ಅಂಕಣಗಳು

96ರಲ್ಲಿ ಕರ್ನಾಟಕ, ಬಿಹಾರಗಳು ಬಿಜೆಪಿಯ ಐತಿಹಾಸಿಕ ಜಯಕ್ಕೆ ಮುಳುವಾಗಿದ್ದವು, ಈ ಬಾರಿಯೂ ಅವುಗಳದ್ದೇ ಅಪಾಯ!

Published On :

ಮೇ 7, 1996ರಂದು, ಅಂದರೆ 18 ವರ್ಷಗಳ ಹಿಂದೆ, ಭಾರತದ ಏಕೈಕ ಸುದ್ದಿ ವಾಹಿನಿಯಾಗಿದ್ದ ದೂರದರ್ಶನ ಬಹಳಷ್ಟು ಆಡಂಬರದಿಂದಲೇ ಮೊಟ್ಟ ಮೊದಲ ಬಾರಿಗೆ ಮತಗಟ್ಟೆ ಸಮೀಕ್ಷೆಯನ್ನು(ನಿರ್ಗಮನ ಸಮೀಕ್ಷೆ) ಬಿತ್ತರಿಸಿತು. ಒಂದೆಡೆ ಕಾಂಗ್ರೆಸ್ ನಿರಂತರ ಹಗರಣಗಳಿಂದ ಹೆಸರು ಕೆಡಿಸಿಕೊಂಡಿದ್ದರೆ, ಮತ್ತೊಂದೆಡೆ 1990ರ ನಂತರ ಬಿಜೆಪಿ ಹೊಸ ಶಕ್ತಿಯಾಗಿ ಮಿಂಚುತ್ತಲಿತ್ತು. ಕೇವಲ ಒಂದು ದಶಕದಲ್ಲಿ 2 ರಿಂದ 85 ಸ್ಥಾನಗಳನ್ನು ಗಳಿಸಿ ನಂತರದ ಚುನಾವಣೆಯಲ್ಲಿ 120 ಸ್ಥಾನಕ್ಕೆ ಜಿಗಿದು ಭರವಸೆ ಮೂಡಿಸಿತ್ತು. 96ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲರೂ ಊಹಿಸಿದ್ದರು. ಅವರ ಊಹೆಗೆ ಪುಷ್ಟಿಕೊಡುವಂಥ ಮತಗಟ್ಟೆ ಸಮೀಕ್ಷೆಯೂ ದೂರದರ್ಶನದಿಂದ ಹೊರಬಿತ್ತು. ಬಿಜೆಪಿ 192 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದದು ಹೇಳಿತು.
ಮತಗಟ್ಟೆ ಸಮೀಕ್ಷೆ ಬಿತ್ತರವಾದ ನಂತರ ಸಂಘದ ಶಾಖಾ ಮೈದಾನಗಳಲ್ಲಿ ಉತ್ಸಾಹದ ವಾತಾವರಣ ಮಡುಗಟ್ಟಿತ್ತು. ಏಕೆಂದರೆ 70 ವರ್ಷಗಳ ನಿರಂತರ ಪ್ರಯತ್ನದ ನಂತರ ಮೊಟ್ಟ ಮೊದಲ ಬಾರಿಗೆ ಸಂಘದ ವ್ಯಕ್ತಿಯೊಬ್ಬರು ಪ್ರಧಾನಿಯಾಗುವ ಸಾಧ್ಯತೆ ಅಂದು ಅವರಿಗೆ ಗೋಚರವಾಗಿತ್ತು. ಎಲ್ಲರ ಬಾಯಲ್ಲೂ, ಪಕ್ಷವನ್ನು ಆ ಮಟ್ಟಕ್ಕೊಯ್ದ  ಆಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯವರದ್ದೇ ಮಾತು.  ಮತ ಎಣಿಕೆ ಆರಂಭವಾಯಿತು. ಮೊದಲ ದಿನದ ಎಣಿಕೆ ದಕ್ಷಿಣ ಮತ್ತು ಪಶ್ಚಿಮ ಭಾಗಗಳಿಗಷ್ಟೇ ಸೀಮಿತವಾಯಿತು. ಉತ್ತರ ಭಾರತದ ಮತ ಎಣಿಕೆಯ ಫಲಿತಾಂಶ ಮರುದಿನ ಹೊರಬೀಳಲಿತ್ತು. ಆದರೆ ಮೊದಲ ದಿನದ ಎಣಿಕೆಯ ನಂತರ, ಬಿಜೆಪಿ ಪಾಳಯದಲ್ಲಿ ಮಡುಗಟ್ಟಿದ್ದ ಉತ್ಸಾಹ ತಗ್ಗಿತು. ಆಗ ಅದು ಯಶಸ್ವಿಯಾಗಿದ್ದು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಷ್ಟೇ.  ಎಲ್ಲದಕ್ಕಿಂತ ಅನಿರೀಕ್ಷಿತ ಫಲಿತಾಂಶ ಹೊರಬಿದ್ದದ್ದು ಕರ್ನಾಟಕದಿಂದ. ಏಕೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲಕಚ್ಚಲಿದ್ದು, ಬಿಜೆಪಿ ಅಧಿಕ ಮತಗಳನ್ನು ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆ ಹೇಳಿತ್ತು.
ಇನ್ನು ಮತದಾನ ಸರ್ವೇಕ್ಷಕರಂತೂ ಜೆಡಿಎಸ್‌ಗೆ ಕೇವಲ ಒಂದು ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ದೇವೇಗೌಡರ ಪಾಳಯ ಆ ಚುನಾವಣೆಯಲ್ಲಿ 16 ಸ್ಥಾನಗಳನ್ನು ಗೆದ್ದುಬಿಟ್ಟಿತು!  ಆ ನಂತರದಿಂದ ಭಾರತದ ಚುನಾವಣಾ ಅಭಿಪ್ರಾಯ ಸಂಗ್ರಾಹಕರಲ್ಲಿ ಒಂದು ವಿಚಿತ್ರ ಕ್ಲೀಷೆ ಹುಟ್ಟಿಬಿಟ್ಟಿದೆ- ನಗರದ ಜನರ ಪಕ್ಷಪಾತ ಮತ್ತು ಅಲ್ಪಸಂಖ್ಯಾತರು-ದಲಿತರ ಕಡೆಗಣನೆಯಿಂದಾಗಿ ಚುನಾವಣಾ ಸಮೀಕ್ಷೆಗಳು ಬಿಜೆಪಿಗೆ ಅತಿಯಾಗಿಯೇ ಮಣೆ ಹಾಕುತ್ತವೆ ಎನ್ನುವುದು. ಆದರೂ ಬಿಜೆಪಿ ಅಂದು 161 ಸಂಸತ್ ಸ್ಥಾನಗಳನ್ನು ಗೆದ್ದುಕೊಂಡು ಲೋಕಸಭೆಯಲ್ಲಿ ನಂಬರ್ 1 ಪಾರ್ಟಿ ಆಗಿ ಹೊರಹೊಮ್ಮಿತು. ಆದರೆ  ಜಾತ್ಯತೀತ ರಾಜಕೀಯ ಹೇಗಿದೆಯೆಂದರೆ, ಕೇವಲ 46 ಸ್ಥಾನಗಳನ್ನು ಗಳಿಸಿದ್ದ ಜನತಾದಳ, ವಾಜಪೇಯಿಯವರ 13 ದಿನದ ವಿಫಲ ಸರ್ಕಾರದ ನಂತರ, ಅಧಿಕಾರಕ್ಕೇರಿಬಿಟ್ಟಿತು. ಕಾಂಗ್ರೆಸ್‌ಗೆ ತೀರಾ 141ರಷ್ಟು ಕಡಿಮೆ ಸ್ಥಾನಗಳು ಸಿಕ್ಕವು (ತುರ್ತುಪರಿಸ್ಥಿತಿಯ ನಂತರದ ಚುನಾವಣೆಗಿಂತಲೂ 10 ಸ್ಥಾನಗಳು ಕಡಿಮೆ).
1996ರ ಚುನಾವಣೆ ಮನಸ್ಸಿನಲ್ಲಿ ಉಳಿಯುವುದಕ್ಕೆ ಇನ್ನೊಂದು ಪ್ರಮುಖ ಕಾರಣವೇನೆಂದರೆ, ಆಗ ಎಲ್ಲಾ ರಾಜ್ಯಗಳು ತಮ್ಮದೇ ಮನಸ್ವೇಚ್ಛೆಯಲ್ಲಿ ಮತದಾನ ಮಾಡಿದ್ದವು. 1996ಕ್ಕೂ ಮುಂಚಿನ ಎಲ್ಲಾ ಲೋಕಸಭಾ ಚುನಾವಣೆಗಳಲ್ಲೂ ದೇಶದ ಮತದಾರರು ಒಂದು ರಾಷ್ಟ್ರೀಯ ಉದ್ದೇಶವನ್ನು ಇಟ್ಟುಕೊಂಡು ಮತದಾನ ಮಾಡುತ್ತಿದ್ದರು. ಉದಾಹರಣೆಗೆ, 1971ರ ಚುನಾವಣೆ "ಬಡತನ ಹೊಡೆದೋಡಿಸುವ"(ಗರೀಬಿ ಹಠಾವೋ) ಉದ್ದೇಶವನ್ನು ಹೊತ್ತಿದ್ದರೆ, 1977ರ ಚುನಾವಣಣೆ ತುರ್ತುಪರಿಸ್ಥಿತಿಯ ವಿರುದ್ಧದ ಆಕ್ರೋಶ ಮತ್ತು ಜೆಪಿಯವರ ಆಂದೋಲನದ ಬಗ್ಗೆಯಾಗಿತ್ತು. 1984ರ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇಂದಿರಾ ಗಾಂಧಿಯವರ ಸಾವು ಮತ್ತು ಹೊಸ ಭರವಸೆಯಾದ ರಾಜೀವ್ ಎಂಬ ಶಕ್ತಿ. ಅದರಂತೆಯೇ, 1989ರ ಚುನಾವಣೆ ಬೋಫೋರ್ಸ್‌ನ ವಿರುದ್ಧದ ಆಕ್ರೋಶ ಮತ್ತು ರಾಜೀವ್ ಗಾಂಧಿಗೆ ಪಾಠ ಕಲಿಸುವ ಉದ್ದೇಶದಿಂದ ಕೂಡಿತ್ತು. ಆದರೆ 1996ರ ಚುನಾವಣೆಯಲ್ಲಿ ಅಂಥ ಯಾವುದೇ ರಾಷ್ಟ್ರೀಯ ಉದ್ದೇಶ ಕಾಣಿಸಲಿಲ್ಲ.
ಕೊನೆಗೆ ಬಿಜೆಪಿಗೆ 25-30 ಸ್ಥಾನಗಳ ಕೊರತೆ ಎದುರಾಯಿತು. ಕೇವಲ ಎರಡು ರಾಜ್ಯಗಳಲ್ಲಿ ವೈಫಲ್ಯ ಕಂಡು(ಕರ್ನಾಟಕ, ಬಿಹಾರ) ಭಾರತದ ಪ್ರಬಲ ರಾಜಕೀಯ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವ ಒಂದು ಐತಿಹಾಸಿಕ ಅವಕಾಶವನ್ನು ಕಳೆದುಕೊಂಡಿತು. ಎರಡು ವರ್ಷದ ನಂತರ ವಾಜಪೇಯಿಯವರು ಪ್ರಧಾನಿಯಾದರಾದರೂ, ಆ ಗೆಲುವು ಪಡೆಯಲು ಎನ್‌ಡಿಎ ಎಂಬ ಒಕ್ಕೂಟವನ್ನು ರಚಿಸಬೇಕಾಯಿತು.
1996ರಲ್ಲಿ ಇತಿಹಾಸದ ಕ್ರಮವನ್ನು ಬದಲಿಸಿದ ರಾಜ್ಯಗಳೆಂದರೆ ಕರ್ನಾಟಕ ಮತ್ತು ಅಂದಿನ ಅವಿಭಜಿತ ಬಿಹಾರ. ಕರ್ನಾಟಕದಲ್ಲಿ ಆಗ ಕಾಂಗ್ರೆಸ್ ಸುಮಾರು 12 ಪ್ರತಿಶತ ಮತಗಳನ್ನು ಕಳೆದುಕೊಂಡರೆ, ಬಿಜೆಪಿ ಕಳೆದುಕೊಂಡಿದ್ದು 4 ಪ್ರತಿಶತದಷ್ಟು ಮತಗಳನ್ನು. ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಆಂದೋಲನದ ನಂತರವೂ ಬಿಜೆಪಿಗೆ ಮುಂಬೈ ಕರ್ನಾಟಕ ಭಾಗದಲ್ಲಿ ಲಾಭ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲಿ ಅದು ಏಕಮಾತ್ರ ಸ್ಥಾನವನ್ನು ಗೆದ್ದು, ಉಳಿದ 5 ಸ್ಥಾನಗಳಲ್ಲಿ ಸೋಲುಂಡಿತು. ಅದರಂತೆಯೇ ಬಿಹಾರದಲ್ಲೂ ಕೂಡ, ಲಾಲು ಪ್ರಸಾದ್ ಯಾದವ್‌ರ ಬಿಗಿಹಿಡಿತದಲ್ಲಿದ್ದ ಕ್ಷೇತ್ರಗಳಲ್ಲಿ ಸದ್ದು ಮಾಡಲು ಬಿಜೆಪಿಗೆ ಆಗಲಿಲ್ಲ. ಬುಡಕಟ್ಟು ಪ್ರದೇಶಗಳಾದ ಚೋಟಾ-ನಾಗ್ಪುರ್ ಮತ್ತು ಸಂಥಾಲ್‌ಗಳಲ್ಲಿನ 14 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಬಿಜೆಪಿ ಗೆದ್ದಿತಾದರೂ, ಆ ರಾಜ್ಯದ ಉಳಿದ ಭಾಗಗಳಲ್ಲಲ್ಲ. ಇನ್ನು ಬಿಜೆಪಿ ಅವಿಭಜಿತ ಮಧ್ಯಪ್ರದೇಶದಲ್ಲಿ 27, ಅವಿಭಜಿತ ಉತ್ತರ ಪ್ರದೇಶದಲ್ಲಿ 52 ಸ್ಥಾನಗಳನ್ನು ಗಳಿಸಿ ಭಾರೀ ಗೆಲುವು ಸಾಧಿಸಿತ್ತು. ಆದರೆ ಅದರ ಉತ್ಸಾಹಕ್ಕೆ ಹುಳಿ ಹಿಂಡಿದ್ದು ಮಾತ್ರ ಬಿಹಾರ. ಇದರಿಂದಾಗಿಯೇ ಬಿಹಾರದಲ್ಲಿನ 25 ಸ್ಥಾನಗಳು ಮತ್ತು ಕರ್ನಾಟಕದಲ್ಲಿನ 16 ಸ್ಥಾನಗಳ ಬಲದ ಮೇಲೆ ಜನತಾದಳ ನೇತೃತ್ವದ ಯುನೈಟೆಡ್ ಫ್ರಂಟ್ ಎಂಬ ಭಿನ್ನಜಾತೀಯ ಪ್ರಾದೇಶಿಕ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತು. ದೇವೇಗೌಡರು ಪ್ರಧಾನಿಯಾದರು. ಅಂದಿನಿಂದ ಇಂದಿನವರೆಗೂ ಯಾವೊಂದು ಲೋಕಸಭಾ ಚುನಾವಣೆಯೂ ಒಂದು ರಾಷ್ಟ್ರೀಯ ಉದ್ದೇಶವನ್ನು ಹೊತ್ತು ಜರುಗಿದ ಉದಾಹರಣೆಗಳಿಲ್ಲ. ಅಂದಿನಿಂದ ನಿರ್ಣಾಯಕ ರಾಷ್ಟ್ರೀಯ ಜನಾದೇಶ ಹೊರಹೊಮ್ಮಬೇಕಾದರೆ ಪ್ರಾದೇಶಿಕ ಪಕ್ಷಗಳ ಮತಗಳಿಕೆಯ ಪ್ರಮಾಣ 45 ಪ್ರತಿಶತಕ್ಕಿಂತಲೂ ಕಡಿಮೆಯಾಗಬೇಕು ಎನ್ನುವುದು ಸ್ಪಷ್ಟವಾಯಿತು. ಆದರೆ 2009ರ ಚುನಾವಣೆಗಳು ಈ ಪ್ರಾದೇಶಿಕ ಜನಾದೇಶದ ಸ್ವರೂಪವನ್ನು ಒಡೆಯುವಲ್ಲಿ ಯಶಸ್ವಿಯಾದವು ಎಂದೇ ಹೇಳಬೇಕು. ಅಂದಿನ ಕಾಂಗ್ರೆಸ್‌ನ ಗೆಲುವನ್ನು ನೋಡಿ ನಮ್ಮ ಮಾಧ್ಯಮಗಳೆಲ್ಲ "ಹೇಗೆ ರಾಹುಲ್ ಯೂಥ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ" ಎನ್ನುವ ಬಗ್ಗೆ ದೀರ್ಘ ಸಂಪಾದಕೀಯಗಳನ್ನು ಬರೆದವು.
96ರ ಚುನಾವಣೆ ಬಿಜೆಪಿಗೆ ದೊಡ್ಡ ಪಾಠವಾಗಿದೆ. ಒಂದು ವೇಳೆ ಈಗಲೂ ಅದು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೆ, ಟಿಕೆಟ್ ಹಂಚಿಕೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ 96ರ ಭೂತ ಮತ್ತೆ ಅದರ ಭುಜ ಏರುವ ಅಪಾಯವಿದೆ. ಇನ್ನು ಬಿಜೆಪಿ ಮತ್ತು ಅದರ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಕೆಲವು ಜಾತಿಗಳನ್ನು ಲಘುವಾಗಿ ಪರಿಗಣಿಸುವ(ಅವರು ಹೇಗಿದ್ದರೂ ನಮಗೆ ಮತನೀಡಿಯೇ ನೀಡುತ್ತಾರೆ ಎನ್ನುವ) ಧೋರಣೆಯನ್ನು ಬದಲಿಸಿಕೊಳ್ಳಬೇಕು. ಉದಾಹರಣೆಗೆ- ಬ್ರಾಹ್ಮಣರ ಮತಗಳು ಬೇರೆಡೆಗೆ ಹೊರಳುವ ಲಕ್ಷಣಗಳು ಕಾಣಿಸುತ್ತಿವೆ. ಇದನ್ನು ನಾವು ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಾಗೇಲ್‌ಖಂಡನಲ್ಲಿ ಮತ್ತು ಕರ್ನಾಟಕದಲ್ಲಿನ 5ಋ್ಟ್ಠಡಿಣ3 ಸಮೀಕ್ಷೆಯಲ್ಲಿ ನೋಡಿದ್ದೇವೆ. ಇನ್ನು ಉ.ಪ್ರದೇಶದಲ್ಲಿ ಬಿಜೆಪಿ ಬಹಿರಂಗವಾಗಿಯೇ ಹಿಂದುಳಿದ ವರ್ಗಗಳಿಗೆ ಹೆಚ್ಚು ಮಣೆ ಹಾಕುತ್ತಿರುವುದರಿಂದ ಅಲ್ಲಿನ ಬ್ರಾಹ್ಮಣರು ಪಕ್ಷದ ಮೇಲಿನ ಮೋಹವನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಇತ್ತೀಚೆಗೆ ಉ.ಪ್ರದೇಶದ ಮೀರಟ್‌ನಲ್ಲಿ ನಡೆದ ರ್ಯಾಲಿಯಲ್ಲಿ, ಜಾಟ್ ಜನಾಂಗವನ್ನು ನೇರವಾಗಿಯೇ ಉಲ್ಲೇಖಿಸಿ, ಅವರನ್ನು ಸೆಳೆಯುವ ಪ್ರಯತ್ನವನ್ನು ಮೋದಿ ಮಾಡಲಿಲ್ಲ. ಇದನ್ನು ಅವರ ಊ್ಠ್ಠ್ಟ್ಠ ್ಟಜಿ ಞ್ಡಜ್ಜಜಟಜಟಿಡಿ ಎನ್ನಲೇಬೇಕಾಗುತ್ತದೆ. ಅವರ ಮಾತು ಜಾತ್ಯತೀತ ಮತ್ತು ಕೋಮುವಾದಕ್ಕೆ ಸೀಮಿತವಾಯಿತಷ್ಟೇ ಹೊರತು, ಅಲ್ಲಿನ ಜಾತ್ಯತೀತ ಸರ್ಕಾರ ಕೋಮುಹಿಂಸಾಚಾರದ ವೇಳೆ ಜಾಟ್‌ರ ರಕ್ಷಣೆಯಲ್ಲಿ ವೈಫಲ್ಯ ತೋರಿದ್ದನ್ನು ಅವರು ಜಾಡಿಸಲಿಲ್ಲ. ಆ ಕೋಮುಗಲಭೆಯ ನಂತರವಂತೂ ಜಾಟ್ ಜನಾಂಗ ಬಿಜೆಪಿಯತ್ತ ಮುಖಮಾಡಿದೆ. ಆದರೆ ಮೀರಟ್ ರ್ಯಾಲಿಯಲ್ಲಿನ ತಣ್ಣನೆಯ ಪ್ರತಿಕ್ರಿಯೆ, ಜಾಟ್ ಜನಾಂಗದಲ್ಲಿ ತಸು ಗೊಂದಲವಂತೂ ಮೂಡಿಸಿದೆ. ಇಂಥ ವರ್ಗಗಳ ಮುಂದೆ ಕಡಿಮೆ ಆಯ್ಕೆಗಳೇನೋ ಇರಬಹುದು. ಹಾಗಂತ ಅವುಗಳನ್ನು ಲಘುವಾಗಿ ಪರಿಗಣಿಸುವ ತಪ್ಪು ಹೆಜ್ಜೆಯನ್ನು ಇಡಬಾರದು.
1996ರ ಚುನಾವಣೆ ಎಚ್ಚರಿಕೆಯ ಗಂಟೆಯೆನ್ನುವುದೇನೋ ಸರಿ, ಆದರೆ 2 ದಶಕಗಳ ನಂತರ ಚುನಾವಣಾ ವೈಖರಿ ಬದಲಾಗುವ ಸಾಧ್ಯತೆಯಿದೆ ಎನ್ನುವ ಆಶಾಭಾವನೆಯನ್ನೂ ಅದು ಹುಟ್ಟುಹಾಕಿದೆ. ಎಲ್ಲಾ ರಾಜ್ಯಗಳು ಒಂದು ನಿರ್ದಿಷ್ಟ ರಾಷ್ಟ್ರೀಯ ಉದ್ದೇಶವಿಲ್ಲದೇ ತಮ್ಮ ರಾಜ್ಯಕ್ಕೆ ತಕ್ಕಂತೆ ಮತದಾನ ಮಾಡುತ್ತಾ ಬಂದಿದ್ದವು. ಆದರೆ ನರೇಂದ್ರ ಮೋದಿಯವರ ಆಗಮನದಿಂದ ಈ ಮಾದರಿ ಈಗ ಬದಲಾಗಿದೆ. ಭಾರತದ ಅತ್ಯಂತ ಪ್ರಖ್ಯಾತ ರಾಜಕೀಯ ನಾಯಕರಾಗಿ ಅವರೀಗ ಹೊರಹೊಮ್ಮಿದ್ದಾರೆ. ಬಿಜೆಪಿಯ ಅಸ್ತಿತ್ವ ಇದ್ದೂ ಇಲ್ಲದಂತಿರುವ  ರಾಜ್ಯಗಳಲ್ಲೂ ಈಗ ಅವರ ಬಗ್ಗೆ ಚರ್ಚೆಗಳಾಗತೊಡಗಿವೆ. ದಕ್ಷಿಣದ ತಮಿಳುನಾಡು ಮತ್ತು ತೆಲಂಗಾಣದಲ್ಲಿ, ಉತ್ತರದ ಹರ್ಯಾಣ ಮತ್ತು ಉತ್ತರಪ್ರದೇಶಗಳಲ್ಲಿ ನರೇಂದ್ರ ಮೋದಿ ಅಲೆ ಬೀಸತೊಡಗಿದೆ.
ಮತ್ತೊಮ್ಮೆ ಕಾಂಗ್ರೆಸ್ ಹಗರಣಗಳಿಂದ ದಯನೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದುರ್ಬಲ ನಾಯಕತ್ವ ಮತ್ತು ಅಧಿಕಾರ ವಿರೋಧಿ ಅಲೆಯಿಂದಾಗಿ ಆ ಪಕ್ಷ ಅಲುಗಾಡತೊಡಗಿದೆ. ಈಗ ಬಿಜೆಪಿಯ ಎದುರಿಗಿರುವ ನಿಜವಾದ ಸವಾಲೆಂದರೆ ತೃತೀಯ ಮತ್ತು ಚತುರ್ಥ ರಂಗಗಳು ಹಾಗೂ ಕಾಂಗ್ರೆಸ್‌ನೊಂದಿಗಿನ ಅವುಗಳ 'ನಿರಾಕಾರ' ಮೈತ್ರಿಯೊಂದೇ! ಈಗ ಬಿಜೆಪಿ ಕೇವಲ 180-220 ಸ್ಥಾನಗಳಿಗೆ ಬದಲಾಗಿ 250-270 ಸ್ಥಾನ ಗಳಿಕೆಯನ್ನೇ ತನ್ನ ಗುರಿಯಾಗಿಸಿಕೊಳ್ಳಬೇಕು. ವಿಚಿತ್ರವೆಂದರೆ, 1996ರಲ್ಲಿ ಬಿಜೆಪಿಗೆ ಅಡ್ಡಿಯಾಗಿದ್ದ ಕರ್ನಾಟಕ ಮತ್ತು ಬಿಹಾರ ರಾಜ್ಯಗಳು ಈ ಬಾರಿಯೂ ಬಿಜೆಪಿಗೆ ತೊಡರುಗಾಲು ಹಾಕಲು ನಿಂತಿವೆ. ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಎದುರಾಯಿತೆಂದರೆ ಮಾತ್ರ ಉತ್ತರಪ್ರದೇಶದಿಂದ ಫಜೀತಿ ಎದುರಾಗಬಹುದು. ಆದರೆ ಅಮಿತ್ ಶಾ ನೇತೃತ್ವದಡಿಯಲ್ಲಿ ಇಂಥ ಗೊಂದಲಗಳು ಎದುರಾಗುವ ಸಾಧ್ಯತೆ ಕಡಿಮೆಯೇ ಎನ್ನಬಹುದು.  
2014ರ ಬಿಜೆಪಿ ಮತ್ತು 1996ರ ಬಿಜೆಪಿಯ ನಡುವಿರುವ ಅತಿ ದೊಡ್ಡ ವ್ಯತ್ಯಾಸವೆಂದರೆ, ಮೋದಿ ಬತ್ತಳಿಕೆಯಲ್ಲಿರುವ ವಿಭಿನ್ನ ವಲಯಗಳಲ್ಲಿನ ಮತಗಳು. ಮೇಲ್ವರ್ಗದ ಜಾತಿಗಳಿಂದ ಹಿಡಿದು ಮಧ್ಯಮ ಜಾತಿಗಳವರೆಗೆ, ಅಲ್ಲಿಂದ ಹಿಂದುಳಿದ ಜಾತಿಗಳವೆರೆಗಿನ ಹಿಂದು ಮತದಾರರನ್ನು ಬೆಸೆಯುವಲ್ಲಿ ಯಶಸ್ವಿಯಾಗಿದ್ದಾರೆ ಮೋದಿ. ಬ್ರಾಹ್ಮಣ-ಬನಿಯಾ ಮತ್ತು ಠಾಕೂರರಂಥ ಮೇಲ್ವರ್ಗಗಳಷ್ಟೇ ಅಲ್ಲದೆ, ಸಾಹುಗಳು, ಜಾಟರು, ಕುರ್ಮಿಗಳು, ಯಾದವರು, ಇತ್ತ ದಕ್ಷಿಣ ಭಾರತದ- ಲಿಂಗಾಯತರು, ರೆಡ್ಡಿ, ಕಾಪು, ಕೊನೆಗೆ ಕುರುಬರೂ ಕೂಡ ಮೋದಿಗೆ ಬೆಂಬಲ ಸೂಚಿಸತೊಡಗಿದ್ದಾರೆ. ಈ ಅಭೂತಪೂರ್ವ ಸಾಮಾಜಿಕ ಮೈತ್ರಿ ಜಾತಿ ಆಧಾರಿತ ರಾಜಕೀಯ ಪಕ್ಷಗಳನ್ನು ಮೆತ್ತಗೆ ಮಾಡುವುದಷ್ಟೇ ಅಲ್ಲದೆ, ಹುಸಿ ಜಾತ್ಯತೀತ ಕಟ್ಟಡಗಳನ್ನೂ ಕೆಡವಿಹಾಕಲು ಸಿದ್ಧತೆ ನಡೆಸಿದೆ. ಆಶ್ಚರ್ಯವೆಂದರೆ ಈಗ ಎಸ್‌ಸಿ ಮತದಾರರೂ ಬಿಜೆಪಿಯತ್ತ ವಾಲುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದ ಜಾಟವ್ ಜನಾಂಗ ಮೋದಿ ನೇತೃತ್ವದ ಬಿಜೆಪಿಗೆ ಅವಕಾಶ ಕೊಟ್ಟು ನೋಡಲು ಸಿದ್ಧವಾಗಿದೆ. ಒಂದು ವೇಳೆ ಮಾಯಾವತಿಯೇನಾದರೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಿಂದ ದೂರವುಳಿದರೆ, ನಿಸ್ಸಂಶಯವಾಗಿಯೂ ಪರಿಶಿಷ್ಟ ಜಾತಿಯ ಜೈಕಾರವಂತೂ ಮೋದಿಯವರಿಗೇ ಬೀಳಲಿದೆ. ಇನ್ನು ನಾವು ನಡೆಸಿದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲೂ ಕೂಡ ದಲಿತರು ಮತ್ತು ಉಪಜಾತಿಗಳು ಮೋದಿಯವರಿಗೆ ಬೆಂಬಲ ನೀಡುತ್ತಿದ್ದಾರೆ.
1996ರ ಚುನಾವಣೆಯಲ್ಲಿ ಸುಮಾರು 65 ಪ್ರತಿಶತ ಎಸ್‌ಸಿ ಜನಾಂಗದ ಮತಗಳು ಕಾಂಗ್ರೆಸ್‌ಗೆ ವಿರುದ್ಧವಾಗಿ ಬಿದ್ದವು. ಆದರೆ ಅದರಲ್ಲಿ ಬಿಜೆಪಿಗೆ ದೊರೆತದ್ದು ಕೇವಲ 15 ಪ್ರತಿಶತದಷ್ಟು ಮತಗಳು ಮಾತ್ರ. ಈ ಸಮಯದಲ್ಲೇ ಮೋದಿ ಮುಖ್ಯವಾಗುತ್ತಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನೆಲ್ಲ ಒಂದೇ ವೇದಿಕೆಯಲ್ಲಿ ತರುವ ಶಕ್ತಿ ಅವರಿಗಿದೆ. ಆದರೆ...ಒಂದು ವೇಳೆ ಟಿಕೆಟ್ ಹಂಚಿಕೆಯ ವೇಳೆಯೇನಾದರೂ ಬಿಜೆಪಿ ಎಡವಟ್ಟು ಮಾಡಿಕೊಂಡಿತೆಂದರೆ, ಅದಕ್ಕೆ ಪೆಟ್ಟು ಬೀಳುವುದು ಖಚಿತ. ಉದಾಹರಣೆಗೆ ಕರ್ನಾಟಕವನ್ನೇ ತೆಗೆದುಕೊಳ್ಳಿ- ಕರ್ನಾಟಕ ಬಿಜೆಪಿ ಘಟಕದ ನೇತೃತ್ವವನ್ನೇಕೆ ಒಬ್ಬ ಪರಿಶಿಷ್ಟ ಜಾತಿಯ ಯುವ ನಾಯಕನಿಗೆ ಕೊಡಬಾರದು? ಅದೂ ಒಬ್ಬ ಉತ್ತರಕರ್ನಾಟಕದ ನಾಯಕನಿಗೆ?
ಚುನಾವಣೆಗಳು ಹತ್ತಿರವಾಗುತ್ತಿರುವ ಸಮಯದಲ್ಲೇ ಯುದ್ಧದ ಚಿತ್ರಣ ನಿಚ್ಚಳವಾಗತೊಡಗಿದೆ. ಈ ಜಯಲಲಿತಾ, ನಿತೀಶ್ ಕುಮಾರ್, ಮುಲಾಯಂ ಸಿಂಗ್, ಮಾಯಾವತಿ, ಲಾಲು ಪ್ರಸಾದ್‌ಗಳು ಮೋದಿ ಅಲೆಯನ್ನು ತಡೆಯಬಲ್ಲರಾ? ಭಾರತದ ರಾಜಕೀಯ ಪದ್ಧತಿಗೆ ಮರುವ್ಯಾಖ್ಯಾನ ನೀಡಿ, ಹೊಸ ಚುನಾವಣಾ ವೈಖರಿಗೆ ಮೋದಿ ಕಾರಣರಾಗುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸದ್ಯದಲ್ಲೇ ಸಿಗಲಿದೆ...

 ಡಾ. ಪ್ರವೀಣ್ ಪಾಟಿಲ್
5forty3.wordpress.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.