

ಪಕ್ಕದ ತಮಿಳುನಾಡಿನ ಕೊಯಮತ್ತೂರು ನಮಗೆ ತೀರಾ ದೂರ ಏನಲ್ಲ. ಬೆಂಗಳೂರಿನಿಂದ 365 ಕಿ.ಮೀ ಅಂತರ ಅಷ್ಟೇ. ಅಬ್ಬಬ್ಬಾ ಎಂದರೆ ಆರು ಗಂಟೆ ಪ್ರಯಾಣ. ಅಲ್ಲಿನ ವಾರ್ಷಿಕ ಸರಾಸರಿ ಮಳೆ ಪ್ರಮಾಣ ಕೇವಲ 61.22 ಸೆಂಟಿಮೀಟರ್. ಪಶ್ಚಿಮ ಘಟ್ಟದ ತಪ್ಪಲಿನಲ್ಲೇ ಇದ್ದರೂ ನೀರಿನ ದಾಹ. ಬೆಳೆಯುತ್ತಿರುವ ನಗರ ಬೇರೆ, ನಮ್ಮ ಬೆಂಗಳೂರಿನಂತೆಯೇ. ನೀರನ್ನು ಎಲ್ಲಿಂದ ಪೂರೈಸುವುದು? ಸಿರುವಾಣಿ ಮತ್ತು ಪಿಲ್ಲೂರು ಯೋಜನೆಗಳೇ ನೀರಿನ ಮೂಲ. ಆದರೆ ಅದರಿಂದ ಪೂರೈಕೆಯಾಗುತ್ತಿರುವುದು ಸಾಲುತ್ತಿಲ್ಲ. ಅಲ್ಲದೇ ಅಂತರ್ಜಲವೂ ಕುಸಿಯುತ್ತಿದೆ. ನೀರಿನ ಪರಿಹಾರಕ್ಕೆ ಅಲ್ಲಿನ ಮಹಾನಗರ ಪಾಲಿಕೆ ಕಂಡುಕೊಂಡ ದಾರಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವುದು. ಹೊಸದಾಗಿ ನೀರಿನ ಸಂಪರ್ಕ ಬೇಕು ಎಂದರೆ ಮಳೆ ನೀರು ಕೊಯ್ಲು ಅಳವಡಿಸಲೇಬೇಕು. ಅಲ್ಲಿಯೂ ಅಧಿಕಾರಿಗಳು ಮೊದಲು ಮಳೆ ನೀರು ಕೊಯ್ಲಿನ ಫೋಟೊ ತೋರಿಸಿದರೆ ಸಾಕು ಎಂದರು. ಇಲ್ಲದ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ದಾಖಲೆಗಳಲ್ಲಿ ತೋರಿಸಿ ನೀರಿನ ಸಂಪರ್ಕ ಪಡೆಯುವವರ ಪ್ರಮಾಣ ಹೆಚ್ಚಿತು. ಇದು ಜನ ಪ್ರತಿನಿಧಿಗಳ ಗಮನಕ್ಕೆ ಬರಲು ಹೆಚ್ಚು ದಿನ ಬೇಕಾಗಲಿಲ್ಲ. ಅಧಿಕಾರಿಗಳಿಗೆ ಚೆನ್ನಾಗಿಯೇ ಬಿಸಿ ಮುಟ್ಟಿಸಿದರು. ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸದ ಹೊರತು ಅನುಮತಿ ಕೊಡಕೂಡದು ಎಂದು ತಾಕೀತು ಮಾಡಿದರು. ಪರಿಣಾಮ ಮೂರ್ನಾಲ್ಕು ತಿಂಗಳಿನಲ್ಲಿಯೇ ಕಾಣಿಸಿದೆ. ಕಳೆದ ಅಕ್ಟೋಬರ್ ಹೊತ್ತಿಗೆ ಕೊಯಮತ್ತೂರಿನಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡವರ ಸಂಖ್ಯೆ 3200 ದಾಟಿದೆ. ಇದು ಸುಮ್ಮನೆ ಕೇಳಿ ನಿರ್ಲಕ್ಷಿಸಿಬಿಡುವ ಸಂಗತಿ ಖಂಡಿತಾ ಅಲ್ಲ.
ಬೆಂಗಳೂರಿನಲ್ಲೂ 2400 ಚದರ ಅಡಿಗಿಂತ ಹೆಚ್ಚಿನ ನಿವೇಶನಗಳ ಮಾಲೀಕರು ಮಳೆ ನೀರು ಕೊಯ್ಲನ್ನು ಕಡ್ಡಾಯಗೊಳಿಸಿದೆ. 1200 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಹೊಸದಾಗಿ ಮನೆ ಕಟ್ಟಿಸುವಾಗ ಮಳೆ ನೀರು ಕೊಯ್ಲು ವ್ಯವಸ್ಥೆ ಇರಲೇಬೇಕು ಎನ್ನುವ ನಿಯಮವನ್ನೇನೋ ರೂಪಿಸಲಾಗಿದೆ. ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದು ನಮಗೇ ಗೊತ್ತಿದೆ. ಮಳೆ ನೀರೆಲ್ಲ ಚರಂಡಿ ಸೇರಿ ವ್ಯರ್ಥವಾಗುತ್ತಿದೆ. ನಾಗರಿಕರೂ ಅಷ್ಟೇ, ಭಾರಿ ಮಳೆ ಬಂದು ರಾಜಾಕಾಲುವೆಗಳು ಉಕ್ಕಿ ಹರಿದು, ಅನಾಹುತ ಆದಾಗ ಪಾಲಿಕೆಯನ್ನು ಶಪಿಸಿ ಸುಮ್ಮನಾಗುತ್ತಾರೆಯೇ ವಿನಾ ತಮ್ಮ ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದ್ದರೆ ರಾಜಾಕಾಲುವೆ ಸೇರಿ ವ್ಯರ್ಥವಾಗುವ ಬಹುಪಾಲು ನೀರನ್ನು ಇಂಗಿಸಬಹುದಿತ್ತು ಎಂದು ಯೋಚಿಸುವುದೇ ಇಲ್ಲ! 'ಬೆಂಗಳೂರಿನ ಎಲ್ಲ ಮನೆಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು' ಎಂದು ಹಿಂದಿನ ಹಲವು ಮುಖ್ಯಮಂತ್ರಿಗಳು, ಸಚಿವರಂತೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಮೊನ್ನೆಮೊನ್ನೆ ಅಣಿಮುತ್ತು ಉದುರಿಸಿದ್ದಾರೆ. ಈಗಾಗಲೇ ಇರುವ ನಿಯಮಗಳ ಬಗ್ಗೆ ಸಂಬಂಧಿಸಿದ ಸಂಸ್ಥೆಗಳದ್ದಂತೂ ಜಾಣ ಕಿವುಡು.
ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯದ ಬಹಳಷ್ಟು ಪಟ್ಟಣಗಳಲ್ಲೂ ನೀರಿನ ಸಮಸ್ಯೆ ಇದೆ. ಹಾಗೆಯೇ ಅಂತರ್ಜಲ ಮರುಭರ್ತಿ ಮಾಡುವ ನಿಟ್ಟಿನಲ್ಲಿ ನಗರ ಪ್ರದೇಶದ ಸಾರ್ವಜನಿಕರು ಪ್ರಯತ್ನಿಸಬಹುದಾದ ಉಪಾಯಗಳೂ ಇವೆ. ನಗರದ ಉದ್ಯಾನವನಗಳಲ್ಲಿ ನೀರು ಹೆಚ್ಚಾಗಿ ಹರಿಯುವ ದಿಕ್ಕಿನಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಬೇಕು. ಈ ಇಂಗುಗುಂಡಿಗೆ ಅಪ್ಪಿತಪ್ಪಿಯೂ ಕೊಳಚೆ ನೀರು ಹರಿಯದಂತೆ ಎಚ್ಚರವಹಿಸಬೇಕು. ರಸ್ತೆಯ ಇಳಿಜಾರಿನಲ್ಲಿ, ಸರ್ಕಾರಿ ಸ್ವಾಮ್ಯದ ಪ್ರದೇಶಗಳಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಅಲ್ಲಲ್ಲೇ ಇಂಗುಗುಂಡಿಗಳನ್ನು ತೋಡಿಸಿ ಅದರ ಮೇಲೆ ಯಾವ ನಿರ್ಬಂಧವಿಲ್ಲದೆ ಜನ ಓಡಾಡುವಂತೆ ಎಚ್ಚರವಹಿಸಬೇಕು. ಎಲ್ಲ ನಗರವಾಸಿಗಳು ಅವರವರ ಮನೆಯ ಛಾವಣಿಯ ಮೇಲೆ ಬಿದ್ದ ಮಳೆಯ ನೀರನ್ನು ಮನೆಯ ಯಾವುದೇ ಭಾಗದಲ್ಲಿ ಇಂಗುಗುಂಡಿ ನಿರ್ಮಿಸಿ ಆ ಇಂಗುಗುಂಡಿಗೆ ನೀರನ್ನು ಹಾಯಿಸಿ ಇಂಗಿಸುವ ಪಯತ್ನ ಮಾಡಬೇಕು. ಮಳೆಯ ನೀರನ್ನು ವಿಫಲ ಬಾವಿಗಳಿಗೆ ಹರಿಸಬೇಕು. ಮಳೆ ನೀರು ಕೊಯ್ಲು ಪದ್ಧತಿಯನ್ನು ಅನುಸರಿಸಿ ಮಳೆನೀರನ್ನು ತೊಟ್ಟಿ, ಸಂಪುಗಳಲ್ಲಿ ಶೇಖರಿಸಿ ಉಪಯೋಗಿಸುವಂಥ ವ್ಯವಸ್ಥೆ ಎಲ್ಲರೂ ರೂಢಿಸಿಕೊಳ್ಳಬೇಕು. ಜಲಮಂಡಳಿ ಸಕಾಲದಲ್ಲಿ ಸಾಕಷ್ಟು ನೀರನ್ನು ಒದಗಿಸದಿದ್ದಾಗ ಇಂತಹ ಮಳೆ ನೀರು ಕೊಯ್ಲು ಜನರಿಗೆ ಉಪಯೋಗಕ್ಕೆ ಬರುತ್ತದೆ. ಮಳೆಕೊಯ್ಲು ಪದ್ಧತಿಯನ್ನು ಪಟ್ಟಣದ ನಾಗರಿಕರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯಿಸಿ ಆದೇಶ ಹೊರಡಿಸಬೇಕು. ಮಾತ್ರವಲ್ಲ, ಅದರ ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕು.
ಇನ್ನು ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಕಥೆ ಇನ್ನೊಂದು ರೀತಿಯದು. ಅಲ್ಲಿನ ನೀರಿನ ಬವಣೆ ಹೇಗಿದೆ ಎಂದರೆ ಅಂತರ್ಜಲವೇ ಸಿಗದ ಸ್ಥಿತಿ. ಸಹ್ಯಾದ್ರಿ ತಪ್ಪಲಿನ ಮಲೆನಾಡಿನಲ್ಲಿ ಕೂಡ ನೀರಿನ ಸಮಸ್ಯೆ ಗಂಭೀರವಾಗುತ್ತಲೇ ಇದೆ. ಇಲ್ಲಿಯೂ ಸರ್ಕಾರ ಮಾಡಬೇಕಾದದ್ದು ಬಹಳ ಇದೆ. ಅಂತರ್ಜಲ ತೀರಾ ಆಳಕ್ಕೆ ಕುಸಿದಿರುವ, ಅಂತರ್ಜಲವೇ ಸಿಗದ ಸ್ಥಳಗಳನ್ನು ಗುರುತಿಸಿ, ಸಂಘ-ಸಂಸ್ಥೆಗಳ ಜತೆ ಸೇರಿ ಅಂತರ್ಜಲ ಮರುಭರ್ತಿಗೆ ಒಂದು ಯೋಜನೆಯನ್ನು ಸಿದ್ಧಪಡಿಸಬೇಕು. ಆ ಪ್ರದೇಶದ ಶಿಲಾರಚನೆ, ಮಣ್ಣಿನ ಗುಣ, ಭೂ ಮೇಲ್ಮೈ ಲಕ್ಷಣ, ಇಳಿಜಾರು ಮುಂತಾದ ವಿವಿಧ ತಾಂತ್ರಿಕತೆ ಸಮೀಕ್ಷೆ ನಡೆಸಿ ಆ ಸ್ಥಳವನ್ನು ಒಂದು ಜಲಾನಯನ ಪ್ರದೇಶವೆಂದು ಗುರ್ತಿಸಬೇಕು. ಆ ಜಮೀನಿನ ಇಳಿಜಾರಿಗೆ ವಿರುದ್ಧವಾಗಿ ನೆಲದೊಳಗೆ ಸುಮಾರು 15-20 ಮೀಟರ್ ಆಳದಲ್ಲಿ ಒಂದೆರಡು ಮೀಟರ್ ದಪ್ಪದ ಗೋಡೆಯನ್ನು ನೆಲದೊಳಗೆ ಅಡ್ಡವಾಗಿ ನಿರ್ಮಿಸಬೇಕು. ಇದರ ಉದ್ದ ಹರಿಯುವ ನೀರಿನ ಕಡೆಗೆ ಅನುಗುಣವಾಗಿ ಹಲವಾರು ಮೀಟರ್‌ನಷ್ಟು ದೂರ ಇದ್ದರೆ ಸಾಕು. ಹಾಗೆ ಕಟ್ಟಿದ ನೆಲದಾಳದ ಗೋಡೆಗೆ ಪಾಲಿಥಿನ್ ಕವರ್ ಅಥವಾ ಸಿಮೆಂಟ್ ಲೇಪನದಿಂದ ಮುಚ್ಚಬೇಕು. ಹೀಗೆ ನಿರ್ಮಿಸಿದ ಭೂತಳದ ಒಡ್ಡುಗಳು ತಗ್ಗಿನತ್ತ ಜಿನುಗಿ ಹರಿಯುವ ಮಳೆಯ ನೀರನ್ನು ಹಿಡಿದು ಒಂದೆಡೆ ನಿಲ್ಲಿಸುತ್ತದೆ. ಭೂಜಲವೇ ಲಭ್ಯವಿಲ್ಲದಿದ್ದ ಸ್ಥಳಗಳಲ್ಲಿ ಇಂತಹ ಕಾರ್ಯ ಅಳವಡಿಸಿದರೆ ಅಲ್ಲಿ ಕೊರೆದ ಕೊಳವೆಬಾವಿಗಳಲ್ಲಿ ಕುಡಿಯುವಷ್ಟು ನೀರನ್ನು ಜನರಿಗೆ ನೀಡಬಹುದು.
ಹರಿಯುವ ಹಳ್ಳ, ಕಾಲುವೆ ಮತ್ತು ಉಪನದಿಗಳನ್ನು ಗುರುತಿಸಿ ಅಲ್ಲಿ ಕಂಡುಬರುವ ಶಿಲಾ ಮತ್ತು ಮಣ್ಣಿನ ರಚನೆ ಬಗ್ಗೆ ಅಧ್ಯಯನ ನಡೆಸಬೇಕು. ನೀರು ಹರಿಯುವ ಹಳ್ಳಗಳಿಗೆ ಅಡ್ಡವಾಗಿ ಹಳ್ಳದಲ್ಲಿ ನಾಲ್ಕೈದು ಮೀಟರ್ ಆಳದ ಮತ್ತು ಸುಮಾರು ಎರಡು ಮೂರು ಮೀಟರ್ ಉದ್ದಗಲದ ಗುಂಡಿಯನ್ನು ತೋಡಬೇಕು. ಗುಂಡಿಯ ಕೆಳಗೆ ಅನುಕ್ರಮವಾಗಿ ದಪ್ಪ ಕಲ್ಲು ಅದರ ಮೇಲೆ ದಪ್ಪ ಜಲ್ಲಿ, ನಂತರ ಮೀಡಿಯಂ ಜಲ್ಲಿ, ನಂತರ ಬಟಾಣಿ ಜಲ್ಲಿ ಭರ್ತಿ ಮಾಡಿ ಅದರ ಮೇಲೆ ಒಂದೆರಡು ಅಡಿ ಮರಳನ್ನು ಮುಚ್ಚಬೇಕು. ಹೀಗೆ ಮಾಡಿದಾಗ ಹರಿಯುವ ನೀರು ಇಂಗುಗುಂಡಿಗೆ ಧುಮುಕಿ ನೆಲದಾಳಕ್ಕೆ ಬಹಳ ಬೇಗ ಇಂಗುತ್ತದೆ. ಇಂತಹ ರಚನೆಗಳನ್ನು ನದಿ, ಹಳ್ಳ, ಕಾಲುವೆಗಳ ಉದ್ದಕ್ಕೂ ಅಲ್ಲಲ್ಲಿ ನಿರ್ಮಾಣ ಮಾಡಬೇಕು. ಈ ರಚನೆ ಅಂತರ್ಜಲ ಮರುಭರ್ತಿಗೆ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ. ಹರಿಯುವ ಹಳ್ಳಕ್ಕೆ ಎದುರಾಗಿ ಪುಟ್ಟ ಅಣೆಕಟ್ಟೆಗಳನ್ನು, ಒಡ್ಡುಗಳನ್ನು ಕಟ್ಟಿ ನೀರನ್ನು ನೆಲದ ಮೇಲೆ ನಿಲ್ಲಿಸಬೇಕು. ಈಗಾಗಲೇ ಹಾಗೆ ನಿಂತ ನೀರು ನೆಲದಾಳಕ್ಕೆ ಸರಾಗವಾಗಿ ಜಿನುಗಿ ಸುತ್ತಮುತ್ತಲಿನ ಬಾವಿಗಳಲ್ಲಿ (ಕೊಳವೆ ಬಾವಿಗಳು) ಅಂತರ್ಜಲ ಮರುಪೂರೈಕೆಯಾದ ಉದಾಹರಣೆ ನಮ್ಮ ಕಣ್ಣಮುಂದಿದೆ.
ಕೆರೆಗಳಲ್ಲಿ, ಕೊಳ, ಹೊಂಡಗಳಲ್ಲಿ ಜೇಡಿಮಣ್ಣಿನ ಹೂಳನ್ನು ತೆಗೆಸಿದರೆ ಜೇಡಿಮಣ್ಣು ಖಾಲಿಯಾದ ಸ್ಥಳದಲ್ಲಿ ನಿಂತ ನೀರು ನೆಲದಾಳಕ್ಕೆ ಸರಾಗವಾಗಿ ಜಿನುಗುತ್ತದೆ. ರೈತರ ಜಮೀನುಗಳಲ್ಲಿ ನಿರ್ಮಿಸಿದ ಬಾವಿಗಳು ಬತ್ತಿದ್ದರೆ ಮತ್ತು ಕೊಳವೆಬಾವಿಗಳು ವಿಫಲವಾಗಿದ್ದರೆ ಮಳೆಯ ನೀರನ್ನು ಈ ರಚನೆಯ ಒಳಗೆ ನುಗ್ಗುವಂತೆ ಮಾಡಬೇಕು. ಕೆರೆ ಕುಂಟೆಗಳಲ್ಲಿ ಅಲ್ಲಲ್ಲಿ ಕಡಿಮೆಯಾಳದ ಕೊಳವೆಬಾವಿಗಳನ್ನು ನಿರ್ಮಿಸಿ ನಿಂತ ನೀರು ನೆಲದಾಳಕ್ಕೆ ಇಂಗುವಂತೆ ಪ್ರಯತ್ನಿಸಬೇಕು. ಅಣೆಕಟ್ಟೆಗಳಿಂದ ಕಾಲುವೆ ಮೂಲಕ ನೀರನ್ನು ಹರಿಸಿ ಗ್ರಾಮಾಂತರದ ಎಲ್ಲ ಕೆರೆಗಳನ್ನು ತುಂಬಿಸುವ ಏರ್ಪಾಟು ಮಾಡಬೇಕು. ಹರಿಯುವ ನೀರಿಗೆ ಎದುರಾಗಿ ಜಾಕ್‌ವೆಲ್, ಚೆಕ್‌ಡ್ಯಾಂ, ಗಲ್ಲಿಪ್ಲಗ್ ಇತ್ಯಾದಿ ನೀರು ಇಂಗಿಸಬಲ್ಲ ರಚನೆಗಳನ್ನು ನಿರ್ಮಿಸಬೇಕು.
ಸಾಮಾನ್ಯವಾಗಿ ರೈತರ ಜಮೀನಿನ ಉಳುಮೆ ನೆಲದಲ್ಲಿ ಬಿದ್ದ ಮಳೆಯ ನೀರು ಸ್ವಲ್ಪ ಭಾಗ ಇಂಗಬಹುದು. ಆದರೆ ಉಳುಮೆ ಮಾಡದ ಬಹುತೇಕ ಹೊಲಗಳಲ್ಲಿ ಮಳೆಯ ನೀರು ನಿಲ್ಲದೆ ತಗ್ಗಿನತ್ತ ಓಟ ಕೀಳುತ್ತದೆ. ರೈತನ ಜಮೀನುಗಳಲ್ಲಿ ಮಳೆಯ ನೀರು ಇಂಗುವಂತಾಗಬೇಕಾದರೆ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು. ರೈತನ ಜಮೀನಿನಲ್ಲಿ ಅಲ್ಲಲ್ಲೇ ಬುದುಗಳನ್ನು, ಹುದಿಗಳನ್ನು ನಿರ್ಮಾಣ ಮಾಡಲು ರೈತರಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಹಾಗೆ ಹುದಿ-ಬದುಗಳ ಬಳಿ ನಿಲ್ಲುವ ನೀರು ಬೆಳೆದ ಬೆಳೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆ ಬೆಳೆದ ರೈತನದ್ದಾಗಿರಬೇಕು. ಹೀಗೆ ವ್ಯವಸಾಯಕ್ಕೆ ತೊಂದರೆಯಾಗದಂತೆ ಹೊಲಗಳಲ್ಲಿ ಮಳೆಯ ನೀರು ನಿಲ್ಲಲು ಅಡ್ಡಲಾಗಿ ಕಟ್ಟೆ ಕಟ್ಟಿದರೆ ನೀರು ವ್ಯರ್ಥವಾಗಿ ಹರಿದುಹೋಗುವ ಬದಲು ನೆಲದೊಳಕ್ಕೆ ಇಂಗುತ್ತದೆ.
ಮಳೆನೀರನ್ನು ಇಂಗಿಸುವ ನಿಟ್ಟಿನಲ್ಲಿ ಯಾವುದೇ ರೈತರು, ನಾಗರಿಕರು ಪ್ರಯತ್ನಕ್ಕೆ ಮುಂದಾಗದಿದ್ದರೆ ಅವರ ಮೇಲೆ ಕ್ರಮ ಜರುಗಿಸುವ ಕಾನೂನು ಜಾರಿಗೆ ಬರಬೇಕು. ಈ ತಂತ್ರವನ್ನು ಸರ್ಕಾರ, ಸಾರ್ವಜನಿಕರು ಅನುಸರಿಸಿದ್ದೇ ಆದರೆ ಭೂಗರ್ಭದ ಸೆಲೆ ಬತ್ತುವುದೇ ಇಲ್ಲ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in