ಅಂಕಣಗಳು

ಪಬ್‌ದಾಳಿ ವಿರುದ್ಧದ ಆಕ್ರೋಶ ಇಲ್ಲೇಕಿಲ್ಲ?

ಪಬ್‌ದಾಳಿ ವಿರುದ್ಧದ ಆಕ್ರೋಶ ಇಲ್ಲೇಕಿಲ್ಲ?
Published On :

2013ರ ಜೂನ್ 20ರಂದು ಮಣಿಪಾಲದಲ್ಲಿ ಕೇರಳ ಮೂಲದ ಯುವತಿಯ ಮೇಲೆ ಅತ್ಯಾಚಾರ ನಡೆಯಿತು. ಅದು ರಾಷ್ಟ್ರವ್ಯಾಪಿ ಸುದ್ದಿಯಾಯಿತು. ದೆಹಲಿ ಅತ್ಯಾಚಾರದೊಟ್ಟಿಗೆ ಅದನ್ನು ಸಮೀಕರಿಸಲಾಯಿತು. ಕರ್ನಾಟಕದ ಜನ ಅದನ್ನು ದೆಹಲಿ ಅತ್ಯಾಚಾರದಷ್ಟೇ ಗಂಭೀರವಾಗಿ ತೆಗೆದುಕೊಂಡರು.
2012 ಜು.28ರಂದು ಮಂಗಳೂರಿನಲ್ಲಿ ಹೋಂಸ್ಟೇನಲ್ಲಿ ಪಾರ್ಟಿ ಮಾಡುತ್ತಿದ್ದ ಕೆಲವರಿಗೆ ಹಲ್ಲೆ ಮಾಡಿದ ಘಟನೆ ದೊಡ್ಡ ಸುದ್ದಿ ಮಾಡಿತ್ತು. ಅದಕ್ಕಿಂತ ಮೊದಲು 2009ರಲ್ಲಿ ಪಬ್ ದಾಳಿ. ಪಬ್ ದಾಳಿ ಮತ್ತು ಹೋಂಸ್ಟೇ ದಾಳಿಗಳು ನಡೆದಾಗ ನೈತಿಕ ಪೊಲೀಸ್ ಗಿರಿ ಬಗ್ಗೆ ಆದ ಚರ್ಚೆಗಳೇನು? ಮಹಿಳಾ ಪರ ಹೋರಾಟ, ಹೇಳಿಕೆಗಳೇನು.
ಮಣಿಪಾಲ ಅತ್ಯಾಚಾರ ಪ್ರಕರಣ ದಕ್ಷಿಣ ಭಾರತದ ಶಿಕ್ಷಣ ಕಾಶಿ ಎಂದೇ ಹೆಸರಾದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಡೆದುದಕ್ಕೋ ಏನೋ ನಮ್ಮ ದ.ಕ ಶಿಕ್ಷಣ ತಜ್ಞರೆಲ್ಲರೂ ಹೇಳಿಕೆ ನೀಡಲಾರಂಭಿಸಿದರು. ಕೆಲವರು ಆತ್ಯಾಚಾರಿಗಳನ್ನು ಮತ-ಧರ್ಮದ ಆಧಾರದಲ್ಲಿ ನೋಡಿ ಮಾತನಾಡಿದ್ದರು. ಕೊನೆಗೆ ಅತ್ಯಾಚಾರಿಗಳ ಬಂಧನವೂ ಆಯಿತು. ದೌರ್ಜನ್ಯಕ್ಕೆ ಒಳಗಾದ ಯುವತಿಯನ್ನು ಮನೆಯವರು ಓದು ನಿಲ್ಲಿಸಿ ಊರಿಗೆ ಕರೆದುಕೊಂಡು ಹೋದರು.
ಇದೀಗ ಮಂಗಳೂರು ದೇರಳಕಟ್ಟೆಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರನ್ನು ಅಪಹರಿಸಿ, ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒಳಪಡಿಸಿದ್ದಲ್ಲದೆ, ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಘಟನೆ ನಡೆದಿದೆ.  ಈ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದೆ. ಯುವತಿಯನ್ನು ಮನೆಯವರು ತಮ್ಮೂರು ಬಿಹಾರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಗೆ ಮೂಲ ಸಾಕ್ಷಿ ಸಮಾಧಿ ಸೇರುತ್ತದೆ. ಅತ್ಯಾಚಾರಿಗಳು ನಾಲ್ಕು ದಿನ ಜೈಲಲ್ಲಿದ್ದು ಹೊರಗೆ ಬರುತ್ತಾರೆ. ಕ್ರಮೇಣ ಜನರು ಮರೆಯುತ್ತಾರೆ.
ಅಂದು ರಾತ್ರಿ ನಡೆದ ಘಟನೆಯಿಂದ ದ.ಕ ಜಿಲ್ಲೆ ಆಘಾತ ಅನುಭವಿಸಿದ್ದು ಸುಳ್ಳಲ್ಲ. ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿದ ಸುದ್ದಿ ನಮ್ಮ ಜಿಲ್ಲೆಯ ಮಟ್ಟಿಗೆ ಹೊಸದು. ಆರೋಪಿಗಳನ್ನು ಸಿನೆಮಾ ರೀತಿಯಲ್ಲಿ ಬಂಧಿಸಿಯೂ ಆಗಿದೆ. ಪೋಲೀಸರೇನೋ ಎಂಟು ಜನ ಆರೋಪಿಗಳನ್ನು ಬಂಧಿಸಿದೆ ಎಂದು ಹೇಳಿಕೊಂಡರೂ ಈ ಪ್ರಕರಣ ಇಷ್ಟಕ್ಕೇ ಸೀಮಿತವಾಗಿಲ್ಲ ಎಂಬುದು ನಿಚ್ಚಳವಾಗಿ ಗೋಚರಿಸುತ್ತಿದೆ. ಪ್ರಕರಣದ ಆರೋಪಿಗಳ ಬಂಧನ ತನಿಖೆಯ ಒಂದು ಭಾಗವಷ್ಟೇ. ಅದಕ್ಕೆ ತಕ್ಕ ಸಾಕ್ಷ್ಯ, ಆರೋಪಕ್ಕೆ ತಕ್ಕ ಸೆಕ್ಷನ್‌ಗಳನ್ನು ಹಾಕಬೇಡವೇ?
ದೇರಳಕಟ್ಟೆಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಆಕೆ ಹೇಳಿದ್ದಿಷ್ಟು, 'ನಾನು ಮತ್ತು ನನ್ನ ಸಹಪಾಠಿ ಆದ ಡಾ.ಹಂಬಲ್ ಅವರು ಇಂಟರ್ನ್‌ಶಿಪ್‌ನಲ್ಲಿದ್ದೆವು. ಹಾಗಾಗಿ ರಾತ್ರಿ ಹನ್ನೊಂದು ಗಂಟೆಯ ನಂತರ ದೇರಳಕಟ್ಟೆಯ ಮೀಟಿಂಗ್ ಪಾಯಿಂಟ್ ಎಂಬ ರೆಸ್ಟೋರೆಂಟಿಗೆ ಊಟಕ್ಕೆಂದು ಬಂದು ಕಾರಲ್ಲಿ ಕುಳಿತಿದ್ದಾಗ 20 ರಿಂದ 30 ವರ್ಷದ ಇಬ್ಬರು ಡಾ.ಹಂಬಲ್ ಅವರನ್ನು ಕಾರಿನಿಂದ ಎಳೆದು ಬಲವಂತವಾಗಿ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿದರು. ಕೈಯಿಂದ ಹಲ್ಲೆಯನ್ನೂ ಮಾಡಿದರು. ಅನಂತರ ಒಂದು ಬೈಕಿನಲ್ಲಿ ಬಂದ ಮೂವರು ಕೂಡ ಕಾರನ್ನೇರಿ ಚಲಾಯಿಸಿದರು. ನಮ್ಮ ಕಣ್ಣುಗಳಿಗೆ ಬಟ್ಟೆ ಕಟ್ಟಿ ಒಂದು ಗಂಟೆ ಪ್ರಯಾಣದ ಬಳಿಕ ನಿರ್ಜನವಾದ ಗಿಡಗಂಟಿಗಳು ಇದ್ದ ಜಾಗದಲ್ಲಿ ಇಳಿಸಿದರು. ನಂತರ ಬಲವಂತವಾಗಿ ಮೌಖಿಕ ಸಂಭೋಗವನ್ನು ನಡೆಸಿ ಅದನ್ನು ಮೊಬೈಲಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ನಂತರ ಪಾಳುಬಿದ್ದ ಮನೆಯೊಂದರಲ್ಲಿ ಬಲವಂತವಾಗಿ ನಮ್ಮಿಬ್ಬರನ್ನು ಸಂಭೋಗವನ್ನು ನಡೆಸುವಂತೆ ಒತ್ತಾಯಿಸಿ ಅದನ್ನು ಚಿತ್ರೀಕರಿಸಿಕೊಳ್ಳಲಾಯಿತು. ನಂತರ ನನ್ನನ್ನು ಬಿಟ್ಟು ಕಳುಹಿಸಿ, ಹಣವನ್ನು ತೆಗೆದುಕೊಂಡು ಬರುವಂತೆ, ಇಲ್ಲದಿದ್ದರೆ ಡಾ. ಹಂಬಲ್ ಅವರನ್ನು  ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಯಿತು' ಎಂಬುದು ಇದು ಆಕೆ ಕೊಟ್ಟ ದೂರಿನ ಸಾರಾಂಶ.
ಸಂಶಯಗಳು ಹುಟ್ಟುವುದೇ ಇಲ್ಲಿ. ಏಕೆಂದರೆ ಆ ಯುವತಿಯ ಗೆಳೆಯ ಸಹಪಾಠಿಯಾಗಿದ್ದ ಡಾ.ಹಂಬಲ್ ಎನ್ನುವವನು ಮುಸಲ್ಮಾನ. ಅದನ್ನು ಯಾವ ಮಾಧ್ಯಮವೂ ಇದುವರೆಗೆ ಗಮನಿಸಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಆತನನ್ನು ಶೋಷಣೆಗೆ ಒಳಗಾದವ ಅಥವಾ ಬೆದರಿಕೆಗೆ ಒಳಗಾದವ ಎಂದೇ ಬಿಂಬಿಸಲಾಗುತ್ತಿದೆ.
ಆದರೆ ಸುತ್ತಲೂ ಎಂಟು ಜನ ದುಷ್ಕರ್ಮಿಗಳು ಇದ್ದಾಗಲೂ ಆತನಿಗೆ ಸಂಭೋಗ ಹೇಗೆ ಸಾಧ್ಯವಾಯಿತು? ವೈದ್ಯಕೀಯ ಶಾಸ್ತ್ರದ ಪ್ರಕಾರ ಒತ್ತಡ, ಒತ್ತಾಯ, ವಿಪರೀತ ಭಯ, ನಾಚಿಕೆಗಳ ಸಂದರ್ಭದಲ್ಲಿ ಪುರುಷಾಂಗ ಸಂಭೋಗಕ್ಕೆ ಸಿದ್ಧವಾಗುವುದಿಲ್ಲ ಎಂದು ಹೇಳುತ್ತದೆ. ಡಾ. ಹಂಬಲ್ ಅವರ ಅಂಗ ಸ್ಪಂದಿಸಿದುದುರ ಗುಟ್ಟೇನು? ಸಂಭೋಗವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಮತ್ತು ಯುವತಿಯನ್ನು ಕಾಮದ ಉದ್ದೇಶಕ್ಕಾಗಿಯೇ ಅಪಹರಿಸಿದ ತಂಡದ ಎಂಟು ಜನರೂ ಆಕೆಯ ಮೇಲೆ ಅತ್ಯಾಚಾರ ನಡೆಸಲಿಲ್ಲ ಎಂದು ನಂಬಲು ಸಾಧ್ಯವೇ?
ಎಲ್ಲವೂ ಮುಗಿದ ಮೇಲೆ ಹಣಕ್ಕಾಗಿ ಯುವತಿಯನ್ನು ದುಷ್ಕರ್ಮಿಗಳು ಕಳುಹಿಸಿದ ಕಾರಣವೇನು? ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹೆಣ್ಣನ್ನು ಒತ್ತೆಯಾಳಾಗಿರಿಸಿಕೊಂಡು ಗಂಡನ್ನು ಹಣಕ್ಕಾಗಿ ಬಿಡುಗಡೆ ಮಾಡುವುದು ದುಷ್ಕರ್ಮಿಗಳ ಮಾನಸಿಕತೆ ಮತ್ತು ತಂತ್ರ. ಆದರೆ ಇಲ್ಲಿ ಸಂಗತಿ ಉಲ್ಟಾ ಆಗಿರುವುದೇಕೆ? ಯುವತಿ ಈ ಮೇಲಿನಂತೆ ದೂರನ್ನು ಕೊಟ್ಟಿದ್ದರೂ ಎಂಟು ಜನ ದುಷ್ಕರ್ಮಿಗಳ ವಿರುದ್ಧ ಕೇವಲ ಅಪಹರಣ, ಹಲ್ಲೆಯ ಕೇಸನ್ನು ಮಾತ್ರ ಹಾಕಲಾಗಿದೆ. ಎಲ್ಲಾ ವಿಧದ ಒತ್ತಾಯದ ಸಂಭೋಗವೂ ಅತ್ಯಾಚಾರ ಎನಿಸಿಕೊಳ್ಳುತ್ತದೆ. ಆದರೆ ಇವರ ಮೇಲೆ ಅತ್ಯಾಚಾರದ ಕೇಸು ಯಾಕೆ ದಾಖಲಿಸಿಲ್ಲ?
ಇದೆಲ್ಲಕ್ಕಿಂತ ಮುಖ್ಯವಾಗಿ ಅತ್ಯಾಚಾರದ ದೂರು ದಾಖಲಿಸಿದ ಯುವತಿಯ ವೈದ್ಯಕೀಯ ಪರೀಕ್ಷೆಯನ್ನೇ ನಡೆಸಲಿಲ್ಲ! ಏಕೆ ಎಲ್ಲಕ್ಕೂ ಮಿಗಿಲಾಗಿ ಕರಾವಳಿಯಲ್ಲಿ ಸಣ್ಣ ಗಾಳಿ ಬೀಸಿದರೂ ಓಡಿ ಬರುವ ರಾಷ್ಟ್ರೀಯ ಚಾನಲ್‌ಗಳ ವರದಿಗಾರರು, ದೆಹಲಿಯ ಮಾನವ ಹಕ್ಕು, ಮಹಿಳಾ ಹಕ್ಕು ಹೋರಾಟಗಾರರ ಅಡ್ರೆಸ್ಸೇ ಈಗ ಇಲ್ಲವಲ್ಲಾ.
ಆದರೆ ಪಬ್ ದಾಳಿಯಂತಹ ಕೃತ್ಯಗಳ ಮೂಲಕ ನೈತಿಕ ಪೊಲೀಸ್ ಗಿರಿ ನಡೆಸಿ, ಮಹಿಳೆಯರ ಸ್ವಾತಂತ್ರ್ಯ ಹರಣ ನಡೆಯುತ್ತಿದೆ. ಮಹಿಳೆಯರ, ಯುವತಿಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅಬ್ಬರಿಸಿದವರು ಒಬ್ಬರೂ ಕಾಣುತ್ತಿಲ್ಲ!
ಮದ್ಯಪಾನ ಮಾಡುತ್ತಿದ್ದ ಯುವತಿಯರಿಗೆ ಹೊಡೆದಿದ್ದಕ್ಕೇ ಅಷ್ಟು ಕೊಪ ಪಟ್ಟುಕೊಂಡವರಿಗೆ, ಇಲ್ಲೊಬ್ಬಳು ಹೆಣ್ಣು ಮಗಳ ಮೇಲೆ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆ ನಡೆಸಿ, ಚಿತ್ರೀಕರಿಸಿದರೂ ಕೋಪವೇ ಬಂದಿಲ್ಲವೇ? ಪಬ್ ದಾಳಿಯಲ್ಲಿ ಹುಡುಗಿಯರ ಮೈಮೇಲೆ ಕೈ ಹಾಕಿದರು ಎಂಬ ಕಾರಣಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿದವರಿಗೆ, ನಿಜವಾಗಿಯೂ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿ ಎಂದು ಹೇಳುವ ಕಾಳಜಿಯೂ ಇಲ್ಲವಾಯಿತೇ?
ಯಾಕೀ ದ್ವಂದ್ವ ನೀತಿ? ಮಹಿಳೆಯಲ್ಲೂ ಜಾತಿ, ಧರ್ಮ, ರಾಜ್ಯ, ಭಾಷೆ ಭೇದ ಎಣಿಸುತ್ತೀರಾ? ಹೆಣ್ಣು ಯಾವುದೇ ಜಾತಿ, ಧರ್ಮ, ರಾಜ್ಯಕ್ಕೆ ಸೇರಿದವಳಾದರೂ ಅತ್ಯಾಚಾರ ಅತ್ಯಾಚಾರವೇ ಅಲ್ಲವೇ? ಪಬ್ ದಾಳಿ, ಹೋಂಸ್ಟೇ ದಾಳಿಗಳನ್ನು ನೈತಿಕ ಪೊಲೀಸ್ ಗಿರಿ ಎಂದವರು, ಕಾರಿನಲ್ಲಿದ್ದ ಇಬ್ಬರನ್ನು, ಇಬ್ಬರು ಇರಬಾರದ ಹೊತ್ತಲ್ಲಿ, ಇರಬಾರದ ಸ್ಥಿತಿಯಲ್ಲಿ ಇದ್ದರು ಎಂಬ ಕಾರಣಕ್ಕೆ ಅಪಹರಿಸಿ, ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ಮಾಡುವಂತೆ ಹೇಳಿ, ಅದನ್ನು ವೀಡಿಯೋ ಮಾಡಿಕೊಂಡಿದ್ದು ನೈತಿಕ ಪೊಲೀಸ್‌ಗಿರಿ ಅಂತ ಅನಿಸಲಿಲ್ಲವೇ?
ಆರೋಪಿಗಳ ಜಾತಿ, ಧರ್ಮ ನೋಡಿ ಕರಾವಳಿಯ ತಲ್ಲಣಗಳನ್ನು ನಿರ್ಧರಿಸುವ ನಿಮ್ಮ ಸೂಕ್ಷ್ಮ ಮನಸ್ಸುಗಳಿಗೆ ಆ ಹೆಣ್ಣು ಮಗಳ ಸಂಕಟ ಕಾಣಲು ಸಾಧ್ಯವೇ ಇಲ್ಲವೇನೊ. ಆದರೆ ಒಂದೂವರೆ ವರ್ಷದಲ್ಲಿ ಆ ಸಾಮಾಜಿಕ ಪ್ರಜ್ಞೆ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಕರಾವಳಿಯ ತಲ್ಲಣಗಳ ಕುರಿತು ಮಾತನಾಡುವವರು, ಕಾರ್ಯಕ್ರಮಗಳನ್ನು ಆಯೋಜಿಸುವವರು ಈ ಹುಡುಗಿಯ ಮೇಲೆ ನಡೆದ ಅತ್ಯಾಚಾರವನ್ನೂ ಕರಾವಳಿಯ ತಲ್ಲಣದ ಪಟ್ಟಿಗೆ ಸೇರಿಸುತ್ತಾರೋ ಅಥವಾ ಅವರಿಗೆ ಬೇಕಾದ್ದನ್ನು ಮಾತ್ರ ತಲ್ಲಣಗಳು ಎಂದು ಪರಿಗಣಿಸುತ್ತಾರೋ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿದೆ. ನಮ್ಮ ಸಂಶಯಕ್ಕೆ ಉತ್ತರ ಕೊಡುವಷ್ಟು ಪುರಸೊತ್ತು ಅವರಿಗಿದೆಯೇ?

- ನರೇಶ್ ಶೆಣೈ
ನಮೋ ಬ್ರಿಗೇಡ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.