ಕುಂವೀ ಟೀಕೆ ಹಾಗೂ ಭಾಷಾಂತರ ಕೊರತೆಯಿಂದ ಸಂದಿಗ್ಧವಾಗಿರುವ ಆಯ್ಕೆ
ಕುಂವೀ ಆಕ್ರೋಶಗೊಂಡಿದ್ದಾರೆ. ಅವರ ಮಾತುಗಳಲ್ಲಿ ಅದು ಸ್ಪಷ್ಟವಾಗಿದೆ. ಮಡುಗಟ್ಟಿ ನಿಂತಿದ್ದ ಸಿಟ್ಟು, ಸೆಡವುಗಳೆಲ್ಲವನ್ನೂ ಅವರು ಹೊರ ಹಾಕಿದ್ದಾರೆ. ಅವರ ಮಾತುಗಳನ್ನು ಬಿಡಿಸಿ ವಿಚಾರ ಮಾಡೋಣ. ಪ್ರಶಸ್ತಿಗಳು-ಜ್ಞಾನಪೀಠ ಪ್ರಶಸ್ತಿಗಳು ಲಾಬಿಯಿಂದ ಬರುತ್ತವೆ ಎಂಬುದು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಲಾಬಿಯನ್ನು ಮಾಡಲು ಸಾಧ್ಯವೇ ಇಲ್ಲ. ಕಮ್ಯುನಿಸ್ಟ್ ರಾಷ್ಟ್ರಗಳೂ ಅವುಗಳಿಂದ ಹೊರತಾಗಿಲ್ಲ. ಸಾಹಿತ್ಯದ ಅನೇಕ ಅಕಾಡೆಮಿಯ ಪೀಠಗಳು ಲಾಬಿ ಕೃಪಾಪೋಷಿತವೇ. ಸಾಹಿತ್ಯ ಪ್ರಶಸ್ತಿಗಳು ಇದನ್ನು ಮೀರಿ ನಿಲ್ಲಬೇಕು ಎಂಬುದು ಸದಾಶಯ. ಜ್ಞಾನಪೀಠ ಪ್ರಶಸ್ತಿ ಬರಬೇಕಾದರೆ ಅವರ ಕೃತಿಗಳು -ಕನ್ನಡದಲ್ಲಿ ಬರೆದ ಕೃತಿಗಳು ಉಳಿದ ಭಾಷೆಗಳಿಗೆ ಭಾಷಾಂತರವಾಗಬೇಕು. ಭಾಷಾ ಪಂಡಿತರೇ ಅಲಭ್ಯವಾಗಿರುವಾಗ ಈ ಕಾಲದಲ್ಲಿ ಇನ್ನು ದ್ವಿ-ಭಾಷಾ ಪಂಡಿತರು, ತ್ರಿಭಾಷಾ ಪಂಡಿತರು ಸಿಗುವುದು ವಿರಳ. ಇದಕ್ಕಾಗಿ ನಮಗೆ ಇರುವುದು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಮಾತ್ರ. ಆದುದರಿಂದ ಕನ್ನಡದ ಶ್ರೇಷ್ಠ ಕೃತಿಗಳು ನಿರಂತರವಾಗಿ ಆಂಗ್ಲಭಾಷೆಗೆ ಭಾಷಾಂತರವಾಗಬೇಕು. ಅವನ್ನು ಇತರ ಭಾಷಾ ಪಂಡಿತರು ಅಧ್ಯಯನ ಮಾಡಿ ಇಡೀ ಭಾರತದಲ್ಲಿ ಈ ವರ್ಷ, ಅಥವಾ ವರ್ಷಗಳಲ್ಲಿ ಈ ಸಾಹಿತಿ ಶ್ರೇಷ್ಠ ಕೃತಿಕಾರ ಎಂದು ಪರಿಗಣಿಸಿ ಪ್ರಶಸ್ತಿ ನೀಡುವುದಾದರೆ ಅದಕ್ಕೊಂದು ಅರ್ಥ ಬರುತ್ತದೆ. ಹಾಗಾದರೆ ಲಾಬಿ ಎಲ್ಲಿಂದ ಶುರುವಾಗುತ್ತೆ ಅಂದರೆ ಒಂದು ಭಾಷೆಯ ಶ್ರೇಷ್ಠ ಕೃತಿ-ಕಥೆ, ಕಾದಂಬರಿ, ನಾಟಕ, ಕವನ ಇತ್ಯಾದಿ ಇಲ್ಲಿ ಆರಿಸ್ತೇವಲ್ಲ-ಆಗ ಲಾಬಿಯಾಗುತ್ತದೆ, ಗುಂಪು ಶುರುವಾಗುತ್ತೆ. ಈ ಗುಂಪು ಒಮ್ಮೊಮ್ಮೆ ನೇರವಾಗಿ, ಇನ್ನೊಮ್ಮೆ ಪರೋಕ್ಷವಾಗಿ ಲೇಖಕನ ಸಮ್ಮತಿಯಿಂದಲೇ ನಡೆಯುತ್ತದೆ. ಈ ಲಾಬಿ ಪ್ರಾಂತೀಯ, ಜಾತಿಯ, ಋಣದ (ಅಂದರೆ ನಮ್ಮ ಮೇಷ್ಟ್ರು, ನಮಗೆ ಸಹಾಯ ಮಾಡಿದವರು, ಮಾಡುವವರು, ಪರಿಚಯದವರು ಇತ್ಯಾದಿ) ಮೂಲಗಳಿಂದ ಬರುತ್ತದೆ. ಭಾರತದ ಶ್ರೇಷ್ಠ ಮನಸ್ಸುಗಳ ಚಿಂತನೆಗಳು, ದರ್ಶನ ಯಾವ ಕಡೆಗೆ ಇದೆ ಎಂಬುದು ಗೊತ್ತಾಗದೇ ನಮ್ಮದೇ ಭಾಷಾ ಕೂಪದಲ್ಲಿ ನಾವು ಇದ್ದೇವೆ. ಆದುದರಿಂದ ಇಂಗ್ಲಿಷ್ ಬಲ್ಲ, ಓದಿದ ಅನೇಕ ಇಂಗ್ಲಿಷ್ ಕೃತಿಗಳನ್ನು ಸಾರಾಸಗಟಾಗಿ ಕನ್ನಡಕ್ಕೆ ತಂದರೂ ಉಳಿದವರಿಗೆ ಗೊತ್ತೇ ಆಗದೇ ಇರಬಹುದು. ಕನ್ನಡದ ಶ್ರೇಷ್ಠ ಕೃತಿಗಳು ಆಂಗ್ಲ ಭಾಷೆಗೆ ಭಾಷಾಂತರವಾಗುವ ಒಂದು ನಿರಂತರ ವ್ಯವಸ್ಥೆ ಇರುವುದಿಲ್ಲ. ಕೇಂದ್ರದ ಎನ್ಬಿಟಿ ಆಶಯ ಇದ್ದರೂ ಅದು ತುಂಬಾ ವಿಳಂಬ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಂದ ಮೇಲೆ ಅವು ಇತರ ಭಾಷೆಗೆ ಭಾಷಾಂತರವಾಗುತ್ತವೆ, ಎಷ್ಟೋ ವರ್ಷಗಳ ಮೇಲೆ. ಈಗ ಹುಟ್ಟಿಕೊಂಡಿರುವ 'ಕುವೆಂಪು ಭಾಷಾ ಭಾರತಿ' ಒಂದು ಆಶಾದಾಯಕ ಸಂಸ್ಥೆ.
ಕನ್ನಡದಲ್ಲಿ ಶ್ರೇಷ್ಠ-ವಾರ್ಷಿಕ ಕತೆಗಳು, ಕವಿತೆಗಳನ್ನು ಆರಿಸುವುದು ಹೇಗೆ? ಪುನಃ-ಸಾಹಿತ್ಯ ಅಕಾಡೆಮಿ ಒಂದು ಸಮಿತಿ ರಚಿಸುತ್ತದೆ- ಅದು ಕೇಂದ್ರವೇ ಇರಲಿ, ರಾಜ್ಯವೇ ಇರಲಿ. ಈ ಸಮಿತಿಯ ಸದಸ್ಯರು ಪೂರ್ವಗ್ರಹಪೀಡಿತರಲ್ಲ ಎನ್ನುವುದಕ್ಕೆ ಬರುತ್ತದೆಯೇ? ಇದು ಇನ್ನಷ್ಟು ಸ್ಪಷ್ಟವಾಗುವುದು ಹತ್ತೋ, ಹದಿನೈದು ವರ್ಷಕ್ಕೆ. ಕನ್ನಡದ ಪ್ರಸಿದ್ಧ ಲೇಖಕರ ಅಂತಾಲಜಿ ತಂದಾಗ ಗೊತ್ತಾಗುತ್ತದೆ. ಇಷ್ಟು ವರ್ಷ ಸಾಹಿತ್ಯ ಅಕಾಡೆಮಿ ಕನ್ನಡದ ಒಳ್ಳೆಯ ಕಥೆ, ಕವನಗಳು, ಈ ಅಂತಾಲಜಿಯಲ್ಲಿ ಕಣ್ಮರೆಯಾಗಿ ಬೇರೆಯವರ -ಹೊಸಬರ ಕಥೆ, ಕವಿತೆ ಸೇರಿರುತ್ತದೆ. ಅಕ್ಷರ ಪ್ರಕಾಶನ ಕವಿತೆಗಳು ಅಂತಾಲಜಿ ಸರಿಯಿಲ್ಲ ಎಂದು ಲಂಕೇಶರು ಮತ್ತೊಂದು ಅಂತಾಲಜಿ ತರಲಿಲ್ಲವೇ. ಹಾಗೇ ಅವರವರ ಆದ್ಯತೆಗಳಿಗೆ ಅವರವರದೇ ವಾದಗಳಿರಬಹುದು;
ಇರುತ್ತವೆ. ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ಸ್ವಾತಂತ್ರ್ಯ ಬಂದ ಆರಂಭದಲ್ಲೇ ಅಕಾಡೆಮಿಗಳ ಪರಿಕಲ್ಪನೆಯನ್ನು ಪಂಡಿತ ನೆಹರೂ ಅವರು ಮಾಡಿದರೆ, ಎಲ್ಲಾ ರಾಜ್ಯಗಳೂ ಇವುಗಳನ್ನು ಅನುಸರಿಸಿದವು ತಮ್ಮದೇ ರೀತಿಯಲ್ಲಿ.
ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ಹುಟ್ಟು ಹಾಕಿದ್ದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಸಾಹು ಜೈನ್ ಕುಟುಂಬದವರು 1961ರಲ್ಲಿ. ಲಕ್ಷಗಟ್ಟಲೆ ಹಣದ ಜೊತೆಗೆ ಸರಸ್ವತಿ ವಿಗ್ರಹ. ಆ ಕಾಲದಲ್ಲಿ ಅಷ್ಟು ದೊಡ್ಡ ಮೊತ್ತಕ್ಕೋ ಏನೋ ಈ ಪ್ರಶಸ್ತಿಗೆ ಆಯ್ಕೆಯಾದವರೆಲ್ಲ ಕನ್ನಡದ ಮಟ್ಟಿಗಂತೂ ಶ್ರೇಷ್ಠ ಲೇಖಕರೇ ಆಗಿದ್ದರು. ಅನಂತಮೂರ್ತಿ ಮತ್ತು ಕಾರ್ನಾಡ್ರುಗಳಿಗೆ ಬಂದಾಗ ಮಾತ್ರ ವಾದ ವಿವಾದಗಳು ಶುರುವಾದವು- ಇವರು ಇದಕ್ಕೆ ಅರ್ಹರೋ ಅಲ್ಲವೋ ಎಂಬುದಕ್ಕಿಂತ ಸರದಿ ತಪ್ಪಿತು ಎನ್ನುವುದಕ್ಕೆ. ಇಷ್ಟಕ್ಕೂ ಇದು ಖಾಸಗಿಯವರು ಕೊಡುವ ಪ್ರಶಸ್ತಿ. ಭಾರತ ಸರ್ಕಾರ ಕೊಡುವ ಪದ್ಮಶ್ರೀ, ಪದ್ಮಭೂಷಣ ಈ ರೀತಿಯ ಪ್ರಶಸ್ತಿಯಲ್ಲ. ಈ ಪ್ರಶಸ್ತಿಗಳ ಹಿಂದೆ ಲಾಬಿ ಇರುವುದಿಲ್ಲವೇ? ಶಕ್ತಿ ರಾಜಕಾರಣದ ಸಮೀಪದವರಿಗೆ ಇಂಥ ಪ್ರಶಸ್ತಿಗಳು ಹೆಚ್ಚು ಸಿಕ್ಕಿವೆ ಎಂಬುದು ಸಮೀಕ್ಷೆ ಇಲ್ಲದೇ ಗೊತ್ತಾಗುತ್ತದೆ. ಮೊದಲು ಒಂದು ಕೃತಿಯನ್ನು ಆಧರಿಸಿ ನೀಡುತ್ತಿದ್ದ ಜ್ಞಾನಪೀಠ ಪ್ರಶಸ್ತಿಯನ್ನು 1992ರ ನಂತರ ಒಂದು ಭಾಷೆಯ ಲೇಖಕನ ಒಟ್ಟಾರೆ ಕೊಡುಗೆಯನ್ನು ಆಧರಿಸಿ ನೀಡಲಾಗುತ್ತಿದೆ. ಈಗ ಮೊತ್ತದ ದೃಷ್ಟಿಯಿಂದ ಜ್ಞಾನಪೀಠಕ್ಕಿಂತ ಹೆಚ್ಚು ಮೊತ್ತ ನೀಡುವ 'ನೃಪತುಂಗ' ಪ್ರಶಸ್ತಿ ಕನ್ನಡದಲ್ಲೇ ಇದೆ. ಉಳಿದ ಭಾಷೆಗಳಲ್ಲೂ ಇದ್ದಿರಬಹುದು. ಪ್ರಶಸ್ತಿಯ ಜೊತೆಗೆ ಹಣ, ನಗರಗಳಲ್ಲಿ ನಿವೇಶನ ಇಂತಹುದೇ ಸೇರಿಕೊಂಡಾಗ ಪ್ರಶಸ್ತಿಗೆ ಭಾರಿ ಪೈಪೋಟಿ ಆರಂಭವಾಗಿಬಿಟ್ಟಿದೆ. ನಮ್ಮ ರಾಜ್ಯೋತ್ಸವಕ್ಕೂ ಬಂಗಾರದ ಕೊಡುಗೆ ಸೇರಿದ ಮೇಲೆ ಅದರ ಆಯ್ಕೆ ನೋಡಿ ಯಾರಿಗೂ ಖೇದ ಉಂಟಾಗದೇ ಇರದು. ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಮಕ್ಕಳಿಗೆ ಆಕರ್ಷಣೆ ಉಂಟು ಮಾಡಿ ಓದುಗರನ್ನು, ಬರಹಗಾರರನ್ನು ಹೆಚ್ಚಿಸುವ ಚಂದಮಾಮ, ಬಾಲಮಿತ್ರದಂಥ ಪತ್ರಿಕಾ ಸಂಪಾದಕರೂ ಸಹ ಜ್ಞಾನಪೀಠಕ್ಕೆ ಅರ್ಹರಲ್ಲವೇ? ಈಗ ಭಾರತ ಸರ್ಕಾರ ನೀಡುವಂಥ ಪದ್ಮಶ್ರೀ ಇತರೆ ಪ್ರಶಸ್ತಿಗಳಿಗೆ ಹೇಗೆ ಹಣದ ಲೇಪ ಇಲ್ಲವೋ ಹಾಗೇ ಇಂಥ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿ) ಪ್ರಶಸ್ತಿಗಳೂ ಹಣದ ಸಹಯೋಗವನ್ನು ಕೈ ಬಿಡುವುದು ಅವಶ್ಯಕವಾಗಿದೆ.
ಕುಂವೀ ಎತ್ತಿದ ಇನ್ನೊಂದು ಪ್ರಶ್ನೆ ಎಂದರೆ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದವರ ಭಾವಚಿತ್ರಗಳನ್ನು ಹಾಕುವ ಬಗ್ಗೆ. ಇದು ಎಲ್ಲಿಂದ ಜಾರಿಗೆ ಬಂತೋ, ಯಾವ ಮಂತ್ರಿಯ ತೀರ್ಮಾನವೋ ಗೊತ್ತಿಲ್ಲ. ಹೀಗೆ ಹಾಕಿದರೆ ಯಾವ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಬರುತ್ತೋ ನನಗಂತೂ ಗೊತ್ತಿಲ್ಲ. ಕೆಲವು ಕಡೆ ಅವರ ಫೋಟೋಗಳನ್ನು ಗೋಡೆಯ ಮೇಲೆ, ಕಾಂಪೌಂಡಿನ ಮೇಲೆ ಬರೆಸುತ್ತಾರೆ, ಸಮಾರಂಭಗಳಲ್ಲಿ ಅವರ ಗೊಂಬೆಗಳನ್ನು ಮಾಡಿಸಿ ಇಟ್ಟಿರುತ್ತಾರೆ. ಕೆಲವು ಹೇಗಿರುತ್ತವೆ ಎಂದರೆ ಗಣಪತಿಯ ಮುಖದ ಬದಲು ಅವನ ಅಪ್ಪನ ರೀತಿಯಲ್ಲಿ ಕಾಣಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಜ್ಞಾನಪೀಠ ಬಂದಿದೆ ಎಂದ ಮಾತ್ರಕ್ಕೆ ಫೋಟೋ ಹಾಕುವ ರಿವಾಜು ತಕ್ಷಣ ನಿಲ್ಲಬೇಕು. ಇದನ್ನು ಜೀವಂತ ಇರುವ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರೇ ಸರ್ಕಾರವನ್ನು ಒತ್ತಾಯಿಸಬೇಕು.
ಕುಂವೀಯವರು ತಡೆಯಲಾರದ ಸಿಟ್ಟಿನಿಂದ, ಸಾಹಿತ್ಯ ಲೋಕವನ್ನು ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿರುವ, ಎಲ್ಲಾ ಕಡೆ ವಿಮರ್ಶಕರ, ಭಾಷಾಂತರಕಾರರ ದಂಡು ಕಟ್ಟಿಕೊಂಡು ಲಾಬಿ ನಡೆಸುತ್ತಿರುವವರ ವಿರುದ್ಧ ನುಡಿದ ನುಡಿದಿರುವುದನ್ನು ಸಿದ್ಧಲಿಂಗಯ್ಯನವರು ತಮ್ಮ ಆಕ್ರೋಶ ತಡೆಯಲಾರದೇ 'ಇಕ್ರಲಾ ಒದಿರಲಾ...' ಎಂದಿದ್ದಕ್ಕೆ ಹೋಲಿಸಬಹುದು.
-ಡಾ. ಜಯಪ್ರಕಾಶ ಮಾವಿನಕುಳಿ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

