ಸಿಇಟಿ ಸುಧಾರಿಸಬಹುದಾದ ಅವಕಾಶ ಇನ್ನೂ ಇದೆ

ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಉನ್ನತೀಕರಣದ ದೃಷ್ಟಿಯಿಂದ ದಶಕದ ಹಿಂದೆ ನೀಡಿದ ತೀರ್ಪು ಮತ್ತು ತದ ನಂತರದ ಬೆಳವಣಿಗೆಗಳಿಂದಾಗಿ ಅಂತೂ ಇಂತೂ ಇದೀಗ ಹೊಸ ಸರ್ಕಾರ ಹಳೆ ಕಾಯ್ದೆ (ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಕಾಯ್ದೆ-2006) ಜಾರಿಗೆ ಇಂಬು ನೀಡಿದೆ. ಹಾಗೆ ನೋಡಿದರೆ ಈ ಕಾಯ್ದೆಯ ಸಂರಚಿತ ನಿಯಮಗಳೇ ಗೊಂದಲದ ಗೂಡಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅಂಶಗಳ ಜಾರಿಗೆ ತಡೆಗೋಡೆಗಳಂತಾಗಿವೆ. 2006ರಲ್ಲಿ ರಚಿತವಾದ ಈ ಕಾನೂನನ್ನು ಅಂದಿನ ಸರ್ಕಾರಗಳು ಬಟ್ಟೆ ಹಾವಿನಂತೆ ಖಾಸಗಿ ಸಂಸ್ಥೆಗಳ ವಾಣಿಜ್ಯಾಸಕ್ತಿಗಳನ್ನು ನಿಯಂತ್ರಿಸಲು ನಿಜಕ್ಕೂ ಜಾರಿಗೊಳಿಸದೆ ತಿಪ್ಪೆ ಸಾರಿಸುವ ರೀತಿ ನಿರ್ವಹಿಸಿದ್ದು ಇದೀಗ ನಿಜಸ್ಥಿತಿ ಎದುರಾಗಿದೆ. ಈ ಕ್ರಮದಿಂದಾಗಿ ಖಾಸಗಿ ಅನುದಾನರಹಿತ ವೃತ್ತಿಶಿಕ್ಷಣ ಕಾಲೇಜುಗಳಲ್ಲಿ ಈ ಹಿಂದೆ ಸಿಇಟಿ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಪಡೆಯುತ್ತಿದ್ದ ಮೀಸಲು ಸ್ಥಾನಗಳು ಇಲ್ಲವಾಗಿವೆ ಎಂಬ ಭಾವನೆ ಸೃಷ್ಟಿಯಾಗಿದೆ.
ಖಾಸಗಿ ಸಂಸ್ಥೆಗಳ ಜೊತೆಗೆ ಒಳಗೊಳಗೆ ಸರ್ಕಾರ ಕೈಜೋಡಿಸಿ 2006 ಕಾಯ್ದೆಯನ್ನು ಜಾರಿಗೊಳಿಸುತ್ತಿಲ್ಲ ಎಂಬ ಹುಸಿ ಕಾಳಜಿಯ ಜನರ ಅಭಿಪ್ರಾಯಕ್ಕೆ ಮಣೆ ಹಾಕಲು ಹೋಗಿ ಸರ್ಕಾರ ಇದೀಗ ವಿದ್ಯಾರ್ಥಿಗಳಿಗೆ ಎರಡು ಸಾಮಾನ್ಯ ಪರೀಕ್ಷೆಗಳನ್ನು ಬರೆಯುವ ಅನಿವಾರ್ಯತೆ ತಂದಿಟ್ಟಿದೆ. ಸರ್ಕಾರಿ ಕಾಲೇಜುಗಳ ಸೀಟುಗಳನ್ನು ತುಂಬಲು ಸಿಇಟಿ ಸಂಸ್ಥೆ ಮತ್ತು ಖಾಸಗಿ ಕಾಲೇಜುಗಳ ಸೀಟುಗಳನ್ನು ತುಂಬಲು ಕಾಮೆಡ್-ಕೆ ಸಂಸ್ಥೆ ಕಾಯಿದೆಯ ಅನ್ವಯ ಜವಾಬ್ದಾರಿ ಹೊಂದಿರುವುದರಿಂದ ಈ ಪರಿಸ್ಥಿತಿ ಏರ್ಪಟ್ಟಿದೆ. ಕಾಯ್ದೆಯ ಜಾರಿಯಿಂದ ಇದು ಅನಿವಾರ್ಯವಾದರೂ ವಿದ್ಯಾರ್ಥಿ, ಪೋಷಕರು ಮತ್ತು ಕಾಲೇಜುಗಳ ಪಾಠ-ಪ್ರವಚನಗಳ ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆ ಬೆಳವಣಿಗೆಯಂತೂ ಅಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳುಗಳು ಕಳೆದರೂ ಸಿಇಟಿ ಮತ್ತು ಕಾಮೆಡ್-ಕೆ ಕೌನ್ಸಿಲಿಂಗ್ನ ರೌಂಡ್ಸ್ಗಳ ಗೊಂದಲ ಮತ್ತು ಖಾಲಿ ಉಳಿದ ಸ್ಥಾನಗಳನ್ನು ಸಂಬಂಧಪಟ್ಟ ಕಾಲೇಜುಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ತುಂಬಿಕೊಳ್ಳಬಹುದಾದ ಸಾಧ್ಯತೆಗಳ ಮೇಲಿನ ನಿರ್ಬಂಧಗಳು ಈ ಹಿಂದೆ ಇಡೀ ವ್ಯವಸ್ಥೆಗೆ ತಲೆನೋವಾಗಿದ್ದು ಇದೇ ಸ್ಥಿತಿ ಮತ್ತಷ್ಟು ಹೆಚ್ಚುವ ಸಾಧ್ಯತೆಯೇ ಹೆಚ್ಚಾಗಿದೆ.
ಈ ಕಾಯ್ದೆಯ ಪ್ರಕಾರ ರಚಿತವಾಗಿರುವ ಪ್ರವೇಶ ಉಸ್ತುವಾರಿ ಸಮಿತಿ ಮತ್ತು ಶುಲ್ಕ ನಿರ್ಣಯ ಸಮಿತಿಗಳು ನಿವೃತ್ತ ನ್ಯಾಯಾಧೀಶರುಗಳ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದರೂ ಇವು ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಸಿಇಟಿ, ಕಾಮೆಡ್-ಕೆ ಮತ್ತು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ನಡುವೆ ಅದೆಷ್ಟರಮಟ್ಟಿಗೆ ಸಾಮರಸ್ಯ ಕಲ್ಪಿಸಬಹುದೆಂಬುದು ಸ್ಪಷ್ಟವಾಗಿಲ್ಲ. ಸರ್ವೋದಯ ಆಶಯದ ಏಕರೂಪದ ಶಿಕ್ಷಣವನ್ನು ಅರ್ಹ ವಿದ್ಯಾರ್ಥಿಗಳಿಗೆ ಕಲ್ಪಿಸುವ ಜವಾಬ್ದಾರಿಯುತ ಜಾರಿ ವ್ಯವಸ್ಥೆಯನ್ನು ಪರಿಕಲ್ಪಿಸುವಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಒಕ್ಕೂಟಗಳು ಎಡವಿರುವುದಂತೂ ಇಲ್ಲಿ ಸುಸ್ಪಷ್ಟ. ರಾಜ್ಯದ ಎಲ್ಲಾ ಕಾಲೇಜುಗಳ ಮೂಲಸೌಲಭ್ಯಗಳು, ವೇತನ ಮತ್ತಿತರ ಖರ್ಚುಗಳು ಒಂದೇ ರೀತಿ ಇದ್ದಾಗ ಮಾತ್ರ ಏಕರೂಪದ ಗುಣಮಟ್ಟ ತರಲು ಸಾಧ್ಯ ಎನ್ನುವುದು ಸ್ಪಷ್ಟವಿರುವಾಗ ಒಂದೊಂದು ಕಾಲೇಜಿಗೆ ಒಂದೊಂದು ಶುಲ್ಕ ಸಾಧ್ಯತೆಯನ್ನು ಪರಿಭಾವಿಸಿದರೆ ಅದರ ಲಾಭ ಯಾರಿಗಾದೀತು ಎಂದು ಊಹಿಸುವುದು ಕಷ್ಟವೇನಲ್ಲ. ಬೆಂಗಳೂರಿನಂಥ ನಗರಪ್ರದೇಶದ ಕಾಲೇಜುಗಳಲ್ಲಿ ನೀಡುವ ವೇತನಕ್ಕೂ ಮತ್ತು ಇತರೆ ಪ್ರದೇಶಗಳ ಕಾಲೇಜುಗಳ ವೇತನಕ್ಕೂ ವ್ಯತ್ಯಾಸ ಕಾಣುವುದು ಎಷ್ಟರಮಟ್ಟಿಗೆ ಸಂವಿಧಾನಿಕ? ಹಾಗೆ ನೋಡಿದರೆ ಹೊರಗಿನ ಪ್ರದೇಶಗಳ ಕಾಲೇಜುಗಳಿಗೆ ಹೆಚ್ಚು ಅನುಕೂಲವಾಗುವಂತಾದರೆ ಪ್ರಾದೇಶಿಕ ಅಭಿವೃದ್ಧಿ ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯವಲ್ಲವೆ? ಬಹುಶಃ ಈ ಆಲೋಚನೆಗಳತ್ತ ಸಂಬಂಧಪಟ್ಟವರು ಗಮನಹರಿಸುವ ಗೋಜಿಗೆ ಹೋಗಿಲ್ಲ.
ಇನ್ನು ವಿದ್ಯಾರ್ಥಿಗಳಿಗೆ ತಮ್ಮ ಅದೃಷ್ಟ ಫಲಿಸಿಕೊಳ್ಳುವ ಕ್ರಮವಾಗಿ ಸಿಇಟಿ ಮತ್ತು ಕಾಮೆಡ್-ಕೆ ಪ್ರವೇಶ ಪರೀಕ್ಷೆಗಳೆರಡರಲ್ಲೂ ಪಾಲ್ಗೊಳ್ಳುವ ಜೊತೆಗೆ ಖಾಸಗಿ ಅಥವಾ ಡೀಮ್ಡ್ ವಿಶ್ವವಿದ್ಯಾಲಯಗಳು ನಡೆಸಬಹುದಾದ ಅವರದೇ ಆದ ರಾಷ್ಟ್ರೀಯ(?) ಮಟ್ಟದ ಪರೀಕ್ಷೆ ನಡೆಸಲು ಮುಂದಾದರೆ ಅದನ್ನೂ ಬರೆಯಬೇಕಲ್ಲ? ಹಿಂದಿನ ಪ್ರಕಾರ ಪೋಷಕರು ತಮ್ಮ ಮಕ್ಕಳಿಗೆ ಯಾವ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕೆಂಬ ಒಂದು ತೀರ್ಮಾನದ ಗೊಂದಲದಲ್ಲಿದ್ದರೆ ಇದೀಗ ಯಾವ ಕಾಲೇಜಿನಲ್ಲಿ ಯಾವ ಶುಲ್ಕ ತೆರಬೇಕೆಂಬ ಮತ್ತೊಂದು ತೀರ್ಮಾನದ ದುಸ್ಥಿತಿ ಎದುರಾಗಿದೆ. ಕಳೆದ ವರ್ಷಗಳ ಸ್ಥಿತಿ ಗಮನಿಸಿದರೆ ಎಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ಈ ಬಾರಿ ಸಾಮಾನ್ಯ ಪರೀಕ್ಷೆಯೇ ಬೇಡವೆನಿಸುತ್ತದೆ. ಏಕೆಂದರೆ ಆಗ ಅಷ್ಟೊಂದು ಸ್ಥಾನಗಳು ಖಾಲಿ ಉಳಿದಿದ್ದವು. ಸರ್ಕಾರ ನಿಗದಿಪಡಿಸಿದ ಮೀಸಲು ಸ್ಥಾನಗಳು ಭರ್ತಿಯಾಗದಿದ್ದಲ್ಲಿ ಅವುಗಳನ್ನು ಇತರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ಭರ್ತಿ ಮಾಡಲು ಖಾಸಗಿ ಕಾಲೇಜುಗಳಿಗೆ ಸೂಕ್ತ ಸಮಯ ಮತ್ತು ಅವಕಾಶವಿಲ್ಲದಿದ್ದಲ್ಲಿ ಆ ಸಂಸ್ಥೆಗಳ ಆರ್ಥಿಕ ಸುಸ್ಥಿರತೆಯ ಸ್ಥಿತಿ ಏನು? ಈ ಗೊಂದಲಗಳು ಸ್ವಲ್ಪಮಟ್ಟಿಗಾದರೂ ನಿವಾರಣೆಯಾಗಬೇಕೆಂದರೆ ಕೆಳಕಂಡ ಕ್ರಮಗಳು ಸೂಕ್ತ ಎನಿಸುತ್ತವೆ.
1.ರಾಜ್ಯದ ಎಲ್ಲಾ ವೃತ್ತಿಶಿಕ್ಷಣ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾರ್ಹತೆಗೆ ಸ್ವಾಯತ್ತ ಸಾಮಾನ್ಯ ಪರೀಕ್ಷಾ ಪ್ರಾಧಿಕಾರ ಒಂದೇ ಆಗಿದ್ದು, ಅದರ ಆಡಳಿತ ಮಂಡಳಿಯು ಸರ್ಕಾರ, ಖಾಸಗಿ ಸಂಸ್ಥೆಗಳು ಶೈಕ್ಷಣಿಕ ಪರಿಣಿತರು, ಲೆಕ್ಕಪರಿಶೋಧಕರು ಮೊದಲಾದ ಪ್ರತಿನಿಧಿಗಳನ್ನು ಒಳಗೊಂಡಿರಬೇಕು. ಇದರ ಮುಖ್ಯಸ್ಥರಾಗಿ ನಿವೃತ್ತ ನ್ಯಾಯಾಧೀಶರೇ ಇರಬಹುದು.
2. ಈ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ನಿಗದಿತ ಕನಿಷ್ಠ ಅರ್ಹತೆ ಗಳಿಸಿದವರು ಮಾತ್ರ ಅವರು ಇಚ್ಛಿಸಿದ ವಿಭಾಗಗಳಿಗೆ ಅಥವಾ ವಿಷಯಗಳಲ್ಲಿ ವೃತ್ತಿಶಿಕ್ಷಣ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವುದು.
3.ಹೀಗೆ ಸ್ವೀಕೃತವಾದ ಅರ್ಜಿಗಳನ್ನು ಆಯಾ ಕಾಲೇಜುಗಳು ಪ್ರವೇಶ ಪರೀಕ್ಷೆ ಅಂಕಗಳನ್ನು ಆಧರಿಸಿ, ಸರ್ಕಾರದ ನಿಯಮಬದ್ಧ ಮೀಸಲಾತಿ ಅನುಸರಿಸಿ, ಆಯ್ಕೆಪಟ್ಟಿ ಪ್ರಕಟಿಸುವುದು.
4. ವಿಶ್ವವಿದ್ಯಾಲಯ ನಿಗದಿಪಡಿಸಿದ ಶೈಕ್ಷಣಿಕ ವರ್ಷಾರಂಭದ ದಿನಕ್ಕಿಂತ ಒಂದು ವಾರದ ಮೊದಲು ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಕೌನ್ಸಿಲಿಂಗನ್ನು ಆಯಾ ಕಾಲೇಜಿನಲ್ಲೇ ನಡೆಸಬಹುದು.
5.ರಾಜ್ಯ ಸರ್ಕಾರ ತನ್ನ ವಲಯದ ಕಾಲೇಜುಗಳಲ್ಲಿ ಈ ಕೋರ್ಸುಗಳಿಗೆ ಪ್ರತಿ ವಿದ್ಯಾರ್ಥಿಗೆ ಖರ್ಚು ಮಾಡುವ ವೆಚ್ಚ ಆಧರಿಸಿ ಸದರಿ ಪ್ರಾಧಿಕಾರ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶ ಅನುಕೂಲ/ಅನಾನುಕೂಲ ಆಧರಿಸಿ ಅತಿಹೆಚ್ಚು ವ್ಯತ್ಯಯವಿರದ ಶುಲ್ಕ ನಿಗದಿಪಡಿಸಬಹುದು. ಪ್ರವೇಶ ಪರೀಕ್ಷೆಯ ನಂತರ ಕೌನ್ಸಿಲಿಂಗ್ ಪ್ರಕ್ರಿಯೆಗೆ ಮುನ್ನವೇ ಎಲ್ಲಾ ಕೋರ್ಸುಗಳ ಮತ್ತು ಕಾಲೇಜುಗಳ ಶುಲ್ಕಪಟ್ಟಿ ಸಾರ್ವಜನಿಕವಾಗಿ ಪ್ರಕಟಗೊಳ್ಳಬೇಕು. ಸಾಮಾಜಿಕ ನ್ಯಾಯದ ಜಾರಿ ದೃಷ್ಟಿಯಿಂದ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶುಲ್ಕದ ರಿಯಾಯಿತಿ ಭಾಗವನ್ನು ಸರ್ಕಾರವೇ ಅನುದಾನರಹಿತ ಕಾಲೇಜುಗಳಿಗೆ ಈಗಾಗಲೇ ಖಖಊಿ ಯೋಜನೆಯಡಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಮಾದರಿಯಲ್ಲಿ ನೀಡಬಹುದಾಗಿದೆ.
6. ಸಂಬಂಧಿಸಿದ ಕಾಲೇಜುಗಳು ಸ್ವಾಯತ್ತ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಪಟ್ಟಿಯ ಅನುಮೋದನೆ ಪಡೆದ ನಂತರ ತಾಂತ್ರಿಕ ನಿರ್ದೇಶನಾಲಯವಾಗಲೀ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವಾಗಲೀ, ವಿಶ್ವವಿದ್ಯಾಲಯಗಳಾಗಲೀ ಆಕ್ಷೇಪಣೆ ಎತ್ತುವಂತಿರಬಾರದು. ಹಾಲಿ ವ್ಯವಸ್ಥೆಯಲ್ಲಿ ಶೈಕ್ಷಣಿಕ ವರ್ಷಾಂತ್ಯದ ಪರೀಕ್ಷಾ ದಿನಾಂಕದವರೆಗೂ ಪ್ರವೇಶಪಟ್ಟಿ ಅನುಮೋದನೆಯಾಗದೆ ನೊಂದ ವಿದ್ಯಾರ್ಥಿಗಳು/ಆಡಳಿತ ಮಂಡಳಿ ನ್ಯಾಯಾಲಯದ ಮೊರೆಹೋಗಿರುವ ಪ್ರಕರಣಗಳೇ ಹೆಚ್ಚಾಗಿದ್ದು ಈ ಕ್ರಮದಿಂದಾಗಿ ಅಂಥ ಆತಂಕಗಳು ತಪ್ಪುತ್ತವೆ.
ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಸುಧಾರಿಸಬೇಕೆಂದರೆ ಪದವಿ ತರಗತಿಗಳಿಗೆ ದಾಖಲಾಗುವ, ವಿಶೇಷವಾಗಿ ವೃತ್ತಿಶಿಕ್ಷಣ ತರಗತಿಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಿಯೇ ಪ್ರವೇಶ ನೀಡುವುದು ಅತ್ಯಂತ ಸಮಂಜಸವಾಗಿದೆ. ಈ ಶೈಕ್ಷಣಿಕ ವರ್ಷದಿಂದಲೇ ಈ ಬದಲಾವಣೆ ತರುವುದು ಅಸಾಧ್ಯವೇನಲ್ಲ. ವಿದ್ಯಾರ್ಥಿಗಳ ಮತ್ತು ಶೈಕ್ಷಣಿಕ ಸಮಗ್ರ ಗುಣಮಟ್ಟದ ದೃಷ್ಟಿಯಿಂದ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಏಕ ತೀರ್ಮಾನಕ್ಕೆ ಬರಬೇಕಷ್ಟೆ.
ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪಪ್ರಾಧ್ಯಾಪಕರು,
ಎಸ್ಜೆಎಮ್ ವಿದ್ಯಾಪೀಠ, ಚಿತ್ರದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


