ಅಂಕಣಗಳು

ವಿಎಸ್ ಆಚಾರ್ಯರು ಗತಿಸಿದ್ದು ಫೆಬ್ರವರಿ 14ರಂದು. ಅವರ ನೆನಪಿಗೆ ಈಗ ಎರಡು ವರ್ಷ.

Published On :

ಅರವತ್ತರ ದಶಕ. ಉಡುಪಿಯಲ್ಲಿ ನಡೆಯುತ್ತಿದ್ದ ಸ್ಥಳೀಯ ಚುನಾವಣೆ, ಇತರ ಚುನಾವಣೆಗಳಲ್ಲಿ  ನಿರೀಕ್ಷೆಯಂತೆ ಗೆಲ್ಲುತ್ತಿದ್ದದ್ದು ಕಾಂಗ್ರೆಸ್. ಆದರೆ  ಪಟಾಕಿ ಹೊಡೆದು ಸಂಭ್ರಮಿಸುತ್ತಿದದ್ದು ವಿ ಎಸ್ ಆಚಾರ್ಯ ಆ್ಯಂಡ್ ಟೀಮ್!  ಇದನ್ನು ನೋಡಿ ಕಾಂಗ್ರೆಸಿಗರು ನಗುತ್ತಿದ್ದರೆ, ಆಚಾರ್ಯರು ಸ್ವಲ್ಪವೂ ಬೇಸರಿಸಿಕೊಳ್ಳುತ್ತಿರಲಿಲ್ಲ. ಬದಲಾಗಿ 'ಮತ ಹಂಚಿಕೆ' ಪ್ರಮಾಣ ನೋಡಿ- ತಮ್ಮ ಪಕ್ಷದ ಸಾಧನೆ ಕಳೆದ ಬಾರಿಗಿಂತ ಉತ್ತಮವಾಗಿದೆ. ನಿರೀಕ್ಷೆಗಿಂತ ಹೆಚ್ಚು ಮತ ನಮ್ಮ ಪಕ್ಷ ಪಡೆದಿದೆ. ಜನರ ಬಳಿ ಬಿಕ್ಷೆ ಬೇಡಿ ತಂದು ಚುನಾವಣೆ ಎದುರಿಸಿದ್ದು ಸಾರ್ಥಕವಾಯಿತು. ಮುಂದೊಂದು ದಿನ ಜನ ನಮ್ಮನ್ನು ಅಧಿಕಾರಕ್ಕೆ ತಂದೆ ತರುತ್ತಾರೆ - ಎನ್ನುವ ಅಚಲ ನಂಬಿಕೆ, ಆತ್ಮವಿಶ್ವಾಸ, ಆಶಾವಾದ ಹೊಂದಿದ್ದರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಜನಸಂಘ ಅಧಿಕಾರ ಗದ್ದುಗೆ ಏರಿದ್ದು ಉಡುಪಿ ನಗರಸಭೆಯಲ್ಲೇ. ತತ್ವ ನಿಷ್ಠ ರಾಜಕಾರಣಿಗಳಲ್ಲಿ ಆಚಾರ್ಯರನ್ನು ಮೀರಿ ನಿಲ್ಲುವವರುಂಟೇನಯ್ಯ? ಬಹುಷ ಯಾರೂ ಇರಲಿಕಿಲ್ಲ. ಪಾಲಿಸಿಕೊಂಡು ಬಂದ ತತ್ವ ದೊಂದಿಗೆ ಎಂದಿಗೂ ಅವರು ರಾಜಿ ಮಾಡಿಕೊಂಡವರಲ್ಲ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಎಷ್ಟು ಮಹತ್ವದ್ದೋ,  ಹಾಗೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು, ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು  ದಿವಂಗತ ವಾಸುದೇವ ಶ್ರೀನಿವಾಸ ಆಚಾರ್ಯ ಅವರ ಕೊಡುಗೆ ಕೂಡ ಅಷ್ಟೇ ಮಹತ್ವದ್ದು. ಶೂನ್ಯದಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರು ಆಚಾರ್ಯರು. ಹಾಗಂದ ಮಾತ್ರಕ್ಕೆ ಆಚಾರ್ಯರ ಹಿಂದೆ ದೊಡ್ಡ ಒಂದು ಬೆಂಬಲಿಗರ ಪಡೆಯೇ ಇತ್ತು ಎಂದರ್ಥವಲ್ಲ. ಹಿಂಬಾಲಕರಿಂದ ಜೈಕಾರ ಹಾಕಿಸಿಕೊಂಡದ್ದು ತಂಡ ಕಟ್ಟಿಕೊಂಡಿದ್ದು ಇಲ್ಲವೇ ಇಲ್ಲ. ಆದರೆ ಪಕ್ಷದ ಆಗು-ಹೋಗು, ಒಳಿತು -ಕೆಡುಕು, ಎಲ್ಲವನ್ನೂ, ಎಲ್ಲರನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿ, ಜಾಣ್ಮೆ  ಅವರಲ್ಲಿತ್ತು.
ರಾಜಕೀಯ ಕ್ಷೇತ್ರದಲಿ ಸಕ್ರೀಯರಾಗಿದ್ದು, ಸರಳವಾಗಿದ್ದು, ಬ್ಲಾಗ್ ಬರೆಯುತ್ತಾ ಜನರೊಡನೆ ಬೆರೆತ ಕರ್ನಾಟಕದ ಮೊದಲ ರಾಜಕಾರಣಿ. ಸದಾ ಶಾಂತವಾಗಿಯೇ ಇದ್ದು ಆಡಳಿತ ಪಕ್ಷಕ್ಕೆ ಸದನದಲ್ಲಿ, ಹೊರಗೆ ಬೆಂಬಲ ಕೊಟ್ಟು ಕಾಪಾಡುತಿದ್ದ ರಾಜಕಾರಣಿ ಆಚಾರ್ಯರು.  ರಾಜಕೀಯದಲ್ಲಿ ವಯುಕ್ತಿಕವಾಗಿ ಗೆಲುವಿಗಿಂತ ಸೋಲು ಕಂಡಿದ್ದೆ ಹೆಚ್ಚು. ಎಲ್ಲಾ ಕೂದಲೆಳೆಯ ಅಂತರದ ಸೋಲುಗಳೇ. ಆದರೆ ಪಕ್ಷವನ್ನು ಅಚ್ಚುಕಟ್ಟಾಗಿ ಬೆಳೆಸಿದರು.  ಇಂದು ಬೇರೆ ಕ್ಷೇತ್ರದಿಂದ ರಾಜಕೀಯ ರಂಗಕ್ಕೆ ಕಾಲಿಟ್ಟೊಡನೆ ತಮ್ಮ ಹಳೇ ಕ್ಷೇತ್ರ ಬಿಡುವವರ ಹೆಚ್ಚು.  ಅಂಥದ್ದರ ನಡುವೆ  ವೃತ್ತಿಯಲ್ಲಿ ವೈದ್ಯರಾಗಿದ್ದ  ಆಚಾರ್ಯರು  ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕೊನೆಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗೋ ತನಕ ತಮ್ಮ ಕಲ್ಮಾಡಿಯ ಕ್ಲಿನಿಕ್‌ಗೆ ಹೋಗಿ,  ರೋಗಿಗಳನ್ನು ವಿಚಾರಿಸಿಕೊಂಡು ಬರುತ್ತಿದ್ದರು.
ಕೇವಲ ಬಿಜೆಪಿಗೆ ಮಾತ್ರ ಸೀಮಿತರಾಗಿರದೇ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಬಜೆಟ್ ಮಂಡಿಸುವಾಗ ಶ್ರೀಯುತರ ಸಲಹೆ ಸೂಚನೆ ಪಡೆದೇ ಮಂಡಿಸುತ್ತಿದ್ದರು. ಹಿಂದೆ ಹಣಕಾಸು ಸಚಿವರಾಗಿದ್ದಾಗ ಆಚಾರ್ಯರ ಸಲಹೆ ಪಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಶಃ ಇಂದು ಅವರು ಬದುಕ್ಕಿದ್ದರೆ ಅವರ ಸಲಹೆ ಸೂಚನೆ ಪಡೆಯುತ್ತಿದ್ದರೆನೋ. ರಾಜ್ಯದ ಬಗ್ಗೆ ಅಷ್ಟೊಂದು ಕಾಳಜಿ, ರಾಜನೀತಿ ಹೊಂದಿದ್ದ ಅಪರೂಪದ ರಾಜಕಾರಣಿ. ಉಡುಪಿ ನಗರ ಸಭೆಯ ಅತಿಕಿರಿಯ ಅಧ್ಯಕ್ಷರಾಗಿ ಸ್ವರ್ಣ ನದಿ  ನೀರು ತಂದು ಜನರಿಗೆ ಒದಗಿಸಿದ ಕೀರ್ತಿ ಅಚಾರ್ಯರದ್ದು. ವೈದ್ಯ ಶಿಕ್ಷಣ ಸಚಿವರಾಗಿ, ಗೃಹ ಖಾತೆ ಸಚಿವರಾಗಿ ಅದಕ್ಕೊಂದು ಗೌರವ ಸಲ್ಲಿಸಿದವರು. ಇಂದಿಗೂ ಪೊಲೀಸ್  ಇಲಾಖೆಯಲ್ಲಿನ ಕೆಲವರು ಆಚಾರ್ಯರ ಸೇವೆಯನ್ನು, ಅವರ ನೀತಿಯನ್ನು ಸ್ಮರಿಸುತ್ತಾರೆ.
ಆದರೆ ದುರದೃಷ್ಟವಶಾತ್ ಆಚಾರ್ಯರ ನಿಧನದೊಂದಿಗೆ ಅವರು ಕಟ್ಟಿ ಬೆಳೆಸಿದ ಪಕ್ಷ ಕೂಡ ಅವಸಾನದತ್ತ ನಡೆಯಿತು. ಉಡುಪಿ ನಗರ ಸಭೆ ಕಾಂಗ್ರೆಸ್ ಪಾಲಾದರೆ, ಅಧಿಕಾರದಲ್ಲಿದ್ದ  ಬಿಜೆಪಿ ವಿಧಾನ ಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಸರಿಯಿತು. ಪಕ್ಷದ ಪ್ರಣಾಳಿಕೆ, ಪಕ್ಷದ ನಿಲುವಿನನ್ನು ಜನರ ಮುಂದಿಡುವುದು, ಚುನಾವಣೆ ಎದುರಿಸೋ ಚಾಣಕ್ಷತೆಯಲ್ಲಿ ಆಚಾರ್ಯರ ಗೈರು ಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿನ ಪಕ್ಷದ ಸ್ಥಿತಿಯನ್ನು ಮಣಿಪಾಲದ ಮೇಲಿನ ರಜತಾದ್ರಿಯಲ್ಲಿ ನಿಲ್ಲಿಸಿರೋ ಕೀರ್ತಿಶೇಷ ಆಚಾರ್ಯರ ಪ್ರತಿಮೆ ಮೌನವಾಗಿ ಕಾಣುತ್ತಿದೆ. ಅನುಕರಣ ಯೋಗ್ಯ, ತತ್ವ ನಿಷ್ಠ ರಾಜಕಾರಣಿಯ ಜೀವನ, ಅವರ ರಾಜಕೀಯ ಚಿಂತನೆ, ಇಂದಿನ ಯುವ ರಾಜಕಾರಣಿಗಳಿಗೆ ಮುಂದಿನ ಪೀಳಿಗೆಗೆ  ಮಾದರಿಯಾಗಲಿ.  ಆಚಾರ್ಯರೇ, ನೀವು ನಿಮ್ಮನ್ನಗಲಿ ಎರಡು ವಸಂತ ಕಳೆದರೂ ನೀವಿದ್ದೀರಿ ನಮ್ಮ ಮನದಲ್ಲಿ ಅಮರರಾಗಿ.

-ಅಜಿತ್ ಶೆಟ್ಟಿ ಕಿರಾಡಿ
asshetty8@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.