ರೈತರ ಅಭಿವೃದ್ಧಿಗೆ ಜೈವಿಕ ಇಂಧನ ಉತ್ತಮ ಸಾಧನ
ಈಗ ನಿಮಗೆ ನನ್ನ ಮನಸ್ಸಿಗೆ ಹತ್ತಿರವಾದ, ಎಲ್ಲರೂ ಯೋಚನೆ ಮಾಡಬೇಕಾದಂಥ ಜೈವಿಕ ಇಂಧನದ ಬಗ್ಗೆ ಹೇಳುತ್ತೇನೆ. ಮೊದಲು ಜೈವಿಕ ಇಂಧನ ಉತ್ಪಾದನೆಯಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ನಿಮಗೆ ಪರಿಚಯ ಮಾಡಿಸಿ, ನಂತರ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದರ ಪ್ರಯೋಗಗಳ ಬಗ್ಗೆ ತಿಳಿಸುತ್ತೇನೆ.
ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. ವಿವಿಧ ಎಣ್ಣೆ ಬೀಜಗಳು, ಪ್ರಾಣಿ ಜನ್ಯ ಕೊಬ್ಬು, ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳಿಂದ ಹಾಗೂ ಭವಿಷ್ಯದಲ್ಲಿ ಸಮುದ್ರದ ಹಿನ್ನೀರಿನಲ್ಲಿ, ಅನುಪಯುಕ್ತ ಹಾಗೂ ಮಲಿನ ನೀರಿನ ಮೇಲೆ ಸುಲಭವಾಗಿ ಬೆಳೆಯಬಲ್ಲ, ಆಲ್ಗೆ ಬೆಳೆಗಳಿಂದ ಜೈವಿಕ ಇಂಧನವನ್ನು ತಯಾರಿಸಿ, ವಾಹನ ಹಾಗೂ ಇತರೆಡೆ ಬಳಸಬಹುದಾಗಿದೆ.
ನಮ್ಮ ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಬೇಕಾದ ಸಸ್ಯಗಳನ್ನು ಬೆಳೆಸಲು ಪಶ್ಚಿಮ ಘಟ್ಟಗಳು ಮತ್ತು ಮೈದಾನ ಪ್ರದೇಶಗಳ ಲಭ್ಯವಿದೆ. ಅಲ್ಲದೇ ಈ ಸಸ್ಯಗಳನ್ನು ರೈತರು ಜಮೀನಿನ ಬದುಗಳಲ್ಲಿ, ಹಿತ್ತಲು ಹಾಗೂ ಬಂಜರು ಭೂಮಿಯಲ್ಲಿ ಬೆಳೆಯಬಹುದಾಗಿದೆ.
ಕರ್ನಾಟಕದಲ್ಲಿ ಸುಮಾರು 13.5 ಲಕ್ಷ ಹೆಕ್ಟೇರು ಬಂಜರು, ಅರೆ ಬಂಜರು ಭೂಮಿ ಲಭ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಈ ಪೈಕಿ 1.62 ಲಕ್ಷ ಹೆಕ್ಟೇರ್ ಭೂಮಿ ಗುಲ್ಬರ್ಗಾ ವಿಭಾಗದಲ್ಲಿ ಇದೆ. ನೀರಾವರಿ ಹಾಗೂ ಮಳೆ ಕೊರತೆಯಿಂದ ನೈಸರ್ಗಿಕವಾಗಿ ಬೆಳೆಯುವ ಮರಗಿಡಗಳಿಂದ ದೊರೆಯುವ ಬೀಜಗಳಿಂದ ಬರುವ ಎಣ್ಣೆಯನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದು.
ನಮ್ಮ ದೇಶದಲ್ಲಿ ನೂರ ಐವತ್ತಕ್ಕಿಂತಲೂ ಹೆಚ್ಚು ಮರಗಳಿಂದ ದೊರೆಯುವ ಎಣ್ಣೆ ಬೀಜವನ್ನು ಜೈವಿಕ ಇಂಧನವಾಗಿ ಬಳಸಬಹುದಾಗಿದೆ. ಪ್ರಮುಖವಾಗಿ ಹೊಂಗೆ, ಜಟ್ರೋಪ, ಬೇವು, ಹಿಪ್ಪೆ, ಸಿಮರೂಬ. ಅಲ್ಲದೇ ಮಳೆಯಾಧಾರಿತ ಕೃಷಿ ಕ್ಷೇತ್ರಗಳಲ್ಲಿ ಹರಳು, ಪುಂಡಿಯಂಥ ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಎಣ್ಣೆ ಕಾಳುಗಳನ್ನು ಸಹ ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದು. ಸಣ್ಣ, ಅತಿಸಣ್ಣ, ದೊಡ್ಡ ರೈತರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಬಂಜರು ಭೂಮಿಗಳಲ್ಲಿ ಅಥವಾ ತಮ್ಮ ಜಮೀನಿನ ಸ್ವಲ್ಪ ಭಾಗದಲ್ಲಿ ಮಿಶ್ರ ತೋಪಿನ ಮಾದರಿಯಲ್ಲಿ ಈ ಮರಗಳನ್ನು ಬೆಳೆಸಬಹುದಾಗಿದೆ. ಇದರಿಂದ ಬೆಳೆಗಳಿಗೆ ಬೇಕಾದ ನೆರಳು ದೊರೆಯುವುದು, ಹಸಿರೆಲೆ ಗೊಬ್ಬರದ ಜೊತೆಗೆ ಎಣ್ಣೆ ತೆಗೆದು ಬರುವ ಹಿಂಡಿಯನ್ನು ತಮ್ಮ ಭೂಮಿಗೆ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ, ನೈಸರ್ಗಿಕ ಸಮತೋಲನವನ್ನೂ ಕಾಪಾಡಬಹುದು. ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಎಣ್ಣೆ ತೆಗೆದು ಮಾರುವುದರಿಂದಲೂ, ಹೆಚ್ಚುವರಿ ಆದಾಯ ಜೊತೆಗೆ ಉದ್ಯೋಗವೂ ದೊರೆತಂತಾಗುವುದು. ಇಂಥಹ ಕಾರ್ಯ ಯೋಜನೆಯಿಂದ ಪ್ರತಿ ರೈತ ತಿಂಗಳಿಗೆ ರು. ಇನ್ನೂರರಿಂದ ರು. ಎರಡು ಸಾವಿರದಷ್ಟು ಹೆಚ್ಚುವರಿ ಆದಾಯವನ್ನು (ಒಂದರಿಂದ ಹತ್ತು ಎಕರೆ ಜಮೀನಿನಿಂದ ಆರರಿಂದ ಎಂಟು ತಿಂಗಳವರೆಗೆ ಲಭ್ಯವಿರುತ್ತದೆ) ಗಳಿಸಬಹುದಾಗಿದೆ. ಈ ಕಾರ್ಯಕ್ರಮದಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಹದಿನೈದರಿಂದ ಮೂವತ್ತು ದಿನಗಳ ಉದ್ಯೋಗವನ್ನು ದೊರಕಿಸಬಹುದು.
ಮಾತ್ರವಲ್ಲ ಕೃಷಿ ಉತ್ಪಾದನೆ ತ್ಯಾಜ್ಯವನ್ನು ಎಥೆನಾಲ್ ಉತ್ಪಾದನೆಗಾಗಿ ಬಳಸಬಹುದಾಗಿದೆ. ಆದರೆ ಈ ನಿಟ್ಟಿನಲ್ಲಿ ರೈತರ ಪಾಲ್ಗೊಳ್ಳುವಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ ಕಬ್ಬಿನಿಂದ ಸಕ್ಕರೆ ತಯಾರಿಸಿದ ನಂತರದಲ್ಲಿ ಉಳಿಯುವ ಕಾಕಂಬಿ (ಟ್ಟಟಛಡಡಜಡ) ಯಿಂದ ಮತ್ತು ನಾರಿನಂಶ ಜಾಸ್ತಿ ಇರುವ ಗೋವಿನಜೋಳ ಮೆಕ್ಕೆಜೋಳ, ಮುಸುಕಿನಜೋಳ, ಬೀಟ್ರೂಟ್ ಮುಂತಾದ ಕೃಷಿ ತ್ಯಾಜ್ಯ ವಸ್ತುಗಳಿಂದ, ಎಥೆನಾಲ್ ತಯಾರಿಸಬಹುದು. ಈ ತ್ಯಾಜ್ಯಗಳನ್ನು ಹೊಲದಲ್ಲಿ ಬೆಂಕಿ ಹಾಕಿ ನಷ್ಟ ಮಾಡಲಾಗುವುದರಿಂದ, ಜೈವಿಕ ಇಂಧನದ ಜೊತೆಗೆ ಶುಭ್ರ ಪರಿಸರವನ್ನು ಕಳೆದುಕೊಳ್ಳುತ್ತೇವೆ. ಜೈವಿಕ ಇಂಧನದ ಲಾಭಗಳೇನು, ರೈತರಿಗೆ ಆಗುವ ಪ್ರಯೋಜನಗಳೇನು ಎಂಬುದನ್ನು ಈಗ ಪರಿಶೀಲಿಸೋಣ.
ಜೈವಿಕ ಇಂಧನ ಬೀಜಗಳಿಂದ ನಿರಂತರ ಹೆಚ್ಚುವರಿ ಆದಾಯವಿದೆ.
ಬೀಜ ಸಂಸ್ಕರಣದ ನಂತರ ದೊರಕುವ ಹಿಂಡಿಯಿಂದ ಮತ್ತು ಹಸಿರೆಲೆ ಗೊಬ್ಬರದಿಂದ ಕೃಷಿ ಜಮೀನಿಗೆ ಅಗತ್ಯವಿರುವ ಸಾವಯವ ಗೊಬ್ಬರದ ಲಭ್ಯತೆ ಇದೆ.
ಔಷಧೀಯ ಗುಣ ಮತ್ತು ಬೆಳೆಗಳಿಗೆ ತಗುಲುವ ರೋಗ ಮತ್ತು ಕೀಟ ನಿಯಂತ್ರಕ ಗುಣದ ಲಾಭವಿದೆ.
ಹೂ ಬಿಡುವ ಸಮಯದಲ್ಲಿ ಜೇನು ಕೃಷಿಗೆ ಸಹಕಾರಿಯಾಗುತ್ತದೆ.
ಜಮೀನಿನ ಫಲವತ್ತಾದ ಮೇಲ್ಮಣ್ಣಿನ ಭೂ ಸವಕಳಿಯನ್ನು ತಡೆಗಟ್ಟುತ್ತದೆ.
ಈ ಸಸಿಗಳು ಬೇರುಗಳ ಮುಖಾಂತರ ಭೂಮಿಗೆ ಹೆಚ್ಚುವರಿ ಸಾರಜನಕವನ್ನು ಒದಗಿಸುತ್ತದೆ.
ಕಸಿ ಮಾಡಿದ ಸಸಿ ನೆಡುವುದರಿಂದ ಮರವಾಗಿ ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ವಾರ್ಷಿಕ ರೆಂಬೆ, ಕೊಂಬೆಗಳನ್ನು ಕಡಿಯುವುದರಿಂದ ರೈತರ ಬೆಳೆಗಳಿಗೆ ನೆರಳು ಬೀಳುವುದಿಲ್ಲ.
ಜಮೀನಿನ ಬದಿಗುಂಟ ಸಸಿ ನೆಡುವಿಕೆಯಿಂದ ಆಹಾರ ಉತ್ಪಾದನೆಯಲ್ಲಿ ಹೆಚ್ಚಳವಾಗುವುದು.
ಈಗ ಸಮಾಜಕ್ಕೆ ಆಗುವ ಪ್ರಯೋಜನಗಳನ್ನು ನೋಡೋಣ:
ಹೆಚ್ಚಿನ ಮರಗಳನ್ನು ಬೆಳೆಸುವುದರಿಂದ ಗ್ರಾಮೀಣ ಸೌಂದರ್ಯ ಹೆಚ್ಚುವುದು.
ಹೆಚ್ಚಿನ ಮರಗಳಿದ್ದಲ್ಲಿ ಉತ್ತಮ ಮಳೆ ಮತ್ತು ಇದರಿಂದಾಗಿ ಉತ್ತಮ ಬೆಳೆಯಾಗುವುದು.
ಪಶು ಪಕ್ಷಿಗಳಿಗೆ ಉತ್ತಮ ಆಸರೆಯಾಗುವುದು.
ಕಡಿದ ಸಣ್ಣ ಪುಟ್ಟ ರೆಂಬೆ ಕೊಂಬೆಗಳಿಂದ ಗ್ರಾಮೀಣ ಮಹಿಳೆಯರಿಗೆ ಉರುವಲಿನ ಆಸರೆ ಸಿಗುತ್ತದೆ.
ಪರಿಸರಕ್ಕೆ ಆಗುವ ಲಾಭಗಳು:
ಪರಿಸರ ಮಾಲಿನ್ಯ ತಡೆಗಟ್ಟುತ್ತದೆ.
ಜಾಗತಿಕ ತಾಪಮಾನ ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಅಂತರ್ಜಲ ಪುನಶ್ಚೇತನಕ್ಕೆ ಸಹಕಾರಿಯಾಗುತ್ತದೆ.
ರಾಸಾಯನಿಕ ಗೊಬ್ಬರಗಳಿಂದ ಆಗುವ ದುಷ್ಟರಿಣಾಮಗಳನ್ನು ತಡೆಗಟ್ಟಬಹುದು.
ಇಷ್ಟೆಲ್ಲಾ ವಿಷಯಗಳನ್ನು ವಿವರವಾಗಿ ನಿಮಗೆ ಏಕೆ ತಿಳಿಸುತ್ತಿದ್ದೇನೆಂದರೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಜೈವಿಕ ಇಂಧನದ ಪ್ರತಿನಿಧಿಯಾಗಿ ಜಾಗೃತಿ ಮೂಡಿಸಲಿ ಎಂಬ ಹೆಬ್ಬಯಕೆಯಿಂದ.
ಆದರೆ ನಮ್ಮ ತಂಡದ ಮುಂದಿದ್ದ ಸವಾಲೇನೆಂದರೆ ಈ ವಿಷಯಗಳನ್ನು ರೈತರಿಗೆ ತಲುಪಿಸುವುದು ಹೇಗೆ ಎನ್ನುವುದು. ಆಗ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ನಾಯಕ್ರವರು ಈ ಬಗ್ಗೆ ತುಂಬಾ ಆಸಕ್ತಿ ವಹಿಸಿದರು. ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಹಳ್ಳಿ ಹಳ್ಳಿಯಲ್ಲಿ ಅರಿವು ಮೂಡಿಸುವ ಯೋಜನೆಯನ್ನು ತಯಾರಿಸಿದರು. ಅದಕ್ಕಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಕೇಂದ್ರದಿಂದ ಹಣ ಸಹಾಯ ಮಾಡಲಾಯಿತು. ಕೆಲವು ಹಳ್ಳಿಗಳಲ್ಲಿ ರೈತರು ತಮ್ಮ ಹೊಲಗದ್ದೆಯ ಬದಿಯಲ್ಲಿ ಬೆಳೆದ ಹೊಂಗೆ, ಹಿಪ್ಪೆ, ಬೇವಿನ ಬೀಜಗಳನ್ನು ಸಂಗ್ರಹಿಸಿ, ಹತ್ತಿರದಲ್ಲಿರುವ ಗಾಣದಲ್ಲಿ ಎಣ್ಣೆಯನ್ನು ತೆಗೆದು ವಿವಿಧ ಬಗೆಯಲ್ಲಿ ಉಪಯೋಗಿಸುತ್ತಿದ್ದಾರೆ. ಅದರಲ್ಲಿ ದೀಪಗಳನ್ನು ಉರಿಸುವುದು ಒಂದು ಮುಖ್ಯ ಉಪಯೋಗವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಈ ಎಣ್ಣೆಯನ್ನು ಸ್ವಲ್ಪ ಮಟ್ಟಿಗೆ ಶುದ್ಧೀಕರಿಸಿ, ಟ್ರಾಕ್ಟರ್, ನೀರೆತ್ತುವ ಪಂಪುಗಳ ಇಂಜಿನ್ ಓಡಿಸಲು ಹಾಗೂ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿದೆ. ಗಾಣದಲ್ಲಿ ಎಣ್ಣೆ ಬೀಜಗಳಿಂದ ಸಂಪೂರ್ಣ ಎಣ್ಣೆ ತೆಗೆಯುವುದು ಕಷ್ಟಕರ. ಆದರೆ ಅಧುನಿಕ ಯಂತ್ರೋಪಕರಣಗಳ ಸಹಾಯದಿಂದ ಶೇಕಡಾ ತೊಂಬತ್ನಾಲ್ಕರಷ್ಟು ಎಣ್ಣೆ ಅಂಶವನ್ನು ಬೀಜದಿಂದ ಬೇರ್ಪಡಿಸಬಹುದು. ಒಂದು ಪ್ರದೇಶದಲ್ಲಿ ಅಥವಾ ಹಳ್ಳಿಯ ಸುತ್ತ ಮುತ್ತ ಇರುವ ಜೈವಿಕ ಇಂಧನದ ಮರಗಳ ಸಂಖ್ಯೆ ಮತ್ತು ಅಲ್ಲಿ ಸಿಗುವ ಎಣ್ಣೆ ಬೀಜದ ಪ್ರಮಾಣದ ಮೇಲೆ ಎಷ್ಟು ಯಂತ್ರವನ್ನು ಸ್ಥಾಪಿಸಬಹುದು ಎಂದು ನಿರ್ಧರಿಸಬಹುದು. ಅಲ್ಲಿ ತೆಗೆದ ಎಣ್ಣೆಯನ್ನು ಮೊದಲು ಅಲ್ಲಿನ ರೈತರ ಉಪಯೋಗಕ್ಕೆ ಕೊಡಬೇಕು. ಅಂದರೆ ಅವರು ಬೀಜದಿಂದ ನೇರವಾಗಿ ತೆಗೆದ ಎಣ್ಣೆಯನ್ನು ಶೋಧಿಸಿ ಡೀಸಲ್ ಜೊತೆ ಬೆರೆಸಿ, ಅವರ ಟ್ರಾಕ್ಟರ್, ನೀರೆತ್ತುವ ಇಂಜಿನ್ ಹಾಗೂ ಟಿಲ್ಲರ್ಗಳಿಗೆ ಉಪಯೋಗಿಸಬಹುದು. ಹೆಚ್ಚಿನ ಎಣ್ಣೆಯನ್ನು ನಂತರ ಶೋಧಿಸಿ ಟ್ರಾನ್ಸ್ ಸ್ಟೆರಿಫಿಕೇಷನ್ ಎನ್ನುವ ವಿಧಾನದ ಮೂಲಕ ಜೈವಿಕ ಇಂಧನವಾಗಿ ಪರಿವರ್ತಿಸಲಾಗುವುದು.
ಇದಕ್ಕಾಗಿ ಪ್ರಾಯೋಗಿಕವಾಗಿ ವಿಶ್ವವಿದ್ಯಾಲಯದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಅವರು ರೈತ ಮುಖಂಡರ ತರಬೇತಿ ಶಿಬಿರವನ್ನು ಸಹ ಏರ್ಪಡಿಸಿದರು. ಜೈವಿಕ ಇಂಧನಗಳ ಮರಗಳಿಂದ ಸಂಗ್ರಹಿಸಿದ ಹಣ್ಣುಗಳಿಂದ ತಿರುಳು ಹಾಗೂ ಬೀಜವನ್ನು ಬೇರ್ಪಡಿಸಿ ವಿಂಗಡನೆ ಮಾಡಿ, ಬೀಜಗಳನ್ನು ತೇವಾಂಶವಿಲ್ಲದಂತೆ ಸಂಗ್ರಹಿಸಬೇಕು. ತೇವಾಂಶವು ಬೀಜಕ್ಕೆ ಕಮಟು ವಾಸನೆ ಬರಿಸಿ ಎಣ್ಣೆಯ ಗುಣಮಟ್ಟವನ್ನು ಹಾಳು ಮಾಡುತ್ತದೆ. ಎಣ್ಣೆ ತೆಗೆಯಲು ಯಂತ್ರಕ್ಕೆ ಬೀಜವನ್ನು ಹಾಕುವ ಮೊದಲು ಬೀಜದ ಕವಚವನ್ನು ತೆಗೆದು ಗ್ರೈಂಡರ್ ಸಹಾಯದಿಂದ ಪುಡಿ ಮಾಡಿದರೆ ಹೆಚ್ಚಿನ ಎಣ್ಣೆ ಅಂಶವನ್ನು ತೆಗೆಯಬಹುದು. ಹೀಗೆ ಪುಡಿ ಮಾಡಿದ ಬೀಜಗಳಿಂದ ಯಂತ್ರಗಳ ಸಹಾಯದಿಂದ ಕಚ್ಚಾ ಎಣ್ಣೆಯನ್ನು ತೆಗೆದು ಶುದ್ಧೀಕರಣ ಮಾಡಬೇಕು ಮುಂತಾದ ವಿಷಯಗಳನ್ನು ತಿಳಿಸಿದರು. ಜೊತೆಗೆ ವಿಶ್ವವಿದ್ಯಾಲಯದಲ್ಲಿ ಬೀಜಗಳಿಂದ ಎಣ್ಣೆ ತೆಗೆಯುವ ಒಂದು ಘಟಕವನ್ನು ನಮ್ಮ ಕೇಂದ್ರದ ಸಹಾಯದಿಂದ ಸ್ಥಾಪಿಸಿದರು. ಇನ್ನೂ ಒಂದು ನೂರು ಎಕರೆ ಬಂಜರು ಭೂಮಿಯಲ್ಲಿ ಅರಣ್ಯ ಇಲಾಖೆಯ ಸಹಾಯದಿಂದ ಜೈವಿಕ ಇಂಧನ ಪಾರ್ಕನ್ನು ಆರಂಭಿಸಿದೆವು. ನಾವು ಇಲ್ಲಿ ಉತ್ಪಾದಿಸಿದ ಎಣ್ಣೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ವಾಹನಗಳಿಗಾಗಿ ಉಪಯೋಗಿಸಲು ಒಪ್ಪಂದ ಮಾಡಿಕೊಂಡೆವು. ಪ್ರತಿ ಕಿಲೋ ಬೀಜವನ್ನು ಸಂಗ್ರಹಿಸಿದವರಿಗೆ ಹತ್ತು ರುಪಾಯಿಗಳ ವಾಡಿಕೆ ಮಾರುಕಟ್ಟೆಯ ವ್ಯವಸ್ಥೆ ಕೊಟ್ಟಿದ್ದೆವು. ನನಗೆ ಅತ್ಯಂತ ಆಶ್ಚರ್ಯ ಹಾಗೂ ಖುಷಿ ತಂದ ಘಟನೆ ಏನೆಂದರೆ ನಮ್ಮ ವ್ಯಾಪಕ ಪ್ರಚಾರವನ್ನು ಮನಸ್ಸಿಗೆ ತಂದುಕೊಂಡು ಒಬ್ಬ ಪೌರಕಾರ್ಮಿಕ ಮಹಿಳೆ ಹತ್ತು ಕಿಲೋ ಬೇವಿನ ಬೀಜಗಳನ್ನು ರಸ್ತೆ ಬದಿಯಿಂದ ಸಂಗ್ರಹಿಸಿ, ಕಸದಿಂದ ಬೇರ್ಪಡಿಸಿ, ಒಂದು ನೂರು ರುಪಾಯಿಗಳನ್ನು ನಮ್ಮಿಂದ ಒಂದು ದಿನಕ್ಕೆ ತೆಗೆದುಕೊಂಡದ್ದು...
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

