಟುಗಳನ್ನು ಮೀರಿ ಸಾಹಿತ್ಯ ಕೃತಿ ಮಾಡಿದವರು. ಆದ್ದರಿಂದಲೇ ಅವರ ಕೃತಿಗಳು ಇಂದಿಗೂ ಶ್ರೇಷ್ಠ ಕೃತಿಗಳಾಗಿಯೇ ಉಳಿದುಕೊಂಡಿವೆ.


ಸಾಹಿತಿಯಾದವನು ತನ್ನ ಅಂತರಂಗದ ಭಾವನೆಗಳನ್ನು ಪ್ರಕಟಿಸಲು ಕಾವ್ಯವನ್ನೋ, ಕಥೆಯನ್ನೋ ಮಾಧ್ಯಮವನ್ನಾಗಿಸುವಾಗ ಅಲ್ಲಿ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ಪ್ರಭಾವ ಇದ್ದೇ ಇರುತ್ತದೆ. ಅದು ತಪ್ಪು ಎಂದು ಹೇಳಲು ಸಾಧ್ಯವೇ ಇಲ್ಲ. ತನ್ನ ಭಾವನೆಗೆ ದಕ್ಕಿದ್ದು, ತಾನು ಗ್ರಹಿಸಿದ್ದು ಎಲ್ಲವೂ ಸಾಹಿತ್ಯ ಸೃಷ್ಟಿಗೆ ಕಾರಣವಾಗುವಾಗ ತಾನು -ತನ್ನದು- ಬೇರೆ ಯಾವುದೂ ಬೇಡ ಎಂದು ವೃತ್ತದೊಳಗೆ ತಿರುಗಿದರೆ ಏನು ಪ್ರಯೋಜನ? ಸಾಹಿತಿಯೊಬ್ಬ ತನ್ನ ಲೇಖನಿಯ ಮೂಲಕ ತನ್ನ ಭಾವನೆಗಳಿಗೆ ಮಾತ್ರವಲ್ಲ ತನ್ನ ವೇದನೆ, ರೋಷ, ಕಿಚ್ಚು ಎಲ್ಲದಕ್ಕೂ ಅಕ್ಷರ ರೂಪ ನೀಡಬಲ್ಲವನಾಗಿರುತ್ತಾನೆ. ಸಾಹಿತ್ಯ ಮತ್ತು ಸಮಾಜ ಒಂದಕ್ಕೊಂದು ಬೆಸೆದುಕೊಂಡಿರುವಾಗ ಅಲ್ಲಿ ಎಲ್ಲವೂ ಪ್ರಸ್ತುತವೇ ಆಗಿರುತ್ತದೆ. ಕಾಲಕ್ಕೆ ತಕ್ಕಂತೆ ಇವೂ ಬದಲಾಗಬೇಕು, ಅದನ್ನು ಅರ್ಥೈಸಿಕೊಳ್ಳುವ ನಮ್ಮ ಮನೋಭಾವಗಳೂ.


ಈ ವಾರ ಫೇಸ್‌ಬುಕ್‌ನಲ್ಲಿ ಕಂಡಂತೆ ಅಂಕಣಕ್ಕೆ ಆಯ್ದುಕೊಂಡ ಸ್ಟೇಟಸ್ ರೂಪಲಕ್ಷ್ಮಿ ಅವರದ್ದು

ಅವರ ಕಿರುಪರಿಚಯ

ರೂಪಲಕ್ಷ್ಮಿ
ಬೆಂಗಳೂರು.


-ರಶ್ಮಿ ಕಾಸರಗೋಡು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.