ಯುಪಿಎ ಸರ್ಕಾರ, ಗಳಿಸಿದ್ದಕ್ಕಿಂತ ಖರ್ಚು ಮಾಡಿದ್ದೇ ಹೆಚ್ಚು!

ಪಿ. ಚಿದಂಬರಂ ಅವರು ಮೊದಲಿನಿಂದಲೂ ವಿತ್ತೀಯ ಕೊರತೆಯ ರೆಡ್ ಲೈನ್ ಅನ್ನು ತಮ್ಮ ಸರ್ಕಾರ ದಾಟುವುದಿಲ್ಲ ಎಂದು ಹೇಳುತ್ತಾ ಬರುತ್ತಿದ್ದಾರಾದರೂ ಇದುವರೆಗೂ ಅವರ ಮಾತಂತೂ ನಿಜವಾಗಿಲ್ಲ. "ಆರ್ಥಿಕ ವಿವೇಕದ ಮೇಲೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವವಾಗದು. ನಮ್ಮ ಸರ್ಕಾರ ವಿತ್ತೀಯ ಕೊರತೆಯನ್ನು ನಿಗ್ರಹಿಸುವುದಕ್ಕೆ ಕಂಕಣಬದ್ಧವಾಗಿದೆ" ಎಂದು ಅವರು ಡಿಸೆಂಬರ್ 11 ರಂದು ಹೇಳಿದ್ದರು.
ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್(ಸಿಜಿಎ) ಪ್ರತಿ ತಿಂಗಳ ಕೊನೆಯಲ್ಲಿ ವಿತ್ತೀಯ ಕೊರತೆಯ ಅಂಕಿ-ಸಂಖ್ಯೆಯನ್ನು ವಿತ್ತ ಸಚಿವಾಲಯದ ಮುಂದಿಡುತ್ತದೆ. ವಿತ್ತೀಯ ಕೊರತೆಯನ್ನು ಸರಳವಾಗಿ ವ್ಯಾಖ್ಯಾನಿಸುವುದಾದರೆ, ಅದು 'ಸರ್ಕಾರದ ಆದಾಯ ಮತ್ತು ಖರ್ಚುಮಾಡುವುದರ ನಡುವಿನ ಅಂತರ'.
ಸಿಜಿಎ 31 ಡಿಸೆಂಬರ್, 2013ರಂದು ಹೊರಗೆಡವಿದ ಯುಪಿಎ ಸರ್ಕಾರದ ಇತ್ತೀಚಿನ ಖರ್ಚು ವೆಚ್ಚಗಳ ಕುರಿತ ಮಾಹಿತಿ ಕುತೂಹಲಕರವಾಗಿದೆ. 2013ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಕೇಂದ್ರ ಯುಪಿಎ ಸರ್ಕಾರ ಗಳಿಸಿದ್ದು(ಆದಾಯ) 5,11,638 ಕೋಟಿ ರುಪಾಯಿಗಳು. ಇದೇ ಸಮಯದಲ್ಲೇ ಅದು ಖರ್ಚು ಮಾಡಿದ್ದು ಬರೋಬ್ಬರಿ 10,21,195 ಕೋಟಿ ರುಪಾಯಿಗಳು! ಅಂದರೆ ವಿತ್ತೀಯ ಕೊರತೆ 5,09,557 ಕೋಟಿ ರುಪಾಯಿಗಳಾಯಿತು. ಇನ್ನೂ ಸರಳವಾಗಿ ಹೇಳಬೇಕೆಂದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆ ಸಮಯದಲ್ಲಿ ಗಳಿಸಿದ್ದಕ್ಕಿಂತಲೂ ಎರಡು ಪಟ್ಟು ಹೆಚ್ಚು ಖರ್ಚು ಮಾಡಿತು!
1935 ಮತ್ತು 1945ರ ನಡುವೆ ಅಮೆರಿಕದ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಸ್ವೆಲ್ಟ್ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ಅವರ ಮಾತು ಈಗಿನ ಭಾರತದ ಪರಿಸ್ಥಿತಿಗೆ ಸರಿಯಾಗಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಹೇಳುತ್ತಿದ್ದರು- "ಯಾವುದೇ ಸರ್ಕಾರ/ ಕುಟುಂಬ ಯಾವುದೋ ಒಂದು ವರ್ಷದಲ್ಲಿ ತನ್ನ ಆದಾಯಕ್ಕಿಂತ ತುಸು ಹೆಚ್ಚು ಖರ್ಚು ಮಾಡೇ ಮಾಡಿರುತ್ತದೆ. ಆದರೆ ನಿಮಗೂ ಗೊತ್ತು, ನನಗೂ ಗೊತ್ತು- ಇದೇ ಅಭ್ಯಾಸವಾಗಿಬಿಟ್ಟರೆ/ ಪ್ರತೀ ವರ್ಷವೂ ಇದೇ ಪರಿಸ್ಥಿತಿ ಮುಂದುವರಿದರೆ, ಮನೆ/ದೇಶ ಹಾಳಾಗಿ ಹೋಗುತ್ತದೆ".
ನಿಸ್ಸಂಶಯವಾಗಿಯೂ ಯುಪಿಎ ಸರ್ಕಾರ ಈ ರೀತಿಯಲ್ಲಿ ಯೋಚಿಸುವುದಕ್ಕೆ ಮುಂದಾಗಿಯೇ ಇಲ್ಲ. ಅಲ್ಲದೆ 2013ರ ವಿತ್ತೀಯ ಕೊರತೆ ಕಳೆದ ಕೆಲವು ವರ್ಷಗಳಿಗಿಂತ ಅತಿ ಹೆಚ್ಚಾಗಿದೆ. ನಮಗೆಲ್ಲ ಗೊತ್ತಿರುವಂತೆ 2008-2009(ಅಥವಾ ಏಪ್ರಿಲ್1, 2008 ಮತ್ತು ಮಾರ್ಚ್ 31, 2009ರ ನಡುವಿನ ಸಮಯ) ಲೋಕಸಭಾ ಚುನಾವಣೆಗೆ ಹಿಂದಿನ ಆರ್ಥಿಕ ವರ್ಷವಾಗಿತ್ತು(ಲೋಕಸಭಾ ಚುನಾವಣೆಗಳು ನಡೆದದ್ದು ಏಪ್ರಿಲ್-ಮೇ 2009ರಲ್ಲಿ). ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮತದಾರರನ್ನು ಒಲಿಸಿಕೊಳ್ಳಲು ಹತೋಟಿಯಿಲ್ಲದೇ ದಂಡಿಯಾಗಿ ಹಣ ಚೆಲ್ಲಿತು. ಇದರ ಪ್ರತಿಫಲ ವಿತ್ತೀಯ ಕೊರತೆ ಕಾಣಿಸಿಕೊಂಡಿತು. ಆ ವರ್ಷದಲ್ಲಿ ವಿತ್ತೀಯ ಕೊರತೆ 3,36,992 ಕೋಟಿ ರುಪಾಯಿಗಳಷ್ಟಿತ್ತು. ಪಿ. ಚಿದಂಬರಂ ಅವರು ಮೊದಲಿನಿಂದಲೂ ವಿತ್ತೀಯ ಕೊರತೆಯ ರೆಡ್ ಲೈನ್ ಅನ್ನು ತಮ್ಮ ಸರ್ಕಾರ ದಾಟುವುದಿಲ್ಲ ಎಂದು ಹೇಳುತ್ತಾ ಬರುತ್ತಿದ್ದಾರಾದರೂ ಇದುವರೆಗೂ ಅವರ ಮಾತಂತೂ ನಿಜವಾಗಿಲ್ಲ. "ಆರ್ಥಿಕ ವಿವೇಕದ ಮೇಲೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವವಾಗದು. ನಮ್ಮ ಸರ್ಕಾರ ವಿತ್ತೀಯ ಕೊರತೆಯನ್ನು ನಿಗ್ರಹಿಸುವುದಕ್ಕೆ ಕಂಕಣಬದ್ಧವಾಗಿದೆ" ಎಂದು ಅವರು ಡಿಸೆಂಬರ್ 11, 2013ರಂದು ಹೇಳಿದ್ದರು! ಇತ್ತೀಚಿನ ಅಂಕಿ-ಅಂಶಗಳನ್ನು ನೋಡಿದಾಗ ಚಿದಂಬರಂ ಅವರ ಮಾತು ಎಷ್ಟು ಹುಸಿಯಾಯಿತು ಎನ್ನುವುದು ಅರ್ಥವಾಗುತ್ತದೆ.
ಕುತೂಹಲಕರ ಅಂಶವೆಂದರೆ, ಏಪ್ರಿಲ್ ಮತ್ತು ನವೆಂಬರ್ 2013ರ ಮಧ್ಯೆ, ಸರ್ಕಾರ ಸುಮಾರು 10,21, 195 ಕೋಟಿ ರುಪಾಯಿ ಖರ್ಚು ಮಾಡಿದೆ. ಇನ್ನು ಯುಪಿಎ ಸರ್ಕಾರದ ವಾರ್ಷಿಕ ವ್ಯಯದ ಅಂದಾಜು ಮೊತ್ತ 16,65,297 ಕೋಟಿ ರುಪಾಯಿಗಳಷ್ಟಿದೆ. ಈ ಹಿನ್ನೆಲೆಯಲ್ಲಿ ಅದು 6,44,102 ಕೋಟಿ ರುಪಾಯಿಗಳನ್ನು ಡಿಸೆಂಬರ್ 2013 ಮತ್ತು ಮಾರ್ಚ್ 31, 2014ರ ನಡುವೆ ಖರ್ಚು ಮಾಡಲು ಯೋಚಿಸುತ್ತಿದೆ. ಆದರೆ ಈ ವರ್ಷದ ತೆರಿಗೆ ಸಂಗ್ರಹ ಪ್ರಕ್ರಿಯೆ ಅತ್ಯಂತ ನಿಧಾನ ಗತಿಯಿಂದ ಸಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳುತ್ತವೆ ಅಂಕಿ ಸಂಖ್ಯೆಗಳು. ಈ ಎಲ್ಲಾ ಕಾರಣಗಳಿಂದಾಗಿ, ಒಂದು ವೇಳೆ ಯುಪಿಎ ಸರ್ಕಾರ ತನ್ನ ವಿತ್ತೀಯ ಕೊರತೆಯ ಗುರಿಯನ್ನು ಮುಟ್ಟಬೇಕೆಂದರೆ(ನಿಗ್ರಹಿಸುವ), ಅದು ಕಳೆದ ಡಿಸೆಂಬರ್ನಿಂದ ಈ ಮಾರ್ಚ್ ತಿಂಗಳ ಮಧ್ಯೆ ಮಾಡಬೇಕೆಂದುಕೊಂಡಿರುವ ಖರ್ಚನ್ನು ಮುಂದೂಡಲೇಬೇಕಾಗುತ್ತದೆ. ಆದರೆ ಹಾಗೆ ಮಾಡಿದರೆ ಎಷ್ಟೆಲ್ಲಾ ತೊಂದರೆಗಳು ಎದುರಾಗುತ್ತವೆ ಎನ್ನುವುದು ಬಹುಶಃ ಅದಕ್ಕೂ ಅರಿವಿರಬಹುದೇನೋ? ಇತ್ತೀಚೆಗೆ 'ಎಕನಾಮಿಕ್ ಟೈಮ್ಸ್' ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಹೇಳುವುದೇನೆಂದರೆ..."ಕೇಂದ್ರ ಸರ್ಕಾರ ಈ ವರ್ಷ ಬಾಕಿ ಉಳಿದಿರುವ ರಸಗೊಬ್ಬರ ಮತ್ತು ತೈಲ ಸಬ್ಸಿಡಿಯನ್ನು ಕೊಡುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ. ಏಕೆಂದರೆ ಆ ಮೊತ್ತ 85 ಸಾವಿರ ಕೋಟಿ ರುಪಾಯಿಗಳಷ್ಟಿದೆ. ಬಹುಶಃ ಈ ಕೆಲಸವನ್ನೂ ಅದು ಮುಂದಿನ ವಿತ್ತೀಯ ವರ್ಷಕ್ಕೆ ದೂಡಬಹುದು." ಹಣಕಾಸು ಸಮಸ್ಯೆಯಿಂದ ಬಳಲುತ್ತಿರುವ ಯುಪಿಎ ಸರ್ಕಾರ ಈ ಎಲ್ಲಾ ಕಾರಣಗಳಿಂದಾಗಿ ತೆರಿಗೆ ವಾಪಸಾತಿಯಲ್ಲಿ ನಿಧಾನಗತಿಯನ್ನು ಅನುಸರಿಸುವುದಂತೂ(ಅನುಸರಿಸುತ್ತಿರುವುದಂತೂ) ನಿಶ್ಚಿತ.
ಆದರೆ ಇದೆಲ್ಲದರಿಂದಾಗಿ ಮುಂಬರುವ ಸರ್ಕಾರಕ್ಕಂತೂ ತಲೆನೋವು ಎದುರಾಗುವುದು ಗ್ಯಾರಂಟಿ. ಜೊತೆಗೆ ಜನತೆಯೂ ಒದ್ದಾಟಕ್ಕೆ ಸಿಲುಕಲಿದೆ. ಯುಪಿಎ ಸರ್ಕಾರ 2008-2009ರ ಲೋಕಸಭಾ ಚುನಾವಣೆಗಳಲ್ಲಿ ಎರ್ರಾಬಿರ್ರಿಯಾಗಿ ಹಣ ಪೋಲು ಮಾಡಿದ್ದೇ ಈಗಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎನ್ನುತ್ತದೆ ಎಕನಾಮಿಕ್ ಟೈಮ್ಸ್ನ ಇನ್ನೊಂದು ವರದಿ. ಆಗ ಆದ ಖರ್ಚುನ್ನು ಸರಿದೂಗಿಸಲು ಯುಪಿಎ ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.
ಈಗ ಮತ್ತೆ ಲೋಕಸಭಾ ಚುನಾವಣೆಗಳು ಎದುರಾಗಲಿವೆ. ಅಂದು ಮಾಡಿದ ತಪ್ಪನ್ನೇ ಯುಪಿಎ ಸರ್ಕಾರ ಮತ್ತೆ ಮಾಡಬಹುದು. ಆದರೆ ಆಗ ಇದ್ದಂಥ ಉತ್ತಮ ಪರಿಸ್ಥಿತಿ ಈಗ ಅದಕ್ಕೆ ಮತ್ತು ದೇಶಕ್ಕೆ ಇಲ್ಲ. ಏಕೆಂದರೆ
ಅದಾಗಲೇ ವಿತ್ತೀಯ ಕೊರತೆಯ ಗುರಿ ಜಿಡಿಪಿಯ 4.8ರಷ್ಟು ತಲುಪಿದೆ. ಒಂದು ವೇಳೆ ಇದನ್ನೆಲ್ಲ ಲೆಕ್ಕಿಸದೆ ಅದು ಅಂದಾದುಂದಿಯಾಗಿ ಮತ್ತೆ ಜನತೆಯ ಹಣವನ್ನು ಖರ್ಚು ಮಾಡಿತೆಂದರೆ, ದೇಶ ಮತ್ತಷ್ಟು ಸಂಕಟಕ್ಕೆ ಸಿಲುಕುವುದರಲ್ಲಿ ಸಂದೇಹವೇ ಇಲ್ಲ.
- ವಿವೇಕ್ ಕೌಲ್
ಅಂಕಣಕಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


