ಅಂಕಣಗಳು

ತಾಜ್‌ಮಹಲ್ ನಿಜಕ್ಕೂ ಪ್ರೇಮದ ಸ್ಮಾರಕವೇ?

ತಾಜ್‌ಮಹಲ್ ನಿಜಕ್ಕೂ ಪ್ರೇಮದ ಸ್ಮಾರಕವೇ?
Published On :

ಇವತ್ತು ವ್ಯಾಲೆಂಟೈನ್ ಡೇ. ಕೆಂಗುಲಾಬಿ, ಹೃದಯ ಚಿಹ್ನೆ ಇತ್ಯಾದಿಗಳೆಲ್ಲ ಪ್ರೇಮದ ಅನನ್ಯ ಬಿಂಬಗಳಾಗಿರುವಂತೆ 'ತಾಜ್‌ಮಹಲ್‌' ಎಂಬುದು ಪ್ರೇಮಕ್ಕೆ ರೂಪಕದಂತೆ ಬಳಸಲಾಗುತ್ತದೆ. ಪ್ರೀತಿಸೋಣ, ತಪ್ಪೇನಿಲ್ಲ. ಆದರೆ ಪ್ರೀತಿಯ ಹೆಸರಲ್ಲಿ ಪೊಳ್ಳು ಆದರ್ಶಗಳಿಗೆ ಮರುಳಾಗಬೇಕೇ? ಷಹಜಹಾನ್‌ನಿಗೆ ಅಮರಪ್ರೇಮಿಯ ಪಟ್ಟ ನೀಡುವುದಕ್ಕೂ ಮೊದಲು ಒಂದಿಷ್ಟು ಇತಿಹಾಸ ಕೆದಕಬೇಕಿದೆ. ಇಷ್ಟಕ್ಕೂ ತಾಜ್‌ಮಹಲ್ ಎಂಬುದು ಪ್ರೇಮದ ಸ್ಮಾರಕವಾ ಎಂದು ಪ್ರಶ್ನಿಸಬೇಕಿದೆ. ಪ್ರೇಮವೀರರಾಗುವವರು ಸುಳ್ಳೇ ರೋಚಕತೆಯಲ್ಲಿ ಷಹಜಹಾನ್ ಹಾದಿ ತುಳಿದರೆ ಪ್ರೇಮಕ್ಕೆ ಅರ್ಥ ಉಳಿದುಕೊಳ್ಳುವುದೇ? ತಾಜ್‌ಮಹಲ್ ನೀವಂದುಕೊಂಡಂತೆ ಆಗಿರುವುದಲ್ಲ ಎಂಬ ಬಗ್ಗೆ ಹಲವು ವಾದಗಳಿವೆ. ಅವನ್ನೆಲ್ಲ ಒಪ್ಪುವುದು, ಬಿಡುವುದು ಆಮೇಲಿನ ಮಾತು. ಪ್ರೇಮಿಗಳ ದಿನದಂದು ಅದರ ಇನ್ನಿತರ ಆಯಾಮಗಳನ್ನು ಪರಾಂಬರಿಸೋಣ ಬನ್ನಿ....

ಅದು ಜಗತ್ತಿನ ಅದ್ಭುತಗಳಲ್ಲೊಂದು. ಸುಮಾರು ಎರಡು ಲಕ್ಷ ವಿದೇಶಿಯರು ಸೇರಿದಂತೆ ಪ್ರತಿವರ್ಷ ಸುಮಾರು ಇಪ್ಪತ್ತು ಲಕ್ಷ ಜನ ಅದನ್ನು ನೋಡಲು ಬರುತ್ತಾರೆ.  ವಿದೇಶಿಯರಿಗಂತೂ ಅದನ್ನು ನೋಡದೆ ಇದ್ದರೆ ಪ್ರವಾಸ ಪರಿಪೂರ್ಣವಾಗುವುದೇ ಇಲ್ಲ.
ಷಹಜಹಾನ್ ಎಂಬ ಮೊಘಲ್ ದೊರೆ ತನ್ನ ಮಡದಿಯಾದ ಮುಮ್ತಾಜ್ ಮಹಲ್‌ಳ ಸವಿನೆನಪಿಗಾಗಿ ಕಟ್ಟಿಸಿದ ಗೋರಿ ಅದು. ಅದರ ಬಗ್ಗೆ ಹೊಸ ಕಥೆ ಹೇಳುವ ಅಗತ್ಯ ಈಗೇನಿದೆ ಎಂದು ನೀವು ಕೇಳಬಹುದು. ಆದರೆ ಆ ಭವ್ಯ ಸ್ಮಾರಕ ಷಹಜಾನನು ತನ್ನ ಮಡದಿಯ ಸಾವಿನ ನಂತರ ಅವಳ ನೆನಪಿಗಾಗಿ ಕಟ್ಟಿಸಿದ್ದು ಎಂಬುದನ್ನು ಅಲ್ಲಗಳೆಯುವ ಹಲವು ಬರಹಗಳು ಬಂದಿವೆ. ಅದು ಹಿಂದೂ ದೊರೆಯೊಬ್ಬನ ಅರಮನೆಯಾಗಿತ್ತು ಎಂದೇ ಆ ಚಿಂತನೆಗಳು ಪ್ರತಿಪಾದಿಸುತ್ತವೆ. ಹಾಗಾದರೆ ಅದು ಮುಸ್ಲಿಂ ಗೋರಿ ಹೇಗಾಯಿತು ಎಂದು ಪ್ರಶ್ನಿಸಿದವರಿಗೆ ಸಿಗುವ ಉತ್ತರ- ಷಹಜಹಾನ್ ಏಕೆ, ಅವನ ಮುತ್ತಾತ ಬಾಬರ್‌ಗಿಂತ ಮೊದಲೇ ಆ ಮಹಲು ಕಟಲ್ಪಟ್ಟಿತ್ತು. ಷಹಜಹಾನನ ಆಸ್ಥಾನದ ಇತಿಹಾಸಕಾರ ಅಬ್ದುಲ್ ಹಮೀದ್ ಲಹೋರಿ ಎಂಬಾತ ಬರೆದ ಕೃತಿ ಪಾ(ಬಾ)ದಷಹನಾಮಾ. ಆಗ್ರಾ ಎಂಬ ಮಹಾ ನಗರದ ದಕ್ಷಿಣದಲ್ಲಿ ಭವ್ಯವಾದ, ಹಾಗೂ ರಮಣೀಯವಾದ ಉದ್ಯಾನದ ನಡುವೆ ಒಂದು ಭವನ ಇದೆ. ಇದನ್ನು ರಾಜಾ ಮಾನ್ಸಿಂಗ್ ಮಹಲ್ ಎನ್ನುತ್ತಾರೆ. ಪ್ರಸ್ತುತ ಅದರ ಯಜಮಾನ ರಾಜಾ ಜಯಸಿಂಗ್ ಆಗಿದ್ದಾನೆ. ತನ್ನ ಮನೆತನದ ಪಾರಂಪರಿಕ ಆಸ್ತಿ ಎಂದು ಅದನ್ನು ರಾಜಾ ಜಯಸಿಂಗ್‌ನು ಅಮೂಲ್ಯವೆಂದು ಸಂರಕ್ಷಿಸಿದ್ದರೂ, ಷಹಜಹಾನ್‌ಗೆ ಉಚಿತವಾಗಿ ಬಿಟ್ಟುಕೊಡಲು ಒಪ್ಪಿದ್ದನು.  ಇದಕ್ಕೆ ಪ್ರತಿಫಲವಾಗಿ ಷಹಜಹಾನ್ ರಾಜಾ ಜಯಸಿಂಗ್‌ಗೆ ಷರೀಫಾಬಾದನ್ನು ನೀಡಿದನು. ತನಗೆ ದೊರೆತ ಮಹಲಿನಲ್ಲಿ ಮಾರನೇ ವರ್ಷ ಸ್ವರ್ಗವಾಸಿಯಾದ ರಾಣಿಯ ಶರೀರವನ್ನು ಷಹಜಹಾನ್ ಅದರಲ್ಲಿ ಸಮಾಧಿ ಮಾಡಿದ ಎಂಬ ವಿವರಗಳನ್ನು ಅದರಿಂದ ಹೆಕ್ಕಿಡುವ ಇತಿಹಾಸಕಾರರು, ಆ ಮೂಲಕ ಮುಮ್ತಾಜ್  ತೀರಿಕೊಳ್ಳುವ ಮೊದಲೇ ಅಲ್ಲಿ ಪುರಾತನ ತಾಜಮಹಲ್ ಇತ್ತು ಎಂದು ಪ್ರತಿಪಾದಿಸುತ್ತಾರೆ.   
1631 ಜೂನ್ 17ರಂದು ಮುಮ್ತಾಜ್‌ಳು ನಿಧನಳಾಗುತ್ತಾಳೆ. ಆಗ ಅವಳನ್ನು ಬುರ್ಹಾನ್‌ಪುರದಲ್ಲಿರುವ ಜೈನಾಬಾದ ತೋಟದಲ್ಲಿ ತಾತ್ಕಾಲಿಕವಾಗಿ ಸಮಾಧಿ ಮಾಡಲಾಗುತ್ತದೆ. ಡಿಸೆಂಬರ್ 11 ರಂದು ಅವಳ ಕಳೆಬರವನ್ನು ಅಲ್ಲಿಂದ ಆಗ್ರಾ (ಅಕ್ಬರಾಬಾದ್)ಗೆ ತರಲಾಗುತ್ತದೆ. ನಂತರ 1632ರ ಜನವರಿ 15ರಂದು ಮಾನ್‌ಸಿಂಗ್‌ನ ಅರಮನೆಯಲ್ಲಿ ಸಮಾಧಿ ಮಾಡಲಾಯಿತು ಎಂಬ ವಿಷಯವನ್ನು ಇತಿಹಾಸಕಾರ ಎ. ಆರ್. ಪುಲ್ಲರ್ ಅವರು ಷಹಜಹಾನ್ನಾಮಾ (ಪುಟ 73-74)ದಲ್ಲಿ ಉಲ್ಲೇಖವಾಗಿರುವದನ್ನು ಎತ್ತಿತೋರಿಸಿದ್ದಾರೆ.  
ತಾಜಮಹಲ್‌ಗೆ ಆ ಹೆಸರು ಮುಮ್ತಾಜ್ ಮಹಲ್‌ಳಿಂದ ಬಂತು ಎಂಬುದಕ್ಕೆ ಯಾವ ಐತಿಹಾಸಿಕ ಮತ್ತು ವೈಜ್ಞಾನಿಕ ಪುರಾವೆಗಳೂ ನಮಗೆ ಸಿಗುವುದಿಲ್ಲ. ಇಷ್ಟಕ್ಕೂ ಷಹಜಹಾನ್‌ನ ಹೆಂಡತಿಯ ಹೆಸರು ಮುಮ್‌ತಾಜ್ ಮಹಲ್ ಅಲ್ಲ. ಅವಳ ನಿಜವಾದ ಹೆಸರು ಅಂಜುಮಾನ್ ಬಾನು ಬೇಗಮ್. ಹಾಗೆಯೇ ತಾಜ್ ಹಾಗೂ ಮಹಲ್ ಎಂದು ಹೆಸರನ್ನು ತುಂಡರಿಸಿ ಒಂದು ಸ್ಮಾರಕಕ್ಕೆ ಇಡುವ ಸಂಪ್ರದಾಯ ಮುಸ್ಲಿಮರಲ್ಲಿ ಇಲ್ಲ. ಅಲ್ಲದೆ, ಗೋರಿಗಳನ್ನು ಮಹಲ್ ಎಂದು ಕರೆಯುವ ಪುರಾವೆ ಜಗತ್ತಿನ ಯಾವ ಭಾಗದಲ್ಲೂ ಕಂಡುಬರುವದಿಲ್ಲ.  ಮಹಲ್ ಎಂಬುದು ಹಿಂದೂ ಶಬ್ದವಾಗಿದೆ.  ತಾಜ್‌ಮಹಲ್ ಅನ್ನು ಷಹಜಹಾನ್ ಅಭಿವೃದ್ಧಿ ಪಡಿಸಿರಬಹುದಾಗಲೀ, ಆತನೇ ಕಟ್ಟಿಸಿದ್ದು ಎಂದು ದೃಢವಾಗಿ ಹೇಳುವುದಾದರೂ ಹೇಗೆ?
ಈ ನಿಟ್ಟಿನಲ್ಲಿ ಗಮನ ಸೆಳೆಯುವ ಇನ್ನೊಂದು ದಾಖಲೆ ಇದೆ. ಅದು ಷಹಜಹಾನ್‌ನ ಮಗ ಔರಂಗಜೇಬ 1652ರಲ್ಲಿ ತನ್ನ ತಂದೆಗೆ ಬರೆದ ಪತ್ರ. ಅದರಲ್ಲಿ ತನ್ನ ತಾಯಿಯ ಸಮಾಧಿ ಮಾಡಿದ ಸ್ಥಳದಲ್ಲಿ ಇರುವ ಏಳು ಅಂತಸ್ತುಗಳ ಭವನ ಬಹಳ ಪುರಾತನವಾದುದೆಂದು, ಗುಮ್ಮಟ ಬಿರುಕು ಬಿಟ್ಟಿದೆ ಎಂದು, ಎಲ್ಲೆಂದರಲ್ಲಿ ನೀರು ಸೋರುತ್ತಿದೆಯಾದ್ದರಿಂದ ಅದನ್ನು ತುರ್ತಾಗಿ ದುರಸ್ಥಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡ ವಿಷಯವಿದೆ.
ಈ ಮಹಲು ಮುಮ್ತಾಜ್‌ಳ ಗೋರಿಯಲ್ಲ ಎಂಬುದಕ್ಕೆ ಮತ್ತಷ್ಟು ಪುರಾವೆಗಳಿವೆ. ಈ ತೆಜೋಮಹಲ್‌ನಲ್ಲಿ ಎರಡು ನೆಲಮನೆಗಳು, ಏಳು ಅಂತಸ್ತುಗಳು ಅನೇಕ ಗೋಪುರಗಳು ಇವೆ. ಇದರಲ್ಲಿ 350 ಕೊಠಡಿಗಳಿವೆ.  ಅಂಗರಕ್ಷಕರ ಕೊಠಡಿ, ಅತಿಥಿ ಗೃಹಗಳು, ಅಟ್ಯಾಚ್ಡ್ ಕೊಠಡಿಗಳು, ಕೈದಿಗಳನ್ನಿರಿಸುವ ನೆಲ ಮಾಳಿಗೆ, ರಹಸ್ಯ ಸಮಾಲೋಚನಾ ಕೊಠಡಿಗಳು, ಭದ್ರವಾದ ದ್ವಾರ ಬಾಗಿಲುಗಳು, ಸುರಂಗ ಮಾರ್ಗ, ರಾಜ ಪರಿವಾರ, ನೌಕರರು, ಅತಿಥಿಗಳಿಗೆ ವಾಸಿಸಲು ನೂರಾರು ಕೊಠಡಿಗಳು, ಗೋಶಾಲೆಗಳು, ಕುದುರೆ ಲಾಯಗಳು, ವಾದ್ಯ ಶಾಲೆಗಳು, ಹಿಂದೂ ವಾಸ್ತು ಪ್ರಕಾರ ನಿರ್ಮಿಸಿದ ಅಷ್ಟ ಭುಜ ಮಂದಿರಗಳು, ಗೋಪುರಗಳ ಮೇಲೆ ಇರುವ ತ್ರಿಶೂಲಾಕಾರದ ಕಳಸಗಳು, ಸಂಪತ್ತನ್ನು ಅಡಗಿಸಿಡಲು ಪ್ರತಿ ಅಂತಸ್ತಿನಲ್ಲೂ ಬಾವಿಗಳು, ಹೀಗೆ ಒಂದು ಅರಮನೆಯಲ್ಲಿ ಇರಬೇಕಾದ ಅನೇಕ ವ್ಯವಸ್ಥೆಗಳು ಇದರಲ್ಲಿ ಇವೆ. ಒಂದು ಗೋರಿ ಅಥವಾ ಸಮಾಧಿ ಕಟ್ಟಡದಲ್ಲಿ ಇಂತಹ ಸೌಲಭ್ಯ ಮತ್ತು ಸವಿಸ್ತಾರಗಳು ಇರಲು ಸಾಧ್ಯವೇ?
ಒಂದು ಅರಮನೆಯನ್ನು ಗೋರಿಯಾಗಿಸಲು ಷಹಜಹಾನ್ ಪ್ರಯತ್ನಿಸಿದ ಕುರುಹುಗಳು ಈಗಲೂ ಅಲ್ಲಿ ಕಾಣಸಿಗುತ್ತವೆ. ಯಾರೂ ನೋಡದಂತೆ ಬಹಳಷ್ಟು ಕೊಠಡಿಗಳನ್ನು ಕಲ್ಲು ಮಣ್ಣು ತುಂಬಿಸಿ ಇಟ್ಟಿಗೆಗಳಿಂದ ಗೋಡೆ ಕಟ್ಟಿ ಮುಚ್ಚಲಾಗಿದೆ. ಏಳು ಅಂತಸ್ತುಗಳ ಈ ಮಹಲಿನಲ್ಲಿ ಐದು ಅಂತಸ್ತುಗಳನ್ನು ಸೀಲ್ ಮಾಡಿ ಮುಚ್ಚಲಾಗಿದೆ. ಇಂದಿಗೂ ಗೋರಿಗಳು ಇರುವ ಎರಡು ಅಂತಸ್ತುಗಳನ್ನು ಮಾತ್ರ ಪ್ರವಾಸಿಗರಿಗೆ ನೋಡಲು ತೆರೆದಿಡಲಾಗಿದೆ. ಇಷ್ಟರ ನಡುವೆಯೂ, ಆ ಮಹಲಿನಲ್ಲಿ ಅಲ್ಲಲ್ಲಿ ಹಿಂದೂ ಧರ್ಮಾಚರಣೆಯ ಚಿಹ್ನೆಗಳು ಕಂಡುಬರುತ್ತವೆ. ಷಹಜಹಾನ್ ಅಂತಹ ಹಲವಾರು ಕುರುಹುಗಳನ್ನು ವಿರೂಪಗೊಳಿಸಿ ಇಸ್ಲಾಂ ಚಿಹ್ನೆಗಳನ್ನು ಕೆತ್ತಿಸಲು ಪ್ರಯತ್ನಿಸಿರುವುದು ಕಾರ್ಬನ್ ಸ್ಟಿಂಗ್‌ನಿಂದ ಸಾಬೀತಾಗಿದೆ.
ಹಾಗೆಯೇ 1857ರಲ್ಲಿ  ಬ್ರಿಟಿಷ್ ಸೈನಿಕರು ಹಾಗೂ ಸಿಬ್ಬಂದಿ ಸಹ ತಾಜಮಹಲ್ ಮೇಲೆ ದಾಳಿಮಾಡಿ ಮಹಲ್‌ನ ಗೋಡೆಗಳನ್ನು ವಿರೂಪಗೊಳಿಸಿ ಅದರಲ್ಲಿದ್ದ ವಿಶಿಷ್ಟ ಹರಳುಗಳನ್ನು ಕಿತ್ತುಕೊಂಡು ಹೋದರು. ವಿರೂಪಗೊಂಡ ಮಹಲನ್ನು ಕರ್ಜನ್ 1908ರಲ್ಲಿ ದುರಸ್ತಿಮಾಡಿಸಿದ ಎಂಬ ಅಂಶ ಬ್ರಿಟಿಷ್ ದಾಖಲೆಗಳಿಂದ ತಿಳಿದುಬರುತ್ತದೆ.
ತಾಜ್‌ಮಹಲ್ ಅನ್ನು ಕ್ರಿ.ಶ. 1155ರಲ್ಲಿ ಜೈಪುರದ ರಾಜಾ ಪರಮಾರದೇವನ ಮುಖ್ಯಮಂತ್ರಿಯಾಗಿದ್ದ ಸುಲಕ್ಷಣ ಕಟ್ಟಿಸಿದ. ಅದನ್ನು ರಾಜಾ ಮಾನಸಿಂಗ್ ಮಂಜಿಲ್ ಎಂದು ಕರೆಯಲಾಗುತ್ತಿತ್ತು ಎಂದು ಷಹಜಾನನ ಆಸ್ಥಾನ ಇತಿಹಾಸಕಾರ ದಾಖಲಿಸಿದ್ದಾನೆ ಎಂಬ ಪ್ರತಿಪಾದನೆಯೂ ಇದೆ. ಈ ಮಂಜಿಲ್ ಆವರಣದಲ್ಲಿ ತೇಜೋಮಹಲ್ ಎಂಬ ಶಿವದೇವಾಲಯ ಇತ್ತು ಎಂಬ ವಿಷಯ ಜಾನ್ಸಿ, ಆಗ್ರಾ, ಖಾನಪೂರ ಸುತ್ತಮುತ್ತ ಇರುವ ಹಳ್ಳಿಗಳ ಜನಪದ ಬರವಣಿಗೆಯಲ್ಲಿ ಹಾಗೂ ಮೌಖಿಕ ಕಥೆಗಳಲ್ಲಿ ದಾಖಲಾಗಿದೆ. ಅಲ್ಲದೆ ದೇವಾಲಯದ ಆಕಾರ ವೇದಿಕ್ ಶೈಲಿಯಲ್ಲಿತ್ತು ಎಂಬ ಸಾಕ್ಷ್ಯಾಧಾರಗಳನ್ನು ಸ್ಟಿಫನ್ ನ್ಯಾಪ್ ಎಂಬ ಆಂಗ್ಲ ವಾಸ್ತುಶಾಸ್ತ್ರಜ್ಞ ತಿಳಿಸುತ್ತಾನೆ.
ಇಂತಹ ನೂರಾರು ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ಇತಿಹಾಸಕಾರ ಪಿ. ಎನ್. ಓಕ್ ಅವರು ಸನ್ 2000ರಲ್ಲಿ ಸುಪ್ರೀಮ್ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ತಾಜ್‌ಮಹಲ್ ಅನ್ನು ಕಟ್ಟಿಸಿದವನು ಷಹಜಹಾನ್ ಅಲ್ಲ, ಪರಮಾರದೇವ ಎಂದು ಹಾಗೂ ಅದು ಹಿಂದೂ ದೇವಾಲಯ ಎಂದು ಘೋಷಿಸಬೇಕೆಂದು ಕೇಳಿಕೊಂಡರು. ಇದೇ ರೀತಿ 2005ರಲ್ಲಿ ಅಮರನಾಥ ಮಿಶ್ರಾ ಎಂಬವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದರು. ಇವೆರಡೂ ಅರ್ಜಿಗಳನ್ನು ವಜಾ ಮಾಡಲಾಯಿತು. ಅಂದರೆ ಇವರ ವಾದ ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು ಎಂದರ್ಥವಲ್ಲ. ಈಗ ಆ ವಿಷಯವನ್ನು ಕೆದಕಿದರೆ ಮತ್ತೊಂದು ವಿವಾದ ಉಂಟಾಗಿ ಹಿಂದೂ-ಮುಸ್ಲಿಂ ಸಾಮರಸ್ಯ ಕದಡಬಹುದು ಎಂಬ ಉದ್ದೇಶದಿಂದ ತೆಗೆದುಕೊಂಡ ಕ್ರಮ ಅದು ಅಷ್ಟೆ.
ಮುಮ್ತಾಜ್ ಮಹಲ್‌ಳ ಸಾವಿನ ನಂತರ ಷಹಜಹಾನ್ ಇನ್ನಿಲ್ಲದಂತೆ ನೊಂದನಂತೆ ಎಂಬ ಕತೆಗಳೆಲ್ಲ ನಿಮ್ಮನ್ನು ರೋಮ್ಯಾಂಟಿಕ್ ಅಮಲಿನಲ್ಲಿ ತೇಲಿಸಬಹುದು. ಷಹಜಹಾನ್ ಚರಿತ್ರೆಯ ಒಬ್ಬ ಅಮರ ಪ್ರೇಮಿ, ಮುಮ್ತಾಜ್‌ಳನ್ನು ಬಿಟ್ಟರೆ ಆತನಿಗೆ ಜಗತ್ತೇ ಇರಲಿಲ್ಲ ಎಂಬ ಚಿತ್ರಣವನ್ನು ಇವು ಕಟ್ಟಿಕೊಡುತ್ತವೆ. ಆದರೆ ಅಷ್ಟೊಂದು ಭಾವುಕರಾಗಬೇಕಾದ ಅಗತ್ಯವೇನೂ ಇಲ್ಲವೆಂದೆನಿಸುತ್ತದೆ. ಏಕೆಂದರೆ ಅಂಜುಮಾನ್ ಬೇಗಮ್ ಆಲಿಯಾಸ್ ಮುಮ್ತಾಜ್‌ಳನ್ನು ವರಿಸುವುದಕ್ಕೂ ಪೂರ್ವದಲ್ಲಿ ಷಹಜಹಾನನಿಗೆ ಇಬ್ಬರು ಹೆಂಡಿರಿದ್ದರು. ಅವರಿಂದ ಸಂತಾನವೂ ದೊರೆತಿತ್ತು. ಮುಮ್ತಾಜ್ ಗತಿಸಿದ ದುಃಖದಲ್ಲಿ ಕೊಚ್ಚಿಹೋದ(?) ನಂತರವೂ ಷಹಜಹಾನ್ ಪುರಸೊತ್ತು ಮಾಡಿಕೊಂಡು ಇನ್ನೆರಡು ಮದುವೆಯಾಗಿದ್ದ. ಅಂದಹಾಗೆ ಮುಮ್ತಾಜ್ ಸತ್ತಿದ್ದು ತನ್ನ ಹದಿನಾಲ್ಕನೇ ಮಗುವನ್ನು ಹೆರುವ ಸಂದರ್ಭದಲ್ಲಿ. ಹೀಗೆಲ್ಲ ಒಂದರ ಹಿಂದೆ ಒಂದರಂತೆ ಮಕ್ಕಳ ಉತ್ಪಾದನೆ ಮಾಡುತ್ತಿದ್ದುದೇ ಮುಮ್ತಾಜ್ ಮೇಲೆ ಆತನಿಗಿದ್ದ ಪ್ರೀತಿಯನ್ನು ಸೂಚಿಸುತ್ತದೆ ಎಂದು ವಾದಿಸುವವರು ನೀವಾಗಿದ್ದರೆ, ಷಹಜಹಾನ್‌ನನ್ನು ಅಮರಪ್ರೇಮಿಗಳ ಸಾಲಿಗೆ ಸೇರಿಸಬಹುದು!
ಈ ದೊರೆಯ ಜನಪ್ರೀತಿ ಹೇಗಿತ್ತು ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ತನ್ನ ತಂದೆ ಅಕ್ಬರನು ಮುಸ್ಲಿಮೇತರರ ವಿಷಯದಲ್ಲಿ ಅನುಸರಿಸಿದ ಉದಾರ ನೀತಿಗಳನ್ನೆಲ್ಲ ಗಾಳಿಗೆ ತೂರಿದ ಕುಖ್ಯಾತಿ ಷಹಜಹಾನ್‌ನದ್ದು. ಕಟ್ಟರ್ ಮುಸ್ಲಿಮ್‌ವಾದಿಯಂತೆ ನಡೆದು, ಷರಿಯಾ ಕಾಯ್ದೆ ಮೂಲಕ ಕ್ರೈಸ್ತರು ಮತ್ತು ಮುಸ್ಲಿಮರು ಪೂಜಾಸ್ಥಳಗಳನ್ನು ನಿರ್ಮಿಸುವುದಕ್ಕೆ ಪ್ರತಿಬಂಧ ಹೇರಿದ್ದೂ ಅಲ್ಲದೇ ಹಲವು ದೇವಾಲಯಗಳನ್ನು ಧರೆಗುರುಳಿಸಿದ ದಾಖಲೆಯೂ ಇವನ ಹೆಸರಲ್ಲಿದೆ. ಇಂಥ ಸಂಕುಚಿತ ದ್ವೇಷದ ವ್ಯಕ್ತಿತ್ವವನ್ನು ಗ್ರೇಟ್ ಎಂದು ನೆನಪಿಸಿಕೊಳ್ಳುತ್ತ, ತಾಜ್‌ಮಹಲ್ ಕಟ್ಟಿದ್ದಾನೆ ಎಂಬ ಬೆರಗಲ್ಲಿ ಕಳೆದುಹೋಗುವುದು ಪ್ರೇಮವನ್ನು ಸೆಲಬ್ರೇಟ್ ಮಾಡಿದಂತಾಗುತ್ತದೆಯೇ ಎಂಬ ಪ್ರಶ್ನೆಯನ್ನು ಭಾರತೀಯರು ಕೇಳಿಕೊಳ್ಳಬೇಕು. ಅದೇನೆ ಇದ್ದರೂ ಇಷ್ಟೆಲ್ಲ ಸಂಶಯಗಳನ್ನು ಹುದುಗಿಸಿಕೊಂಡಿರುವ ತಾಜ್‌ಮಹಲ್ ಅನ್ನು ಪ್ರೇಮದ ಅನನ್ಯ ಸ್ಮಾರಕ ಎಂದು ಪುಳಕಗೊಳ್ಳುವುದು ನಮ್ಮ ಪೆದ್ದುತನವಾಗಬಹುದು ಅಷ್ಟೇ.

-ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ
gumgolmn@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.