ಮೋದಿ ಹಣಿಯುವುದಕ್ಕೆ ಯಾವ ನೀಚತನವೂ ಕೈಗೆ ಸೈ!
ಇಂಟರ್ನೆಟ್ ಯುಗದ ಓದುಗರಲ್ಲಿ ಹೆಚ್ಚಿನವರಿಗೆ 1977ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ವಿಷಯವೊಂದು ಗೊತ್ತಿರಲಿಕ್ಕಿಲ್ಲ. ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಿದ್ದ ಸಂಜಯ್ ಗಾಂಧಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಸುದ್ದಿಯೊಂದು ಪ್ರಸಾರವಾಯಿತು. ಆಗ ಖಾಸಗಿ ಟಿವಿ ಚಾನೆಲ್ಗಳಿರಲಿಲ್ಲ. ಕಾಂಗ್ರೆಸ್ ಪಕ್ಷದ 'ಯುವರಾಜ'ನ ಮೇಲಾಗಿದೆ ಎನ್ನಲಾದ ಈ ದಾಳಿಯ ಬಗ್ಗೆ ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳು ವೈಭವೋಪೇತವಾಗಿ ವಿವರಿಸಿದ್ದೇ ವಿವರಿಸಿದ್ದು. ಆದರೆ ಆಗ ಸೆನ್ಸಾರ್ಶಿಪ್ನ ಬಿಸಿ ಆರಿರದಿದ್ದರೂ ಮುದ್ರಣ ಮಾಧ್ಯಮಗಳು ಈ ಘಟನೆಯನ್ನು ಸಂಶಯದಿಂದಲೇ ನೋಡುವ ಧೈರ್ಯ ತೋರಿದವಲ್ಲದೇ ಆ ವದಂತಿ ರೂಪದ ಸುದ್ದಿಗೆ ಅಷ್ಟಾಗಿ ಪ್ರಾಮುಖ್ಯ ನೀಡುವುದಕ್ಕೂ ಹೋಗಲಿಲ್ಲ.
ಕೆಲದಿನಗಳ ನಂತರ ಮತ ಎಣಿಕೆ ಆದಾಗ ಈ ಯುವರಾಜ ಮತ್ತೆ ತಾಯಿ ಇಂದಿರಾ ಗಾಂಧಿ ಇಬ್ಬರೂ ತಮ್ಮ ಕುಟುಂಬದ ಆಡುಂಬೊಲ ಎಂಬಂತಿದ್ದ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದರು. ಸಂಜಯ್ ಗಾಂಧಿಯವರನ್ನು ಯಾರೋ ಕೊಲ್ಲುವುದಕ್ಕೆ ಪ್ರಯತ್ನಿಸಿದ್ದರು ಎಂಬ ಸುದ್ದಿ ಅನುಕಂಪವನ್ನೇನೂ ಗಿಟ್ಟಿಸಲಿಲ್ಲ. ಕಾಮನ್ಸೆನ್ಸ್ ಮೆರೆದು ಮತ ಚಲಾಯಿಸಿದ ಜನರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಸೋಲಿನ ದವಡೆಯಲ್ಲಿರುವ ಮನುಷ್ಯನ ಹತಾಶ ಪ್ರಯತ್ನವಿದು ಎಂದು ಅವರೆಲ್ಲರೂ ಅರಿತುಕೊಂಡಿದ್ದರು.
ಈಗ 2014ರ ವಿಷಯಕ್ಕೆ ಬರೋಣ. ಇದೀಗ ಉಗ್ರಕೃತ್ಯದ ಆರೋಪ ಹೊತ್ತಿರುವ ಅಸೀಮಾನಂದರ ಜತೆ ಮಾಡಿದ್ದೆನ್ನಲಾದ ಸಂದರ್ಶನವನ್ನು ನಿಯತಕಾಲಿಕವೊಂದು ಪ್ರಕಟಿಸಿದೆ. ನಿಯತಕಾಲಿಕಗಳ ಅಸ್ತಿತ್ವಕ್ಕೆ ಸೆಣೆಸಬೇಕಿರುವ ಈ ಸಂದರ್ಭದಲ್ಲಿ ಅದರ ಈ ಯತ್ನವು ಮೇಲೆ ಉದಾಹರಿಸಿದ ಸಂಜಯ ಗಾಂಧಿ ಪ್ರಕರಣವನ್ನು ನೆನಪಿಸುತ್ತದೆ. 'ಎಡಿಟೋರಿಯಲ್ ಮ್ಯಾನೇಜರ್' ಎಂಬ ಹುದ್ದೆ ಹೊಂದಿರುವ ಸಂದರ್ಶಕಿ ಲೀನಾ ಗೀತಾ ರಘುನಾಥ್ ಅವರು ಈ ಸಂದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದೋ ಅಥವಾ ಹಾಗೆಂದುಕೊಂಡು ಪಿಗ್ಗಿ ಬಿದ್ದಿರುವುದೋ ಹೇಳುವುದಕ್ಕೆ ಕಷ್ಟ. ಆದರೆ ಈ ಮೂಲಕ ಭಯೋತ್ಪಾದನಾ ಜಾಲದಲ್ಲಿ ಆರೆಸ್ಸೆಸ್ನ ಅಗ್ರ ನಾಯಕರ ಹೆಸರಿದೆ ಎಂಬ ನಿರಾಧಾರ ಆರೋಪಗಳ ಸೃಷ್ಟಿಯ ಹಿಂದಿರುವುದು ಕಾಂಗ್ರೆಸ್ ಎಂದು ಯಾರು ಬೇಕಾದರೂ ಹೇಳಬಹುದು. ಅಂಬಾಲಾದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ಜೈಲಿನಲ್ಲಿರುವ ಅಸೀಮಾನಂದ ಇವರ ಸಂದರ್ಶನಕ್ಕೆ ಸಿಕ್ಕಿದ್ದಾದರೂ ಹೇಗೆ ಎಂಬುದು ಸ್ಪಷ್ಟವಾಗಿಲ್ಲ.
ಅಲ್ಲದೇ ಈ ಸಂದರ್ಶನವನ್ನು ಎರಡು ವರ್ಷಗಳ ಅವಧಿಯಲ್ಲಿ ಮಾಡಿದ್ದು ಎನ್ನಲಾಗುತ್ತಿದೆ. ನಾಗರ್ವಾಲ್ ಅಥವಾ ಬೋಫೋರ್ಸ್ನಂಥ ಹುಗಿದಿಟ್ಟ ಹಗರಣಗಳನ್ನು ಯಾವುದೇ ವರದಿಗಾರ ಹಂತ ಹಂತಗಳಲ್ಲಿ ತನಿಖೆ ಮಾಡಿದ ಎಂದರೆ ನಾವದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಸಂದರ್ಶನವೊಂದನ್ನು ಎರಡು ವರ್ಷಗಳ ಅವಧಿ ತೆಗೆದುಕೊಂಡು, ನಾಲ್ಕು ಭೇಟಿಯ ಸಹಾಯದಿಂದ ಮಾಡಿದೆ ಎನ್ನುತ್ತಿರುವುದು ವಿಚಿತ್ರವಾಗಿದೆ. ಬರೆಯಲಿರುವುದು ಜೀವನ ಚರಿತ್ರೆಯೋ ಇಲ್ಲವೇ ಕತೆ ಹೇಳಬೇಕಿರುವ ವ್ಯಕ್ತಿಗೆ ಸಮಯವೇ ಇಲ್ಲ ಎಂಬ ಸ್ಥಿತಿ ಇದ್ದರೆ ಇದನ್ನು ನಂಬಬಹುದು. 16 ಪುಟಗಳ ಚಿತ್ರಭರಿತ ಸುದ್ದಿ ಬೇರೆಯದೇ ವಾಸನೆ ನೀಡುತ್ತಿದೆಯಲ್ಲದೇ ಇದರಲ್ಲೂ ನರೇಂದ್ರ ಮೋದಿ ಹೆಸರನ್ನು ಎಳೆದು ತರುವುದಕ್ಕೆ ಮಾಡಿರುವ ಪ್ರಯತ್ನ ಈ ವರದಿಗೆ ಬೇರೆ ಆಯಾಮವನ್ನೇ ನೀಡುತ್ತಿದೆ.
ಮೋದಿ ವಿಜಯಯಾತ್ರೆಯನ್ನು ನಿಲ್ಲಿಸುವುದಕ್ಕೆ ತಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲೆ ಎಂಬಂತಿದೆ ಕಾಂಗ್ರೆಸ್. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೇಲೆ ಕಲ್ಲೆಸೆಯುವುದಕ್ಕೆ ಸಾಧ್ಯ ಎಂದಾದರೆ ಅದು ಯಾವ 'ರಥಯಾತ್ರೆ'ಯನ್ನೂ ಬಳಸಿಕೊಳ್ಳಬಲ್ಲುದು. ಕಾಂಗ್ರೆಸ್ ವಿಶ್ವಾಸಾರ್ಹತೆಯ ದಯನೀಯ ಕೊರತೆಯನ್ನು ಅನುಭವಿಸುತ್ತಿದೆ. ಮೂರಂಕಿಯ ಸಂಖ್ಯೆಯನ್ನು ಪಡೆಯುವುದು ಈ ಬಾರಿ ಕಾಂಗ್ರೆಸ್ಗೆ ಕಷ್ಟವಿದೆ ಎಂದು ಹಲವು ಚುನಾವಣೆ ಸಮೀಕ್ಷಾಕಾರರು ಹೇಳಿದ್ದಾಗಿದೆ. ಇವೆಲ್ಲದರ ನಡುವೆ ಕಾಂಗ್ರೆಸ್ನ ಕೊಳಕು ಆಟಗಳಿಗೆ ವೇದಿಕೆ ಕೊಡುವ ಮೂಲಕ ಮಾಧ್ಯಮದ ಒಂದು ವರ್ಗ ಅದೇಕೆ ತನ್ನ ವಿಶ್ವಾಸಾರ್ಹತೆಯನ್ನು ಹಾಳು ಮಾಡಿಕೊಳ್ಳುವುದಕ್ಕೆ ಹೊರಟಿದೆಯೋ ಅರ್ಥವಾಗುತ್ತಿಲ್ಲ. ಈ ಸಂದರ್ಶನ ಪ್ರಕಟಿಸಿದ ಪತ್ರಿಕೆ ತನ್ನ ಚಂದಾದಾರರಿಗೆ ಈ ಬಾರಿಯ ಸಂಚಿಕೆಯನ್ನು ತಿಂಗಳ ಕೊನೆಯಲ್ಲಿ ಕಳುಹಿಸುವ ತನ್ನ ಅಭ್ಯಾಸವನ್ನು ತೊರೆದು ಪ್ರಾರಂಭದಲ್ಲೇ ಕಳುಹಿಸಿದೆ. ತರಾತುರಿ ಯೋಜನೆಯೊಂದನ್ನು ಜಾರಿಗೊಳಿಸುವುದಕ್ಕೆ ತರಾತುರಿ ಮನಸ್ಥಿತಿಯೇ ಬೇಕಾಗುತ್ತದೆ ಎಂದಾಯಿತಲ್ಲವೇ?
ಹೇಗಾದರೂ ಮೋದಿ ಹಣಿಯಬೇಕು ಎಂಬ ಹತಾಶೆಯಲ್ಲಿ ಕೈಗೊಂಡ ಇನ್ನೊಂದು ನೀಚ ನಿರ್ಧಾರವೆಂದರೆ ಕ್ರಿಮಿನಲ್ ಸಂಚು ಮತ್ತು ಕೊಲೆ ಆರೋಪದ ಮೇಲೆ ಸಿಬಿಐ ಆರೋಪಪಟ್ಟಿಯಲ್ಲಿ ಇಂಟಲಿಜೆನ್ಸ್ ಬ್ಯೂರೊದ ನಿವೃತ್ತ ಅಧಿಕಾರಿಗಳನ್ನು ಎಳೆದು ತಂದಿರುವುದು. ಯುಪಿಎ ಸರ್ಕಾರದ ಸರಣಿ ಹಗರಣಗಳನ್ನು ಬೆಂಬತ್ತುವುದನ್ನು ಬಿಟ್ಟು ಈ ದೇಶದ ಅಗ್ರ ತನಿಖಾ ಸಂಸ್ಥೆ ಹೇಗಾದರೂ ಮಾಡಿ ಮೋದಿಯವರನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸುವುದಕ್ಕೆ ತನ್ನೆಲ್ಲ ಶ್ರಮವನ್ನೂ ವ್ಯಯಿಸಿತು. ಪಂಜರದ ಗಿಣಿ ಎಂಬ ಮಾತಿಗೆ ಅನ್ವರ್ಥವಾಗಿಯೇ ಕಾರ್ಯನಿರ್ವಹಿಸಿದ ಸಿಬಿಐ, ಐಬಿಯನ್ನು ವೃಥಾ ಕಟಕಟೆಗೆ ಎಳೆಯುವ ಕಾರ್ಯಕ್ಕೂ ಕೈ ಹಾಕಿದೆ. ಇದರಿಂದಾಗಿ ಭವಿಷ್ಯದಲ್ಲಿ ಗುಪ್ತ ಮಾಹಿತಿ ಕಲೆ ಹಾಕುವ ಹಾಗೂ ಭಾರತ ವಿರೋಧಿ ವ್ಯೂಹಗಳನ್ನು ಭೇದಿಸುವ ಇಂಟಲಿಜೆನ್ಸ್ನ ಕಾರ್ಯಕ್ಕೆ ಗಂಭಾರ ಹಿನ್ನಡೆ ಆಗಲಿದೆ ಎಂಬುದು ಗೊತ್ತಿದ್ದೂ ಈ ಕೆಲಸ ಮಾಡುವುದಕ್ಕೆ ಅದು ಹೇಸಲಿಲ್ಲ. ಮೋದಿಯವರನ್ನು ಸಿಕ್ಕಿಸುವ ಯತ್ನದಲ್ಲಿ ಸಾಂಸ್ಥಿಕ ಶಿಸ್ತನ್ನೇ ಪತನಗೊಳಿಸಿದರೂ ಪರವಾಗಿಲ್ಲ ಎಂಬುದದರ ಧೋರಣೆ.
ಈ ವರ್ಷದ ಮಧ್ಯದಲ್ಲಿ ದೆಹಲಿಯಲ್ಲಿ ಬರಲಿರುವ ಹೊಸ ಸರ್ಕಾರವು ತಕ್ಷಣದಲ್ಲೇ ನಮ್ಮ ದೇಶದ ಉನ್ನತ ತನಿಖಾ ಸಂಸ್ಥೆಗಳಿಗೆ ಒದಗಿರುವ ಈ ಸ್ಥಿತಿಯಿಂದ ರಕ್ಷಿಸಿ ಅವುಗಳ ಶಿಸ್ತನ್ನು ಮರು ಸಂಸ್ಥಾಪಿಸಬೇಕಿದೆ. ತಮ್ಮ ಹಿತಾಸಕ್ತಿಯನ್ನು ನೆರವೇರಿಸಿಕೊಳ್ಳುವ ದುಸ್ಸಾಹಸಗಳಿಂದ ದೇಶದ ಭದ್ರತೆಯೇ ಆತಂಕಕ್ಕೆ ಒಳಗಾಗುತ್ತದೆ ಎಂಬ ಬಗ್ಗೆ ಕಾಂಗ್ರೆಸ್ಗೆ ಕಿಂಚಿತ್ ಕಾಳಜಿಯೂ ಇದ್ದಂತಿಲ್ಲ. ಇಷ್ಟಕ್ಕೂ ತುರ್ತು ಪರಿಸ್ಥಿತಿ ನಂತರ ಎಲ್ಲರ ದ್ವೇಷಕ್ಕೆ ಗುರಿಯಾಗಿದ್ದ ಸಂಜಯ್ ಗಾಂಧಿ ವಿಷಯದಲ್ಲಿ ಆ ವ್ಯಕ್ತಿಯ ಮೇಲೆ ದಾಳಿಯೊಂದು ನಡೆದಿದೆ ಎಂದು ಬಿಂಬಿಸಿದರೆ ಎಲ್ಲವೂ ಅನುಕಂಪದಲ್ಲಿ ಬದಲಾಗುತ್ತದೆ ಎಂಬ ಭ್ರಮೆ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗಲೂ ಅದೇ ಗುಂಗಿನಲ್ಲಿ ಇರುವಂತಿದೆ. ಹೀಗಾಗಿಯೇ ತನ್ನ ದಯನೀಯ ಸ್ಥಿತಿ ಮುಚ್ಚಿಟ್ಟುಕೊಳ್ಳುವುದಕ್ಕೆ ಇಂಥ ಕ್ಷುಲ್ಲಕ ತಂತ್ರಗಳೆಲ್ಲ ಸಹಾಯ ಮಾಡಿಬಿಡಬಹುದು ಎಂಬ ಭ್ರಾಂತಿಯಲ್ಲಿ ಆ ಪಕ್ಷವಿದೆ.
ಇನ್ನೊಂದಿಷ್ಟು ಬೇರೆ ಬೇರೆ ಆಯಾಮದ ಪ್ರಶ್ನೆಗಳಿವೆ....
-ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆಯವರ ಜಾಗದಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದ ಕಾನೂನು ಸಚಿವ ಕಪಿಲ್ ಸಿಬಲ್ ಅವರು ರಾಜ್ಯಸಭೆಯಲ್ಲಿ ಹೇಳುತ್ತಾರೆ- ರಾಜ್ಯ ಸರ್ಕಾರದ ಪ್ರಾಯೋಜಿತ ಹಿಂಸೆಗಳನ್ನು ತಡೆಯುವುದಕ್ಕೆ ಕೋಮು ಹಿಂಸೆ ತಡೆ ಮಸೂದೆ ಅತ್ಯವಶ್ಯ ಎಂದು. ನಂತರ ನಿರೀಕ್ಷೆಯಂತೆ ಅವರು ಗುಜರಾತ್ನ ಉದಾಹರಣೆ ಎಳೆದು ತರುತ್ತಾರೆ. ಆದರೆ ನಾವವರಿಗೆ ಕೇಳಬೇಕಿರುವ ಪ್ರಶ್ನೆ ಕೇಂದ್ರವೇ ಹಿಂಸೆಯನ್ನು ಪ್ರಾಯೋಜಿಸಿದರೆ ಯಾರು ಕ್ರಮ ತೆಗೆದುಕೊಳ್ಳುವುದು? ಬ್ರಿಟಿಷರನ್ನು ಮತ್ತೆ ಕರೆಸಬೇಕೆ? 220ರ ಗಲಭೆಯನ್ನು ಗುಜರಾತ್ ಸರ್ಕಾರ ಪ್ರಾಯೋಜಿಸಿತ್ತು ಎಂಬುದು ಸಾಬೀತಾಗಿಲ್ಲ. ಆದರೆ 1984ರ ಸಿಖ್ ಹತ್ಯಾಕಾಂಡವನ್ನು ಅಂದಿನ ಕೇಂದ್ರ ಸರ್ಕಾರವೇ ನಿಂತು ಮಾಡಿಸಿದ್ದು ಎಂಬುದು ಜಗಜ್ಜಾಹೀರಾಗಿದೆಯಲ್ಲ?
-ಮಡದಿ ಸುನಂದಾ ಪುಷ್ಕರ್ ಅವರ ಸಂಶಯಾಸ್ಪದ ಸಾವಿನ ನಂತರವೂ ಕಾಂಗ್ರೆಸ್ ಪಕ್ಷವು ಶಶಿ ತರೂರ್ ಅವರನ್ನೇ ವಕ್ತಾರರನ್ನಾಗಿ ನೇಮಿಸುತ್ತದೆ ಅಂದರೆ ಅಲ್ಲಿ ಪ್ರತಿಭೆಗಳಿಗೆ ಕೊರತೆ ಇದೆ ಎಂದಲ್ಲವೇ? ಆ ಪ್ರಕರಣವನ್ನೇನೋ ಮುಚ್ಚಲಾಗಿದೆ. ಆದರೆ ಕೊನೆಪಕ್ಷ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಲ್ಲಾದರೂ ಶಶಿ ತರೂರ್ ಪ್ರಶ್ನೆಗೆ ಒಳಗಾಗಬೇಕಿತ್ತು.
-ತೆರಿಗೆಯಿಂದ ನುಣುಚಿಕೊಂಡು ಆದಾಯ ಇಲಾಖೆಯವರಿಗೆ ಸಿಕ್ಕುಬಿದ್ದ ಇನ್ನೊಬ್ಬರೂ ಇದರ ವಕ್ತಾರರು. ನಂತರ ತಾವು ದಂಡದ ರೂಪದಲ್ಲಿ ಕೆಲವು ಕೋಟಿ ರುಪಾಯಿಗಳನ್ನು ತೆರುವುದಾಗಿ ಇಲಾಖೆ ಎದುರು ಹೇಳಿದರು. ಆ ಬಗ್ಗೆ ಆದಾಯ ತೆರಿಗೆ ವಿಭಾಗದವರು ಇನ್ನೂ ಸಮ್ಮತಿ ಹೊಂದಿಲ್ಲ.
-ವೀರೇಂದ್ರ ಕಪೂರ್
ಅಂಕಣಕಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

