ಕನ್ನಡ ವಿಮರ್ಶಾ ರಂಗದಲ್ಲಿಯೂ ಪಕ್ಷಪಾತವೇ?
ದೇಹದ ಯಾವುದಾದರೂ ಒಂದು ಅಂಗಕ್ಕೆ ಅರ್ಬುದ ರೋಗ ಬಂದರೆ, ಆ ಭಾಗವನ್ನೇ ಕತ್ತರಿಸಿ ತೆಗೆದು ಹಾಕಿ, ಬದುಕಬಹುದು. ಆದರೆ ಮೆದುಳಿನ ಒಳಗಿರುವ ಬುದ್ಧಿಗೇ ರೋಗ ತಗುಲಿದರೆ ಗತಿ? ಸಮಾಜದ ಭಾಷೆ, ಸಾಹಿತ್ಯ, ಕಲೆ, ಸಂವಹನ ಮಾಧ್ಯಮಗಳಲ್ಲಿ ಕೆಲಸ ಮಾಡುವ, ಬುದ್ಧಿಜೀವಿಗಳು ವಿಮರ್ಶಕರು ಅನ್ನಿಸಿಕೊಂಡವರಲ್ಲಿಯೇ ಪಕ್ಷಪಾತ, ಅರ್ಬುದ ರೋಗದಂತೆ ಕಾಣಿಸಿಕೊಳ್ಳುತ್ತದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಲಯಬದ್ಧ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶ್ರುತಿಬದ್ಧ ಹಾಗಾಗಿ ಸುಗಮ ಸಂಗೀತವೇ ಚೆನ್ನ, ಮಜಭೂತಾಗಿರುತ್ತದೆ- ಎಂಬ ಪ್ರತೀತಿ ಇದೆ. ಹಾಗೆಯೇ ಮೈಸೂರು ವಿಶ್ವವಿದ್ಯಾನಿಲಯ ಬರಬರುತ್ತ ಒಕ್ಕಲಿಗ ಜನಾಂಗದ ಪ್ರಾಬಲ್ಯಕ್ಕೆ ಒಳಗಾಯಿತು. ಹಾಗೆಯೇ ಕರ್ನಾಟಕ ವಿಶ್ವವಿದ್ಯಾನಿಲಯ ವೀರಶೈವರ ಹಿಡಿತದಲ್ಲಿ ಸಿಕ್ಕು ನಲುಗಿತು. ಆನಂತರ ತಲೆ ಎತ್ತಿದ ಬೆಂಗಳೂರು ವಿಶ್ವವಿದ್ಯಾನಿಲಯ ಪ್ರಜ್ಞಾವಂತರ ಕೇಂದ್ರವಾಯಿತು ಎಂಬ ಅಭಿಪ್ರಾಯ ಎಲ್ಲರ ಬಾಯಿಯಿಂದಲೂ ಕೇಳಿಬರತೊಡಗಿತು. ಇದಕ್ಕೆ ಕಾರಣ, ಕರ್ನಾಟಕ ವಿ.ವಿ.ಯಿಂದ ದೂರವಾಗಿ ಮಹಾರಾಷ್ಟ್ರದ ವಿಲ್ಲಿಂಗ್ಟನ್ ಕಾಲೇಜಿನಲ್ಲಿದ್ದು ಬಂದ, ಕನ್ನಡದ ಹಿರಿಯ ಸಾಹಿತ್ಯ ಚರಿತ್ರೆಕಾರ ರಂ.ಶ್ರೀ. ಮುಗಳಿಯವರು. ಅವರ ಮಾರ್ಗದರ್ಶನದಲ್ಲಿ ಬೆಳೆದು ನಿಂತ ಜಿ.ಎಸ್. ಶಿವರುದ್ರಪ್ಪ ಅವರು. ಹೀಗಾಗಿ ಮೈಸೂರು ಹಾಗೂ ಕರ್ನಾಟಕ ವಿ.ವಿ.ಗಳಿಗಿಂತ ಭಿನ್ನವಾಗಿ ಹಾಗೂ ವಿಶಿಷ್ಟವಾಗಿ ರೂಪಿಸಲು, ಕವಿ ಮತ್ತು ವಿಮರ್ಶಕ ಶಿವರುದ್ರಪ್ಪನವರು ಪಟ್ಟಶ್ರಮ, ಅವರ್ಣನೀಯ ಎಂದೇ ಹೇಳಬೇಕು. 1974ರಿಂದ 2013ರವರೆಗೂ ನಿಕಟವರ್ತಿಯಾಗಿದ್ದು, ಎಲ್ಲ ಹಂತಗಳಲ್ಲಿಯೂ ಶಿವರುದ್ರಪ್ಪನವರ ಅಂತರಂಗ, ಬಹಿರಂಗ ಮುಖಗಳನ್ನು ಕಂಡಿದ್ದೇನೆ.
ಶಿವರುದ್ರಪ್ಪನವರು ಸಾಹಿತ್ಯ ಸವ್ಯಸಾಚಿ ಇದ್ದಂತೆ, ತಮ್ಮ ಗುರು ಕುವೆಂಪು ಅವರಂತೆ. ಅತ್ತ ಕಾವ್ಯ, ಇತ್ತ ಗದ್ಯ ಅದರಲ್ಲಿಯೂ ವಿಮರ್ಶೆಯಲ್ಲಿ ನಿರಂತರ ದುಡಿದವರು. ಸ್ವತಃ ತಾವು ಕೃಷಿಯಾಗಿದ್ದು ಮಾತ್ರವೇ ಅಲ್ಲ, ಶಿಷ್ಯರನ್ನೂ ಸಾಕಷ್ಟು ಕೆತ್ತಿ-ಕಡೆದು ನಿಲ್ಲಿಸಿದರು.
ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೆಸರು ತಂದುಕೊಟ್ಟಿದ್ದು, ಕನ್ನಡ ವಿಭಾಗ. ಆ ಕನ್ನಡ ವಿಭಾಗವನ್ನು ಸಾಂಸ್ಕೃತಿಕ ಮನಸ್ಸುಗಳ ಕೇಂದ್ರ ಮಾಡಿದ್ದು ಶಿವರುದ್ರಪ್ಪ, ಅದರಲ್ಲಿಯೂ ಒಂದು ಕಾಲಕ್ಕೆ ಏರ್ಪಡಿಸುತ್ತಿದ್ದ ವಿಚಾರ ಸಂಕಿರಣಗಳು. ಹಿರಿಯರೊಂದಿಗೆ ಕಿರಿಯರನ್ನೂ ಸರಿಜೋಡಿಯಾಗಿ ಕೂರಿಸಿ, ವಿಮರ್ಶೆಯ ರಥೋತ್ಸವವನ್ನು ನಡೆಸಿದ ಅಧ್ವರ್ಯು ಶಿವರುದ್ರಪ್ಪನವರು. ಈ ಕಾಲಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಅಥವ ಆ ಬಗೆಯ ಯಾವುದೇ ಉತ್ಸವ, ಜಾತ್ರೆಗಳು ಕೊಂಚ ಮಬ್ಬಾಗುವಂತೆ ವಿಚಾರ ಸಂಕೀರ್ಣಗಳನ್ನು ತೇಜೋಮಯಗೊಳಿಸಿದ್ದು, ನಿಜಕ್ಕೂ ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ-ಮಾಡಬೇಕಾದ ಕೆಲಸ. ಆ ದೃಷ್ಟಿಯಿಂದ ಶಿವರುದ್ರಪ್ಪನವರು ಆ ಕಾಲದ ಬೆಂಗಳೂರು ವಿವಿಯ ಕುಲಪತಿಗಳು ಸ್ಮರಣಾರ್ಹರು.
ಬರಬರುತ್ತ ಯಾವುದೇ ಆಚಾರ, ಪದ್ಧತಿಗಳು ಒಂದು ಸಂಪ್ರದಾಯವೇ ಆಗಿ ಕೊನೆಗೆ, ನಿರ್ಬಂಧಕ್ಕೆ ಒಳಪಡುತ್ತೆ, ಕಾಟಾಚಾರಕ್ಕೆ ಅಥವ ಕೇವಲ ಆಡಂಬರಕ್ಕೆ ಗುರಿಯಾಗುವುದು, ಪ್ರಕೃತಿ ಸಹಜವೇ. ಅದೇ ಅದೇ ಮುಖಗಳೆ. ಅದೇ ಅದೇ ಮಾತುಗಳೆ. ಗುಂಪುಗುಳಿತನ, ಏಕವ್ಯಕ್ತಿ ವಿಜೃಂಭಣೆ, ಏಕತಾನತೆಗಳಿಂದ ಸೊರಗಲಾರಂಭಿಸಿತು.
ಅದಕ್ಕೆ ಆನಂತರದ ಒಂದು ಉಪಕ್ರಮವೇ ಪ್ರಬಲ ಸಾಕ್ಷಿ. ಶಿವರುದ್ರಪ್ಪನವರು ಬದುಕಿರುವಾಗಲೇ ಅಷ್ಟೇ ಅಲ್ಲ, ರಾಷ್ಟ್ರಕವಿ ಪ್ರಶಸ್ತಿ ಸ್ಥಾನ ಸಿಗುವ ಮುಂಚೆಯೇ, ವಿಮರ್ಶ ರಂಗದಲ್ಲಿ ದುಡಿಯುವವರಿಗೆ ಒಂದು ಗುರುತು ಹಾಗೂ ಗೌರವ ತಂದು ಕೊಡಬೇಕು ಎಂಬ, ತಮ್ಮ ಮಹತ್ವದ ಒಂದು ಕೊಡುಗೆ. ನೋಡನೋಡುತ್ತಲೇ ಪಕ್ಷಪಾತದ ಪ್ರಪಾತಕ್ಕೆ ಬೀಳುವಂತಾಗಿದೆ.
ಡಾ. ಜಿಎಸ್ಸೆಸ್ ವಿಶ್ವಸ್ತ ಮಂಡಳಿ ಎಂಬುದು, ಒಂದು ಸ್ವತಂತ್ರ ಸ್ವಾಯತ್ತ ಸಂಸ್ಥೆ ನಿಜ. 2000ದಲ್ಲಿ ಪ್ರಾರಂಭವಾಗಿ, 15 ವರ್ಷಗಳಿಗೆ ಕಾಲಿಡುತ್ತಿದೆ. ಶಿವರುದ್ರಪ್ಪನವರು ಹುಟ್ಟಿದ ದಿನಾಂಕ ಫೆಬ್ರವರಿ 7ರಂದೇ ಡಾ. ಜಿಎಸ್ಸೆಸ್ ಪ್ರಶಸ್ತಿ ಪ್ರದಾನ. ಈ ಬಾರಿ, ನಾಡಿನ ಹಿರಿಯ ವಿಮರ್ಶಕ, ಇತ್ತೀಚೆಗೆ ಧಾರವಾಡ ಸಾಹಿತ್ಯ ಸಂಭ್ರಮದ ನೇತಾರ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಪುರಸ್ಕಾರ. ಈ ಸಂದರ್ಭದಲ್ಲಿ ನಾಡಿನ 15 ವರ್ಷಗಳ, ಮಹತ್ವದ ಚಟುವಟಿಕೆಯ ಒಂದು ಸಂಸ್ಥೆಯ ಬಗ್ಗೆ ಅವಲೋಕಿಸುವುದು, ಪ್ರಜಾಪ್ರಭುತ್ವದಲ್ಲಿ ತಪ್ಪಾಗಲಾರದೆಂದು ಭಾವಿಸುವೆ.
ಪ್ರಶಸ್ತಿಯನ್ನು ಈವರೆಗೂ ವಿಮರ್ಶ ರಂಗದಲ್ಲಿ ಕೃಷಿ ಮಾಡುತ್ತಿರುವವರಿಗೆ ಕೊಡುತ್ತಿರುವುದು ಮೇಲು ನೋಟಕ್ಕೆ ಸ್ಪಷ್ಟ. ಆದರೆ 2001ರಲ್ಲಿ ಎನ್ (ನಂಜನಗೂಡು) ಬಾಲ ಸುಬ್ರಹ್ಮಣ್ಯ ಅವರಿಗೆ ನೀಡಲಾಗಿದೆ. ಎಲ್ಲರಿಗೂ ಗೊತ್ತಿರುವಂತೆ, ಅವರು ನೇರವಾಗಿ ವಿಮರ್ಶಕರಲ್ಲ. ಶ್ರೇಷ್ಠ ಅನುವಾದಕರು. ಕಾವ್ಯ ಮೀಮಾಂಸೆಯ ಗ್ರಂಥಗಳಿಗೆ ಬರೆದ ಪೀಠಿಕೆಗಳಿಂದ, ವಿಮರ್ಶಕರು ಎಂದು ಗುರುತಿಸಬಹುದೇನೋ. ಆದರೆ ಇದೇ ರೀತಿ ಹಾಗೂ ಇನ್ನೂ ಹೆಚ್ಚಿನ ಮಟ್ಟಿಗೆ ಕೆ. ಕೃಷ್ಣಮೂರ್ತಿಯವರಂತೆಯೇ ಇಂಗ್ಲಿಷ್ನಿಂದ ಕನ್ನಡಕ್ಕೆ ತಂದ ಹಾಗೂ ಸ್ವತಂತ್ರವಾಗಿ ವಿಮರ್ಶ ರಂಗದಲ್ಲಿ ಸುದೀರ್ಘ ಕಾಲ ದುಡಿದ ಸಿ.ಪಿ.ಕೆ. ಅವರು, ಕಳೆದ 15 ವರ್ಷಗಳಿಂದ ಕಣ್ಣಿಗೇ ಬೀಳಲಿಲ್ಲವೆ?
ಸುರೇಂದ್ರ ಮಿಣಸಗಿ, ಕೆ.ವಿ. ತಿರುಮಲೇಶ್, ಪಿ.ವಿ. ನಾರಾಯಣ್, ವಿಜಯಾದಬ್ಬೆ, ಆಕ್ಕಿಮಣಿಪಾಲ್, ಕೆ.ಎಸ್. ಭಗವಾನ್, ಮನ ಜವರಯ್ಯ, ತಾಳ್ತಜೆ ವಸಂತಕುಮಾರ್, ಮಲ್ಲಿಕಾರ್ಜುನ ಘಂಟಿ, ಶಿವರಾಮು ಕಾಡನಕುಪ್ಪೆ- ಇವರೆಲ್ಲ ನೇರವಾಗಿ ಶಿವರುದ್ರಪ್ಪನವರ ಶಿಷ್ಯರಲ್ಲದೇ ಇರಬಹುದು. ಪ್ರಶಸ್ತಿ ಇಟ್ಟಿರುವುದು ನಾಡಿನ ವಿಮರ್ಶ ರಂಗದಲ್ಲಿ ಕೃಷಿ ಮಾಡಿದವರಿಗೆ ತಾನೆ? ಈವರೆಗಿನ ಪಟ್ಟಿಯಲ್ಲಿ ಶೇ.50, ಶಿವರುದ್ರಪ್ಪನವರ ನೇರ ಶಿಷ್ಯರೆ. ಹೋಗಲಿ ಶಿಷ್ಯರಲ್ಲೂ ಸಿ. ವೀರಣ್ಣ, ಬರಗೂರು ರಾಮಚಂದ್ರಪ್ಪ, ವಿಜಯಾ ಸುಬ್ಬರಾಜ್ ಅವರ ಸಾಧನೆ, ಈವರೆಗಿನ ಪ್ರಶಸ್ತಿ ವಿಜೇತರಿಗಿಂತ ಕಿಂಚಿತ್ ಕಡಿಮೆ ಇಲ್ಲ.
ಈವರೆಗಿನ ಪ್ರಶಸ್ತಿ ಪುರಸ್ಕೃತರಲ್ಲಿ ಎನ್. ಬಾಲಸುಬ್ರಹ್ಮಣ್ಯ, ಜಿ.ಎಚ್. ನಾಯಕ್ ಅವರು ನಿಜವಾಗಿಯೂ ಹಿರಿಯರೇ. ಶಿವರುದ್ರಪ್ಪನವರ ಸಮಕಾಲೀನರೆ. ಹಾಗಿದ್ದಾಗ, ಗೌರೀಶ್ ಕಾಯ್ಕಿಣಿ ಅವರ ಕೊಡುಗೆ, ಅಷ್ಟು ಕಡಿಮೆಯಾದದ್ದೇ? ಆರ್.ವಿ. ಭಂಡಾರಿ, ಜಿ.ಎಸ್. ರಾಜಶೇಖರ, ಸುಬ್ರಾಯ ಚೊಕ್ಕಾಡಿ, ಡಿ.ಎಸ್. ನಾಗಭೂಷಣ, ಜಿ.ಎನ್. ರಂಗನಾಥ ರಾವ್, ಪುರುಷೋತ್ತಮ ಬಿಳಿಮಲೆ, ಬಿ.ಎಸ್. ವೆಂಕಟಲಕ್ಷ್ಮಿ, ಬಂಜಗೆರೆ ಜಯಪ್ರಕಾಶ್, ವಿ. ಮುನಿವೆಂಕಟಪ್ಪ ಇವರೆಲ್ಲ ವಿವಿಗಳಲ್ಲಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿಲ್ಲ ಎಂಬುದೇ ಕಾರಣವೋ?
ಈವರೆಗಿನ 15 ಪ್ರಶಸ್ತಿ ವಿಜೇತರೂ, ಅಧ್ಯಾಪಕರೇ ಎಂಬುದು ಬಚ್ಚಿಟ್ಟ ರಹಸ್ಯವೇನಲ್ಲ. ಬಾಲಸುಬ್ರಹ್ಮಣ್ಯ ಅವರೂ ಒಂದು ರೀತಿ ವಿ.ವಿ. ಸಂಬಂಧ ಉಳ್ಳವರೆ. ಹಾಗಾದರೆ, ಶಿವರುದ್ರಪ್ಪನವರ ಆಶಯ ಕೇವಲ ವಿ.ವಿ. ಕಾಲೇಜು ಅಧ್ಯಾಪಕರಿಗೆ ಮಾತ್ರ ಕೊಡುವುದೇ ಆಗಿತ್ತೋ? ಹಾಗೆಂದು ಜಿ.ಎಚ್. ನಾಯಕ, ಗಿರಡ್ಡಿ ಗೋವಿಂದರಾಜ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ಪ್ರಶಸ್ತಿಗೆ ಯೋಗ್ಯರಲ್ಲ ಎಂದಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೂ ಅರ್ಹರೆ. ಪ್ರಶ್ನೆ ಇರುವುದು, ಒಂದೇ ಜಾತಿ, ಒಂದೇ ಪ್ರದೇಶ, ಒಂದೇ ಲಿಂಗ-ಹೀಗೆ ಗುಂಪು ಎದ್ದು ಕಾಣುವಂತೆ ಆಗುವುದು. ಆ ಕ್ಷೇತ್ರಕ್ಕೆ, ಪ್ರಶಸ್ತಿ ಇಟ್ಟ ಹೆಸರಿನ ವ್ಯಕ್ತಿಗೇ ಅನ್ಯಾಯ, ಪಕ್ಷಪಾತದ ಕಳಂಕ ಹಚ್ಚಿದಂತೆ ಆಗಲಿಲ್ಲವೋ?
ಈವರೆಗಿನದು ಆಯಿತು. ಮುಂದೆ? ಈ ಬಗ್ಗೆ ವಿಶ್ವಸ್ತ ಮಂಡಲಿಯವರೂ, ನಾಡು ನುಡಿ ಚಿಂತಕರೂ ಗಂಭೀರವಾಗಿ ಗಮನಿಸಬೇಕಾದ ವಿಷಯ. ಜಾರ್ಜ್ ಆರ್ವೆಲ್ನ 'ಪ್ರಾಣಿಗಳ ಪ್ರಭುತ್ವ' ಕಾದಂಬರಿ ಹೇಳುವಂತೆ; ಎಲ್ಲಾ ಪ್ರಾಣಿಗಳೂ ಸಮಾನರು, ಕೆಲವು ಹೆಚ್ಚು ಸಮಾನರು-ಎಂಬುವಂತೆ, ಜಿಎಸ್ಎಸ್ ವಿಮರ್ಶಕರ ಗುಂಪಿಗೆ ಆ ಮರ್ಯಾದೆ ತೋರದೇ ಇರಲಿ ಎಂಬುದೇ ಅಭಿಮಾನಿ ಗೆಳೆಯರ ಆಶಯ.
-ಪುಸ್ತಕಮನೆ ಹರಿಹರಪ್ರಿಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

