ದೇವರಂತೆ ಬರುವವರು...

Updated on: 

ಒಂದು ಆ್ಯಂಗಲ್‌ನಿಂದ ನೋಡುವಾಗ, ನಾವು -ನೀವೆಲ್ಲರೂ ಹಲವು ರೀತಿಯಲ್ಲಿ ಬಲಿಷ್ಠರೇ. ಹೇಗೆ ಅಂದರೆ, ನಮಗೆಲ್ಲಾ ಸಾಕಷ್ಟು ಮಂದಿ ಗೆಳೆಯ-ಗೆಳತಿಯರು, ಬಂಧುಗಳು ಇದ್ದಾರೆ. ಅವರಿಗೆ ನಾವು 'ಹಿತೈಷಿಗಳು' ಎಂಬ ಹಣೆಪಟ್ಟಿ ಅಂಟಿಸಿರುತ್ತೇವೆ. ಈ ಹಿತೈಷಿಗಳ ಪಟ್ಟಿಯಲ್ಲಿ, ಆರ್ಥಿಕವಾಗಿ ಸಬಲರಾದವರು, ಆಯಕಟ್ಟಿನ ಹುದ್ದೆಗಳಲ್ಲಿ ಇರುವವರು, ಪ್ರಭಾವಿ ರಾಜಕಾರಣಿಯಿಂದ ಶಿಫಾರಸು ಪತ್ರ ತರುವ ಚಾಣಾಕ್ಷರು ಖಂಡಿತ ಇರುತ್ತಾರೆ. ಬದುಕಲ್ಲಿ ಕಷ್ಟಗಳ ಸರಮಾಲೆಯೇ ಅಪ್ಪಿಕೊಂಡಿತು ಅನ್ನಿಸಿದಾಗ ಇವರನ್ನೆಲ್ಲ ನಾವು ನೆನಪು ಮಾಡಿಕೊಳ್ಳುತ್ತೇವೆ. ಮುಜುಗರವಿಲ್ಲದೆ ಸಹಾಯ ಬಯಸುತ್ತೇವೆ.
ಆದರೆ, ಒಂದೊಂದು ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯವೂ ಒದಗಿ ಬರದೆ, ಎಂಥವರೂ ತತ್ತರಿಸಿ ಹೋಗುತ್ತಾರೆ. ವಿಶೇಷವೆಂದರೆ, ಅಂಥ ಸಂಕಟದ ಸಂದರ್ಭದಲ್ಲ್ಲೂ ಯಾವುದೋ ಒಂದು ಕೈ ಆಸರೆ ನೀಡುತ್ತದೆ.  ಆನಂತರದಲ್ಲಿ ಅದನ್ನು ನೆನಪು ಮಾಡಿಕೊಂಡು, ನಮ್ಮ ಬದುಕಲ್ಲಿ 'ಅವರು' ದೇವರು ಬಂದ ಹಾಗೆ ಬಂದು ಹೋದರು ಎಂದು ಹೇಳಿಕೊಂಡು ಖುಷಿಪಡುವ ಜನ ನಮ್ಮ ಸುತ್ತಲೂ ಇದ್ದಾರೆ. ಅಂಥದ್ದೊಂದು ಪ್ರಸಂಗವನ್ನು ಮೊನ್ನೆ ವಿವರಿಸಿದ್ದು ನನ್ನ ಹಿರಿಯ ಗೆಳತಿ ಶಾಲಿನಿ. ಎಲ್ಲವನ್ನೂ ಅವಳ ಮಾತುಗಳಲ್ಲೇ ಕೇಳಿದರೆ ಸ್ವಾರಸ್ಯ ಹೆಚ್ಚು. ಓವರ್ ಟು ಶಾಲಿನಿ.
'ನನ್ನ ಯಜಮಾನರು ನೌಕಾದಳದಲ್ಲಿ ಎಂಜಿನಿಯರ್. ಅಟ್ಲಾಂಟಿಕ್ ದ್ವೀಪ ಸಮೂಹದಲ್ಲಿರುವ ಒಂದು ಹಡಗು ತಯಾರಿಕಾ ಕಂಪನಿಯಲ್ಲಿ ಅವರಿಗೆ ಕೆಲಸ. ಆರಂಕಿಯ ಸಂಬಳ, ಸಾಕಷ್ಟು ರಜೆ ಹಾಗೂ ಹತ್ತಾರು ವಿಶೇಷ ಸವಲತ್ತುಗಳಿದ್ದುದರಿಂದ ಅವರು ಅದೇ ನೌಕರಿಗೆ ಅಂಟಿಕೊಂಡರು. ಎರಡು ತಿಂಗಳಲ್ಲಿ ಒಂದು ವಾರ ರಜೆ ಹಾಕಿ ಭಾರತಕ್ಕೆ ಬಂದು ಹೋಗುತ್ತಿದ್ದರು. ಜೊತೆಗೆ ದಿನವೂ ಫೋನ್ ಮತ್ತು ಇಂಟರ್‌ನೆಟ್ ಆನ್‌ಲೈನ್ ಮೂಲಕವೂ ಮಾತಿಗೆ ಸಿಗುತ್ತಿದ್ದರು. ಹಾಗಾಗಿ, ಯಾವುದೇ ಸಮಸ್ಯೆ ಇರಲಿಲ್ಲ.
ಆದರೆ ಎಂಟು ತಿಂಗಳ ಹಿಂದೆ, ಗಂಡನ ಆಫೀಸಿನಿಂದ ಫೋನ್ ಬಂತು. 'ನಿಮ್ಮ ಯಜಮಾನರಿಗೆ ಹುಷಾರಿಲ್ಲ. ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೊಂದಿಗೆ ನೀವೇ ಮಾತಾಡಿ' ಎಂದರು. ಈ ದಿಢೀರ್ ಸುದ್ದಿಯಿಂದ ಗಾಬರಿ, ನಡುಕ, ಅಳು ಒಟ್ಟಿಗೇ ಬಂತು. ನಡುಗುತ್ತಲೇ -'ಹಲೋ' ಅಂದೆ. 'ಶಾಲಿನೀ, ನಿನ್ನೆ ಮೂರು ಸಲ ವಾಂತಿ ಆಯ್ತು. ಎರಡು ಬಾರಿ ವಾಂತಿಯೊಂದಿಗೆ ಸ್ವಲ್ಪ ರಕ್ತವೂ ಹೋಯ್ತು. ಹೆದರುವಂಥದ್ದೇನಿಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ಗಾಬರಿ ಆಗಬೇಡ' ಎಂದು ಯಜಮಾನರೇ ಹೇಳಿದರು. ಅಷ್ಟಕ್ಕೇ ಲೈನ್ ಕಟ್ ಆಯಿತು.
ಮೊದಲೇ ಹೇಳಿದಂತೆ ನನ್ನ ಗಂಡ ಇದ್ದುದು ದೂರದ ದೇಶದಲ್ಲಿ. ಅಲ್ಲಿಗೆ ತಕ್ಷಣವೇ ಹೋಗಲು ಅಗತ್ಯವಿದ್ದ ವೀಸಾ ನನ್ನ ಬಳಿ ಇರಲಿಲ್ಲ. ಗಂಡನಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾ ಕೂರುವುದರ ಹೊರತಾಗಿ ಬೇರೆ ದಾರಿಯೂ ಇರಲಿಲ್ಲ. ಹೀಗಿದ್ದಾಗಲೇ ಗಂಡನಿಂದ ಮತ್ತೆ ಫೋನ್ ಬಂತು: 'ಶಾಲಿನೀ, ಮತ್ತೆ ವಾಂತಿ ಆಯ್ತು. ವಾಂತಿಯೊಂದಿಗೆ ಮತ್ತೆ ಮತ್ತೆ ರಕ್ತವೂ ಬಂತು. ಯಾವುದೋ ಕಾಯಿಲೆ ಇದೆ ಅನ್ಸುತ್ತೆ. ಹಲವು ಪರೀಕ್ಷೆಗಳು ಆಗಬೇಕು. ಅಲ್ಲಿನ ತನಕ ನೀವು ಆಸ್ಪತ್ರೆಯಲ್ಲೇ ಇರಬೇಕು ಅಂದಿದ್ದಾರೆ ಡಾಕ್ಟರ್. ಇಲ್ಲಿ ಹೆಚ್ಚಾಗಿ ಎಲ್ಲರೂ ಮಾಂಸಾಹಾರ ತಗೊಳ್ತೋರೆ. ಆದರೆ ನನಗೆ ಅದು ಹೊಂದಿಕೆ ಆಗ್ಲಿಲ್ಲ. ಹೇಗಾದ್ರೂ ಮಾಡಿ ನನಗೆ ಸಸ್ಯಾಹಾರದ ಊಟ ಸಿಗುವಂತೆ, ಕಷ್ಟ-ಸುಖ ವಿಚಾರಿಸಲು ಯಾರಾದರೂ ಒಬ್ಬರು, ದಿನಕ್ಕೆ ಒಂದೇ ಬಾರಿಯಾದರೂ ಬಂದು ಹೋಗುವಂತೆ ವ್ಯವಸ್ಥೆ ಮಾಡ್ತೀಯ ಶಾಲಿನೀ. ಪ್ಲೀಸ್... ತುಂಬಾ ಒಂಟಿ ಅನ್ನಿಸ್ತಿದೆ. ತುಂಬಾ ಹೆದರಿಕೇನೂ ಆಗ್ತಿದೆ ಶಾಲಿನೀ...'- ನನ್ನ ಗಂಡ ಅಳುತ್ತಲೇ ಹೇಳಿದ.
ಮರುಕ್ಷಣದಲ್ಲೇ ಆ ದ್ವೀಪ ಸಮೂಹದ ಸುತ್ತಮುತ್ತಲಲ್ಲಿ ಇರಬಹುದಾದ ಬಂಧುಗಳ ಲಿಸ್ಟ್ ಹುಡುಕಿದೆ. ಬ್ಯಾಡ್‌ಲಕ್. ಯಾರೂ ಸಿಗಲಿಲ್ಲ. ಆಗ ನೆನಪಾಗಿದ್ದೇ ಗೂಗಲ್. ಇಂಟರ್‌ನೆಟ್‌ನ ನೆರವಿನಿಂದ ಸಾಕಷ್ಟು ಮಾಹಿತಿ ಹುಡುಕಿದಾಗ, ನನ್ನ ಗಂಡನಿದ್ದ ಆಸ್ಪತ್ರೆಗೆ ಹತ್ತಿರದಲ್ಲಿಯೇ ಅಮೆರಿಕದ ರಾಯಭಾರ ಕಚೇರಿ ಇರುವುದು ಗೊತ್ತಾಯಿತು. ಅಲ್ಲಿನ ದೂರವಾಣಿ ಸಂಖ್ಯೆಯೂ ಸಿಕ್ಕಿತು. ಹಿಂದೆ ಮುಂದೆ ಯೋಚಿಸದೆ ಆ ನಂಬರಿಗೆ ಕಾಲ್ ಮಾಡಿದೆ. ಆ ಕಡೆಯಿಂದ 'ಹಲೋ' ಅನ್ನುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅಳುತ್ತಾ ನನ್ನ ಗಂಡನಿಗೆ ಒದಗಿರುವ ಪರಿಸ್ಥಿತಿಯನ್ನು ವಿವರಿಸಿದೆ. ಅವರಿಗೆ ಬೇಕಾಗಿರುವ ಸಹಾಯದ ಬಗ್ಗೆಯೂ ತಿಳಿಸಿ, ಪ್ಲೀಸ್ ಹೆಲ್ಪ್ ಅಂದೆ.
'ಮೇಡಂ, ನೀವು ಭಾರತದಲ್ಲಿ ವಾಸ ಮಾಡ್ತೀರೋ ಅಮೆರಿಕನ್ ಪ್ರಜೆಯಾ?' ಆ ಕಡೆಯ ವ್ಯಕ್ತಿ ಕೇಳಿದ. 'ಇಲ್ಲ ಸರ್. ನಾನು ಇಂಡಿಯನ್. ಈಗ ಆಸ್ಪತ್ರೆಗೆ ಸೇರಿರುವ ನನ್ನ ಗಂಡ ಕೂಡ ಇಂಡಿಯನ್‌' ಅಂದೆ.
'ಅಂದ್ರೆ ಮೇಡಂ, ನೀವೀಗ ಫೋನ್ ಮಾಡಿದ್ದು ಅಮೆರಿಕ ರಾಯಭಾರ ಕಚೇರಿಗೆ'- ಆತ ಹೇಳಿದ.
'ಹೌದು ಸರ್. ಈ ಪರಿಸ್ಥಿತೀಲಿ ಏನು ಮಾಡಬೇಕು ಅಂತಾನೇ ತೋಚಲಿಲ್ಲ. ಆಸ್ಪತ್ರೇಲಿ ನನ್ನ ಗಂಡ ಸಾವು-ಬದುಕಿನ ಮಧ್ಯೆ ಹೋರಾಡ್ತಾ ಇದಾನೆ. ಮಾನವೀಯತೆಯ ದೃಷ್ಟಿಯಿಂದಾದ್ರೂ ಅವನಿಗೆ ಸಹಾಯ ಮಾಡಿ ಸರ್‌' ಎಂದೆ. ಎರಡು ಕ್ಷಣ ಮೌನ. ನಂತರ ಆ ಅಮೆರಿಕನ್ ಅಧಿಕಾರಿ, ನನ್ನ ಗಂಡನ ಹೆಸರು ಮತ್ತು ಇತರೆ ವಿವರಗಳನ್ನೆಲ್ಲ ಪಡೆದುಕೊಂಡರು.
ಮರುದಿನದಿಂದ ಒಂದಿಡೀ ತಿಂಗಳ ಕಾಲ, ದಿನವೂ ಬೆಳಗ್ಗೆ ಹಣ್ಣು, ಜ್ಯೂಸ್ ಅಥವಾ ಸಸ್ಯಾಹಾರಿ ತಿಂಡಿಯೊಂದಿಗೆ ಆಸ್ಪತ್ರೆಗೆ ಹೋಗುವುದು, ನನ್ನ ಗಂಡನ ಕಷ್ಟ-ಸುಖ ವಿಚಾರಿಸುವುದು, ಚಿಕ್ಕ ಪುಟ್ಟ ಸಹಾಯ ಮಾಡುವುದು... ಇಂಥದ್ದನ್ನೆಲ್ಲ ಆ ಅಮೆರಿಕನ್ ಚಿಕ್ಕದೊಂದು ಮುಜುಗರವೂ ಇಲ್ಲದೆ ಮಾಡಿದನಂತೆ. ನನ್ನ ಗಂಡ ಕುತೂಹಲದಿಂದ -'ಸರ್, ನೀವು ಯಾರು?' ಎಂದು ಕೇಳಿದ್ದಕ್ಕೆ, ನನ್ನನ್ನು ವೆಲ್‌ವಿಷರ್ ಅಂದ್ಕೊಳ್ಳಿ ಎಂದು ಆತ ಮುಗುಳ್ನಕ್ಕನಂತೆ! ಆತ ದೇವರಂತೆ ಬಂದು ಸಹಾಯ ಮಾಡದೇ ಹೋಗಿದ್ದರೆ ನನ್ನ ಗಂಡ ಬಹುಶಃ ಬದುಕ್ತಾ ಇರಲಿಲ್ಲ. ಆ ಸಂದರ್ಭ ನೆನಪಾದ್ರೆ ಈಗಲೂ ಖುಷಿ ಹಾಗೂ ಸಂಕಟ ಆಗುತ್ತೆ. ಸಂಕಟ ಯಾಕೆ ಅಂದ್ರೆ ಆ ದೇಶಕ್ಕೆ ನಾನು ಹೋಗುವಷ್ಟರಲ್ಲಿ, ಆ ಅಮೆರಿಕನ್ ಬಂಧು ರಜೆಗೆಂದು ಊರಿಗೆ ಹೋಗಿಬಿಟ್ಟಿದ್ದ. ಹಾಗಾಗಿ ಆ ದೇವರಂಥ ಮನುಷ್ಯನನ್ನು ನಾನು ನೋಡಲೇ ಇಲ್ಲ...' ಹೀಗೆ ಕಥೆ ಮುಗಿಸಿ ಕಣ್ತುಂಬಿಕೊಂಡಳು ಶಾಲಿನಿ.
---
ದೇವರಂಥ ಜನ ನಿಮ್ಮ ಬದುಕಲ್ಲೂ ಬಂದು ಹೋಗಿರಬಹುದು. ಅಂಥವರನ್ನು ನೆನಪಿಸಿಕೊಳ್ಳಿ...


- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com