ಅಂಕಣಗಳು

ಕೇಜ್ರೀ ಕ್ರೇಜಿಗೆ ಸ್ವಲ್ಪ ದಿನದ ಕಡಿವಾಣ ಅಗತ್ಯ

ಕೇಜ್ರೀ ಕ್ರೇಜಿಗೆ ಸ್ವಲ್ಪ ದಿನದ ಕಡಿವಾಣ ಅಗತ್ಯ
Published On :

ಈಗ ಯಾವ ಭಾಷೆಯ ಯಾವ ಮಾಧ್ಯಮದಲ್ಲೇ ಆಗಲಿ ಅರವಿಂದ ಕೇಜ್ರೀವಾಲರದ್ದೇ ಸುದ್ದಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿಂದು ಹೊಸ ಹೊಂಗಿರಣವೊಂದು ಮೂಡಿ, ರಾಜಕಾರಣದ ಕಳೆಯನ್ನು ಕಿತ್ತೆಸೆದು, ಭ್ರಷ್ಟಾಚಾರ ದುರಾಚಾರಗಳನ್ನು ಗುಡಿಸಿ ಹಾಕಿ ರಾಜಕಾರಣವನ್ನು ಸ್ವಚ್ಛಗೊಳಿಸಲು ಪೊರಕೆ ಹಿಡಿದು ಬಂದಿದೆ ಎಂದೇ ಎಲ್ಲರ ವ್ಯಾಖ್ಯಾನ. ಇದಕ್ಕೆ ಇಂಬು ಕೊಡುವಂತೆ ಆಮ್‌ಆದ್ಮಿ ಪಕ್ಷದವರು ಕೂಡ ತಮ್ಮನ್ನು ಬಿಟ್ಟು ಉಳಿದ ರಾಜಕೀಯ ಪಕ್ಷದವರೆಲ್ಲಾ ಕಳ್ಳರು, ಸುಳ್ಳರು, ಲಫಂಗರು ಎಂದೇ ಗರ್ಜಿಸುತ್ತಾ ಯುವ ಜನತೆಯ ಹೃದಯದಲ್ಲಿ ಒಂದು ರೀತಿಯ ರಣೋತ್ಸಾಹ ಉಂಟು ಮಾಡುತ್ತಿದ್ದಾರೆ. ಅರವಿಂದ ಕೇಜ್ರಿವಾಲರಂತೂ ಹೊಸ ರಾಜಕೀಯ ವ್ಯವಸ್ಥೆಯೊಂದನ್ನು ಹುಟ್ಟು ಹಾಕುತ್ತಿದ್ದೇನೆ, ಇದರಲ್ಲಿ ಪ್ರಜೆಗಳೇ ಪ್ರಭುಗಳು, ಅವರ ಧ್ವನಿಗೇ ಮೊದಲ ಆದ್ಯತೆ ಎಂದು ತೋರಿಸಿಕೊಡಲು ಚುನಾವಣಾ ವೆಚ್ಚಕ್ಕೆ ಜನರಿಂದಲೇ ಹಣ ಸಂಗ್ರಹಣೆ, ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು, ಬೆಂಬಲ ಪಡೆಯಲು, ಸರ್ಕಾರ ರಚಿಸಲು ಎಲ್ಲದಕ್ಕೂ ಎಸ್.ಎಂ.ಎಸ್. ಹಾಗೂ ಮೊಹಲ್ಲಾ ಸಭೆಗಳ ಮೂಲಕ ನೇರವಾಗಿ ಜನರಿಂದಲೇ ಅಭಿಪ್ರಾಯ ಸಂಗ್ರಹಣೆ ಮಾಡುವುದು ಮಾಡಿ, ಜನರಲ್ಲಿ ಸಂಚಲನವನ್ನುಂಟು ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸಿಕ್ಕ ಗೆಲುವನ್ನು ಸಾಮಾನ್ಯ ಜನರ ಗೆಲುವೆಂದು, ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುತ್ತಿರುವುದು ತಾವಲ್ಲ, ಆಮ್ ಆದ್ಮಿ ಎಂದು ಹೇಳಿ ಯುವ ಜನತೆಯನ್ನು ಪುಳಕಿತಗೊಳಿಸುತ್ತಿದ್ದಾರೆ. ಇದೆಲ್ಲವೂ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆಯೇನೋ ಎಂಬಂತೆ ಮಾಧ್ಯಮದವರೂ ಬಿಂಬಿಸುತ್ತಿದ್ದಾರೆ.
1977 ರಲ್ಲಿ ಜನತಾ ಪಕ್ಷ ಉದಯವಾದಾಗಲೂ ಇದೇ ರೀತಿ ಪ್ರಸಂಗಗಳು ನಡೆದಿದ್ದವು. ಅವರೂ ಕೂಡ ಇದೇ ರೀತಿ ಜನತಾ ಪಕ್ಷ ಜನತೆಯ ಪಕ್ಷ, ಚುನಾವಣಾ ವೆಚ್ಚ ಭರಿಸಲು ನಮ್ಮಲ್ಲಿ ಕಾಂಗ್ರೆಸ್ಸಿಗರಂತೆ ಹಣವಿಲ್ಲ ಹಾಗಾಗಿ ನೋಟೂ ನೀವೇ ಕೊಡಬೇಕು ಓಟೂ ನೀವೇ ಕೊಡಬೇಕು ಎಂದು ಗೋಲಕಗಳನ್ನು ರಸೀತಿ ಪುಸ್ತಕಗಳನ್ನು ಹಿಡಿದು ಜನರ ಮುಂದೆ ಬರುತ್ತಿದ್ದರು. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೇಲೆ ಇದು ತಮ್ಮ ಗೆಲುವಲ್ಲ ಜನತೆಯ ಗೆಲುವು ಎಂಬ ಕರ್ಣಾನಂದಕರ ಮಾತುಗಳನ್ನು ಕೇಜ್ರಿವಾಲರಿಗಿಂತಲೂ ಎತ್ತರದ ಧ್ವನಿಯಲ್ಲಿ ಹೇಳುತ್ತಿದ್ದರು. ಇಷ್ಟು ಸಾಲದೆಂಬಂತೆ ಜಯಪ್ರಕಾಶ್ ನಾರಾಯಣ್‌ರ ಸಮ್ಮುಖದಲ್ಲಿ ಮಹಾತ್ಮಾ ಗಾಂಧಿಯವರ ಸಮಾಧಿಯ ಮುಂದೆ "ಸ್ವಹಿತಕ್ಕಾಗಿ ರಾಷ್ಟ್ರಹಿತವನ್ನು ಬಲಿಕೊಡುವುದಿಲ್ಲ" ಎಂದು ಪ್ರಮಾಣ ಬೇರೆ ಮಾಡಿದರು. ಇದೆಲ್ಲವನ್ನೂ ಕಣ್ಣಾರೆ ಕಂಡ ಜನ ಭಾರತಾಂಬೆಯ ಅದೃಷ್ಟ ಬದಲಾಯಿತು, ಭವ್ಯ ಭಾರತದ ನಿರ್ಮಾಣವಾಯಿತು ಎಂದು ಕನಸು ಕಂಡಿದ್ದೇ ಕಂಡದ್ದು. ಮುಂದೇನಾಯಿತು ಎಂಬುದು ಎಲ್ಲರಿಗೂ ತಿಳಿದಿರುವ ದುರಂತ ಕಥೆಯೇ.
ಅದೇ ರೀತಿ ಅಸ್ಸಾಂ ಜನರ ಹಿತ ಕಾಯುವ ಉದ್ದೇಶದಿಂದ ಹೋರಾಟಕ್ಕಿಳಿದ ವಿದ್ಯಾರ್ಥಿ ಸಂಘಟನೆಗಳು All Ass​am St‌ud​en​ts ‌Un‌i‌on​ ತದನಂತರದಲ್ಲಿ ಅಸ್ಸಾಂ ಗಣ ಪರಿಷತ್ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತನೆ ಹೊಂದಿ ಜನಗಳಲ್ಲಿ ಭ್ರಮೆ ಮೂಡಿಸಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ರಾಜಕೀಯದಲ್ಲಿ ಸ್ವಚ್ಛತೆ ತರುವ ಬದಲು ತಾವೇ ಕೊಳಕು ವ್ಯವಸ್ಥೆಯ ಒಂದು ಭಾಗವಾಗಿ, ಇವತ್ತು ಅಡ್ರೆಸ್ ಇಲ್ಲದಂತೆ ಆಗಿರುವುದೂ ನಮ್ಮ ಕಣ್ಣ ಮುಂದಿದೆ. ಇಂಥ ಪ್ರಯೋಗಗಳು ಕಾಲಕಾಲಕ್ಕೆ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇರುತ್ತವೆ. ಪ್ರಯೋಗ ಮಾಡುವವರೆಲ್ಲರೂ ನಾವು ಹಿಂದಿನಂಥವರಲ್ಲ ನಮ್ಮ ಸಿದ್ಧತೆಯೇ ಬೇರೆ, ನಮ್ಮ ನಡೆಯೇ ಬೇರೆ, ನಾವು ಯಶಸ್ವಿಯಾಗುತ್ತೇವೆ ಎಂದೇ ವಾದಿಸುತ್ತಾರೆ. ಜನರೂ ಅವರ ಮಾತಿಗೆ ಮರುಳಾಗುತ್ತಲೇ ಇರುತ್ತಾರೆ.
ಈಗ ಆಮ್ ಆದ್ಮಿ ಪಕ್ಷದ ನಡವಳಿಕೆಯನ್ನೇ ಗಮನಿಸಿ. ಕಾಂಗ್ರೆಸ್, ಬಿಜೆಪಿ, ಡಿ.ಎಂ.ಕೆ, ಎಡಿಎಂಕೆ ಪಕ್ಷಗಳಂತೆ ಅವರೂ ಸಹ ಪ್ರಣಾಳಿಕೆಯಲ್ಲಿ ಅದು ಬಿಟ್ಟಿ ಕೊಡುತ್ತೇವೆ, ಇದು ಬಿಟ್ಟಿ ಕೊಡುತ್ತೇವೆ ಎಂದೇ ಘೋಷಿಸಿ ಮತದಾರರನ್ನು ಆಕರ್ಷಿಸಲು ಪ್ರಯತ್ನಿಸಿದ್ದಾರೆ. ಸಮಾಜವಾದಿ ಪಕ್ಷದವರಂತೆ ಅಮಾಯಕ ಮುಸ್ಲಿಂರ ಮೇಲಿನ ಕೇಸ್ ರದ್ದು ಎಂದು ಘೋಷಿಸಿ ಒಂದು ಕೋಮಿನ ಜನರನ್ನು ಓಲೈಸಿದ್ದಾರೆ. ಭ್ರಷ್ಟರು, ಕಳ್ಳರು, ಸುಳ್ಳರು, ಲೂಟಿಕೋರರು ಎಂದು ಯಾವ್ಯಾವ ಪಕ್ಷದವರನ್ನು ಜರಿಯುತ್ತಾರೋ ಅದೇ (ಕಾಂಗ್ರೆಸ್, ಬಿಜೆಪಿ, ಆರ್‌ಜೆಡಿ) ಮೂಲಗಳಿಂದ ಬಂದವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದಾರೆ. ಅವರಲ್ಲಿ ಕೆಲವರು ಗೆದ್ದೂ ಆಗಿದೆ. ಚುನಾವಣಾ ಫಲಿತಾಂಶ ಬಂದ ನಂತರ ಮಾಧ್ಯಮಗಳಲ್ಲಿ ಅರವಿಂದ ಕೇಜ್ರೀವಾಲರು "ತಮ್ಮಂತೆಯೇ ಮನಸ್ಥಿತಿ ಹೊಂದಿದ್ದು ಅನಿವಾರ್ಯವಾಗಿ ಅನ್ಯಪಕ್ಷದಲ್ಲಿರುವವರಿಗೆ ತಮ್ಮ ಪಕ್ಷ ಸೇರಬಯಸಿದರೆ ಸೇರಬಹುದು" ಎಂದು ತಮ್ಮ ಪಕ್ಷ ಸೇರಲು ಆಹ್ವಾನ ನೀಡುತ್ತಾರೆ. ಅದರ ಪರಿಣಾಮವೋ ಏನೋ ಎಂಬಂತೆ ಈಗಾಗಲೇ ದೆಹಲಿಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಯಿಂದ ಸರಿಯಾದ ಸ್ಥಾನಮಾನ ಸಿಗಲಿಲ್ಲವೆಂದು ಇಬ್ಬರು ಮಹಿಳಾ ಮಣಿಗಳು ಪಕ್ಷಾಂತರಕ್ಕೆ ಸಿದ್ಧವಾಗಿದ್ದಾರೆ. ಆಮ್ ಆದ್ಮಿ ಪಕ್ಷದವರು ಅವರಿಗೆ ಗ್ರೀನ್‌ಸಿಗ್ನಲ್ ನೀಡಿಯೂ ಆಗಿದೆ. ಸಮಾಜವಾದಿ ಪಕ್ಷದ ಕಮಾಲ್ ಫಾರೂಕಿಯವರೂ ಎ.ಎ.ಪಿ. ಸೇರಬಯಸಿದ್ದಾರೆ ಎಂದರೆ ಕೇಜ್ರೀ ಕಮಾಲ್ ಎಷ್ಟಿದೆ ಎಂದು ತಿಳಿಯುತ್ತದೆ.
ಹಿಂದೆ ಬಿ.ಜೆ.ಪಿ.ಯವರೆಂದರೆ ಆರ್‌ಎಸ್‌ಎಸ್ ಮೂಲದಿಂದ ಬಂದವರು ಹಾಗಾಗಿ ಇವರಲ್ಲಿ ಪ್ರಾಮಾಣಿಕತೆ, ದೇಶಭಕ್ತಿ ಸಹಜವಾಗೇ ಬಂದಿರುತ್ತದೆ ಎಂದು ಜನರು ನಂಬಿದ್ದರು. ಅದರಂತೆ ಅವರೂ ಸಹ pa‌r​ty w‌it‌h a d‌iff​e‌r​en‌ce​ ಎಂಬ ಘೋಷವಾಕ್ಯವಿಟ್ಟುಕೊಂಡು ಅಧಿಕಾರಕ್ಕೆ ಬಂದರು. ಆಮೇಲೆ ಆದದ್ದೇನು? ಇತರ ಪಕ್ಷಗಳಲ್ಲಿ ಸ್ಥಾನಮಾನ ಸಿಗದವರು ಬಿ.ಜೆ.ಪಿ.ಯತ್ತ ವಲಸೆ ಬರಲು ಪ್ರಾರಂಭಿಸಿದರು. ಬಂದವರಲ್ಲಿ ಭ್ರಷ್ಟರು, ದುಷ್ಟರು ಅಧಿಕಾರ ಲಾಲಸಿಗಳು ತುಂಬಿದ್ದರಿಂದ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಬಿ.ಜೆ.ಪಿ. ಕಳೆದುಕೊಂಡಿತು.
ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರ ಹಿಡಿದ ಪರಿಯನ್ನೇ ನೋಡಿ. ದೆಹಲಿಯ ಜನ ಕಾಂಗ್ರೆಸನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆಯೇ ಹೊರತು ಬಿ.ಜೆ.ಪಿ.ಯನ್ನಲ್ಲ. ಕೇಜ್ರಿವಾಲರು ಕಾಂಗ್ರೆಸ್, ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಎಷ್ಟೇ ಟಾಮ್‌ಟಾಮ್ ಹೊಡೆದರೂ ಬಿಜೆಪಿಗೆ ಆಮ್ ಆದ್ಮಿ ಪಕ್ಷಕ್ಕಿಂತ ಹೆಚ್ಚಿನ ಸೀಟು ಕೊಡುವ ಮೂಲಕ ಕೇಜ್ರಿವಾಲರ ಮಾತನ್ನು ನಿರಾಕರಣೆ ಮಾಡಿದ್ದಾರೆ ಮತದಾರರು.  ಹೀಗಿರುವಾಗ ಆಮ್ ಆದ್ಮಿ ಪಕ್ಷವು ಸರ್ಕಾರ ರಚಿಸುವಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕಿತ್ತು. ಇಲ್ಲವಾದಲ್ಲಿ ಬಿ.ಜೆ.ಪಿ.ಯ ಸಹಯೋಗದೊಂದಿಗೆ ತಾವೇ ಸರ್ಕಾರ ರಚಿಸಬಹುದಿತ್ತು. ಇಲ್ಲವೇ... ವಚನಬದ್ಧರಾಗಿ ಮರುಚುನಾವಣೆಗೆ ಹೋಗಬೇಕಿತ್ತು. ಹೇಗೂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಡಾ. ಹರ್ಷವರ್ಧನ್‌ರ ಕಳಂಕರಹಿತ ವ್ಯಕ್ತಿತ್ವ ಅರವಿಂದರಿಗೂ ಗೊತ್ತು. ದೆಹಲಿ ಜನಗಳಿಗೂ ಗೊತ್ತು. ಅದು ಬಿಟ್ಟು ದೆಹಲಿಯ ಜನರು ಭ್ರಷ್ಟರೆಂದು ಸಾರಾಸಗಟಾಗಿ ತಿರಸ್ಕರಿಸಿರುವ ಕಾಂಗ್ರೆಸ್‌ನವರ ಜೊತೆಯೇ ಸಖ್ಯ ಬೆಳೆಸಿದ್ದರ ಹಿಂದಿನ ಉದ್ದೇಶವಾದರೂ ಏನು? ಒಮ್ಮೆ ಹರ್ಷವರ್ಧನರಿಗೆ ಅಧಿಕಾರ ಸಿಕ್ಕಿ ಅವರೂ ಅವರ ಸಹವರ್ತಿಗಳಾದ ಶಿವರಾಜ್ ಸಿಂಗ್ ಚೌಹಾಣ್, ರಮಣ್‌ಸಿಂಗ್, ನರೇಂದ್ರ ಮೋದಿಯವರಂತೆ ದೆಹಲಿಯಲ್ಲಿ ತಳವೂರಿ ಬಿಟ್ಟರೆ ತಮಗೆ ಅಧಿಕಾರ ಅನುಭವಿಸುವ ಅವಕಾಶ ಶಾಶ್ವತವಾಗಿ ತಪ್ಪಿ ಹೋಗುತ್ತದೆಂಬ ಭಯವೇ? ಇದಕ್ಕೆ ಅವರು ಹೇಳುವ ಉತ್ತರ "ಕಾಂಗ್ರೆಸ್ ಬೆಂಬಲ ನಾವು ಕೇಳಿಲ್ಲ, ಕೇಳಲ್ಲ" ಎನ್ನುವುದು. ಬಿ.ಜೆ.ಪಿಯನ್ನು ಬೈಹುಕ್ ಆರ್ ಕ್ರುಕ್ ಅಧಿಕಾರದಿಂದ ದೂರ ಇಡಬೇಕೆಂಬುದೇ ಕಾಂಗ್ರೆಸ್ಸಿನ ಏಕಮೇವ ಸ್ಟ್ರಾಟಜಿಯಾಗಿರುವುದರಿಂದ ಅವರಿಗೆ ಎ.ಎ.ಪಿ. ಯನ್ನು ಬೆಂಬಲಿಸದೇ ಅನ್ಯ ಮಾರ್ಗವೇ ಇಲ್ಲ ಎನ್ನುವ ಸತ್ಯ ತಿಳಿಯದಿರುವಷ್ಟು ಅಜ್ಞಾನಿಗಳೇ ಆಮ್ ಆದ್ಮಿ ಪಕ್ಷದವರು? ಅವರು ಎಷ್ಟು ಬುದ್ಧಿವಂತರೆಂದರೆ ತಮ್ಮ ಬಯಕೆಯನ್ನು ಸಾರ್ವಜನಿಕರ ಸಹಮತದಿಂದಲೇ ಈಡೇರಿಸಿಕೊಳ್ಳಲು ಎಸ್.ಎಮ್.ಎಸ್. ಮೂಲಕ ಪ್ರಶ್ನೆಗಳನ್ನು ಕೇಳಿ ತಮಗೆ ಹಿತವಾಗುವ ಉತ್ತರವನ್ನೇ ಜನರೂ ಕೊಡುವಂತಹ ಪ್ರಶ್ನೆಗಳನ್ನು ರೂಪಿಸುತ್ತಾರೆ.
"ನಾವು ಅಧಿಕಾರ ವಹಿಸಿಕೊಳ್ಳಬೇಕೇ ಬೇಡವೇ?" ಎಂದು. ಹಾಗೆ ಕೇಳಿದರೆ ಸಹಜವಾಗಿ ಓಟು ಹಾಕಿದ ಜನ ರಾಜ್ಯದ ಮೇಲೆ ಮತ್ತೊಂದು ಚುನಾವಣೆಯನ್ನು ಹೇರುವುದು ಬೇಡ ಎಂಬ ಉದ್ದೇಶದಿಂದ "ವಹಿಸಿಕೊಳ್ಳಿ" ಎಂದೇ ಹೇಳುತ್ತಾರೆ. ಅದು ಬಿಟ್ಟು ಇಂಥಾ ಅತಂತ್ರ ಪರಿಸ್ಥಿತಿಯಲ್ಲಿ ನಾವು ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ಮಾಡಬೇಕೋ, ಬಿ.ಜೆ.ಪಿ. ಬೆಂಬಲ ಪಡೆದು ಸರ್ಕಾರ ಮಾಡಬೇಕೋ ಅಥವಾ ಅದಕ್ಕೆ ಸರ್ಕಾರ ರಚಿಸಲು ನಾವೇ ಬೆಂಬಲ ಕೊಡಬೇಕೋ, ಇಲ್ಲವೇ ಮರು ಚುನಾವಣೆಗೆ ಹೋಗಬೇಕೋ? ಎಂಬ ಪ್ರಶ್ನೆಯನ್ನು ಕೇಳಿದ್ದರೆ ಆಗ ಅದು ನಿಜವಾದ ಜನಾಭಿಪ್ರಾಯ ಸಂಗ್ರಹಣೆಯಾಗುತ್ತಿತ್ತು. ಒಟ್ಟಿನಲ್ಲಿ ಕೇಜ್ರೀವಾಲರು ತಮ್ಮ ಚಾಣಾಕ್ಷ ಬುದ್ಧಿಯಿಂದ ದೆಹಲಿಯ ಇಡೀ ಜನತೆಯನ್ನು ಒಂದು ರೀತಿಯ ಸಮೂಹ ಸನ್ನಿಗೆ ದೂಡಿದ್ದಾರೆ.  ಇದೇ ಥರದ ಕೇಜ್ರೀ ಕ್ರೇಜನ್ನು 2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಇಡೀ ದೇಶಕ್ಕೆ ವಿಸ್ತರಿಸುವ ಮತುಗಳನ್ನಾಡುತ್ತಿದ್ದಾರೆ. ಇಂಥ ಸಮಯದಲ್ಲಿ ದೇಶದ ಜನತೆ ಕಣ್ಣು ಮುಚ್ಚಿಕೊಂಡು ಅವರನ್ನು ಬೆಂಬಲಿಸಬೇಕೇ? ಪರಾಮರ್ಶಿಸಿ ನೋಡಬೇಕೆ?
ದೇಶ ಇಂದು ಸ್ಥಿತ್ಯಂತರದ ಹೊಸ್ತಿಲಲ್ಲಿ ನಿಂತಿದೆ. ಒಂದು ಕಡೆ ತಮ್ಮ ಕೆಟ್ಟ ನೀತಿಗಳಿಂದ ದೇಶದ ಅಸ್ತಿತ್ವವನ್ನು ಅಲುಗಾಡಿಸಿರುವ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ, ಇನ್ನೊಂದು ಕಡೆ ಸುಭದ್ರ ರಾಷ್ಟ್ರ ನಿರ್ಮಾಣದ ಭರವಸೆ ಮೂಡಿಸುತ್ತಿರುವ ಮೋದಿ. ಇಬ್ಬರ ಸಂಘರ್ಷದಲ್ಲಿ 2014 ರ ಚುನಾವಣೆಯಲ್ಲಿ ದೇಶದ ಅಳಿವು, ಉಳಿವು ನಿರ್ಧಾರವಾಗುವಂತಹ ಸಂದರ್ಭದಲ್ಲಿ ಮೂರನೆಯ ಶಕ್ತಿಯೊಂದು ಬಂದು, ದೆಹಲಿಯಲ್ಲಿ ಅತಂತ್ರ ಸ್ಥಿತಿ ತಂದಿಟ್ಟಂತೆ ರಾಷ್ಟ್ರದಲ್ಲೂ ಅತಂತ್ರ ಸ್ಥಿತಿ ತಂದಿಟ್ಟರೆ ದೇಶದ ಗತಿಯೇನು?
ಮತದಾರ ಈಗಾಗಲೇ ಒಂದು ಸಲ ತಪ್ಪು ಮಾಡಿದ್ದಾನೆ. ಕಾಂಗ್ರೆಸ್ಸಿಗರು ಹಾಗೂ ಥರ್ಡ್ ಫ್ರಂಟ್‌ನವರು ದೇಶದ ಖಜಾನೆಯನ್ನು ಖಾಲಿ ಮಾಡಿ ದೇಶವನ್ನು ಬರಬಾದ್ ಮಾಡಿದ್ದಾಗ ವಾಜಪೇಯಿಯಂತಹ ಮುತ್ಸದ್ದಿ ಅಧಿಕಾರಕ್ಕೆ ಬಂದು ಖಜಾನೆಯನ್ನು ಭರ್ತಿ ಮಾಡಿದ್ದೂ ಅಲ್ಲದೆ ರಸ್ತೆ ನಿರ್ಮಾಣ, ನದಿ ಜೋಡಣೆಯಂತಹ ಕಾರ್ಯಕ್ರಮಗಳನ್ನು ಹುಟ್ಟುಹಾಕಿ ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದರು. ಅಂಥವರನ್ನು ಅಧಿಕಾರದಿಂದ ಕೆಳಗಿಳಿಸಿದ ಮತದಾರ 2004-2009 ರಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು, ಇಂದು ದೇಶ ಅತಂತ್ರ ಸ್ಥಿತಿ ತಲುಪಿರುವುದನ್ನು ಕಂಡು ತಾನು ಮಾಡಿದ ತಪ್ಪಿನ ಅರಿವಾಗಿ ಪರಿತಪಿಸುತ್ತಿದ್ದಾನೆ. ಬದಲಾವಣೆಗೆ ಹಾತೊರೆಯುತ್ತಿರುವ ವಿದ್ಯಾವಂತ ಯುವ ಮತದಾರರಂತೂ ನರೇಂದ್ರ ಮೋದಿಯವರಲ್ಲಿ ಹೊಸ ಆಶಾಕಿರಣವೊಂದನ್ನು ಕಾಣುತ್ತಿದ್ದಾರೆ. ಹೇಗಾದರೂ ಸರಿ ಮೋದಿಯವರನ್ನು ಈ ಬಾರಿ ಗೆಲ್ಲಿಸಲೇಬೇಕು, ಪ್ರಧಾನ ಮಂತ್ರಿ ಮಾಡಲೇಬೇಕೆಂದು ನಿರ್ಧರಿಸಿದ್ದಾರೆ. ಇಂಥ ಸಂದರ್ಭದಲ್ಲಿ ನರೇಂದ್ರ ಮೋದಿಯೋ, ರಾಹುಲ್  ಗಾಂಧಿಯೋ ಎನ್ನುವುದರ ಜೊತೆಗೆ ಕೇಜ್ರಿವಾಲರೋ ಎಂಬ ಹೊಸ ಪ್ರಶ್ನೆಯನ್ನು ಹುಟ್ಟುಹಾಕಿ ತೊಳಲಾಟ ತಂದಿಟ್ಟು ಮತವಿಭಜನೆಯಾಗುವಂತೆ ಮಾಡುವುದರಲ್ಲಿ ಯಾವ ಪುರುಷಾರ್ಥವಿದೆ?
ನರೇಂದ್ರಮೋದಿಯವರೋ ತಾವು ಅತ್ಯಂತ ಯಶಸ್ವಿ ಆಡಳಿತಗಾರನೆಂದು ಸಾಕ್ಷಿ ಸಮೇತ ಸಾಬೀತು ಪಡಿಸಿರುವಂಥವರು, ರಾಹುಲ್ ಅಧಿಕಾರಸ್ಥ ಕುಟುಂಬಲ್ಲೇಹುಟ್ಟಿ ಆಡಳಿತಾನುಭವ ಹೊಂದಿರುವಂಥವರು, ಆದರೆ ಕೇಜ್ರೀವಾಲರು ಯಶಸ್ವೀ ಹೋರಾಟಗಾರರೆಂದು ತೋರಿಸಿಕೊಟ್ಟಿದ್ದಾರೆಯೇ ಹೊರತು ಆಡಳಿತಾನುಭವ ಈಗಷ್ಟೇ ಪಡೆಯಬೇಕು.
ಮಾಧ್ಯಮಗಳಲ್ಲಿನ ವೈಭವೀಕರಣದಿಂದ ಪ್ರೇರಿತರಾಗಿ ಯುವ ಜನತೆ ಸಿನಿಕತೆಯಿಂದ ವರ್ತಿಸಿದರೆ ದೇಶಕ್ಕೆ ಮತ್ತೊಂದು ಗಂಡಾಂತರ ಗ್ಯಾರಂಟಿ. ಕೇಜ್ರಿವಾಲರಿಗೆ ಒಂದು ಪುಟ್ಟ ಪ್ರಯೋಗಶಾಲೆಯಂತೆ ದೆಹಲಿಯಂಥ ಒಂದು ರಾಜ್ಯ ಸಿಕ್ಕಿದೆ. ಅಲ್ಲಿ ಅವರು ತಮ್ಮ ಆಡಳಿತದ ಸಾಮರ್ಥ್ಯ ತೋರಿಸಿ ಸೈ ಎನಿಸಿಕೊಳ್ಳಲಿ. 2019 ಇದ್ದೇ ಇರುತ್ತದೆ ಅಷ್ಟು ಹೊತ್ತಿಗೆ ಇವರುಗಳ ಹಣೆಬರಹವೂ ತಿಳಿದಿರುತ್ತದೆ. ಅರವಿಂದರಿಗೆ ಆಡಳಿತಾನುಭವವೂ ಸಿಕ್ಕಿರುತ್ತದೆ. ಅದರ ಪೂರ್ಣ ಲಾಭ ದೇಶ ಪಡೆಯುವಂತಾಗಲೀ, ಅದುವರೆಗೆ ಯಾರೂ ಆತುರಬಿದ್ದು ದೇಶವನ್ನು ಅಧೋಗತಿಗೆ ತಳ್ಳುವುದು ಬೇಡ. ಸಾಧಿಸಿ ತೋರಿಸಿರುವವನಿಗೆ ಅವಕಾಶ ಕೊಡದೆ ಅನನುಭವಿಗೆ ಮಣೆ ಹಾಕುವುದು ಅರ್ಥಪೂರ್ಣವೂ ಅಲ್ಲ. ದೇಶದ ಹಿತದೃಷ್ಟಿಯಿಂದ ಸರಿಯಾದ ತೀರ್ಮಾನವೂ ಅಲ್ಲ.
ಅದಕ್ಕೆ ಕೇಜ್ರಿ ಕ್ರೇಜಿಗೆ ಸ್ವಲ್ಪ ದಿನ ಕಡಿವಾಣ ಹಾಕೋಣ.

- ಫಣಿರಾಮಚಂದ್ರ
ಚಲನಚಿತ್ರ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.