ಕರ್ನಾಟಕ ಕಾಂಗ್ರೆಸ್-ಅಹಿಂದ ಶಕ್ತಿ ಪರೀಕ್ಷೆ

Updated on: 

ಸಂಸತ್ತು ಕೊನೆಗೂ ತನ್ನ ವಿಸ್ತಾರವಾದ ಬಜೆಟ್ ಅಧಿವೇಶನವನ್ನು "ಯಶಸ್ವಿಯಾಗಿ" ಮುಗಿಸಿಕೊಂಡರೂ ಭ್ರಷ್ಟಾಚಾರದ ವಿರುದ್ಧ ಹೋರಾಟದ ಅಂಗವಾದ ಕೆಲವು ವಿಧೇಯಕಗಳನ್ನು ಅಂಗೀಕರಿಸದೇ ಮುಂದಕ್ಕೆ ಹೋಗಿದೆ. ಈ ಲೋಕಸಭೆ ಇನ್ನು ಸೇರುವುದಿಲ್ಲ. ಆದರೂ ಆ ವಿಧೇಯಕಗಳನ್ನು ತುರ್ತು ಶಾಸನದ ರೂಪದಲ್ಲಿ ಜಾರಿಗೆ ತರುವ ಚಿಂತನೆ ನಡೆಸಿದೆ. ಸಂವಿಧಾನದಲ್ಲಿ ಅಂತಹ ಕ್ರಮಕ್ಕೆ ಅವಕಾಶ ಇದ್ದರೂ, ಚುನಾಯಿತ ಲೋಕಸಭೆಯ ಅವಧಿ ತೀರ ಕಡಿಮೆ ಇರುವಾಗ ತುರ್ತು ಶಾಸನದ ಅಧಿಕಾರದ ಬಳಕೆಗೆ ನೈತಿಕ ಹಕ್ಕಿದೆಯೇ ಎನ್ನುವ ಪ್ರಶ್ನೆ ಹಾಗೇ ಉಳಿದಿದೆ. ನೈತಿಕತೆಯ ಜಿಜ್ಞಾಸೆ ಈಗ ಯಾರಿಗೆ ಬೇಕಾಗಿದೆ?
ಕರ್ನಾಟಕದಲ್ಲಿ ವಿಧಾನ ಮಂಡಲದ ಅಧಿವೇಶನ ಮುಗಿದಿದ್ದು, ಎಷ್ಟೇ ಕಿರುಕುಳಗಳಿದ್ದರೂ, ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮುದಾಯ) ಹಿತರಕ್ಷಣೆಗೆ ಸಾಧ್ಯವಿರುವಷ್ಟೂ ನೆರವನ್ನು ನೀಡಿರುವುದು ಲೋಕಸಭೆ ಚುನಾವಣೆಯ ಸಮಯದಲ್ಲಿ ಒಂದು ಅನುಕೂಲಕರವಾದ ಅಂಶವೇ ಆಗಬೇಕು. ಆದರೆ ಇಲ್ಲಿ ನಿಜವಾದ ಪ್ರಶ್ನೆ ಇರುವುದು, ಅಹಿಂದ ಕ್ಷೇಮಾಭಿವೃದ್ಧಿ, ಪ್ರಾತಿನಿಧ್ಯದ ನೀತಿಯಲ್ಲಿ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಕಳಕಳಿ ಇದೆಯೇ ಎನ್ನುವುದು.
ವಿಧಾನಮಂಡಲದ ಅಧಿವೇಶನಕ್ಕೆ ಮುಂಚೆ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೀಡಿದ್ದ ರಾಜಕೀಯ ಸ್ವರೂಪದ ಆಶ್ವಾಸನೆಗಳು ಇನ್ನೂ ಈಡೇರಿಲ್ಲ. ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಚುನಾವಣೆ ವಿಚಾರದಲ್ಲಿ ಈಗಷ್ಟೇ ಹೈಕೋರ್ಟ್‌ನ ತೀರ್ಪು ಪ್ರಕಟವಾಗಿದೆ. ಆ ಕೆಲಸ ಈಗ ಆಗಬೇಕು. ಆಗಲೂಬಹುದು. ಆದರೆ ನಿಗಮ - ಮಂಡಳಿಗಳು ಹಾಗೂ ಇತರ ಸಂಸ್ಥೆಗಳಿಗೆ ಸರ್ಕಾರ ಮಾಡಬೇಕಾದ ನಾಮಕರಣ ಸಧ್ಯಕ್ಕೆ ಸಾಧ್ಯವಾಗಲಾರದು. ಈಗ ಯಾರನ್ನು ನೇಮಿಸಿದರೂ, ಇತರ ಆಕಾಂಕ್ಷಿಗಳು ನಾಯಕತ್ವದ ವಿರುದ್ಧ ತಿರುಗಿ ಬೀಳುವ ಭೀತಿಯಂತೂ ಇದ್ದೇ ಇದೆ.
ಇಷ್ಟಕ್ಕೂ ಈಗ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಪರಮೇಶ್ವರ ಅವರಿಗೆ ಪುರುಸೊತ್ತಾದರೂ ಎಲ್ಲಿದೆ ? ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಸಮಿತಿಗಳು ಜೀವಂತವಾಗಿಲ್ಲದೇ ಇರುವ ಸನ್ನಿವೇಶದಲ್ಲಿ ಲೋಕಸಭೆ ಚುನಾವಣೆಯ ಸಂಬಂಧದ ಎಲ್ಲ ಕೆಲಸವೂ ಸಿದ್ದರಾಮಯ್ಯ, ಪರಮೇಶ್ವರ್ ಅವರ ಹೆಗಲ ಮೇಲೇ ಬೀಳುವುದು ಖಚಿತ. ಅದರ ಹೊರೆ ನಿಜವಾಗಲೂ ಕಂಡು ಬರುವುದು ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಅನಂತರವೇ. ಆಗಲೇ ಅತೃಪ್ತರನ್ನು ಸಮಾಧಾನ ಪಡಿಸುವುದು, ಚುನಾವಣೆ ಪ್ರಚಾರಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ರೂಢಿಸಿಕೊಳ್ಳುವುದೂ ಇವರಿಬ್ಬರ ಜವಾಬ್ದಾರಿಯೇ.
ಅಭ್ಯರ್ಥಿಗಳ ಆಯ್ಕೆಯ ಸಂಬಂಧದಲ್ಲಿ ರಾಜ್ಯದಲ್ಲಿ ಈಗ ಆಗಬೇಕಾಗಿರುವುದು ಅಹಿಂದ ಶಕ್ತಿಯ ಪರೀಕ್ಷೆ. ಎಷ್ಟು ಕ್ಷೇತ್ರಗಳಲ್ಲಿ ಅಹಿಂದ ಅಭ್ಯರ್ಥಿಗಳಿಗೆ, ಯುವಕರಿಗೆ, ಮಹಿಳೆಯರಿಗೆ ಅವಕಾಶ ಸಿಗುತ್ತದೆ ಎನ್ನುವುದರ ಮೇಲೆ ಆ ಪರೀಕ್ಷೆಯ ಫಲಿತಾಂಶ ನಿಂತಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ, ಇತರ ಕೆಲವು ರಾಜ್ಯಗಳ ಘಟಕಗಳಂತೆ, ಕೂಟಗಳನ್ನು ಎದುರಿಸುವ, ಅಥವಾ ಕೂಟಗಳನ್ನು ರಚಿಸುವ ಅಗತ್ಯವೇನೂ ಇಲ್ಲ. ಇಲ್ಲಿ ಕೂಟ ರಾಜಕೀಯದ ವಾತಾವರಣ ಇಲ್ಲ. ಕಾಂಗ್ರೆಸ್ ನೇರವಾಗಿ ಕೆಲವು ಕಡೆ ಜಾತ್ಯತೀತ ಜನತಾದಳದ ಜತೆ, ಇನ್ನು ಕೆಲವು ಕಡೆ ಭಾರತೀಯ ಜನತಾ ಪಾರ್ಟಿಯ ಜತೆ ಸೆಣಸಬೇಕಾಗುತ್ತದೆ. ಚುನಾವಣೆಯ ಕೂಟ ತಂತ್ರಗಾರಿಕೆಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಚುನಾವಣೆಯ ಪ್ರಚಾರ ಸಮರದ ಕಾಲದಲ್ಲಿ, ಕಾಂಗ್ರೆಸ್, ಪ್ರಾದೇಶಿಕ ವಿಚಾರಗಳ ಜತೆಯಲ್ಲೇ ಕೇಂದ್ರ ಸರ್ಕಾರದ ಅವಾಂತರಗಳ ವಿಚಾರಗಳಿಗೂ ಉತ್ತರ ಕೊಡಲೇಬೇಕಾಗುತ್ತದೆ.
ಅಭ್ಯರ್ಥಿಗಳ ಕೊರತೆ: ರಾಜ್ಯದಲ್ಲಿ ಎಲ್ಲ ಪಕ್ಷಗಳಿಗೂ ಸಮರ್ಥ, ವಿಶ್ವಾಸಾರ್ಹ, ಚೈತನ್ಯಪೂರ್ಣ ಹಾಗೂ ಗೆಲ್ಲುವ ಅವಕಾಶವಿರುವ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ರಾಜಕಾರಣಿಗಳು, ಅವರ ಬೆಂಬಲಿಗರ ಮಾತುಗಳನ್ನು ನಂಬಬಹುದಾದರೆ, ಒಬ್ಬ ಅಭ್ಯರ್ಥಿ ಪ್ರತಿ ಕ್ಷೇತ್ರದಲ್ಲೂ ಕನಿಷ್ಟ ಪಕ್ಷ ಹತ್ತು ಕೋಟಿ ರುಪಾಯಿಗಳಿಂದ ಹಿಡಿದು ಹದಿನೈದು ಕೋಟಿ ರುಪಾಯಿಗಳು ಬೇಕು. ಅಂತಹ ಅಭ್ಯರ್ಥಿಗಳನ್ನು ಎಲ್ಲಿ ಹುಡುಕುವುದು? ಅದಕ್ಕೇ ಕಾಂಗ್ರೆಸ್ ಕೆಲವು ಮಂತ್ರಿಗಳನ್ನು ಅಭ್ಯರ್ಥಿಗಳಾಗಿ ಆರಿಸಲು ಮುಂದಾಗಿದ್ದು. ಆದರೆ ಚಿತ್ರದುರ್ಗದ ಆಂಜನೇಯ ಅವರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ಸ್ಪರ್ಧೆಯ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರವಿತ್ತು. ಚುನಾವಣೆಯಲ್ಲಿನ ಗೆಲವಿಗೆ ಹಣವನ್ನೇ ಪ್ರಮುಖ ಅಸ್ತ್ರವಾಗಿ ಮಾಡಿದ್ದು ಆ ಪಕ್ಷವೇ. ಆಪರೇಷನ್ ಕಮಲದಿಂದಲೇ ಆರಂಭವಾಗಿದ್ದ ಪ್ರಕ್ರಿಯೆ ಅದು. ಬಿಜೆಪಿಗೆ ಆಗ ಇದ್ದ ಹಣದ ಅನುಕೂಲಕರ ಪರಿಸ್ಥಿತಿ ಈಗ ಇಲ್ಲ.
ಆದರೆ, ನರೇಂದ್ರ ಮೋದಿ ಅವರ ಪ್ರಚಾರದ ಭರಾಟೆಯ ಓಘದಲ್ಲಿ ಈ ಬಾರಿ ಬಿಜೆಪಿಗೆ ಸರ್ಕಾರದ ರಚನೆಯ ಅವಕಾಶ ಸಿಗುವ ಆಸೆ ಅನೇಕರಲ್ಲಿರುವುದರಿಂದ, ಹಣದ ಶಕ್ತಿ ಇರುವವರು, ಅಥವಾ ಸಮಾಜದಿಂದ ಹಣವನ್ನು ಸಂಗ್ರಹಿಸಬಲ್ಲವರು ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಆಸಕ್ತಿಯಿಂದಿರಬಹುದು. ಇತರರ ಜವಾಬ್ದಾರಿಯನ್ನು ಪಕ್ಷವೇ ಹೊರಬೇಕು.
ಕಾಂಗ್ರೆಸ್ಸಿನಂತೆಯೇ ಬಿಜೆಪಿಯಲ್ಲೂ ಮಾಜಿ ಮಂತ್ರಿಗಳನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಪ್ರಯತ್ನ ಕೇಳಿ ಬಂದಿದೆ. ಆದರೆ ಅದು ಒಂದೆರಡು ಕ್ಷೇತ್ರಗಳಿಗೇ ಮೀಸಲು. ಬಿಜೆಪಿಯಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಹೊಣೆಯನ್ನು ಅನಧಿಕೃತವಾಗಿ ಯಡಿಯೂರಪ್ಪ ಅವರಿಗೇ ಬಿಟ್ಟು ಕೊಟ್ಟಿರುವಂತಿದೆ. ಅವರು ಮುಖ್ಯಮಂತ್ರಿಗಳಾಗಿದ್ದಾಗ ಆ ಭಾಗದಲ್ಲಿ ಬೆಳಸಿಕೊಂಡಿದ್ದ ಸಂಬಂಧ, ಸಂಪರ್ಕಗಳು ಇನ್ನೂ ಗಟ್ಟಿಯಾಗಿವೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹಿಂದೆ ಗೆದ್ದಿದ್ದು ನಿಜ. ಆದರೆ ಈಗ ಪರಿಸ್ಥಿತಿ ಬದಲಾಗಿದೆಯಲ್ಲ! ಆ ಭಾಗದ ರಾಜಕೀಯ ವ್ಯವಹಾರಗಳಲ್ಲಿ ಯಡಿಯೂರಪ್ಪ ಅವರ ಮಾತಿಗೇ ಹೆಚ್ಚು ಮೌಲ್ಯವಿರುವಂತಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪಾತ್ರವೇನಾದರೂ ಇದ್ದರೆ ಅದು ರಹಸ್ಯವಾದದ್ದು. ಬಿಜೆಪಿ ಬೆಂಗಳೂರಿನ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದೆ. ಕಳೆದ ಬಾರಿ ಹೆಚ್ಚು ಪ್ರಯಾಸವಿಲ್ಲದೇ ಗೆದ್ದಿದ್ದ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನೇ ನಿಲ್ಲಿಸುವ ಸಂಭವವಿದೆ. ಅದರಲ್ಲೂ ಒಕ್ಕಲಿಗರ ಪ್ರಾಬಲ್ಯದ ಉತ್ತರ ಬೆಂಗಳೂರು ಕ್ಷೇತ್ರಕ್ಕೆ ಅತಿರಥ - ಮಹಾರಥರೇ ಲಗ್ಗೆ ಹಾಕುತ್ತಿರುವಂತಿದೆ.
ದೇವೇಗೌಡರ ಪಾತ್ರ - ಪಾಲು: ಈಗಿನ ಚುನಾವಣೆ ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ ಅಗ್ರೇಸರ, ದೇವೇಗೌಡರ ಪಾಲಿಗೆ ಪ್ರಾಯಶಃ ಕಟ್ಟಕಡೆಯ ನಿರ್ಣಾಯಕ ಚುನಾವಣೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್- ವಿರೋಧಿ, ಬಿಜೆಪಿ-ವಿರೋಧಿ, ರಂಗದಲ್ಲಿ ದೇವೇಗೌಡರಿಗೆ "ಪದನಿಮಿತ್ತ" ಗೌರವದ ಸ್ಥಾನ - ಮಾನ ಲಭ್ಯವಿದ್ದರೂ, ಅವರ ಪ್ರಭಾವಕ್ಕೆ ನಿಜವಾದ ಅಳತೆಗೋಲು ದಕ್ಷಿಣ ಕರ್ನಾಟಕದ ಹೃದಯ ಸೀಮೆಯಂತಿರುವ ಹಾಸನ, ಮೈಸೂರು, ಮಂಡ್ಯ, ರಾಮನಗರ (ಬೆಂಗಳೂರು ಗ್ರಾಮೀಣ) ತುಮಕೂರು, ಕೋಲಾರಗಳಲ್ಲಿ ಗಳಿಸಬಹುದಾದ ಯಶಸ್ಸಿನ ಪ್ರಮಾಣ. ಜಾತ್ಯಾತೀತ ಜನತಾದಳದ ನಾಯಕರಿಗೆ ಈಗ ತಮ್ಮ ಪಕ್ಷದ ಪ್ರಭಾವದ ವಿಸ್ತರಣೆಗೆ ಇರುವ ಚೌಕಟ್ಟುಗಳ ನಿರ್ಭಂಧದ ಒತ್ತಡದ ಪ್ರಮಾಣದ ಅರಿವು ಮೂಡಿರಲೇ ಬೇಕು. ಲೋಕಸಭೆಯ ಮಂಡ್ಯ - ರಾಮನಗರ ಕ್ಷೇತ್ರಗಳಲ್ಲಿನ ಉಪಚುನಾವಣೆಯಲ್ಲಿ ಅನುಭವಿಸಿದ ಪರಾಭವದ ಪಾಠವನ್ನು ಪಕ್ಷ ಕಲಿತಿರುವಂತಿದೆ. ಪ್ರಕಟಿತ ವರದಿಗಳಂತೆ, ದೇವೇಗೌಡರು ಹಾಸನದಲ್ಲೇ ಸ್ಪರ್ಧಿಸುತ್ತಾರೆ. ಅದು ಅವರ ಪ್ರಬಲ ಕ್ಷೇತ್ರ. ಗೌಡರು ಈಗ ನಿರಾಳವಾಗಿ ತಮ್ಮ ಪ್ರಚಾರದ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಆದರೆ ದೇವೇಗೌಡರು, ತಮ್ಮ ಕುಟುಂಬದಿಂದ ಬೇರೆ ಯಾರೂ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದಾರೆನ್ನುವ ವರದಿಗಳ ಹಿನ್ನೆಲೆಯಲ್ಲಿ, ರಾಮನಗರ, ಮಂಡ್ಯ, ತುಮಕೂರುಗಳಲ್ಲಿ ಭರ್ಜರಿ ಕುಳಗಳೆನಿಸಿದವರನ್ನು ಸ್ಪರ್ಧೆಗೆ ಇಳಿಸುವುದು ಕಷ್ಟವಾದೀತು.
ಆಮ್‌ಆದ್ಮಿಯ ಮಾತು: ದೆಹಲಿ, ಹರ್ಯಾಣ, ಉತ್ತರಪ್ರದೇಶ, ಮುಂಬೈಗಳಲ್ಲಿ ಕಂಡುಬಂದಿರುವಂತೆ ಕರ್ನಾಟಕದಲ್ಲಿ ಇನ್ನೂ ಅರವಿಂದ ಕೇಜ್ರಿವಾಲ ನೇತೃತ್ವದ ಆಮ್‌ಆದ್ಮಿ ಪಾರ್ಟಿಯ ಹೆಸರು ದೊಡ್ಡದಾಗಿ ಕೇಳಿ ಬರುತ್ತಿಲ್ಲ.  ಬೆಂಗಳೂರಿನ ಎರಡು ಕ್ಷೇತ್ರಗಳು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿಯಂತಹ ನಗರಗಳ ಮೇಲೆ ಆ ಪಕ್ಷದ ಕಣ್ಣು ಬಿದ್ದಿರುವಂತಿದೆ. ಆದರೆ, ಅರವಿಂದ ಕೇಜ್ರಿವಾಲ ಹಾಗೂ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಅವರ ನಡುವಣ ವಿವಾದದ ಹಿನ್ನೆಲೆಯಲ್ಲಿ ಆಮ್‌ಆದ್ಮಿ ಪಾರ್ಟಿ ಚಿಕ್ಕಬಳ್ಳಾಪುರದಲ್ಲಿ ಪ್ರಚಾರದ ದೃಷ್ಟಿಯಿಂದಲಾದರೂ ಕಣಕ್ಕೆ ಇಳಿಯಬಹುದು. ಇನ್ನೂ ಅಭ್ಯರ್ಥಿಯ ಆಯ್ಕೆಯಾಗಿಲ್ಲ. ಬಿಸಿಲು ಏರಿದಂತೆ ಚುನಾವಣೆಯ ಕಾವೂ ಹೆಚ್ಚುವ ಸಂಭವ ನಿಚ್ಚಳವಾಗಿ ಕಂಡುಬಂದಿದೆ.
ಕಿಡಿಗೇಡಿತನ - ಚುನಾವಣೆ ಸಮೀಕ್ಷೆಯ ವರದಿಗಳನ್ನು ಸಿದ್ಧಪಡಿಸುತ್ತಿರುವ ಪ್ರಕ್ರಿಯೆಯಲ್ಲಿ, ಆ ಸಂಸ್ಥೆಗಳಲ್ಲಿ ಕೆಲವು ಭ್ರಷ್ಟಾಚಾರಕ್ಕೆ ಅವಕಾಶವಿದೆ ಎನ್ನುವ ವರದಿಗಳು ಕಾಂಗ್ರೆಸ್ ಬಿಜೆಪಿ ವಿರೋಧಿ ಐಕ್ಯರಂಗದ ಉದಯದ ಸುದ್ದಿಯ ಜತೆಯಲ್ಲೇ ಪ್ರಕಟವಾಗಬೇಕಿತ್ತಾ? ಒಂದು ವರದಿ ಕಾಂಗ್ರೆಸ್ ಬಿಜೆಪಿ ವಿರೋಧಿ ಪಕ್ಷಗಳಿಗೆ ಮುಂದಿನ ಲೋಕಸಭೆಯಲ್ಲಿ ಇನ್ನೂರಕ್ಕೂ ಹೆಚ್ಚಿನ ಸ್ಥಾನಗಳನ್ನು ನೀಡಿತ್ತು.

- ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com